ಇಂದಿನ ಯುವಜನಾಂಗದ ಎದುರು ಇರುವ ಯಶಸ್ಸಿನ ಮಾನದಂಡವನ್ನು ಸೂಕ್ತವಾಗಿ ತಿದ್ದಿ ಅವರಿಗೆ ಬದುಕಿನ ಮಹತ್ತ್ವವನ್ನೂ ತಿಳಿಯಪಡಿಸಬೇಕಿದೆ. ವಿವಾಹದ ಮಂತ್ರಗಳೆಲ್ಲವೂ ಸೂಚಿಸುವಂತೆ ಸತ್ಸಂತಾನವನ್ನು ಪಡೆಯುವುದು ಮದುವೆಯ ಉದ್ದೇಶವೇ ಹೊರತು ಕೇವಲ ಪ್ರಿ–ವೆಡ್ಡಿಂಗ್ ಫೋಟೋಶೂಟ್ಗಳ ಅಬ್ಬರಕ್ಕಲ್ಲ, ಅಥವಾ ಅದ್ದೂರಿಯ ಮದುವೆಯ ಗೌಜಿಗಲ್ಲ. ಅಥವಾ ವರ್ಷದಲ್ಲಿ ಅದೆಷ್ಟು ಬಾರಿ ದೇಶವಿದೇಶಗಳಿಗೆ ಟೂರ್ ಹೋಗುತ್ತೇವೆ ಎಂಬುದಕ್ಕಷ್ಟೇ ಅಲ್ಲವಲ್ಲ. ಮನೋದೈಹಿಕವಾದ ಸುಖಸಂತೋಷಗಳು ಅಗತ್ಯವೆಂಬುದು ನಿಜವೇ ಆದರೂ ಕೇವಲ ಅದಷ್ಟೇ ಸಂಪೂರ್ಣ ಜೀವನ ಆಗುವುದಿಲ್ಲ. ಔದ್ಯೋಗಿಕವಾಗಿ ನಾವು ಬಯಸುವ ಯಶಸ್ಸು ಸಾಂಸಾರಿಕವಾಗಿಯೂ ಕೌಟುಂಬಿಕವಾಗಿಯೂ ಇರಬೇಕೆಂಬುದು ಸರ್ವಸಮ್ಮತ. ಮಕ್ಕಳನ್ನು ನಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿ ಎಂದು ಪರಿಗಣಿಸುವ ಯಾವ ಹಕ್ಕೂ ನಮಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಇತ್ತೀಚೆಗೆ ಹಿರಿಯರೊಬ್ಬರು ಕರೆ ಮಾಡಿ, ಒಂದು ಕಾರ್ಯಕ್ರಮದ ಕುರಿತು ತಿಳಿಸಿ ಒಂದೆರಡು ಮುಖ್ಯ ಅಂಶಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದರು. ಅದರಲ್ಲಿ ನನಗೆ ಅತ್ಯಂತ ಗಮನಾರ್ಹವೆನಿಸಿದ್ದು ನಮ್ಮ ಹಿಂದೂ ಯುವಜನಾಂಗವು ಮದುವೆ, ಮಕ್ಕಳ ಬಗ್ಗೆ ಕನಸು ಕಾಣುವುದರ ಬದಲು ಒಳ್ಳೆಯ ಸಂಬಳ ಸಿಗುವ ಕೆಲಸ, ಮದುವೆ ಬಳಿಕ ಒಂದು ದುಬಾರಿ ನಾಯಿಯನ್ನು ತಂದು ಸಾಕಿಕೊಳ್ಳುವುದರಲ್ಲೇ ಸಂತೋಷ ಕಾಣುತ್ತಿದ್ದಾರೆ ಹೊರತು ಸದೃಢ ಸಮಾಜಕ್ಕಾಗಿ ಆರೋಗ್ಯಕರ ಮಕ್ಕಳಿಗೆ ಜನ್ಮ ನೀಡಬೇಕಾದ ಕುರಿತು ಯೋಚಿಸುತ್ತಿಲ್ಲ – ಎಂಬುದು. ಅರೆ! ಹೌದಲ್ಲ! ಎನಿಸಿತು. ಎಷ್ಟೇ ಒತ್ತಡವಿರಲಿ, ಕೆಲಸಕಾರ್ಯಗಳ ಅನಿವಾರ್ಯತೆ ಅದೇನೇ ಇರಲಿ ಒಂದು ತಲೆಮಾರಿನವರಿಗೆ ಮದುವೆಯಾದ ಒಂದೆರಡು ವರ್ಷಗಳಲ್ಲಿ ಮಗುವಿನ ಆಗಮನ ಅತ್ಯಂತ ಸಂಭ್ರಮದ ಸಂಗತಿಯೇ ಆಗಿತ್ತು. ಈಗಲೂ ಕೆಲವು ಕುಟುಂಬಗಳಲ್ಲಿ ಅಂತಹ ಮನಃಸ್ಥಿತಿ, ವಾತಾವರಣ ಇರಬಹುದು. ಆದರೆ ಬಹುತೇಕ ಮನೆಗಳಲ್ಲಿ ದುಡಿಮೆ, ಸಂಬಳದ ಕುರಿತಾಗಿ ಇರುವ ಗಮನ ಮುಂದಿನ ತಲೆಮಾರಿನ ಕುರಿತಾಗಿ ಇರುವುದಿಲ್ಲ.
ಇದಕ್ಕೆ ಮುಖ್ಯ ಕಾರಣವೆಂದರೆ ಇಂದಿನ ಬದುಕಿನ ರೀತಿ. ಒಳ್ಳೆಯ ವಿದ್ಯಾಭ್ಯಾಸವಾದ ಬಳಿಕ ಒಳ್ಳೆಯ ಸಂಪಾದನೆ ತರುವ ಕೆಲಸ. ಅದರಲ್ಲಿ ಉನ್ನತ ಸ್ಥಾನಗಳಿಗೆ ಏರುವ ಕನಸು ಯುವಕ-ಯುವತಿಯರಿಬ್ಬರದ್ದೂ ಆಗಿರುತ್ತದೆ. ಅದನ್ನು ತಪ್ಪೆನ್ನಲಾಗುವುದಿಲ್ಲ. ಆದರೆ ಸಂಪಾದನೆಯ ಹಿಂದಿನ ಓಟದಲ್ಲಿ ಮಗುವಿನ ಕುರಿತಾದ ಕನಸು ಬದಿಗೆ ಸರಿಸಲ್ಪಡುತ್ತದೆ. ಮಗುವೊಂದು ಜನಿಸಿದರೆ ಅದರ ಪಾಲನೆ-ಪೋಷಣೆಯಲ್ಲಿ ಸಂದುಹೋಗುವ ಸಮಯ, ಅಷ್ಟರಲ್ಲಿ ತಾನೆಷ್ಟು ಹಿಂದೆ ಉಳಿದುಬಿಡುವೆನೋ ಎಂಬ ಭೀತಿ, ಓಡುತ್ತಿರುವ ಜಗತ್ತಿನ ಜೊತೆಗೆ ಮತ್ತೆ ಸರಿಸಮನಾಗಿ ಓಡಲಾರೆನೇನೋ ಎಂಬ ಆತಂಕ, ತಂತ್ರಜ್ಞಾನದಲ್ಲಿ ಪ್ರಗತಿಯಾಗುತ್ತಲೇ ಇತ್ತ ಮಾನವ ಸಂಪನ್ಮೂಲ ಕಡಮೆ ಸಾಕು ಎಂಬಂಥ ಔದ್ಯೋಗಿಕ ವಾತಾವರಣ ಅಕ್ಷರಶಃ ಹೆಣ್ಣುಮಕ್ಕಳನ್ನು ಕಂಗೆಡಿಸುತ್ತಿದೆ. ಗರ್ಭಿಣಿಯಾದಲ್ಲಿನಿಂದ ತೊಡಗಿ ಕಾಡಬಹುದಾದ ಆರೋಗ್ಯ ಸಮಸ್ಯೆಯ ಚಿಂತೆ, ಮಗು ಹುಟ್ಟಿದ ಬಳಿಕ ಅದನ್ನು ನೋಡಿಕೊಳ್ಳುವುದಕ್ಕೆ ಸೂಕ್ತ ಸಹಾಯ ಬೇಕು. ದಂಪತಿಗಳ ನಡುವೆ ಸಾಮರಸ್ಯವಿದ್ದಾಗ, ದುಡ್ಡನ್ನಷ್ಟೇ ಬದುಕಿನ ಗುರಿಯಾಗಿ ನೋಡದೇ ಇದ್ದಾಗ ಪುಟ್ಟಕಂದನ ಆಗಮನ ಬದುಕನ್ನು ಹಸಿರಾಗಿಸುತ್ತದೆ. ದಂಪತಿಗಳು ಮತ್ತಷ್ಟು ಅನ್ಯೋನ್ಯವಾಗುತ್ತಾರೆ. ಆದರೆ ಕಂದನ ಲಾಲನೆಪಾಲನೆಯಲ್ಲಿ ತಂದೆಯಾದವನು ಸರಿಯಾಗಿ, ಸಮಾನವಾಗಿ ಜವಾಬ್ದಾರಿ ತೆಗೆದುಕೊಳ್ಳದೇ ಹೋದರೆ ಮನಸ್ಸುಗಳು ದೂರವಾಗುತ್ತಾ ಹೋಗುವ ಸಾಧ್ಯತೆಯೂ ಇರುತ್ತದೆ.
ನಮಗೆ ಅತ್ಯಂತ ಆಪ್ತರಾದ ಯುವವೈದ್ಯೆಯೋರ್ವರಿಗೆ ಹೆಣ್ಣುಮಗುವಾಗಿದ್ದದ್ದು ತಿಳಿದಿತ್ತು. ಅವರನ್ನು ಬಳಿಕ ನೋಡಿರಲಿಲ್ಲ. ಎರಡು ವರ್ಷಗಳ ಬಳಿಕ ಅಕಸ್ಮಾತ್ತಾಗಿ ಸೂಪರ್ ಮಾರ್ಕೆಟ್ ಒಂದರಲ್ಲಿ ಕಾಣಸಿಕ್ಕಿದರು. ಮುದ್ದಾದ ಎರಡೂವರೆ ವರ್ಷದ ಮಗಳು ಅಪ್ಪನ ಕೈಯ್ಯಲ್ಲಿದ್ದರೆ ನಾಲ್ಕು ತಿಂಗಳ ಪುಟ್ಟ ಕಂದಮ್ಮ ಅಮ್ಮನ ತೋಳಿನಲ್ಲಿತ್ತು. ಅವರನ್ನು ನೋಡಿ ಆನಂದದ ಜೊತೆಗೆ ಅಚ್ಚರಿಯೂ ಆಯಿತು. “ಪುಟ್ಟ ಮಕ್ಕಳನ್ನು ಸಂಭಾಳಿಸಿಕೊಂಡು ಆಸ್ಪತ್ರೆಯಲ್ಲಿ ಕರ್ತವ್ಯವನ್ನೂ ನಿಭಾಯಿಸಿಕೊಂಡು… ಹೇಗೆ?” ಎಂದೆ. ಅವರ ಪತಿ ಎಂಜಿನಿಯರ್ ಆಗಿರುವುದರಿಂದ ವರ್ಕ್ ಫ್ರಮ್ ಹೋಮ್ ತೆಗೆದುಕೊಂಡಿದ್ದರಂತೆ. ಡಾಕ್ಟರ್ ಅರ್ಧದಿನ ಮಾತ್ರ ಆಸ್ಪತ್ರೆಗೆ ಹೋಗಿ ಬರುತ್ತಾರೆ, ಆಸ್ಪತ್ರೆಯ ಒತ್ತಿನಲ್ಲೇ ಮನೆ ಆಗಿರುವುದರಿಂದ ಮಗು ಜೋರಾಗಿ ಅತ್ತರೆ ಇವರೇ ಮನೆಗೆ ಹೋಗಿಬರುತ್ತಾರೆ. ಸಂಜೆ ನಾಲ್ಕರ ನಂತರ ಪತಿ ಲಾಗಿನ್ ಆಗುತ್ತಾರೆ… ಎಂಬಿತ್ಯಾದಿ ವಿವರಿಸಿದರು. ಅವರ ನಡುವಿನ ಹೊಂದಾಣಿಕೆ, ಇಬ್ಬರು ಕಂದಮ್ಮಗಳ ಬಗ್ಗೆ ಹೇಳುವಾಗ ಅವರ ಕಣ್ಣಿನಲ್ಲಿದ್ದ ಹೊಳಪು ಎಲ್ಲವೂ ಬಹಳ ಚೆಂದವೆನಿಸಿತು. ವೈದ್ಯೆಯೇ ಹೀಗೆ ನಿಭಾಯಿಸುವಾಗ ಉಳಿದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಹೆಣ್ಣುಮಕ್ಕಳಿಗೆ ಹೆಚ್ಚು ಕಷ್ಟವಲ್ಲವಲ್ಲ ಅಂತಲೂ ಅನಿಸಿತು.
ಇತ್ತೀಚೆಗೆ ನಡೆದ ಒಲಿಂಪಿಕ್ಸ್ನಲ್ಲಿ ಗರ್ಭಿಣಿಯೋರ್ವಳು ಸ್ಪರ್ಧಿಸಿ ಗೆದ್ದದ್ದು ಸುದ್ದಿಯಾಗಿತ್ತು. ಎರಡು ಮಕ್ಕಳ ತಾಯಿಯಾದ ಬಳಿಕವೂ ಬಾಕ್ಸಿಂಗ್ನಲ್ಲಿ ಮೆರೆದ ಮೇರಿಕೊಮ್ ಕಥೆಯೂ ಮೈನವಿರೇಳಿಸುವಂಥದ್ದು. ಹೀಗೆ ನೋಡುತ್ತಾ ಹೋದರೆ ಅನೇಕ ಮಂದಿ ಮಹಿಳೆಯರದು ಸಾಹಸದ, ಸಾಧನೆಯ ಕಥೆಗಳಿವೆ. ತಾಯಂದಿರಾಗಿ ಮಕ್ಕಳಿಗೆ ಕೊಡಬೇಕಾದ ಗಮನ ಕೊಡುತ್ತಲೇ ಅವರು ತಮ್ಮದಾದ ಕ್ಷೇತ್ರದಲ್ಲಿ ಮಿಂಚಬೇಕಾದರೆ ಮನೆಮಂದಿಯ ಸಹಕಾರವೂ ಅಷ್ಟೇ ಮುಖ್ಯವಾಗಿ ಬೇಕೆಂಬುದು ಸತ್ಯ. ಮಕ್ಕಳ ಅಜ್ಜಿ-ತಾತನೇ ಅವರ ಆರೈಕೆಗೆ ಸಿಗುವಂತಿದ್ದರೆ ಬಹಳ ಒಳಿತು. ಇದರ ಹೊರತಾದಂತೆ ಉಳಿದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೂ ಕೆಲವು ಕಡೆಗಳಲ್ಲಿ ಪುಟ್ಟಮಕ್ಕಳ ಪಾಲನೆಗಾಗಿ ಕಂಪೆನಿಗಳೇ ವ್ಯವಸ್ಥೆ ಕಲ್ಪಿಸಿರುತ್ತವೆ. ಅದೂ ಒಂದು ರೀತಿಯ ಅನುಕೂಲವೇ ಆದರೂ ಅಮ್ಮ ಹೊರಡುವಾಗ ದಿನವೂ ಮಗುವನ್ನೂ ಹೊರಡಿಸಿಕೊಂಡು ಹೋಗಬೇಕಲ್ಲ ಎಂಬುದು ಯೋಚನೆಗೆ ಅರ್ಹವಾದ ವಿಚಾರವೇ.
ಅದೆಲ್ಲದರ ನಡುವೆ ಇಂದು ಹೆಣ್ಣುಮಕ್ಕಳು ಮದುವೆಯ ಬಗ್ಗೆ ಯೋಚಿಸುವ ವಯಸ್ಸು ಕೂಡಾ ಕೊಂಚ ತಡವಾಗಿಯೇ ಇದೆ. ಇಪ್ಪತ್ತೆಂಟು ಆದ ಮೇಲೆ ಮದುವೆಯಾದರೆ ಸಾಕು ಎಂಬುದು ಅವರು ಅವರಾಗಿಯೇ ಹಾಕಿಕೊಂಡ ವಯೋಮಿತಿ. ಅಲ್ಲಿಯವರೆಗೆ ಒಬ್ಬಳೇ ಇದ್ದುಕೊಂಡು, ತನ್ನ ದುಡಿಮೆಯ ಸಂಪಾದನೆಯನ್ನು ಸ್ವತಃ ಕೆಲಕಾಲವಾದರೂ ಅನುಭವಿಸಿಕೊಂಡು ಬಳಿಕ ಮದುವೆ ಎಂಬುದು ಅವರ ಯೋಚನೆ. ಆದರೆ ವಯಸ್ಸು ಮುಂದೆ ದಾಟುತ್ತಾ ದಾಟುತ್ತಾ ಹೊಂದಾಣಿಕೆಯೂ ಕಠಿಣವಾಗುತ್ತದೆ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ತೊಂದರೆಗಳು ಎದುರಾಗುತ್ತವೆ. ಅದೆಲ್ಲವೂ ನೇರವಾಗಿ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳೂ ಇರುತ್ತವೆ. ಅದರ ಬದಲು ಇಪ್ಪತ್ತೆöÊದರ ಹೊತ್ತಿಗೆ ತಾಯಿಯಾಗುವಂತೆ ಮಾನಸಿಕ ಸಿದ್ಧತೆ ಇರುವಂತೆ ಹೆಣ್ಣುಮಕ್ಕಳನ್ನು ಬೆಳೆಸಬೇಕಿದೆ.
ಇಂದಿನ ಯುವಜನಾಂಗದ ಎದುರು ಇರುವ ಯಶಸ್ಸಿನ ಮಾನದಂಡವನ್ನು ಸೂಕ್ತವಾಗಿ ತಿದ್ದಿ ಅವರಿಗೆ ಬದುಕಿನ ಮಹತ್ತ್ವವನ್ನು ತಿಳಿಯಪಡಿಸಬೇಕಿದೆ. ವಿವಾಹದ ಮಂತ್ರಗಳೆಲ್ಲವೂ ಸೂಚಿಸುವಂತೆ ಸತ್ಸಂತಾನವನ್ನು ಪಡೆಯುವುದು ಮದುವೆಯ ಉದ್ದೇಶವೇ ಹೊರತು ಕೇವಲ ಪ್ರಿ-ವೆಡ್ಡಿಂಗ್ ಫೋಟೋಶೂಟ್ಗಳ ಅಬ್ಬರಕ್ಕಲ್ಲ, ಅಥವಾ ಅದ್ದೂರಿಯ ಮದುವೆಯ ಗೌಜಿಗಲ್ಲ. ಅಥವಾ ವರ್ಷದಲ್ಲಿ ಅದೆಷ್ಟು ಬಾರಿ ದೇಶವಿದೇಶಗಳಿಗೆ ಟೂರ್ ಹೋಗುತ್ತೇವೆ ಎಂಬುದಕ್ಕಷ್ಟೇ ಅಲ್ಲವಲ್ಲ. ಮನೋದೈಹಿಕವಾದ ಸುಖಸಂತೋಷಗಳು ಅಗತ್ಯವೆಂಬುದು ನಿಜವೇ ಆದರೂ ಕೇವಲ ಅದಷ್ಟೇ ಸಂಪೂರ್ಣ ಜೀವನ ಆಗುವುದಿಲ್ಲ. ಔದ್ಯೋಗಿಕವಾಗಿ ನಾವು ಬಯಸುವ ಯಶಸ್ಸು ಸಾಂಸಾರಿಕವಾಗಿಯೂ ಕೌಟುಂಬಿಕವಾಗಿಯೂ ಇರಬೇಕೆಂಬುದು ಸರ್ವಸಮ್ಮತ. ಮಕ್ಕಳನ್ನು ನಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿ ಎಂದು ಪರಿಗಣಿಸುವ ಯಾವ ಹಕ್ಕೂ ನಮಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಸ್ತ್ರೀವಾದದ ನೆಪದಲ್ಲಿ ‘ನಮ್ಮ ದೇಹ ನಮ್ಮ ಹಕ್ಕು’ ಎಂಬುದನ್ನು ಹೆಚ್ಚಾಗಿ ಮೆರೆಸಿದ್ದೇವೆ. ಅದರೊಂದಿಗೆ ಪ್ರಕೃತಿಸಹಜವಾಗಿ ಹೆಣ್ಣಿನದ್ದಷ್ಟೇ ಆದ ತಾಯ್ತನದ ಸಂಭ್ರಮವನ್ನು ಸಂಭ್ರಮಿಸದ ರೀತಿಯಲ್ಲಿ ಹೆಣ್ಣುಮಕ್ಕಳ ಮನಃಸ್ಥಿತಿಯನ್ನು ಬದಲಾಯಿಸುತ್ತಾ ಸಾಗಿದ್ದೇವೆ. ಎಳೆಯ ಮಗುವಾಗಿದ್ದಾಗ ಪುಟ್ಟ ಗೊಂಬೆಯನ್ನು ತಾಯಂತೆ ಪೊರೆಯುವ ಮಗಳು ದೊಡ್ಡವಳಾಗುತ್ತಾ ಬಂದಂತೆ ಆ ಸಂತೋಷವನ್ನು ಪೂರ್ಣ ಮರೆಯುವಂತೆ ನಮ್ಮ ಒಟ್ಟು ಸಂಸ್ಕೃತಿಯೇ ಬದಲಾಗುತ್ತಿದೆಯೆ? ನಾವು ಎಚ್ಚರವಹಿಸಬೇಕಿದೆ. ಒಂದೆಡೆ ಹಿಂದುತ್ವದ ಸದಾಶಯವನ್ನು, ಹಿರಿಮೆಯನ್ನು ಎತ್ತಿಹಿಡಿಯಲು ಬಯಸುವ ನಾವು ಇನ್ನೊಂದೆಡೆ ಪೋಷಕರಾಗುವುದು ಬದುಕಿನ ಕರ್ತವ್ಯ ಎಂಬುದನ್ನು ಮರೆಸುತ್ತಿದ್ದೇವೆ. ಇದು ಬದಲಾಗಲೇಬೇಕಿದೆ, ಈ ಮನಃಸ್ಥಿತಿಯನ್ನು ತಿದ್ದಲೇಬೇಕಿದೆ.
ಜೊತೆಗೆ, ತಾಯ್ತನದ ರಜೆಯನ್ನು ನಿರ್ದಿಷ್ಟವಾಗಿ ಇಂತಿಷ್ಟು ಅವಧಿಯವರೆಗೆ ಕೊಡಲೇಬೇಕೆಂದು ಸರ್ಕಾರವಾಗಲಿ, ಖಾಸಗಿ ಸಂಸ್ಥೆಗಳಾಗಲೀ ನಿರ್ಧರಿಸಲೇಬೇಕು. ಸರ್ಕಾರೀ ಉದ್ಯೋಗದಲ್ಲಿ ಇರುವವರಿಗೆ ವೇತನಸಹಿತ ಮಾತೃತ್ವ ರಜೆ ಇರುವಂತೆ ಖಾಸಗಿಯವರೂ ಕೊಡಬೇಕು. ಇತರೆ
ಎಲ್ಲ ಹಕ್ಕುಗಳ ಬಗ್ಗೆ ಮೀಸಲಾತಿಯ ಬಗ್ಗೆ ಮಾತನಾಡುವವರು ಈ ಬಗ್ಗೆಯೂ ಮಾತನಾಡಬೇಕು. ತಾಯಿಯಾಗುವುದೆಂದರೆ ಕೇವಲ ವಂಶವನ್ನು ಬೆಳಗಿಸುವುದಲ್ಲ, ಅದು ಸಮಾಜವನ್ನು ತನ್ಮೂಲಕ ದೇಶವನ್ನು ಬೆಳಗುವ ಕೆಲಸ ಎಂಬುದೂ ಹೆಣ್ಣುಮಕ್ಕಳಿಗೆ ಅರಿವಿರಬೇಕು. ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂದು ಜಂಭ ಕೊಚ್ಚುವ ನಾವು ದೇಶವನ್ನಾಳುವ ಕೈ ತೊಟ್ಟಿಲನ್ನು ತೂಗಲೂಬೇಕು ಎಂದೂ ಕಲಿಸದಿದ್ದರೆ ಹೇಗೆ? ದೇಹವೆಂಬ ಪವಿತ್ರವಾದ ಗುಡಿಯಲ್ಲಿ ಮಗುವೆಂಬ ದೇವರನ್ನು ಹೊರುವುದು ಬದುಕಿನ ಭಾಗವೇ ತಾನೇ?