ರಂಗವಿದ್ಯಾಧರನಾದರೋ ಈ ಋಷಿ ನನಗೆ ಹೆದರಿ ಹೊರಟುಹೋದ ಎಂದುಕೊಂಡು ಗರ್ವಪಟ್ಟನು. ಆಮೇಲೆ ಅವನು ಎಲ್ಲಿ ಹೋಗಿರಬಹುದು, ಏನು ಮಾಡುತ್ತಿರಬಹುದು ಎಂದು ಅವನಿಗೆ ಕುತೂಹಲವಾಯ್ತು. ಅದನ್ನು ತಿಳಿಯಬೇಕೆಂದು ಅವನು ಒಂದು ಹಂದಿಯ ರೂಪವನ್ನು ಧರಿಸಿ ಕಾಡಿನಲ್ಲಿ ಹುಡುಕುತ್ತ ಹೊರಟನು.
ಹಿಂದೆ ರಂಗವಿದ್ಯಾಧರನೆಂಬ ಗಂಧರ್ವನೊಬ್ಬನಿದ್ದನು. ಅವನು ಸಂಗೀತ ಮೊದಲಾದ ಸಕಲ ಕಲೆಗಳಲ್ಲಿ ಪಾರಂಗತನಾಗಿದ್ದನು.

ಒಮ್ಮೆ ಅವನು ಮನೋಹರವಾದ ಮೇರುಪರ್ವತಕ್ಕೆ ಹೋದನು. ಆಗ ಅಲ್ಲಿ ಪುಲಸ್ತ್ಯ ಮಹರ್ಷಿಯು ತಪಸ್ಸನ್ನು ಮಾಡುತ್ತ ಕುಳಿತಿದ್ದನು. ರಂಗವಿದ್ಯಾಧರನು ಪುಲಸ್ತ್ಯನು ತಪಸ್ಸು ಮಾಡುತ್ತಿದ್ದ ಪ್ರದೇಶದ ಸಮೀಪದಲ್ಲೇ ಒಂದು ಮರದ ನೆರಳಿನಲ್ಲಿ ಕುಳಿತುಕೊಂಡು ಗಟ್ಟಿಯಾದ ಸ್ವರದಿಂದ ಸಂಗೀತದ ತಾಳ-ಲಯಗಳ ಅಭ್ಯಾಸ ಮಾಡತೊಡಗಿದನು.
ಈ ಸದ್ದಿನಿಂದ ಪುಲಸ್ತ್ಯನ ತಪಸ್ಸಿಗೆ ಅಡಚಣೆಯಾಯ್ತು. ಅವನ ಮನಸ್ಸು ಚಂಚಲವಾಯ್ತು. ಸ್ವಲ್ಪ ಹೊತ್ತಾದ ಮೇಲೆ ಅವನು ರಂಗವಿದ್ಯಾಧರನನ್ನು ಕುರಿತು – “ಮಹಾನುಭಾವ! ನಿಜವಾಗಿಯೂ ನಿನ್ನ ಸಂಗೀತ ದಿವ್ಯವಾಗಿದೆ. ಅದರಿಂದ ನನ್ನ ಮನಸ್ಸು ಧ್ಯಾನವನ್ನು ಬಿಟ್ಟು ಹಿಂದಿರುಗಿತು. ಆದರೆ ನೀನು ಹೀಗೆಯೇ ಹಾಡುತ್ತಿದ್ದರೆ ನನ್ನ ಧ್ಯಾನಕ್ಕೆ ತೊಂದರೆಯಾಗುತ್ತದೆ. ದಯವಿಟ್ಟು ನೀನು ಬೇರೆ ಎಲ್ಲಿಯಾದರೂ ಹೋಗಿ ಕುಳಿತು ಅಭ್ಯಾಸ ಮಾಡು” ಎಂದು ಹೇಳಿದನು.
ಆಗ ರಂಗವಿದ್ಯಾಧರನು ಇಂತೆಂದನು – “ಸ್ವಾಮಿನ್! ಸಂಗೀತ ವಿದ್ಯೆಯೆಂದರೆ ಅದು ಆತ್ಮವಿದ್ಯೆಗೆ ಸಮಾನ. ಅದು ಎಲ್ಲರಿಗೂ ಸುಖವನ್ನು ಉಂಟುಮಾಡುತ್ತದೆಯೆ ಹೊರತು, ಯಾರಿಗೂ ದುಃಖವನ್ನು ಉಂಟುಮಾಡುವುದಿಲ್ಲ. ನವರಸಗಳೂ ಸಂಗೀತದಲ್ಲಿರುತ್ತವೆ. ಸಂಗೀತದಿಂದ ವೇದಗಳ ಕಾಂತಿಯೂ ಹೆಚ್ಚುತ್ತದೆ. ಹೀಗಿರುವಾಗ ನೀನು ಸಂಗೀತವನ್ನು ನಿಂದಿಸುತ್ತಿರುವೆಯಲ್ಲ. ಇದು ನ್ಯಾಯವೆಂದು ನನಗೆ ಅನಿಸುವುದಿಲ್ಲ.’’
ಅದನ್ನು ಕೇಳಿ ಪುಲಸ್ತ್ಯನು ಹೇಳಿದನು – “ಮಹಾನುಭಾವ! ನೀನು ಹೇಳುತ್ತಿರುವುದೆಲ್ಲ ನಿಜವೇ. ಆದರೂ ನಾನು ಹೇಳುವುದನ್ನು ಕೋಪಮಾಡಿಕೊಳ್ಳದೆ ಕೇಳು. ನಾನು ಸಂಗೀತವನ್ನು ನಿಂದಿಸುತ್ತಿಲ್ಲ. ಅದರ ಮಹತ್ತ್ವವನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ. ನಾನು ತಪಸ್ಸಿಗೆ ಕುಳಿತಿರುತ್ತೇನೆ. ಆ ಸಮಯದಲ್ಲಿ ಮನಸ್ಸು ನಿಶ್ಚಲವಾಗಿ ಧ್ಯಾನದಲ್ಲೇ ನಿರತವಾಗಿರಬೇಕು. ಹಾಗಿದ್ದರೆ ಮಾತ್ರ ತಪಸ್ಸು ಸಿದ್ಧಿಸುತ್ತದೆ. ಇಂದ್ರಿಯಗಳು ಎಷ್ಟೆಂದರೂ ಚಂಚಲವಾಗಿರುತ್ತವೆ. ಅವು ಮನುಷ್ಯನನ್ನು ವಿಷಯಸುಖಗಳ ಕಡೆಗೆ ಸೆಳೆಯುತ್ತಿರುತ್ತವೆ. ಅವುಗಳಿಂದ ಮನಸ್ಸು ಚಂಚಲವಾಗಿ ತಪಸ್ಸಿಗೆ ವಿಘ್ನವಾಗುತ್ತದೆ. ಆದುದರಿಂದಲೇ ಋಷಿಗಳು ಶಬ್ದ, ರೂಪ ಇತ್ಯಾದಿಗಳು ಇಲ್ಲದ ಸ್ಥಳಕ್ಕೆ ಹೋಗಿ ತಪಸ್ಸು ಮಾಡುತ್ತಾರೆ. ಆದ್ದರಿಂದ ನೀನು ಬೇರೆ ಕಡೆಗೆ ಹೋಗಿ ಸಂಗೀತದ ಸಾಧನೆ ಮಾಡು.’’
ಆದರೆ ರಂಗವಿದ್ಯಾಧರನು ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಅವನು “ಮಹರ್ಷೇ! ಇಂದ್ರಿಯ ಸಮೂಹವನ್ನು ಗೆಲ್ಲಬಲ್ಲವನೆ ನಿಜವಾದ ಯೋಗಿ, ಸಾಧಕ. ಶಬ್ದವನ್ನು ಕೇಳಿಯೊ, ರೂಪವನ್ನು ಕಂಡೊ ಯಾರ ಮನಸ್ಸು ಚಂಚಲವಾಗುತ್ತದೆಯೊ ಅವನೆಂತಹ ಯೋಗಿ! ನೀನು ಜಿತೇಂದ್ರಿಯನಾಗಿಲ್ಲ. ನಿಜವಾದ ಯೋಗಿಯಾಗಿದ್ದರೆ ನನ್ನ ಸಂಗೀತ ನಿನಗೆ ಬಾಧಕವೇ ಆಗುತ್ತಿರಲಿಲ್ಲ. ನಿನಗೆ ಬಾಧಕವಾಗುತ್ತದೆಯೆಂದು ನಾನೇಕೆ ಬೇರೆ ಕಡೆಗೆ ಹೋಗಬೇಕು? ಇಲ್ಲಿರುವುದಕ್ಕೆ ನಿನ್ನಷ್ಟೆ ಅಧಿಕಾರ ನನಗೂ ಇದೆ. ನಾನು ಇಲ್ಲಿಯೇ ಇರುತ್ತೇನೆ. ಬೇಕಿದ್ದರೆ ನೀನೇ ಬೇರೊಂದು ಕಡೆಗೆ ಹೋಗು” ಎಂದು ಒರಟಾಗಿ ಹೇಳಿದನು.
ಅದನ್ನು ಕೇಳಿ ಪುಲಸ್ತö್ಯನಿಗೆ ಕೋಪ ಬಂದರೂ, ಅದನ್ನು ಅವನು ನಿಗ್ರಹಿಸಿಕೊಂಡು, ಒಂದು ಕ್ಷಣ ಯೋಚನೆ ಮಾಡಿ ಅವನನ್ನು ಕ್ಷಮಿಸಿಬಿಟ್ಟನು. ಆಮೇಲೆ ತಾನೇ ಬೇರೊಂದು ಪ್ರದೇಶಕ್ಕೆ ಹೋಗಿ ಅಲ್ಲಿ ಯೋಗಮುದ್ರೆಯಲ್ಲಿ ಕುಳಿತು ಧ್ಯಾನವನ್ನು ಮುಂದುವರಿಸಿದನು.
ರಂಗವಿದ್ಯಾಧರನಾದರೋ ಈ ಋಷಿ ನನಗೆ ಹೆದರಿ ಹೊರಟುಹೋದ ಎಂದುಕೊಂಡು ಗರ್ವಪಟ್ಟನು. ಆಮೇಲೆ ಅವನು ಎಲ್ಲಿ ಹೋಗಿರಬಹುದು, ಏನು ಮಾಡುತ್ತಿರಬಹುದು ಎಂದು ಅವನಿಗೆ ಕುತೂಹಲವಾಯ್ತು. ಅದನ್ನು ತಿಳಿಯಬೇಕೆಂದು ಅವನು ಒಂದು ಹಂದಿಯ ರೂಪವನ್ನು ಧರಿಸಿ ಕಾಡಿನಲ್ಲಿ ಹುಡುಕುತ್ತ ಹೊರಟನು.
ಸಮೀಪದಲ್ಲೇ ಎಲ್ಲೋ ಪುಲಸ್ತ್ಯನು ತಪಸ್ಸನ್ನು ಆಚರಿಸುತ್ತ ಕುಳಿತಿದ್ದನು. ಈ ಹಂದಿಯು ಅವನ ಬಳಿಗೆ ಹೋಗಿ ಗಟ್ಟಿಯಾಗಿ ಕೂಗುತ್ತ ತಪಸ್ಸಿಗೆ ವಿಘ್ನ ಮಾಡತೊಡಗಿತು. ಆದರೂ ಪುಲಸ್ತ್ಯನು ವಿಚಲಿತನಾಗಲಿಲ್ಲ. ಆಗ ಹಂದಿಯು ತನ್ನ ಮೂತಿಯಿಂದ ಅವನನ್ನು ತಿವಿಯಿತು. ಎದುರಿನಲ್ಲಿ ಮಲ-ಮೂತ್ರಗಳನ್ನೂ ವಿಸರ್ಜಿಸಿತು. ಋಷಿಯು ಅಷ್ಟಾದರೂ “ಇದೊಂದು ಬುದ್ಧಿ ಇಲ್ಲದ ಪಶು’’ ಎಂದು ತಿಳಿದುಕೊಂಡು ಅದನ್ನು ಕ್ಷಮಿಸಿದನು.
ಮರುದಿನವೂ ಹಂದಿ ಮತ್ತೆ ಅಲ್ಲಿಗೆ ಹೋಗಿ ನಿನ್ನೆಯಂತೆ ಕೂಗಾಡಿತು. ಮಲಮೂತ್ರ ವಿಸರ್ಜನೆ ಮಾತ್ರವಲ್ಲದೆ ವಿಕಾರಸ್ವರದಿಂದ ಹಾಡುವುದಕ್ಕೂ ತೊಡಗಿತು. ಆಗ ಪುಲಸ್ತ್ಯನಿಗೆ ಸಂಶಯ ಬಂದು ಅವನು ದಿವ್ಯದೃಷ್ಟಿಯಿಂದ ನೋಡಿದನು. ‘ಇವನು ನಿಜವಾದ ಹಂದಿಯಲ್ಲ, ಹಂದಿಯ ರೂಪವನ್ನು ಧರಿಸಿದ ರಂಗವಿದ್ಯಾಧರ’ ಎಂಬುದು ಅವನಿಗೆ ತಿಳಿಯಿತು. ಕೂಡಲೆ ಅವನು – “ಎಲೈ ದುಷ್ಟ ಗಂಧರ್ವ! ಹಂದಿಯ ರೂಪವನ್ನು ಧರಿಸಿ ನನ್ನ ತಪಸ್ಸಿಗೆ ವಿಘ್ನವನ್ನು ಉಂಟುಮಾಡಿದೆಯಲ್ಲ, ನೀನು ನಿಜವಾದ ಹಂದಿಯ ಜನ್ಮವನ್ನೇ ಹೊಂದು’’ ಎಂದು ಶಪಿಸಿಬಿಟ್ಟನು.
ರಂಗವಿದ್ಯಾಧರನು ಭಯದಿಂದ ನಡುಗುತ್ತ ದೇವೇಂದ್ರನ ಬಳಿ ಹೋಗಿ ನಡೆದಿದ್ದೆಲ್ಲವನ್ನೂ ನಿವೇದಿಸಿಕೊಂಡನು. ದೇವೇಂದ್ರನು ಅವನೊಂದಿಗೆ ಪುಲಸ್ತ್ಯನ ಬಳಿಗೆ ಬಂದು – “ಮಹರ್ಷೇ! ಈ ಗಂಧರ್ವನು ನಿನ್ನ ವಿಷಯದಲ್ಲಿ ಅಪರಾಧ ಮಾಡಿದ್ದಾನೆ. ದಯವಿಟ್ಟು ಅದನ್ನು ಕ್ಷಮಿಸು. ಇವನ ಶಾಪವಿಮೋಚನೆ ಹೇಗೆ ಎಂಬುದನ್ನು ತಿಳಿಸು” ಎಂದು ಬೇಡಿಕೊಂಡನು.
ಪುಲಸ್ತ್ಯನು – “ದೇವೇಂದ್ರ, ನಿನ್ನ ಮೇಲಿನ ಗೌರವಕ್ಕಾಗಿ ನಾನು ಇವನನ್ನು ಕ್ಷಮಿಸುತ್ತೇನೆ. ಮುಂದೆ ಇಕ್ಷ್ವಾಕುವೆಂಬ ರಾಜನು ಹುಟ್ಟಿ ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾನೆ. ಅವನ ಬಾಣದಿಂದ ಮರಣ ಸಂಭವಿಸಿದಾಗ ಇವನು ಹಂದಿಯ ರೂಪದಿಂದ ಮುಕ್ತನಾಗಿ ಮತ್ತೆ ತನ್ನ ಗಂಧರ್ವರೂಪವನ್ನು ಪಡೆಯುವನು” ಎಂದು ತಿಳಿಸಿದನು.
ಗರ್ವ ಪಟ್ಟಿದ್ದಕ್ಕೆ ತಕ್ಕ ಶಾಸ್ತಿಯಾಯಿತೆಂದು ತಿಳಿದು ರಂಗವಿದ್ಯಾಧರನೂ, ದೇವೇಂದ್ರನೂ ಅಲ್ಲಿಂದ ಹಿಂದಿರುಗಿದರು. ಮುಂದೆ ವಿದ್ಯಾಧರನು ಹಂದಿಯಾಗಿ ಜನ್ಮ ಪಡೆದನು. ರಾಜಾ ಇಕ್ಷ್ವಾಕುವಿನ ಬಾಣದಿಂದ ಸತ್ತು ಮತ್ತೆ ಗಂಧರ್ವತ್ವವನ್ನು ಪಡೆದನು.
(ಪದ್ಮಪುರಾಣ, ಭೂಮಿಖಂಡೇ)