ಒಮ್ಮೆ ರವೀಂದ್ರನಾಥ ಟಾಗೋರರು ಜಪಾನಿಗೆ ಹೋಗಿದ್ದರು. ಜಪಾನಿನಂತಹ ಪುಟ್ಟ ದೇಶ ಅಷ್ಟೊಂದು ಮುಂದುವರಿಯಲು ಕಾರಣವೇನು ಎಂದು ತಿಳಿಯುವ ಕುತೂಹಲ ಟಾಗೋರರಿಗಿತ್ತು. ಆದ್ದರಿಂದ ಅವರ ಕಾರ್ಯಕ್ರಮದ ವ್ಯವಸ್ಥಾಪಕರ ಹತ್ತಿರ ಅವರೊಂದು ಮನವಿ ಮಾಡಿದರು. ಅದೇನೆಂದರೆ ‘ನಾನು ನಿಮ್ಮ ದೇಶದ ಒಂದು ಸಣ್ಣ ಗ್ರಾಮದ ಒಂದು ಪ್ರಾಥಮಿಕ ಶಾಲೆಯನ್ನು ನೋಡಬೇಕು’ ಎಂಬುದಾಗಿ. ಅವರ ಇಚ್ಛೆಯ ಪ್ರಕಾರ ಅವರನ್ನು ಜಪಾನಿನ ಒಂದು ಸಣ್ಣ ಹಳ್ಳಿಯ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋದರು. ಟಾಗೋರರು ಆ ಶಾಲೆಯ ಒಂದು ತರಗತಿಯ ಕೊನೆಯ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಯೊಬ್ಬನನ್ನು ಕೇಳಿದರು: “ನೀನು ಮುಂದಿನ ಜೀವನದಲ್ಲಿ ಏನಾಗಬೇಕೆಂದು ಅಪೇಕ್ಷೆ ಪಡುತ್ತಿ?” ತಕ್ಷಣ ಆ ವಿದ್ಯಾರ್ಥಿ ಎದ್ದು ನಿಂತು, “I am waiting for an opportunity to die for my country” ಎಂಬುದಾಗಿ ಉತ್ತರಿಸಿದ. ಒಂದು ದೇಶದ ಒಂದು ಪುಟ್ಟ ಗ್ರಾಮದ ಒಂದು ಪ್ರಾಥಮಿಕ ಶಾಲೆಯ ಕಟ್ಟಕಡೆಯ ಬೆಂಚಿನ ಒಬ್ಬ ಪುಟ್ಟ ಹುಡುಗನಿಗೆ ಆ ದೇಶಕ್ಕಾಗಿ ತ್ಯಾಗ ಮಾಡಬೇಕೆಂಬ ಶಿಕ್ಷಣ ಸಿಗುವುದರಿಂದಲೇ ಜಪಾನಿನಂತಹ ಪುಟ್ಟ ದೇಶ ಜಗತ್ತಿನಲ್ಲೆ ಅತ್ಯಂತ ಮುಂದುವರಿದಿದೆ.
ನಮ್ಮ ದೇಶದ ಉದ್ದಗಲದಲ್ಲಿ ಹರಡಿರುವ ಯಾವುದೇ ಶಾಲೆಯ ಯಾವುದೇ ವಿದ್ಯಾರ್ಥಿಗಳಲ್ಲಿ ಇದೇ ಪ್ರಶ್ನೆಯನ್ನು ಕೇಳಿ ನೀನು ಮುಂದೆ ಏನಾಗಬೇಕೆಂದು ಕೇಳಿದರೆ, ಈ ದೇಶದ ವಿದ್ಯಾರ್ಥಿ ಹೇಳುತ್ತಾನೆ: ನಾನು ಡಾಕ್ಟರ್ ಆಗುತ್ತೇನೆ, ನಾನು ಇಂಜಿನಿಯರ್ ಆಗುತ್ತೇನೆ, ನಾನು ಸಚಿನ್ ತೆಂಡೂಲ್ಕರ್ ಆಗುತ್ತೇನೆ, ಶಾರೂಕ್ ಖಾನ್ ಆಗುತ್ತೇನೆ ಎಂದು. ಹುಡುಗಿಯಾದರೆ ನಾನು ಮಿಸ್ ಇಂಡಿಯಾ, ಮಿಸ್ ವಲ್ರ್ಡ್ ಆಗುತ್ತೇನೆ ಎಂದು ಹೇಳುತ್ತಾಳೆ. ಅಂದರೆ ಇಲ್ಲಿ ವ್ಯಕ್ತಿನಿಷ್ಠೆಯ, ವೃತ್ತಿನಿಷ್ಠೆಯ ಶಿಕ್ಷಣ ಸಿಗುತ್ತಿದೆಯೇ ವಿನಾ ರಾಷ್ಟ್ರನಿಷ್ಠೆಯ ಶಿಕ್ಷಣ ಸಿಗುವುದಿಲ್ಲ. ಈ ದೇಶದ ದುರಂತ ಎಂದರೆ ಇದು.
ಶಾಲೆಯಲ್ಲಿ ನಮಗೆ ತಪ್ಪು ಇತಿಹಾಸವನ್ನು ಕಲಿಸುತ್ತಾರೆ. ಅದನ್ನೇ ನಾವು ಬಾಯಿಪಾಠ ಮಾಡುತ್ತೇವೆ. ಈ ದೇಶಕ್ಕೆ ಆರ್ಯರು ಹೊರಗಡೆಯಿಂದ ಬಂದರು, ಅವರು ಇಲ್ಲಿನ ದ್ರಾವಿಡರನ್ನು ದಕ್ಷಿಣ ಭಾರತಕ್ಕೆ ಓಡಿಸಿದರು ಎಂದು ಸುಳ್ಳಿನ ಸರಮಾಲೆಯನ್ನೆ ಕಲಿಸುತ್ತಾರೆ. ಅದನ್ನೆ ನಾವು ಸತ್ಯ ಎಂದು ನಂಬುತ್ತೇವೆ. ನಮ್ಮ ಕಳೆದ ಸಾವಿರ ವರ್ಷಗಳನ್ನು ಸೋಲಿನ ಇತಿಹಾಸ, ಅವಮಾನದ ಇತಿಹಾಸ ಎನ್ನುತ್ತಾರೆ. ಹೀಗೆ ನಮಗೆ ಶಾಲೆಯಲ್ಲಿ ವಿಕೃತ ಸಂಗತಿಯನ್ನು, ಅನೃತ ಇತಿಹಾಸವನ್ನು ಕಲಿಸುತ್ತಾರೆ. ಈ ಶಿಕ್ಷಣದಲ್ಲಿ ನಮ್ಮ ಪೂರ್ವಜರ ಪೌರುಷದ ಸಂಗತಿಯನ್ನು ಸೇರಿಸಲು ಹೋದರೆ, ಇತಿಹಾಸದಲ್ಲಿ ನಡೆದ ಸತ್ಯಘಟನೆಯನ್ನು ತಿಳಿಸಲು ಹೋದರೆ ‘ಶಿಕ್ಷಣದಲ್ಲಿ ಕೋಮುವಾದವನ್ನು ಸೇರಿಸುತ್ತಾರೆ, ಶಿಕ್ಷಣವನ್ನು ಕೇಸರೀಕರಣಗೊಳಿಸುತ್ತಾರೆ’ ಎಂಬುದಾಗಿ ತಥಾಕಥಿತ ಬುದ್ಧಿಜೀವಿಗಳೂ ಢೋಂಗಿ ಜಾತ್ಯತೀತವಾದಿಗಳೂ ಬೊಬ್ಬೆಹೊಡೆಯುತ್ತಾರೆ. ಇವರಿಗೆಲ್ಲ ನಮ್ಮ ದೇಶದ ಇತಿಹಾಸದ ಸತ್ಯಸಂಗತಿ ಬೇಕಾಗಿಲ್ಲ. ನಮ್ಮ ಹಿರಿಯರ, ಪೂರ್ವಜರ ಪೌರುಷದ ಇತಿಹಾಸ, ಸಾಹಸದ ಇತಿಹಾಸ ಬೇಕಾಗಿಲ್ಲ. ಇವರಿಗೆ ಬೇಕಾಗಿರುವುದು ನಮ್ಮ ದೇಶದ ಪೂರ್ವಜರ, ಪರಂಪರೆಯ, ಸಂಸ್ಕೃತಿಯ ಅವಹೇಳನ. ಇವರಿಗೆ ಬೇಕಾಗಿರುವುದು ನಮ್ಮವರಲ್ಲೆ ನಮ್ಮ ದೇಶದ ಇತಿಹಾಸದ ಬಗ್ಗೆ ಕೀಳರಿಮೆ ತುಂಬಿಸುವುದು.
ತಥಾಕಥಿತ ಬುದ್ಧಿಜೀವಿಗಳ, ಢೋಂಗಿ ಜಾತ್ಯತೀತವಾದಿಗಳ ಇಂತಹ ಕೀಳು ರಾಜಕೀಯದಿಂದ ದೇಶದ ಉಜ್ಜ್ವಲ ಇತಿಹಾಸದ ಪರಿಜ್ಞಾನ ಮಂಕಾಗಿದೆ, ಮಸುಕಾಗಿದೆ. ಇಂತಹ ರಾಷ್ಟ್ರೀಯತಾಹೀನ ಶಿಕ್ಷಣವನ್ನು ನಮ್ಮ ಮಕ್ಕಳು ಪಡೆಯುವುದರಿಂದ ಅವರು ನಿಜವಾದ ಭಾರತೀಯರಾಗಿ ಬೆಳೆಯುತ್ತಿಲ್ಲ.
ನಮ್ಮದು ಸೋಲಿನ ಇತಿಹಾಸವೇನು? ನಮ್ಮದು ಅಪಮಾನದ ಇತಿಹಾಸವೇನು? ಅಸಹಿಷ್ಣು ಏಕದೇವೋಪಾಸಕ ಮತಾಂಧರ ದಾಳಿಯಿಂದ ಜಗತ್ತಿನ ಸುಮಾರು 46 ನಾಗರಿಕತೆಗಳು ನಾಶಗೊಂಡವು. ಇದೇ ಮತಾಂಧರು ನಮ್ಮ ದೇಶದ ಮೇಲೂ ದಾಳಿ ಮಾಡಿದರು. ಸುಮಾರು 1500 ವರ್ಷಗಳ ತನಕ ನಮ್ಮ ದೇಶದ ಮೇಲೆ ಜಗತ್ತಿನ ನಾನಾ ಜನಾಂಗದವರು ನಿರಂತರವಾಗಿ ದಾಳಿ ಮಾಡಿದರು. ಎಲ್ಲ ದಾಳಿ, ದಬ್ಬಾಳಿಕೆಯನ್ನು ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಎದುರಿಸಿ ತನ್ನ ಸಂಸ್ಕøತಿಯನ್ನು, ನಾಗರಿಕತೆಯನ್ನು ಉಳಿಸಿಕೊಂಡ ಏಕೈಕ ದೇಶ ಎಂದರೆ ಭಾರತದೇಶ. ವಿದೇಶೀಯರ, ಮತಾಂಧರ ಈ ದಾಳಿಯಲ್ಲಿ ನಮ್ಮ ಪೂರ್ವಜರ ಸಾಹಸ, ಪರಾಕ್ರಮ, ಬಲಿದಾನ ಇಂದಿನ ಶಾಲಾಶಿಕ್ಷಣದಲ್ಲಿ ಕಂಡುಬರುವುದಿಲ್ಲ. ಭಾರತದ ಇತಿಹಾಸದ ನೈಜ ಜ್ಞಾನ ಸಿಗದಿದ್ದರೆ ಅವರು ನೈಜ ಭಾರತೀಯರಾಗಿ ಬೆಳೆಯುವುದಾದರೂ ಹೇಗೆ?
ಇಡೀ ಜಗತ್ತನ್ನು ಗೆದ್ದಿದ್ದಾನೆ ಎಂದು ಹೇಳುವ ಅಲೆಗ್ಸಾಂಡರ್ ಭಾರತವನ್ನೆ ಪೂರ್ತಿ ಗೆಲ್ಲಲಿಲ್ಲ. ಅಷ್ಟು ಮಾತ್ರ ಅಲ್ಲ, ಆತನ ಇತಿಶ್ರೀ ಈ ದೇಶದ ಮಣ್ಣಿನಲ್ಲೇ ಆಗುತ್ತಿತ್ತು. ಆದರೆ ನಮ್ಮವರ ಉದಾತ್ತ ನೀತಿಯಿಂದ ಆತ ಬದುಕುಳಿದ. ಪುರೂರವನನ್ನು ಅಲೆಗ್ಸಾಂಡರ್ ಮೋಸ, ವಂಚನೆಯಿಂದ ಪರಾಭವಗೊಳಿಸಿದ್ದ. ನದಿಯ ಮತ್ತೊಂದು ದಡದಲ್ಲಿ ನಿಂತಿದ್ದ ಪುರೂರವನನ್ನು ಭೇಟಿ ಮಾಡುವಂತೆ ಅಲೆಗ್ಸಾಂಡರ್ ತನ್ನ ಪತ್ನಿಯನ್ನು ಕಳುಹಿಸಿದ. ಆಗ ರಕ್ಷಾಬಂಧನದ ಸಂದರ್ಭ. ಆ ಸಮಯದಲ್ಲಿ ಸಹೋದರಿಯರಿಂದ ‘ರಕ್ಷೆ’ ಕಟ್ಟಿಸಿಕೊಳ್ಳುವುದು ಈ ದೇಶದ ಸನಾತನ ಸಂಪ್ರದಾಯ.
ಅಲೆಗ್ಸಾಂಡರನ ಪತ್ನಿ ಆಗಮಿಸಿದಾಗ ಮಹಾರಾಣಿಗೆ ನೀಡುವ ಸ್ವಾಗತವನ್ನು ಆಕೆಗೆ ನೀಡಲಾಯಿತು. ಆಕೆಯನ್ನು ಸ್ವಾಗತಿಸಲು ಸ್ವತಃ ಪುರೂರವನೇ ಆಗಮಿಸಿದ. ಆಕೆಯ ಆಗಮನದಿಂದ ಸಂತೋಷಗೊಂಡ ಪುರೂರವ ನುಡಿದ: “ನೀವೇಕೆ ಇಲ್ಲಿಗೆ ಬರುವ ಕಷ್ಟವನ್ನು ತೆಗೆದುಕೊಂಡಿರಿ? ನೀವು ಮೊದಲೇ ತಿಳಿಸಿದ್ದರೆ ನೀವಿರುವಲ್ಲಿಗೆ ನಾನೇ ಬರುತ್ತಿದ್ದೆ.”
ಇದು ಭಾರತೀಯ ಸಂಪ್ರದಾಯ. ಸೂರ್ಯಾಸ್ತವಾದ ಬಳಿಕ ಎರಡೂ ಕಡೆಯವರು ಪರಸ್ಪರ ಯುದ್ಧ ಶಿಬಿರಗಳಿಗೆ ಭೇಟಿನೀಡಿ, ಈ ದಿನ ಏನಾಯಿತು, ಎಷ್ಟು ಮಂದಿ ಸತ್ತರು, ಪ್ರಮುಖ ಘಟನೆ ಏನು ಮುಂತಾದವುಗಳ ಬಗ್ಗೆ ಚರ್ಚಿಸುವುದು ಸಾಮಾನ್ಯ. ಇದು ಒಂದು ರೀತಿಯಲ್ಲಿ ಫುಟ್ಬಾಲ್ ಆಟವಿದ್ದಂತೆ. ಯಾರೂ ಅದನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ.
ಅಲೆಗ್ಸಾಂಡರನ ಪತ್ನಿ ಹೇಳಿದಳು: “ನನಗೆ ಯಾರೂ ಸಹೋದರರು ಇಲ್ಲದಿದ್ದರಿಂದ ನಾನು ಇಲ್ಲಿಗೆ ಬಂದಿರುವೆ. ಇಲ್ಲಿ ಆಚರಣೆಯಲ್ಲಿರುವ ರಕ್ಷಾಬಂಧನ ಉತ್ಸವದ ಬಗ್ಗೆ ಕೇಳಿದೆ. ನಿಮ್ಮನ್ನು ನನ್ನ ಸಹೋದರರನ್ನಾಗಿ ಮಾಡಿಕೊಳ್ಳಬೇಕೆಂದಿರುವೆ. ಈ ಮಾತಿಗೆ ಹರ್ಷಗೊಂಡ ಪುರೂರವ ಹೇಳಿದ: “ಇದೆಂಥ ಕಾಕತಾಳೀಯ! ನನಗೂ ಅಷ್ಟೇ, ಸಹೋದರಿಯರು ಇಲ್ಲ.”
ಅಲೆಗ್ಸಾಂಡರನ ಪತ್ನಿ ಪುರೂರವನಿಗೆ ಪವಿತ್ರವಾದ ರಕ್ಷೆಯನ್ನು ಕಟ್ಟಿದಳು. “ಯುದ್ಧದಲ್ಲಿ ಏನೇ ಆಗಲಿ, ಅಲೆಗ್ಸಾಂಡರ್ ನನ್ನ ಪತಿ. ಆತ ನಿನ್ನ ಭಾವ. ನೀನು ಮಾತ್ರ ನನ್ನನ್ನು ವಿಧವೆಯನ್ನಾಗಿ ಮಾಡಬಾರದು ಎಂಬುದಾಗಿ ಆಕೆ ಪುರೂರವನಿಂದ ವಚನ ಪಡೆದಳು. ಈ ವಚನ ಈಡೇರಿಸುವುದಾಗಿ ಪುರೂರವ ಭರವಸೆ ನೀಡಿದ.
ಯುದ್ಧರಂಗದಲ್ಲಿ ಒಂದು ಸಂದರ್ಭ ಎದುರಾಯಿತು. ಅಲೆಗ್ಸಾಂಡರನ ಕುದುರೆಯ ಮೇಲೆ ಪುರೂರವ ಈಟಿಯಿಂದ ದಾಳಿ ಮಾಡಿದಾಗ ಅದು ಅಲ್ಲೇ ಕೊನೆಯುಸಿರೆಳೆಯಿತು. ಅಲೆಗ್ಸಾಂಡರ್ ನೆಲಕ್ಕೆ ಉರುಳಿಬಿದ್ದ. ತತ್ಕ್ಷಣ ಕುದುರೆಯಿಂದ ಕೆಳಕ್ಕೆ ಜಿಗಿದ ಪುರೂರವ ತನ್ನ ಈಟಿಯಿಂದ ಅಲೆಗ್ಸಾಂಡರನ ಮೇಲೆ ದಾಳಿಗೆ ಮುಂದಾದ. ಇನ್ನೇನು ಈಟಿ ಅಲೆಗ್ಸಾಂಡರನ ಎದೆಯನ್ನು ಸೀಳಬೇಕಿತ್ತು. ಆತನಿಗೆ ತಟ್ಟನೆ ತನ್ನ ಕೈಗೆ ಕಟ್ಟಿದ ಪವಿತ್ರ ‘ರಕ್ಷೆ’ ಕಾಣಿಸಿತು. ಅಲೆಗ್ಸಾಂಡರನ ಪತ್ನಿ ನೆನಪಾದಳು. ಆಕೆಗೆ ನೀಡಿದ್ದ ವಚನ ನೆನಪಾಯಿತು. ಪುರೂರವ ಅಲ್ಲಿಯೇ ನಿಂತುಬಿಟ್ಟ.
ಅದನ್ನು ಕಂಡ ಅಲೆಗ್ಸಾಂಡರ್ ಕೇಳಿದ, “ಪುರೂರವ, ಏಕೆ ನಿಂತುಬಿಟ್ಟೆ? ನನ್ನನ್ನು ಕೊಲ್ಲಲು ಇದು ಸದವಕಾಶ ಅಲ್ಲವೇ?” ಪುರೂರವ ಹೇಳಿದ, “ನಾನು ನಿನ್ನ ಪತ್ನಿಗೆ ವಚನ ಕೊಟ್ಟಿದ್ದೇನೆ. ನಾನು ನನ್ನ ರಾಜ್ಯವನ್ನು ಕೊಟ್ಟೇನು, ಆದರೆ ಕೊಟ್ಟ ವಚನವನ್ನು ಮಾತ್ರ ಮುರಿಯುವುದಿಲ್ಲ. ನಿನ್ನ ಹೆಂಡತಿ ನನ್ನ ಸಹೋದರಿ. ಅವಳು ವಿಧವೆಯಾಗುವುದನ್ನು ನಾನು ಬಯಸುವುದಿಲ್ಲ” ಹೀಗೆ ಪುರೂರವ ಹಿಂದಕ್ಕೆ ಸರಿದು ಅಲೆಗ್ಸಾಂಡರನಿಗೆ ಜೀವದಾನ ನೀಡಿದ. ಇಂತಹ ಉದಾತ್ತ ಸಂಸ್ಕೃತಿ, ಉಜ್ಜ್ವಲ ಇತಿಹಾಸ, ಸತ್ಯಸಂಗತಿ ನಮ್ಮ ಶಿಕ್ಷಣದಲ್ಲಿ ಎಲ್ಲಿ ಕಂಡುಬರುತ್ತದೆ?
ಯಾವ ದೇಶದಲ್ಲಿ ಆ ದೇಶದ ಮಹಾಪುರುಷರ ಬಗ್ಗೆ, ಮಹಾನ್ ಪರಂಪರೆಯ ಬಗ್ಗೆ ಮಕ್ಕಳಲ್ಲಿ ಶಿಕ್ಷಣದ ಮೂಲಕ ಶ್ರದ್ಧೆ ಬೆಳೆಸುವುದಿಲ್ಲವೋ, ಆ ರಾಷ್ಟ್ರಕ್ಕೆ ಭವಿಷ್ಯವಿಲ್ಲ ಎಂದು ಭಾವಿಸಬೇಕು. ಕೇವಲ 400-500 ವರ್ಷಗಳ ಇತಿಹಾಸವಿರುವ ಪಾಶ್ಚಾತ್ಯ ದೇಶಗಳಲ್ಲೂ ಅವರ ಮಹಾಪುರುಷರ ಬಗ್ಗೆ, ರಾಷ್ಟ್ರೀಯ ವ್ಯಕ್ತಿಗಳ ಬಗ್ಗೆ ಆ ದೇಶದ ಮಕ್ಕಳಲ್ಲಿ ಶ್ರದ್ಧೆಯನ್ನು, ಗೌರವವನ್ನು ಬೆಳೆಸುವ ಶಿಕ್ಷಣ ಕೊಡುತ್ತಾರೆ.
ಉದಾಹರಣೆಗೆ ಅಮೆರಿಕದಲ್ಲಿ ಏಬ್ರಹಂ ಲಿಂಕನ್, ವಾಷಿಂಗ್ಟನ್ ಬಗ್ಗೆ, ಇಸ್ರೇಲಿನಲ್ಲಿ ಇಸಯ್ಯ, ಮೋಸೆಸ್ ಬಗ್ಗೆ, ಇಟೆಲಿಯಲ್ಲಿ ಯೇಸುಕ್ರಿಸ್ತನ ಬಗ್ಗೆ, ಅರೇಬಿಯದಲ್ಲಿ ಪ್ರವಾದಿ ಮಹಮದ್ ಬಗ್ಗೆ, ಬ್ರಿಟನ್ನಲ್ಲಿ ಶೇಕ್ಸ್ಪಿಯರ್ ಹಾಗೂ ಮಿಲ್ಟನ್ ಬಗ್ಗೆ, ಜರ್ಮನಿಯಲ್ಲಿ ಗಯಟೆ ಹಾಗೂ ಶೋಪೆನ್ಹೋವೆರ್ ಬಗ್ಗೆ, ಫ್ರಾನ್ಸಿನಲ್ಲಿ ರೂಸೊ, ವೋಲ್ಟೇರ್ ಬಗ್ಗೆ, ಆ ದೇಶದ ಮಕ್ಕಳಲ್ಲಿ ಶ್ರದ್ಧೆಯನ್ನು ಬೆಳೆಸುವ ಶಿಕ್ಷಣ ಕೊಡುತ್ತಾರೆ. ಆ ಮಹಾಪುರುಷರ ಸಾಧನೆಯನ್ನು ಮಕ್ಕಳಿಗೆ ವಿವರಿಸುತ್ತಾರೆ. ಅಷ್ಟು ಮಾತ್ರ ಅಲ್ಲ, ಅವರ ಜನ್ಮಸ್ಥಳಕ್ಕೆ ಅಥವಾ ಸಮಾಧಿಸ್ಥಳಕ್ಕೆ ಮಕ್ಕಳನ್ನು ವರ್ಷಕ್ಕೊಮ್ಮೆ ಪ್ರವಾಸಕ್ಕೆ ಕರೆದುಕೊಂಡುಹೋಗಿ ಆ ಮಹಾಪುರುಷರಿಗೆ ಗೌರವ ಸಲ್ಲಿಸಲಾಗುತ್ತದೆ.
ಆದರೆ ನಮ್ಮ ದೇಶದಲ್ಲಿ ನಮ್ಮ ಮಹಾಪುರುಷರಾದ ರಾಮಕೃಷ್ಣ, ವಾಲ್ಮೀಕಿ, ವ್ಯಾಸ, ಶಿವಾಜಿ, ಸಾವರ್ಕರ್ ಮುಂತಾದವರ ಬಗೆಗೆ ಶ್ರದ್ಧೆ ಬೆಳೆಸಲು, ಶಿಕ್ಷಣದಲ್ಲಿ ಅದನ್ನು ಸೇರಿಸಲು ಹೋದರೆ ಗದ್ದಲೆ ಎಬ್ಬಿಸಲಾಗುತ್ತದೆ. ನಮ್ಮ ದೇಶದ ಮಹಾಪುರುಷರ ಬಗೆಗೆ ಗೌರವವಾಗಿ ಶಿಕ್ಷಣದಲ್ಲಿ ಉಲ್ಲೇಖಿಸುವುದನ್ನು ಬಿಟ್ಟು ಅವರನ್ನು ಅವಹೇಳನ ಮಾಡಲಾಗುತ್ತದೆ.
ಕೆಲವು ವರ್ಷದ ಹಿಂದೆ ದೆಹಲಿ ಯೂನಿವರ್ಸಿಟಿ ಪ್ರಕಟ ಮಾಡಿದ ಪಾಠ್ಯಪುಸ್ತಕದಲ್ಲಿ ಗಾಂಧಿಯನ್ನು ಕೋಮುವಾದಿ ಎಂದು ಕರೆದಿದ್ದಾರೆ. ಅದು 2005-06ರ ಶೈಕ್ಷಣಿಕ ವರ್ಷದಲ್ಲಿ ಬಿಡುಗಡೆ ಆಗಿದೆ. ಅದೇ ಪಾಠ್ಯಪುಸ್ತಕದಲ್ಲಿ ಲೋಹಪುರುಷರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರನ್ನು ಕೋಮುವಾದಿ ಎಂದು ಜರೆದಿದ್ದಾರೆ. ಇದನ್ನೆಲ್ಲ ಈ ದೇಶದ ಮಕ್ಕಳು ಓದಬೇಕು. ಕೇಂದ್ರದ ಪಾಠ್ಯ ಇರುವ ಶಾಲೆಗಳಲ್ಲಿ ಏನು ಕಲಿಸುತ್ತಾರೆ? ಎನ್ಸಿಇಆರ್ಟಿ ತಯಾರಿಸಿದ ಪಾಠ್ಯಪುಸ್ತಕದ ಗತಿ ಏನು? ಶಿವಾಜಿ, ರಾಣಾ ಪ್ರತಾಪನನ್ನು, ಪೃಥ್ವೀರಾಜ ಚೌಹಾಣನನ್ನು ನಿಂದನೆ ಮಾಡಿದ್ದಾರೆ. ಶಿವಾಜಿಯನ್ನು ಹೇಡಿ ಎಂದು ಕರೆದಿದ್ದಾರೆ. ‘ಆತ ನೇರವಾಗಿ ಎಂದೂ ಯುದ್ಧ ಮಾಡಿಲ್ಲ, ಬಯಲಿಗೆ ಬಂದಿಲ್ಲ. ಮರೆಯಲ್ಲಿ ನಿಂತು ಯುದ್ಧ ಮಾಡುತ್ತಿದ್ದ. ‘He was a Traitor’ ಎಂದು ಹೇಳಿದ್ದಾರೆ.
‘ಪೃಥ್ವೀರಾಜ ಚೌಹಾಣನನ್ನು ಮಹಮ್ಮದ್ ಘೋರಿ ಗೆದ್ದು ಕ್ಷಮಿಸಿದ. ಆದರೆ ಆತ ಅನ್ಯಾಯ ಮಾಡಿದ್ದರಿಂದ ಆತನ ರುಂಡ ಹಾರಿಸಲಾಯಿತು’ ಎಂದೆಲ್ಲ ಬರೆದಿದ್ದಾರೆ. ಇದು ನಮ್ಮ ದೇಶದ ಇತಿಹಾಸ. ಕಮ್ಯೂನಿಸ್ಟ್ ಇತಿಹಾಸಕಾರಳಾದ ರೋಮಿಲಾ ಥಾಪರ್ ಎಂಬವರು ಘಜನಿ ಮಹಮ್ಮದ್ ಬಗ್ಗೆ ಹೇಳಿರುವುದು. ಗುಜರಾತಿನ ವ್ಯಾಪಾರಿಗಳು ತೆರಿಗೆ ತಪ್ಪಿಸಿದ ಕಪ್ಪು ಹಣವನ್ನು ಸೋಮನಾಥ ದೇವಸ್ಥಾನದಲ್ಲಿ ಇಟ್ಟಿದ್ದರಂತೆ. ಅದಕ್ಕೋಸ್ಕರ ಘಜನಿ ಮಹಮ್ಮದ್ ಸೋಮನಾಥ ದೇವಸ್ಥಾನವನ್ನು ಲೂಟಿ ಮಾಡಿದನಂತೆ. ಇಂತಹ ಬುದ್ಧಿವಿಕಲ ಕಮ್ಯೂನಿಸ್ಟ್ ಇತಿಹಾಸಕಾರರಿಂದ ರಚಿತವಾದ ಶಿಕ್ಷಣದಿಂದಲೇ ನಕ್ಸಲೈಟ್ನಂತಹ ಭಯೋತ್ಪಾದಕರು ಈ ದೇಶದಲ್ಲಿ ನಿರ್ಮಾಣ ಆಗಿದ್ದಾರೆ.
ನೈಜ ಇತಿಹಾಸದ ಆಧಾರದಲ್ಲಿ ಇಂದಿನ ಮಕ್ಕಳಲ್ಲಿ ನೈತಿಕತೆಯನ್ನು, ರಾಷ್ಟ್ರೀಯತೆಯನ್ನು ಶಿಕ್ಷಣದ ಮೂಲಕ ಬಲವಾಗಿ ಬೇರೂರಿಸಿದರೆ ಮುಂದಿನ ಎರಡು-ಮೂರು ದಶಕಗಳ ನಂತರವಾದರೂ ಭಾರತದ ಭವಿಷ್ಯ ಭವ್ಯವಾಗುವ ಸಾಧ್ಯತೆ ಇದೆ. ಈ ದೇಶ ಅಂದರೆ ಕೇವಲ ಬೆಟ್ಟ-ಗುಡ್ಡ, ಮಣ್ಣು-ನೀರು, ಕಣಿವೆ-ಕಂದರ, ಮರ-ಗಿಡಗಳನ್ನು ಒಳಗೊಂಡ ಭೌಗೋಳಿಕ ಜಡಸಂಗತಿಯಲ್ಲ. ಬದಲಿಗೆ ಆಕೆ ನಮ್ಮೆಲ್ಲರ ಜೀವಂತವಾದ ತಾಯಿ. ನಾವೆಲ್ಲರೂ ಆ ತಾಯಿಯ ಮಹಾನ್ ಪರಂಪರೆಯಲ್ಲಿ ಪ್ರಾಚೀನ ಸಂಸ್ಕೃತಿಯ ವಾರಸುದಾರರು. ಹೀಗೆ ದೇಶ ಮತ್ತು ಪ್ರಜೆಗಳನ್ನು ತಾಯಿ-ಮಕ್ಕಳ ಸಂಬಂಧದಂತೆ ಶಿಕ್ಷಣದ ಮೂಲಕ ಉದ್ದೀಪನಗೊಳಿಸಿದರೆ ನಮ್ಮ ದೇಶದ ಭವಿಷ್ಯ ಉಜ್ಜ್ವಲವಾಗುವುದರಲ್ಲಿ ಸಂಶಯವಿಲ್ಲ. ಇದನ್ನೇ ಸ್ವಾಮಿ ವಿವೇಕಾನಂದರು ಹೇಳಿದರು: ‘It is man-making education we want; it is nation-building education we want’ ಎಂಬುದಾಗಿ.
ಈವತ್ತು ನಾವು ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಕೊಡುತ್ತಲಿದ್ದೇವೆ? ನಾವು ಕೊಡುತ್ತಿರುವ ಶಿಕ್ಷಣದಲ್ಲಿ ನೈತಿಕತೆಯಾಗಲಿ, ರಾಷ್ಟ್ರೀಯತೆಯಾಗಲಿ ಇಲ್ಲ. ನಾವು ನಮ್ಮ ಮಕ್ಕಳನ್ನು ಇಂಜಿನಿಯರ್, ಡಾಕ್ಟರ್, ಗಣಿತಜ್ಞರನ್ನಾಗಿ ಮಾಡುತ್ತಿದ್ದೇವೆ. ಇದನ್ನು ನಿಜ ಅರ್ಥದಲ್ಲಿ ವಿದ್ಯೆ ಎನ್ನಲಾಗುವುದಿಲ್ಲ. ಇವೆಲ್ಲವೂ ಜೀವನೋಪಾಯಕ್ಕಾಗಿ ಇರುವ ವಿಧಾನಗಳಷ್ಟೆ, ವ್ಯಾವಹಾರಿಕ ಜೀವನಮಟ್ಟವನ್ನು ಹೆಚ್ಚಿಸುವ ವ್ಯವಸ್ಥೆಗಳಷ್ಟೆ. ನಾವು ನಮ್ಮ ಮಕ್ಕಳನ್ನು ಯೂರೋಪ್, ಅಮೆರಿಕ ದೇಶಗಳಿಗೆ ಈ ವಿದ್ಯೆಯನ್ನೆ ಮುಂದುವರಿಸಲು ಕಳುಹಿಸುತ್ತಿದ್ದೇವೆ. ಮತ್ತದನ್ನು ಮಹತ್ತರ ಸಾಧನೆಯೆಂದು ನಾವು ಪರಿಗಣಿಸುತ್ತಿರುವೆವು. ವಿದೇಶಕ್ಕೆ ಹೋಗಿ ಕಲಿತ ಹೆಚ್ಚಿನವರು ನಮ್ಮ ಸಂಸ್ಕೃತಿ-ಸಂಸ್ಕಾರ ಎಲ್ಲವನ್ನು ಮರೆತುಬಿಡುತ್ತಾರೆ. ಪ್ರತಿಭಾ ಪಲಾಯನಕ್ಕಿಂತ ಸಂಸ್ಕಾರಹೀನರಾಗುತ್ತಿರುವುದೇ ನಮ್ಮ ಸಮಾಜಕ್ಕೆ, ದೇಶಕ್ಕೆ ಆಗುತ್ತಿರುವ ಬಹುದೊಡ್ಡ ನಷ್ಟ. ಇದು ಕೇವಲ ನಷ್ಟ ಮಾತ್ರ ಅಲ್ಲ, ಬದಲಿಗೆ ಮಾನವೀಯತೆಗೆ ಒಂದು ಅಪಾಯ ಕೂಡ. ವಿದೇಶದಿಂದ ಪದವಿ ಪಡೆದವರನ್ನು ಶಿಕ್ಷಿತರು ಎನ್ನಬಹುದೇ ವಿನಾ ಸುಶಿಕ್ಷಿತರು ಎನ್ನಲಾಗುವುದಿಲ್ಲ. ಶಿಕ್ಷಣತಜ್ಞರೂ ಪ್ರಸಿದ್ಧ ವಾಗ್ಮಿಯೂ ಆಗಿರುವ ಗುರುರಾಜ ಕರಜಗಿಯವರು ಅವರ ಅನುಭವವೊಂದನ್ನು ಒಂದು ಕಡೆ ಹೇಳಿಕೊಂಡಿದ್ದಾರೆ. ಅದನ್ನು ಅವರ ಮಾತಿನಲ್ಲೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತ.
‘ನನ್ನ ಜೊತೆಗೆ ವಿದ್ಯಾಭ್ಯಾಸ ಮಾಡಿದ ಸ್ನೇಹಿತನೊಬ್ಬ ಸಂಶೋಧನೆಗೆಂದು ಅಮೆರಿಕಕ್ಕೆ ಹೋದ. ಅಲ್ಲಿಯೇ ನಾಲ್ಕು ವರ್ಷ ಇದ್ದ. ಅವನ ತಂದೆ ಬೆಳಗಾವಿಯ ಹತ್ತಿರದ ಒಂದು ಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದವರು. ಮಗನ ಪರದೇಶದ ಶಿಕ್ಷಣಕ್ಕಾಗಿ ಇದ್ದ ಒಂದು ಹೊಲವನ್ನು ಮಾರಿದುದಲ್ಲದೆ, ಸಾಕಷ್ಟು ಸಾಲವನ್ನೂ ಮಾಡಿಕೊಂಡಿದ್ದರು.
ನನ್ನ ಸ್ನೇಹಿತ ತನ್ನ ಸಂಶೋಧನೆಯನ್ನು ಮುಗಿಸಿ ಅಮೆರಿಕದಲ್ಲಿಯೇ ಕೆಲಸಕ್ಕೆ ಸೇರಿಕೊಂಡ. ಮಗ ಮರಳಿ ಬರುತ್ತಾನೆ ಎಂದುಕೊಂಡ ತಂದೆ-ತಾಯಿಗೆ ನಿರಾಶೆಯಾಗಿತ್ತು. ಮಗ ಅಲ್ಲಿಯೇ ಅಮೆರಿಕದ ಹುಡುಗಿಯನ್ನು ಮದುವೆ ಕೂಡ ಆಗಿದ್ದ. ತಂದೆ-ತಾಯಿಗೆ ಈ ವಿಷಯವನ್ನು ತಿಳಿಸಿಯೇ ಇರಲಿಲ್ಲ. ಆದರೆ ಸ್ನೇಹಿತರಾದ ನಮಗೆಲ್ಲ ಇದು ಗೊತ್ತಿತ್ತು. ಆತ ನಮಗೆಲ್ಲ ಈ ವಿಷಯವನ್ನು ಮನೆಯಲ್ಲಿ ತಿಳಿಸಬಾರದೆಂದೂ ತಾನೇ ಹೇಳುವುದಾಗಿಯೂ ಹೇಳಿದ್ದ.
ಐದು ವರ್ಷಗಳ ನಂತರ ಮೊದಲ ಬಾರಿಗೆ ಸ್ನೇಹಿತ ಭಾರತಕ್ಕೆ ಬಂದ. ಅವನಿಗೆ ಆಗಲೇ ಒಂದು ಮಗುವೂ ಆಗಿತ್ತು. ಆದರೆ ಹೆಂಡತಿ, ಮಗಳನ್ನು ಕರೆತಂದಿರಲಿಲ್ಲ. ಅವನು ಮುಂಬಯಿನಿಂದ ಬೆಳಗಾವಿಗೆ ವಿಮಾನದಲ್ಲಿ ಬರುವುದು ಗೊತ್ತಿದ್ದ ಕಾರಣ ನಾವು ಒಂದಷ್ಟು ಜನ ಸ್ನೇಹಿತರು ಅವನನ್ನು ಸ್ವಾಗತಿಸಲು ವಿಮಾಣ ನಿಲ್ದಾಣಕ್ಕೆ ಹೋದೆವು. ನಾನು ಒಳಗೆ ಹೋಗುತ್ತಿದ್ದಂತೆ ಅಲ್ಲಿ ಒಂದೆಡೆಗೆ ನನ್ನ ಸ್ನೇಹಿತನ ತಂದೆ ನಿಂತಿದ್ದು ಕಾಣಿಸಿತು. ವಯಸ್ಸಾದ ದೇಹ, ಹಳೆಯ ಧೋತರ, ಮುದ್ದೆಯಾದ ಕೋಟು, ಮಾಸಿದ ಟೊಪ್ಪಿಗೆ, ಕುರುಚಲು ಗಡ್ಡ ಇವುಗಳಿಂದ ಅವರು ಇನ್ನಷ್ಟು ವಯಸ್ಸಾದಂತೆ ಕಂಡರು. ಅವರಿಗೆ ನಮಸ್ಕಾರ ಮಾಡಿ “ಒಳಗೆ ಹೋಗೋಣ ಬನ್ನಿ” ಎಂದೆ. “ಬೇಡಪ್ಪ, ಇಲ್ಲೇ ನಿಂತಿರ್ತೇನೆ. ಹೇಗೂ ಇಲ್ಲೇ ಬರ್ತಾನಲ್ಲ” ಎಂದರು.
‘ಸರಿ’ ಎಂದುಕೊಂಡು ನಾನು ಒಳಗೆ ಹೋದೆ. ಸ್ನೇಹಿತ ಬಂದ. ಅವನಿಗೆಲ್ಲ ಸ್ನೇಹಿತರಿಂದ ಹಾರ ಸಮರ್ಪಣೆ, ನಗೆಮಾತು, ಪ್ರಶ್ನೋತ್ತರ ಹೀಗೆ ನಡೆಯಿತು. ಒಂದು ಅರ್ಧ ಗಂಟೆ ನಾವು ಅಲ್ಲಿಯೇ ನಿಂತಿದ್ದಿರಬೇಕು. ಆದರೆ ಸ್ನೇಹಿತನ ತಂದೆ ಎಲ್ಲಿ ಹೋದರು? ಅವನು ಬಂದಾಗ ತಂದೆಯನ್ನು ಮಾತನಾಡಿಸಿರಲೂ ಇಲ್ಲ. ನಾನೇ, “ಯಾಕೋ, ನಿನ್ನ ತಂದೆ ಎಲ್ಲಿ ಹೋದರು? ನಾನು ಬಂದಾಗ ಇಲ್ಲೇ ಇದ್ದರು” ಎಂದೆ. “ಹೌದೇ? ನಾನು ನೋಡಲೇ ಇಲ್ಲ” ಎಂದ. ಯಾಕೋ ಮಾತು ಹಾರಿಕೆಯದ್ದು ಎನಿಸಿತು. ನಾವು ಕಾರಿನಲ್ಲಿ ಅವನ ಹಳ್ಳಿಯನ್ನು ತಲಪಿದೆವು. ಮುಂದೆ ಎರಡು ಗಂಟೆಯ ನಂತರ ಸ್ನೇಹಿತನ ತಂದೆ ಬಿಸಿಲಿನಲ್ಲಿ ಬಂದರು. ತುಂಬ ಸುಸ್ತಾಗಿತ್ತು ಅವರಿಗೆ. ನಾನು ಹೊರಗಡೆ ಬಂದು ಅವರನ್ನು ಕೇಳಿದೆ, “ಯಾಕೆ ಸರ್, ಮಗ ಬಂದಾಗ ನೀವು ಅವನನ್ನು ಆಶೀರ್ವದಿಸಲಿಲ್ಲ. ಎಲ್ಲಿ ಮಾಯವಾಗಿ ಬಿಟ್ಟಿರಿ?”
ಅವರು ಆಡಿದ ಮಾತು ಎದೆಯಲ್ಲಿ ನಾಟಿತು.
“ಇಲ್ಲಪ್ಪ, ನಾನು ಅವನನ್ನು ನೋಡಿದೆ. ತುಂಬ ತೃಪ್ತಿಯಾಯಿತು. ಅವನೂ ನನ್ನನ್ನು ನೋಡಿದ. ಹಳೇ ಅಪ್ಪ, ಹಳೇ ರೀತಿಯ ಮನುಷ್ಯ, ಅವನಿಗೆ ಮುಜುಗರ ಆಗೋದಿಲ್ವೆ? ಎಲ್ಲ ಹೊಸ ಹೊಸ ಸ್ನೇಹಿತರು ಸಂಭ್ರಮದಲ್ಲಿದ್ದಾಗ ನಾನ್ಯಾಕೆ ಅವನ ಮನಸ್ಸನ್ನು ಸಣ್ಣದು ಮಾಡಲಿ ಹೇಳು? ಹೇಗಿದ್ದರೂ ಮನೆಗೆ ಬರುತ್ತಾನಲ್ಲ, ಭೆಟ್ಟಿಯಾಗುತ್ತಾನೆ ಎಂದುಕೊಂಡು ಬಸ್ಸಿನಲ್ಲಿ ಬಂದುಬಿಟ್ಟೆ” ಎಂದರು.
ಎರಡು ಪಿಎಚ್.ಡಿ ಪದವಿ ಪಡೆದ ಮಗನಿಗೆ ತಂದೆ ಕಾಲುಮುಟ್ಟಿ ಆಶೀರ್ವಾದ ಪಡೆಯುವ ಮನಸ್ಸಿಲ್ಲ. ಹೆಚ್ಚು ಓದದ ಹಳೆಯ ತಂದೆಗೆ ಎಲ್ಲಿ ಮಗನಿಗೆ ಮುಜುಗರವಾಗುತ್ತದೋ ಎಂಬ ಚಿಂತೆ. ಯಾರು ನಿಜವಾಗಿ ಸುಶಿಕ್ಷಿತರು? ವಿದೇಶದಿಂದ ಎರಡು ಪಿಎಚ್.ಡಿ. ಪಡೆದ ಮಗನೋ, ಸಾಮಾನ್ಯ ಶಿಕ್ಷಕನಾಗಿದ್ದ ತಂದೆಯೋ? ವಿದೇಶದಲ್ಲಿ ಕಲಿತವರೆಲ್ಲ ಮೊದಲ ದರ್ಜೆಯವರು, ಸ್ವದೇಶದಲ್ಲಿ ಕಲಿತವರು ಎರಡನೇ ದರ್ಜೆಯವರು ಎಂಬ ವಿಚಿತ್ರ ಮನೋಭಾವ ನಮ್ಮಲ್ಲಿ ಬೆಳೆದಿದೆ. ಯಾವ ದೇಶ ಹಿಂದೊಮ್ಮೆ ಇಡೀ ಜಗತ್ತಿಗೆ ಜ್ಞಾನಪ್ರಸಾರ ಮಾಡುವ ಕೇಂದ್ರವಾಗಿತ್ತೊ, ಅದೇ ದೇಶದ ಜನರು ವಿದೇಶದಿಂದ ಕಲಿತು ಬಂದ ಪದವೀಧರರ ಬಗ್ಗೆ, ಸ್ನಾತಕೋತ್ತರ ಪದವೀಧರರ ಬಗ್ಗೆ ಗರ್ವಪಡುತ್ತಿದ್ದಾರೆ! ವಿದೇಶೀ ವಿದ್ಯಾಭ್ಯಾಸದ ಬಗ್ಗೆ ಮೇಲರಿಮೆ, ಸ್ವದೇಶ ವಿದ್ಯಾಭ್ಯಾಸದ ಬಗ್ಗೆ ಕೀಳರಿಮೆ ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿ ಮನೆಮಾಡಿಕೊಂಡಿದೆ.
ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಮೈಸೂರು ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾದಾಗ ಅವರಿಗೆ ಹೆಚ್ಚೇನೂ ವಯಸ್ಸಾಗಿರಲಿಲ್ಲ. ಆದರೂ ತಮ್ಮ ವಿದ್ವತ್ತು, ವಾಕ್ಪ್ರವಾಹಗಳಿಂದ ತುಂಬ ಪ್ರಸಿದ್ಧಿ ಪಡೆದಿದ್ದರು. ಇದರಿಂದಾಗಿ ಹಿರಿಯ ಪ್ರಾಧ್ಯಾಪಕರಿಗೆಲ್ಲ ಹೊಟ್ಟೆಕಿಚ್ಚು ಪ್ರಾರಂಭವಾಯಿತು. “ಇಂಗ್ಲೆಂಡಿನ ಮುಖ ಕೂಡ ನೋಡದವರು ಇಲ್ಲಿ ಪ್ರೊಫೆಸರ್ ಆಗುತ್ತಾರೆ” ಎಂದೆಲ್ಲ ಹೇಳತೊಡಗಿದರು. ರಾಧಾಕೃಷ್ಣನ್ ಮಾತ್ರ ಮೌನವಾಗಿದ್ದರು.
ತರಗತಿಯಲ್ಲಿ ಓರ್ವ ವಿದ್ಯಾರ್ಥಿಯೇ ಅವರನ್ನು ನೇರವಾಗಿ ಕೇಳಿದ, “ನೀವು ಇಂಗ್ಲೆಂಡಿಗೆ ಹೋಗದೆಯೇ ಪ್ರೊಫೆಸರ್ ಆಗಿದ್ದು ನಿಜವೇ?”
ಹೌದಪ್ಪ, ನಾನು ಇಂಗ್ಲೆಂಡಿಗೆ ಹೋಗಿಲ್ಲ ನಿಜ. ದೊಡ್ಡ ಪ್ರಾಧ್ಯಾಪಕರೆಲ್ಲ ಇಂಗ್ಲೆಂಡಿಗೆ ಹೋಗಿದ್ದು ಅಲ್ಲಿ ಕಲಿಯುವುದಕ್ಕೆ. ನಾನೂ ಅಲ್ಲಿಗೆ ಹೋಗಲಿದ್ದೇನೆ. ಆದರೆ ಕಲಿಯುವುದಕ್ಕಲ್ಲ, ಕಲಿಸುವುದಕ್ಕೆ.” ಹೀಗೆ ಹೇಳಿದ ಮೇಲೆ ಮತ್ಸರಿಗಳ ಬಾಯಿಕಟ್ಟಿತು.
ನಾವು ಮಕ್ಕಳಿಗೆ ವಿದೇಶದಲ್ಲಿ ಕಲಿಸುತ್ತಿರುವುದು ಹಣ ಸಂಪಾದನೆಯ ಕುಶಲತೆಯನ್ನಷ್ಟೇ ವಿನಾ ಬೇರೇನನ್ನೂ ಅಲ್ಲ. ನಾವು ಅವರಿಗೆ ವಿದ್ಯೆಯನ್ನು ಕೊಡುತ್ತಿಲ್ಲ. ಬದಲಿಗೆ ಉದ್ಯೋಗಕ್ಕೆ ಅಣಿಗೊಳಿಸುತ್ತೇವೆ. ವಿದ್ಯೆಯೊಂದಿಗೆ ಅವರ ಸಂಬಂಧ ಏರ್ಪಡುವಂತೆ ನಾವು ಮಾಡುತ್ತಲೇ ಇಲ್ಲ. ಜ್ಞಾನ ಗಳಿಸುವುದು, ಮಾಹಿತಿ ಗಳಿಸುವುದು ವಿದ್ಯೆಯ ಒಂದು ಭಾಗ ಅಷ್ಟೆ. ಆದರೆ ವಿದ್ಯೆಯ ನಿಜವಾದ ಸಂಬಂಧ ಇರುವುದು ಜೀವನದಲ್ಲಿಯ ಶ್ರೇಷ್ಠತರ ಮೌಲ್ಯಗಳ ಜನನಕ್ಕಾಗಿ. ನಮ್ಮ ಆತ್ಮದ ಸಂಪೂರ್ಣ ವಿಕಾಸಕ್ಕಾಗಿ.
ಈ ದೃಷ್ಟಿಯಲ್ಲಿ ನೋಡಿದರೆ ನಮ್ಮ ಶಿಕ್ಷಣ ಸರಿದಾರಿಯಲ್ಲಿ ಸಾಗುತ್ತಿಲ್ಲ. ಒಂದೆಡೆ ‘ಜ್ಞಾನ’ ಹೆಚ್ಚಾಗುತ್ತಿದೆ, ಇನ್ನೊಂದೆಡೆ ಮನುಷ್ಯ ಕೆಳಮಟ್ಟಕ್ಕೆ ಇಳಿಯುತ್ತಿದ್ದಾನೆ. ಒಂದೆಡೆ ವಿಜ್ಞಾನ, ತಂತ್ರಜ್ಞಾನ ಬೆಳೆಯುತ್ತಿದೆ. ಇನ್ನೊಂದೆಡೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಒಂದೆಡೆ ಶಾಲಾ-ಕಾಲೇಜುಗಳು ದೊಡ್ಡದಾಗುತ್ತಿವೆ. ಇನ್ನೊಂದೆಡೆ ಮನುಷ್ಯನ ಮನಸ್ಸು ಸಣ್ಣದಾಗುತ್ತಿದೆ. ಒಂದೆಡೆ ವಿದ್ಯಾರ್ಥಿಗಳಿಗೆ ಮಾಹಿತಿಗಳ ಮಹಾಪೂರವೇ ಪೂರೈಕೆ ಆಗುತ್ತಿದೆ; ಇನ್ನೊಂದೆಡೆ ಮಾನವನ ಜೀವನ ಕ್ಷೀಣವಾಗುತ್ತಿದೆ. ಒಂದೆಡೆ ಮನುಷ್ಯನ ಬುದ್ಧಿ ವಿಕಾಸಗೊಳ್ಳುತ್ತಿದೆ; ಇನ್ನೊಂದೆಡೆ ಮನುಷ್ಯನು ವಿವೇಕ ಶೂನ್ಯನಾಗುತ್ತಿದ್ದಾನೆ. ಇವೆಲ್ಲವನ್ನು ನೋಡಿದರೆ ನಮ್ಮ ಶಿಕ್ಷಣದ ಮೂಲರೂಪದಲ್ಲೆ ಎಲ್ಲೋ ದೋಷ ಇರಬೇಕು ಅನ್ನಿಸುತ್ತದೆ. ವಿದ್ಯಾಲಯಗಳು, ವಿಶ್ವವಿದ್ಯಾಲಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ, ಸಮಾಜದಲ್ಲಿ ಸಭ್ಯತೆ, ಸಜ್ಜನಿಕೆ, ಪ್ರಾಮಾಣಿಕತೆ, ಮಾನವೀಯತೆ ವರ್ಷದಿಂದ ವರ್ಷಕ್ಕೆ ಕಡಮೆಯಾಗುತ್ತಿವೆ. ಈವತ್ತು ವಿದ್ಯಾವಂತರೆ ದೇಶಕ್ಕೆ ಆಸ್ತಿಯಾಗದೆ ಭಾರವಾಗುತ್ತಿದ್ದಾರೆ. ಶಿಕ್ಷಣದಲ್ಲಿ ನೈತಿಕತೆ ಹಾಗೂ ರಾಷ್ಟ್ರೀಯತೆ ಸಿಕ್ಕರೆ ಮನುಷ್ಯನು ಜೀವನಮುಖಿಯಾಗಿ, ಸಮಾಜಮುಖಿಯಾಗಿ ದೇಶಕ್ಕೊಂದು ಆಸ್ತಿಯಾಗುತ್ತಾನೆ. ಮನುಷ್ಯನನ್ನು ಜೀವನಾಭಿಮುಖಿಯಾಗಿ, ಸಮಾಜಮುಖಿಯಾಗಿ ಬೆಳೆಸುವ ಶಿಕ್ಷಣ ಹಿಂದಿನ ಗುರುಕುಲ ವಿದ್ಯಾಭ್ಯಾಸದಲ್ಲಿ ಸಿಗುತ್ತಲಿತ್ತು. ಹಿಂದಿನ ಗುರುಕುಲದಲ್ಲಿ ನಿಜವಾದ ಧಾರ್ಮಿಕ ಶಿಕ್ಷಣ ಸಿಗುತ್ತಲಿತ್ತು.
ಮೂವರು ಯುವಕರು ಗುರುಕುಲದಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ ಮನೆಗೆ ಮರಳುತ್ತಿದ್ದರು. ‘ಧರ್ಮ’ ಒಂದನ್ನು ಬಿಟ್ಟು ಬೇರೆಲ್ಲ ವಿಷಯಗಳ ಪರೀಕ್ಷೆ ಮಾಡಲಾಗಿತ್ತು. ಅವರೊಳಗೆ ಕೌತುಕವಿತ್ತು – ‘ಏಕೆ ಧರ್ಮದ ಬಗ್ಗೆ ಪರೀಕ್ಷೆಯೇ ನಡೆಸಲಿಲ್ಲ?’ ಎಂದು. ಇನ್ನು ಯಾವುದೇ ಪರೀಕ್ಷೆ ನಡೆಯಬೇಕಿರಲಿಲ್ಲ. ಏಕೆಂದರೆ ಅವರೆಲ್ಲರೂ ಉತ್ತೀರ್ಣರಾಗಿರುವರೆಂದು ಘೋಷಿಸಲಾಗಿತ್ತು.
ಗುರುಕುಲದಿಂದ ಸ್ವಲ್ಪ ದೂರ ಅವರು ಬಂದಿದ್ದರು. ಸಂಜೆಯಾಗುತ್ತ ಬಂದಿತ್ತು. ಇನ್ನೇನು ಕತ್ತಲೆ ಆಗುವುದರಲ್ಲಿತ್ತು. ಅವರು ನಡೆದು ಬರುತ್ತಿದ್ದ ಕಾಲುದಾರಿಯಲ್ಲಿ ಮುಳ್ಳಿನರಾಶಿ ಬಿದ್ದಿತ್ತು. ಒಬ್ಬ ಯುವಕ ಮುಳ್ಳಿನರಾಶಿಯನ್ನು ಹಾರಿ ದಾಟಿದ.
ಮತ್ತೊಬ್ಬ ಕಾಲುದಾರಿಯನ್ನು ಬಿಟ್ಟು ಪಕ್ಕದಿಂದ ಸಾಗಿ ಆ ಮುಳ್ಳುಗಳಿಂದ ಪಾರಾದ. ಮೂರನೆಯವ ಆ ಮುಳ್ಳಿನರಾಶಿಯನ್ನು ಕಾಲುದಾರಿಯಿಂದ ತೆಗೆದು ಪೊದೆಯೊಳಗೆ ಹಾಕಿ ಮುಂದೆ ಸಾಗಿದ. ಇವನ ಕೆಲಸವನ್ನು ನೋಡಿ ಉಳಿದಿಬ್ಬರು ಕೇಳಿದರು, “ನೀನಿದೇನು ಮಾಡುತ್ತಿರುವೆ? ನಾವು ಇನ್ನೂ ಬಹಳ ದೂರ ಹೋಗಬೇಕಾಗಿದೆ, ಕತ್ತಲೆ ಬೇರೆ, ನಾವು ಬೇಗ ಕಾಡನ್ನು ದಾಟಿ ಹೋಗಬೇಕಾಗಿದೆ.” ಆಗ ಆತ ನಸುನಕ್ಕು ಹೇಳಿದ, “ಕತ್ತಲಾಗುತ್ತಿರುವುದನ್ನು ಗಮನಿಸಿಯೇ ನಾನು ಈ ಮುಳ್ಳುಗಳನ್ನು ತೆಗೆದು ಪೊದೆಯೊಳಗೆ ಹಾಕಿದ್ದು. ಏಕೆಂದರೆ ನಮ್ಮ ಹಿಂದೆ ಬರುವ ಜನರಿಗೆ ಕತ್ತಲಲ್ಲಿ ಮುಳ್ಳುಗಳು ಕಾಣಿಸದೆ ಹೋಗಬಹುದು.”
ಈ ಮಾತು ಮುಗಿಯುವಷ್ಟರಲ್ಲಿ ಪೊದೆಯ ಹಿಂದೆ ಅಡಗಿದ್ದ ಇವರ ಆಚಾರ್ಯರು ಎದ್ದು ಬಂದು ಮೂರನೆಯ ಯುವಕನಿಗೆ ಹೇಳಿದರು, “ಮಗು, ನೀನು ಧರ್ಮದ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಿರುವೆ, ನೀನೀಗ ನಿನ್ನ ಮನೆಗೆ ಹೋಗಬಹುದು.” ಆಚಾರ್ಯರು ಉಳಿದ ಇಬ್ಬರು ಯುವಕರನ್ನು ತಮ್ಮೊಂದಿಗೆ ಗುರುಕುಲಕ್ಕೆ ಹಿಂದಕ್ಕೆ ಕರೆದುಕೊಂಡು ಹೋದರು. ಅವರ ಧರ್ಮದ ಶಿಕ್ಷಣ ಇನ್ನೂ ಪೂರ್ತಿಯಾಗಿರಲಿಲ್ಲ.
ಯಾರು ಕೇವಲ ಶಾಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮಾತ್ರಕ್ಕೆ ತಾವು ಸುಶಿಕ್ಷಿತರು ಎಂದುಕೊಂಡಿರುವರೋ ಅವರೆಲ್ಲರ ಎಣಿಕೆ ತಪ್ಪು. ವಾಸ್ತವದಲ್ಲಿ ಎಲ್ಲಿ ಶಾಲಾ ಪರೀಕ್ಷೆಗಳು ಮುಗಿಯುತ್ತವೋ ಅಲ್ಲಿಂದಲೇ ಅಸಲಿ ಶಿಕ್ಷಣ ಆರಂಭವಾಗುವುದು.
ಏಕೆಂದರೆ ಜೀವನ ಆರಂಭವಾಗುವುದು ಅಲ್ಲಿಂದಲೇ. ಧರ್ಮದ ಪರೀಕ್ಷೆ ಜೀವನವಲ್ಲದೆ ಇನ್ನೇನಿರಲು ಸಾಧ್ಯ? ಧರ್ಮವು ಜೀವನವೇ ಆಗಿದೆ. ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು, ವಿವೇಕವನ್ನು ತುಂಬಿಸುವುದೇ ನಿಜವಾದ ಧಾರ್ಮಿಕ ಶಿಕ್ಷಣ. ಹೀಗೆ ನಮ್ಮ ದೇಶದ ಗುರುಕುಲಗಳಲ್ಲಿ ಮನುಷ್ಯನನ್ನು ನಿಜವಾಗಿ ಮಾನವನನ್ನಾಗಿ ಮಾಡುವ ಶಿಕ್ಷಣ ಸಿಗುತ್ತಲಿತ್ತು. ಗುರುಕುಲದ ಇಂತಹ ಶಿಕ್ಷಣದ ಪರಿಣಾಮವಾಗಿ ನಮ್ಮ ಸಂಸ್ಕೃತಿಯ ಬೇರುಗಳು ಸಮಾಜದಲ್ಲಿ ಆಳವಾಗಿ ಬೇರೂರಿರುತ್ತಿದ್ದವು. ಅದರ ಪರಿಣಾಮವಾಗಿಯೇ ಸಹಸ್ರಾರು ವರ್ಷಗಳ ಪರಕೀಯರ ನಿರಂತರ ದಾಳಿ, ದಬ್ಬಾಳಿಕೆಯ ಹೊರತಾಗಿಯೂ ನಮ್ಮ ದೇಶವೂ, ಸಂಸ್ಕೃತಿಯೂ ಜೀವಂತವಾಗಿ ಉಳಿದಿವೆ. ಆದ್ದರಿಂದ
ಇಂತಹ ಶಿಕ್ಷಣಪದ್ಧತಿಯನ್ನು ಬದಲಿಸದೆ ಭಾರತೀಯರನ್ನು ನಾವು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಬ್ರಿಟಿಷರು ಅರಿತರು. ಭಾರತವನ್ನು ದುರ್ಬಲಗೊಳಿಸಬೇಕಾದರೆ ಅವರ ಶಿಕ್ಷಣಪದ್ಧತಿಗೆ ಹೊಡೆತ ಕೊಡಬೇಕೆಂದು ನಿರ್ಧರಿಸಿದರು.
1834ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಮೆಕಾಲೆ ಮಾತನಾಡುತ್ತಾ ಹೇಳಿದ: : “I have travelled through the length and breadth of India. But I have not found a single beggar or a thief because of this educational system and cultural heritage. If a chance is given to me I will change the educational system and separate the people of India from their cultural heritage.”
ಬ್ರಿಟಿಷ್ ಸರಕಾರ ಮೆಕಾಲೆಗೆ ಭಾರತದಲ್ಲಿ ಹೊಸ ರೀತಿಯ ಶಿಕ್ಷಣವನ್ನು ಆರಂಭಿಸಲು ಅನುಮತಿ ಕೊಟ್ಟಿತು. 1836ರಲ್ಲಿ ಈ ದೇಶದಲ್ಲಿ ಮೆಕಾಲೆ ಹೊಸ ಆಂಗ್ಲ ಶಿಕ್ಷಣ ಆರಂಭಿಸಿ ತನ್ನ ತಂದೆಗೊಂದು ಪತ್ರ ಬರೆದ: ‘ಅಪ್ಪಾ, ನಾನಿವತ್ತು ಈ ದೇಶದಲ್ಲಿ ಹೊಸ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ್ದೇನೆ. ಇನ್ನು ಕೇವಲ ನೂರು ವರ್ಷಗಳಲ್ಲಿ ಇಲ್ಲಿ ಕರಿಚರ್ಮದ ಬ್ರಿಟಿಷರು ನಿರ್ಮಾಣ ಆಗುತ್ತಾರೆ’ ಎಂಬುದಾಗಿ. ಮೆಕಾಲೆ ಅಂದು ಹೇಳಿದ ಮಾತು ಇಂದು ನಿಜವಾಗಿದೆ ಅನ್ನಿಸುತ್ತದೆ. ನಮಗೆ ಇಂದು ನಮ್ಮ ಮಹಾಪುರುಷರಾದ ಮದನ್ಲಾಲ್ ಧಿಂಗ್ರಾ ಗೊತ್ತಿಲ್ಲ, ಚಂದ್ರಶೇಖರ ಆಜಾದ್ ಗೊತ್ತಿಲ್ಲ, ಭಗತ್ಸಿಂಗ್ ಗೊತ್ತಿಲ್ಲ, ಸುಭಾಶ್ಚಂದ್ರ ಬೋಸ್ ಗೊತ್ತಿಲ್ಲ. ಆದರೆ ವಿದೇಶದಲ್ಲಿ ಕುಖ್ಯಾತರಾದ ಹಿಟ್ಲರ್, ಮುಸೊಲಿನಿ, ಬಿನ್ ಲಾಡೆನ್, ದಾವೂದ್ ಇಬ್ರಾಹಿಂ ಗೊತ್ತಿದೆ. ನಾವು ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿದ್ದೇವೆ. ನಾವು ನಮ್ಮತನವನ್ನು ಕಳೆದು ಅಪ್ಪಟ ಕರಿಚರ್ಮದ ಬ್ರಿಟಿಷರಾಗಿ ಬೆಳೆಯುತ್ತಿದ್ದೇವೆ. ಭಾರತವು ತನ್ನದೇ ಶಿಕ್ಷಣಪದ್ಧತಿಯನ್ನು ಮರೆತುದರ ಪರಿಣಾಮ ಇದು.
ಶಿಕ್ಷಣದ ಮುಖಾಂತರ ನಮ್ಮ ರಾಷ್ಟ್ರೀಯತೆಯನ್ನು ನಾಶಮಾಡಲು ಪ್ರಯತ್ನಿಸಿದ ಬ್ರಿಟಿಷರು, ಅವರ ದೇಶದಲ್ಲಿ ಶಿಕ್ಷಣದ ಮೂಲಕ ಅಲ್ಲಿಯ ಮಕ್ಕಳಲ್ಲಿ ರಾಷ್ಟ್ರೀಯತೆಯನ್ನು ಕಲಿಸುತ್ತಾರೆ. ಇಂಗ್ಲೆಂಡಿನ ಶಾಲೆಯಲ್ಲಿ ಶಾಲಾಮಕ್ಕಳು ಪ್ರಾರ್ಥನೆ ಆದ ನಂತರ, ‘O MOTHER ENGLAND, WITH ALL THY FAULTS I LOVE THEE!’ ಅಂದರೆ ‘ಅಮ್ಮಾ, ಇಂಗ್ಲೆಂಡ್, ನಿನ್ನ ಎಲ್ಲ ದೋಷಗಳ ಹೊರತಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತೇನೆ’ಎಂದು ಹೇಳುತ್ತಾರೆ. ಹೀಗೆ ಎಳೆಯ ಮಕ್ಕಳ ಮನಸ್ಸಿನಲ್ಲಿ ರಾಷ್ಟ್ರಪ್ರೇಮವನ್ನು ತುಂಬಿಸುತ್ತಾರೆ. ಅಲ್ಲಿ ರಾಷ್ಟ್ರೀಯ ಶಿಕ್ಷಣ ಸಿಗುವುದರಿಂದಲೇ ಅಲ್ಲಿಯ ಪ್ರಜೆಗಳಲ್ಲಿ ರಾಷ್ಟ್ರನಿಷ್ಠೆ, ದೇಶಾಭಿಮಾನ ಇದೆ. ಅವರಲ್ಲಿ ಎಂತಹ ದೇಶಾಭಿಮಾನ ಇದೆ ಎಂದು ಹೇಳುವುದಕ್ಕೆ ಒಂದು ನೈಜಘಟನೆಯನ್ನು ಉಲ್ಲೇಖಿಸುವುದು ಸೂಕ್ತ.
ಒಮ್ಮೆ ಇಂಗ್ಲೆಂಡಿನ ಲಂಡನ್ ನಗರದ ಒಂದು ಸಿನೆಮಾ ಮಂದಿರದ ಹೊರಗಡೆ ಎರಡು ಗುಂಪುಗಳೊಳಗೆ ಯಾವುದೊ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಆರಂಭವಾಯಿತು. ಜಗಳ ಸುಲಭದಲ್ಲಿ ನಿಲ್ಲದಿದ್ದರಿಂದ ಪೊಲೀಸರು ಬಂದರು. ಅವರು ಲಾಠಿಪ್ರಹಾರ ಮಾಡಿದರು, ಅಶ್ರುವಾಯು ಪ್ರಯೋಗ ಮಾಡಿದರು. ಯಾವುದಕ್ಕೂ ಗುಂಪುಘರ್ಷಣೆ ನಿಲ್ಲದಿದ್ದಾಗ ಕೊನೆಗೆ ಅಲ್ಲಿಯ ಪೊಲೀಸರು ಅಲ್ಲಿಯ ರಾಷ್ಟ್ರಗೀತೆಯನ್ನು ಹಾಡಿದರು. ರಾಷ್ಟ್ರಗೀತೆಯನ್ನು ಕೇಳಿದ ತಕ್ಷಣ ಅವರೆಲ್ಲರೂ ತಮ್ಮ ದ್ವೇಷದ, ಕೋಪದ ನಡುವೆಯೂ ಎಲ್ಲವನ್ನು ಮರೆತು ತಟಸ್ಥರಾಗಿ ನಿಂತರು, ರಾಷ್ಟ್ರಗೀತೆಗೆ ಗೌರವ ಕೊಡುವುದಕ್ಕಾಗಿ. ರಾಷ್ಟ್ರಗೀತೆಯನ್ನು ಪೂರ್ತಿ ಹಾಡಿದ ಮೇಲೆ ಪೆÇಲೀಸರು ಅವರನ್ನೆಲ್ಲ ಬಂಧಿಸಿ ಕರೆದುಕೊಂಡು ಹೋದರು. ಬ್ರಿಟಿಷರ ಇಂತಹ ರಾಷ್ಟ್ರಪ್ರೇಮದ ದೃಶ್ಯ ನಮ್ಮ ದೇಶದ ಯಾವುದೇ ಮೂಲೆಯಲ್ಲಿ ಕಾಣಲು ಸಿಗುತ್ತದೆಯೇ?
ನಮ್ಮ ದೇಶದಲ್ಲೂ ಹಿಂದೆ ಸಿನೆಮಾ ಮಂದಿರಗಳಲ್ಲಿ ಸಿನೆಮಾ ಆರಂಭಕ್ಕೆ ಮುಂಚೆ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮವಿತ್ತು. ಮನೋರಂಜನೆಯ ಸಮಯದಲ್ಲೂ ರಾಷ್ಟ್ರದ ನೆನಪಾಗಬೇಕು, ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದ ಸರಕಾರ ಈ ಕಾರ್ಯಕ್ರಮ ಯೋಜಿಸಿತ್ತು. ಆದರೆ ನಮಗಾದರೋ ಮೂರು ಗಂಟೆ ಸಿನೆಮಾ ನೋಡಲು ತಾಳ್ಮೆಯೂ, ಸಮಯವೂ ಇರುತ್ತಿತ್ತು, ಆದರೆ ರಾಷ್ಟ್ರಗೀತೆಗೆ ಮೂರು ನಿಮಿಷ ಎದ್ದು ನಿಂತು ಗೌರವಿಸಲು ತಾಳ್ಮೆಯಾಗಲಿ ಸಮಯವಾಗಲಿ ಇರುತ್ತಿರಲಿಲ್ಲ. ಸಿನೆಮಾದ ಅಂತ್ಯದಲ್ಲಿ ರಾಷ್ಟ್ರಗೀತೆ ಇದ್ದಾಗ ಹೆಚ್ಚಿನವರು ಥಿಯೇಟರನ್ನು ಬಿಟ್ಟು ಮನೆಗೆ ಹೋಗುತ್ತಿದ್ದರು. ಈ ರೀತಿ ರಾಷ್ಟ್ರಗೀತೆಗೆ ಆಗುತ್ತಿರುವ ಅವಮಾನವನ್ನು ಸಹಿಸಲಾರದೆ ಸರಕಾರ ಈ ಕಾರ್ಯಕ್ರಮವನ್ನು ರದ್ದುಗೊಳಿಸಿತು. ಈವತ್ತು ನಮ್ಮ ರಾಷ್ಟ್ರಗೀತೆಯಾದ ವಂದೇಮಾತರಂ ಹಾಡಲೂ ಶಾಲೆಯಲ್ಲಿ ಕೆಲವು ಮಂದಿ ಕೇಳುವುದಿಲ್ಲ. ಹೀಗೆ ನಮ್ಮ ದೇಶದಲ್ಲಿ ನಮ್ಮ ರಾಷ್ಟ್ರಕ್ಕೆ, ರಾಷ್ಟ್ರಗೀತೆಗೆ ನಮ್ಮವರಿಂದಲೇ ಅಪಮಾನವಾಗುತ್ತಿದೆ. ಇವೆಲ್ಲವೂ ಯಾವುದರ ಪರಿಣಾಮ? ನಮ್ಮ ಶಿಕ್ಷಣದಲ್ಲಿ ರಾಷ್ಟ್ರೀಯತೆ ಇಲ್ಲದುದರ ಪರಿಣಾಮ ಇದು. ನಮ್ಮ ಶಿಕ್ಷಣದಲ್ಲಿ ನೈತಿಕತೆಯನ್ನು, ರಾಷ್ಟ್ರೀಯತೆಯನ್ನು ಸೇರಿಸಿ ನಮ್ಮ ಇಂದಿನ ಮಕ್ಕಳಿಗೆ ಕಲಿಸಿದರೆ ಭವ್ಯ ಭಾರತ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ಆದರೆ ತಥಾಕಥಿತ ಬುದ್ಧಿಜೀವಿಗಳು, ಮೆಕಾಲೆ ವಾರಸಿಕರು ರಾಷ್ಟ್ರ ವಿರೋಧಿಗಳಾಗಿ ಈ ದೇಶದ ಮಹಾನ್ ಸಂಸ್ಕೃತಿಯನ್ನು, ರಾಷ್ಟ್ರೀಯತೆಯನ್ನು ಶಿಕ್ಷಣಮಾಧ್ಯಮದ ಮುಖಾಂತರವೇ ನಾಶಪಡಿಸಲು ಪ್ರಯತ್ನ ಪಡುತ್ತಿದ್ದಾರೆ. ಇನ್ನೊಂದೆಡೆಯಿಂದ ನಮ್ಮ ಸರಕಾರಗಳೂ ಶಿಕ್ಷಣಕ್ಕೆ ಸರಿಯಾದ ಆದ್ಯತೆ ಕೊಡುತ್ತಿಲ್ಲ. ನಮ್ಮ ಸರಕಾರ ಬಜೆಟ್ನಲ್ಲಿ ಕೇವಲ ಶೇಕಡಾ ಎರಡರಷ್ಟನ್ನು ಮಾತ್ರ ಶಿಕ್ಷಣಕ್ಕೆ ವಿನಿಯೋಗಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕ ಸರಕಾರದ ಶಿಕ್ಷಣ ಮಂತ್ರಿಯೊಬ್ಬರು ಹೇಳಿದರು, “ನಾವು ಶಿಕ್ಷಣಕ್ಕೆ ಹೆಚ್ಚು ಧನಸಹಾಯ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದೊಂದು ಅನುತ್ಪಾದಕ ಕ್ಷೇತ್ರ.” ಅಂದರೆ ಶಿಕ್ಷಣಕ್ಷೇತ್ರದಿಂದ ಸರಕಾರಕ್ಕೆ ನಷ್ಟವೇ ವಿನಾ ಲಾಭ ಇಲ್ಲ ಎಂದು ಅವರ ಅಭಿಮತ. ಈ ರೀತಿ ಶಿಕ್ಷಣವನ್ನು ವ್ಯಾಪಾರೀದೃಷ್ಟಿಯಲ್ಲಿ ನೋಡಿದ್ದರಿಂದಲೇ ಇಂದಿನ ಶಿಕ್ಷಣ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ.
ಈವತ್ತು ನಮ್ಮ ಶಿಕ್ಷಣಾಲಯಗಳಲ್ಲಿ ಜೀವನೋಪಾಯದ ಶಿಕ್ಷಣ ಸಿಗುತ್ತಲಿದೆ, ಆದರೆ ಜೀವನಮೌಲ್ಯದ ಶಿಕ್ಷಣ ಸಿಗುತ್ತಿಲ್ಲ. ವಿಚಾರಗಳು ಸಿಗುತ್ತಾ ಇವೆ, ಆದರೆ ಆಚಾರಗಳು ಸಿಗುತ್ತಾ ಇಲ್ಲ. ಈವತ್ತು ನಮಗೆ ಕೇವಲ ಆರ್ಥಿಕ ಶಿಕ್ಷಣ ಸಿಗುತ್ತಾ ಇದೆಯೇ ವಿನಾ ಮಾನವೀಯ ಶಿಕ್ಷಣ ಸಿಗುತ್ತಾ ಇಲ್ಲ. ಶಿಕ್ಷಣ ಕೊಡಲು ಶಾಲೆಗಳು, ವಿದ್ಯಾಲಯಗಳು, ವಿಶ್ವವಿದ್ಯಾನಿಲಯಗಳೇನೊ ನೂರಾರು, ಸಾವಿರಾರು ನಾಯಿಕೊಡೆಗಳಂತೆ ಎದ್ದು ನಿಂತಿವೆ. (ಮುಂದುವರಿಯುವುದು)