‘ಪ್ರತಿಯೊಂದು ದುರದೃಷ್ಟವೂ ನಮಗೆ ದೊರೆಯುವ ಸಂಪನ್ಮೂಲಗಳು. ಜೇಡಿಮಣ್ಣಿಂದ ನಮಗೆ ಬೇಕಾದ ಆಕೃತಿಯನ್ನು ಮಾಡುವಂತೆಯೆ ಅವುಗಳಿಂದ ಶಾಶ್ವತವಾಗಿ ಉಳಿಯುವ ಕಲೆಯೊಂದನ್ನು ರೂಪಿಸಬಲ್ಲೆವು’ ಎನ್ನುತ್ತಾನೆ ಬಾರ್ಹಸ್. ಇದನ್ನು ತರಗತಿಯಲ್ಲಿ ಬೋಧಿಸುವಾಗ ಮಕ್ಕಳಿಗೆ ಅಂತಹ ಹತ್ತಾರು ಕಥೆಗಳನ್ನು ಹುಡುಕಿ ಹೇಳುವುದಿದೆ.
ಸ್ವಲ್ಪ ವೈಯಕ್ತಿಕ ಎಂದು ಓದುಗರಿಗೆ ಅನಿಸಿದರೆ ದಯವಿಟ್ಟು ಕ್ಷಮಿಸಿ, ಆದರೂ ಪೂರ್ತಿಯಾಗಿ ಓದಿ. ಶರೀರ ತುಂಬ ದಣಿದಿತ್ತು. ಒಂದೆರಡು
ತಿಂಗಳ ಹಿಂದಿನಿಂದಲೇ ಹತ್ತು ದಿನವಾದರೂ ಕಾಲೇಜಿಗೆ ರಜೆ ಹಾಕಿ ಮನೆ ಕೆಲಸಗಳನ್ನೂ ಮಾಡದೆ ಸುಮ್ಮನೆ ನನಗೆ ಇಷ್ಟದ ಭಾವಗೀತೆಗಳನ್ನು ಕೇಳುತ್ತಾ, ನನ್ನಿಷ್ಟದ ಕೆಲವು ಪುಸ್ತಕಗಳನ್ನು ಓದುತ್ತ ವಿರಮಿಸಬೇಕೆಂದು ಬಹುವಾಗಿ ಅನ್ನಿಸುತ್ತಿತ್ತು. ಆದರೆ ಅನ್ನಿಸಿದ್ದೆಲ್ಲವೂ ಈಡೇರಬೇಕಲ್ಲ! ಕಾಲೇಜಿಗೆ ರಜೆ ಇಲ್ಲ. ಮನೆಯಲ್ಲಿ ಕೆಲಸ ಮಾಡದೆ ಇದ್ದರೆ ಹೊತ್ತು ಹೊತ್ತಿಗೆ ಅಡುಗೆ ಮಾಡುವವರು ಯಾರು? ಹೀಗೆಲ್ಲ ಪ್ರಶ್ನೆ. ಬದುಕಿನ ಒಂದೇ ಬಗೆಯ ಓಟ ಯಾಕೋ ಸಾಕು ಎನಿಸಿಬಿಟ್ಟಿತ್ತು. ಮಾಡಲೇಬೇಕಾದ ಕೆಲಸಗಳು ಹಲವಿದ್ದರೂ ಯಾವುದೂ ನನ್ನಿಂದಾಗದು ಎಂಬಂತಹ ದಣಿವೊಂದು ನನ್ನನ್ನು ಕಾಡುತ್ತಿತ್ತು. ಅರ್ಥವಾಗದ ಒತ್ತಡಗಳ ನಡುವೆ ಇದ್ದಕ್ಕಿದ್ದಂತೆ ಕಂಗಾಲಾಗುತ್ತಿದ್ದೆ. ಬಹುಶಃ ಇದು ಯಾವ ಬಗೆಯ ದಣಿವೆಂದರೆ ೧೦೦೦ ಮೀಟರ್ ಓಟದ ಗೆಲುವಿನ ಆಕಾಂಕ್ಷೆಯಲ್ಲಿ ಮುಂಚೂಣಿಯಲ್ಲೇ ಇದ್ದು ಇನ್ನು ೧೦೦ ಮೀಟರ್ ಅಷ್ಟೇ ಬಾಕಿ ಉಳಿದಿದೆ ಎಂದಾಗ ಮುಗ್ಗರಿಸುವಂತಾದರೆ ಹೇಗಾಗಬಹುದು ಅಂತಹ ಸುಸ್ತು. ಹತ್ತಿರದಲ್ಲೇ ಇದ್ದ ಗೆಲವು ನನ್ನದಾಗದೆ ಹೋದ ಬಗ್ಗೆ ಹತಾಶೆಯೊಂದಿಗೆ ಅಲ್ಲಿಯವರೆಗಿನ ಶ್ರಮವೆಲ್ಲ ವ್ಯರ್ಥವಾದಂತಹ ನೋವು! ಇಂತಹ ಸ್ಥಿತಿಯಲ್ಲಿ ಬಲವಂತದ ವಿಶ್ರಾಂತಿ ನನಗೊದಗುವ ಸಂದರ್ಭ ಎದುರಾಯಿತು.
೪೦ರ ನಂತರ ಸಾಮಾನ್ಯವಾಗಿ ಏನೇ ಆದರೂ ಮೆನೋಪಾಸ್ಗೆ ಹತ್ತಿರವಿದ್ದೇವಲ್ಲ, ಅದರದ್ದೇ ಸೂಚನೆಗಳು ಎಂಬಂತೆ ಸುಮ್ಮನಾಗಿ ಬಿಡುತ್ತೇವೆ. ತಡೆಯಲಾಗದಂತಹ ತಲೆನೋವು, ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಕೈ ಕಾಲು ನೋವು, ಕೆಳ ಹೊಟ್ಟೆ, ಸೊಂಟನೋವು, ಅತಿಯಾದ ಭಾವುಕತೆ, ಈ ಕ್ಷಣದಲ್ಲಿ ಅಳು ಮರುಕ್ಷಣದಲ್ಲಿ ಸಿಟ್ಟು ಈ ಬಗೆಯ ಭಾವ ಪಲ್ಲಟಗಳು ಎಲ್ಲವೂ ಕೂಡ ರಜೋನಿವೃತ್ತಿಗೆ ಸಂಬಂಧಿಸಿದ ವಿಷಯ ಎಂದು ನಾನು ಸಾಧ್ಯವಾದಷ್ಟೂ ಸಹಜವಾಗಿರುವುದಕ್ಕೆ ಪ್ರಯತ್ನಪಡುತ್ತಿದ್ದೆ. ಅತಿ ಭಾವುಕತೆಯನ್ನು ನಿಭಾಯಿಸುವುದಕ್ಕೆ ದೇವರ ನಾಮಗಳಿದ್ದವು. ಎಂತಹ ಸಿಟ್ಟು ಬಂದರೂ ಅತಿಯಾಗಿ ಕೂಗಾಡದಂತೆ ನನ್ನನ್ನು ನಾನೇ ನಿಗ್ರಹಿಸಿಕೊಳ್ಳುತ್ತಿದ್ದೆ. (ಅಥವಾ ಹಾಗೆಂದುಕೊಂಡಿದ್ದೆ!) ಆದರೆ ಈ ಒಂದು ತಿಂಗಳಿನಿಂದ ಇವೆಲ್ಲವೂ ಹೆಚ್ಚಿ ನನ್ನನ್ನೇ ನಾನು ಅರಿಯಲಾರದವಳಂತಾಗಿದ್ದೆ.
ಜೂನ್ ಆರಂಭದಲ್ಲಿ ಒಂದು ದಿನ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡದ್ದೇ ನೆಪವಾಗಿ ಎಡದ ಕಾಲು ನೋವು ಉಲ್ಬಣಿಸಿತ್ತು. ಮನೆಗೆ ಬಂದವಳು ರಾತ್ರಿ ೮:೦೦ ಗಂಟೆಗೇ ಮಲಗಿಬಿಟ್ಟಿದ್ದೆ. ಮರುದಿನ ಕಾಲೇಜಿಗೆ ಹೋದೆನಾದರೂ ಮುಖದಲ್ಲಿ ಎಂದಿನ ಗೆಲುವಿಲ್ಲ ಎಂದು ಸಹೋದ್ಯೋಗಿಗಳು ನನ್ನ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದರು. ನಾನು ಒಂದಷ್ಟು ದಣಿವಾಗಿದೆ ಎಂದು ಹೇಳಿ ಸುಮ್ಮನಾದೆ. ಆದರೆ ಸಂಜೆಯಾಗುತ್ತಿದ್ದಂತೆ ಯಾಕೋ ವೈದ್ಯರ ಬಳಿ ಹೋಗಲೇಬೇಕು ಎನಿಸಿತು. ಆಪ್ತರಾದಂತಹ ಸ್ತ್ರೀರೋಗ ತಜ್ಞರಲ್ಲಿ ನನ್ನ ಸಮಸ್ಯೆಗಳನ್ನೆಲ್ಲ ಹೇಳಿಕೊಂಡೆ. ಅವರು ಒಂದಷ್ಟು ಪರೀಕ್ಷೆಗಳನ್ನು ಮಾಡಿ ಸ್ಕ್ಯಾನಿಂಗ್ ಮಾಡಿಸಬೇಕೆಂದರು. ಸ್ಕ್ಯಾನಿಂಗ್ ವರದಿಯ ಪ್ರಕಾರ ಗರ್ಭಕೋಶದ ಒಳ ಆವರಣ ಅಗತ್ಯಕ್ಕಿಂತ ಹೆಚ್ಚು ದಪ್ಪವಿದ್ದು ಬಯಾಪ್ಸಿ ಮಾಡಬೇಕೆಂದರು. ಅಲ್ಲಿಗೆ ನನ್ನ ಅರ್ಧ ಆತ್ಮವಿಶ್ವಾಸ ಕುಗ್ಗಿತು. ಆದರೂ ಏನು ಆಗಿರಲಿಕ್ಕಿಲ್ಲ, ಮುನ್ನೆಚ್ಚರಿಕೆಗಾಗಿ ಅಷ್ಟೇ ಹೇಳಿರುತ್ತಾರೆ ಎಂಬ ನನ್ನ ಆತ್ಮೀಯರ ಮಾತುಗಳಲ್ಲಿ ಭರವಸೆ ಇಟ್ಟೆ. ಜೊತೆಗೆ ಎಲುಬು ತಜ್ಞರನ್ನೂ ಕಂಡದ್ದಾಯಿತು. ಅವರೂ ನಿರ್ದಿಷ್ಟ ಔಷಧಿಗಳನ್ನು ಸೂಚಿಸಿದ್ದಾಯಿತು. ಒಂದು ವಾರ ಔಷಧೀಯ ಅವಧಿ ಮುಗಿದು ನೋವು ಕಡಮೆಯಾಗುವ ಬದಲು ಹೆಚ್ಚಾದಂತೆನಿಸಿತು ಮರಳಿ ಇಬ್ಬರೂ ವೈದ್ಯರನ್ನು ಕಾಣಬೇಕಾಯಿತು. ಅವರು ಮೂತ್ರ ಪರೀಕ್ಷೆ ಮಾಡಿಸುವುದೊಳ್ಳೆಯದು ಎಂದರು. ಅದರ ವರದಿಯ ಪ್ರಕಾರ ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾ ಸೋಂಕು ತಗಲಿತ್ತು. ಅದರ ಪರಿಣಾಮವಾಗಿ ರಿಯಾಕ್ಟಿವ್ ಆರ್ಥ್ರಿಟಿಸ್ನಿಂದ ನಾನು ಬಳಲುತ್ತಿರುವುದು ಖಚಿತವಾಯಿತು.
ದಿನದಿಂದ ದಿನಕ್ಕೆ ನೋವು ಹೆಚ್ಚುತ್ತಲೇ ಹೋಯಿತು. ಕುಳಿತಲ್ಲಿಂದ ಎದ್ದೇಳಲಾಗದೆ ನಡೆಯಲಾಗದೆ ಒಟ್ಟು ನನಗೇನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿತ್ತು. ಬದುಕಿನ ಓಟ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿಬಿಟ್ಟಿತ್ತು. ಸ್ನೇಹಿತರು, ಬಂಧುಗಳು ಎಲ್ಲರೂ ಕರೆ ಮಾಡಿ ವಿಚಾರಿಸಿಕೊಳ್ಳುವವರೇ. ಆದರೆ ಎಲ್ಲದರ ನಡುವೆಯೂ ಮಾನಸಿಕ ಸ್ಥೈರ್ಯವೆಂಬುದು ಕುಸಿಯುತ್ತಲೇಹೋಯ್ತು. ಬಹುಶಃ ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ತೀರ ಒಂದೆರಡು ದಿನಗಳ ಜ್ವರದ ಹೊರತು ಮತ್ತೆಂದೂ ಮಲಗಿ ಈ ಬಗೆಯ ವಿಶ್ರಾಂತಿ ಪಡೆದು ಗೊತ್ತಿಲ್ಲದ ನನಗೆ ಏಕಾಏಕಿಯಾಗಿ ಮಲಗಬೇಕಾಗಿ ಬಂದ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸುಲಭವಿರಲಿಲ್ಲ. ನನಗೇಕೆ ಹೀಗಾಯಿತು ಎಂಬ ಪ್ರಶ್ನೆ ಪದೇಪದೇ ನನ್ನನ್ನು ಕಾಡತೊಡಗಿತು. ಜೊತೆಗೆ ಸ್ವಾನುಕಂಪವೂ ಸೇರಿಕೊಂಡಿತು. ಕಣ್ಣು ಮುಚ್ಚಿದರೂ ತೆರೆದರೂ ನನಗಿಷ್ಟದ ಯಕ್ಷಗಾನ, ತಾಳಮದ್ದಳೆ, ಬರವಣಿಗೆ, ಉಪನ್ಯಾಸ ಇವೆಲ್ಲವೂ ಇನ್ನು ಕನಸೇ ಎನಿಸಿ ಕೊರಗಲಾರಂಭಿಸಿದೆ. ಇನ್ನೂ ಮಾಡಲೇಬೇಕಾಗಿರುವ ಕೆಲಸಗಳು ನೂರೆಂಟು ಇರುವಾಗ ನನ್ನಿಂದೇನೂ ಆಗದು ಎಂದು ಮಲಗುವುದಿದೆಯಲ್ಲ ಅದರಷ್ಟು ಕಠಿಣ ಸ್ಥಿತಿ ಬೇರೊಂದಿಲ್ಲ ಎಂಬುದು ಅರ್ಥವಾಯಿತು. ವೈದ್ಯರು ನಿರಂತರವಾಗಿ ನಿರ್ದಿಷ್ಟ ಪರೀಕ್ಷೆಗಳನ್ನು ಸೂಚಿಸುತ್ತ ಔಷಧಿಗಳನ್ನು ಬರೆದುಕೊಡುತ್ತ್ತ ಇನ್ನು ಕೆಲವೇ ದಿನಗಳಲ್ಲಿ ಪೂರ್ತಿ ಹುಷಾರಾಗುತ್ತೀರಿ, ಈ ಬಗೆಯ ನೋವೊಂದು ನಿಮ್ಮನ್ನು ಕಾಡಿತ್ತು ಎಂಬುದು ನೆನಪಿನಲ್ಲಿ ಉಳಿಯದ ಮಟ್ಟಿಗೆ ಸುಧಾರಿಸಿಕೊಳ್ಳುತ್ತೀರಿ ಎಂಬ ಭರವಸೆಯ ಭಾಷೆಯನ್ನು ಕೊಟ್ಟಿದ್ದರು. ಆದರೆ ವೈದ್ಯರ ಭರವಸೆಯಷ್ಟು ಸುಲಭವಾಗಿ ಔಷಧಿ ಕೆಲಸ ಮಾಡುವುದಾಗಲಿ, ಶರೀರ ಸ್ಪಂದಿಸುವುದಾಗಲಿ ಸಾಧ್ಯವಿದೆಯೇ? ಗೊತ್ತಿಲ್ಲ. ಆದರೆ ವೈದ್ಯರ ಮಾತಿನಲ್ಲಿ ನಂಬಿಕೆ ಇಟ್ಟು ಅವರು ಹೇಳಿದಷ್ಟು ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದಷ್ಟೇ, ನನ್ನ ದಿನಚರಿಯಾಯಿತು. ತನ್ನ ಹತ್ತಾರು ಒತ್ತಡಗಳ ನಡುವೆಯೂ ಗಂಡ ಎಳೆಯ ಮಗುವನ್ನು ಪಾಲನೆ ಪೋಷಣೆ ಮಾಡಿದಂತೆ ನನ್ನ ಕುರಿತು ಮುತುವರ್ಜಿ ವಹಿಸಿ ನೋಡಿಕೊಂಡರು. ಮಕ್ಕಳು ತಮ್ಮದೇ ರೀತಿಯಲ್ಲಿ ನನ್ನಲ್ಲಿ ಉತ್ಸಾಹ ತುಂಬುವ ಪ್ರಯತ್ನವನ್ನು ಮಾಡಿದರು. ಅಪ್ಪ ಬೆಂಬಿಡದೆ ಹೊಸ ಬಾಣಂತಿಯನ್ನು ನೋಡಿಕೊಂಡAತೆ ನನ್ನನ್ನು ನೋಡಿಕೊಂಡರು. ಅತ್ತಿಗೆ ದೂರದ ಊರಿಂದ ತನ್ನ ಕೆಲಸ ಬದಿಗಿರಿಸಿ ಬಂದೇ ಬಿಟ್ಟರು. ಅಕ್ಕಂದಿರು ದಿನಕ್ಕೆರಡು ಬಾರಿ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಎಲ್ಲದರ ನಡುವೆಯೂ ನನ್ನ ಅಂತ ಸ್ಥೆöÊರ್ಯವನ್ನು ಉಳಿಸಿಕೊಳ್ಳುವುದು ಯಾಕೋ ಕಷ್ಟವೆನಿಸುತ್ತಲೇ ಹೋಯಿತು.
ಲಕ್ಷದಲ್ಲಿ ಒಬ್ಬರಿಗೆ ಉಂಟಾಗುವ ಆರೋಗ್ಯ ಸಮಸ್ಯೆಯಂತೆ ಇದು. ದೊಡ್ಡ ಕರುಳಿನಲ್ಲಿ ಇರಬೇಕಾದ ಈ ಕೊಲಿಸ್ ಎಂಬ ಬ್ಯಾಕ್ಟೀರಿಯಾ ತನ್ನ ನೆಲೆಯನ್ನು ಬದಲಿಸಿ ಮೂತ್ರನಾಳಕ್ಕೆ ದಾಳಿ ಇಟ್ಟು ಅಲ್ಲಿ ತನ್ನ ಸಂಖ್ಯೆಯನ್ನು ಅಭಿವೃದ್ಧಿ ಮಾಡಿಕೊಂಡು ಬೆಳೆದಾಗ ಆಗುವ ತೊಂದರೆಯಿದು. ಆ ಸೋಂಕು ಪತ್ತೆಯಾಗದೆ, ಯಾವುದೇ ರೋಗಲಕ್ಷಣಗಳನ್ನು ತೋರ್ಪಡಿಸದೆ ಬೆಳೆದುಬಿಟ್ಟಿತ್ತು. ಇತ್ತ ಸಾಮಾನ್ಯವಾಗಿ ನಮಗೆ ಏನೇ ಅನಾರೋಗ್ಯವಾದರೂ ಅದಕ್ಕೆ ಕಾರಣವಾದ ವೈರಸ್ ಇಲ್ಲವೇ ಬ್ಯಾಕ್ಟೀರಿಯದೊಂದಿಗೆ ಹೋರಾಡಲು ನಮ್ಮ ಶರೀರದಲ್ಲಿ ಉಂಟಾಗುವ ಪ್ರತಿಕಾಯಗಳು ಆ ವೈರಸ್ ಅಥವಾ ಬ್ಯಾಕ್ಟೀರಿಯದ ಜೊತೆಗೆ ಹೋರಾಡಲಾಗದೆ ನಮ್ಮ ಶರೀರದಲ್ಲಿ ಇತರ ಯಾವುದಾದರೂ ಭಾಗದಲ್ಲಿ ಸೇರಿಕೊಂಡು ಆರೋಗ್ಯಕರ ಜೀವಕಣಗಳನ್ನೇ ಬಾಧಿಸಿದಾಗ ಎದುರಾಗುವ ಆರೋಗ್ಯ ಸಮಸ್ಯೆ ನನ್ನದಾಗಿಬಿಟ್ಟಿತು. ಸಂಧಿವಾತವೇ ಆದರೂ ಸಂದರ್ಭ ಕೊಂಚ ಭಿನ್ನ. ಕಾಯಿಲೆ ಉಲ್ಬಣಿಸಿದಷ್ಟು ಸುಲಭವಾಗಿ ನಿಯಂತ್ರಣಕ್ಕೆ ಬರಲೊಲ್ಲದು. ಅಂತೂ ಈಗ ನಿಧಾನಗತಿಯಲ್ಲಿ ಗುಣಮುಖಳಾಗುತ್ತಿದ್ದೇನೆ. ಶರೀರವನ್ನು ಹಿಂಡಿ ಹಾಕುವ ನೋವು ಆಗಾಗ ನನ್ನನ್ನು ಉಡುಗಿಸುವ ಪ್ರಯತ್ನ ಮಾಡುತ್ತಲೇ ಇದೆ. ದೇವರ ಧ್ಯಾನ, ಭಗವದ್ಗೀತಾ ಪಠಣ ಇತ್ಯಾದಿಗಳು ತಮ್ಮದೇ ಆದ ರೀತಿಯಲ್ಲಿ ಮನಸ್ಸಿಗೆ ಸಮಾಧಾನವನ್ನು ಕೊಡಲು ಪ್ರಯತ್ನಿಸುತ್ತಿವೆ. ಮುಂದೆ ಬಹುದೊಡ್ಡ ಹೆಜ್ಜೆಯೊಂದನ್ನು ಇಡುವುದಕ್ಕಾಗಿ ಇದು ಸಣ್ಣ ವಿರಾಮವೆಂದುಕೊಳ್ಳಿ’ ಎನ್ನುತ್ತ ಧೈರ್ಯ ತುಂಬ ಸ್ನೇಹಿತರು ಒಂದೆಡೆಯಾದರೆ ‘ನೀವು ಬಂದು ನಿಮ್ಮ ಕುರ್ಚಿಯಲ್ಲಿ ಕುಳಿತಿರಿ ಸಾಕು, ನಿಮ್ಮ ತರಗತಿಗಳನ್ನೆಲ್ಲ ನಾವೇ ತೆಗೆದುಕೊಳ್ಳುತ್ತೇವೆ’ ಎಂಬ ಸಹೋದ್ಯೋಗಿಗಳು ಎಲ್ಲರೂ ನಾನು ಚೇತರಿಸಿಕೊಳ್ಳುವುದನ್ನು ಹಾರೈಸುತ್ತಿದ್ದಾರೆ. ನನಗಾದರೋ ಕುಳಿತಲ್ಲಿಂದ ಎದ್ದು ನಿಲ್ಲುವುದಕ್ಕೆ ಎರಡು ನಿಮಿಷ ತೆಗೆದುಕೊಳ್ಳುವ ಹೊತ್ತಿಗೆ ಮನಸ್ಸಿನಲ್ಲಿ ಯಕ್ಷಗಾನದ ಸಭಾ ಕಲಾಸು ಥೈಕು ಥೈಕು ತತ್ತಾ ತರಿಕಿಟ ಧಿತ್ತಾ ಎನ್ನುತ್ತಿರುತ್ತದೆ. ಅಡುಗೆಮನೆ, ಬೋಧನಾ ತರಗತಿ, ಯಕ್ಷಗಾನ ರಂಗಸ್ಥಳ… ಎಲ್ಲವೂ ನನ್ನನ್ನು ಕಾಯುತ್ತಿವೆ!
‘ಪ್ರತಿಯೊಂದು ದುರದೃಷ್ಟವೂ ನಮಗೆ ದೊರೆಯುವ ಸಂಪನ್ಮೂಲಗಳು. ಜೇಡಿಮಣ್ಣಿಂದ ನಮಗೆ ಬೇಕಾದ ಆಕೃತಿಯನ್ನು ಮಾಡುವಂತೆಯೆ ಅವುಗಳಿಂದ ಶಾಶ್ವತವಾಗಿ ಉಳಿಯುವ ಕಲೆಯೊಂದನ್ನು ರೂಪಿಸಬಲ್ಲೆವು’ ಎನ್ನುತ್ತಾನೆ ಬಾರ್ಹಸ್. ಇದನ್ನು ತರಗತಿಯಲ್ಲಿ ಬೋಧಿಸುವಾಗ ಮಕ್ಕಳಿಗೆ ಅಂತಹ ಹತ್ತಾರು ಕಥೆಗಳನ್ನು ಹುಡುಕಿ ಹೇಳುವುದಿದೆ.
ಈಗ ಆ ಎಲ್ಲ ಕಥೆಗಳನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ…. ನಾನು ಉಳಿಸಿಕೊಳ್ಳಬೇಕಾದ ಭಾಷೆಗಳು ಅವೆಷ್ಟೋ ಇವೆ, ವಿರಮಿಸುವ ಮುನ್ನ ಕ್ರಮಿಸಬೇಕಾದ ದಾರಿ ಇನ್ನೂ ಬಲುದೂರವಿದೆ!