ನಮ್ಮದಾದ ಒತ್ತಡದಲ್ಲಿ ಮಕ್ಕಳೊಂದಿಗೆ ಜಾಸ್ತಿ ಹೊತ್ತು ಸಮಯ ಕಳೆಯಲಾಗದ ಅಸಹಾಯಕತೆಯ ಪರಿಣಾಮವಾಗಿ ಮೊಬೈಲಿಗೆ ಅಂಟಿಕೊಂಡುಬಿಡುವ ಪರಿ ಎಲ್ಲವೂ ಸೇರಿ ಮಕ್ಕಳಲ್ಲಿಯೂ ತಮ್ಮ ಕುರಿತಾಗಿ ಬದುಕಿನ ಕುರಿತಾಗಿ ರೂಪಗೊಳ್ಳುವ ಕಲ್ಪನೆಗಳು ಕೈಗೆಟಕುವುದಕ್ಕಿಂತ ಭಿನ್ನವೇ ಆಗಿರುತ್ತವೆಯೇನೋ ಅನಿಸುತ್ತದೆ. ನಮ್ಮ ಬಾಲ್ಯದಲ್ಲಿ ನಮಗೆ ದೊರೆಯದೆ ಹೋದುದೆಲ್ಲವನ್ನೂ ನಮ್ಮ ಮಕ್ಕಳಿಗೆ ಒದಗಿಸಬೇಕು ಎಂಬ ತರಾತುರಿಯೂ ಪರ್ಯಾಯವಾಗಿ ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸಲಾಗದಂತೆ ನಮ್ಮ ಮಕ್ಕಳನ್ನು ಬದಲಾಯಿಸುತ್ತಿದೆಯೆ? – ಯೋಚಿಸಬೇಕಿದೆ.
ಕೆಲವು ವರ್ಷಗಳ ಹಿಂದೆ ನಾವಿದ್ದ ಮನೆಯ ಅರ್ಧ ಕಿಲೋಮೀಟರ್ ದೂರದಲ್ಲಿ ರೈಲುಮಾರ್ಗವಿತ್ತು. ಪುಟ್ಟ ಮಗನಿಗೆ ಆಗ ರೈಲು ನೋಡುವುದೆಂದರೆ ಅದೇನೋ ಸಂಭ್ರಮ. ಸಂಜೆಯ ವೇಳೆ ಅರ್ಧಗಂಟೆಯ ಅವಧಿಯಲ್ಲಿ ಎರಡು ರೈಲುಗಳು ಬರುತ್ತಿದ್ದವು. ಆ ಹೊತ್ತಿಗೆ ಅವನನ್ನು ಕರೆದುಕೊಂಡು ವಾಕಿಂಗ್ ಹೋಗಬೇಕಿತ್ತು. ರೈಲು ಹೋಗುವವರೆಗೂ ಕಾದಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಗುರುತು ಪರಿಚಯ ಇಲ್ಲದ ಮಂದಿಗೆ ಟಾಟಾ ಹೇಳುವುದರಲ್ಲಿ ಅವನಿಗೆ ಅದೇನು ಸಂತೋಷ ದೊರೆಯುತ್ತಿತ್ತೋ ಕಾಣೆ. ಅವನಿಗಿಂತ ಮೂರು ವರ್ಷ ಹಿರಿಯವಳಾದ ಮಗಳಿಗೆ ಅದರಲ್ಲಿ ಅಂತಹ ಆಸಕ್ತಿಯೇನೂ ಇರಲಿಲ್ಲ. ನಿತ್ಯವೂ ಹೋಗುವ ರೈಲುಗಳನ್ನು ನೋಡುವುದಕ್ಕೇನಿದೆ? ಅಷ್ಟೊಂದು ಮಂದಿ ಪ್ರತಿದಿನ ಎಲ್ಲಿಗೆ ಹೋಗುತ್ತಾರೆ? ಅವರೆಲ್ಲ ಯಾಕೆ ರೈಲಿನಲ್ಲಿ ಓಡಾಡಬೇಕು… ಎಂಬಿತ್ಯಾದಿ ಅವಳ ಪ್ರಶ್ನೆಗಳು ಸಹಜವೇ ಆಗಿದ್ದವು. ಅದಕ್ಕಿಂತ ಹೆಚ್ಚಾಗಿ ಕಿವಿತೂತು ಬೀಳುವಂಥ ಅದರ ಹಾರ್ನ್ ಅವಳಿಗೆ ಇಷ್ಟವೇ ಆಗುತ್ತಿರಲಿಲ್ಲ. ಅಂತೂ ಅಮ್ಮನ ಕೈಹಿಡಿದು ಒಂದಿಷ್ಟು ದೂರ ನಡೆಯುವ ಸಂಭ್ರಮಕ್ಕಷ್ಟೇ ಅವಳು ಬರುತ್ತಿದ್ದಳು.
ಹೀಗಿರುವಾಗ ಒಂದು ದಿನ ಊರಿನಿಂದ ನಮ್ಮ ಬಹಳ ಹತ್ತಿರದ ನೆಂಟರು ಬಂದಿದ್ದರು. ಸಾಮಾನ್ಯವಾಗಿ ತುಮಕೂರು-ಬೆಂಗಳೂರು ಮಂದಿ ರೈಲಿಗೆ ಒಗ್ಗಿಕೊಂಡಷ್ಟು ದಕ್ಷಿಣಕನ್ನಡದ ಜನ ರೈಲಿನ ನಂಟು ಬೆಳೆಸಿಕೊಂಡವರಲ್ಲ. ಏಕೆಂದರೆ ಬಹುತೇಕ ಹಳ್ಳಿಗಳಿಗೆ ಬಸ್ಸು ಸಂಪರ್ಕವೇ ಕಠಿಣ ಎಂದಿರುವಾಗ ರೈಲೆಂಬುದನ್ನು ಕಾಣುವ, ಕೇಳುವ ಸಾಧ್ಯತೆಯೂ ಇಲ್ಲದ ಊರುಗಳು ಅಲ್ಲಿ ಹೆಚ್ಚು. ‘ನಮ್ಮ ಬಸ್ಸು’ ಎಂಬ ಭಾವನಾತ್ಮಕ ಬಂಧ ಇದ್ದಷ್ಟು ‘ನಮ್ಮ ರೈಲು’ ಎಂಬ ಬಂಧ ಅಲ್ಲಿ ಕಡಮೆ. ಮನೆಗೆ ಬಂದಿದ್ದ ನೆಂಟರ ಪೈಕಿ ನನ್ನ ಮಗಳಿಗಿಂತ ಒಂದೆರಡು ವರ್ಷ ದೊಡ್ಡ ಬಾಲಕನಿದ್ದ. ಆಗೀಗ ರೈಲಿನ ಹಾರ್ನ್ ಅವನಿಗೆ ವಿಚಿತ್ರವೆನಿಸಿತ್ತು. ಅಷ್ಟು ಹತ್ತಿರವೇ ರೈಲು ಬರುತ್ತದಾ ಎಂಬುದೂ ಅವನಿಗೆ ಸೋಜಿಗವೆನಿಸಿತ್ತು. ಹೇಗೂ ಸಂಜೆಯ ವಾಕಿಂಗ್ ಇದೆಯಲ್ಲ, ಆ ಹೊತ್ತಿಗೆ ಅವನನ್ನೂ ಕರೆದುಕೊಂಡು ಹೋದೆವು. ಅವನಿಗೋ ಬೆರಗೆಂದರೆ ಬೆರಗು. ಅವನೊಳಗೆ ನೂರೆಂಟು ಪ್ರಶ್ನೆಗಳು. ಅವನಿಗೆ ಉತ್ತರಿಸುತ್ತಾ ಉತ್ತರಿಸುತ್ತಾ ಮಗಳ ಮುಖ ನೋಡಿದರೆ ಅವಳಿಗೂ ಗೊಂದಲ. ‘ಈ ರೈಲಿನಲ್ಲಿ ಅಂತಹ ಸೋಜಿಗದ್ದೇನಿದೆ?’ ಎಂಬಂತೆ ನನ್ನನ್ನು ನೋಡುತ್ತ ನಿಂತಿದ್ದಳು. ಬಹುಶಃ ಅವಳಿಗಾಗ ಐದೋ ಆರೋ ವರ್ಷ ಇದ್ದಿರಬಹುದು. ಒಂದೇ ಸಂಗತಿಯನ್ನು ದಿನವೂ ನೋಡುತ್ತಿದ್ದಾಗ ತೀರಾ ಯಾಂತ್ರಿಕ ಎನಿಸುತ್ತದಲ್ಲ. ಹಾಗೆಯೆ ತಾನು ದಿನವೂ ನೋಡುವ ರೈಲಿನಲ್ಲಿ ಅವಳಿಗೆ ಹೊಸತನವೇನೂ ಉಳಿದಿರಲಿಲ್ಲ. ಹಳ್ಳಿಯಲ್ಲಿರುವ ಕೆಲವು ವೈಶಿಷ್ಟ್ಯಗಳು ಪಟ್ಟಣದವರಿಗೆ ತೀರಾ ಹೊಸತು ಅನ್ನಿಸುವುದೂ ಇದೆಯಲ್ಲ – ಗದ್ದೆ, ತೋಟ, ಹಸುಗಳು ಇವೆಲ್ಲವೂ ಪಟ್ಟಣದಲ್ಲಿ ಬೆಳೆಯುವ ಮಕ್ಕಳಿಗೆ ವಿಶೇಷ ಅನ್ನಿಸುತ್ತವೆ. ಅದೂ ಸಹಜವೇ.
ಆ ದಿನಗಳಲ್ಲಿ ನನಗೆ ಆ ಬಗ್ಗೆ ಹೆಚ್ಚಿನ ಯೋಚನೆಯೇನೂ ಬಂದಿರಲಿಲ್ಲ. ಈಗೀಗ ಮನೆಯಲ್ಲಾಗಲಿ ಕಾಲೇಜಿನಲ್ಲಾಗಲಿ ಮಕ್ಕಳನ್ನು ಗಮನಿಸುವಾಗ ಕೆಲವು ಸಂಗತಿಗಳಲ್ಲಿ ನಮಗಿದ್ದ ಕೌತುಕ, ಸಣ್ಣಪುಟ್ಟ ವಿಚಾರಗಳಿಗೆ ನಮಗಿದ್ದ ಸಂಭ್ರಮ ಅವರಿಗಿರುವುದಿಲ್ಲವೇ ಎಂದೆನಿಸುವುದಿದೆ. ಒಂದೆಡೆ ಶಿಕ್ಷಣದ ನೆಪದಲ್ಲಿ ಎಳೆಯ ಮಿದುಳುಗಳಿಗೆ ಪ್ರಪಂಚದ ಜ್ಞಾನವನ್ನೆಲ್ಲ ತುಂಬಿಬಿಡುವ, ಆ ಪ್ರಯತ್ನದಲ್ಲಿ ಕಲಿಕೆ ಎಂಬುದು ಹೊರೆಯಾಗಿ ಮಾರ್ಪಟ್ಟಿರುವ ವ್ಯವಸ್ಥೆ. ಇನ್ನೊಂದೆಡೆ ಹತ್ತು ಮಕ್ಕಳು ಪೂರೈಸಬಹುದಾದ ನಿರೀಕ್ಷೆಗಳನ್ನು ಒಂದೇ ಮಗುವಿನಿಂದ ಹಾತೊರೆಯುವ ಅಪ್ಪ-ಅಮ್ಮನಿಂದ ವ್ಯಕ್ತವಾಗುವ ಹೊರೆ, ಜೊತೆಗೆ ನಮ್ಮದಾದ ಒತ್ತಡದಲ್ಲಿ ಮಕ್ಕಳೊಂದಿಗೆ ಜಾಸ್ತಿ ಹೊತ್ತು ಸಮಯ ಕಳೆಯಲಾಗದ ಅಸಹಾಯಕತೆಯ ಪರಿಣಾಮವಾಗಿ ಮೊಬೈಲಿಗೆ ಅಂಟಿಕೊಂಡುಬಿಡುವ ಪರಿ – ಎಲ್ಲವೂ ಸೇರಿ ಮಕ್ಕಳಲ್ಲಿಯೂ ತಮ್ಮ ಕುರಿತಾಗಿ ಬದುಕಿನ ಕುರಿತಾಗಿ ರೂಪಗೊಳ್ಳುವ ಕಲ್ಪನೆಗಳು ಕೈಗೆಟಕುವುದಕ್ಕಿಂತ ಭಿನ್ನವೇ ಆಗಿರುತ್ತವೆಯೇನೋ ಅನಿಸುತ್ತದೆ. ನಮ್ಮ ಬಾಲ್ಯದಲ್ಲಿ ನಮಗೆ ದೊರೆಯದೆ ಹೋದುದೆಲ್ಲವನ್ನೂ ನಮ್ಮ ಮಕ್ಕಳಿಗೆ ಒದಗಿಸಬೇಕು ಎಂಬ ತರಾತುರಿಯೂ ಪರ್ಯಾಯವಾಗಿ ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸಲಾಗದಂತೆ ನಮ್ಮ ಮಕ್ಕಳನ್ನು ಬದಲಾಯಿಸುತ್ತಿದೆಯೆ? – ಯೋಚಿಸಬೇಕಿದೆ. ಬೇಕಾದುದೆಲ್ಲವೂ ಅಗತ್ಯಕ್ಕಿಂತ ಹೆಚ್ಚೇ ಆಗಿ ನಮಗೆ ದೊರಕಿದರೆ ಅದರ ಮೌಲ್ಯವನ್ನು ಗ್ರಹಿಸಿಕೊಳ್ಳಲಾರೆವಲ್ಲ. ಅದು ಎಲ್ಲರಿಗೂ ಎಲ್ಲ ವಿಷಯಕ್ಕೂ ಅನ್ವಯಿಸುವಂಥದ್ದೇ.
ನಮ್ಮ ಬಾಲ್ಯ, ಕೌಮಾರ್ಯದ ದಿನಗಳಲ್ಲಿ ಮನೆಗೆ ತರುತ್ತಿದ್ದ ಮ್ಯಾಗಜಿನ್ಗಳಲ್ಲಿ ಇರುತ್ತಿದ್ದ ಚಂದಚಂದದ ಚಿತ್ರಗಳನ್ನು ಕತ್ತರಿಸಿ ಬೇರೆಯದೊಂದು ಪುಸ್ತಕದಲ್ಲಿ ಅಂಟಿಸಿಡುವುದರಲ್ಲಿ ತುಂಬ ಖುಷಿ ಇರುತ್ತಿತ್ತು. ರೇಡಿಯೋದಲ್ಲಿ ಕೇಳುವ ಪದ್ಯಗಳಿಗಾಗಿ ಕಾದು ಕುಳಿತಿರುತ್ತಿದ್ದೆವು. ಒಂದು ಸಾಲು ಅಕ್ಕ, ಇನ್ನೊಂದು ಸಾಲು ನಾನು ಎಂದು ಬರೆದುಕೊಂಡು, ತಪ್ಪಿಹೋದ ಸಾಲುಗಳಿಗೆ/ಪದಗಳಿಗೆ ಪೇಚಾಡುವುದು ಎಲ್ಲ ಇತ್ತು. ಈಗ ಅಂಗೈಯಲ್ಲೇ ಅರಮನೆ ಎಂದು ಮೊಬೈಲಿನಲ್ಲಿ ಬೇಕುಬೇಕಾದ ಪದ್ಯಗಳನ್ನು ಬೇಕಾದಷ್ಟು ಸಲ ಕೇಳಬಹುದು. ಆದರೆ ಆ ವ್ಯವಧಾನವೇ ಇಲ್ಲವಲ್ಲ? ಮನೆಕಟ್ಟಿಸುವಾಗ ಮನೆಯ ಪ್ರತಿ ಮೂಲೆಗೂ ಸ್ಪೀಕರ್ ಇರಿಸಿ ಮನೆಯೊಳಗೆ ಸದಾ ಸಂಗೀತ ಮಾರ್ದನಿಸುತ್ತಿರಬೇಕು, ಯಕ್ಷಗಾನದ ಪದ್ಯಗಳನ್ನೋ ತಾಳಮದ್ದಳೆಗಳನ್ನೋ ಬೇಕುಬೇಕಾದಂತೆ ಕೇಳಬೇಕು ಎಂದೆಲ್ಲ ಕನಸುಗಳಿದ್ದವು. ಆದರೆ ಅದಕ್ಕೂ ಬಿಡುವಿಲ್ಲದಂತೆ ಇತರ ಕಾರ್ಯಗಳ ಒತ್ತಡ. ಅಂತೂ ಈ ಬಗೆಯ ಖುಷಿಯನ್ನು ಅನುಭವಿಸಲಾರೆವು. ನಮ್ಮದೇ ಕತೆ ಹೀಗಾಗುವಾಗ ಇನ್ನು ಮಕ್ಕಳದ್ದೇನು?
ಮೊಬೈಲೆಂಬ ಪ್ರಪಂಚದಲ್ಲಿ ಅವರಿಗೆ ಬೇಕಿರುವುದೂ ಬೇಡದೆ ಇರುವುದೂ ಎಲ್ಲವೂ ಸಿಕ್ಕಿಬಿಡುತ್ತದೆ. ತಂತ್ರಜ್ಞಾನದ ಬಳಕೆಯಲ್ಲಿ ನಮಗಿಂತಲೂ ಮಕ್ಕಳೇ ಹತ್ತುಹೆಜ್ಜೆ ಮುಂದಿರುವುದೂ ಸುಳ್ಳಲ್ಲ. ಹಾಗಿರುವಾಗ ಅವರು ಏನು ನೋಡುತ್ತಿದ್ದಾರೆ ಮತ್ತು ಯಾಕೆ ನೋಡುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ವಹಿಸದೆ ಹೋದರೆ ಅವರಲ್ಲಿ ಯಾವ ಮುಗ್ಧತೆಯೂ ಉಳಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಮುಗ್ಧತೆಯನ್ನು ಕಳೆದುಕೊಂಡ ಮೇಲೆ ಕುತೂಹಲವಾದರೂ ಎಲ್ಲಿಂದ? ಮೊಬೈಲಿನಿಂದ ಆಗಿರುವ ಇನ್ನೊಂದು ಬಲುದೊಡ್ಡ ಸಮಸ್ಯೆಯೆಂದರೆ ಎಲ್ಲವೂ ಅದರಲ್ಲಿ ಇರುವುದರಿಂದ ತಮ್ಮ ತಲೆಯಲ್ಲಿ ಏನನ್ನು ಇಟ್ಟುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಕಲಿಸಲಾಗದೆ ಇರುವುದು. ನಮಗೇ ಆದರೂ ಇಪ್ಪತ್ತು ವರ್ಷಗಳ ಹಿಂದೆ ಫೋನ್ ನಂಬರ್ಗಳು ನೆನಪಿದ್ದಂತೆ ಈಗ ನೆನಪಿಟ್ಟುಕೊಳ್ಳಲಾಗದಲ್ಲ! ಅದಾದರೂ ಇರಲಿ, ಉಳಿದಂತೆ ಜ್ಞಾನಕ್ಕೇ ಸಂಬಂಧಿಸಿದ್ದಾದರೂ ಅಗತ್ಯವಿರುವುದನ್ನು ಬರೆದುಕೊಳ್ಳುವುದಕ್ಕಿಂತ ಮೊಬೈಲಿನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ಹೆಚ್ಚು. ಹೈಸ್ಕೂಲಿನಲ್ಲಿ ಓದುತ್ತಿರುವ ಮಗನ ಸಹಪಾಠಿಗಳು ಪ್ರತೀದಿನ ಸಂಜೆ ಫೋನ್ ಮಾಡಿ ‘ಲೋ, ಇವತ್ತು ಬರೆಸಿರೋದ್ನ ಫೋಟೋ ತೆಗೆದು ಕಳಿಸೋ’ ಎಂದು ಕಾಟ ಕೊಡುವುದಿದೆ. ಅದಕ್ಕಾಗಿ ಹತ್ತಾರು ಸಲ ಫೋನ್ ಮಾಡಿಯೂ ಮಾಡುತ್ತಾರೆ. ಅದರ ಬದಲು ತರಗತಿಯಲ್ಲಿ ಟೀಚರ್ ಬರೆಸುವಾಗಲೇ ಬರೆದುಕೊಳ್ಳುವುದಕ್ಕೇನು ಅವರಿಗೆ? ಎಂದು ನಾನು ರೇಗುವುದಿದೆ. ಬರೆಯುವ ಕುತೂಹಲವಾದರೂ ಯಾಕೆ ಉಳಿದೀತು?
ಅತಿಯಾದರೆ ಅಮೃತವೂ ವಿಷ ಎಂದ ಹಾಗೆ ಇಂದು ಎಲ್ಲವೂ ಅತಿಯೇ, ಅತಿರೇಕವೇ. ಮೊಬೈಲ್ ನೋಡಬೇಡ ಎಂದು ಹಿರಿಯರು ಹೇಳಿದ್ದಕ್ಕೆ ಬಾಲಕನೊಬ್ಬ ಬಾವಿಗೆ ಹಾರಿ ಜೀವ ಕಳೆದುಕೊಂಡದ್ದು ಇತ್ತೀಚಿಗೆ ವರದಿಯಾಗಿತ್ತು. ಪಬ್ಜಿ ಆಡಲು ಮೊಬೈಲ್ ಡೇಟಾ ಹಾಕಿಸಲಿಲ್ಲವೆಂದು ತಂದೆಯನ್ನು ಮಗನೊಬ್ಬ ಕೊಂದದ್ದು ತೀರಾ ಹಳೆಯ ಸುದ್ದಿಯಲ್ಲ. ಬದುಕೆಂಬ ವಿಶಾಲವೃಕ್ಷದಲ್ಲಿ ನಮಗೆ ನೆಮ್ಮದಿಯ ನೆರಳು ಬೇಕಾದಷ್ಟು ಸಿಗುತ್ತದೆ ಮಾತ್ರವಲ್ಲ, ಮುಂದಿನ ಪಥವನ್ನು ಸಂತೋಷವಾಗಿ ಕಳೆಯುವುದಕ್ಕೆ ಬೇಕಾದ ದಾರಿಯೂ ಸಿಗುತ್ತದೆ ಎಂಬುದನ್ನು ಮಕ್ಕಳಿಗೆ ಕಲಿಸದೆ ಹೋಗುತ್ತಿದ್ದೇವೆಯೆ? ಎಲ್ಲದಕ್ಕೂ ‘ಅದರಲ್ಲೇನಿದೆ? ಇದರಲ್ಲೇನಿದೆ?’ ಎಂಬ ಅಸಡ್ಡೆಯನ್ನೇ ಬೆಳೆಸಿಕೊಂಡರೆ ಬೇರೆಲ್ಲ ಬಂಧುಗಳಿಗಿಂತಲೂ ಮೊಬೈಲ್ ಒಂದೇ ಬಂಧುವಾದರೆ ನಮ್ಮೊಳಗಿನ ಕುತೂಹಲದ ಹಕ್ಕಿಯ ರೆಕ್ಕೆಗಳನ್ನು ನಾವೇ ಕತ್ತರಿಸಿದಂತೆ ಅಲ್ಲವೇ? ಕೊಂಚ ಎಚ್ಚರ ಬೇಕಿದೆ. ಮಕ್ಕಳ ಕುತೂಹಲವನ್ನು ಇರಬೇಕಾದಷ್ಟು ಇರಗೊಡುವುದೂ ಅವರ ಬದುಕನ್ನು ಪೊರೆಯುವಲ್ಲಿ ನಮ್ಮ ಕರ್ತವ್ಯವೇ ಆಗಿದೆ.
ಬಿಡುವಿದ್ದವರು ಒಮ್ಮೆ ಪೃಥ್ವಿ ಕೊಣನೂರು ಅವರ ಹದಿನೇಳೆಂಟು ಸಿನೆಮಾ ನೋಡಿ. ಯೂಟೂಬ್ನಲ್ಲಿ ಲಭ್ಯವಿದೆ.