“ನೀನು ಅದೇನು ಮಾಡಿದರೂ ರುಚಿಯೇ” ನನ್ನವರ ಮೆಚ್ಚುಗೆಯ ಮಾತು.
ಮಕ್ಕಳು ನಾನು ಮಾಡಿದ ತಿಂಡಿ, ಸ್ವೀಟು ಚಪ್ಪರಿಸಿ ತಿನ್ನುತ್ತಾ, “ಅಮ್ಮಾ ಇನ್ನೂ ಸ್ವಲ್ಪ ಬೇಕಮ್ಮಾ…” ಎನ್ನುವಾಗ ಸಿಗುವ ಆನಂದ ವರ್ಣಿಸಲು ಅಸಾಧ್ಯ.
ಹೌದು, ಅಡುಗೆ ಮಾಡುವಾಗ ಮನಸ್ಸು ತುಂಬ ಪ್ರೀತಿಯನ್ನು ತುಂಬಿ ಸಂತಸದಿಂದ ಮಾಡಿ; ಆಗಲೇ ಅಡುಗೆಯು ಸ್ವಾದಿಷ್ಟವಾಗುವುದು. ಮಾಡಿದ ಅಡುಗೆಯು ಎಲ್ಲರೂ ಇಷ್ಟಪಟ್ಟು ತಿನ್ನಬೇಕು ಎಂದು ಪ್ರೀತಿಯಿಂದ ಮಾಡಿದಾಗ ಗಂಜಿ-ಚಟ್ನಿ ಮಾಡಿದರೂ ಅದು ಪರಮಾನ್ನವಾಗಿ ರುಚಿಸುವುದು. ಇದು ನನಗೆ ಎಷ್ಟೋ ಬಾರಿ ಅನುಭವಕ್ಕೆ ಬಂದಿದೆ.
“ಅಮ್ಮಾ ಏನಿದು ನೀನು ಮಾಡಿದ ದೋಸೆ-ಸಾಂಬಾರಿನ ರುಚಿ ಎಂದಿನಂತೆ ಇಲ್ಲ” – ನನ್ನ ಪುಟಾಣಿ ಬೇಸರಿಸಿಕೊಂಡು ಹೇಳಿದಾಗ ನಿಜಕ್ಕೂ ಬೇಜಾರಾಯಿತು. ಹೌದು ನಿನ್ನೆ ಅದೇನೊ ಮೋಡ ಕವಿದಿತ್ತು ನನ್ನ ಮನಸ್ಸಿಗೆ; ಒಲ್ಲದ ಮನಸ್ಸಿನಿಂದ ಅಡುಗೆಮಾಡಿದ್ದೆ. ದೋಸೆಗೆ ಉಪ್ಪು ಕಮ್ಮಿ, ಸಾಂಬಾರಿಗೆ ಹುಳಿ ಜಾಸ್ತಿ, ಒಗ್ಗರಣೆಯ ಪರಿಮಳವೂ ಇಲ್ಲ! ನನಗೇ ನನ್ನ ಅಡುಗೆ ರುಚಿಸಲಿಲ್ಲ.
ಮಳೆ ಬಂತು ಮಳೆ…. ಈವತ್ತು ಗಾರ್ಡನಿಂಗ್ ಮಾಡುವ ಹಾಗಿಲ್ಲವಲ್ಲ, ಏನಾದರೂ ಸಿಹಿ ಮಾಡೋಣ ಎಂದು ಮನಸ್ಸು ಹೇಳಿತು, ಮನದ ಮೋಡವೂ ಸರಿದಿತ್ತು. ಹುಮ್ಮಸ್ಸಿನಿಂದ ಕೈತೋಟದಲ್ಲಿ ಬೆಳೆದ ಪಪ್ಪಾಯಿಹಣ್ಣುಗಳನ್ನು ತಂದು ಹಾಡೊಂದನ್ನು ಗುನುಗುತ್ತಾ ಪಪ್ಪಾಯಿ ಹಲ್ವಾ ಮಾಡಲು ಹೊರಟೆ.
ಸಕ್ಕರೆ, ತುಪ್ಪದ ಜೊತೆಗೆ ಮನದಲ್ಲಿ ತುಂಬಿದ್ದ ಪ್ರೀತಿಯನ್ನೂ ಸುರಿದೆ. ಅಡುಗೆಕೋಣೆಗೆ ಬಂದ ಮಕ್ಕಳು, “ಹ್ಹಾ… ಘಮ ಘಮ ಪರಿಮಳ! ಏನಮ್ಮಾ ಹೊಸರುಚಿ ಇಂದು?” – ಎಂದು ಅಲ್ಲೇ ಕುಳಿತು ನೋಡತೊಡಗಿದರು.
ಹಲ್ವದ ಪರಿಮಳ, ಆಕರ್ಷಕವಾದ ಬಣ್ಣ ನೋಡಿ ಮಕ್ಕಳಿಗೆ ಚಾಕಲೇಟು ಕೂಡ ಮರೆತುಹೋಯಿತು!
ಮಕ್ಕಳ ಜತೆ ಹರಟುತ್ತಾ ಒಂದು ಗಂಟೆ ಹಲ್ವಾ ಕಾಸಿದ್ದು ಗೊತ್ತೇ ಆಗಲಿಲ್ಲ. ತಟ್ಟೆಗೆ ತುಪ್ಪ ಸವರಿ ಹಲ್ವಾ ಹರಡುವಷ್ಟು ಸಮಯ ಎಲ್ಲಿತ್ತು? ಪ್ಲೇಟ್-ಸ್ಪೂನ್ ಹಿಡಿದುಕೊಂಡು ಮಕ್ಕಳು ರೆಡಿ!
ಅಂತೂ ಇಂತೂ ಮಳೆಯ ಚಳಿಗೆ ಬಿಸಿಬಿಸಿ-ಸಿಹಿಸಿಹಿ ಪಪ್ಪಾಯಿ ಹಲ್ವಾವನ್ನು ರುಚಿ ರುಚಿಯಾಗಿ ಎಲ್ಲರೂ ತಿನ್ನುವುದನ್ನು ನೋಡಿದಾಗ ನನಗಂತೂ ಮನಸ್ಸು ತುಂಬಿತು. ನಿನ್ನೆ ಅಡುಗೆ ಮಾಡಿದ್ದು ಸರಿಯಾಗಿ ಮಕ್ಕಳು ತಿನ್ನಲಿಲ್ಲವಲ್ಲ ಎಂದು ಬೇಸರಿಸಿ ಈವತ್ತು ಮಕ್ಕಳೂ, ಮನೆಯವರೂ ಖುಷಿಯಾಗಿ ತಿನ್ನಬೇಕೆಂದು ಪ್ರೀತಿಯಿಂದ ಅಡುಗೆ ಮಾಡಿದೆ. ಹೌದು ಪ್ರೀತಿಯಿಂದ ಮಾಡಿದರೇ ಅಡುಗೆಯು ರುಚಿಸುವುದು.
“ಅಮ್ಮಾ…. ಅಮ್ಮಾ… ಚೂರು ಹಲ್ವಾ ಬೇಕಮ್ಮಾ….”
“ಹಲ್ವಾ ಸೂಪರ್, ನನಗೂ ಸ್ವಲ್ಪ ಇರಲಿ….” – ಚಪ್ಪರಿಸಿದರು ಇವರೂ.
ಇನ್ನು ನನಗೂ ಹಲ್ವಾ ಬೇಕಲ್ವಾ?!
ಇದು ರುಚಿಯ ಗುಟ್ಟು; ಯಾರಿಗೂ ಹೇಳಬೇಡಿ.