ಮಕ್ಕಳು ಚೆನ್ನಾಗಿ ಓದುತ್ತಾರಾದ್ದರಿಂದ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಬೇಕುಬೇಕಾದಂತೆ ಮಾಡಿಕೊಟ್ಟುಬಿಡಬೇಕು ಎಂಬುದು. ಒಂದು ಹಂತದವರೆಗೆ ಇದು ಸರಿಯೆನಿಸಿದರೂ ನಿಧಾನವಾಗಿ ಮಕ್ಕಳು ನಮ್ಮನ್ನು ‘ಟೇಕನ್ ಫಾರ್ ಗ್ರಾಂಟೆಡ್’ ಮಾಡಿಕೊಂಡುಬಿಡುತ್ತಿದ್ದಾರೆ ಎಂಬುದು ಅರ್ಥವಾಗಿಬಿಡುತ್ತದೆ. ವಸ್ತುಗಳ ಮೌಲ್ಯ ಅವರಿಗೆ ಅರ್ಥವಾಗುವುದು ಹಾಗಿರಲಿ, ಅಪ್ಪ ಅಮ್ಮನ ಮೌಲ್ಯವೂ ಅರ್ಥವಾಗುವುದೇ ಇಲ್ಲವೇನೋ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬರುಬರುತ್ತ ಅಪ್ಪ–ಅಮ್ಮ ತಮ್ಮ ಬೇಕುಬೇಡಗಳನ್ನು ಪೂರೈಸುವ ಸಂಪನ್ಮೂಲಗಳು ಎಂಬ ದೃಷ್ಟಿಕೋನ ಮಾತ್ರವೇ ಉಳಿಯುತ್ತದೆ ಹೊರತು ಭಾವಬಂಧಗಳು ಮರೆಯಾಗಲಾರಂಭಿಸುತ್ತವೆ.
ವಾರಪೂರ್ತಿ ಮನೆಯಿಂದ ದೂರವಿರುವ ಮಗ ವಾರಾಂತ್ಯದಲ್ಲಿ ಮನೆಗೆ ಬರುತ್ತಾನೆ. ವಾರದುದ್ದಕ್ಕೂ ಅವನು ಬಳಸಿದ ವಸ್ತçಗಳನ್ನು ಒಗೆಯುವುದಕ್ಕೆಂದು ತಂದಿರುತ್ತಾನೆ. ಅಷ್ಟೂ ದಿನಗಳಲ್ಲಿ ಅವನಿಗೆ ಮನೆ ತಿಂಡಿ, ಊಟ ಸಿಕ್ಕಿರುವುದಿಲ್ಲವೆಂದು ಅವನಿಗಿಷ್ಟವಾದುದನ್ನು ಮಾಡುವುದಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿರುತ್ತೇನೆ. ಬಹುತೇಕ ಮನೆಯ ಎಲ್ಲರ ಇಷ್ಟಗಳನ್ನು ಗಮನಿಸಿಕೊಂಡು ನನಗೆ ನನ್ನ ಇಷ್ಟಗಳೇನು ಎಂಬುದೇ ಮರೆತಂತಾಗಿರುತ್ತದೆ, ಅನೇಕ ಬಾರಿ. ಆದರೆ ಬೆಳಗಿನ ತಿಂಡಿಗೆ ಅಣಿ ಮಾಡುವಷ್ಟರಲ್ಲಿ ಅವನ ಗೆಳೆಯರ ಬಳಗ ಬರುತ್ತದೆ, ‘ಅಮ್ಮಾ ತಿಂಡಿಗೆ ಇವರ ಜೊತೆಗೆ ಹೋಗ್ಬರ್ತೀನಿ’ ಎಂದು ಬೈಕ್ ಹತ್ತಿ ಹೊರಟುಬಿಡುತ್ತಾನೆ. ಆಮೇಲೆ ಅವನ ಕೆಲಸದ್ದೇ ಏನಾದರೂ ಬಾಕಿ ಇದೆ ಅಂದು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ರೂಮಲ್ಲಿ ಲ್ಯಾಪ್ಟಾಪ್ ಮುಂದೆ ಕುಳಿತುಬಿಡುತ್ತಾನೆ. ಮೊದಮೊದಲು ಕೆಲಸಕ್ಕೆ ಸೇರಿದ ಮಗ ಮನೆಗೆ ಅಪರೂಪವಾಗದೆ ಪ್ರತೀವಾರ ಬರುವಷ್ಟು ಹತ್ತಿರದಲ್ಲೇ ಕೆಲಸ ಸಿಕ್ಕಿದೆಯೆಂಬ ಸಂಭ್ರಮ ನನಗಿತ್ತು. ಈಗೀಗ ಯಾಕೋ ಶನಿವಾರ ಬಂದರೆ ನನಗೆ ಇನ್ನಿಲ್ಲದ ದಣಿವು ಕಾಡುತ್ತದೆ, ಮಗ ಬರುವ ಸಂಭ್ರಮಕ್ಕಿಂತಲೂ ಅವನು ಬರಿಯ ಬಟ್ಟೆ ಒಗೆಸಿಕೊಳ್ಳುವುದಕ್ಕೆ ಮನೆಗೆ ಬರುತ್ತಾನೇನೋ ಅನಿಸುತ್ತಿದೆ.”
ಹಿರಿಯ ಸ್ನೇಹಿತೆಯೊಬ್ಬರು ತಮ್ಮ ಮನದ ದುಗುಡಗಳನ್ನು ಹೇಳಿಕೊಳ್ಳುತ್ತಿದ್ದರೆ ಅವರಿಗೆ ಯಾವ ರೀತಿಯಲ್ಲಿ ಸಮಾಧಾನ ಹೇಳಬೇಕೋ ಗೊತ್ತಾಗಲೇ ಇಲ್ಲ. ಈ ಯುಗದ ಹೊಸ ಸಮಸ್ಯೆಗಳಲ್ಲಿ ಇದೂ ಒಂದು. ಅಪ್ಪ-ಅಮ್ಮ ತಮ್ಮ ರಕ್ತವನ್ನೇ ಬಸಿದಂತೆ ದುಡಿದು, ಮಕ್ಕಳ ವಿದ್ಯಾಭ್ಯಾಸಕ್ಕೆಂದು ಕೂಡಿಟ್ಟ ಹಣವನ್ನೆಲ್ಲ ಖರ್ಚು ಮಾಡುವುದು ಮಾತ್ರವಲ್ಲದೆ ತಮ್ಮ ಸಮಯವನ್ನೆಲ್ಲ ಅವರಿಗಾಗಿಯೇ ಮೀಸಲಿರಿಸಿ ಬೆಳೆಸಿರುತ್ತಾರೆ. ಮಕ್ಕಳು ಬಯಸಿದ್ದು ಬಹುತೇಕ ತಕ್ಷಣದಲ್ಲಿ ಎಂಬಂತೆ ಅವರಿಗೆ ದೊರೆಯುತ್ತದೆ. ಬಹುಶಃ ನಮ್ಮ ತಲೆಮಾರಿನ ಕೆಲವು ತಪ್ಪು ಗ್ರಹಿಕೆಗಳೇ ಹೀಗೆ. ಮಕ್ಕಳು ಚೆನ್ನಾಗಿ ಓದುತ್ತಾರಾದ್ದರಿಂದ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಬೇಕುಬೇಕಾದಂತೆ ಮಾಡಿಕೊಟ್ಟುಬಿಡಬೇಕು ಎಂಬುದು. ಒಂದು ಹಂತದವರೆಗೆ ಇದು ಸರಿಯೆನಿಸಿದರೂ ನಿಧಾನವಾಗಿ ಮಕ್ಕಳು ನಮ್ಮನ್ನು ‘ಟೇಕನ್ ಫಾರ್ ಗ್ರಾಂಟೆಡ್’ ಮಾಡಿಕೊಂಡುಬಿಡುತ್ತಿದ್ದಾರೆ ಎಂಬುದು ಅರ್ಥವಾಗಿಬಿಡುತ್ತದೆ. ವಸ್ತುಗಳ ಮೌಲ್ಯ ಅವರಿಗೆ ಅರ್ಥವಾಗುವುದು ಹಾಗಿರಲಿ, ಅಪ್ಪ-ಅಮ್ಮನ ಮೌಲ್ಯವೂ ಅರ್ಥವಾಗುವುದೇ ಇಲ್ಲವೇನೋ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬರುಬರುತ್ತ ಅಪ್ಪ-ಅಮ್ಮ ತಮ್ಮ ಬೇಕು-ಬೇಡಗಳನ್ನು ಪೂರೈಸುವ ಸಂಪನ್ಮೂಲಗಳು ಎಂಬ ದೃಷ್ಟಿಕೋನ ಮಾತ್ರವೇ ಉಳಿಯುತ್ತದೆ ಹೊರತು ಭಾವಬಂಧಗಳು ಮರೆಯಾಗಲಾರಂಭಿಸುತ್ತವೆ.
ಬಳಸಿ ಎಸೆಯುವ ವಸ್ತುಗಳು ಬರತೊಡಗಿದಲ್ಲಿಂದ ಬಹುಶಃ ಎಲ್ಲವೂ ಅದೇ ರೀತಿಯಾಗಿ ಬದಲಾಗುತ್ತಿದೆಯೇನೋ. ಅಥವಾ ಸಂಬಂಧಗಳೂ ಬಳಸಿ ಎಸೆಯುವಂತೆ ಬದಲಾಗುತ್ತಿವೆಯೇನೋ! ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ನಮಗೆ ಬೇಕಾದ ಪುಸ್ತಕ, ಲೇಖನಿ, ಪೆನ್ಸಿಲ್ಲು ಎಲ್ಲವೂ ಶೈಕ್ಷಣಿಕ ವರ್ಷದ ಮೊದಲಿಗೆ ತೆಗೆದುಕೊಂಡರೆ ಅದರ ಸಂಪೂರ್ಣ ಬಳಕೆಯಾದ ಮೇಲೆಯೇ ಹೊಸದು ಸಿಗುತ್ತಿದ್ದುದು. ಪೆನ್ನಿಗೆ ಮುಗಿದಂತೆ ತುಂಬಿಸುವ ಶಾಯಿ ಆದ್ದರಿಂದ ತೀರಾ ನಿಬ್ಬು ಕೆಟ್ಟರೆ ಮಾತ್ರ ಅದನ್ನು ಬದಲಾಯಿಸುವ ಅನಿವಾರ್ಯತೆ! ಮನೆಯಲ್ಲಿ ಬಟ್ಟೆಬರೆಗಳಾದರೂ ಅಷ್ಟೇ. ವರ್ಷಕ್ಕೆರಡು ಪ್ರತಿ ಹೊಸ ಅಂಗಿ ದೊರೆತರೆ ಅದೇ ದೊಡ್ಡದು. ಆದರೆ ಅಷ್ಟಕ್ಕಾಗಿ ಅಪ್ಪ-ಅಮ್ಮ ಪಡುವ ಕಷ್ಟ ನಮಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬೇಕಾಬಿಟ್ಟಿ ಖರ್ಚುಮಾಡುವುದಕ್ಕೆ ಹಣವೂ ಇಲ್ಲ ಎಂಬುದರ ಅರಿವು ಸರಿಯಾಗಿಯೇ ಇತ್ತು. ಹಾಗಾಗಿ ವಸ್ತುಗಳನ್ನು ಜೋಪಾನ ಮಾಡುತ್ತಲೇ ಸಂಬಂಧಗಳನ್ನೂ ಬಹುಶಃ ಜೋಪಾನ ಮಾಡುತ್ತಿದ್ದೆವು. ಅಥವಾ ಇದು ಬೀಜವೃಕ್ಷ ನ್ಯಾಯ ಇದ್ದರೂ ಇರಬಹುದು.
ಮನೆಯಿಂದ ದೂರ ಇದ್ದುಕೊಂಡು ಕಾಲೇಜಿಗೆ ಹೋಗುವ ಸಂದರ್ಭದಲ್ಲಿಯೂ ವಾರದ ಕೊನೆಯಲ್ಲಿ ಮನೆಗೆ ಬರುವುದಕ್ಕೆ ಹಪಹಪಿಸುತ್ತಿದ್ದೆವು. ಹಾಗೆಂದು ಮನೆಗೆ ಬಂದು ಸ್ವಸ್ಥ ಮಲಗಿ ವಿಶ್ರಾಂತಿ ತೆಗೆದುಕೊಳ್ಳುವುದೇನೂ ಅಲ್ಲ. ಅಮ್ಮನ ಹಿಂದೆಮುಂದೆ ಸುತ್ತುತ್ತಾ ಅವರ ಕೆಲಸಗಳಲ್ಲಿ ಭಾಗಿಯಾಗುತ್ತಾ ಸಾಧ್ಯವಾದಷ್ಟೂ ನಾವಿದ್ದ ದಿನಗಳಲ್ಲಿ ಅಮ್ಮನಿಗೆ ಕೆಲಸದ ಹೊರೆಯೆನ್ನಿಸದಂತೆ ಇರುತ್ತಿದ್ದೆವು. ಹಟ್ಟಿಯಲ್ಲಿ ಹಸುಗಳ ಚಾಕರಿಯೋ ಮನೆಗೆಲಸವೋ ಅದು ಬರಿಯ ಅಮ್ಮನದ್ದು ಎಂಬ ಭಾವ ನಮ್ಮಲ್ಲಿ ಎಂದೂ ಮೊಳೆದಿರಲಿಲ್ಲ. ಆದರೆ ಕಾಲಚಕ್ರ ಉರುಳುತ್ತಾ ಉರುಳುತ್ತಾ ನಾವು ಅಮ್ಮಂದಿರಾದ ಹೊತ್ತಿಗೆ ಮಕ್ಕಳಲ್ಲಿ ನಮ್ಮೊಳಗಿನ ಈ ಭಾವನೆಗಳು ಏಕೆ ಬೆಳೆದುಬರಲಿಲ್ಲವೋ, ನಾವೆಲ್ಲಿ ಎಡವಿದೆವೋ ಅರ್ಥವೇ ಆಗುವುದಿಲ್ಲ. ಮಾತೆತ್ತಿದ ತಕ್ಷಣ ಮೊಬೈಲಿನ ಮೇಲೆ ಎಲ್ಲ್ಲ ತಪ್ಪನ್ನೂ ಹೊರೆಸಿಬಿಡುತ್ತೇವೆ. ಅದರ ಪಾಲು ಅರ್ಧಭಾಗವಾದರೆ ಇನ್ನರ್ಧ ಪಾಲು ಅವರನ್ನು ಬೆಳೆಸುವಲ್ಲಿ ನಾವು ತೆಗೆದುಕೊಳ್ಳಲೇಬೇಕಿದ್ದ ಎಚ್ಚರವನ್ನು ತೆಗೆದುಕೊಂಡಿಲ್ಲ ಎಂಬುದೇ ತಾನೇ?
ಮಕ್ಕಳು ಎಳೆಯವರಿರುತ್ತ ಮನೆಗೆಲಸದಲ್ಲಿ ನೆರವಾಗುವುದಕ್ಕೆಂದು ಬಂದಾಗ ‘ನೀನು ಓದಿಕೋ ಹೋಗು’ ಎಂದೋ, ‘ಅಯ್ಯೋ, ಈ ಕೆಲಸಗಳು ಇದ್ದದ್ದೇ.. ನೀನು ನಿನ್ನ ಕೆಲಸ ಮಾಡಿಕೋ’ ಎಂದೋ ಹೊರಗಿಡುತ್ತಾ ಬಂದರೆ ಮಕ್ಕಳಿಗೆ ಮನೆಯ ಈ ಕೆಲಸಗಳು ಯಾವುವೂ ನಮ್ಮವಲ್ಲ ಎನಿಸುತ್ತವೆ. ಮನೆಯಲ್ಲಿ ಇರುವುದಕ್ಕೂ ಲಾಡ್ಜಿನಲ್ಲಿ ಇರುವುದಕ್ಕೂ ಹಾಸ್ಟೆಲ್ಲಿನಲ್ಲಿ ಇರುವುದಕ್ಕೋ ವ್ಯತ್ಯಾಸವಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳದಂತೆ ಬೆಳೆಸುತ್ತಿದ್ದೇವೆ. ಹೊರಗೆ ದುಡಿಯುವ ಅಮ್ಮಂದಿರಿಗಂತೂ ಲಗುಬಗೆಯಲ್ಲಿ ಕೆಲಸ ಮುಗಿಸಿ ಓಡಬೇಕಾದ ಅನಿವಾರ್ಯತೆಯಿದ್ದಾಗ ಮಕ್ಕಳು ಬಂದು ಸೇರಿಕೊಂಡರೆ ಬೇಗ ಕೆಲಸ ಮುಗಿಯುವುದಿಲ್ಲವೆಂಬ ಒತ್ತಡವಿರುತ್ತದೆ. ಅದಕ್ಕಾಗಿಯೇ ಅವರನ್ನು ಬದಿಗೊತ್ತಿ ಒಂದೇ ಉಸಿರಿನಲ್ಲಿ ಕೆಲಸ ಮುಗಿಸಿ ದಡಬಡಿಸಿ ಹೊರಡುತ್ತೇವೆ. ಆದರೆ ನಲವತ್ತರ ನಂತರ ಶರೀರ ನಿಧಾನವಾಗಿ ತಾನು ದಣಿಯುತ್ತಿದ್ದೇನೆ ಎಂಬುದನ್ನು ತೋರಿಸಿಕೊಡುವಾಗ ಮಕ್ಕಳು ಯಾವ ಕೆಲಸದಲ್ಲೂ ನೆರವಾಗಲು ಬಾರದೆ ಇದ್ದಾಗ ಅಥವಾ ಅಪ್ಪ-ಅಮ್ಮನ ದಣಿವನ್ನು ಅಲಕ್ಷಿಸಿ ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಎಂದು ಕೊಸರಿಕೊಂಡು ನಡೆಯುವಾಗ ‘ಈ ಮಕ್ಕಳು ಮುಂದೆ ಹೇಗೆ?’ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಮನೆಯ ಸ್ವಚ್ಛತೆಯ ಕೆಲಸಗಳಿಗಾದರೂ ಜನ ಇರಿಸಿಕೊಳ್ಳಬಹುದು ಸರಿ. ಆದರೆ ಮನೆಯೆಂದರೆ ಬರಿಯ ಅಷ್ಟೇ ಅಲ್ಲವಲ್ಲ? ಮನೆಯ ಕೆಲಸಗಳಲ್ಲಿ ಅವರೆಷ್ಟು ಸೇರಿಕೊಳ್ಳುತ್ತಾರೆ ಎಂಬುದರಲ್ಲಿ ಮನೆಮಂದಿಯ ನಡುವಿನ ಭಾವಬಂಧ ಬೆಳೆಯುತ್ತಹೋಗುತ್ತದೆ. ಅಲ್ಲವಾದರೆ ಮಕ್ಕಳದ್ದೇ ಒಂದು ಜಗತ್ತು, ಅಪ್ಪ-ಅಮ್ಮನದ್ದೇ ಒಂದು ಜಗತ್ತು ಎಂಬಂತೆ ಎರಡು ಪ್ರಪಂಚಗಳು ಗೊತ್ತಿಲ್ಲದಂತೆ ಸೃಷ್ಟಿಯಾಗಿಬಿಡುತ್ತದೆ.
ತಲೆಮಾರುಗಳ ಅಂತರವೆಂಬುದು ಇಂದು ಕೇವಲ ಅಜ್ಜಿ-ಅಜ್ಜ, ಅಪ್ಪ-ಅಮ್ಮ, ಮಕ್ಕಳಿಗಷ್ಟೇ ಸೀಮಿತವೂ ಆಗಿ ಉಳಿದಿಲ್ಲ. ಬಹಳ ವೇಗವಾಗಿ ಜಗತ್ತು ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಐದೈದು ವರ್ಷಗಳ ಅಂತರವೂ ಒಂದು ತಲೆಮಾರಿನ ಅಂತರವನ್ನು ಸೃಷ್ಟಿಸುತ್ತಿದೆ. ಅಂಥದ್ದರಲ್ಲಿ ಮಕ್ಕಳಿಂದ ಏನಿಲ್ಲವೆಂದರೂ ಇಪ್ಪತ್ತೈದು ವರ್ಷ ದೊಡ್ಡವರೇ ಇರುವ ತಂದೆತಾಯಿಗೂ ಮಕ್ಕಳಿಗೂ ಈ ಅಂತರ ಇಲ್ಲದಿದ್ದೀತೆ? ಆದರೆ ವೈಜ್ಞಾನಿಕವಾಗಿ, ತಂತ್ರಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳುವ ಮಕ್ಕಳನ್ನು ಭಾವನಾತ್ಮಕವಾಗಿ ಮನೆಗೆ ಬೆಸೆಯುವ ಪ್ರಯತ್ನವೂ ಆಗಬೇಕಿದೆ.
ಗಾಳಿಪಟ ಎಷ್ಟೇ ಎತ್ತರಕ್ಕೆ ಹಾರಿದರೂ ಅದರ ದಾರವೆಂಬುದು ಅದನ್ನು ಹಿಡಿದವನ ಬೆರಳುಗಳಲ್ಲಿ ಇದ್ದೇ ಇರುತ್ತದಲ್ಲ, ಬೇಕೆನಿಸಿದರೆ ಅದನ್ನು ಮತ್ತೆ ತನ್ನ ಕಡೆಗೆ ಕರೆಸಿಕೊಳ್ಳಬಹುದಲ್ಲ, ಆ ಬಗೆಯ ತಂತುವೊಂದು ಮಕ್ಕಳನ್ನು ನಮ್ಮೆಡೆಗೆ ಸೆಳೆದಿಡುವುದಕ್ಕಾಗಿ ಬೇಕೇ ಬೇಕಲ್ಲ? ಅಲ್ಲದೇ ಹೋದರೆ ವಾರಾಂತ್ಯದಲ್ಲಿ ಮನೆಗೆ ಹೋಗುವುದು ಕೇವಲ ಬಟ್ಟೆಯನ್ನು ಸ್ವಚ್ಛಗೊಳಿಸಿಕೊಂಡು ಬರುವುದಕ್ಕೆ ಎಂಬ ನಂಬಿಕೆಯೇ ಮಕ್ಕಳ ಮನದಲ್ಲಿ ಬೇರೂರೀತು. ಆರ್ಥಿಕ ಅಗತ್ಯಗಳನ್ನು ಅಪ್ಪ ಪೂರೈಸುತ್ತಾರೆ, ಮನೆಯ ಇತರ ಅಗತ್ಯಗಳನ್ನು ಅಮ್ಮ ಪೂರೈಸುತ್ತಾರೆ, ನಮ್ಮದೇನಿದ್ದರೂ ಇದನ್ನು ಅನುಭವಿಸಿಕೊಂಡು ನೆಮ್ಮದಿಯಾಗಿರುವುದು ಎಂಬ ಭಾವವೇ ಬೆಳೆದರೆ ಸೃಷ್ಟಿಯಾಗುವ ಭಾವ ನಿರ್ವಾತವನ್ನು ತುಂಬುವುದಕ್ಕೆ ನಮ್ಮಲ್ಲಿ ಏನೂ ಉಳಿಯುವುದಿಲ್ಲ.
ಹಕ್ಕಿಮರಿಗಳಾದರೋ ರೆಕ್ಕೆ ಬಲಿಯುತ್ತ ದೂರ ಹಾರುವುದು ನಿಸರ್ಗ ಸಹಜ. ಆದರೆ ಮನುಷ್ಯರು ಹಕ್ಕಿಗಳಷ್ಟು ಹಗುರಾಗಲಾರೆವಲ್ಲ, ಗಾತ್ರದಲ್ಲೂ, ಭಾವನೆಗಳಲ್ಲೂ! ಮನಸ್ಸುಗಳು ಖಾಲಿಯಾಗುತ್ತ ಬಂದಷ್ಟು ಬದುಕು ಭಾರವೇ ಆಗುತ್ತದೆ. ಮಕ್ಕಳಿಗೆ ಇದನ್ನು ಅರ್ಥ ಮಾಡಿಸಲು ಟೊಂಕ ಕಟ್ಟಬೇಕಿದೆ. ಇದು ಮನೆಯ ಭಾವವೂ ಹೌದು, ದೇಶದ ಭಾವವೂ ಹೌದು!