ಒಮ್ಮೆ ಅವಳು ಹೀಗೇ ಉದ್ಯಾನದಲ್ಲಿದ್ದ ಸರೋವರದಲ್ಲಿ ಸಖಿಯರೊಂದಿಗೆ ಜಲಕ್ರೀಡೆ ಆಡುತ್ತಿದ್ದಳು. ಅದೇ ಹೊತ್ತಿಗೆ ಕುಬೇರನ ಸೇವಕನಾದ ಗೋಭಿಲನೆಂಬ ರಾಕ್ಷಸನು ಆಕಾಶಮಾರ್ಗದಲ್ಲಿ ಸಂಚಾರಮಾಡುತ್ತಾ ಅಲ್ಲಿಗೆ ಬಂದನು. ಪದ್ಮಾವತಿಯ ಸೌಂದರ್ಯವನ್ನು ಕಂಡು ಅವನಿಗೆ ವಿಸ್ಮಯವಾಯಿತು. ಇವಳೇನು ರತಿದೇವಿಯೋ, ಲಕ್ಷ್ಮಿದೇವಿಯೋ, ಶಚೀದೇವಿಯೋ ಎಂದು ಅವನಿಗೆ ಸಂಶಯವಾಯಿತು. ಕೂಡಲೇ ಅವನು ಜ್ಞಾನದೃಷ್ಟಿಯಿಂದ ಪರಿಶೀಲಿಸಿದಾಗ ಇವಳು ಸತ್ಯಕೇತುವಿನ ಮಗಳೂ, ಉಗ್ರಸೇನನ ಮಡದಿಯೂ ಆಗಿರುವ ಪದ್ಮಾವತಿ ಎಂದು ತಿಳಿದುಕೊಂಡನು. ಅವಳ ಸೌಂದರ್ಯವನ್ನು ಕಂಡು ಅವನು ಮುಗ್ಧನಾಗಿಬಿಟ್ಟನು. ಇಷ್ಟೊಂದು ಸುಂದರಿಯಾದ ಹೆಂಡತಿಯನ್ನು ಬಿಟ್ಟು ಆ ಉಗ್ರಸೇನನು ಹೇಗೆ ಜೀವಿಸಿರಬಹುದೆಂದು ಅವನಿಗೆ ಆಶ್ಚರ್ಯವಾಯಿತು.
ಮಥುರೆಯಲ್ಲಿ ಉಗ್ರಸೇನನೆಂಬ ಮಹಾರಾಜನಿದ್ದನು. ತರುಣನಾದ ಅವನು ನ್ಯಾಯದಿಂದ ಪ್ರಜೆಗಳನ್ನು ಪಾಲಿಸುತ್ತಿದ್ದನು. ಹೀಗಿರಲು ವಿದರ್ಭದೇಶದಲ್ಲಿ ಸತ್ಯಕೇತುವೆಂಬ ರಾಜನಿದ್ದನು. ಅವನಿಗೆ ಪದ್ಮಾವತಿಯೆಂಬ ಸುಂದರಿಯಾದ ಮಗಳಿದ್ದಳು. ಉಗ್ರಸೇನನು ಪದ್ಮಾವತಿಯನ್ನು ಮದುವೆ ಮಾಡಿಕೊಂಡನು. ಮದುವೆಯಾದ ಮೇಲೆ ಗಂಡನ ಮನೆಗೆ ಬಂದ ಪದ್ಮಾವತಿಯು ತನ್ನ ಸದ್ಗುಣಗಳಿಂದ ಗಂಡನನ್ನು ಸಂಪ್ರೀತಗೊಳಿಸಿದಳು. ದಂಪತಿಗಳು ಅತ್ಯಂತ ಅನ್ಯೋನ್ಯವಾಗಿದ್ದರು.
ಕೆಲವು ತಿಂಗಳು ಕಳೆದವು. ಒಮ್ಮೆ ಪದ್ಮಾವತಿಯ ತಾಯಿ ತಂದೆಯರಿಗೆ ಮಗಳನ್ನು ನೋಡಬೇಕೆಂಬ ಇಚ್ಛೆಯಾಯಿತು. ಆಗ ಅವರು ಮಥುರೆಗೆ ದೂತರನ್ನು ಕಳಿಸಿಕೊಟ್ಟರು. ದೂತರು ಮಥುರೆಗೆ ಬಂದು, ಉಗ್ರಸೇನನನ್ನು ಕಂಡು ನಮಸ್ಕರಿಸಿ, ತಾವು ತಂದ ಕಾಣಿಕೆಗಳನ್ನೆಲ್ಲ ಸಮರ್ಪಿಸಿ – “ಪದ್ಮಾವತಿಯನ್ನು ಕಾಣಬೇಕೆಂದು ಅವಳ ತಾಯಿತಂದೆಯರಿಗೆ ಇಚ್ಛೆಯಾಗಿದೆ, ದಯವಿಟ್ಟು ಅವಳನ್ನು ಕಳಿಸಿಕೊಡು’’ ಎಂದು ನಿವೇದಿಸಿಕೊಂಡರು.
ಉಗ್ರಸೇನನು ಹಾಗೇ ಆಗಲೆಂದು ಹೆಂಡತಿಯನ್ನು ತವರುಮನೆಗೆ ಕಳಿಸಿಕೊಟ್ಟನು. ತವರುಮನೆಗೆ ಬಂದ ಪದ್ಮಾವತಿಯು ತಂದೆತಾಯಿಯರನ್ನು ಕಂಡು ಸಂತೋಷದಿಂದ ಕುಣಿದಾಡಿದಳು. ತನ್ನ ಬಾಲ್ಯದ ಸಖಿಯರೊಂದಿಗೆ ಸೇರಿ ಚಿಕ್ಕಂದಿನಲ್ಲಿದ್ದಂತೆಯೇ ಇಷ್ಟಬಂದ ಹಾಗೆ ಆಟವಾಡಿದಳು. ಅವರೊಂದಿಗೆ ಅರಮನೆ, ಉಪವನ, ವನಗಳಲ್ಲಿ ಪ್ರತಿದಿನವೂ ವಿಹರಿಸಲು ತೊಡಗಿದಳು.
ಒಮ್ಮೆ ಅವಳು ಹೀಗೇ ಉದ್ಯಾನದಲ್ಲಿದ್ದ ಸರೋವರದಲ್ಲಿ ಸಖಿಯರೊಂದಿಗೆ ಜಲಕ್ರೀಡೆ ಆಡುತ್ತಿದ್ದಳು. ಅದೇ ಹೊತ್ತಿಗೆ ಕುಬೇರನ ಸೇವಕನಾದ ಗೋಭಿಲನೆಂಬ ರಾಕ್ಷಸನು ಆಕಾಶಮಾರ್ಗದಲ್ಲಿ ಸಂಚಾರಮಾಡುತ್ತಾ ಅಲ್ಲಿಗೆ ಬಂದನು. ಪದ್ಮಾವತಿಯ ಸೌಂದರ್ಯವನ್ನು ಕಂಡು ಅವನಿಗೆ ವಿಸ್ಮಯವಾಯಿತು. ಇವಳೇನು ರತಿದೇವಿಯೋ, ಲಕ್ಷ್ಮಿದೇವಿಯೋ, ಶಚೀದೇವಿಯೋ ಎಂದು ಅವನಿಗೆ ಸಂಶಯವಾಯಿತು. ಕೂಡಲೇ ಅವನು ಜ್ಞಾನದೃಷ್ಟಿಯಿಂದ ಪರಿಶೀಲಿಸಿದಾಗ ಇವಳು ಸತ್ಯಕೇತುವಿನ ಮಗಳೂ, ಉಗ್ರಸೇನನ ಮಡದಿಯೂ ಆಗಿರುವ ಪದ್ಮಾವತಿ ಎಂದು ತಿಳಿದುಕೊಂಡನು. ಅವಳ ಸೌಂದರ್ಯವನ್ನು ಕಂಡು ಅವನು ಮುಗ್ಧನಾಗಿಬಿಟ್ಟನು. ಇಷ್ಟೊಂದು ಸುಂದರಿಯಾದ ಹೆಂಡತಿಯನ್ನು ಬಿಟ್ಟು ಆ ಉಗ್ರಸೇನನು ಹೇಗೆ ಜೀವಿಸಿರಬಹುದೆಂದು ಅವನಿಗೆ ಆಶ್ಚರ್ಯವಾಯಿತು.
ಪದ್ಮಾವತಿಯನ್ನು ಮತ್ತೆ ಮತ್ತೆ ನೋಡುತ್ತಾ ಗೋಭಿಲನು ಕಾಮಪರವಶನಾದನು. ಇವಳನ್ನು ಹೇಗಾದರೂ ಪಡೆಯಬೇಕು ಎಂದು ಅವನಿಗೆ ಅನಿಸಿತು. ಆದರೆ ಪದ್ಮಾವತಿಯು ಪತಿವ್ರತೆ, ಪರಪುರುಷನನ್ನು ಎಂದಿಗೂ ಬಯಸುವವಳಲ್ಲ ಎಂಬುದೂ ಅವನಿಗೆ ಗೊತ್ತಾಯಿತು. ಆದರೂ ಮನ್ಮಥನ ಬಾಧೆಯನ್ನು ತಡೆಯಲಾರದೆ ಅವನು ಪದ್ಮಾವತಿಯನ್ನು ಪಡೆಯಲು ಒಂದು ಉಪಾಯವನ್ನು ಮಾಡಿದನು. ತಾನು ಉಗ್ರಸೇನನ ರೂಪವನ್ನು ಧರಿಸಿ, ಅವನಂತೆಯೇ ವೇಷ-ಹಾವ-ಭಾವ-ನಡುಗೆಗಳನ್ನು ತೋರಿಸುತ್ತಾ ಆ ಉದ್ಯಾನಕ್ಕೆ ಬಂದು, ಒಂದು ಅಶೋಕವೃಕ್ಷದ ಕೆಳಗೆ ಕುಳಿತು ವೀಣೆಯನ್ನು ನುಡಿಸುತ್ತಾ ಹಾಡತೊಡಗಿದನು.
ಅದನ್ನು ಕೇಳಿ ಕುತೂಹಲದಿಂದ ಪದ್ಮಾವತಿಯು ಹತ್ತಿರ ಬಂದು ನೋಡುತ್ತಾಳೆ – ಗಂಡನೇ ಅಲ್ಲಿ ಕುಳಿತು ಹಾಡುತ್ತಿದ್ದಾನೆ! ಇವನು ಯಾವಾಗ ಹೇಗೆ ಇಲ್ಲಿಗೆ ಬಂದ ಎಂದು ಅವಳು ಅಚ್ಚರಿಪಡುತ್ತಿದ್ದಾಗ ಉಗ್ರಸೇನನ ರೂಪದಲ್ಲಿದ್ದ ಗೋಭಿಲನೇ – “ಪ್ರಿಯೇ, ನಿನ್ನ ವಿರಹವನ್ನು ಸಹಿಸಲು ಸಾಧ್ಯವಾಗದೆ ನಾನು ಮಥುರೆಯಿಂದ ಇಲ್ಲಿಗೇ ಬಂದುಬಿಟ್ಟೆ’’ ಎಂದು ಹೇಳಿದನು. ಪದ್ಮಾವತಿ ಅದು ನಿಜವೆಂದೇ ನಂಬಿದಳು. ಗೋಭಿಲನು ಅವಳನ್ನು ನಿರ್ಜನ ಸ್ಥಾನಕ್ಕೆ ಕರೆದೊಯ್ದು ಯಥೇಚ್ಛವಾಗಿ ಕಾಮಸುಖವನ್ನು ಅನುಭವಿಸಿದನು.
ಆದರೂ ಕೆಲವೊಂದು ಗುಪ್ತ ಸಂಕೇತಗಳಿಂದ ಪದ್ಮಾವತಿಗೆ ಅವನು ತನ್ನ ಗಂಡನಲ್ಲ ಎಂದು ಸಂಶಯ ಬಂದು – “ಎಲೈ ಧೂರ್ತ! ಯಾರು ನೀನು? ನಿಜ ಹೇಳು…’’ ಎಂದಳು. ಆಗ ಗೋಭಿಲನು ತನ್ನ ಪರಿಚಯವನ್ನು ಹೇಳಿದನು. ಪದ್ಮಾವತಿಯು ಅದನ್ನು ಕೇಳಿ ಇನ್ನಷ್ಟು ದುಃಖಿತಳಾಗಿ – “ಧೂರ್ತ! ನಿನಗೆ ಶಾಪ ಕೊಡುತ್ತೇನೆ” ಎಂದಳು.
ಆದರೆ ಗೋಭಿಲನು ಹೆದರದೆ – “ನಿನಗೆ ಶಾಪ ಕೊಡುವ ಸಾಮರ್ಥ್ಯವಿಲ್ಲ. ಸುಮ್ಮನೆ ನನ್ನ ಹಿಂದೆ ಬಾ, ಬೇಕಾದ ಭೋಗಗಳನ್ನು ಅನುಭವಿಸು” ಎಂದನು. ಪದ್ಮಾವತಿಯು ರೋದಿಸುತ್ತಾ ಅಲ್ಲೇ ಕುಳಿತುಕೊಂಡಳು. ಗೋಭಿಲನು – “ನಾನು ನಿನ್ನನ್ನು ಕೂಡಿರುವುದರ ಫಲವಾಗಿ ನಿನಗೆ ಲೋಕಭಯಂಕರನಾದ ಮಗನೊಬ್ಬನು ಹುಟ್ಟುತ್ತಾನೆ” ಎಂದು ತಿಳಿಸಿ ಅಲ್ಲಿಂದ ಹೊರಟುಹೋದನು.
ಆಗ ಹತ್ತಿರಕ್ಕೆ ಬಂದ ಸಖಿಯರು ಪದ್ಮಾವತಿಯನ್ನು ಸಾಂತ್ವನಪಡಿಸಿ ಮನೆಗೆ ಕರೆದೊಯ್ದರು. ಪದ್ಮಾವತಿಯು ನಡೆದಿದ್ದೆಲ್ಲವನ್ನೂ ತಾಯಿಗೆ ಅರುಹಿದಳು. ಆಮೇಲೆ ತಂದೆತಾಯಿಯರು ಪರಸ್ಪರ ಸಮಾಲೋಚನೆ ಮಾಡಿ ಮಗಳನ್ನು ಮಥುರೆಗೆ ಕಳಿಸಿಕೊಟ್ಟರು. ಈ ವಿಷಯವನ್ನು ಅವರು ಉಗ್ರಸೇನನಿಗೂ ತಿಳಿಸದೆ ಮುಚ್ಚಿಟ್ಟರು. ಉಗ್ರಸೇನನು ಹೆಂಡತಿಯೊಂದಿಗೆ ಇನ್ನಷ್ಟು ಪ್ರೀತಿಯಿಂದಲೇ ಇದ್ದನು.
ಕೆಲವು ದಿನಗಳಾದ ಮೇಲೆ ಪದ್ಮಾವತಿಯ ಹೊಟ್ಟೆಯಲ್ಲಿ ಗರ್ಭವು ಬೆಳೆಯುತ್ತಿದ್ದುದು ಗೊತ್ತಾಯ್ತು. ಅದರ ನಿಜವಾದ ಕಾರಣ ಪದ್ಮಾವತಿಯೊಬ್ಬಳಿಗೆ ಮಾತ್ರ ತಿಳಿದಿತ್ತು. ಈ ದುಷ್ಟಗರ್ಭವನ್ನು ಹೇಗಾದರೂ ಮಾಡಿ ನಾಶಮಾಡಬೇಕು ಎಂದು ಭಾವಿಸಿ ಅವಳು ಅದಕ್ಕಾಗಿ ನಾನಾವಿಧದ ಔಷಧಗಳನ್ನು ಸೇವಿಸುತ್ತಾ ಗರ್ಭಪಾತಕ್ಕೆ ಪ್ರಯತ್ನಪಟ್ಟಳು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಒಂದು ದಿನ ಆ ಗರ್ಭವೇ ಮಾತನಾಡಿತು – “ಅಮ್ಮ, ನನ್ನನ್ನು ಸಾಯಿಸಲು ವೃಥಾ ಪ್ರಯತ್ನ ಪಡಬೇಡ. ನಾನು ಹಿಂದಿನ ಜನ್ಮದಲ್ಲಿ ಕಾಲನೇಮಿಯೆಂಬ ರಾಕ್ಷಸನಾಗಿದ್ದೆ. ದೇವಾಸುರ ಯುದ್ಧದಲ್ಲಿ ವಿಷ್ಣುವು ನನ್ನನ್ನು ಕೊಂದಿದ್ದ. ಆ ವಿಷ್ಣುವಿನಲ್ಲಿ ವೈರಸಾಧನೆಗಾಗಿ ನಾನೀಗ ಪುನಃ ಹುಟ್ಟಿಬರಲಿದ್ದೇನೆ. ನೀನು ವೃಥಾ ಪ್ರಯತ್ನಿಸಿ ಆಯಾಸ ಪಡಬೇಡ” ಎಂದು ಹೇಳಿತು. ಅದನ್ನು ಕೇಳಿ ಪದ್ಮಾವತಿಯು ಸುಮ್ಮನಾದಳು.
ಮುಂದೆ ಬಹಳ ಸಮಯದ ನಂತರ ಅವಳು ಮಗುವನ್ನು ಹಡೆದಳು. ಅವನೇ ಕಂಸ. ಕಂಸನು ಕೃಷ್ಣದ್ವೇಷವನ್ನು ಮಾಡಿ ಕೊನೆಗೆ ಅವನಿಂದಲೇ ಹತನಾಗಿ ಮೋಕ್ಷವನ್ನು ಪಡೆದನು.
(ಪದ್ಮಪುರಾಣ ಭೂಮಿಖಂಡ)