ಚಾಂಡಾಲನು ಇನ್ನೂ ಗಾಬರಿಯಾಗಿ ಮತ್ತಷ್ಟು ವೇಗವಾಗಿ ಓಡತೊಡಗಿ, ಅಲ್ಲೇ ಒಂದು ಕಲ್ಲನ್ನು ಎಡವಿ ಬಿದ್ದು ಕೂಡಲೇ ಮೂರ್ಛಿತನಾದನು. ವಿಷ್ಣುದಾಸನು ಬೇಗ ಬೇಗ ಅವನ ಬಳಿಗೆ ಬಂದು ತನ್ನ ಬಟ್ಟೆಯ ಸೆರಗಿನಿಂದ ಅವನ ಮುಖಕ್ಕೆ ಗಾಳಿ ಬೀಸಿದನು. ಚಾಂಡಾಲನು ಕಣ್ಣು ತೆರೆದಾಗ ವಿಷ್ಣುದಾಸನಿಗಾದ ಅಚ್ಚರಿಗೆ ಪಾರವೇ ಇರಲಿಲ್ಲ. ಏಕೆಂದರೆ ಅವನು ಸಾಕ್ಷಾತ್ ಶ್ರೀಮನ್ನಾರಾಯಣನೇ ಆಗಿದ್ದನು. ಅವನು ಚತುರ್ಭುಜಗಳಿಂದ ಕೂಡಿದ ನಿಜರೂಪದಿಂದ ಪ್ರತ್ಯಕ್ಷನಾದಾಗ ವಿಷ್ಣುದಾಸನು ಸ್ತುತಿಸಲೂ ತಿಳಿಯದೆ ಸುಮ್ಮನೆ ನಿಂತಿದ್ದನು.

ಹಿಂದೆ ಕಾಂಚೀಪಟ್ಟಣದಲ್ಲಿ ಚೋಳನೆಂಬ ರಾಜನಿದ್ದನು. ಒಮ್ಮೆ ಅವನು ಅನಂತಶಯನ ಕ್ಷೇತ್ರಕ್ಕೆ ಹೋಗಿದ್ದನು. ಅಲ್ಲಿ ಅವನು ಶ್ರೀಹರಿಯನ್ನು ಮಣಿ, ಮುತ್ತು, ಚಿನ್ನದ ಹೂಗಳು ಇತ್ಯಾದಿ ತುಂಬಾ ಬೆಲೆಬಾಳುವ ವಸ್ತುಗಳಿಂದ ವಿಧಿವತ್ತಾಗಿ ಪೂಜಿಸಿದನು. ಆಮೇಲೆ ಶ್ರೀಹರಿಗೆ ದೀರ್ಘದಂಡ ಪ್ರಣಾಮ ಮಾಡಿ ಕೆಳಗೆ ಕುಳಿತುಕೊಳ್ಳಲು ತೊಡಗಿದನು.
ಅದೇ ಹೊತ್ತಿಗೆ ಓರ್ವ ಬ್ರಾಹ್ಮಣನು ಅಲ್ಲಿಗೆ ಬಂದನು. ವಿಷ್ಣುದಾಸ ಎಂಬ ಹೆಸರಿನ ಅವನು ಶ್ರೀಹರಿಯ ಪೂಜೆಗಾಗಿ ಕೈಯಲ್ಲಿ ತುಳಸಿಯನ್ನೂ ನೀರನ್ನೂ ಹಿಡಿದುಕೊಂಡು ಬಂದಿದ್ದನು. ಅವನು ವಿಷ್ಣುಸೂಕ್ತವನ್ನು ಹೇಳಿಕೊಳ್ಳುತ್ತ ದೇವರಿಗೆ ಅಭಿಷೇಕ ಮಾಡಿ ತುಳಸಿಯ ದಳಗಳನ್ನು ಏರಿಸಿದನು. ಅವನು ಏರಿಸಿದ ತುಳಸೀದಳಗಳಿಂದ ಈಗತಾನೇ ರಾಜನು ಮಾಡಿದ್ದ ಮಣಿ-ಮುತ್ತು-ಚಿನ್ನದ ಹೂಗಳೆಲ್ಲ ಮುಚ್ಚಿಹೋದವು. ಇದರಿಂದ ರಾಜನು ಕೋಪಗೊಂಡು ಹೇಳಿದ – “ಎಲೈ ಬ್ರಾಹ್ಮಣ! ನಾನು ಮಾಡಿದ ಪೂಜೆಯನ್ನು ತುಳಸೀದಳಗಳಿಂದ ಮುಚ್ಚಿಬಿಟ್ಟೆಯಲ್ಲ! ವಿಷ್ಣುಭಕ್ತಿಯೇ ಗೊತ್ತಿಲ್ಲದ ಅಯೋಗ್ಯ ನೀನು.’’
ಅದನ್ನು ಕೇಳಿ ವಿಷ್ಣುದಾಸನಿಗೂ ಕೋಪ ಬಂದು ಅವನು – “ರಾಜನ್! ನೀನು ರಾಜ್ಯಲಕ್ಷ್ಮಿಯ ಮದದಿಂದ ಕೊಬ್ಬಿರುವೆ. ವಿಷ್ಣುಭಕ್ತಿ ಎಂಬುದು ನಿನಗೆ ಗೊತ್ತಿಲ್ಲ. ಈ ಹಿಂದೆ ಎಷ್ಟು ವಿಷ್ಣುವ್ರತಗಳನ್ನು ನೀನು ಮಾಡಿದ್ದೀಯೆ – ಹೇಳು, ನೋಡೋಣ’’ ಎಂದು ಸವಾಲು ಹಾಕಿದನು.
ರಾಜನಿಗೆ ಇನ್ನಷ್ಟು ಕೋಪ ಬಂತು. ಅವನು – “ದರಿದ್ರಬ್ರಾಹ್ಮಣ! ವಿಷ್ಣುವಿನ ಪ್ರೀತ್ಯರ್ಥ ನಾನು ಎಷ್ಟು ಕೆಲಸಗಳನ್ನು ಮಾಡಿರುವೆನೆಂದು ನಿನಗೇನು ಗೊತ್ತು? ನೀನು ಯಜ್ಞ-ಯಾಗಾದಿಗಳನ್ನು ಮಾಡಿದ್ದೀಯಾ? ಒಂದಾದರೂ ವಿಷ್ಣುದೇವಾಲಯವನ್ನು ಕಟ್ಟಿಸಿದ್ದೀಯಾ? ಇಷ್ಟಿದ್ದೂ ಹೀಗೆ ಗರ್ವ ಪಡುತ್ತಿರುವೆಯಲ್ಲ…’’ ಎಂದು ಹೇಳಿ ಆಮೇಲೆ ಅಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ – “ಮಹಾಜನರೇ, ಈ ಬ್ರಾಹ್ಮಣನು ಮೊದಲು ವಿಷ್ಣು ಸಾಕ್ಷಾತ್ಕಾರವನ್ನು ಪಡೆಯುವನೋ, ನಾನು ಮೊದಲು ಪಡೆಯುತ್ತೇನೆಯೋ ಎಂಬುದನ್ನು ನೀವೇ ನೋಡುವಿರಿ. ಆಗ ನಮ್ಮ ಭಕ್ತಿ ಏನೆಂಬುದು ನಿಮಗೆ ಅರ್ಥವಾಗುತ್ತದೆ’’ ಎಂದನು.
ಅನಂತರ ಆ ರಾಜನು ಅಲ್ಲಿಂದ ನೇರವಾಗಿ ತನ್ನ ಅರಮನೆಗೆ ಬಂದು ಅಲ್ಲಿ ಮುದ್ಗಲನೆಂಬ ಬ್ರಾಹ್ಮಣನನ್ನು ಆಚಾರ್ಯನನ್ನಾಗಿ ಮಾಡಿಕೊಂಡು ವೈಷ್ಣವಯಾಗವನ್ನು ಆರಂಭಿಸಿದನು. ಋಷಿಗಳನ್ನು ಸತ್ಕರಿಸಿದನು. ಬಹಳವಾಗಿ ಅನ್ನದಾನವನ್ನು ಮಾಡಿದನು. ಭೂರಿ ದಕ್ಷಿಣೆಯನ್ನೂ ಕೊಟ್ಟನು.
ಇತ್ತ ವಿಷ್ಣುದಾಸನು ಆ ದೇವಸ್ಥಾನದಲ್ಲಿಯೇ ನಿಂತು ವಿಷ್ಣುವಿನ ಅನುಗ್ರಹವನ್ನು ಪಡೆಯಲು ವಿವಿಧ ನಿಯಮಗಳನ್ನು ಆಚರಿಸುತ್ತ ಬಂದನು. ಅಲ್ಲಿಯೇ ತುಳಸಿಯ ವನವನ್ನು ಬೆಳೆಸಿದನು. ಏಕಾದಶೀವ್ರತವನ್ನು ಆಚರಿಸಿದನು. ದ್ವಾದಶಾಕ್ಷರೀಮಂತ್ರವನ್ನು ಯಾವಾಗಲೂ ಜಪಿಸುತ್ತಿದ್ದನು. ಎಲ್ಲ ಪ್ರಾಣಿಗಳಲ್ಲೂ ವಿಷ್ಣುವನ್ನೇ ಕಾಣುತ್ತಾ ಧಾರ್ಮಿಕ ಜೀವನವನ್ನು ಸಾಗಿಸುತ್ತಿದ್ದನು.
ಒಮ್ಮೆ ವಿಷ್ಣುದಾಸನು ನಿತ್ಯಕರ್ಮಗಳನ್ನು ಮಾಡಿ, ದೇವರಿಗೆಂದು ಅಡಿಗೆಯನ್ನು ಮಾಡಿ ಇಟ್ಟಿದ್ದನು. ಆದರೆ ಅದನ್ನು ಅವನಿಗೆ ತಿಳಿಯದಂತೆ ಯಾವನೋ ಕದ್ದುಕೊಂಡು ಹೋದನು. ಇದನ್ನು ತಿಳಿದು ವಿಷ್ಣುದಾಸನು ಮತ್ತೆ ಅಡಿಗೆ ಮಾಡಲು ಆರಂಭಿಸಿದರೆ ಸಂಜೆಯ ಪೂಜೆಗೆ ತಡವಾಗುತ್ತದೆಂದು ಭಾವಿಸಿ ಅಡಿಗೆ ಮಾಡಲೇ ಇಲ್ಲ. ಮರುದಿನವೂ ಹಾಗೆಯೇ ಆಯ್ತು. ದೇವರಿಗೆಂದು ಮಾಡಿಟ್ಟ ಅಡಿಗೆಯನ್ನು ಯಾರೋ ಕದ್ದೊಯ್ದರು. ಅಂದೂ ಅವನು ಮತ್ತೆ ಅಡಿಗೆ ಮಾಡಲಿಲ್ಲ.
ಇದೇ ರೀತಿಯಾಗಿ ಏಳು ದಿನಗಳವರೆಗೂ ನಡೆಯಿತು. ಪ್ರತಿದಿನವೂ ಅವನು ಮಾಡಿಟ್ಟ ಅಡಿಗೆಯನ್ನು ಯಾರೋ ಕದ್ದೊಯ್ಯುತ್ತಿದ್ದರು. ವಿಷ್ಣುದಾಸನಿಗೆ ತುಂಬಾ ಆಶ್ಚರ್ಯವಾಗಿ ಅವನು ಇದನ್ನು ಯಾರು ಕದಿಯುತ್ತಾರೆಂದು ಕಂಡುಹಿಡಿಯಲೇಬೇಕೆಂದು ನಿಶ್ಚಯ ಮಾಡಿದನು. ಮರುದಿನ ಅವನು ಅಡಿಗೆಯನ್ನು ಮಾಡಿ ಸಿದ್ಧವಾಗಿಟ್ಟು, ಹತ್ತಿರವೇ ಮರೆಯಾಗಿ ನಿಂತು ನೋಡುತ್ತಿದ್ದನು. ಆಗ ಒಬ್ಬ ಚಾಂಡಾಲನು ಅದನ್ನು ಕದಿಯಲೆಂದು ಬಂದನು. ಆ ಚಾಂಡಾಲನಾದರೋ ಹಸಿವಿನಿಂದ ಕಂಗೆಟ್ಟಿದ್ದನು. ಅವನ ಮುಖ ಕಳಾಹೀನವಾಗಿತ್ತು. ಅವನ ಮೈಯಲ್ಲಿ ಮೂಳೆ ಮತ್ತು ಚರ್ಮ ಮಾತ್ರವೇ ಇದ್ದವು. ಅವನು ಅಡಿಗೆಯ ಪಾತ್ರೆಯನ್ನು ಕೈಯಿಂದ ಎತ್ತಿಕೊಳ್ಳುತ್ತಿದ್ದಂತೆ ವಿಷ್ಣುದಾಸನು ಎದುರಿಗೆ ಕಾಣಿಸಿಕೊಂಡನು. ಇವನನ್ನು ನೋಡಿ ಗಾಬರಿಯಾದ ಚಾಂಡಾಲನು ಪಾತ್ರೆಯನ್ನು ಎತ್ತಿಕೊಂಡೇ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಓಡತೊಡಗಿದನು. ಅವನನ್ನು ನೋಡಿ ವಿಷ್ಣುದಾಸನ ಮನಸ್ಸಿನಲ್ಲಿ ಕನಿಕರ ಹುಟ್ಟಿತು. ಅವನು ಓಡುತ್ತಿದ್ದ ಚಾಂಡಾಲನಿಗೆ – “ಗೆಳೆಯ, ಒರಟಾದ ಬರಿಯ ಅನ್ನವನ್ನು ಹೇಗೆ ತಿನ್ನುತ್ತೀಯಾ? ಇಗೋ, ತುಪ್ಪವನ್ನು ಕೊಡುತ್ತೇನೆ, ತೆಗೆದುಕೋ’’ ಎಂದು ಹೇಳಿ ತುಪ್ಪದ ಪಾತ್ರೆಯನ್ನು ಹಿಡಿದುಕೊಂಡು ಅವನ ಹಿಂದೆಯೇ ಓಡಿದನು.
ಚಾಂಡಾಲನು ಇನ್ನೂ ಗಾಬರಿಯಾಗಿ ಮತ್ತಷ್ಟು ವೇಗವಾಗಿ ಓಡತೊಡಗಿ, ಅಲ್ಲೇ ಒಂದು ಕಲ್ಲನ್ನು ಎಡವಿ ಬಿದ್ದು ಕೂಡಲೇ ಮೂರ್ಛಿತನಾದನು. ವಿಷ್ಣುದಾಸನು ಬೇಗ ಬೇಗ ಅವನ ಬಳಿಗೆ ಬಂದು ತನ್ನ ಬಟ್ಟೆಯ ಸೆರಗಿನಿಂದ ಅವನ ಮುಖಕ್ಕೆ ಗಾಳಿ ಬೀಸಿದನು. ಚಾಂಡಾಲನು ಕಣ್ಣು ತೆರೆದಾಗ ವಿಷ್ಣುದಾಸನಿಗಾದ ಅಚ್ಚರಿಗೆ ಪಾರವೇ ಇರಲಿಲ್ಲ. ಏಕೆಂದರೆ ಅವನು ಸಾಕ್ಷಾತ್ ಶ್ರೀಮನ್ನಾರಾಯಣನೇ ಆಗಿದ್ದನು. ಅವನು ಚತುರ್ಭುಜಗಳಿಂದ ಕೂಡಿದ ನಿಜರೂಪದಿಂದ ಪ್ರತ್ಯಕ್ಷನಾದಾಗ ವಿಷ್ಣುದಾಸನು ಸ್ತುತಿಸಲೂ ತಿಳಿಯದೆ ಸುಮ್ಮನೆ ನಿಂತಿದ್ದನು. ಆ ಕೂಡಲೇ ದೇವತೆಗಳೂ ದೇವರ್ಷಿಗಳೂ ಅಲ್ಲಿಗೆ ಬಂದು ನಾರಾಯಣನನ್ನು ಸ್ತುತಿಸಿದರು.
ಬಳಿಕ ನಾರಾಯಣನು ವಿಷ್ಣುದಾಸನನ್ನು ಆಲಿಂಗಿಸಿ, ತನ್ನ ವಿಮಾನದಲ್ಲಿ ಕುಳ್ಳಿರಿಸಿಕೊಂಡು ವೈಕುಂಠದತ್ತ ತೆರಳಿದನು. ಅವರು ಪ್ರಯಾಣ ಮಾಡುತ್ತಿರುವುದನ್ನು ಯಾಗದೀಕ್ಷಿತನಾಗಿ ಕುಳಿತಿದ್ದ ಚೋಳರಾಜನು ನೋಡಿದನು. ಕೂಡಲೇ ಅವನು ತನ್ನ ಆಚಾರ್ಯನಾಗಿದ್ದ ಮುದ್ಗಲನನ್ನು ಕುರಿತು ಹೇಳಿದನು – “ಆಚಾರ್ಯ! ಯಾರಿಗೆ ಪ್ರತಿಸ್ಪರ್ಧಿಯಾಗಿ ನಾನು ಯಾಗವನ್ನು ಆರಂಭಿಸಿದೆನೋ ಅವನು ಈಗಾಗಲೆ ವೈಕುಂಠಕ್ಕೆ ಹೋಗುತ್ತಿದ್ದಾನೆ. ನಾನು ಇಷ್ಟು ಮಾಡಿದರೂ ನಾರಾಯಣನು ನನಗೆ ಪ್ರಸನ್ನನಾಗಲಿಲ್ಲ. ಆದ್ದರಿಂದ ಯಜ್ಞ-ದಾನ ಮೊದಲಾದವುಗಳಿಗಿಂತ ಭಕ್ತಿಯೇ ಹೆಚ್ಚಿನದು ಎಂಬುದು ಸಿದ್ಧವಾಯ್ತು.’’ ಹೀಗೆಂದು ಹೇಳಿ ಅವನು ಯಾಗವನ್ನು ಅಲ್ಲಿಯೇ ಬಿಟ್ಟನು. ತನಗೆ ಮಗನಿಲ್ಲದಿದ್ದುದರಿಂದ ತನ್ನ ಸೋದರಿಯ ಮಗನಿಗೆ ರಾಜ್ಯಾಭಿಷೇಕವನ್ನು ಮಾಡಿದನು.
ಬಳಿಕ ಚೋಳರಾಜನು ಯಾಗಶಾಲೆಗೆ ಹೋಗಿ ಅಲ್ಲಿ ಉರಿಯುತ್ತಿದ್ದ ಯಜ್ಞೇಶ್ವರನ ಮುಂದೆ ಕುಳಿತು, ಮೂರು ಬಾರಿ ಗಟ್ಟಿಯಾಗಿ ವಿಷ್ಣುವನ್ನು ಸಂಬೋಧಿಸಿ – “ಸ್ವಾಮಿನ್! ಕಾಯೇನ, ವಾಚಾ, ಮನಸಾ ನಿನ್ನಲ್ಲಿಯೇ ನನಗೆ ಸ್ಥಿರವಾದ ಭಕ್ತಿಯನ್ನು ಕೊಡು’’ ಎಂದು ಪ್ರಾರ್ಥಿಸಿ ಎಲ್ಲರೂ ನೋಡುತ್ತಿರುವಂತೆಯೇ ಆ ಅಗ್ನಿಯಲ್ಲಿ ಬಿದ್ದನು. ಇದೆಲ್ಲವನ್ನು ನೋಡುತ್ತಿದ್ದ ಮುದ್ಗಲನು ಕೋಪದಿಂದ ತನ್ನ ಜುಟ್ಟನ್ನು ಕಿತ್ತೆಸೆದನು. ಅಂದಿನಿಂದ ಮೌದ್ಗಲ್ಯ ಗೋತ್ರದವರೆಲ್ಲ ಜುಟ್ಟಿಲ್ಲದವರಾಗಿದ್ದಾರೆ. ಇತ್ತ ವಿಷ್ಣುವು ಯಜ್ಞಕುಂಡದಲ್ಲಿಯೇ ಪ್ರತ್ಯಕ್ಷನಾಗಿ ಚೋಳರಾಜನನ್ನು ಆಲಿಂಗಿಸಿ, ಅವನನ್ನೂ ತನ್ನೊಂದಿಗೆ ವಿಮಾನದಲ್ಲಿ ವೈಕುಂಠಕ್ಕೆ ಒಯ್ದನು. ಹೀಗೆ ವಿಷ್ಣುದಾಸ ಮತ್ತು ಚೋಳರಾಜ ಇವರಿಬ್ಬರಿಗೂ ವಿಷ್ಣುಸಾಯುಜ್ಯ ದೊರಕಿತು.
(ಉತ್ತರಖಂಡ)