ಧೌಮ್ಯಮಹರ್ಷಿಯು ಭೀಮನ ಮಾತುಗಳನ್ನು ಕೇಳಿ ಮುಗುಳ್ನಕ್ಕು, ಶಾಸ್ತçಗಳನ್ನೆಲ್ಲ ಪರಿಶೀಲಿಸಿ – “ಭೀಮ! ಒಂದು ಉಪಾಯವಿದೆ. ಮಾಘಮಾಸದ ಶುಕ್ಷಪಕ್ಷದಲ್ಲಿ ಬರುವ ಏಕಾದಶಿ ತಿಥಿಯು ಅತ್ಯಂತ ಪುಣ್ಯದಾಯಕವಾಗಿರುತ್ತದೆ. ಅಂದು ನೀನು ಉಪವಾಸವ್ರತ ಮಾಡಿದೆಯೆಂದಾದರೆ ವರ್ಷದ ಅಷ್ಟೂ ಏಕಾದಶಿಗಳಂದು ಉಪವಾಸವ್ರತ ಮಾಡಿದುದರ ಫಲ ನಿನಗೆ ದೊರೆಯುತ್ತದೆ” ಎಂದು ಹೇಳಿದರು.
ಪಾಂಡವರು ಮಹಾ ಕೃಷ್ಣಭಕ್ತರು. ಕೃಷ್ಣನು ಶ್ರೀಹರಿಯ ಅವತಾರವೆಂದು ಅವರು ದೃಢವಾಗಿ ನಂಬಿದ್ದರು. ಪ್ರತಿ ತಿಂಗಳೂ ಹರಿಯ ದಿನವಾದ ಏಕಾದಶಿಯಂದು ಅವರೆಲ್ಲರೂ ಶ್ರದ್ಧೆಯಿಂದ ಉಪವಾಸವ್ರತವನ್ನು ಮಾಡುತ್ತಿದ್ದರು. ಅಂದು ಅವರು ಯಾವುದೇ ರೀತಿಯ ಆಹಾರವನ್ನೂ ಸೇವಿಸದೆ ಕೃಷ್ಣನ ಧ್ಯಾನದಲ್ಲಿಯೆ ನಿರತರಾಗಿರುತ್ತಿದ್ದರು.
ಭೀಮಸೇನನು ಬಾಲ್ಯದಿಂದಲೂ ಹೊಟ್ಟೆಬಾಕ. ಎಷ್ಟು ತಿಂದರೂ ಅವನಿಗೆ ಸಾಕಾಗುತ್ತಿರಲಿಲ್ಲ. ಹೀಗಿರುವಾಗ ಇಡೀ ದಿನ ಉಪವಾಸವಿರಬೇಕೆಂದರೆ ಅವನಿಗೆ ಹೇಗಾಗುತ್ತಿರಬಹುದು? ಆದುದರಿಂದ ಅವನು ಏಕಾದಶಿಯ ದಿನದಂದು ಊಟವನ್ನೇನೂ ಮಾಡುತ್ತಿರಲಿಲ್ಲ. ಆದರೆ ಹಣ್ಣುಹಂಪಲುಗಳನ್ನು ಯಥೇಚ್ಛವಾಗಿ ಸೇವಿಸುತ್ತಿದ್ದನು. ದುಶ್ಶಾಸನಾದಿಗಳಿಗೆ ಈ ವಿಷಯ ಗೊತ್ತಾಗಿ ಅವರು ಯಾವಾಗಲೂ ಭೀಮನನ್ನು ಕುರಿತು “ಇವನೆಂತಹ ಭಕ್ತ, ಹರಿಯ ದಿನದಂದೂ ಹೊಟ್ಟೆ ತುಂಬ ತಿನ್ನುತ್ತಾನೆ!’’ ಎಂದು ಹಾಸ್ಯ ಮಾಡುತ್ತಿದ್ದರು.
ಈ ವಿಷಯ ಭೀಮನಿಗೆ ತಿಳಿದಾಗ ಅವನಿಗೆ ತುಂಬ ದುಃಖವಾಯಿತು. ಹಾಗೆಂದು ಏನನ್ನೂ ತಿನ್ನದೆ ಇರುವುದಂತೂ ಅವನಿಗೆ ಸಾಧ್ಯವೇ ಇರಲಿಲ್ಲ. ಹಾಗಾಗಿ ಏನು ಮಾಡಬೇಕೆಂಬುದು ಅವನಿಗೆ ತಿಳಿಯದಾಯ್ತು.
ಕೊನೆಗೆ ಭೀಮನು ತಮ್ಮ ಪುರೋಹಿತರಾದ ಧೌಮ್ಯ ಮಹರ್ಷಿಯನ್ನು ಕಂಡು “ಗುರುವರ್ಯ! ನಾನು ಹೊಟ್ಟೆಬಾಕ ಎಂಬುದೇನೋ ನಿಜವೇ. ಅದೇ ಕಾರಣಕ್ಕೆ ದುಶ್ಶಾಸನಾದಿಗಳು ನನ್ನನ್ನು ಹಾಸ್ಯ ಮಾಡುತ್ತಾರೆ. ಪ್ರತಿ ತಿಂಗಳೂ ಏಕಾದಶಿಯಂದು ಉಪವಾಸ ಮಾಡುವುದು ನನಗೆ ತುಂಬ ಕಷ್ಟವಾಗುತ್ತಿದೆ. ಏಕೆಂದರೆ ಏಕಾದಶಿಯ ದಿನದಂದೇ ನನ್ನ ಜಠರಾಗ್ನಿಯು ಎಂದಿಗಿಂತ ಹೆಚ್ಚಾಗಿ ವಿಜೃಂಭಿಸುತ್ತದೆ. ಹಸಿವನ್ನು ತಡೆದುಕೊಳ್ಳಲು ನನಗೆ ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಅಂದು ನಾನು ಕಂದಮೂಲಗಳನ್ನೋ, ಹಣ್ಣು ಹಂಪಲುಗಳನ್ನೋ ಸೇವಿಸುತ್ತೇನೆ. ಅದಕ್ಕೂ ಈ ದುಶ್ಶಾಸನಾದಿಗಳು ಹಾಸ್ಯ ಮಾಡುತ್ತಾರೆ. ಆದ್ದರಿಂದ ನಾನು ಒಂದು ಏಕಾದಶಿಯಂದು ಉಪವಾಸ ಮಾಡಿದರೂ ವರ್ಷವಿಡೀ ಎಲ್ಲ ಏಕಾದಶಿಗಳಂದು ಉಪವಾಸ ಮಾಡಿದರೆ ಯಾವ ಪುಣ್ಯ ಬರುತ್ತದೆಯೋ ಆ ಪುಣ್ಯ ನನಗೆ ಬರುವಂತೆ ಯಾವುದಾದರೂ ಒಂದು ಉಪಾಯವನ್ನು ತಿಳಿಸಿಕೊಡಿ’’ ಎಂದು ಬೇಡಿಕೊಂಡನು.
ಧೌಮ್ಯಮಹರ್ಷಿಯು ಭೀಮನ ಮಾತುಗಳನ್ನು ಕೇಳಿ ಮುಗುಳ್ನಕ್ಕು, ಶಾಸ್ತçಗಳನ್ನೆಲ್ಲ ಪರಿಶೀಲಿಸಿ – “ಭೀಮ! ಒಂದು ಉಪಾಯವಿದೆ. ಮಾಘಮಾಸದ ಶುಕ್ಷಪಕ್ಷದಲ್ಲಿ ಬರುವ ಏಕಾದಶಿ ತಿಥಿಯು ಅತ್ಯಂತ ಪುಣ್ಯದಾಯಕವಾಗಿರುತ್ತದೆ. ಅಂದು ನೀನು ಉಪವಾಸವ್ರತ ಮಾಡಿದೆಯೆಂದಾದರೆ ವರ್ಷದ ಅಷ್ಟೂ ಏಕಾದಶಿಗಳಂದು ಉಪವಾಸವ್ರತ ಮಾಡಿದುದರ ಫಲ ನಿನಗೆ ದೊರೆಯುತ್ತದೆ’’ ಎಂದು ಹೇಳಿದರು.
ಭೀಮನಿಗೆ ಅತ್ಯಂತ ಸಂತೋಷವಾಯಿತು. “ಹಾಗೆಯೆ ಆಗಲಿ. ನಾನು ಅದರಂತೆ ಮಾಡುತ್ತೇನೆ’’ ಎಂದು ಅವನು ಹೇಳಿದನು. ಆ ವರ್ಷ ಮಾಘಮಾಸದ ಏಕಾದಶಿ ದಿನದಂದು ಅವನು ಸ್ನಾನ ಮಾಡಿ, ವ್ರತದಲ್ಲೇ ಮನಸ್ಸನ್ನಿಟ್ಟು ಹಗಲಿನ ಅನುಷ್ಠಾನಗಳನ್ನೆಲ್ಲ ಮಾಡಿದನು. ಆಮೇಲೆ ಹಸ್ತಿನಾವತಿಯ ಉದ್ಯಾನಕ್ಕೆ ಹೋಗಿ ಎಳನೀರು ಕುಡಿದು, ಕೆಲವು ತೆಂಗಿನಕಾಯಿಗಳನ್ನು ತಿಂದನು. ಕೆಲವು ಹಲಸಿನಹಣ್ಣುಗಳನ್ನೂ, ಕಬ್ಬುಗಳನ್ನೂ ತಿಂದನು. ಊಟ ಮಾಡದೆ ದಿನವನ್ನು ಕಳೆದನು. ರಾತ್ರಿ ಮತ್ತೆ ಜಾಗರಣೆಯಿಂದಿದ್ದು ಕೃಷ್ಣನ ಪೂಜೆಯನ್ನು ಮಾಡಿದನು. ದ್ವಾದಶಿಯಂದು ಮುಂಜಾನೆ ಪಾರಣೆ (ಭೋಜನ) ಮಾಡುವುದರ ಮೂಲಕ ಉಪವಾಸವ್ರತವನ್ನು ಮುಗಿಸಿದನು. ಶ್ರೀಕೃಷ್ಣನೂ ಅವನ ಭಕ್ತಿಯಿಂದ ಸಂಪ್ರೀತನಾದನು.
ಅಂದು ಮೊದಲುಗೊಂಡು ಮಾಘಮಾಸದ ಶುಕ್ಲಪಕ್ಷದ ಏಕಾದಶಿ ತಿಥಿಯು ಭೀಮೈಕಾದಶಿ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ.
– (ಪದ್ಮಪುರಾಣೇ ಉತ್ತರಖಂಡೇ)