ಆಧುನಿಕ ಬದುಕಿನ ಒತ್ತಡದಲ್ಲಿ, ಹಣ ಮಾಡುವ ಹಪಹಪಿಯಲ್ಲಿ ಹೆಣ್ಣುಮಕ್ಕಳೊಳಗೆ ಸಹಜವಾಗಿ ಅರಳಿಕೊಳ್ಳುವ ‘ಅಮ್ಮ’ ಇಲ್ಲವಾಗುತ್ತಿದ್ದಾಳೆಯೇ? ಅಮ್ಮನಾಗುವುದೆಂದರೆ ಕೇವಲ ಹೊತ್ತು, ಹೆತ್ತು, ಬೇಕುಬೇಕಾದುದನ್ನೆಲ್ಲ ಕೊಡಿಸುವುದಷ್ಟೇ ಅಲ್ಲವಲ್ಲ! ಯೋಚನೆ ಮಾಡಬೇಕಿದೆ. ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ಬೇಕೆಂಬುದೇನೋ ನಿಜ. ಯಾರ ಹಂಗೂ ಇಲ್ಲದೆ ಸ್ವಾಭಿಮಾನದಿಂದ ಬದುಕಬೇಕೆಂಬುದೂ ಸತ್ಯ. ಹಾಗೆಂದು ಸುಸ್ಥಿರ, ಸುದೃಢ ಸಮಾಜಕ್ಕೆ ಪ್ರಜ್ಞಾವಂತ ಮಕ್ಕಳನ್ನು ಕೊಡುವುದೂ ಬದುಕಿನ ಮಹತ್ತ್ವದ ಹೊಣೆಗಾರಿಕೆಯೇ ಹೌದಷ್ಟೇ!
ತಾಯಿಯ ಕುರಿತು, ತಾಯ್ತನದ ಕುರಿತು ಮಾತನಾಡುವಾಗಲೆಲ್ಲ ಆ ಸ್ಥಾನದ ಶ್ರೇಷ್ಠತೆಯ ಬಗ್ಗೆ ಹೇಳುತ್ತೇವೆ. ಅಮ್ಮನ ತ್ಯಾಗ, ಮಗುವಿಗಾಗಿ ಅಮ್ಮ ಪಡುವ ಕಷ್ಟಗಳು, ಮಗುವಿನ ನಗೆಯಲ್ಲಿ ತನ್ನೆಲ್ಲ ನೋವು ಮರೆತು ಬದುಕಿನ ಸಂತೋಷವನ್ನು ಕಾಣುವ ಪರಿ ಇವೆಲ್ಲವೂ ಬದುಕಿನ ವಿಸ್ಮಯ. ಕಠಿಣವಾದ ಹೆರಿಗೆನೋವನ್ನು ಅನುಭವಿಸಿ ನರಳಿದರೂ ಕಂದನನ್ನು ಕಂಡ ಕ್ಷಣದಲ್ಲಿ ಮರೆತುಹೋಗುವ ನೋವು, ಹಾಲುಣಿಸುವಾಗಿನ ಹಿತಾನುಭವ ಎಲ್ಲವೂ ಅಮ್ಮ ಎಂಬ ಪದದೊಳಗೆ ಅವಿತು ಕುಳಿತಿವೆ. ಸ್ತ್ರೀವಾದೀ ನೆಲೆಯಲ್ಲಿ ತಾಯ್ತನವೆಂದರೆ ಹೆಣ್ಣಿನ ಬದುಕಿನ ಪೂರ್ಣತೆ ಎಂದು ನೋಡಬೇಕಿಲ್ಲ ಎಂದು ವಾದಿಸುವವರನ್ನು ಕಂಡರೆ ಎಷ್ಟೋ ಬಾರಿ ಇವರೆಲ್ಲ ಹಿಂದಿನ ಜನ್ಮದಲ್ಲಿ ಅದೇನು ಪಾಪ ಮಾಡಿ ಬಂದರೋ ಎನಿಸುತ್ತದೆ. ಹಾಗೆಂದು ದೈಹಿಕವಾಗಿ ಸಮಸ್ಯೆಯಿದ್ದು ತಾಯಿಯಾಗಲು ಸಾಧ್ಯವಾಗದೆ ಇರುವವರ ಮನದೊಳಗೂ ಅಮ್ಮ ಇದ್ದೇ ಇರುತ್ತಾಳೆಂಬುದು ಸತ್ಯ. ಮಕ್ಕಳನ್ನು ದತ್ತು ತೆಗೆದುಕೊಂಡು, ಮನೆಮಂದಿಯನ್ನು ಚೆನ್ನಾಗಿ ನೋಡಿಕೊಂಡು, ಓರಗೆಯ ಮಕ್ಕಳನ್ನು ಸಲಹುತ್ತ, ಇಲ್ಲವೇ ಪ್ರಾಣಿಪಕ್ಷಿಗಳನ್ನು ಅಕ್ಕರೆಯಿಂದ ಕಾಣುತ್ತ ಅವರು ತಮ್ಮೊಳಗಿನ ತಾಯಿಯನ್ನು ಪೊರೆದೇ ಪೊರೆಯುತ್ತಾರೆ. ಸಂತೋಷದಿAದ, ನೆಮ್ಮದಿಯಿಂದ ಬದುಕನ್ನು ಅನುಭವಿಸುತ್ತ ಕಳೆಯುವುದಕ್ಕೆ ಇವೆಲ್ಲವೂ ಅತ್ಯಗತ್ಯ ಅಂಶಗಳೇ ಹೌದು.
ಆದರೆ ಇತ್ತೀಚಿಗಿನ ಎರಡು ಘಟನೆಗಳು ಯಾಕೋ ದಿಗ್ಭçಮೆ ಹುಟ್ಟಿಸಿವೆ. ಒಂದು, ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿ ಇರುವ ಎಂಜಿನಿಯರ್ ತಾಯಿ ತನ್ನ ಮಗುವನ್ನು ಕೊಂದು ಸೂಟ್ಕೇಸಿನಲ್ಲಿ ಹಾಕಿಕೊಂಡು ಬಂದಿರುವುದು, ಇನ್ನೊಂದು ಈಗ ಒಂದೆರಡು ದಿನಗಳಿಂದ ಸುದ್ದಿಯಲ್ಲಿರುವ ಮೂರುವರ್ಷದ ಮಗುವಿನದ್ದು. ಮನೆಯೊಳಗೆ ಮಗುವನ್ನು ಕೂಡಿಹಾಕಿ ಹೊರಗೆ ಹೋಗುವ ತಾಯಿ, ತನ್ನ ಗೆಳೆಯನಿಗಾಗಿ ತನ್ನ ಕಂದನನ್ನೇ ವಿಪರೀತವಾಗಿ ಹೊಡೆದು ದಂಡಿಸಿರುವ ರೀತಿ ಕಂಡರೆ ಎದೆ ಝಲ್ಲೆನ್ನುತ್ತದೆ. ‘ಕುಕ್ಕರಿನಲ್ಲಿ ಹೊಡೆದಳು, ಅಂಕಲ್ಲು, ಅಮ್ಮ ಇಬ್ಬರೂ ಹೊಡೀತಾರೆ’ ಎಂದು ನುಡಿಯುವ ಆ ಮಗುವಿನ ಸ್ಥಿತಿಗೆ ಸಂಕಟವಾಗದಿದ್ದೀತೇ? ನಿಜಕ್ಕೂ ಇಂಥವರಿಗೆ ಅಮ್ಮನೆಂದರೇನೆAದು ಗೊತ್ತೇ?
ಆಧುನಿಕ ಬದುಕಿನ ಒತ್ತಡದಲ್ಲಿ, ಹಣ ಮಾಡುವ ಹಪಹಪಿಯಲ್ಲಿ ಹೆಣ್ಣುಮಕ್ಕಳೊಳಗೆ ಸಹಜವಾಗಿ ಅರಳಿಕೊಳ್ಳುವ ಅಮ್ಮ ಇಲ್ಲವಾಗುತ್ತಿದ್ದಾಳೆಯೇ? ಅಮ್ಮನಾಗುವುದೆಂದರೆ ಕೇವಲ ಹೊತ್ತು, ಹೆತ್ತು, ಬೇಕುಬೇಕಾದುದನ್ನೆಲ್ಲ ಕೊಡಿಸುವುದಷ್ಟೇ ಅಲ್ಲವಲ್ಲ? ಯೋಚನೆ ಮಾಡಬೇಕಿದೆ. ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ಬೇಕೆಂಬುದೇನೋ ನಿಜ. ಯಾರ ಹಂಗೂ ಇಲ್ಲದೆ ಸ್ವಾಭಿಮಾನದಿಂದ ಬದುಕಬೇಕೆಂಬುದೂ ಸತ್ಯ. ಹಾಗೆಂದು ಸುಸ್ಥಿರ, ಸುದೃಢ ಸಮಾಜಕ್ಕೆ ಪ್ರಜ್ಞಾವಂತ ಮಕ್ಕಳನ್ನು ಕೊಡುವುದೂ ಬದುಕಿನ ಮಹತ್ತ್ವದ ಹೊಣೆಗಾರಿಕೆಯೇ ಹೌದಷ್ಟೇ!
ನನ್ನ ಬಾಲ್ಯದಲ್ಲಿ ಒಂದು ಚೆಂದದ ಕೆಂಪುಬಣ್ಣದ ಗೊಂಬೆಯೊಂದಿತ್ತು. ನಮ್ಮನೆಯಲ್ಲಿ ಇದ್ದದ್ದು ಅದೊಂದೇ ಆಟಿಕೆ. ಅದಕ್ಕೆ ಸ್ನಾನಮಾಡಿಸುವುದೋ ಮಲಗಿಸುವುದೋ ಇತ್ಯಾದಿಗಳನ್ನೆಲ್ಲ ನಾನೂ ಅಕ್ಕಂದಿರೂ ಅಕ್ಕರಾಸ್ಥೆಯಿಂದ ಮಾಡುತ್ತಿದ್ದೆವು. ಮನೆಗೆ ಬಂದುಹೋಗುವ ನೆಂಟರು, ಅವರ ಮಕ್ಕಳು ಇವರೊಂದಿಗೆ ಸಹಜವಾಗಿ ಬೆಳೆಯುತ್ತ, ಪುಟ್ಟ ಮಗುವಿರುವ ದಂಪತಿಗಳಾರಾದರೂ ಬಂದರೆ ಅತ್ಯಂತ ಸಂತೋಷಪಡುತ್ತಿದ್ದೆವು. ಮಗುವೂ ನಮ್ಮನ್ನು ಹಚ್ಚಿಕೊಂಡರೆ ನಮಗೆ ಸ್ವರ್ಗವೇ ಸಿಕ್ಕಿದಷ್ಟು ಸಂತೋಷ. ಮುಂದೆ ಅಕ್ಕಂದಿರಿಗೆ ಮದುವೆಯಾಗಿ ಮನೆಗೆ ಮುದ್ದಿನ ಮೊಮ್ಮಕ್ಕಳು ಬಂದಾಗಲೂ ಅಮ್ಮನೊಂದಿಗೆ ಆ ಮಕ್ಕಳನ್ನು ಸ್ನಾನ ಮಾಡಿಸುವಲ್ಲಿ, ಮಲಗಿಸುವಲ್ಲಿ ನಾನು ಸದಾ ಜೊತೆಗೇ ಇರುತ್ತಿದ್ದೆ. ಅಕ್ಕನ ಮಕ್ಕಳು ಎಷ್ಟರಮಟ್ಟಿಗೆ ನನ್ನನ್ನು ಹಚ್ಚಿಕೊಂಡಿದ್ದರು ಎಂದರೆ ನನ್ನ ಮಗಳು ಹುಟ್ಟಿದಾಗ ನನ್ನ ಅಕ್ಕನ ಮಗಳು ಸಂಭ್ರಮದಿಂದ ಮಗುವನ್ನು ನೋಡುತ್ತಾ ‘ಚಿಕ್ಕಿಗೀಗ ಮೂರುಮಂದಿ ಮಕ್ಕಳಾದೆವಲ್ಲ’ ಎಂದಿದ್ದಳು! ಆಗಿನ್ನೂ ಅವಳಿಗೆ ಮೂರೂವರೆ ವರ್ಷ ವಯಸ್ಸು.
ನನ್ನ ಮಗಳ ಬಳಿಯೂ ಪುಟ್ಟ ಗೊಂಬೆಯೊAದಿತ್ತು. ಅವಳನ್ನು ನೋಡಿಕೊಳ್ಳುವುದಕ್ಕೆ ಬರುತ್ತಿದ್ದ ಪ್ರೇಮಜ್ಜಿ ಕೊಟ್ಟ ಗೊಂಬೆಯದು. ಅದನ್ನು ಸದಾ ಬಗಲಿನಲ್ಲಿಯೇ ಇಟ್ಟುಕೊಂಡು ಬೆಳೆದವಳಿವಳು. ಯಾವುದೇ ಪುಟ್ಟ ಮಗುವನ್ನು ಕಂಡರೂ ಬಹಳ ಸುಲಭವಾಗಿ ತನ್ನೆಡೆಗೆ ಸೆಳೆದುಕೊಂಡು ಬಿಡುತ್ತಾಳೆ, ಅಕ್ಕರೆ ಮಾಡುತ್ತಾಳೆ, ಎಷ್ಟರಮಟ್ಟಿಗೆ ಎಂದರೆ ತಮ್ಮನಿಗೆ ಸಿಟ್ಟು ಬರುವಷ್ಟು. ಅವನಿಗೊಂದು ಬಗೆ ಪೊಸೆಸಿವ್ನೆಸ್. ಅಂತೂ ಇಂಥಾ ವಿಚಾರಗಳಿಗೆ ಅಕ್ಕತಮ್ಮನ ನಡುವೆ ಕದನವೇರ್ಪಟ್ಟರೆ ನನಗೆ ಸಂತೋಷವೇ. ಪರಸ್ಪರರ ನಡುವಿನ ಕಾಳಜಿಯೇ ಇಬ್ಬರೊಳಗಿನ ಮಾತೃತ್ವವನ್ನು ಬೆಳೆಸುತ್ತದೆ.
ಇಂದು ಹೆಚ್ಚಿನ ಮನೆಗಳಲ್ಲಿ ಒಂದೊಂದೇ ಮಗು. ಒಬ್ಬರೇ ಬೆಳೆಯುವ ಸಂಕಟ ಒಂದೆಡೆಯಾದರೆ, ಸ್ವತಃ ಅತಿಯಾದ ಪ್ರೀತಿ, ಕಾಳಜಿಯ ನಡುವೆ ಸಹಜತೆಯೇ ಕಳೆದುಹೋದಂತಾಗಿ ಮಕ್ಕಳು ಹೆಚ್ಚು ಸ್ವಾರ್ಥಿಗಳಾಗಿಯೇ ಬೆಳೆಯುತ್ತಾರೇನೋ! ಹೊಂದಾಣಿಕೆಯೆಂಬುದನ್ನು ಕಲಿಯುವುದಕ್ಕೆ ಒಡನಾಡಿಗಳಿಲ್ಲ. ಪಟ್ಟಣದಲ್ಲಿರುವವರಿಗೆ ಅಕ್ಕಪಕ್ಕದ ಮನೆಯ ಮಕ್ಕಳೂ ಸಿಕ್ಕುವುದಿಲ್ಲ.
ಗಮನಿಸಿ ನೋಡಿ. ಇಂದು ಬೊಂಬೆಗಳೊಂದಿಗೆ ಆಡುವ ಮಕ್ಕಳೇ ಕಡಮೆ. ಮೊಬೈಲ್ ಒಂದಿದ್ದರೆ ಎಲ್ಲವೂ ಅದರಲ್ಲೇ ಸರಿ. ಸಾಲದ್ದಕ್ಕೆ ಆಟವಾಡುವುದಕ್ಕೆ ಎಡೆಕೊಡದ ಶಿಕ್ಷಣವ್ಯವಸ್ಥೆ. ಎಳೆಯ ಮಕ್ಕಳನ್ನು ಶಾಲೆಗೆ ಸೇರಿಸಿ ಹಗುರವಾಗುವ ಧಾವಂತ ಪೋಷಕರಿಗೂ. ಮನೆಯಲ್ಲಿ ನೋಡಿಕೊಳ್ಳುವುದಕ್ಕೆ ಯಾರೂ ಇರದ ಕಾರಣವೇ ಮುಖ್ಯವಾಗಿ ಮಕ್ಕಳನ್ನು ಎಷ್ಟೆಂದರೆ ಅಷ್ಟು ಬೇಗ ಶಾಲೆಗೆ ಸೇರಿಸುವ ಹಪಹಪಿ. ಶಾಲಾಶಿಕ್ಷಣದುದ್ದಕ್ಕೂ ಮಗು ಕಲಿಯುವುದು ಅತ್ಯಂತ ಹೆಚ್ಚು ಸಂಬಳವನ್ನು ಕೊಡಬಲ್ಲ ಕೆಲಸ ಸಂಪಾದಿಸಬೇಕೆಂದೇ. ಬೆರಳೆಣಿಕೆಯ ಶಾಲೆಗಳಲ್ಲಷ್ಟೇ ಸಂಸ್ಕಾರಯುತ ಶಿಕ್ಷಣ ಸಿಕ್ಕೀತು. ಹೆಚ್ಚು ಫೀಸ್ ಇದ್ದಷ್ಟೂ ಮಕ್ಕಳೂ ಯಂತ್ರಗಳಾಗುವುದೇ ಹೆಚ್ಚು. ಮೊಬೈಲ್, ಆನ್ಲೈನ್ ಗೇಮುಗಳ ಭರಾಟೆಯಲ್ಲಿ ಉಳಿದ ಸಮಯವನ್ನು ಮಗು ಕಳೆಯುತ್ತದೆ. ಅಕ್ಕರೆ, ಆತ್ಮೀಯತೆಗಳನ್ನು ಕಲಿಯುವ ಬಗೆ ಹೇಗೆ?
ಎಲ್ಲದಕ್ಕಿಂತ ಹೆಚ್ಚು ಸಮಸ್ಯೆಯೆನಿಸುವುದು ಮೌಲ್ಯಗಳನ್ನು ಬೋಧಿಸದ ಶಿಕ್ಷಣ ಮತ್ತು ಒಟ್ಟು ವ್ಯವಸ್ಥೆ. ಹಣದ ಮೌಲ್ಯದೆದುರು ಬೇರೆಲ್ಲವೂ ಗೌಣವಾಗಿ ಹೋಗಿದೆ. ಬದುಕಿಗೆ ನಿಜಕ್ಕೂ ಬೇಕಾದುದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಗತ್ಯವೂ ಇಂದಿದೆ. ಸ್ವಯಂಕೇಂದ್ರಿತವಾಗುತ್ತಾ ಬೆಳೆಯುವ ಮಕ್ಕಳು ಬೇರಾರನ್ನು ಅಕ್ಕರೆಯಿಂದ ಕಂಡಾರು? ಅಪ್ಪ-ಅಮ್ಮ ಸದಾ ಬ್ಯುಸಿ. ಅವರ ಒತ್ತಡ ಅವರದು, ಮಕ್ಕಳು ಚೆನ್ನಾಗಿ ಓದಿ ಅಂಕಗಳನ್ನು ಗಳಿಸಲಿ ಎಂದು ಆಶಿಸಿದಂತೆ ಮುಂದೆ ಅವರು ಒಳ್ಳೆಯ ದಂಪತಿಗಳಾಗಲಿ, ಉತ್ತಮ ಜೀವನವನ್ನು ಬಾಳಲಿ ಎಂದೂ ಆಶಿಸಬೇಕಲ್ಲವೇ? ಇದರೊಂದಿಗೆ ಅತಿಸಣ್ಣ ಕುಟುಂಬವಾಗಿ ವಿಭಜನೆಗೊಂಡಿರುವುದೂ ಬಲುದೊಡ್ಡ ಪೆಟ್ಟನ್ನೇ ಕೊಡುತ್ತಿದೆ.
ಕೆರಿಯರ್ ಕಡೆಗೆ ಹೆಚ್ಚಿನ ಗಮನ ಕೊಡುವ ಒತ್ತಡವೂ ಇಂದಿನ ದಿನಗಳಲ್ಲಿ ಹೆಚ್ಚಿದೆ. ಮಕ್ಕಳೇ ಬೇಡವೆಂದು ಇದೇ ಕಾರಣಕ್ಕೆ ತೀರ್ಮಾನ ಕೈಗೊಳ್ಳುವವರಿದ್ದಾರೆ. ಇನ್ನು ಕೆಲವರಲ್ಲಿ ಬದುಕಿಡೀ ಜಾಲಿಯಾಗಿರಬೇಕೆಂಬ ಹಂಬಲ. ಇಂಗ್ಲಿಷಿನ ಜಾಲಿ ಅದಾದರೂ ಬದುಕಿನ ಉತ್ತರಾರ್ಧದಲ್ಲಿ ಕನ್ನಡದ ಜಾಲಿಯೇ ಆಗಿಬಿಡುತ್ತದೆ. ಗಂಡಹೆಂಡತಿಯರ ನಡುವೆ ಅಕ್ಕರೆಯ ತಂತುವನ್ನು ಸದಾ ಬೆಸೆದಿಡುವ ಮಕ್ಕಳೇ ಬೇಡವೆಂದು ನಿರ್ಧರಿಸುವವರ ಬದುಕಿನಲ್ಲಿ ಅವರು ಭ್ರಮಿಸಿದಂಥ ಪ್ರೇಮದ ಬದಲು ಜಗಳಗಳೇ ಹೆಚ್ಚಿದರೂ ಅಚ್ಚರಿಯೇನಿಲ್ಲ. ಇದಕ್ಕೆ ಇಂಬುಕೊಡುವಂತೆ ಸಾಮಾಜಿಕ ಜಾಲತಾಣಗಳು ಬಿಂಬಿಸುವ ಬದುಕಿನ ಸಂತೋಷದ ಮಾನದಂಡವೇ ಬದಲಾಗಿದೆ. ಗೆಳೆಯ ಗೆಳತಿಯರೊಂದಿಗೆ ಸುತ್ತಾಡುವ, ಟೂರ್ ಹೋಗುವ ಸ್ವಾತಂತ್ರ್ಯವೇ ಮಾದರಿ ಎಂಬ ಮನಃಸ್ಥಿತಿ ಬೆಳೆಯುತ್ತಿದೆ. ಮನೆ, ಗಂಡ, ಮಕ್ಕಳು, ಅಡುಗೆಮನೆ ಎಲ್ಲವೂ ನಮ್ಮ ತಲೆಮಾರಿನವರಿಗೇ ಜಂಜಡವೆನಿಸಿದರೆ ಮುಂದಿನ ತಲೆಮಾರಿನವರಿಗೆ ಹೇಗನ್ನಿಸೀತು?
ಅತಿಹೆಚ್ಚು ಅಂಕಗಳನ್ನು ಗಳಿಸುವುದೇ ಮುಖ್ಯ ಎಂದು ಬೆಳೆಯುತ್ತಿರುವವರ ರೀತಿ ಒಂದಾದರೆ, ಆರ್ಥಿಕವಾಗಿ ಬೆಳೆಯಬೇಕೆಂಬ ಗುರಿ ನೆಟ್ಟವರದು ಇನ್ನೊಂದು ರೀತಿ. ಒಟ್ಟಿನಲ್ಲಿ ಮಗುವೆಂಬುದು ತಮ್ಮ ಕೆರಿಯರ್ ಬೆಳವಣಿಗೆಗೆ, ತಮ್ಮ ನೆಮ್ಮದಿಗೆ ಅಡ್ಡಿ ಎಂಬ ಮನೋಭಾವನೆಯೊಂದಿಗೆ ಬೆಳೆದರೆ ನಮ್ಮ ಬದುಕುಗಳು ಮುಗ್ಗರಿಸುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಇಲ್ಲಿಯವರೆಗೆ ಒಂದು ತಲೆಮಾರಿನವರಿಗೆ ತಮ್ಮ ಹೆತ್ತವರನ್ನು, ಪೋಷಕರನ್ನು, ವೃದ್ಧಾಶ್ರಮಕ್ಕೆ ಕಳುಹಿಸದಂತೆ ನೋಡಿಕೊಳ್ಳುವ ಶಿಕ್ಷಣ ಬೇಕಿತ್ತು. ಅದಕ್ಕೂ ನಂತರದ ತಲೆಮಾರಿಗೆ ಮಕ್ಕಳನ್ನು ಪೋಷಿಸುವ ಬಗ್ಗೆಯೂ ಕಲಿಸಬೇಕಿದೆ, ಇಲ್ಲದೇ ಹೋದಲ್ಲಿ ನಾಳೆ ಉಳಿಯುವುದು ಹಣ್ಣುಕೊಡದ, ಹಕ್ಕಿಗೂಡು ಕಟ್ಟದ ಬರಡು ಮರ ಮಾತ್ರ. ಅದಕ್ಕೆಂದೂ ಹಸಿರು ಬಣ್ಣ ಬರೆಯಲಾರೆವು, ಅದರಲ್ಲಿ ಹೂವುಹಣ್ಣುಗಳ ಚಿತ್ರ ಬರೆಯಲಾರೆವು. ಪರಸ್ಪರ ದೂರುವುದಕ್ಕೂ ಯಾರೂ ಉಳಿಯಲಾರೆವು!
ಯೋಚಿಸಬೇಕಿದೆ, ಯೋಚಿಸಬೇಕಾದದ್ದೇ!