ಅಡುಗೆಮನೆಯೆಂಬುದು ಮನೆಯೊಂದರ ಅಸ್ಮಿತೆ ಎನ್ನುವಷ್ಟರಮಟ್ಟಿಗೆ ಅಲ್ಲಿಗೆ ಹಾಕುವ ಟೈಲ್ಸ್ನಿಂದ ತೊಡಗಿ ನಲ್ಲಿಯವರೆಗೂ ವಿಶೇಷವಾದ ಆಸ್ಥೆಯನ್ನು ತೋರಿಸಿರುತ್ತೇವೆ. ಅಲ್ಲಿ ನಿಂತು ಅಡುಗೆ ಮಾಡುವುದರಲ್ಲಿ ಇಡೀ ದಿನದ ಸಂತೋಷವನ್ನು ಮನಸ್ಸಿಗೆ ತುಂಬಿಕೊಳ್ಳುತ್ತೇವೆ. ಅಷ್ಟೇ ಏಕೆ, ಹಿಂದೆ ಅತ್ತೆಸೊಸೆಯರ ಜಗಳಕ್ಕೆ ಅಡುಗೆಮನೆಯ ಆಧಿಪತ್ಯವೂ ಒಂದು ಕಾರಣವಾಗಿರುತ್ತಿತ್ತು. ಅತ್ತೆಯ ಕಾಲದ ವ್ಯವಸ್ಥೆ ಸೊಸೆಗೆ ಒಗ್ಗದೆ, ಸೊಸೆಯ ಆಧುನಿಕತೆ ಅತ್ತೆಗೆ ಹಿಡಿಸದೆ ಸಣ್ಣಪುಟ್ಟ ಮನಸ್ತಾಪಗಳೂ ಏಳುತ್ತಿದ್ದವು. ಅದರ ಹಿಂದೆ ಇರುತ್ತಿದ್ದುದು ಅಡುಗೆಮನೆಯ ಪ್ರೀತಿ ಎಂಬುದು ನಿರ್ವಿವಾದ. ಆದರೆ ಅದೇ ಅತಿಯಾಗಿ ಸಂಬಂಧಗಳು ಬಿರುಕು ಮೂಡದಂತೆ ನೋಡಿಕೊಳ್ಳಬೇಕಿತ್ತು ಎಂಬುದೂ ಸತ್ಯವೇ. ಅತ್ತೆ ಅಡುಗೆಮನೆಯನ್ನು ಬಿಟ್ಟುಕೊಡಲೊಲ್ಲಳು, ಸೊಸೆ ಸುಮ್ಮನಾಗಲೊಲ್ಲಳು. ಅಷ್ಟರಮಟ್ಟಿಗೆ ಅಡುಗೆಮನೆಯ ಕುರಿತು ಒಲುಮೆಯಿತ್ತು. ಮಾತ್ರವಲ್ಲ, ಮನೆಯ ಅಧಿಕಾರದ ಕೇಂದ್ರವೂ ಅದಾಗಿತ್ತು! ಅಂಥದ್ದರಲ್ಲಿ ನಮಗರಿವಿಲ್ಲದೆಯೆ ನಮ್ಮ ಮನೆಯ ಅಡುಗೆಮನೆ ನಿರ್ಲಕ್ಷಿತ, ನಿರ್ಬಂಧಿತ ಪ್ರದೇಶವಾಗಿ ಹೇಗೆ ಬದಲಾಯ್ತು? ಅಥವಾ ಹೇಗೆ ಬದಲಾಗುತ್ತಿದೆ? ಯೋಚಿಸಬೇಕಾದ ಅನಿವಾರ್ಯತೆಯಿದೆ.
ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡರೆ ಬೆಳಗಾಗೆದ್ದ ತಕ್ಷಣ ಅಮ್ಮ ಬಚ್ಚಲುಮನೆಯ ಒಲೆಯಿಂದ ಬೂದಿ ತೆಗೆದು, ಒಲೆ ಹಚ್ಚಿ ನೀರು ಕಾಯುವಂತೆ ಮಾಡಿ ತನ್ನ ಮುಂದಿನ ಕೆಲಸ ಕಾರ್ಯಗಳಿಗೆ ಅನುವಾಗುತ್ತಿದ್ದರು. ಅಡುಗೆಮನೆಯ ಒಲೆಯಲ್ಲಿ ಬೆಚ್ಚಗಿನ ಬೂದಿಯಲ್ಲಿ ಹಾಯಾಗಿ ಒರಗುವ ಬೆಕ್ಕನ್ನು ಎಬ್ಬಿಸಿ ಅಲ್ಲೂ ಒಲೆ ಹಚ್ಚಿ ನೀರು ಕಾಯುವುದಕ್ಕೋ ಗಂಜಿ ಬೇಯುವುದಕ್ಕೋ ಇರಿಸಿ ಬೆಳಗಿನ ತಿಂಡಿಯ ವ್ಯವಸ್ಥೆಗೆ ಅಣಿಯಾಗುತ್ತಿದ್ದರು. ದಿನ ಮೊದಲುಗೊಳ್ಳುವುದೇ ಬಹುತೇಕ ಒಲೆಹಚ್ಚುವುದರಿಂದಲೇ. ಮಳೆಗಾಲದ ದಿನಗಳಲ್ಲಿ ಮಾತ್ರ ಕೊಂಚ ಒದ್ದಾಟ. ಎಷ್ಟೇ ಹುಷಾರಾಗಿ ಸೌದೆಗಳನ್ನು ಜೋಡಿಸಿಕೊಂಡಿದ್ದರೂ ಜೋರಾಗಿ ಸುರಿಯುವ ಮಳೆ ಸೀರಣಿ ಹೊಡೆದು ನೆನೆದುಹೋಗುತ್ತಿತ್ತು. ಅವುಗಳನ್ನು ಉರಿಸುವಷ್ಟರಲ್ಲಿ ಅಮ್ಮನಿಗೆ ಸಾಕೋಸಾಕಾಗುತ್ತಿತ್ತು. ಅಮ್ಮನ ಆರೋಗ್ಯದಲ್ಲಿ ವ್ಯತ್ಯಯಗಳು ಶುರುವಾದ ಬಳಿಕ ಇದೆಲ್ಲದರ ಹೊಣೆಯನ್ನು ಅಪ್ಪನೇ ವಹಿಸಿಕೊಂಡಿದ್ದರು. ನಮಗೆ ಕಾಲೇಜಿಗೆ ರಜೆ ಇದ್ದ ದಿನಗಳಲ್ಲಿ ಇವೆಲ್ಲ ನಮ್ಮ ಕೆಲಸ. ನಿಧಾನಕ್ಕೆ ಮನೆಗೆ ಗೋಬರ್ ಗ್ಯಾಸಿನ ವ್ಯವಸ್ಥೆಯಾಯಿತು. ಅದೂ ಬೇಸಗೆಯಲ್ಲಿ ಒದಗಿದಂತೆ ಮಳೆಗಾಲದಲ್ಲಿ ಒದಗದು. ಅಡುಗೆ ಅನಿಲದ ಸಿಲಿಂಡರ್ ನಮ್ಮ ಮನೆಗೆ ಪ್ರವೇಶ ಕೊಟ್ಟದ್ದು ಬಹಳ ತಡವಾಗಿ. ಗ್ಯಾಸು ಹಂಡೆಗೆ ಕೊಟ್ಟದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಜೀಪು ಬಾಡಿಗೆಗೆ ಕೊಡಬೇಕಿತ್ತು, ನಮ್ಮ ಮನೆಯಿದ್ದುದು ಹಳ್ಳಿಯ ಒಳಮೂಲೆಯಲ್ಲಿ! ವ್ಯವಸ್ಥೆಗಳು ಎಷ್ಟೇ ಸೀಮಿತವಿರಲಿ, ಮನೆಯಲ್ಲಿ ಅಡುಗೆ ಎಂದೂ ತಪ್ಪಿದ್ದಿಲ್ಲ. ಅಮ್ಮನೋ ಅಜ್ಜಿಯೋ ಜ್ವರ ಬಂದು ಮಲಗಿದರೂ ಅಡುಗೆಯಿಲ್ಲದೆ ಯಾರೂ ಹಸಿದು ಕುಳಿತದ್ದಿಲ್ಲ, ಒಲೆ ಉರಿಯದೆ ತಣ್ಣಗೆ ಉಳಿದದ್ದಿಲ್ಲ.
ವರ್ಷಗಳು ಉರುಳುತ್ತಾ ಬಂದು ಮನೆಮನೆಗಳಲ್ಲೂ ಸೌಕರ್ಯಗಳು ಹೆಚ್ಚಿದವು. ಪೇಟೆಯ ಮನೆಗಳಲ್ಲಂತೂ ಪುಟ್ಟ ಅಡುಗೆಮನೆ, ಪಾತ್ರೆ ತೊಳೆಯುವುದಕ್ಕೂ ಅಲ್ಲೇ ಒಂದು ಸಿಂಕು. ಬಾವಿಯಿಂದ ನೀರು ಸೇದುವ ಕಷ್ಟವಿಲ್ಲ, ನಲ್ಲಿ ತಿರುವಿದರೆ ನೀರು. ಒಂದಷ್ಟು ವರ್ಷಗಳ ಕಾಲ ಈ ಬಗೆಯ ಬದುಕನ್ನು ಜನ ಸಂತೋಷದಿಂದಲೇ ಅನುಭವಿಸಿದರೆನ್ನೋಣ. ಆದರೆ ಬರಬರುತ್ತಾ ಮನೆಯಲ್ಲಿ ಅಡುಗೆಮನೆಯೆಂಬುದು ಬೇಕಾಗಿಯೇ ಇಲ್ಲವೇನೋ ಎಂಬ ವಿಚಿತ್ರ ಸನ್ನಿವೇಶಕ್ಕೆ ಬಂದು ತಲಪಿದ್ದೇವೆ. ಮೊಬೈಲಿನಲ್ಲಿ ಆ್ಯಪ್ ಇದ್ದರಾಯಿತು, ಬೇಕುಬೇಕಾದುದನ್ನು ಬುಕ್ ಮಾಡಿದರೆ ಮನೆಬಾಗಿಲಿಗೆ ನಾವು ಬಯಸಿದ ತಿನಿಸು ಬಂದು ಬೆಲ್ ಮಾಡುತ್ತದೆ. ಅಡುಗೆಯ ಒತ್ತಡವಿಲ್ಲ, ಅಡುಗೆಮನೆ ಸ್ವಚ್ಛಗೊಳಿಸುವ ಸಂಕಟವಿಲ್ಲ, ಪಾತ್ರೆ ತೊಳೆಯುವ ಸಂಕಷ್ಟ ಮೊದಲೇ ಇಲ್ಲ. ವ್ಯವಸ್ಥೆಗಳು ಅತಿಯಾದಷ್ಟೂ ಮನುಷ್ಯ ಸೋಮಾರಿಯಾಗುತ್ತಾ ಹೋಗುತ್ತಾನೆ ಎಂಬುದಕ್ಕೆ ಉರಿಯದೆ ಉಳಿಯುವ ಒಲೆಗಳೂ ಸಾಕ್ಷಿಯಾಗುವ ಕಾಲ ಬಂದಾಯ್ತು ಎಂಬುದು ಈ ಕಾಲಘಟ್ಟದ ವಿಷಾದ. ನಮ್ಮ ಆರೋಗ್ಯದ ಕಥೆಯೇನು?
ಹೊಸಮನೆ ಕಟ್ಟಿಸುವಾಗ ಇತರೆಲ್ಲ ಕೋಣೆಗಳ ವಿನ್ಯಾಸಕ್ಕಿಂತಲೂ ಅಡುಗೆಮನೆಗೆ ವಿಶೇಷವಾದ ಅಕ್ಕರೆ ಕಾಳಜಿಯನ್ನು ತೋರಿಸಿರುತ್ತೇವೆ. ಅಡುಗೆಮನೆಯೆಂಬುದು ಮನೆಯೊಂದರ ಅಸ್ಮಿತೆ ಎನ್ನುವಷ್ಟರಮಟ್ಟಿಗೆ ಅಲ್ಲಿಗೆ ಹಾಕುವ ಟೈಲ್ಸ್ನಿಂದ ತೊಡಗಿ ನಲ್ಲಿಯವರೆಗೂ ವಿಶೇಷವಾದ ಆಸ್ಥೆಯನ್ನು ತೋರಿಸಿರುತ್ತೇವೆ. ಅಲ್ಲಿ ನಿಂತು ಅಡುಗೆ ಮಾಡುವುದರಲ್ಲಿ ಇಡೀ ದಿನದ ಸಂತೋಷವನ್ನು ಮನಸ್ಸಿಗೆ ತುಂಬಿಕೊಳ್ಳುತ್ತೇವೆ. ಅಷ್ಟೇ ಏಕೆ, ಹಿಂದೆ ಅತ್ತೆಸೊಸೆಯರ ಜಗಳಕ್ಕೆ ಅಡುಗೆಮನೆಯ ಆಧಿಪತ್ಯವೂ ಒಂದು ಕಾರಣವಾಗಿರುತ್ತಿತ್ತು. ಅತ್ತೆಯ ಕಾಲದ ವ್ಯವಸ್ಥೆ ಸೊಸೆಗೆ ಒಗ್ಗದೆ, ಸೊಸೆಯ ಆಧುನಿಕತೆ ಅತ್ತೆಗೆ ಹಿಡಿಸದೆ ಸಣ್ಣಪುಟ್ಟ ಮನಸ್ತಾಪಗಳೂ ಏಳುತ್ತಿದ್ದವು. ಅದರ ಹಿಂದೆ ಇರುತ್ತಿದ್ದುದು ಅಡುಗೆಮನೆಯ ಪ್ರೀತಿ ಎಂಬುದು ನಿರ್ವಿವಾದ. ಆದರೆ ಅದೇ ಅತಿಯಾಗಿ ಸಂಬಂಧಗಳು ಬಿರುಕು ಮೂಡದಂತೆ ನೋಡಿಕೊಳ್ಳಬೇಕಿತ್ತು ಎಂಬುದೂ ಸತ್ಯವೇ. ಅತ್ತೆ ಅಡುಗೆಮನೆಯನ್ನು ಬಿಟ್ಟುಕೊಡಲೊಲ್ಲಳು, ಸೊಸೆ ಸುಮ್ಮನಾಗಲೊಲ್ಲಳು. ಅಷ್ಟರಮಟ್ಟಿಗೆ ಅಡುಗೆಮನೆಯ ಕುರಿತು ಒಲುಮೆಯಿತ್ತು. ಮಾತ್ರವಲ್ಲ, ಮನೆಯ ಅಧಿಕಾರದ ಕೇಂದ್ರವೂ ಅದಾಗಿತ್ತು! ಅಂಥದ್ದರಲ್ಲಿ ನಮಗರಿವಿಲ್ಲದೆಯೆ ನಮ್ಮ ಮನೆಯ ಅಡುಗೆಮನೆ ನಿರ್ಲಕ್ಷಿತ, ನಿರ್ಬಂಧಿತ ಪ್ರದೇಶವಾಗಿ ಹೇಗೆ ಬದಲಾಯ್ತು? ಅಥವಾ ಹೇಗೆ ಬದಲಾಗುತ್ತಿದೆ? ಯೋಚಿಸಬೇಕಾದ ಅನಿವಾರ್ಯತೆಯಿದೆ.
ಮನೆಮಂದಿಗೆ ಇಷ್ಟವಾಗುವ ತಿನಿಸು ಮಾಡಿಕೊಡುತ್ತ, ಎಲ್ಲರನ್ನೂ ಒಳಗೊಳ್ಳುತ್ತ ಬೆರಳುಗಳನ್ನು ಒಂದುಗೂಡಿಸುವ ಅಂಗೈಯಂತೆ ಇರುತ್ತಿದ್ದ ಅಡುಗೆಮನೆಯ ಪರಿಕಲ್ಪನೆಯೆ ಬದಲಾಗುತ್ತಾ ಹೋಗುತ್ತಿದೆ. ಸಮಾನತೆಯ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಔನ್ನತ್ಯವನ್ನೋ ಪ್ರಾಮುಖ್ಯತೆಯನ್ನೋ ಕಲಿಸುವುದರ ಕಡೆಗೆ ಹೆಚ್ಚಿನ ಗಮನ ನೀಡಿದ ಪೋಷಕರು ‘ಮುಂದೆ ಹೇಗೂ ಕೈಸುಟ್ಟುಕೊಂಡು ಅಡುಗೆ ಮಾಡುವುದು ಇದ್ದೇ ಇದೆ, ಈಗ ಹಾಯಾಗಿರಲಿ’ ಅಂದುಕೊಂಡು ಅಡುಗೆ ಮಾಡುವುದೆಂದರೆ ಕಡಮೆ ಮೌಲ್ಯವುಳ್ಳದ್ದು ಎಂಬುದನ್ನಷ್ಟೇ ಬಿಂಬಿಸಿದ್ದಾರೆ. ನಮಗಿಂತ ಹತ್ತಾರು ವರ್ಷ ಹಿರಿಯ ಮಹಿಳೆಯರ ವೈಯಕ್ತಿಕ ಅನುಭವವೂ ಅದೇ ತಾನೇ? ಅಡುಗೆಮನೆಯಲ್ಲೇ ಬಿದ್ದಿರು ಎಂಬುದು ಸಾಮಾನ್ಯವಾದ ಬೈಗುಳ ಮಾತ್ರವಲ್ಲ, ಅವಳ ಬದುಕಿನ ಮಹದುದ್ದೇಶವೂ ಅಡುಗೆ ಮಾಡುತ್ತ ಮನೆಯವರ ಬೇಕುಬೇಡಗಳನ್ನು ಪೂರೈಸುವುದು ಎಂಬುದಾಗಿತ್ತು. ಅದರಿಂದ ಹೊರಬರುವ ಪ್ರಯತ್ನದಲ್ಲಿ ಎಡವಿದ್ದೇವೇ? ನಾವಂತೂ ಕಷ್ಟ ಪಟ್ಟೆವು, ನಮ್ಮ ಮಕ್ಕಳು ನಮ್ಮಂತೆ ಕಷ್ಟ ಪಡುವುದು ಬೇಡ ಎಂಬ ಯೋಚನೆಯಲ್ಲಿ ಬದುಕಿಗೆ ಅತ್ಯಗತ್ಯವಾದ ಅಡುಗೆಯ ಕೌಶಲವನ್ನು ಮರೆತೆವೇ? ಇಂದು ಹೊಸತಲೆಮಾರಿನ ಮಕ್ಕಳು ಮದುವೆಯಾಗಿ ತಿಂಗಳೊಳಗೆ ವಿಚ್ಛೇದನದತ್ತ ಮುಖ ಮಾಡುತ್ತಿರುವುದರಲ್ಲಿ ಅಡುಗೆಮನೆಯೂ ಒಂದು ನೆಪವಾಗಿದೆಯೇ?
ಸಮಸ್ಯೆಯ ಮೂಲ ಬಹಳ ಚಿಕ್ಕದೇ. ಗಂಡಹೆಂಡತಿ ಇಬ್ಬರೂ ಹೊರಗೆ ದುಡಿಯುವವರು, ಉತ್ತಮ ಸಂಪಾದನೆ. ಬಹುತೇಕ ಕಂಪೆನಿಗಳಲ್ಲಾದರೆ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ತಿಂಡಿಯೂ ಅಲ್ಲೇ ಇರುತ್ತದೆ. ಮನೆಗೆ ಬಂದು ಹಸಿವಿದ್ದರೆ ಅಡುಗೆ ಮಾಡುವುದು, ಇಲ್ಲವೇ ಹಣ್ಣುಹಂಪಲುಗಳನ್ನು ತಿಂದು ಮಲಗುವುದು ಎಂಬ ಹೊಸಬಗೆಯ ಜೀವನಕ್ರಮ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಮನೆಯಲ್ಲಿ ಇಬ್ಬರೇ ಇದ್ದಲ್ಲಿ ಹೇಗೋ ನಡೆದೀತು, ಮುಂದೆ? ಮಕ್ಕಳಾದರೆ ತನ್ನ ಔದ್ಯೋಗಿಕ ಮುಂಬಡ್ತಿ ಸೊರಗುತ್ತದೆ ಎಂಬ ಭ್ರಮೆಯಲ್ಲಿ ಮಕ್ಕಳೂ ಬೇಡವೆಂಬ ಯೋಚನೆ ಅಲ್ಲಲ್ಲಿ ಹೆಚ್ಚುತ್ತಿದೆ. ಈ ಬಗೆಯೆ ಮನಃಸ್ಥಿತಿಯೇ ಭದ್ರವಾದ ಮೇಲೆ ಊರಿನಲ್ಲಿರುವ ಅಪ್ಪ-ಅಮ್ಮ, ಅತ್ತೆ-ಮಾವ ಬಂದಾಗ, ನೆಂಟರಿಷ್ಟರು ಬಂದಾಗ ಬೆಳಗ್ಗೆ ಬೇಗನೇ ಎದ್ದು ಅಡುಗೆ ಮಾಡು ಎಂದರೆ ಕೇಳುವವರಾರು? ಅಮ್ಮನೋ ಅತ್ತೆಯೋ ಗಟ್ಟಿಮುಟ್ಟಾಗಿದ್ದರೆ ಮಾಡಿಯಾರು. ಅವರೂ ಅನಾರೋಗ್ಯ ಹೊಂದಿ ಕೈಲಾಗುವುದಿಲ್ಲ ಎಂಬ ಪರಿಸ್ಥಿತಿಯಲ್ಲಿ ಮನೆಗೆ ಬಂದರೆ ಅಡುಗೆಮನೆಯಷ್ಟೇ ಅವರೂ ಅನಾಥರಾಗುತ್ತಾರೆ! ಹೊರಗಿನಿಂದ ತಂದ ತಿಂಡಿಯ ಬಗ್ಗೆ ಅವರಿಗೊಂದು ಬಗೆಯ ಭಯವಿರುತ್ತದೆ, ತಿಂದರಾಗುವುದಿಲ್ಲ ಎಂಬ ನಂಬಿಕೆ ಅವರಲ್ಲಿದ್ದರೆ ತಪ್ಪೇನಲ್ಲ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಹೋಟೆಲ್ ತಿಂಡಿ ತಿನ್ನಲು ಒಪ್ಪಿದರೂ ಪ್ರತಿದಿನ ಅದಾಗದಲ್ಲ?
ಪರಿಹಾರವೇ ಇಲ್ಲದ ಸಮಸ್ಯೆಯೇನೂ ಇದಲ್ಲ. ಮನೆಯಲ್ಲಿ ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಅಡುಗೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕು. ಅವರನ್ನು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಲ್ಲಿ ಗಂಡು-ಹೆಣ್ಣೆಂಬ ತಾರತಮ್ಯ ಬೇಡ. ಮನೆಯಲ್ಲಿ ಅಮ್ಮನಿಗೆ ಜ್ವರವಿದ್ದರೂ ಅವರೇ ಎದ್ದು ಅಡುಗೆ ಮಾಡಬೇಕು ಎಂಬ ನಿಯಮಗಳನ್ನು ಕಳಚಿಕೊಂಡು ಅಡುಗೆ ಮಾಡುವುದು ಮನೆಯಲ್ಲಿ ಎಲ್ಲರ ಜವಾಬ್ದಾರಿ ಎಂಬ ಅರಿವು ಮೂಡಿಸಬೇಕು. ಮದುವೆಯ ಹೊಸಿಲಿನಲ್ಲಿ ನಿಂತಿರುವ ಮಕ್ಕಳೂ ಪರಸ್ಪರ ಮಾತಾಡಿಕೊಳ್ಳುವಾಗ ಅಡುಗೆಮನೆಯೆಂಬುದು ಅಕ್ಕರೆಯನ್ನು ಬೆಳೆಸುವ ತಾಣ ಎಂಬುದನ್ನು ಅಭಿವ್ಯಕ್ತಿಸಿಕೊಳ್ಳಬೇಕು, ಮನದಟ್ಟು ಮಾಡಿಕೊಳ್ಳಬೇಕು. ಇಂದಿನ ಆರ್ಥಿಕ ಆವಶ್ಯಕತೆಗಳ ಒತ್ತಡದಲ್ಲಿ ಇಬ್ಬರೂ ದುಡಿಯುವುದು ಅನಿವಾರ್ಯವೇ. ಅಲ್ಲದೆ ತಮ್ಮ ವಿದ್ಯಾರ್ಹತೆಗನುಗುಣವಾಗಿ ಉನ್ನತ ಅವಕಾಶಗಳ ಹಂಬಲ ಇಬ್ಬರಲ್ಲೂ ಇರುವುದು ಸಹಜ. ದುಡಿದು, ದಣಿದು ಮನೆಗೆ ಬಂದ ಗಂಡುಮಗ ಕೈಕಾಲು ಮುಖ ತೊಳೆದು (ತೊಳೆಯದೆಯೂ) ಸೋಫಾದ ಮೇಲುರುಳಿಕೊಂಡು ವಿರಮಿಸುವುದನ್ನು ಸಹಾನುಭೂತಿಯಿಂದ ಕಾಣುವ ಸಮಾಜ, ಹೆಣ್ಣು ಅದೇ ರೀತಿ ವರ್ತಿಸಿದರೆ ನೋಡುವ ದೃಷ್ಟಿಯೇ ಬೇರೆ ಅಲ್ಲವೇ? ಅದರ ಬದಲಾಗಿ ಇಬ್ಬರೂ ಅಡುಗೆಯ ಕೆಲಸಗಳನ್ನು ಹಂಚಿಕೊಂಡು ಮಾಡಿದರೆ ಒಂದಷ್ಟು ಮಾತುಕತೆಗೆ ಅವಕಾಶವಾಗುತ್ತದೆ, ಸಂಬಂಧ ಸದಾ ಹಸಿರಾಗಿರುತ್ತದೆ. ದುಡಿಮೆಗೂ, ಸಂಪಾದನೆಗೂ ಒಂದು ಮೌಲ್ಯ ಉಳಿದುಕೊಳ್ಳುತ್ತದೆ. ಅದು ಬೆಳಗಿನ ಧಾವಂತವಾದರೂ ಅಷ್ಟೇ. ಹೆಣ್ಣು ದಡಬಡಿಸಿ ಓಡಾಡಿಕೊಂಡು ಅಡುಗೆಯ ಕೆಲಸ ಮುಗಿಸಿ ರೆಡಿಯಾಗಿ ತನ್ನ ಡ್ಯೂಟಿಗೆ ಸಮಯಕ್ಕೆ ಸರಿಯಾಗಿ ತಲಪುವ ಒತ್ತಡದಲ್ಲಿದ್ದಾಗ ಮನೆಮಂದಿ ಸಣ್ಣಪುಟ್ಟ ನೆರವು ನೀಡಿದರೂ ಅದು ಬಹಳ ದೊಡ್ಡ ಬೆಂಬಲವಾಗುತ್ತದೆ. ಮಾತ್ರವಲ್ಲ, ಬದುಕಿನ ಜೀವಂತಿಕೆಯೂ ಅಡುಗೆಮನೆಯ ಪ್ರಾಮುಖ್ಯತೆಯೂ ಉಳಿದುಕೊಳ್ಳುತ್ತದೆ, ಅದಿಲ್ಲದೆ ಹೋದರೆ ಮುಂದಕ್ಕೆ ಅಡುಗೆಮನೆಯೆಂಬುದು ಉಳಿಯುವುದಿಲ್ಲ, ಸಂಬಂಧಗಳೂ ಉಳಿಯುವುದಿಲ್ಲ.
ಒಲೆಹೊತ್ತಿ ಉರಿದೊಡೆ ನಿಲಬಹುದು!