ಆ ಬಡಾವಣೆಯ ಶ್ರೀಮಂತ ದೇವಸ್ಥಾನಗಳಲ್ಲಿ ಅದೊಂದು. ದೇವಸ್ಥಾನದ ವಾರ್ಷಿಕೋತ್ಸವಕ್ಕಾಗಿ ದೊಡ್ಡಮಟ್ಟದಲ್ಲಿ ಏರ್ಪಾಡು ಮಾಡಲಾಗಿತ್ತು. ದೇವಮಂದಿರವೆಲ್ಲ ತಳಿರು ತೋರಣಗಳಿಂದ, ಹೂ-ಹಾರಗಳಿಂದ, ವಿದ್ಯುತ್ ದೀಪಗಳಿಂದ ಅಲಂಕೃತವಾಗಿತ್ತು. ಸಾವಿರಾರು ಭಕ್ತರ ನಿರೀಕ್ಷೆಯಲ್ಲಿ ದೇವಳದ ಆಡಳಿತವರ್ಗ ವ್ಯಾಪಕ ಬಂದೋಬಸ್ತ್ ಮಾಡಿತ್ತು. ಮುಖ್ಯದ್ವಾರದಲ್ಲಿ ಭಕ್ತರ ನೂಕು-ನುಗ್ಗಲನ್ನು ತಡೆಯಲು, ಬೊಂಬಿನ ಬೇಲಿಗಳನ್ನು ಹಾಕಲಾಗಿತ್ತು, ಒಬ್ಬೊಬ್ಬರೇ ದೇವಸ್ಥಾನದ ಒಳಗೆ ಬರುವ ಹಾಗೆ.
ಗಂಟೆಗಟ್ಟಲೆ ಸಾಲಿನಲ್ಲಿ ಕಾದರೂ ಭಕ್ತರ ಮುಖದಲ್ಲಿ ಅತೃಪ್ತಿ ಇರಲಿಲ್ಲ. ದೇವಳದ ಸ್ಥಳ ಸಾಕಾಗದೆ ಪಕ್ಕದ ಖಾಲಿ ನಿವೇಶನದಲ್ಲೂ ತೀರ್ಥ-ಪ್ರಸಾದಗಳನ್ನು ಕೊಡಲು ಪೆಂಡಾಲನ್ನು ಹಾಕಲಾಗಿತ್ತು. ಧ್ವನಿವರ್ಧಕದಿಂದ ಆಗಾಗ ಮುಖ್ಯವಾದ ಸೂಚನೆಗಳನ್ನು ನೀಡಲಾಗುತ್ತಿತ್ತು.
ಮಾಸಿದ ಬಟ್ಟೆಯ, ಕುರುಚಲು ಗಡ್ಡದ ತೀರಬಡವನೊಬ್ಬ ತನ್ನ ಸರದಿಗಾಗಿ ಎರಡು-ಮೂರು ಗಂಟೆಗಳಿಂದ ಕಾಯುತ್ತಿದ್ದ. ತನ್ನ ಸರದಿ ಬರಲು ಇನ್ನೂ ಅಧಗಂಟೆಯಾದರೂ ಬೇಕಾಗಬಹುದು ಎಂದನಿಸಿತು ಆತನಿಗೆ. ಅಷ್ಟರಲ್ಲಿ ಬಡವನ ಹಿಂದಿನಿಂದ ಒಬ್ಬ ಆಸಾಮಿ ಎಲ್ಲರನ್ನು ತಳ್ಳಿಕೊಂಡು ಮುಂದೆ ಬರುತ್ತಿದ್ದ. ನೋಡಲು ದೃಢಕಾಯನಾಗಿದ್ದ. ಆತ ಭಾರೀ ಶ್ರೀಮಂತನಂತೆ ಕಂಡುಬಂದ. ಎಲ್ಲರನ್ನೂ ತಳ್ಳಿ ಮುಂದೆ ಬರುತ್ತಿದ್ದರೂ ಯಾರೂ ಯಾಕೆಂದು ಕೇಳಲಿಲ್ಲ. ಶ್ರೀಮಂತನಿಗಾಗಿ ಜಾಗ ಬಿಡುತ್ತಿದ್ದರು.
ಶ್ರೀಮಂತ ಭಕ್ತ, ಸಾಲಿನಲ್ಲಿದ್ದ ಬಡವ ಭಕ್ತನನ್ನು ಹಿಂದಕ್ಕೆ ತಳ್ಳಿ ಮುಂದೆ ಹೋಗಲು ಸನ್ನದ್ಧನಾದ. ತಳ್ಳಿದ ರಭಸಕ್ಕೆ ಬಡವ ಬಿದ್ದೇಬಿಟ್ಟ. ಯಾಕೆ ಸ್ವಾಮಿ ತಳ್ಳೋದು? ನಾವೆಲ್ಲ ಸಾಲಿನಲ್ಲಿ ನಿಂತಿಲ್ಲವೆ? ನೀವೂ ಸಾಲಿನಲ್ಲಿ ಬನ್ನಿ” ಅಂದ ಧೈರ್ಯವಾಗಿ. ಶ್ರೀಮಂತನಿಗೆ ಸಿಟ್ಟು ನೆತ್ತಿಗೇರಿತು. “ನೀನ್ಯಾರಯ್ಯ ಕೇಳೋದಕ್ಕೆ? ನಾನು ನಿನ್ನ ಹಾಗೆ ಸಾಧಾರಣ ಭಕ್ತನಲ್ಲ. ಈ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ಕೊಟ್ಟಿದ್ದೇನೆ. ಮಂಗಳಾರತಿ ತಟ್ಟೆಗೆ ನಾಲ್ಕಾಣೆ ಹಾಕಲು ಯೋಗ್ಯತೆ ಇಲ್ಲದಿದ್ದರೂ ನನ್ನನ್ನೇ ಪ್ರಶ್ನಿಸುತ್ತೀಯಾ?”, ಎಂದು ಜೋರು ಮಾಡಿದ.
ನೀವು ದೇಣಿಗೆ ಕೊಟ್ಟಿರಬಹುದು. ಆದರೆ ದೇವರ ದೃಷ್ಟಿಯಲ್ಲಿ ಭಕ್ತರೆಲ್ಲ ಒಂದೇ. ನೀವೂ ಸಾಲಿನಲ್ಲಿ ಬನ್ನಿ ಅಂದ ಬಡವ ಭಕ್ತ.
ಮಾತಿಗೆ ಮಾತು ಬೆಳೆಯಿತು. ಗದ್ದಲ ಹೆಚ್ಚಾಯಿತು. ಬಡವನಿಗೆ ಶ್ರೀಮಂತ ಒಂದು ಬಾರಿಸಿಯೇ ಬಿಟ್ಟ. ಬಾಯಿಂದ ರಕ್ತ ಬಂದಿತು. ಪರಿಸ್ಥಿತಿ ಮೀರುವಷ್ಟರಲ್ಲಿ ದೇವಸ್ಥಾನದ ಧರ್ಮಾಧಿಕಾರಿಗಳು ಬಂದು ಶ್ರೀಮಂತಭಕ್ತನನ್ನು ಗುರುತಿಸಿದರು. ಲಕ್ಷಾಂತರ ರೂಪಾಯಿ ದೇಣಿಗೆ ಕೊಟ್ಟ ಶ್ರೀಮಂತಭಕ್ತನನ್ನು ನೋಡುತ್ತಲೇ ಕಸಿವಿಸಿಯಾದರು. ಸ್ವಾಮಿ ನೀವು ಇಲ್ಲಿ? ಸಾಲಿನಲ್ಲಿ ಬರಲು ಏಕೆ ಹೋದಿರಿ? ಸೂಚನೆ ಕೊಟ್ಟಿದ್ದರೆ ನಾವೇ ನಿಮ್ಮನ್ನು ಮುಖ್ಯದ್ವಾರದಲ್ಲಿ ಸ್ವೀಕರಿಸುತ್ತಿದ್ದೆವು. ಇತ್ತ ಬನ್ನಿ, ಇತ್ತ ಬನ್ನಿ ಎನ್ನುತ್ತ ವಿಶೇಷ ರಕ್ಷಣೆಯಲ್ಲಿ ಶ್ರೀಮಂತಭಕ್ತನನ್ನು ಒಳಗೆ ಕರೆದೊಯ್ದರು. ಪ್ರಶ್ನಿಸಿದ್ಧ ಬಡವಭಕ್ತನನ್ನು ಎಲ್ಲರೂ ಬಾಯಿಗೆ ಬಂದಂತೆ ಬಯ್ದರು. ಭಕ್ತರನ್ನು ಒಳಗಡೆಗೆ ಸಾಲಿನಲ್ಲಿ ಬಿಡುತ್ತಿದ್ದ ಗೇಟನ್ನು ಹಾಕಲಾಯಿತು.
ಧ್ವನಿವರ್ಧಕದಲ್ಲಿ ವಿಶೇಷ ವಿವರಣೆ ಪ್ರಸಾರವಾಯಿತು. `ಭಕ್ತ ಬಾಂಧವರೇ, ನಮ್ಮ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿಗಳ ದೇಣಿಗೆ ಕೊಟ್ಟು, ಜೀರ್ಣೋದ್ಧಾರಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ಈ ಬಡಾವಣೆಯ ಅತಿ ಶ್ರೀಮಂತ ಭಕ್ತರಾದ ಶ್ರೀ ಹನುಮಂತ ಶ್ರೇಷ್ಠಿಯವರು ದೇವಸ್ಥಾನದ ಒಳಗೆ ಈಗ ಆಗಮಿಸಿದ್ದಾರೆ. ಎಲ್ಲ ಭಕ್ತರ ಹಾಗೆ ಸಾಲಿನಲ್ಲಿ ಕಾದು ತಮ್ಮ ಸರಳತೆಯನ್ನು ತೋರಿಸಿದ್ದಾರೆ. ಅಂತಹ ಭಕ್ತ ಶಿಖಾಮಣಿಗಳು ತೀರ ವಿರಳ. ಭಕ್ತರಾದ ಶ್ರೀ ಹನುಮಂತ ಶ್ರೇಷ್ಠಿಯವರ ಹೆಸರಲ್ಲಿ ಈಗ ಮಂದಿರದ ಎಲ್ಲ ದೇವರಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇತರ ಭಕ್ತರು ಅನುಸರಿಸಿಕೊಂಡು ಹೋಗಬೇಕು. ಈ ವಿಶೇಷ ಪೂಜೆಯ ನಂತರ ಭಕ್ತರು ಒಳಗೆ ಬರುವ ಗೇಟನ್ನು ತೆರೆಯಲಾಗುತ್ತದೆ….. ಇತ್ಯಾದಿ ಇತ್ಯಾದಿ………. ಘೋಷಣೆ ಮುಂದುವರಿಯಿತು.
ಬಡವಭಕ್ತನ ಸರದಿ ಬರುವಷ್ಟರಲ್ಲಿ ಗೇಟನ್ನು ಹಾಕಲಾಗಿತ್ತಷ್ಟೆ. ಏನೂ ಅರ್ಥವಾಗದೆ ಬಡವ ಕಣ್-ಕಣ್ ಬಿಟ್ಟು ನೋಡುತ್ತಿದ್ದ. ಶ್ರೀಮಂತಭಕ್ತ ಭಕ್ತಿಯಿಂದ ಕಣ್ಣು ಮುಚ್ಚಿಕೊಂಡ. ಆಗಾಗ ಬಡವಭಕ್ತನ ಕಡೆ ನೋಡುತ್ತ ವ್ಯಂಗ್ಯನಗೆಯನ್ನು ಬೀರುತ್ತಿದ್ದ. ಶ್ರೀಮಂತಭಕ್ತನ ಕುಲ-ಗೋತ್ರ-ರಾಶಿ-ನಕ್ಷತ್ರಗಳನ್ನು ಧ್ವನಿವರ್ಧಕದಲ್ಲಿ ಘೋಷಿಸಲಾಯಿತು. ಪ್ರತಿಯೊಂದು ದೇವರ ಬಳಿಯೂ ವಂಶ ವಿವರಣೆ ಮುಂದುವರಿಯಿತು. ಪ್ರತಿಯೊಂದು ದೇವರಿಗೂ, ಅರ್ಚಕರು ವಿಶೇಷ ಕಾಳಜಿಯಿಂದ ಕೈಂಕರ್ಯ ಕೈಗೊಂಡರು. ಕೊನೆಯಲ್ಲಿ ದೊಡ್ಡದೊಂದು ಹಾರ, ವಸ್ತ್ರ ಹಣ್ಣು-ಹೂಗಳನ್ನು ಪ್ರಸಾದ ರೂಪದಲ್ಲಿ ಕೊಡಲಾಯಿತು. ಕೊಟ್ಟ ಪ್ರಸಾದವನ್ನೆಲ್ಲ ಸದಸ್ಯರೊಬ್ಬರು ಬ್ಯಾಗಿನಲ್ಲಿ ತುಂಬಿಸಿ ಶ್ರೀಮಂತ ಭಕ್ತನ ಹಿಂದೆಯೇ ವಿನಯದಿಂದ ನಡೆದರು.
ಅಷ್ಟು ಹೊತ್ತಿಗೆ ಭಕ್ತರನ್ನು ಸಾಲಿನಲ್ಲಿ ಒಳಗೆ ಬಿಡುತ್ತಿದ್ದ ಸಣ್ಣಗೇಟನ್ನು ತೆಗೆಯಲಾಯಿತು. ಅರ್ಚಕರು ಎಲ್ಲರ ಕುಲ ಗೋತ್ರಗಳನ್ನು ಕೇಳುತ್ತ ಸಂಕಲ್ಪ ಮಾಡಿಸುತ್ತಿದ್ದರು.
ಮೂರು ಮಾರು ದೂರದಲ್ಲಿದ್ದ ಶ್ರೀಮಂತಭಕ್ತ ಹೊರಡುವುದರಲ್ಲಿದ್ದ. `ನಾನ್ಯಾರೆಂದು ಈಗ ತಿಳಿದಿರಬೇಕು’ ಎಂಬಂತೆ ಶ್ರೀಮಂತಭಕ್ತ ಬಡವನತ್ತ ನೋಡುತ್ತಿದ್ದ. ಅಷ್ಟರಲ್ಲಿ ಅರ್ಚಕರು ಬಡವನ ಕುಲ ಗೋತ್ರ ವಿಚಾರಿಸಿದರು. ಬಡವಭಕ್ತ ತನ್ನ ವಿವರಣೆಗಳನ್ನು ಕೊಡಲು ಅನುವಾದ. ಅದನ್ನು ಕೇಳಿ ಶ್ರೀಮಂತಭಕ್ತ `ಗಕ್’ ಎಂದು ನಿಂತು ಬಿಟ್ಟ. ಏಕೆಂದರೆ ಬಡವಭಕ್ತ ಅರ್ಚಕರಿಗೆ, ತನ್ನ ವಿವರಗಳಿಗೆ ಬದಲಾಗಿ ಶ್ರೀಮಂತನ ಹೆಸರು-ವಂಶ-ಗೋತ್ರ-ನಕ್ಷತ್ರಗಳನ್ನೇ ಕೊಡುತ್ತಿದ್ದ. ನಾಲ್ಕೈದು ಬಾರಿ ಧ್ವನಿವರ್ಧಕದ ಮೂಲಕ ಕೇಳಿದ್ದರಿಂದ ಬಡವಭಕ್ತನಿಗೆ ಆಗಲೇ ಆ ವಿವರಗಳೆಲ್ಲವೂ ಕಂಠಪಾಠವಾಗಿತ್ತು. ಸಂಕಲ್ಪವನ್ನು ಮಾಡಿಸುತ್ತಿದ್ದ ಅರ್ಚಕರಿಗೂ ಕಸಿವಿಸಿಯಾಯಿತು. ಸಿಟ್ಟಾಗಿ ಬಡವನತ್ತ ನೋಡಿದರು.
ಇದರಲ್ಲೇನೂ ತಪ್ಪಿಲ್ಲ ಸ್ವಾಮಿ, ಬಡವ ಹೇಳಿದ, ನನ್ನಂತಹ ಸಾಧಾರಣ ಭಕ್ತರೆಲ್ಲ ಏನು ಮಹಾ? ದೇವಸ್ಥಾನದ ಆಡಳಿತ ಮಂಡಳಿ ಶ್ರೀಮಂತ ಭಕ್ತರ ಕಡೆಗಿದೆ. ನಮ್ಮ ಉದ್ಧಾರ ಶ್ರೀಮಂತರ ಉದ್ಧಾರದಲ್ಲಿಯೇ ಇದೆ, ಅಲ್ಲವೆ? ಸಂಕಲ್ಪ ಮುಂದುವರಿಸಿ…. ನಮ್ಮ ಶ್ರೀಮಂತಭಕ್ತರಿಗೆ ಅಹಂಕಾರ ಹೋಗಲೆಂದು ವಿಶೇಷವಾಗಿ ಪ್ರಾರ್ಥಿಸಿರಿ. ಅರ್ಚಕರಿಗೆ ಸಿಟ್ಟೇ ಬಂದಿತು. ಕಣ್ಣುಬಿಟ್ಟು ದುರು ದುರು ನೋಡಿದರು.
ಅದನ್ನೆಲ್ಲ ನೋಡುತ್ತಿದ್ದ ಶ್ರೀಮಂತಭಕ್ತನಿಗೆ ಏನನ್ನಿಸಿತೋ ಏನೋ, ಗುಂಪನ್ನು ಸೀಳುತ್ತ ಬಡವಭಕ್ತನ ಬಳಿ ಬಂದ. ತನ್ನ ಕೊರಳಿಗೆ ಹಾಕಿದ್ದ ಪ್ರಸಾದದ ಹಾರವನ್ನು ಬಡವನ ಕೊರಳಿಗೆ ಹಾಕಿದ. ದೇವರ ಕಡೆ ತಿರುಗಿ ಅಡ್ಡಬಿದ್ದ. ಆತನ ಕಣ್ಣು ಒದ್ದೆಯಾಗಿತ್ತು.