ಸಾಮಾಜಿಕ ಜಾಲತಾಣಗಳ ಆಯ್ಕೆ ವಿಸ್ತೃತವಾಗುತ್ತ, ಮೊಬೈಲ್ ಫೋನ್ಗಳ ನವನವೀನ ಮಾದರಿಗಳು ರೂಪಗೊಳ್ಳುತ್ತ ಹೊಸ ಆವಿಷ್ಕಾರಗಳೊಂದಿಗೆ ಸಂಬಂಧಗಳ ಕೊಂಡಿಗಳು ಭದ್ರವಾಗುತ್ತ ಹೋಗುವುದರ ಬದಲಾಗಿ ಬಲುಬೇಗನೇ ತುಕ್ಕುಹಿಡಿದು ಮುರಿದುಕೊಳ್ಳುತ್ತಿವೆ ಎಂಬ ಬದಲಾವಣೆ ಗಾಬರಿ ಹುಟ್ಟಿಸುತ್ತಿದೆ. ಸಹಜವಾಗಿ ನಾವೇನು, ನಮ್ಮ ನಡೆನುಡಿಯೇನು, ನಮ್ಮ ರೂಪ–ಸ್ವರೂಪ ಏನು ಎನ್ನುವುದಕ್ಕಿಂತಲೂ ಮೊಬೈಲ್ ಫೋನ್ನಲ್ಲಿ ಸೃಷ್ಟಿಸಿಕೊಳ್ಳಬಹುದಾದ ಕೃತಕರೂಪ, ಮುಖದ ಸುಕ್ಕು ಒಂದಿನಿತೂ ಕಾಣದಂತೆ ನಮಗೇ ಭ್ರಮೆ ಹುಟ್ಟಿಸುವಂಥ ಆ್ಯಪ್ಗಳು ಕೇವಲ ತಾತ್ಕಾಲಿಕವಾದ ಸಮಾಧಾನವನ್ನು ಕೊಡುವಲ್ಲಿ ಮುಖ್ಯವಾಗುತ್ತಿವೆ ಎನ್ನುವುದಕ್ಕಿಂತ ಅವು ಬದುಕಿನ ದಾರಿಯನ್ನೇ ತಪ್ಪಿಸುತ್ತಿವೆ ಎಂಬುದು ವಾಸ್ತವ.

ಫ್ರೀಡಂ ಅಟ್ ಮಿಡ್ನೈಟ್ ಎಂಬ ಕಿರುಚಿತ್ರವೊಂದಿದೆ. ತನ್ನ ಗಂಡ ಅವನ ಸಹೋದ್ಯೋಗಿಯೊಂದಿಗೆ ಬಲುಸಲುಗೆಯಿಂದ ಮಾತನಾಡುವುದನ್ನು ಕಥಾನಾಯಕಿ ಗಮನಿಸಿರುತ್ತಾಳೆ. ತನ್ನೊಂದಿಗೆ ತೀರಾ ವ್ಯಾವಹಾರಿಕವಾಗಿ ವರ್ತಿಸುವ ಗಂಡ ಅವನ ಗೆಳತಿಯೊಂದಿಗೆ ಬಹಳ ಉಲ್ಲಾಸದಿಂದ, ಸ್ನೇಹದಿಂದ ಸಂಭಾಷಣೆ ನಡೆಸುವುದನ್ನು ಅವಳು ಯಾವುದೋ ಸಂದರ್ಭವೊಂದರಲ್ಲಿ ಅವನ ವಾಟ್ಸಾಪಿನಲ್ಲಿ ನೋಡಿರುತ್ತಾಳೆ. ಭಾವನಾತ್ಮಕವಾಗಿ ತನ್ನೊಂದಿಗೆ ಒಂದೆರಡು ಮಾತುಗಳನ್ನೂ ಆಡದೆ ಮೊಬೈಲ್, ಕಂಪ್ಯೂಟರ್ ಲೋಕದಲ್ಲಿ ಮುಳುಗಿಹೋದ ಗಂಡ ಮಧ್ಯರಾತ್ರಿಯ ಬಳಿಕ ತನ್ನ ನಿದ್ದೆಗೆಡಿಸಲಷ್ಟೇ ತನ್ನ ಬಳಿಸಾರುತ್ತಾನೆ ಎಂಬ ಕಹಿ ಅವಳ ಮನಸ್ಸಿನಲ್ಲಿ ಮಡುಗಟ್ಟಿರುತ್ತದೆ. ಅವನು ಬಯಸಿದಂತೆ ಸ್ಪಂದಿಸಲು ಅವಳಿಂದ ಸುತಾರಾಂ ಸಾಧ್ಯವಾಗುವುದಿಲ್ಲ. ತಮ್ಮ ನಡುವಿನ ಸಂಬಂಧ ಕಡಿಯದಂತೆ ಹಸಿರಾಗಿರಿಸಲು ಹೆಣಗಾಡುವ ಅವಳು ತನ್ನ ಸಣ್ಣಪುಟ್ಟ ಸಂತೋಷಗಳನ್ನೂ ಅವನೊಂದಿಗೆ ಹಂಚಿಕೊಳ್ಳಲು ಬಯಸುತ್ತಿರುತ್ತಾಳೆ.
ಮಳೆಯಲ್ಲಿ ತಾನು ನೆನೆಯುತ್ತಿದ್ದರೆ ಕೊಡೆಹಿಡಿದು ಬಂದು ಜೊತೆಗೂಡುವ ಸಂಗಾತಿಯ ಕಲ್ಪನೆ ಅವಳೊಳಗೆ ಸದಾ ಜೀವಂತವಿರುತ್ತದೆ. ಆದರೆ ನಿಜಬದುಕಿನಲ್ಲಿ ಅದು ಘಟಿಸದು. ತನ್ನೊಳಗಿನ ಸಂಕಟವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲೂ ಆಗದೆ ಒಳಗೊಳಗೇ ಬೆಂದು ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಅವನಲ್ಲಿ ಮಾತಿಗೆ ತೊಡಗುತ್ತಾಳೆ. ‘ನೆಟ್ಫ್ಲಿಕ್ಸ್ನಲ್ಲಿ ಸಿನೆಮಾ ನೋಡೋದು ಬಿಡು, ಸರಿ ಹೋಗ್ತೀಯಾ’ ಎಂಬ ಉಡಾಫೆಯ ಉತ್ತರ ಅವನದು. ಅವನ ಕಾಲರ್ ಹಿಡಿದು ಜಗ್ಗಿ ‘ನನ್ನ ಗಂಡನಲ್ಲಿ ನನ್ನ ಮನಸ್ಸಿನ ಹಂಬಲಗಳನ್ನು ಹೇಳಿಕೊಳ್ಳುವುದಕ್ಕೆ ಸಿನೆಮಾದ ಪ್ರಭಾವದ ಅಗತ್ಯವಿಲ್ಲ…’ ಎಂದು ಮೊದಲುಗೊಳ್ಳುವ ಅವಳು, ‘ಬೇರೆ ಯಾರೊಂದಿಗೋ ಆತ್ಮೀಯವಾಗಿ ಚಾಟ್ ಮಾಡಿ ಮೈಬಿಸಿಯೇರಿಸಿಕೊಂಡು ಶರೀರದ ಭಾರ ಇಳಿಸುವುದಕ್ಕಾಗಿಯೇ ನನ್ನ ಬಳಿ ಬರಬೇಡ, ಅದರಿಂದ ತನಗೆ ಮುಕ್ತಿ ಬೇಕು’ ಎಂದು ಖಡಾಖಂಡಿತವಾಗಿ ನುಡಿದು ಕತ್ತಲಲ್ಲಿ ಬಿಕ್ಕಳಿಕೆಯಾಗಿ ಕಳೆದುಹೋಗುತ್ತಾಳೆ. ಇನ್ನೆಲ್ಲೋ ದೂರದಲ್ಲಿರುವ ಗೆಳತಿಯ ಭಾವನೆಗಳೆಲ್ಲವನ್ನೂ ಅರ್ಥಮಾಡಿಕೊಳ್ಳಬಲ್ಲ ತನ್ನ ಗಂಡ, ಮನೆಯಲ್ಲಿ ಕಣ್ಣೆದುರಿಗೇ ಇರುವ, ತನ್ನ ಬೇಕು-ಬೇಡಗಳೆಲ್ಲವನ್ನೂ ನೋಡಿಕೊಳ್ಳುವ, ಸಾಕ್ಸ್ನಿಂದ ಮೊದಲುಗೊಂಡು ಎಲ್ಲ ಬಟ್ಟೆಬರೆಗಳನ್ನೂ ಕೈಗೆ ಸಿಗುವಂತೆ ಸಿದ್ಧವಿರಿಸಿಕೊಟ್ಟು ಅವನಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ತನ್ನ ಸಂಕಟಗಳನ್ನು, ಭಾವನೆಗಳನ್ನು ಏಕೆ ಅರ್ಥೈಸಿಕೊಳ್ಳಲಾರ ಎಂಬ ಪ್ರಶ್ನೆಗೆ ಸಿನೆಮಾದಲ್ಲೂ ಉತ್ತರ ಸಿಗುವುದಿಲ್ಲ. ಆದರೆ ಮೊಬೈಲ್ ಫೋನು ಎಂಬ ಕಂಟಕ ಇಂದು ಅನೇಕ ಸಂಬಂಧಗಳು ಮುರಿಯಲು ಕಾರಣವಾಗುತ್ತಿದೆ ಎಂಬುದಂತೂ ಸತ್ಯ.
ಮನೆಮನೆಯೊಳಗಿನ ಸಂಬಂಧಗಳು ನಿಂತ ನೀರಾಗುತ್ತಾ, ಹೊಸತನವನ್ನೂ ಎಂದೂ ಮಾಗದ ಆಪ್ತತೆಯನ್ನೂ ಕಾಯ್ದಿರಿಸಿಕೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಮುಖ್ಯ ಕಾರಣವೇ ಮೊಬೈಲ್ ಫೋನ್ ಎಂಬ ಸ್ಥಿತಿ ಉದ್ಭವವಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಆಯ್ಕೆ ವಿಸ್ತೃತವಾಗುತ್ತ, ಮೊಬೈಲ್ ಫೋನ್ಗಳ ನವನವೀನ ಮಾದರಿಗಳು ರೂಪಗೊಳ್ಳುತ್ತ ಹೊಸ ಆವಿಷ್ಕಾರಗಳೊಂದಿಗೆ ಸಂಬಂಧಗಳ ಕೊಂಡಿಗಳು ಭದ್ರವಾಗುತ್ತ್ತ ಹೋಗುವುದರ ಬದಲಾಗಿ ಬಲುಬೇಗನೇ ತುಕ್ಕುಹಿಡಿದು ಮುರಿದುಕೊಳ್ಳುತ್ತಿವೆ ಎಂಬ ಬದಲಾವಣೆ ಗಾಬರಿ ಹುಟ್ಟಿಸುತ್ತಿದೆ. ಸಹಜವಾಗಿ ನಾವೇನು, ನಮ್ಮ ನಡೆನುಡಿಯೇನು, ನಮ್ಮ ರೂಪ-ಸ್ವರೂಪ ಏನು ಎನ್ನುವುದಕ್ಕಿಂತಲೂ ಮೊಬೈಲ್ ಫೋನ್ನಲ್ಲಿ ಸೃಷ್ಟಿಸಿಕೊಳ್ಳಬಹುದಾದ ಕೃತಕರೂಪ, ಮುಖದ ಸುಕ್ಕು ಒಂದಿನಿತೂ ಕಾಣದಂತೆ ನಮಗೇ ಭ್ರಮೆ ಹುಟ್ಟಿಸುವಂಥ ಆ್ಯಪ್ಗಳು ಕೇವಲ ತಾತ್ಕಾಲಿಕವಾದ ಸಮಾಧಾನವನ್ನು ಕೊಡುವಲ್ಲಿ ಮುಖ್ಯವಾಗುತ್ತಿವೆ ಎನ್ನುವುದಕ್ಕಿಂತ ಅವು ಬದುಕಿನ ದಾರಿಯನ್ನೇ ತಪ್ಪಿಸುತ್ತಿವೆ ಎಂಬುದು ವಾಸ್ತವ. ಇನ್ಸ್ಟಾಗ್ರಾಮ್, ಫೇಸ್ಬುಕ್ಗಳಲ್ಲಿ ಸ್ವತಃ ತಮ್ಮದಾದ ಅಕೌಂಟ್ ಇಟ್ಟುಕೊಂಡು ಸಮಾಜದೊಂದಿಗೆ ಸದಾ ಸಂಪರ್ಕದಲ್ಲಿರಲು ಬಯಸುವವರಿಗಿಂತಲೂ ಕೃತಕ ಅಕೌಂಟುಗಳನ್ನು ಇಟ್ಟುಕೊಂಡು ವ್ಯವಹರಿಸುತ್ತ ಇತರರ ಕುರಿತು ಗೂಢಚರ್ಯೆ ಮಾಡುತ್ತಿದ್ದೇವೆಂಬ ಭ್ರಮೆ ಹಿಡಿಸಿಕೊಂಡವರು ಸ್ವತಃ ತಮಗೆ, ತಮ್ಮ ಮನೆಮಂದಿಗೆ ತಾವು ಮಾಡುತ್ತಿರುವ ಮೋಸ ಅದು ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದೆ ಹೋಗುತ್ತಿದ್ದಾರೆ. ಯಾರನ್ನೋ ಯಾಮಾರಿಸಲು, ಖಾಸಗಿಯಾಗಿ ಒಬ್ಬರ ಇಷ್ಟಾನಿಷ್ಟಗಳೋ ದೌರ್ಬಲ್ಯಗಳೋ ಏನೆಂಬುದನ್ನು ತಿಳಿಯಲು ಹೆಣಗಾಡುತ್ತ ಸ್ವತಃ ತಮಗೆ, ತಮ್ಮ ಮನೆಮಂದಿಗೆ ಕೊಟ್ಟುಕೊಳ್ಳಬಹುದಾದ ಬದುಕಿನ ಅಮೂಲ್ಯ ಕ್ಷಣಗಳನ್ನು ಬರಿದೇ ಕಳೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ ನೇರವಾಗಿ ಬಾಧಿಸುವುದು ಗಂಡಹೆಂಡತಿಯರ ನಡುವಿನ ಅತ್ಯಾಪ್ತತೆಯ ಅನುಬಂಧವನ್ನೇ. ಮೊಬೈಲ್ನಿಂದ ಆಗುವ ಸಮಸ್ಯೆಗಳನ್ನು ಕೊಂಚ ಗಮನಿಸೋಣ.
ಎಲ್ಲದಕ್ಕಿಂತ ಮೊದಲು ಮನೆಮಂದಿಯ ನಡುವಿನ ಸಂವಹನಕ್ಕೆ ಅಗತ್ಯವಿರುವುದು ಒಬ್ಬರು ಮಾತನಾಡುತ್ತಿದ್ದಾರೆ ಎಂದರೆ ಇತರರು ಗಮನವಿಟ್ಟು ಕೇಳಿಸಿಕೊಳ್ಳುವುದು. ಆದರೆ ಇಂದಿನ ಬಹುತೇಕರ ಸ್ಥಿತಿ ಹೇಗಿದೆಯೆಂದರೆ ನಾವು ದಿನದ ಒಂದು ಗಂಟೆಯೂ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳಲಾರೆವು. ಹತ್ತುನಿಮಿಷಗಳ ಕಾಲ ಊಟ ಮಾಡುವಾಗಲೂ ಗಮನವನ್ನು ಊಟದ ಮೇಲಿರಿಸಲಾರೆವು. ಅದೆಂಥಾ ಅಗತ್ಯ ಕರೆಯೇ ಇದ್ದರೂ ಊಟವಾದ ಮೇಲೆಯೇ ಎದ್ದು ಮರಳಿ ಕರೆ ಮಾಡುತ್ತೇನೆ ಎಂಬ ದೃಢತೆ ಇರುವುದು ಒಳ್ಳೆಯದು. ಊಟದ ಹೊತ್ತಿನಲ್ಲೂ ಮನೆಮಂದಿಯೆಲ್ಲ ಜೊತೆಗೂಡುವುದಿಲ್ಲವೆಂದರೆ ಸಂಬಂಧಗಳ ಎಳೆಗಳು ಸಡಿಲವಾಗುವುದಕ್ಕೆ ಹೆಚ್ಚುಸಮಯ ಬೇಡ. ಕಡೆಯ ಪಕ್ಷ ರಾತ್ರಿ ಒಂಭತ್ತರ ನಂತರವಾದರೂ ಫೋನ್ ಬದಿಗಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆನಿಸುತ್ತದೆ. ಆ ಸಮಯವನ್ನು ಮನೆಮಂದಿಗೆ ಕೊಟ್ಟರೆ ನಮ್ಮ ನಾಳೆಗಳೂ ಚೆನ್ನಾಗಿರುತ್ತವೆ.
ಪತಿಪತ್ನಿಯರು ದಿನದ ಒಂದಿಷ್ಟು ಹೊತ್ತು ಪರಸ್ಪರರಲ್ಲಿ ಮಾತನಾಡುವುದಕ್ಕೆಂದೇ ಇರಿಸಬೇಕಾದ ಒತ್ತಡದ ದಿನಗಳಲ್ಲಿ ವರ್ತಮಾನವಿದೆ. ನಮ್ಮ ತಂದೆತಾಯಿ ಹೀಗೆ ಮಾತನಾಡುವುದಕ್ಕೆಂದು ಸಮಯವಿಟ್ಟರೇ? ಅವರು ಐವತ್ತು ವರ್ಷಗಳಿಗೂ ಮೀರಿ ಸಂತೋಷದ ಬದುಕು ಬಾಳಲಿಲ್ಲವೇ? – ಎಂಬ ಪ್ರಶ್ನೆಯೇ ಅಪ್ರಸ್ತುತ. ತಲೆಮಾರುಗಳು ಬದಲಾದಂತೆ ಸಂವಹನದ ಅಗತ್ಯಗಳೂ ಬದಲಾಗಿವೆಯಷ್ಟೇ! ಪತಿಪತ್ನಿಯಬ್ಬರೂ ದುಡಿಯಲೇಬೇಕಾದ ಅಗತ್ಯವೊಂದೆಡೆ, ಆರ್ಥಿಕ ಅಗತ್ಯಗಳನ್ನು ಪೂರೈಸುವುದರಲ್ಲಿಯೇ ಹೈರಾಣಾಗುತ್ತ ಭಾವನಾತ್ಮಕವಾದ ತಂತುವನ್ನು ಕಡಿದುಕೊಂಡರೆ ದುಡಿಯುವುದಕ್ಕಾದರೂ ಯಾವ ಬೆಲೆಯೂ ಉಳಿಯುವುದಿಲ್ಲ. ಸಿಗುವ ಸಮಯಾವಕಾಶದಲ್ಲಿಯಾದರೂ ಮೊಬೈಲ್ ಬದಿಗಿಟ್ಟು ಸಂವಹನ ನಡೆಸದೆಹೋದರೆ, ಒಬ್ಬರು ಮಾತನಾಡುವಾಗ ಇನ್ನೊಬ್ಬರು ತಮ್ಮ ವಾಟ್ಸಾಪ್ ಚೆಕ್ ಮಾಡಿಕೊಳ್ಳುತ್ತಿದ್ದರೆ ಮತ್ತೆ ಅವರೀರ್ವರ ನಡುವಿನ ಸಂಬಂಧವೇ ಮೌನಕ್ಕೆ ಸಂದುಹೋಗುತ್ತದೆ. ಮಾನಸಿಕವಾಗಿ, ಭಾವನಾತ್ಮಕವಾಗಿ ಬದುಕು ಚೆನ್ನಾಗಿರಬೇಕಾದರೆ ಪರಸ್ಪರರ ಕುರಿತು ಅಷ್ಟೇ ಗಮನವೂ ಬೇಕು.
ಅತಿಯಾಗಿ ಮೊಬೈಲ್ ನೋಡುವ ಅಭ್ಯಾಸ ಬೆಳೆಸಿಕೊಂಡವರು ನಿಧಾನಕ್ಕೆ ಸಂಗಾತಿಯೊಂಗಿನ ಅತ್ಯಗತ್ಯ ಸಂಭಾಷಣೆಯನ್ನು ನಿರ್ಲಕ್ಷಿಸಬಹುದು. ಜತೆಗೂಡಿ ಮುಗಿಸಬೇಕಾದ ಅದೆಷ್ಟೋ ಕೆಲಸಗಳು ಅಲ್ಲಲ್ಲೇ ಬಾಕಿಯಾಗಬಹುದು. ಪರಿಣಾಮವಾಗಿ ಈರ್ವರ ನಡುವಿನ ಆತ್ಮೀಯತೆಯೂ ನಶಿಸಬಹುದು. ಕಡೆಗೆ ಸಂಬಂಧ ಹರಿದೆಸೆಯಲೂ ಆಗದೆ ಇರಿಸಿಕೊಳ್ಳಲೂ ಆಗದೆ ಹಳೆಯಬಟ್ಟೆಯಂತೆ ಆಗಿಬಿಡುತ್ತದೆ. ಈ ಎಚ್ಚರ ಮನೆಮಂದಿಗಿರಬೇಕು.
ಇತ್ತೀಚಿಗಿನ ಇನ್ನೊಂದು ಹೊಸಚಾಳಿಯೆಂದರೆ ಹುಟ್ಟುಹಬ್ಬಕ್ಕೋ, ವಿವಾಹ ವಾರ್ಷಿಕೋತ್ಸವಕ್ಕೋ ಶುಭಾಶಯಗಳನ್ನು ಹೇಳುವವರು ಮಧ್ಯರಾತ್ರಿ ಮೆಸೇಜು ಕಳಿಸುವುದು! ಅದೇ ಸಂದೇಶವನ್ನು ಬೆಳಗಾದ ನಂತರ ಹೇಳಿದರಾಗದೇ? ಹುಟ್ಟಿದವರೇನು ರಾತ್ರಿ ಹನ್ನೆರಡು ಗಂಟೆ ಒಂದು ಸೆಕೆಂಡಿನಲ್ಲಿಯೇ ಹುಟ್ಟಿರುತ್ತಾರೆಯೇ? ಅಪರಾತ್ರಿಯಲ್ಲಿ ಪತಿಯಾಗಲೀ, ಪತ್ನಿಯಾಗಲೀ ಮಕ್ಕಳಾಗಲೀ ಮೊಬೈಲ್ ನೋಡುತ್ತಿದ್ದರೂ, ರೀಲ್ಸ್ ನೋಡುತ್ತಿದ್ದರೂ, ಚಾಟ್ ಮಾಡುತ್ತಿದ್ದರೂ ಅದು ಅಪಾರ್ಥಕ್ಕೀಡಾಗುವ ಸಾಧ್ಯತೆಯೇ ಹೆಚ್ಚು. ಒಬ್ಬರಿನ್ನೊಬ್ಬರಿಂದ ಮಾನಸಿಕವಾಗಿ ದೂರವಾಗುತ್ತ ಸಾಗಲು ಇದೇ ಸಾಕು.
ಎಷ್ಟೇ ಆಪ್ತ ಬಂಧವಾದರೂ ಅದರ ನಡುವೆ ಒಂದು ಸಣ್ಣ ಖಾಸಗಿತನವಿರುತ್ತದೆ. ಗಂಡ-ಹೆಂಡತಿಯ ನಡುವೆಯೇ ಆದರೂ ಮನಸ್ಸುಬಿಚ್ಚಿ ಎಲ್ಲವನ್ನೂ ಹೇಳಿಕೊಳ್ಳುವ ಅನುಬಂಧವಿದ್ದೆಡೆಯಲ್ಲಿಯೂ ಗಂಡನ ವಾಟ್ಸಾಪ್ ಸಂದೇಶಗಳನ್ನು ಹೆಂಡತಿ, ಹೆಂಡತಿಯ ಇನ್ಸ್ಟಾಗ್ರಾಮ್ ಚಾಟ್ಗಳನ್ನು ಗಂಡ ಚೆಕ್ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಅವರೀರ್ವರ ನಡುವಿನ ಸಂಬಂಧ ಬಲುಬೇಗನೇ ತಮ್ಮ ನಡುವಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತದೆ. ಪರಸ್ಪರ ನಂಬಿಕೆ, ವಿಶ್ವಾಸವಿದ್ದಲ್ಲಿ ಈ ಬಗೆಯ ಅನುಮಾನಗಳ ಅಗತ್ಯವೇ ಇರುವುದಿಲ್ಲ. ಪ್ರತಿಯೊಂದು ಮೆಸೇಜಿಗೂ ಇವರೇಕೆ ಹೀಗೆ ಕಳಿಸಿದರು, ಅವರೇಕೆ ಹಾಗೆ ಕಳಿಸಿದರು, ಈ ಇಮೋಜಿಯ ಅರ್ಥವೇನು ಎಂದು ಜಗಳಕ್ಕೆ ಬಿದ್ದರೆ ಬದುಕಿನ ಬಣ್ಣ ಮಸುಕಲಾರಂಭಿಸುತ್ತದೆ. ಪರಸ್ಪರರ ನಡುವಿನ ಖಾಸಗಿತನವನ್ನು ಗೌರವಿಸಿ. ಮಕ್ಕಳೇ ಆದರೂ ಇಂದು ಅವರ ವಾಟ್ಸಾಪ್ ಸಂದೇಶಗಳನ್ನು ಹೆತ್ತವರು ನೋಡುವುದನ್ನು ಇಷ್ಟಪಡುವುದಿಲ್ಲ. (ಆದರೆ ಮಕ್ಕಳು ಸರಿದಾರಿಯಲ್ಲೇ ಇದ್ದಾರೆ ಎಂಬುದನ್ನು ದೃಢಪಡಿಸಲು ಅಪರೂಪಕ್ಕೊಮ್ಮೆ ನೋಡುವುದು ತಪ್ಪೆನ್ನುವುದಿಲ್ಲ.)
ಇಂದಿನ ಅತಿದೊಡ್ಡ ಸಮಸ್ಯೆಯೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ತಾವು ಅತ್ಯಂತ ಸುಖಿಗಳು ಎಂದು ಬಿಂಬಿಸಿಕೊಳ್ಳುವ ಚಾಳಿ. ಅವರ ನಿಜವಾದ ಬದುಕಿನ ಸ್ಥಿತಿಗತಿಗಳು ನಮಗೆ ಗೊತ್ತಿದ್ದಲ್ಲಿ ಅವರು ಹಾಕುವ ಪೋಸ್ಟ್ಗಳು ರೇಜಿಗೆ ಹುಟ್ಟಿಸಬಲ್ಲವು. ಅಥವಾ ಅವರ ಬದುಕಿನ ಬಗ್ಗೆ ಏನೇನೂ ಗೊತ್ತಿಲ್ಲದೆ ಇದ್ದಾಗ ನಾವು ಅವರಂತೆ ಸುಖಿಯಾಗಿಲ್ಲ ಎಂಬ ಕೊರಗು ಹೆಚ್ಚಿಸೀತು. ಈ ಕಾರಣದಿಂದಲೇ ಪರಸ್ಪರರನ್ನು ಹೀಯಾಳಿಸುವ ಮಾತುಗಳು ಅಧಿಕವಾಗಿ ಮೆಚ್ಚುಗೆಯ ಭಾವವೋ, ಪರಸ್ಪರರ ನಡುವಿನ ಧನ್ಯತಾ ಭಾವವೋ ಕಳೆದೇಹೋದೀತು.
ವೇಗವಾಗಿ ಸಾಗುತ್ತಿರುವ, ಬದಲಾಗುತ್ತಿರುವ ಈ ಯುಗದಲ್ಲಿ ವಾಟ್ಸಾಪ್ ಸಂದೇಶಗಳು ಹತ್ತುಸಾಲುಗಳಿಗಿಂತ ದೀರ್ಘವಿದ್ದರೆ ಓದುವ ವ್ಯವಧಾನವಿಲ್ಲ. ಮೆಸೇಜುಗಳು ಗಾತ್ರದಲ್ಲಿ ಚಿಕ್ಕದಾಗುತ್ತಾ ಸಾಗಿದಂತೆ ಮನೆಮಂದಿಯ ಸಂವಹನವೂ ಸಂಭಾಷಣೆಯೂ ಚಿಕ್ಕದಾಗುತ್ತಾ ಸಾಗಿದರೆ ಭಾವನಾತ್ಮಕವಾಗಿ ಇಬ್ಬರ ನಡುವೆ ನಿರ್ವಾತವೊಂದು ಸೃಷ್ಟಿಯಾಗುತ್ತದೆ. ಅದನ್ನು ತುಂಬಲು ಮತ್ತೆ ಹೆಣಗಾಡಿದರೆ ಪ್ರಯೋಜನವಿಲ್ಲ.
ಬೆಡ್ರೂಮಿಗೂ ಪ್ರವೇಶಿಸಿರುವ ಮೊಬೈಲ್ ಫೋನ್ ನಿಜಕ್ಕೂ ಎಷ್ಟು ಅಪಾಯಕಾರಿ ಎಂಬುದನ್ನು ಸೈಬರ್ ಕ್ರೈಂ ವಿಭಾಗದವರು ಹೇಳುತ್ತಲೇ ಇದ್ದಾರೆ. ಅಂದರೂ ನಮಗೆ ಅಲಾರಾಂ ಇಟ್ಟುಕೊಳ್ಳುವ ನೆಪದಲ್ಲಿ ಫೋನ್ ತಲೆಯ ಸಮೀಪವೇ ಇರಬೇಕು. ಫೋನ್ನನ್ನು ಬೆಡ್ರೂಮಿಂದ ಹೊರಗೆ ಬಿಡುವುದನ್ನು ಖಡಾಖಂಡಿತ ಅಭ್ಯಾಸ ಮಾಡಬೇಕು. ರಿಂಗ್ ಆದರೆ ಕೇಳಿಸುವಷ್ಟು ದೂರದಲ್ಲಿ ರೂಮಿನಿಂದ ಹೊರಗೆ ಫೋನ್ ಬಿಡುವುದು ಅತ್ಯಗತ್ಯ. ಇಲ್ಲವಾದಲ್ಲಿ ಇಬ್ಬರ ನಿದ್ದೆಯೂ ಹಾಳು. ಎಲ್ಲಿ ನಿದ್ರೆ ಸರಿಯಾಗಿಲ್ಲವೋ ಅಲ್ಲಿ ಮನೋದೈಹಿಕ ಆರೋಗ್ಯವೂ ನಶಿಸುತ್ತದೆ.
ಮನೆಯೊಳಗಿನ ಸಂಬಂಧಗಳ ನಡುವೆ ಮೊಬೈಲ್ ಎಂಬುದು ಪಲಾಯನವಾದದ ಮೂಲವೆನಿಸುತ್ತಿದೆಯಂತೆ. ಗಂಡ-ಹೆಂಡತಿಯರ ನಡುವೆಯಂತೂ ಯಾವುದಾದರೂ ಮನೋಕ್ಲೇಶದ ನಿವಾರಣೆಗೆ ಅತ್ಯಗತ್ಯವಾದ ನೇರ ಮಾತುಕತೆಯನ್ನು ಬದಿಗೊತ್ತಿ, ಫೋನಿನಲ್ಲಿ ಬ್ಯುಸೀ ಇರುವಂತೆ ತೋರಿಸಿಕೊಳ್ಳುವುದು ಇಬ್ಬರ ನಡುವೆ ಸೇತುವೆಯ ಬದಲು ಕಂದಕವನ್ನೇ ಸೃಷ್ಟಿಸುತ್ತಾ ಹೋಗುತ್ತದೆ.
ನಿಜಕ್ಕೂ ನಮಗೆ ಸ್ವಾತಂತ್ರ್ಯವೆಂಬುದು ಬೇಕಾಗಿರುವುದು ಇಂದು ನಮ್ಮೆಲ್ಲ ಸಮಯವನ್ನೂ ಕಸಿದುಕೊಳ್ಳುತ್ತಿರುವ ಅತಿಯಾದ ಮೊಬೈಲ್ ಬಳಕೆಯಿಂದಲೇ!