ವೇತಾಲಸಿದ್ಧಿಲಾಭ ಎಂಬ ಮೂವತ್ತೊಂದನೆಯ ಉಪಾಖ್ಯಾನ
ರಾಜನು ತಾನು ಬಾಯಿಬಿಟ್ಟರೆ ಮೌನಭಂಗವಾಗಬಹುದೆಂಬ ಭಯದಿಂದ ಸುಮ್ಮನಿದ್ದನು. ಮತ್ತೆ ಬೇತಾಳನು: ರಾಜನ್! ನೀನು ಭಯದಿಂದ ಕಥೆಯನ್ನು ಹೇಳಲಾರೆ. ಇರಲಿ, ನಾನೇ ಒಂದು ಕಥೆಯನ್ನು ಹೇಳುವೆ. ಕಥೆಯ ಕೊನೆಯಲ್ಲಿ ಒಂದು ಪ್ರಶ್ನೆಯನ್ನೂ ಕೇಳುವೆ. ನೀನು ಅದಕ್ಕೆ ಉತ್ತರವನ್ನು ಹೇಳಬೇಕು. ಆದರೆ ನೆನಪಿಟ್ಟುಕೋ, ಉತ್ತರ ತಿಳಿದಿದ್ದರೂ ಮೌನಭಂಗದ ಭಯದಿಂದ ನೀನು ಹೇಳದಿದ್ದರೆ ತತ್ಕ್ಷಣವೇ ನಿನ್ನ ತಲೆ ಸಿಡಿದು ಸಾವಿರ ಚೂರಾಗುವುದು ಎಂದು ಹೇಳಿದನು.
ಪುನಃ ಭೋಜರಾಜನು ಸಿಂಹಾಸನದಲ್ಲಿ ಕುಳಿತುಕೊಳ್ಳಲು ಬಂದಾಗ ಮತ್ತೊಂದು ಗೊಂಬೆಯು ಅವನನ್ನು ತಡೆದು – ಎಲೈ ಭೋಜರಾಜ! ವಿಕ್ರಮರಾಜನಿಗೆ ಸಮನಾದ ಔದಾರ್ಯಾದಿ ಗುಣಗಳು ನಿನ್ನಲ್ಲಿ ಇದ್ದರೆ ಮಾತ್ರ ಈ ಸಿಂಹಾಸನದಲ್ಲಿ ಕುಳಿತುಕೊಳ್ಳಬಹುದು ಎಂದಿತು.
ರಾಜನು – ಹಾಗಿದ್ದರೆ ವಿಕ್ರಮನ ಔದಾರ್ಯವೃತ್ತಾಂತವನ್ನು ಹೇಳು ಎಂದಾಗ ಗೊಂಬೆಯು ಹೇಳತೊಡಗಿತು:
ವಿಕ್ರಮರಾಜನು ರಾಜ್ಯವಾಳುತ್ತಿದ್ದಾಗ ಒಮ್ಮೆ ಒಬ್ಬ ದಿಗಂಬರ ಸಂನ್ಯಾಸಿಯು ಸಭೆಗೆ ಬಂದು, ರಾಜನಿಗೆ ಒಂದು ಹಣ್ಣನ್ನು ಕೊಟ್ಟು ಆಶೀರ್ವದಿಸಿ ಹೀಗೆ ಹೇಳಿದನು: ರಾಜನ್! ನಾನು ಮಾರ್ಗಶೀರ್ಷಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಮಧ್ಯರಾತ್ರಿಯಲ್ಲಿ ಮಹಾಸ್ಮಶಾನದಲ್ಲಿ ಒಂದು ಹವನವನ್ನು ಮಾಡುವೆನು. ನೀನು ಪರೋಪಕಾರಿ, ಧೈರ್ಯವಂತ ಎಂಬುದು ನನಗೆ ಗೊತ್ತು. ಆ ಕಾರ್ಯದಲ್ಲಿ ನೀನು ನನ್ನ ಸಹಾಯಕನಾಗಿರಬೇಕು.
ನಾನೇನು ಮಾಡಬೇಕು? ಎಂದು ರಾಜನು ಕೇಳಿದಾಗ ಅವನು ಆ ಸ್ಮಶಾನದ ಸ್ವಲ್ಪವೇ ದೂರದಲ್ಲಿ ಒಂದು ಶಮೀವೃಕ್ಷವಿದೆ. ಆ ಮರದಲ್ಲಿ ಒಂದು ಬೇತಾಳ ನೇತಾಡುತ್ತಿರುತ್ತದೆ. ನೀನು ಅಲ್ಲಿಗೆ ಹೋಗಿ ಮೌನವಾಗಿ ಅದನ್ನು ನನ್ನ ಬಳಿಗೆ ಹೊತ್ತು ತರಬೇಕು. ಏಕೆಂದರೆ ಅದಿಲ್ಲದೆ ನನ್ನ ಕಾರ್ಯಸಿದ್ಧಿ ಆಗುವುದಿಲ್ಲ ಎಂದನು.
ರಾಜನು ಹಾಗೆಯೇ ಮಾಡುವೆನು ಎಂದು ಪ್ರತಿಜ್ಞೆ ಮಾಡಿದನು.
ಬಳಿಕ ಆ ದಿಗಂಬರನಾದ ಕ್ಷಪಣಕನು ಕೃಷ್ಣಪಕ್ಷಚತುರ್ದಶಿಯ ಮಧ್ಯರಾತ್ರಿಯಲ್ಲಿ ಹೋಮದ್ರವ್ಯಗಳನ್ನು ಹಿಡಿದುಕೊಂಡು ಮಹಾಶ್ಮಶಾನಕ್ಕೆ ಹೋದನು. ವಿಕ್ರಮನೂ ಅಲ್ಲಿಗೆ ಹೋಗಿ ಅವನು ತೋರಿಸಿದ ಶಮೀವೃಕ್ಷದ ಬಳಿಗೆ ಹೋಗಿ, ಅಲ್ಲಿ ನೇತಾಡುತ್ತಿದ್ದ ಬೇತಾಳನನ್ನು ತನ್ನ ಹೆಗಲಿಗೆ ಏರಿಸಿಕೊಂಡು ಸುಡುಗಾಡಿನ ದಾರಿಯಲ್ಲಿ ಬರುತ್ತಿದ್ದನು. ಆಗ ಬೇತಾಳನು ಎಲೈ ರಾಜನೇ, ಮಾರ್ಗದ ಶ್ರಮವನ್ನು ಹೋಗಲಾಡಿಸಲು ಯಾವುದಾದರೂ ಒಂದು ಕಥೆಯನ್ನು ಹೇಳು ಎಂದನು.
ರಾಜನು ತಾನು ಬಾಯಿಬಿಟ್ಟರೆ ಮೌನಭಂಗವಾಗಬಹುದೆಂಬ ಭಯದಿಂದ ಸುಮ್ಮನಿದ್ದನು. ಮತ್ತೆ ಬೇತಾಳನು: ರಾಜನ್! ನೀನು ಭಯದಿಂದ ಕಥೆಯನ್ನು ಹೇಳಲಾರೆ. ಇರಲಿ, ನಾನೇ ಒಂದು ಕಥೆಯನ್ನು ಹೇಳುವೆ. ಕಥೆಯ ಕೊನೆಯಲ್ಲಿ ಒಂದು ಪ್ರಶ್ನೆಯನ್ನೂ ಕೇಳುವೆ. ನೀನು ಅದಕ್ಕೆ ಉತ್ತರವನ್ನು ಹೇಳಬೇಕು. ಆದರೆ ನೆನಪಿಟ್ಟುಕೋ, ಉತ್ತರ ತಿಳಿದಿದ್ದರೂ ಮೌನಭಂಗದ ಭಯದಿಂದ ನೀನು ಹೇಳದಿದ್ದರೆ ತತ್ಕ್ಷಣವೇ ನಿನ್ನ ತಲೆ ಸಿಡಿದು ಸಾವಿರ ಚೂರಾಗುವುದು ಎಂದು ಹೇಳಿದನು.
ಅನಂತರ ಬೇತಾಳನು ಕಥೆಯನ್ನು ಹೇಳಲು ಪ್ರಾರಂಭಿಸಿದನು: ರಾಜನೇ, ಕೇಳು. ಹಿಮಾಲಯದ ದಕ್ಷಿಣಪಾರ್ಶ್ವದಲ್ಲಿ ವಿಂಧ್ಯವತೀ ಎಂಬ ನಗರ ಇದೆ. ಅಲ್ಲಿ ಸುವಿಚಾರಕ ಎಂಬ ರಾಜನು ವಾಸಿಸುತ್ತಿದ್ದನು. ಅವನ ಮಗ ಮಯಸೇನ. ಅವನು ಒಮ್ಮೆ ಬೇಟೆಗೆ ವನಕ್ಕೆ ಹೋದನು. ವನದಲ್ಲಿ ಒಂದು ಜಿಂಕೆಯನ್ನು ನೋಡಿ, ಅದನ್ನು ಹಿಂಬಾಲಿಸುತ್ತಾ ಒಂದು ದೊಡ್ಡ ಕಾಡಿಗೆ ಹೋದನು. ಜಿಂಕೆಯು ಎಲ್ಲಿಯೋ ಅದೃಶ್ಯವಾಯಿತು. ಅಲ್ಲಿಂದ ಮಯಸೇನನು ಒಬ್ಬಂಟಿಗನಾಗಿ ಯಾವುದೋ ದಾರಿಯಲ್ಲಿ ಮುಂದೆ ಹೋದನು. ಮಧ್ಯದಲ್ಲಿ ಅವನು ಒಂದು ನದಿಯನ್ನು ನೋಡಿದನು. ಆ ನದಿಯ ತೀರದಲ್ಲಿ ಒಬ್ಬ ಬ್ರಾಹ್ಮಣನು ಕುಳಿತು ಅನುಷ್ಠಾನ ಮಾಡುತ್ತಿದ್ದನು. ರಾಜಪುತ್ರನು ಅವನ ಬಳಿಗೆ ಹೋಗಿ ಎಲೈ ಬ್ರಾಹ್ಮಣ! ನಾನು ನೀರು ಕುಡಿಯುವವರೆಗೆ ನನ್ನ ಈ ಕುದುರೆಯನ್ನು ನೀನು ಹಿಡಿದುಕೋ ಎಂದನು.
ಬ್ರಾಹ್ಮಣನು ನಿನ್ನ ಕುದುರೆಯನ್ನು ಹಿಡಿದುಕೊಳ್ಳಲು ನಾನೇನು ನಿನ್ನ ಸೇವಕನೇ? ಎಂದು ಕೇಳಿದನು. ಅವನ ಆ ಮಾತನ್ನು ಕೇಳಿ ರಾಜಕುಮಾರನಿಗೆ ತುಂಬಾ ಕೋಪ ಬಂತು. ಅವನು ತನ್ನ ಕೈಯಲ್ಲಿದ್ದ ಚಾಟಿಯಿಂದ ಆ ಬ್ರಾಹ್ಮಣನಿಗೆ ಹೊಡೆದನು. ಬ್ರಾಹ್ಮಣನು ಅಳುತ್ತಲೇ ಕೂಡಲೇ ಅಲ್ಲಿಂದ ನಗರಕ್ಕೆ ಬಂದು ಮಹಾರಾಜನಿಗೆ ನಡೆದಿದ್ದೆಲ್ಲವನ್ನೂ ನಿವೇದಿಸಿದನು. ರಾಜಕುಮಾರನ ದುರ್ವರ್ತನೆಯನ್ನೂ ತಿಳಿಸಿದನು. ಅದನ್ನು ಕೇಳಿ ಮಹಾರಾಜನಿಗೆ ಕೋಪ ಬಂದಿತು. ಅವನು ಮಂತ್ರಿಗೆ ದುಷ್ಟನಾದ ಈ ರಾಜಪುತ್ರನನ್ನು ದೇಶದಿಂದ ಹೊರಹಾಕಿರಿ ಎಂದು ಆದೇಶಿಸಿದನು.
ಆ ಸಮಯದಲ್ಲಿ ಮಂತ್ರಿಯು ರಾಜನ್! ಇವನು ರಾಜ್ಯವನ್ನು ಅನುಭವಿಸುವುದಕ್ಕೆ ಯೋಗ್ಯನಾದ ಕುಮಾರ. ಇವನನ್ನು ದೇಶದಿಂದ ಹೊರಹಾಕಬಾರದು. ಅದು ಉಚಿತವಲ್ಲ ಎಂದನು.
ರಾಜನು ಎಲೈ ಮಂತ್ರಿಯೇ, ಇದು ಉಚಿತವೇ. ಯಾಕೆಂದರೆ ಇವನು ಬ್ರಾಹ್ಮಣನನ್ನು ಚಾಟಿಯಿಂದ ಹೊಡೆದಿದ್ದಾನೆ. ಆದ್ದರಿಂದ ಇವನಿಗೆ ಈ ಶಿಕ್ಷೆ ಯೋಗ್ಯವಾದುದೇ. ನೀನು ಪುರಾಣವನ್ನು ಕೇಳಿಲ್ಲವೇ? ಎಲ್ಲಿ ಬ್ರಾಹ್ಮಣರನ್ನು ಪೀಡಿಸುತ್ತಾರೋ ಅಲ್ಲಿ ಸುಖವು ದೊರೆಯಲಾರದು ಎಂಬುದಕ್ಕೆ ಅಲ್ಲಿ ಅನೇಕ ಉದಾಹರಣೆಗಳಿವೆ. ಈ ಪಾಪಕಾರ್ಯಕ್ಕೆ ಶಿಕ್ಷೆಯಾಗಿ ದೇಶದಿಂದ ಹೊರಹಾಕುವುದು ಮಾತ್ರವಲ್ಲ, ಅವನ ಕೈಯನ್ನು ಕತ್ತರಿಸಬೇಕು ಎಂದನು. ಹೀಗೆ ಹೇಳಿ ಅವನು ಮಗನ ಕೈಯನ್ನು ಕತ್ತರಿಸಲು ಮುಂದಾದನು.
ಆಗ ಬ್ರಾಹ್ಮಣನು ಮುಂದೆ ಬಂದು ರಾಜನ್! ಅವನು ಅಜ್ಞಾನದಿಂದ ನನ್ನನ್ನು ಹೊಡೆದಿದ್ದಾನೆ. ಇನ್ನು ಮುಂದೆ ಈ ರೀತಿಯ ಅನುಚಿತವಾದ ಕೆಲಸವನ್ನು ಅವನು ಮಾಡುವುದಿಲ್ಲ. ಆದ್ದರಿಂದ ರಾಜಪುತ್ರನನ್ನು ಕ್ಷಮಿಸಬೇಕು. ನಾನು ಪ್ರಸನ್ನನಾಗಿದ್ದೇನೆ ಎಂದು ಹೇಳಿದನು. ರಾಜನು ಅವನ ಮಾತನ್ನು ಕೇಳಿ ತನ್ನ ಮಗನನ್ನು ಶಿಕ್ಷೆಯಿಂದ ಮುಕ್ತಿಗೊಳಿಸಿದನು. ಬ್ರಾಹ್ಮಣನು ತನ್ನ ಮನೆಗೆ ಹೋದನು.
ಹೀಗೆಂದು ಕತೆಯನ್ನು ಹೇಳಿ ಬೇತಾಳನು ಎಲೈ ರಾಜನೆ! ನನ್ನದೊಂದು ಪ್ರಶ್ನೆಯಿದೆ. ಬ್ರಾಹ್ಮಣ ಮತ್ತು ರಾಜ ಇವರಿಬ್ಬರಲ್ಲಿ ಯಾರು ಹೆಚ್ಚಿನವನು? ಎಂದು ಕೇಳಿದನು.
ರಾಜನು – ನಿಶ್ಚಯವಾಗಿಯೂ ರಾಜನೇ ಹೆಚ್ಚಿನವನು ಎಂದನು.
ಹೀಗೆ ವಿಕ್ರಮನ ಮೌನಭಂಗವಾದಾಗ ಬೇತಾಳನು ಶಮೀವೃಕ್ಷಕ್ಕೆ ಹೋಗಿ ಮತ್ತೆ ಮೊದಲಿನಂತೆ ನೇತಾಡತೊಡಗಿದನು. ವಿಕ್ರಮನು ಪುನಃ ಅಲ್ಲಿಗೆ ಹೋಗಿ ಅದನ್ನು ತನ್ನ ಭುಜದಲ್ಲಿ ಇರಿಸಿಕೊಂಡು ಬಂದನು. ಆಗ ಅದು ಪುನಃ ಕಥೆಯನ್ನು ಹೇಳಿತು. ಹೀಗೆ ಇಪ್ಪತ್ತೈದು ಕತೆಗಳನ್ನು ಬೇತಾಳನು ಹೇಳಿದನು. ಒಂದೊಂದು ಕಥೆಯ ಕೊನೆಯಲ್ಲಿಯೂ ಅವನು ಒಂದು ಪ್ರಶ್ನೆ ಕೇಳುತ್ತಿದ್ದನು. ವಿಕ್ರಮನು ಎಲ್ಲ ಪ್ರಶ್ನೆಗಳಿಗೂ ಸಮುಚಿತವಾದ ಉತ್ತರವನ್ನು ಕೊಡುತ್ತಿದ್ದನು. ಅವನ ಪಾಂಡಿತ್ಯದಿಂದ ಬೇತಾಳನು ಸಂತೋಷಗೊಂಡನು.
ಅವನು ವಿಕ್ರಮನಿಗೆ ರಾಜನ್! ಈ ದಿಗಂಬರ ಸಂನ್ಯಾಸಿ ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ, ಎಚ್ಚರಿಕೆಯಿಂದಿರು ಎಂದನು.
ರಾಜನು ಅದು ಹೇಗೆ? ಎಂದು ಕೇಳಲು ಬೇತಾಳನು ನೀನು ನನ್ನನ್ನು ತೆಗೆದುಕೊಂಡು ಹೋದಾಗ ದಿಗಂಬರನು ನೀನು ಬಳಲಿದ್ದೀಯೆ, ಈ ಅಗ್ನಿಕುಂಡವನ್ನು ಪ್ರದಕ್ಷಿಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿ ಮೊದಲಿನ ಸ್ಥಾನಕ್ಕೆ ಹೋಗು ಎಂದು ಹೇಳುವನು. ಅದನ್ನು ಕೇಳಿ ನೀನು ದೀರ್ಘದಂಡ ನಮಸ್ಕಾರ ಮಾಡುವಾಗ ಖಡ್ಗಪ್ರಹಾರದಿಂದ ನಿನ್ನನ್ನು ಕೊಂದು ನಿನ್ನ ಮಾಂಸದಿಂದ ಹೋಮವನ್ನು ಮಾಡುವನು. ಹೀಗೆ ಮಾಡಿದರೆ ಅಣಿಮಾದಿ ಎಂಟು ಸಿದ್ಧಿಗಳು ಅವನ ಕೈವಶವಾಗುತ್ತವೆ ಎಂದನು.
ವಿಕ್ರಮನು – ಹಾಗಾದರೆ ನಾನೇನು ಮಾಡಲಿ? ಎಂದು ಕೇಳಿದನು.
ಬೇತಾಳನು ದಿಗಂಬರನು ನಿನಗೆ ನೀನು ದೀರ್ಘದಂಡ ನಮಸ್ಕಾರ ಮಾಡಿ ನಿನ್ನ ಸ್ಥಾನಕ್ಕೆ ಹೋಗು ಎಂದು ಹೇಳುವಾಗ ನೀನು ಸ್ವಾಮಿನ್, ನಾನು ಸಾರ್ವಭೌಮ. ಎಲ್ಲಾ ರಾಜರೂ ನನಗೆ ನಮಸ್ಕಾರ ಮಾಡುತ್ತಾರೆಯೇ ಹೊರತು ನಾನು ಯಾರಿಗೂ ಎಂದಿಗೂ ನಮಸ್ಕಾರ ಮಾಡಿಲ್ಲ. ಹಾಗಾಗಿ ದೀರ್ಘದಂಡ ನಮಸ್ಕಾರ ಹೇಗೆ ಮಾಡಬೇಕೆಂದು ನನಗೆ ಗೊತ್ತಿಲ್ಲ. ನೀನೇ ಮೊದಲು ದೀರ್ಘದಂಡ ನಮಸ್ಕಾರ ಮಾಡಿ ತೋರಿಸು. ಅದನ್ನು ನೋಡಿ ಅನಂತರ ನಾನು ಹಾಗೇ ಮಾಡುವೆ ಎಂದು ಹೇಳು. ಬಳಿಕ ಅವನು ನಮಸ್ಕರಿಸಲು ಬಾಗಿದಾಗ ಯೋಚನೆ ಮಾಡದೆ ಅವನ ತಲೆಯನ್ನು ಕತ್ತರಿಸು. ಅದರಿಂದ ಅಣಿಮಾದಿ ಸಿದ್ಧಿಗಳು ನಿನಗೇ ವಶವಾಗುತ್ತವೆ ಎಂದನು.
ಬೇತಾಳನ ಮಾರ್ಗದರ್ಶನ ಪಡೆದು ವಿಕ್ರಮರಾಜನು ಹಾಗೇ ಮಾಡಿದನು. ದುಷ್ಟನಾದ ದಿಗಂಬರಸಂನ್ಯಾಸಿಯ ಕತ್ತನ್ನು ಕತ್ತರಿಸಿದನು. ಅಣಿಮಾದಿ ಅಷ್ಟಸಿದ್ಧಿಗಳನ್ನೂ ತಾನೇ ಪಡೆದುಕೊಂಡನು. ಬಳಿಕ ಬೇತಾಳನು ರಾಜನ್! ನಿನ್ನ ಧೈರ್ಯ ಪರಾಕ್ರಮಗಳಿಂದ ನಾನು ಪ್ರಸನ್ನನಾಗಿದ್ದೇನೆ. ಬೇಕಾದ ವರವನ್ನು ಬೇಡಿಕೋ ಎಂದನು.
ರಾಜನು ನೀನು ನನ್ನಲ್ಲಿ ಪ್ರಸನ್ನನಾಗಿದ್ದರೆ ನಾನು ನಿನ್ನನ್ನು ನೆನಪಿಸಿಕೊಂಡಾಗ ನನ್ನ ಎದುರು ಬರಬೇಕು ಎಂದನು. ಬೇತಾಳನು ಹಾಗೇ ಆಗಲಿ ಎಂದು ಹೇಳಿ ಅಲ್ಲಿಂದ ಹೊರಟು ಹೋದನು.
ಈ ಕಥೆಯನ್ನು ಹೇಳಿ ಗೊಂಬೆಯು ರಾಜನ್! ನಿನ್ನಲ್ಲಿ ಈ ರೀತಿಯ ಔದಾರ್ಯ ಮೊದಲಾದ ಗುಣಗಳು ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ ಎಂದಿತು.
ರಾಜನು ಸುಮ್ಮನಾದನು.
ಪುತ್ತಲಿಕಾಶಾಪವಿಮೋಚನ ಎಂಬ ಮೂವತ್ತೆರಡನೆಯ ಉಪಾಖ್ಯಾನ
ಭೋಜರಾಜನು ಮತ್ತೆ ಸಿಂಹಾಸನದಲ್ಲಿ ಕುಳಿತುಕೊಳ್ಳಲು ತೊಡಗಿದಾಗ ಸಿಂಹಾಸನದಲ್ಲಿದ್ದ ಕೊನೆಯ ಗೊಂಬೆಯು ಅವನಿಗೆ ಹೇಳಿತು – ರಾಜನ್! ವಿಕ್ರಮನಿಗೆ ಸರಿಸಮನಾದ ಇನ್ನೊಬ್ಬ ರಾಜನು ಭೂಮಂಡಲದಲ್ಲಿ ಇಲ್ಲ. ಅವನು ಕೈಯಲ್ಲಿ ಖಡ್ಗವನ್ನು ಹಿಡಿದು ಭೂಮಂಡಲದಲ್ಲಿ ಸಂಚರಿಸಿ ಎಲ್ಲ ರಾಜರನ್ನೂ ಗೆದ್ದು ಸಾರ್ವಭೌಮನಾಗಿ ರಾಜ್ಯವನ್ನು ಪಾಲಿಸಿದ್ದಾನೆ. ಭೂಮಂಡಲದಲ್ಲಿ ಇರುವ ಎಲ್ಲಾ ರಾಜರನ್ನು ತನ್ನ ವಶದಲ್ಲಿರಿಸಿಕೊಳ್ಳುವ ಮಂತ್ರವನ್ನು ಪ್ರಯೋಗಿಸಿದ್ದಾನೆ. ಎಲ್ಲ ದುರ್ಜನರನ್ನು ನಾಶಮಾಡಿ, ಬಡವರ ದಾರಿದ್ರ್ಯವನ್ನು ನಿವಾರಿಸಿ, ಭಿಕ್ಷುಕರಿಲ್ಲದಂತೆ ಸುರಾಜ್ಯವನ್ನು ಸ್ಥಾಪಿಸಿ ಮೆರೆದಿದ್ದಾನೆ. ಅವನಲ್ಲಿದ್ದಂತಹ ಔದಾರ್ಯಾದಿ ಗುಣಗಳು ನಿನ್ನಲ್ಲಿ ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ ಎಂದಿತು.
ಅದನ್ನು ಕೇಳಿ ಭೋಜರಾಜನು ಸುಮ್ಮನಾದನು. ಆಗ ಆ ಮೂವತ್ತೆರಡನೆಯ ಗೊಂಬೆಯು – ರಾಜನ್! ವಿಕ್ರಮನು ಅಸಾಧಾರಣನಾಗಿದ್ದನು ಎಂಬುದು ನಿಜವೇ. ಹಾಗೆಂದು ನೀನೂ ಸಹ ಸಾಮಾನ್ಯನಲ್ಲ. ನೀವಿಬ್ಬರೂ ನರ-ನಾರಾಯಣರ ಅವತಾರರೂಪಗಳೇ ಆಗಿದ್ದೀರಿ. ಆ ಕಾರಣದಿಂದ ನಿನ್ನಂತಹ ಪವಿತ್ರಚಾರಿತ್ರ್ಯವುಳ್ಳ ಸಕಲಕಲಾಪ್ರವೀಣನೂ ಔದಾರ್ಯಾದಿ ಶ್ರೇಷ್ಠ ಗುಣಗಳಿಂದ ಕೂಡಿರುವ ರಾಜನು ವರ್ತಮಾನಕಾಲದಲ್ಲಿ ಮತ್ತೊಬ್ಬನಿಲ್ಲ. ನಿನ್ನ ಅನುಗ್ರಹದಿಂದ ಇದೀಗ ಗೊಂಬೆಗಳ ರೂಪದಲ್ಲಿದ್ದ ನಾವು ಮೂವತ್ತೆರಡು ಮಂದಿಗೂ ಪಾಪವು ಕಳೆದು ಶಾಪಮುಕ್ತಿ ಲಭಿಸಿದೆ ಎಂದಿತು.
ಭೋಜನು ಅದು ಹೇಗೆ? ನೀವು ಮಾಡಿದ ಪಾಪವೇನು? ನಿಮ್ಮ ಶಾಪವೃತ್ತಾಂತವೇನು? ಎಂದು ಕೇಳಿದನು.
ಆಗ ಆ ಗೊಂಬೆಯು ಹೇಳತೊಡಗಿತು – ರಾಜನ್! ನಾವು ಮೂವತ್ತೆರಡು ಮಂದಿ ಸುರಾಂಗನೆಯರು. ನಾವು ಪಾರ್ವತೀದೇವಿಯ ನರ್ತಕಿಯರು. ಅವಳಿಗೆ ನಾವೆಂದರೆ ತುಂಬ ಪ್ರೀತಿಯಾಗಿತ್ತು. ನಮ್ಮ ಹೆಸರುಗಳು ಹೀಗಿವೆ – ಮಿಶ್ರಕೇಶೀ, ಪ್ರಭಾವತೀ, ಸುಪ್ರಭಾ, ಇಂದ್ರಸೇನಾ, ಸುದತೀ, ಅನಂಗನಯನಾ, ಕುರಂಗನಯನಾ, ಲಾವಣ್ಯವತೀ, ಕಾಮಕಲಿಕಾ, ಚಂಡಿಕಾ, ವಿದ್ಯಾಧರೀ, ಪ್ರಜ್ಞಾವತೀ, ಜನಮೋಹಿನೀ, ವಿದ್ಯಾವತೀ, ನಿರುಪಮಾ, ಹರಿಮಧ್ಯಾ, ಮದನಸುಂದರೀ, ವಿಲಾಸರಸಿಕಾ, ಶೃಂಗಾರಕಲಿಕಾ, ಮನ್ಮಥಸಂಜೀವಿನೀ, ರತಿಲೀಲಾ, ಮದನವತೀ, ಚಿತ್ರರೇಖಾ, ಸುರತಗಹ್ವರಾ, ಪ್ರಿಯದರ್ಶನಾ, ಕಾಮೋನ್ಮಾದಿನೀ, ಸುಖಸಾಗರಾ, ಶಶಿಕಲಾ, ಚಂದ್ರರೇಖಾ, ಹಂಸಗಾಮಿನೀ, ಕಾಮರಸಿಕಾ ಮತ್ತು ಉನ್ಮಾದಿನೀ.
ಒಮ್ಮೆ ಪಾರ್ವತೀ-ಪರಮೇಶ್ವರರು ವಿಹಾರಮಂದಿರದಲ್ಲಿ ಪರಮಪ್ರೀತಿಯಿಂದ ಪರಸ್ಪರರನ್ನು ವಿಲಾಸದಿಂದ ನೋಡುತ್ತಾ ವಿಹರಿಸುತ್ತಿದ್ದರು. ಆಗ ದುರ್ಬುದ್ಧಿ ಮತ್ತು ಸ್ತ್ರೀಸಹಜವಾದ ಕುತೂಹಲದಿಂದ ನಾವು ಅವರನ್ನು ನೋಡಿದೆವು. ಅದನ್ನು ಕಂಡು ಪಾರ್ವತೀದೇವಿಯು ಕೋಪಗೊಂಡು – ನೀವೆಲ್ಲರೂ ನಿರ್ಜೀವಗೊಂಬೆಗಳಾಗಿ ಇಂದ್ರನ ಸಿಂಹಾಸನದಲ್ಲಿ ಅಂಟಿಕೊಂಡಿರಿ ಎಂದು ಶಾಪ ಕೊಟ್ಟಳು.
ಬಳಿಕ ನಾವೆಲ್ಲ ನಮಸ್ಕಾರಪೂರ್ವಕವಾಗಿ ಕ್ಷಮೆಯನ್ನು ಬೇಡಿ ದೇವಿ, ನಮ್ಮ ಶಾಪದ ಕೊನೆ ಹೇಗೆ? ಎಂದು ಕೇಳಿದೆವು.
ಆಗ ದೇವಿಯು – ಆ ಸಿಂಹಾಸನದಲ್ಲಿ ಮುಂದೆ ವಿಕ್ರಮಾದಿತ್ಯನು ಕುಳಿತುಕೊಳ್ಳುತ್ತಾನೆ. ಆಮೇಲೆ ಕಾಲಕ್ರಮದಲ್ಲಿ ಅದು ಭೋಜರಾಜನಿಗೆ ದೊರೆಯುತ್ತದೆ. ಅವನು ನಿಮ್ಮ ಬಾಯಿಂದ ವಿಕ್ರಮನ ಚರಿತೆಯನ್ನು ಕೇಳಿದಾಗ ನಿಮಗೆ ಶಾಪವಿಮೋಚನೆ ಆಗುತ್ತದೆ ಎಂದು ಹೇಳಿದಳು.
ದೀರ್ಘಕಾಲದ ಅನಂತರ ಇಂದು ನಿನ್ನ ಅನುಗ್ರಹದಿಂದ ನಾವು ಶಾಪವಿಮುಕ್ತರಾಗಿದ್ದೇವೆ. ಇನ್ನು ಪಾರ್ವತೀ-ಪರಮೇಶ್ವರರನ್ನೂ ನೋಡಿ ಧನ್ಯರಾಗುತ್ತೇವೆ. ನೀನು ಈ ಸಿಂಹಾಸನದ ಮೇಲೆ ದೇವಾಲಯವನ್ನು ನಿರ್ಮಿಸಿ ಅಷ್ಟದಳಗಳಿರುವ ಕಮಲದಲ್ಲಿ ಉಮಾಮಹೇಶ್ವರಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಷೋಡಶೋಪಚಾರ ಪೂಜೆಯನ್ನು ಮಾಡಿಸು. ವರ್ಣಾಶ್ರಮಧರ್ಮಗಳನ್ನು ಅನುಸರಿಸುವವರನ್ನು ರಕ್ಷಿಸುತ್ತಾ ಭೂಮಿಯನ್ನು ಆಳು. ಅದರಿಂದ ಅವರು ಸಂತುಷ್ಟರಾಗಿ ನಿನ್ನ ಎಲ್ಲ ಬಯಕೆಗಳನ್ನು ಪೂರೈಸುತ್ತಾರೆ ಎಂದು ಹೇಳಿದವು.
ಉಪಸಂಹಾರ
ಹೀಗೆ ಆ ಗೊಂಬೆಯು ಮಾತು ಮುಗಿಸಲಾಗಿ ಎಲ್ಲಾ ಗೊಂಬೆಗಳೂ ಸ್ತ್ರೀ ರೂಪವನ್ನು ಪಡೆದು ಮೊದಲಿನಂತೆ ದೇವಾಂಗನೆಯರಾಗಿ ನರ್ತಕಿಯರಾದರು. ಅನಂತರ ಅವರು ಭೋಜರಾಜನಿಂದ ಅನುಮತಿಯನ್ನು ಪಡೆದು ನೇರವಾಗಿ ಕೈಲಾಸಶಿಖರಕ್ಕೆ ಬಂದು ಪಾರ್ವತೀ-ಪರಮೇಶ್ವರರಿಗೆ ವಂದಿಸಿದರು.
ಪಾರ್ವತೀದೇವಿಯು ಅವರನ್ನು ನೋಡಿ ಅತ್ಯಂತ ಸಂತೋಷದಿಂದ ಆಶೀರ್ವಾದ ಮಾಡಿ, ಅನುಗ್ರಹಿಸಿ ಪರಮೇಶ್ವರನಿಗೆ – ಪ್ರಭೋ! ಅಂದು ನಾನು ಕ್ರೋಧವನ್ನು ಸಹಿಸಲು ಸಾಧ್ಯವಾಗದೆ ಇವರಿಗೆ ಯಾವ ಶಾಪವನ್ನು ಕೊಟ್ಟೆನೋ ಅದರ ಮೂಲಕವಾಗಿ ಸಕಲ ಲೋಕಚಿತ್ತಚಮತ್ಕಾರಕಾರಿಯೂ, ದಯೆ ಪರೋಪಕಾರ ಮೊದಲಾದ ಗುಣಗಳಲ್ಲಿ ಪ್ರವೃತ್ತಿಯನ್ನು ಉಂಟು ಮಾಡುವಂಥಹದೂ ಆದ ಈ ವಿಕ್ರಮಾದಿತ್ಯನ ಚರಿತ್ರೆಯು ನಿನ್ನ ಮುಖದಿಂದ ಹೊರಬಂತು. ಇದು ಜಗತ್ತಿಗೆ ಹಿತವನ್ನುಂಟುಮಾಡಲಿ. ಇವರೂ ನಿನ್ನ ಅನುಗ್ರಹದಿಂದ ನೃತ್ಯ, ಗೀತೆ, ಕಲೆಗಳಲ್ಲಿ ಎಲ್ಲ ಕಡೆ ಪ್ರಸಿದ್ಧಿಯನ್ನು ಪಡೆಯಲಿ ಎಂದು ಹೇಳಿದಳು.
ಪರಮೇಶ್ವರನು ಮುಗುಳ್ನಗುತ್ತಾ ಹಾಗೆಯೇ ಆಗಲಿ ಎಂದನು.
(ಕಥಾಮಾಲಿಕೆ ಮುಗಿಯಿತು.)