ಸೋಮಯ್ಯ ಒಬ್ಬ ರೈತ. ಅವನ ಸಂಸಾರ ತುಂಬ ದೊಡ್ಡದು. ತಂದೆ-ತಾಯಿ, ತಮ್ಮಂದಿರು, ತಂಗಿಯರು, ಎಲ್ಲರನ್ನೂ ಅವನೇ ಪೊರೆಯಬೇಕಾಗಿತ್ತು. ಜೊತೆಗೆ ಅವನ ಹೆಂಡತಿ, ಮಕ್ಕಳು.
ಆದರೆ ಸೋಮಯ್ಯ ಯಾವತ್ತೂ ಯಾವುದಕ್ಕೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ತನ್ನ ಪಾಲಿನ ಕೆಲಸಗಳನ್ನು ಅವನು ಪ್ರೀತಿಸುತ್ತಿದ್ದ. ಅವನ ದಿನಚರಿ ಕಷ್ಟಕರವಾಗಿತ್ತು.
ಬೆಳಗಿನ ಜಾವ ಬೇಗನೇ ಏಳುತ್ತಿದ್ದ ಸೋಮಯ್ಯ. ಸೂರ್ಯ ಮೂಡುವ ಮೊದಲೇ ಹೊಲದಲ್ಲಿರುತ್ತಿದ್ದ. ಉಳುವುದು, ಬೀಜ ಬಿತ್ತುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ಹೀಗೆ ಬೇಸಾಯದ ಕೆಲಸಗಳನ್ನೆಲ್ಲ ಶ್ರದ್ಧೆಯಿಂದ ಮಾಡುತ್ತಿದ್ದ.
ಮಧ್ಯಾಹ್ನ ಅವನ ಹೆಂಡತಿ ರೊಟ್ಟಿ-ಚಟ್ಣಿ ತೆಗೆದುಕೊಂಡು ಬರುತ್ತಿದ್ದಳು. ಅಲ್ಲೇ ಹೊಂಗೆ ಮರದ ನೆರಳಲ್ಲೇ ಅವನ ಊಟ. ಜತೆಗೆ ಹೆಂಡತಿಯ ಪ್ರೀತಿಯ ಮಾತು. ತೃಪ್ತಿಯಾಗುತ್ತಿತ್ತು ಅವನಿಗೆ. ಊಟವಾದ ಕೂಡಲೇ ಒಂದುನಿಮಿಷವನ್ನೂ ವ್ಯರ್ಥಮಾಡದೆ ಮತ್ತೆ ಜಮೀನಿನ ಕೆಲಸವನ್ನು ಮುಂದುವರಿಸುತ್ತಿದ್ದ.
ಸೋಮಯ್ಯ ಬಹಳ ದೈವಭಕ್ತ. ಜೀವನದಲ್ಲಿ ಅವನಿಗೆ ಯಾವುದೇ ಆತಂಕ, ಭಯ ಇರಲಿಲ್ಲ. “ನಮ್ಮೆಲ್ಲರನ್ನೂ ಕಾಪಾಡುವ ದೇವರೊಬ್ಬ ಇರುವಾಗ ಭಯವಾದರೂ ಯಾಕೆ?” ಎಂದು ಸದಾಕಾಲವೂ ನಿಶ್ಚಿಂತೆಯಾಗಿರುತ್ತಿದ್ದ.
ದೈವಸ್ಮರಣೆಯನ್ನಂತೂ ಅವನು ಒಂದು ವ್ರತದ ಹಾಗೆ ಪಾಲಿಸಿಕೊಂಡು ಬಂದಿದ್ದ. ಬೆಳಗ್ಗೆ ಏಳುತ್ತಿದ್ದಂತೆ “ನಾರಾಯಣ” ಎನ್ನುತ್ತಿದ್ದ. ದೇವರ ಹೆಸರಿನಿಂದಲೇ ಅವನ ಬೆಳಗು ಆರಂಭ. ಹೀಗೆ ಪ್ರಾರಂಭವಾದ ದೈವನಾಮ ಉಚ್ಚಾರಣೆ, ರಾತ್ರಿ ಮತ್ತೆ ಮಲಗುವವರೆಗೂ ಅವಿರತವಾಗಿ ನಡೆಯುತ್ತಿತ್ತು. ಉಸಿರಿನ? ಸಹಜವಾಗಿ, ಸರಾಗವಾಗಿ ನಾರಾಯಣ ಸ್ಮರಣೆ. ಅದು ಅವನ ತಪಸ್ಸು. ಹೊಲವನ್ನು ಊಳುವಾಗಲೂ, ನೆರಳಲ್ಲಿ ಕೂತಾಗಲೂ, ಮಕ್ಕಳನ್ನು ಆಡಿಸುವಾಗಲೂ ಅವನ ನಾರಾಯಣಜಪ ಮಾತ್ರ ನಿರಂತರವಾಗಿರುತ್ತಿತ್ತು. ರಾತ್ರಿ ನಿದ್ದೆಯಲ್ಲಿ, ಎಚ್ಚರವಾದಾಗಲೂ ಭಕ್ತಿಯಿಂದ ನಾರಾಯಣ ನಾರಾಯಣ ಎಂದು ಉಚ್ಚರಿಸುತ್ತಿದ್ದ.
ಹೀಗಿರುವಲ್ಲಿ ಇತ್ತ ದೇವಲೋಕದಲ್ಲಿ ಒಮ್ಮೆ ನಾರದಮುನಿಗಳಿಗೆ ಇದ್ದಕ್ಕಿದಂತೆ ’ನನ್ನಂತಹ ಶ್ರೇಷ್ಠ ಭಕ್ತನೇ ಇನ್ನಿಲ್ಲ’ ಅನ್ನುವಂಥ ಒಂದು ಅಹಂಕಾರದ ಭಾವನೆ ಬಂದೆರಗಿತು. ’ಮೂರುಹೊತ್ತೂ ದೈವಚಿಂತನೆ ಬಿಟ್ಟು ನನಗೆ ಕೆಲಸವಾದರೂ ಏನು? ಸಂಸಾರವೂ ಇಲ್ಲ. ತಾಪತ್ರಯವೂ ಇಲ್ಲ ನನಗೆ. ಭಕ್ತಿಯಿಂದ, ಒಂದೇ ಒಂದು ಕ್ಷಣವೂ ಬಿಡದಹಾಗೆ, ನಾರಾಯಣನ ಸ್ಮರಣೆ ಮಾಡಿಕೊಂಡು ಇದ್ದುಬಿಟ್ಟಿದ್ದೇನೆ. ನನ್ನಷ್ಟು ಸತತವಾಗಿ ಪರಮಾತ್ಮನ ಸ್ಮರಣೆಯನ್ನು ಮಾಡುವ ಇನ್ನೊಬ್ಬ ಇರುವುದು ಸಾಧ್ಯವೇ ಇಲ್ಲ. ನಾನೇ ಈ ಮೂರುಲೋಕಗಳಲ್ಲಿಯೂ ಪರಮಭಕ್ತ’ ಎಂದು ಬೀಗಿದರು ನಾರದರು.
ಅದೇ ಲಹರಿಯಲ್ಲಿ ಅವರು ಸ್ವತಃ ಶ್ರೀಹರಿಯ ಬಳಿಗೆ ಬಂದರು. ಸಾಧ್ಯವಾದರೆ, ಆ ದೇವರಿಂದಲೂ ಹೊಗಳಿಸಿಕೊಳ್ಳುವ ಆಸೆ ಅವರಿಗೆ.
ನಾರದರು ಬಂದಾಗ, ಯಾವುದೋ ಭಕ್ತನ ಕ?ಗಳನ್ನು ಕನವರಿಸುತ್ತಾ ಕೂತಿದ್ದ ನಾರಾಯಣ.
“ಬಾರಯ್ಯಾ, ತ್ರಿಲೋಕ ಸಂಚಾರೀ. ಏನು ಬಂದದ್ದು, ಏನು ಸಮಾಚಾರ?” ವಿ? ನಗುತ್ತಾ ಪ್ರಶ್ನಿಸಿದ.
“ಅಂಥದ್ದೇನೂ ಇಲ್ಲ ಭಗವಂತ” ನಾರದರು ಎಂದರು.
“ಯಾಕಿಲ್ಲಪ್ಪ? ನೀನು ಬಂದರೇನೆ ಅಲ್ಲೊಂದು ವರ್ತಮಾನ ಇರುತ್ತದೆ ಎಂದು ಅರ್ಥ” ಶ್ರೀಹರಿ ನಕ್ಕ.
ನಾರದರು ನಾರಾಯಣನ ಹತ್ತಿರ ಬಂದು, ಅವನ ಕಾಲುಗಳನ್ನ ಒತ್ತುತ್ತಾ ಕುಳಿತರು. ಈ ಸೇವೆ ಅವರಿಗೆ ತುಂಬ ಪ್ರಿಯವಾದದ್ದು. ನೇರವಾಗಿ ಭಗವಂತನ ಸ್ಪರ್ಶ! ಪುಳಕಿತರಾಗಿ ಬಿಡುತ್ತಿದ್ದರು.
ಮಾತಿನ ಮಧ್ಯೆ, ಆಕಸ್ಮಿಕವಾಗಿ ಎಂಬಂತೆ, “ಅಂದ ಹಾಗೆ, ನಿನ್ನ ಅತ್ಯಂತ ಶ್ರೇ? ಭಕ್ತ ಯಾರು ಪರಮಾತ್ಮ?” ನಾರದರು ಹರಿಯನ್ನು ಕೇಳಿದರು.
“ಭೂಲೋಕದಲ್ಲಿ ಸೋಮಯ್ಯ ಅನ್ನುವ ರೈತ ಇದ್ದಾನೆ ಕಣಯ್ಯಾ. ಅವನೇ ನನ್ನ ಪರಮ ಭಕ್ತ” ನಿರಾಳವಾಗಿ ಹೇಳಿಬಿಟ್ಟ ನಾರಾಯಣ.
ನಾರದರ ಗರ್ವಕ್ಕೆ ಭಾರಿ ಪೆಟ್ಟುಬಿದ್ದಂತಾಯ್ತು. “ಏನು! ಭಗವಂತ, ಹೀಗೆ ಹೇಳಿಬಿಟ್ಟೆಯಲ್ಲ; ಆ ರೈತ ಸೋಮಯ್ಯ ನನಗಿಂತ ದೊಡ್ಡಭಕ್ತನಾಗುವುದು ಸಾಧ್ಯವೇ?” ಮೆಲ್ಲಗೆ ವ್ಯಥೆಯಿಂದ ಕೇಳಿದರು.
“ಆ ವಿಷಯ ಹಾಗಿರಲಿ, ಆ ಮೂಲೆಯಲ್ಲಿ ಒಂದು ಎಣ್ಣೆ ತುಂಬಿದ ಬಟ್ಟಲು ಇದೆ. ಅದನ್ನು ನನಗೆ ತಂದುಕೊಡು. ಆದರೆ ಜಾಗ್ರತೆ. ಒಂದೇ ಒಂದು ಹನಿಯನ್ನೂ ಚೆಲ್ಲಬಾರದು. ಇದು ನಿನಗೆ ಪರೀಕ್ಷೆ ಅಂದುಕೋ ಬೇಕಾದರೆ! ನೀನು ಇದರಲ್ಲಿ ಗೆಲ್ಲಲೇಬೇಕು ನಾರದ” ನಗುತ್ತಾ ಅಪ್ಪಣೆ ಮಾಡಿದ ಭಗವಂತ.
“ಅಯ್ಯೋ, ದೇವರೇ, ಅದೇನು ಮಹಾ. ಒಂದು ಕ್ಷಣದಲ್ಲಿ ಮಾಡಿಬಿಡ್ತೀನಿ” ನಾರದರು ಎದ್ದು ಹೋದರು.
ಎಣ್ಣೆ ತುಂಬಿದ ಬಟ್ಟಲನ್ನು ಅವರು ಕೈಗೆತ್ತಿಕೊಂಡರು. ಆ ಬಟ್ಟಲೋ, ಅಂಚಿನವರೆಗೂ ಭರ್ತಿಯಾಗಿ ತುಂಬಿಬಿಟ್ಟಿತ್ತು. ಚೆಲ್ಲದೆ ತೆಗೆದುಕೊಂಡು ಹೋಗುವುದು ಪ್ರಯಾಸವೇ.
“ಇರಲಿ. ಇದೂ ಒಂದು ದೇವರ ಪರೀಕ್ಷೆ” ಎಂದು ನಾರದರು ಮೆಲ್ಲಗೆ ಬಟ್ಟಲನ್ನು ಕೈಗೆತ್ತಿಕೊಂಡರು. ತುಂಬ ಜಾಗ್ರತೆಯಿಂದ, ಒಂದೇ ಒಂದು ಹನಿಯೂ ತುಳುಕದ ಹಾಗೆ, ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ, ಅಂತೂ ಯಶಸ್ವಿಯಾಗಿ ನಡೆದು ಬಂದರು. ಬಟ್ಟಲನ್ನು ನಾರಾಯಣನ ಕೈಲಿಟ್ಟು, “ಶ್ರೀಹರಿ, ನಾನು ಗೆದ್ದೆ!” ಎಂದರು.
ನಾರಾಯಣ ನಕ್ಕ “ಅದು ಸರಿ. ಬಟ್ಟಲನ್ನು ಕೈಗೆತ್ತಿಕೊಂಡಾಗಿನಿಂದ, ಇಲ್ಲಿಯವರೆಗೆ ನೀನು ಎ?ಸಾರಿ ನನ್ನ ನಾಮಸ್ಮರಣೆ ಮಾಡಿದೆ?” ಕೀಟಲೆ ಮಾಡಿದ.
ನಾರದರು ಪೆಚ್ಚಾದರು! ಯಾಕೆಂದರೆ ಒಂದು ಸಾರಿಯೂ ಅವರು ನಾರಾಯಣ ಎಂದಿರಲೇ ಇಲ್ಲ. ಅವರ ಗಮನ ಸಂಪೂರ್ಣವಾಗಿ ಎಣ್ಣೆಬಟ್ಟಲಿನ ಮೇಲೆಯೇ ಇತ್ತು!
“ಒಂದು ಸಣ್ಣ ಕೆಲಸ ಮಾಡುವಾಗ ಕೂಡ ನಿನಗೆ ನಾನು ಮರೆತುಹೋಗುತ್ತೇನೆ. ಆದರೆ ಆ ಶ್ರಮಜೀವಿ ಸೋಮಯ್ಯ ಇಡೀದಿನ ನನ್ನನ್ನು ಬಿಡದೆ ಸ್ಮರಿಸುತ್ತ ಇರುತ್ತಾನೆ. ಅಂದ ಮೇಲೆ ಅವನು ತಾನೇ ನನ್ನ ಪರಮಭಕ್ತ?” ನಾರಾಯಣ ಹೇಳಿದ.
“ನಿಜ ನನ್ನ ದೇವರೇ. ನಾನು ಅಹಂಕಾರಪಟ್ಟೆ. ತಪ್ಪಾಯಿತು” ನಾರದರು ತಲೆತಗ್ಗಿಸಿದರು.
ಹೊಸದೊಂದು ಪಾಠ ಕಲಿತು ಹಿಂತಿರುಗಿದರು.