ತಮ್ಮಿಂದ ತಮ್ಮ ಸಂಗಾತಿಗೆ ನೋವಾಗಿದೆಯೆಂದು ಅರ್ಥ ಮಾಡಿಕೊಳ್ಳಬಲ್ಲವರೂ ಸಣ್ಣದೊಂದು ‘ಸಾರಿ’ ಕೇಳುವಲ್ಲಿ ನಿರ್ಲಕ್ಷ್ಯ ತೋರುವುದು ಸಹಜ. ಅಥವಾ ಮಾತುಮಾತಿಗೆ ‘ಸಾರಿ’ ಕೇಳುವವರೂ ಅದನ್ನು ಹೃದಯಪೂರ್ವಕವಾಗಿ ಕೇಳುತ್ತಾರೆಂದು ಹೇಳಲಾಗದು. ಪ್ರಾಮಾಣಿಕವಾಗಿ ತಮ್ಮ ತಪ್ಪಿನ ಅರಿವಾದವರು ಮಾತಿನಲ್ಲಿ ಕ್ಷಮಿಸು ಎಂದು ಕೇಳದಿದ್ದರೂ ಮುಂದೆ ಅದನ್ನು ಪುನರಾವರ್ತಿಸದೆ ತಮ್ಮ ನಡತೆಯನ್ನು ಸುಧಾರಿಸಿಕೊಂಡಾರು. ಅದನ್ನು ಅರ್ಥ ಮಾಡಿಕೊಂಡು ಬದುಕು ಮುಂದುವರಿಯಲು ಅವಕಾಶ ಕೊಟ್ಟುಬಿಡಿ. ಹಳೆಯ ನೋವಿನ ಘಟನೆಯನ್ನೇ ಮತ್ತೆಮತ್ತೆ ನೆನಪಿಸಿಕೊಂಡು ಅದೇ ಮಡುವಿನಲ್ಲಿ ಬಾಕಿಯಾದರೆ ಇಬ್ಬರ ಬದುಕೂ ಸೊರಗುತ್ತದೆ. ‘ಎಂದೂ ಬಾರದ ಕ್ಷಮಾಪಣೆಯನ್ನು ನಿರೀಕ್ಷಿಸಿಕೊಂಡು ನನ್ನ ಬದುಕನ್ನು ನಾನು ಬಲಿಗೊಡುವುದಿಲ್ಲ’ ಎಂಬ ನಿರ್ಧಾರ ಸ್ಪಷ್ಟವಾಗಿರಲಿ.
ಇರುಗಪಟ್ರು ಎಂಬ ತಮಿಳು ಸಿನೆಮಾವೊಂದಿದೆ. ಮೂರು ವಿಧದ ದಂಪತಿಗಳ ಸುತ್ತ ಹೆಣೆದಿರುವ ಕತೆ ಅದು. ಮಗುವಾದ ಬಳಿಕ ಪತ್ನಿ ದಪ್ಪವಾದಳೆಂದು ಅಸಹನೆ ಬೆಳೆಸಿಕೊಳ್ಳುವನೊಬ್ಬ, ಪತ್ನಿಯ ಕೆಲಸದೊತ್ತಡವನ್ನು ಅರ್ಥ ಮಾಡಿಕೊಳ್ಳದೆ ತನ್ನ ಪತಿತ್ತ್ವವನ್ನಷ್ಟೇ ಸ್ಥಾಪಿಸಲು ಯತ್ನಿಸುತ್ತಿರುವವನೊಬ್ಬ, ಆಪ್ತಸಲಹಾಗಾರ್ತಿಯ ಪತಿಯೊಬ್ಬ. ಇತರರಿಗೆ ಅಗತ್ಯ ಆಪ್ತಸಲಹೆಯನ್ನು ಕೊಡುವ ಕೌನ್ಸಿಲರ್ ಬದುಕೂ ವಿಲಕ್ಷಣ ಕಾರಣವೊಂದರಿಂದ ಕೈಜಾರುವ ಹಂತಕ್ಕೆ ಬಂದು ನಿಲ್ಲುತ್ತದೆ. ಬದುಕನ್ನು ಸರಿಮಾಡಿಕೊಳ್ಳುವುದಕ್ಕೆ ಒಂದು ನಿರ್ದಿಷ್ಟ ಮಾದರಿಯಿಲ್ಲ, ವ್ಯಕ್ತಿವ್ಯಕ್ತಿಗಳ ನಡುವೆ ಬೇಕಿರುವುದು ಮುಕ್ತ ಸಂವಹನ ಎಂಬ ಸಂದೇಶವನ್ನು ಕೊಡುವ ಈ ಚಲನಚಿತ್ರವನ್ನು ಬಹುಶಃ ದಂಪತಿಗಳು ಜತೆಯಾಗಿ ಕೂತು ನೋಡಬೇಕೆನಿಸುತ್ತದೆ!
ನಮ್ಮ ಬದುಕಿನಲ್ಲಿ ಅತ್ಯಂತ ಸಮೀಪದವರು, ಆಪ್ತರು ಎಂದರೆ ನಮ್ಮ ಸಂಗಾತಿ ಎಂಬುದು ಅಕ್ಷರಶಃ ಸತ್ಯವೇ ಆದರೂ ನಮಗರಿವಿಲ್ಲದೆಯೋ ಇದ್ದೋ ನಾವು ಅತ್ಯಂತ ನೋಯಿಸುವುದೂ ಅವರನ್ನೇ ಎಂಬುದು ವಾಸ್ತವ. ಪರಸ್ಪರರ ಬೇಕುಬೇಡಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬಲ್ಲೆವಾದರೂ, ಪೂರೈಸಿಕೊಡಬಲ್ಲೆವಾದರೂ ಕಾರಣವೇ ಇಲ್ಲದೆಯೂ ಅಥವಾ ತೀರಾ ಕ್ಷುಲ್ಲಕವೆನಿಸುವ ವಿಚಾರಗಳಿಗೆ ಘಾಸಿಗೊಳಿಸುವುದೂ ಅವರನ್ನೇ. ಇದು ಪತಿಪತ್ನಿ ಇಬ್ಬರಿಗೂ ಅನ್ವಯಿಸುವ ವಿಚಾರವೇ. ಹೊಂದಾಣಿಕೆಯ ವಿಷಯದಲ್ಲಿ ಅತಿಹೆಚ್ಚು ಕಷ್ಟಪಡುತ್ತ, ಮಾತೆತ್ತಿದರೆ ವಿಚ್ಛೇದನದ ಮೊರೆಹೋಗುತ್ತಿರುವ ಯುವಜನಾಂಗ ಗಮನಿಸಲೇಬೇಕಾದ ಕೆಲವು ಅಂಶಗಳು ಇಲ್ಲಿವೆ.
ಮನಸ್ಸಿಗೆ ನೋವಾದಾಗ ಅದನ್ನು ಅಭಿವ್ಯಕ್ತಿಸಿ

ಮಾತು ಬೆಳ್ಳಿ ಮೌನ ಬಂಗಾರವೆನ್ನುವುದು ನಾಣ್ಣುಡಿಯಾಗಿ ಚಂದ ಹೌದು. ಹಾಗೆಂದು ಸಂಬಂಧಗಳ ನಡುವೆ ಸಂವಹನಕ್ಕೆ ಬಂದಾಗ ಮಾತು ಬೇಕೇ ಬೇಕಾದಲ್ಲಿ ಮೌನವಾಗಿ ಉಳಿದರೆ ಅದು ವಿಷವಾಗುತ್ತದೆ. ಮನೆಮಂದಿಯ ನಡುವೆಯಾಗಲಿ ಪತಿಪತ್ನಿಯರ ನಡುವೆಯಾಗಲಿ ಸಂವಹನವೆಂಬುದು ಅತ್ಯಗತ್ಯ. ತಾವಾಡಿದ ಮಾತಿನಿಂದ ಅಥವಾ ತನ್ನ ವರ್ತನೆಯಿಂದ ಸಂಗಾತಿಗೆ ನೋವಾಗಿರುತ್ತದೆ ಎಂಬುದನ್ನು ಎಲ್ಲ ಸಂದರ್ಭಗಳಲ್ಲೂ ಎಲ್ಲರೂ ಅರ್ಥ ಮಾಡಿಕೊಳ್ಳಲಾರರು. ಒಂದೆರಡು ಬಾರಿ ಹಾಗಾದಾಗ ಹೋಗಲಿ ಬಿಡು ಎಂದು ಸುಮ್ಮನಾಗುವುದು ಹೆಚ್ಚಿನವರ ಅಭ್ಯಾಸವೇ ಆದರೂ ಇದರಿಂದ ತೊಡಕೇ ಹೆಚ್ಚು. ಇವಳ ಬಳಿ / ಇವನ ಬಳಿ ಹೇಗೆ ಮಾತಾಡಿದರೂ ನಡೆಯುತ್ತದೆ, ಹೇಗೆ ನಡೆಸಿಕೊಂಡರೂ ಆಗುತ್ತದೆ ಎಂಬ ತಪ್ಪು ಸಂದೇಶವನ್ನು ಇದು ಕೊಡುತ್ತದೆ. ಮತ್ತದೇ ಪುನರಾವರ್ತನೆಯಾಗುತ್ತ ಇರುತ್ತದೆ. ಉದಾಹರಣೆಗೆ ಕೆಲವರಿಗೆ ತಮ್ಮ ಕಡೆಯ ಬಂಧುಗಳು ಬಂದಾಗ ಅವರ ಮುಂದೆ ಪತಿಯನ್ನೋ ಪತ್ನಿಯನ್ನೋ ಆಡಿಕೊಳ್ಳುವ ಚಾಳಿ ಹೆಚ್ಚು. ಇದರಿಂದ ಅವರ ಮನಸ್ಸಿಗೆ ನೋವಾಗುತ್ತದೆ ಎಂಬುದರ ಗೊಡವೆಯೇ ಅಂಥವರಿಗಾಗುವುದಿಲ್ಲ. ಮೊದಲಬಾರಿಗೆ ಈ ಅನುಭವವಾದಾಗಲೇ (ಎಲ್ಲರ ಮುಂದೆ ಅಲದಿದ್ದರೂ) ಸಂಗಾತಿಯಲ್ಲಿ ಅದನ್ನು ಹೇಳಿಬಿಡುವುದೊಳ್ಳೆಯದು. ಅದಲ್ಲವೆಂದಾದಾಗ ಪರಸ್ಪರರ ನಡುವೆ ಅಂತರವೊಂದು ಸೃಷ್ಟಿಯಾಗುವುದಷ್ಟೇ ಅಲ್ಲ, ಅವರ ಕಡೆಯ ಬಂಧುಗಳು ಬರುತ್ತಾರೆಂದಾದರೆ ಅಸಹನೆ ಪ್ರಾರಂಭವಾದೀತು.
ಸಂಗಾತಿ ಕ್ಷಮೆ ಯಾಚಿಸಲೆಂದು ನಿರೀಕ್ಷಿಸಬೇಡಿ
ತಮ್ಮಿಂದ ತಮ್ಮ ಸಂಗಾತಿಗೆ ನೋವಾಗಿದೆಯೆಂದು ಅರ್ಥ ಮಾಡಿಕೊಳ್ಳಬಲ್ಲವರೂ ಸಣ್ಣದೊಂದು ‘ಸಾರಿ’ ಕೇಳುವಲ್ಲಿ ನಿರ್ಲಕ್ಷ್ಯ ತೋರುವುದು ಸಹಜ. ಅಥವಾ ಮಾತುಮಾತಿಗೆ ‘ಸಾರಿ’ ಕೇಳುವವರೂ ಅದನ್ನು ಹೃದಯಪೂರ್ವಕವಾಗಿ ಕೇಳುತ್ತಾರೆಂದು ಹೇಳಲಾಗದು. ಪ್ರಾಮಾಣಿಕವಾಗಿ ತಮ್ಮ ತಪ್ಪಿನ ಅರಿವಾದವರು ಮಾತಿನಲ್ಲಿ ಕ್ಷಮಿಸು ಎಂದು ಕೇಳದಿದ್ದರೂ ಮುಂದೆ ಅದನ್ನು ಪುನರಾವರ್ತಿಸದೆ ತಮ್ಮ ನಡತೆಯನ್ನು ಸುಧಾರಿಸಿಕೊಂಡಾರು. ಅದನ್ನು ಅರ್ಥ ಮಾಡಿಕೊಂಡು ಬದುಕು ಮುಂದುವರಿಯಲು ಅವಕಾಶ ಕೊಟ್ಟುಬಿಡಿ. ಹಳೆಯ ನೋವಿನ ಘಟನೆಯನ್ನೇ ಮತ್ತೆಮತ್ತೆ ನೆನಪಿಸಿಕೊಂಡು ಅದೇ ಮಡುವಿನಲ್ಲಿ ಬಾಕಿಯಾದರೆ ಇಬ್ಬರ ಬದುಕೂ ಸೊರಗುತ್ತದೆ. ‘ಎಂದೂ ಬಾರದ ಕ್ಷಮಾಪಣೆಯನ್ನು ನಿರೀಕ್ಷಿಸಿಕೊಂಡು ನನ್ನ ಬದುಕನ್ನು ನಾನು ಬಲಿಗೊಡುವುದಿಲ್ಲ’ ಎಂಬ ನಿರ್ಧಾರ ಸ್ಪಷ್ಟವಾಗಿರಲಿ.

ಕ್ಷಮೆ ಕೇಳಲೇಬೇಕೆಂಬ ಒತ್ತಾಯ ಸಲ್ಲದು
ಹಲವು ಸಲ ಸಂಗಾತಿ ಕ್ಷಮೆ ಕೇಳಿದರಷ್ಟೇ ಸಮಾಧಾನ ಪಡೆದುಕೊಳ್ಳುವವರು ನಮ್ಮಲ್ಲಿ ಅನೇಕರಿರಬಹುದು. ಹಾಗೆಂದು ಸಂಗಾತಿ ಕೇಳಲು ಸಿದ್ಧವಿಲ್ಲದೆ ಹೋದಾಗ ಒತ್ತಾಯದಿಂದ ಹೇಳಿಸಿಕೊಳ್ಳಬೇಡಿ. ಹಾಗೆ ಒತ್ತಾಯಿಸಿದರೆ ‘ಆಯ್ತು. ಸಾರಿ. ನಿಂಗೀಗ ಸಮಾಧಾನವಾ? ತೃಪ್ತಿಯಾಯ್ತಲ್ಲ?’ ಎಂಬ ವ್ಯಂಗ್ಯೋಕ್ತಿಯಷ್ಟೇ ಹೊಮ್ಮುತ್ತದೆ. ಅದರಿಂದ ಮತ್ತಷ್ಟು ನೋವೇ ಲಭಿಸುತ್ತದೆ ಹೊರತು ಮನಃಶಾಂತಿ ಸಿದ್ಧಿಸುವುದು ಸಾಧ್ಯವಿಲ್ಲ.
ನಿಮ್ಮ ತಪ್ಪುಗಳೇನು ಎಂಬುದನ್ನೂ ಯೋಚಿಸಿ
ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮನಸ್ಸಿಗೆ ನೋವಾಗುವಂತೆ ಏನಾದರೂ ಘಟಿಸಿದರೆ ಅದರಲ್ಲಿ ಇಬ್ಬರ ಪಾತ್ರವೂ ಇರುತ್ತದೆ. ಪರಸ್ಪರರಿಗೆ ಆಡಿದ ಮಾತುಗಳೇನು ಎಂಬುದನ್ನು ನಿಧಾನವಾಗಿ ವಿವೇಚಿಸಿ. ಇಬ್ಬರ ತಪ್ಪುಗಳೂ ಅರಿವಾಗುತ್ತವೆ. ಒಬ್ಬರ ಕಡೆಯಿಂದ ಅದು ತೀರಾ ಕೇವಲವೆನಿಸುವ ತಪ್ಪುಗಳಷ್ಟೇ ಅಗಿರಬಹುದು, ಅಂಥದ್ದೇನಾದರೂ ಇದ್ದಲ್ಲಿ ಅದಕ್ಕೂ ಕ್ಷಮೆ ಯಾಚಿಸಿ. ಇದು ನಿಮ್ಮ ಸಂಗಾತಿಗೂ ಪಾಠವೇ.
ಸಂಗಾತಿಯ ತಪ್ಪುಗಳನ್ನೂ ಸಂಗಾತಿಯನ್ನೂ ಸಮೀಕರಿಸಬೇಡಿ
ಭಗವಂತ ತಪ್ಪುಗಳನ್ನು ದ್ವೇಷಿಸುತ್ತಾನೆ ಹೊರತು ತಪ್ಪು ಮಾಡಿದವನನ್ನಲ್ಲ ಎಂಬ ಮಾತಿದೆ. ಹಾಗೆಯೇ ಸಂಗಾತಿಯನ್ನು ಒಂದು ಪೂರ್ಣವಾಗಿ ನೋಡಿ. ಕೇವಲ ಅವರ ತಪ್ಪುಗಳನ್ನಷ್ಟೇ ಸದಾ ಎತ್ತಿ ತೋರಿಸುತ್ತ ಇದ್ದರೆ ಈರ್ವರ ನಡುವೆ ಭಾವತಂತುಗಳು ಶಾಶ್ವತವಾಗಿ ಕಡಿದುಹೋದಾವು. ‘ಇವನು/ಳು ಸದಾ ಹೀಗೆಯೇ’ ಎಂಬ ಜಿಗುಪ್ಸೆಯ ಭಾವ ಮನದೊಳಗೆ ಬೇರೂರದಂತೆ ಎಚ್ಚರ ವಹಿಸಿ. ಪ್ರೀತಿಯಿಂದ ಏನನ್ನಾದರೂ ಗೆಲ್ಲಬಹುದು, ಎಂಥ ಕಲ್ಲುಬಂಡೆಯನ್ನಾದರೂ ಕರಗಿಸಬಹುದು ಎಂಬ ವಿಶ್ವಾಸವಿರಲಿ. ಬದುಕು ಮುನ್ನಡೆಯುವುದಕ್ಕೆ ಬೇಕಾದ ಛಲವನ್ನೂ ಸ್ಥೈರ್ಯವನ್ನೂ ಈ ವಿಶ್ವಾಸವೇ ನಮ್ಮಲ್ಲಿ ತುಂಬಿಕೊಡುತ್ತದೆ.
ಮೌನದಿಂದ ಸಮಸ್ಯೆ ಉಲ್ಬಣವಾದೀತು
ಹೆಚ್ಚಿನ ಮಂದಿ ಹೇಳುವುದು ಕೇಳಿದ್ದೇನೆ, ‘ಸದ್ಯ ಸಿಟ್ಟು ಬಂದರೆ ಕೂಗಾಡಿ ಕಿರುಚಾಡಿ ಮಾಡುವುದಿಲ್ಲ. ಒಂದೆರಡು ದಿನ ಮೌನವಾಗಿ ಇದ್ದು ಬಿಡುತ್ತೇವೆ. ಆಮೇಲೆ ಅಲ್ಲಿಗೇ ತಣ್ಣಗಾಗುತ್ತದೆ.’ ಮಕ್ಕಳೆದುರು ಕೂಗಾಡುವುದು ತಪ್ಪಿರಬಹುದು. ಆದರೆ ಹೇಳಬೇಕಾದ್ದನ್ನು ಹೇಳದೆ ನಾಲ್ಕು ದಿನ ಮೌನವಾದ ತಕ್ಷಣಕ್ಕೆ ಎಲ್ಲವೂ ಸರಿಹೋಯ್ತೆಂದಲ್ಲ. ಅದು ಜ್ವಾಲಾಮುಖಿಯಂತೆ ಅಂತರಂಗದೊಳಗೆ ಕುದಿಯುತ್ತಲೇ ಇರುತ್ತದೆ. ಇನ್ನಾವುದೋ ಸಂದರ್ಭದಲ್ಲಿ ಅಗತ್ಯವೇ ಇಲ್ಲದಾಗ ಸ್ಫೋಟಿಸುತ್ತದೆ. ಇದರಿಂದ ಸಂಬಂಧಗಳು ಶಾಶ್ವತವಾಗಿ ಕಡಿದುಕೊಂಡಾವು. ನೆನಪಿಡಿ, ಸಂಗಾತಿಯೆಂದರೆ ದೇವರಲ್ಲ, ನಿಮ್ಮಂತೆಯೇ ಮನುಷ್ಯರು ಮಾತ್ರ. ಮೌನವಾಗಿ ಇದ್ದುಬಿಟ್ಟರೆ ನಿಮ್ಮ ಮನಸ್ಸನ್ನು ಅವರು ಓದಿಯೇ ಓದುತ್ತಾರೆ ಎಂದೇನೂ ಇಲ್ಲ. ಅದು ಭ್ರಮೆ ಮಾತ್ರ. ಮೌನಕ್ಕೆ ಸಂದುಹೋಗುತ್ತಾ ಇದ್ದರೆ ನಿಧಾನವಾಗಿ ಇಬ್ಬರ ನಡುವಿನ ಭಾವನಾತ್ಮಕ ಕೊಂಡಿ ಸಡಿಲವಾಗುತ್ತ ಬಂದು ಕಳಚಿಕೊಳ್ಳಬಹುದು.
ದೇವರಲ್ಲಿ ಪ್ರಾರ್ಥಿಸಿ
ಎಷ್ಟೋ ಬಾರಿ ಮನಸ್ಸು ಹಗುರವಾಗುವಂತೆ ಮಾಡಬಲ್ಲವನು ದೇವರು ಮಾತ್ರ. ಹೃದಯದ ಭಾರವನ್ನು ಕಡಮೆ ಮಾಡಿಕೊಳ್ಳಲು ಭಗವಂತನ ಮೊರೆ ಹೋಗಿ. ಭಗವಂತ ಕೇಳಿದ್ದನ್ನು ಕೊಟ್ಟೇ ಕೊಡುತ್ತಾನೆ. ಇಂದು, ಈ ಕ್ಷಣವೇ ಸಿಗದಿರಬಹುದು. ಆದರೆ ತಾಳಿದವನು ಬಾಳಿಯಾನು ಎಂಬುದು ವಾಸ್ತವ.
ಸೇಡು ತೀರಿಸಿಕೊಳ್ಳುವ ಪ್ರಯತ್ನ ಬೇಡ
ನೀನು ನನ್ನನ್ನು ಹೇಗೆ ನಡೆಸಿಕೊಂಡೆಯೋ ನಾನೂ ನಿನ್ನನ್ನು ಹಾಗೆಯೇ ನಡೆಸಿಕೊಳ್ಳುತ್ತೇನೆ ಎಂಬುದು ಧನಾತ್ಮಕವಾದರೆ ಒಳಿತು. ಒಳ್ಳೆಯ ರೀತಿಯಲ್ಲಿ ಪರಸ್ಪರರನ್ನು ನಡೆಸಿಕೊಂಡಷ್ಟೂ ಬದುಕು ಹಸನಾಗುತ್ತದೆ. ಅದರ ಬದಲು ದ್ವೇಷ ಸಾಧನೆಗೆ ಹೊರಟು, ಅವರು ತಪ್ಪು ಮಾಡಿದಂತೆ ನೀವೂ ಮಾಡಿದರೆ ತಪ್ಪುಗಳು ತಿದ್ದಲಾರದಷ್ಟು ಬಲಿಷ್ಠವಾಗಿ ಬೆಳೆದುಬಿಡುತ್ತವೆ. ಇಂದಿನ ಮೊಬೈಲ್ ಯುಗದಲ್ಲಿ ಸಂಗಾತಿಗಳ ನಡುವೆ ಮೂರನೆಯವರು ಪ್ರವೇಶಿಸುವ ಸಾಧ್ಯತೆಗಳು ಬಹಳ. ಇಂತಹ ಸೂಕ್ಷö್ಮ ಸಂಗತಿಗಳಲ್ಲಿ ಬಹಳ ಎಚ್ಚರವಿರುವುದು ಒಳ್ಳೆಯದು.
ಸಂಗಾತಿಯನ್ನು ದೆವ್ವಕ್ಕೆ ಹೋಲಿಸಬೇಡಿ
ಸಂಗಾತಿಯನ್ನು ಭೂತ ಪಿಶಾಚಿ ಎಂದೆಲ್ಲ ಕರೆಯುವುದು ಕಿರುಕುಳವಲ್ಲ ಎಂದು ಪಾಟ್ನಾ ಹೈಕೋರ್ಟ್ ತೀರ್ಪು ನೀಡಿದೆ ಎಂಬುದೇನೋ ನಿಜವೇ. ಆದರೆ ಯೋಚಿಸಿ ನೋಡಿ, ಆ ರೀತಿ ಕರೆಯಿಸಿಕೊಳ್ಳುವುದು ನಮಗೆ ಇಷ್ಟವಾದೀತೇ? ನಮಗಿಷ್ಟವಾಗದ್ದು ಬೇರೆಯವರಿಗೆ ಒಪ್ಪೀತೇ? ಪತಿಯನ್ನಾಗಲೀ ಪತ್ನಿಯನ್ನಾಗಲೀ ಪೀಡೆ ಪಿಶಾಚಿ ಎಂದು ಕರೆಯುತ್ತ ಅಕ್ಕರೆಯಿಂದ ಬಾಳುವುದು ಸಾಧ್ಯವೇ?
ಇವೆಲ್ಲದರ ಜತೆಗೆ ಬಿಡುವಿನ ಅವಧಿಯನ್ನು ನಿಮಗಾಗಿ ಇರಿಸಿಕೊಂಡು ಸಂತೋಷದ ದಿನಗಳನ್ನು ಮತ್ತೆಮತ್ತೆ ನೆನಪಿಸಿಕೊಳ್ಳಿ. ಕೊನೆಯವರೆಗೂ ಜತೆಯಾಗಿರುವಂತೆ ಪರಸ್ಪರರಿಗೆ ಕೊಟ್ಟ ಭಾಷೆಗಳನ್ನು ನೆನಪಿಸಿಕೊಳ್ಳಿ. ಪರಸ್ಪರ ಮೆಚ್ಚುಗೆ ಸೂಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮರಳಿ ಮನಸಾಗಿದೆ.. ಸಾಗಿದೆ ನಿನ್ನ ಹೃದಯಕೆ ಎನಿಸಲು ಬೇರೇನು ಬೇಕು?
ಕೊನೆಯಲ್ಲಿ – ಕ್ಷಮಿಸಿ ಹಗುರಾಗಿ, ನಿಮ್ಮನ್ನೂ ಕ್ಷಮಿಸಿಕೊಳ್ಳುವುದನ್ನು ಅಭ್ಯಾಸಮಾಡಿಕೊಳ್ಳಿ. ಬದುಕೆಂಬ ಹಾಯಿದೋಣಿ ಹಗುರವಾಗಿ ನೀರಮೇಲೆ ತೇಲುತ್ತಾ ಮುಂದೆ ಸಾಗಲಿ!