ಮತ್ತೆ ಭೋಜರಾಜನು ಸಿಂಹಾಸನವನ್ನು ಏರಲು ತೊಡಗಿದನು. ಆಗ ಮತ್ತೊಂದು ಗೊಂಬೆಯು ಅವನನ್ನು ತಡೆದು ಹೇಳಿತು – “ಎಲೈ ರಾಜನೆ, ವಿಕ್ರಮನಿಗೆ ಇದ್ದಂತಹ ಔದಾರ್ಯವೇ ಮೊದಲಾದ ಗುಣಗಳು ನಿನ್ನಲ್ಲಿ ಇವೆಯಾದರೆ ಮಾತ್ರ ನೀನು ಈ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಯೋಗ್ಯನಾಗುವೆ” ಎಂದಿತು.
ಭೋಜರಾಜನು – “ಹಾಗಿದ್ದರೆ ವಿಕ್ರಮನ ಔದಾರ್ಯಾದಿಗುಣಗಳ ವೃತ್ತಾಂತವನ್ನು ಹೇಳು” ಎಂದನು.
ಅದು ಹೇಳಿತು – “ಕೇಳು ದೊರೆಯೆ, ವಿಕ್ರಮನ ರಾಜ್ಯದಲ್ಲಿ ಪುರಂದರಪುರಿ ಎಂಬ ಒಂದು ನಗರವಿತ್ತು. ಅಲ್ಲಿ ತುಂಬ ಶ್ರೀಮಂತನಾದ ಒಬ್ಬ ವ್ಯಾಪಾರಿಯಿದ್ದ. ಅವನಿಗೆ ನಾಲ್ವರು ಮಕ್ಕಳು. ಒಂದು ದಿನ ಅವನು ತನ್ನ ಮಕ್ಕಳನ್ನು ಕರೆದು – “ಮಕ್ಕಳೆ, ನಾನು ಸತ್ತರೆ ನೀವು ನಾಲ್ವರು ಒಂದೇ ಕಡೆ ವಾಸ ಮಾಡಲು ಸಾಧ್ಯವಾಗಲಿಕ್ಕಿಲ್ಲ. ಆ ಕಾರಣದಿಂದ ನಾನು ಬದುಕಿರುವಾಲೇ ನನ್ನ ಸಂಪತ್ತಿನಲ್ಲಿ ನಾಲ್ಕು ವಿಭಾಗಗಳನ್ನು ಮಾಡಿ ಅವುಗಳ ವಿಭಾಗದ ಕ್ರಮವನ್ನು ನನ್ನ ಮಂಚದ ಕೆಳಗೆ ಹುದುಗಿಸಿ ಇರಿಸಿದ್ದೇನೆ. ಕ್ರಮವಾಗಿ ಅವುಗಳನ್ನು ನೀವು ಹಂಚಿಕೊಳ್ಳಿ” ಎಂದನು. ಎಲ್ಲರೂ ಅದನ್ನು ಒಪ್ಪಿಕೊಂಡರು.
ಕೆಲವು ದಿನಗಳು ಕಳೆದ ಮೇಲೆ ವ್ಯಾಪಾರಿಯು ಪರಲೋಕ ಸೇರಿದನು. ಅನಂತರ ಒಂದು ತಿಂಗಳವರೆಗೆ ಅವರೆಲ್ಲ ಸಹೋದರರೂ ಒಂದೇ ಕಡೆ ವಾಸವಾಗಿದ್ದರು. ಆದರೆ ಬಳಿಕ ಅವರ ಹೆಂಡಂದಿರಲ್ಲಿ ಪರಸ್ಪರ ಜಗಳ ಆರಂಭವಾಯ್ತು. ಆಗ ಅವರು “ನಾವು ಯಾಕೆ ಜಗಳ ಮಾಡಬೇಕು? ಅಪ್ಪ ಬದುಕಿರುವಾಗಲೇ ಸಂಪತ್ತನ್ನು ನಾಲ್ವರಿಗೂ ವಿಭಾಗ ಮಾಡಿದ್ದಾನೆ. ಮಂಚದ ಕೆಳಗಿರುವ ವಿಭಾಗಕ್ರಮವನ್ನು ಅನುಸರಿಸಿ ಹಾಗೆಯೇ ವಿಭಾಗ ಮಾಡಿಕೊಂಡು ಸುಖವಾಗಿ ಇರೋಣ” ಎಂದು ತೀರ್ಮಾನಿಸಿ, ಮಂಚದ ಕೆಳಗೆ ಅಗೆದು ನೋಡಿದರು. ಅಲ್ಲಿ ನಾಲ್ಕು ಕಾಲುಗಳ ಕೆಳಗೆ ನಾಲ್ಕು ಸಂಪುಟಗಳು ಇದ್ದವು. ಅವುಗಳಲ್ಲಿ ಒಂದು ಸಂಪುಟದಲ್ಲಿ ಮಣ್ಣು ಇತ್ತು. ಇನ್ನೊಂದರಲ್ಲಿ ಇದ್ದಿಲೂ, ಮೂರನೆಯದರಲ್ಲಿ ಮೂಳೆಗಳೂ, ನಾಲ್ಕನೆಯದರಲ್ಲಿ ಧಾನ್ಯದ ಗಿಡದ ಒಣಗಿದ ಕಾಂಡಗಳೂ ಇದ್ದವು.
ಅದನ್ನು ನೋಡಿ ಅವರು ಆಶ್ಚರ್ಯಪಟ್ಟು, ಅದು ಯಾವ ರೀತಿಯ ವಿಭಾಗಕ್ರಮ ಎಂದು ಅರಿವಾಗದೆ ತಲೆ ಚಚ್ಚಿಕೊಂಡರು. ಕೊನೆಗೆ ಅವರು ಆ ನಗರದ ರಾಜನ ಸಭೆಗೆ ಬಂದು ರಾಜನ ಎದುರು ಎಲ್ಲ ವೃತ್ತಾಂತವನ್ನೂ ನಿವೇದಿಸಿಕೊಂಡರು. ಆದರೆ ರಾಜಸಭೆಯಲ್ಲಿ ಯಾರಿಗೂ ಈ ವಿಭಾಗಕ್ರಮ ಅರ್ಥವಾಗಲೇ ಇಲ್ಲ. ಕೊನೆಗೆ ಅವರು ಒಂದು ದಿನ ಉಜ್ಜಯಿನಿಗೆ ಬಂದರು. ಅಲ್ಲಿ ರಾಜಸಭೆಗೆ ಬಂದು ರಾಜಾ ವಿಕ್ರಮನ ಎದುರು ಇದೇ ವೃತ್ತಾಂತವನ್ನು ಆಮೂಲಾಗ್ರವಾಗಿ ತಿಳಿಸಿದರು. ಆದರೆ ಅಲ್ಲಿಯೂ ಯಾರಿಗೂ ವಿಭಾಗದ ಕ್ರಮ ಏನೆಂದು ಅರ್ಥವಾಗಲಿಲ್ಲ. ಅನಂತರ ಅವರು ಒಮ್ಮೆ ಪ್ರತಿಷ್ಠಾನವೆಂಬ ನಗರಕ್ಕೆ ಹೋದರು. ಆ ನಗರದ ಪೌರರ ಎದುರು ಈ ವೃತ್ತಾಂತವನ್ನು ನಿವೇದಿಸಿಕೊಂಡರು. ಅವರಿಗೂ ಈ ವಿಷಯ ಅರ್ಥವಾಗಲಿಲ್ಲ.
ಅದೇ ನಗರದಲ್ಲಿ ಒಬ್ಬ ಕುಂಬಾರನ ಮನೆಯಲ್ಲಿದ್ದ ಶಾಲಿವಾಹನ ಎಂಬಾತನು ಈ ವೃತ್ತಾಂತವನ್ನು ಕೇಳಿದನು. ಕುತೂಹಲದಿಂದ ಅವನು ಅಲ್ಲಿಗೆ ಬಂದು “ಇಲ್ಲಿ ತಿಳಿಯದಿರುವುದು ಏನಿದೆ? ಎಲ್ಲವೂ ಸ್ಪಷ್ಟವಾಗಿಯೇ ಇದೆ. ಹಿರಿಯ ಮಗನಿಗೆ ಅವನು ಮಣ್ಣನ್ನು ಕೊಟ್ಟಿದ್ದಾನೆ. ಅದರ ಅರ್ಥ ಅವನು ಗಳಿಸಿದ ಭೂಮಿಯೆಲ್ಲವನ್ನೂ ಅವನಿಗೆ ಕೊಟ್ಟಿದ್ದಾನೆ. ಎರಡನೆಯವನಿಗೆ ಇದ್ದಿಲನ್ನು ಕೊಟ್ಟಿದ್ದಾನೆ. ಅದರ ಅರ್ಥವೆಂದರೆ ಚಿನ್ನವೆಲ್ಲವೂ ಅವನಿಗೆ ಸೇರಬೇಕು. ಮೂರನೆಯವನಿಗೆ ಮೂಳೆಗಳನ್ನು ಕೊಟ್ಟಿದ್ದಾನೆ. ಅಂದರೆ ಪಶುಸಂಪತ್ತೆಲ್ಲವೂ ಅವನಿಗೆ ಸೇರುತ್ತವೆ. ನಾಲ್ಕನೆಯವನಿಗೆ ಗಿಡದ ಕಾಂಡಗಳು ದೊರಕಿವೆ ಎಂದರೆ ಎಲ್ಲಾ ರೀತಿಯ ಧಾನ್ಯಗಳನ್ನೂ ಅವನಿಗೆ ಕೊಟ್ಟಿರುತ್ತಾನೆ’’ ಎಂದನು.
ಶಾಲಿವಾಹನನ ಮಾತನ್ನು ಕೇಳಿ ಅವರು ತಂದೆಯು ಮಾಡಿದ ವಿಭಾಗಕ್ರಮವನ್ನು ತಿಳಿದುಕೊಂಡರು. ಮತ್ತು ಅದನ್ನು ಒಪ್ಪಿಕೊಂಡರು. ಅನಂತರ ಶಾಲಿವಾಹನನನ್ನು ತುಂಬಾ ಹೊಗಳಿ ಅವರೆಲ್ಲ ಕೃತಾರ್ಥರಾಗಿ ತಮ್ಮ ನಗರಕ್ಕೆ ತೆರಳಿದರು.
ರಾಜಾ ವಿಕ್ರಮನು ಚಾರರ ಮೂಲಕ ಈ ವಿಷಯವನ್ನು ತಿಳಿದು ಆಶ್ಚರ್ಯಪಟ್ಟನು. ಶಾಲಿವಾಹನನನ್ನು ಕಾಣಬೇಕೆಂದು ಬಯಸಿ ಪ್ರತಿಷ್ಠಾನನಗರಕ್ಕೆ “ನಿಮ್ಮ ನಗರದಲ್ಲಿರುವ, ಇತ್ತೀಚೆಗಷ್ಟೆ ನಾಲ್ಕು ಜನರ ಆಸ್ತಿಯ ವಿಭಾಗದ ಸಮಸ್ಯೆಯನ್ನು ಬಗೆಹರಿಸಿರುವಾತನನ್ನು ನನ್ನ ಬಳಿಗೆ ಕಳಿಸಿಕೊಡತಕ್ಕದ್ದು” ಎಂದು ಒಂದು ಪತ್ರವನ್ನು ಕಳಿಸಿದನು. ಅಲ್ಲಿಯ ಮಹಾಜನರು ರಾಜನು ಕಳಿಸಿದ ಪತ್ರವನ್ನು ಓದಿ ಶಾಲಿವಾಹನನನ್ನು ಕರೆದು – “ಉಜ್ಜಯಿನಿಯ ರಾಜನಾದ ವಿಕ್ರಮಾದಿತ್ಯನು ನಿನ್ನನ್ನು ಆಹ್ವಾನಿಸಿದ್ದಾನೆ. ಅಲ್ಲಿಗೆ ಹೋಗು” ಎಂದರು.
ಆದರೆ ಅದನ್ನು ಕೇಳಿ ಶಾಲಿವಾಹನನು “ಯಾರು ಈ ವಿಕ್ರಮಾದಿತ್ಯ? ಅವನು ಆಹ್ವಾನಿಸಿದ ಮಾತ್ರಕ್ಕೆ ನಾನೇಕೆ ಹೋಗಬೇಕು? ನಾನು ಹೋಗುವುದಿಲ್ಲ. ಬೇಕಿದ್ದರೆ ಅವನೇ ನನ್ನ ಬಳಿ ಬರಲಿ” ಎಂದನು.
ಆ ವಾರ್ತೆಯನ್ನು ತಿಳಿದು ವಿಕ್ರಮಾದಿತ್ಯನು ಕೋಪದಿಂದ ಕುದಿದುಹೋದನು. ಕೂಡಲೇ ಅವನು ತನ್ನ ಹನ್ನೆರಡು ಅಕ್ಷೌಹಿಣೀಸೇನೆಯೊಂದಿಗೆ ಹೊರಟು ಪ್ರತಿಷ್ಠಾನನಗರಿಗೆ ಬಂದನು. ಶಾಲಿವಾಹನನಿರುವಲ್ಲಿಗೆ ದೂತನನ್ನು ಕಳಿಸಿದನು.
ಆ ದೂತನು ಕುಂಬಾರನ ಮನೆಗೆ ಹೋಗಿ, “ಎಲೈ ಶಾಲಿವಾಹನ, ರಾಜಾಧಿರಾಜ ವಿಕ್ರಮನ ದರ್ಶನಕ್ಕೆ ಬರಬೇಕು” ಎಂದನು. ಶಾಲಿವಾಹನನು, “ರಾಜದರ್ಶನಕ್ಕೆ ನಾನೊಬ್ಬನೇ ಬರುವುದಿಲ್ಲ. ಚತುರಂಗಸೇನೆಯೊಂದಿಗೆ ಬರುತ್ತೇನೆ. ಹಾಗೆಂದು ನಿಮ್ಮ ರಾಜನಿಗೆ ತಿಳಿಸು” ಎಂದನು.
ಅವನ ಮಾತನ್ನು ಕೇಳಿ ದೂತನು ವಿಕ್ರಮನಿಗೆ ಎಲ್ಲವನ್ನೂ ತಿಳಿಸಿದನು. ಅನಂತರ ವಿಕ್ರಮನು ಸೇನೆಯೊಂದಿಗೆ ರಣಾಂಗಣಕ್ಕೆ ಬಂದನು. ಶಾಲಿವಾಹನನು ಕುಂಬಾರನ ಮನೆಯಲ್ಲಿ ಮಣ್ಣಿನಿಂದ ಮಾಡಿದ ಆನೆ-ಕುದುರೆ-ರಥ-ಪದಾತಿಗಳಿಗೆ ಮಂತ್ರಗಳಿಂದ ಜೀವ ತುಂಬಿ ಆ ಬಲದೊಂದಿಗೆ ರಣಾಂಗಣಕ್ಕೆ ಹೋದನು. ಎರಡು ಸೇನೆಗಳ ನಡುವೆ ಭೀಕರ ಯುದ್ಧ ನಡೆಯಿತು. ವಿಕ್ರಮನು ಶಾಲಿವಾಹನನ ಎಲ್ಲ ಸೈನ್ಯವನ್ನೂ ಹೊಡೆದು ಬೀಳಿಸಿದನು. ಆಗ ಶಾಲಿವಾಹನನು ತನ್ನ ತಂದೆಯಾದ ಶೇಷನಾಗನನ್ನು ಸ್ಮರಿಸಿಕೊಂಡನು. ಶೇಷನಾಗನು ಮಗನ ಸಹಾಯಕ್ಕಾಗಿ ಸರ್ಪಗಳನ್ನು ಕಳಿಸಿದನು. ಆ ಸರ್ಪಗಳು ವಿಕ್ರಮನ ಸೈನ್ಯದಲ್ಲಿರುವವರನ್ನು ಕಚ್ಚಿದವು. ಅವರೆಲ್ಲರೂ ವಿಷದಿಂದ ಮೂರ್ಛಿತರಾದರು.
ಆಮೇಲೆ ವಿಕ್ರಮನು ಒಬ್ಬಂಟಿಯಾಗಿ ತನ್ನ ನಗರಕ್ಕೆ ತೆರಳಿದನು. ಅಲ್ಲಿ ತನ್ನ ಸೈನ್ಯವನ್ನು ಮತ್ತೆ ಉಜ್ಜೀವಿಸುವುದಕ್ಕಾಗಿ ನೀರಿನಲ್ಲಿ ಅರ್ಧ ಮುಳುಗಿ ದೀರ್ಘಕಾಲದವರೆಗೆ ವಾಸುಕಿಮಂತ್ರವನ್ನು ಜಪಿಸಿದನು. ಆಗ ವಾಸುಕಿಯು ಪ್ರತ್ಯಕ್ಷನಾಗಿ “ರಾಜನ್, ನಿನ್ನಲ್ಲಿ ಪ್ರಸನ್ನನಾಗಿದ್ದೇನೆ. ವರವನ್ನು ಬೇಡಿಕೋ” ಎಂದು ಹೇಳಿದನು.
ವಿಕ್ರಮನು “ಎಲೈ ಸರ್ಪರಾಜ, ನೀನು ನನ್ನಲ್ಲಿ ಪ್ರಸನ್ನನಾಗಿದ್ದರೆ ಸರ್ಪವಿಷದಿಂದ ಮೂರ್ಛಿತವಾಗಿರುವ ನನ್ನ ಸೈನ್ಯವನ್ನು ಬದುಕಿಸಲು ನನಗೆ ಅಮೃತಘಟವನ್ನು ಕೊಡು” ಎಂದು ಕೇಳಿದನು. ವಾಸುಕಿಯು “ಹಾಗೆಯೇ ಆಗಲಿ” ಎಂದು ಹೇಳಿ ಅವನಿಗೆ ಅಮೃತಘಟವನ್ನು ಕೊಟ್ಟನು.
ವಿಕ್ರಮನು ಆ ಅಮೃತಘಟವನ್ನು ಹಿಡಿದುಕೊಂಡು ದಾರಿಯಲ್ಲಿ ಬರುತ್ತಿದ್ದಾಗ ಒಬ್ಬ ಬ್ರಾಹ್ಮಣನು ಎದುರಿಗೆ ಬಂದು ಆಶೀರ್ವಾದ ಮಾಡಿದನು. ರಾಜನು “ಎಲೈ ಬ್ರಾಹ್ಮಣ ಎಲ್ಲಿಂದ ಬರುತ್ತಿರುವೆ?’’ ಎಂದು ಕೇಳಲು ಬ್ರಾಹ್ಮಣನು “ಪ್ರತಿಷ್ಠಾನನಗರದಿಂದ” ಎಂದನು. ರಾಜನು “ನಿನಗೇನು ಬೇಕು?’’ ಎಂದು ಕೇಳಿದನು. ಬ್ರಾಹ್ಮಣನು “ರಾಜನ್, ನನಗೆ ಒಂದು ವಸ್ತುವಿನಲ್ಲಿ ಪ್ರೀತಿ ಇದೆ. ಅದನ್ನು ಕೊಡುವೆಯಾದರೆ ಕೇಳುತ್ತೇನೆ” ಎಂದನು.
ರಾಜನು “ನೀನು ಏನು ಬೇಕಾದರೂ ಕೇಳು, ಅದನ್ನು ಕೊಡುವೆನು” ಎಂದನು.
“ಹಾಗಿದ್ದರೆ ನಿನ್ನ ಕೈಯಲ್ಲಿರುವ ಅಮೃತಘಟವನ್ನು ಕೊಡು” ಎಂದು ಬ್ರಾಹ್ಮಣನು ಹೇಳಿದನು. ರಾಜನು “ನಿನ್ನನ್ನು ಯಾರು ಕಳಿಸಿದ್ದಾರೆ?’’ ಎಂದು ಕೇಳಿದನು.
ಬ್ರಾಹ್ಮಣನು “ನನ್ನನ್ನು ಶಾಲಿವಾಹನನು ಕಳಿಸಿದ್ದಾನೆ” ಎಂದನು. ಅದನ್ನು ಕೇಳಿ ರಾಜನು ‘ನಾನು ವಿಚಾರ ಮಾಡದೆ ಕೊಡುವೆ ಎಂದು ಭಾಷೆ ಕೊಟ್ಟಿದ್ದೇನೆ. ಇವನಾದರೋ ಅಮೃತಘಟವನ್ನು ಕೇಳುತ್ತಿದ್ದಾನೆ. ಈಗ ಅದನ್ನು ಕೊಡುವುದಿಲ್ಲವೆಂದರೆ ಅಪಕೀರ್ತಿ ಬರುತ್ತದೆ, ಅಧರ್ಮವೂ ಆಗುತ್ತದೆ. ಏನಾದರೂ ಆಗಲಿ, ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ’ ಎಂದು ನಿಶ್ಚಯ ಮಾಡಿ ಅವನಿಗೆ ಅಮೃತಘಟವನ್ನು ಕೊಟ್ಟನು. ಆ ಬ್ರಾಹ್ಮಣನು ರಾಜನಿಗೆ ಅಭಿನಂದಿಸಿ ತನ್ನ ಸ್ಥಾನಕ್ಕೆ ಹೋದನು. ರಾಜನೂ ಉಜ್ಜಯಿನಿಗೆ ಹೋದನು.
ಈ ಕಥೆಯನ್ನು ಹೇಳಿ ಗೊಂಬೆಯು “ಹೇ ರಾಜನೆ, ನಿನ್ನಲ್ಲಿ ಈ ರೀತಿಯ ಔದಾರ್ಯ ಹಾಗೂ ಧೈರ್ಯಗಳಿದ್ದರೆ ಮಾತ್ರ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ರಾಜನು ಸುಮ್ಮನಾದನು.
ಅನಾವೃಷ್ಟಿಯ ನಿವಾರಣೋಪಾಯ:
ಬಳಿಕ ಮತ್ತೆ ಭೋಜರಾಜನು ಸಿಂಹಾಸನವನ್ನು ಏರಲು ತೊಡಗುತ್ತಾನೆ. ಆಗ ಮುಂದಿನ ಮೆಟ್ಟಿಲಿನಲ್ಲಿರುವ ಇನ್ನೊಂದು ಗೊಂಬೆಯು ಅವನನ್ನು ತಡೆದು – “ಎಲೈ ರಾಜನೆ, ಯಾರಲ್ಲಿ ವಿಕ್ರಮನಲ್ಲಿರುವ ಔದಾರ್ಯಾದಿಗುಣಗಳು ಇವೆಯೋ ಅವನೇ ಈ ಸಿಂಹಾಸನದಲ್ಲಿ ಕುಳಿತುಕೊಳ್ಳಬೇಕು, ಬೇರೆಯವರಲ್ಲ” ಎಂದಿತು. ಆಗ ಭೋಜರಾಜನು “ಎಲೈ ಗೊಂಬೆಯೆ, ವಿಕ್ರಮನ ಔದಾರ್ಯ ಮೊದಲಾದ ಗುಣಗಳ ಬಗ್ಗೆ ಹೇಳು’’ ಎಂದನು. ಆಗ ಗೊಂಬೆಯು ಕಥೆಯನ್ನು ಹೇಳಲು ಆರಂಭಿಸಿತು.
“ವಿಕ್ರಮನು ರಾಜ್ಯವನ್ನು ಆಳುತ್ತಿದ್ದಾಗ ಒಮ್ಮೆ ಓರ್ವ ಜ್ಯೋತಿಷಿಯು ಬಂದು ರಾಜನಿಗೆ ಆಶೀರ್ವಾದ ಕೊಟ್ಟು ಪಂಚಾಂಗಫಲವನ್ನು ಹೇಳುತ್ತ “ರಾಜನ್, ಈ ವರ್ಷ ಅನಾವೃಷ್ಟಿ ಆಗಲಿದೆಯೆಂದು ಗ್ರಹಗತಿಗಳು ಹೇಳುತ್ತ್ತಿವೆ” ಎಂದು ಹೇಳಿದನು.
ಜ್ಯೋತಿಷಿಯ ಮಾತನ್ನು ಕೇಳಿ ರಾಜನು “ಈ ಅನಾವೃಷ್ಟಿಯನ್ನು ಹೋಗಲಾಡಿಸಲು ಏನಾದರೂ ಪರಿಹಾರೋಪಾಯ ಇದೆಯೆ?’’ ಎಂದು ಕೇಳಿದನು.
ಆಗ ಜ್ಯೋತಿಷಿಯು “ಏಕಿಲ್ಲ? ಕೆಲವು ವಿಶಿಷ್ಟ ಗ್ರಹಹೋಮ ಮೊದಲಾದವುಗಳನ್ನು ಮಾಡಿದರೆ ಖಂಡಿತ ಮಳೆಯು ಬರುವುದು” ಎಂದು ಹೇಳಿದನು.
ಆಗ ರಾಜಾ ವಿಕ್ರಮನು ವೇದಜ್ಞರಾದ ಬ್ರಾಹ್ಮಣರನ್ನು ಕರೆಯಿಸಿ ಅವರಿಗೆ ಜ್ಯೋತಿಷಿಯು ಹೇಳಿದ ವೃತ್ತಾಂತವನ್ನು ತಿಳಿಸಿ ಅವರಿಂದ ಆ ವಿಶಿಷ್ಟ ಗ್ರಹಹೋಮಾದಿಗಳನ್ನು ಮಾಡಿಸಲು ಆರಂಭಿಸಿದನು.
ಅವೆಲ್ಲವೂ ಯಶಸ್ವಿಯಾಗಿ ನಡೆದವು. ರಾಜನು ದ್ರವ್ಯವಸ್ತ್ರಾದಿಗಳಿಂದ ಬ್ರಾಹ್ಮಣರನ್ನು ಸಂತೋಷಪಡಿಸಿದನು. ದಶವಿಧ ದಾನಗಳನ್ನೂ ಕೊಟ್ಟನು. ದುಃಖಿತರು, ಕುರುಡರು, ಕುಂಟರು, ಕಿವುಡರು, ಅನಾಥರು ಮೊದಲಾದವರನ್ನೂ ಕರೆದು ಅವರಿಗೆಲ್ಲ ಸಾಕಷ್ಟು ದಾನ ಕೊಟ್ಟು ಸಂತೋಷಪಡಿಸಿದನು. ಆದರೆ ಮಳೆ ಬರಲಿಲ್ಲ. ಮಳೆಯ ಅಭಾವದಿಂದ ಎಲ್ಲ ಜನರೂ ಬರಗಾಲಪೀಡಿತರಾಗಿ ಹಸಿವೆಯಿಂದ ತುಂಬ ಕಷ್ಟ ಅನುಭವಿಸಿದರು. ಅವರ ದುಃಖದಿಂದ ರಾಜನು ತಾನೂ ದುಃಖಿತನಾದನು.
ಒಮ್ಮೆ ಅವನು ಯಜ್ಞಶಾಲೆಯಲ್ಲಿ ಚಿಂತಿಸುತ್ತಾ ಕುಳಿತಿದ್ದನು. ಆಗ ಅಶರೀರವಾಣಿಯೊಂದು ಕೇಳಿಬಂತು – “ರಾಜನ್, ನಿನ್ನ ಎದುರಿನ ಮಂದಿರದಲ್ಲಿರುವ ದೇವಿಯ ಆಸೆಯನ್ನು ನೀನು ಇನ್ನೂ ಪೂರೈಸಲಿಲ್ಲ. ಆ ಕಾರಣದಿಂದಾಗಿಯೇ ಮಳೆ ಬರುತ್ತಿಲ್ಲ. ಮೂವತ್ತೆರಡು ಲಕ್ಷಣಗಳಿಂದ ಕೂಡಿದ ಮನುಷ್ಯನ ತಲೆಯನ್ನು ಕತ್ತರಿಸಿ ಬಲಿರೂಪದಲ್ಲಿ ಈ ದೇವಿಗೆ ಅರ್ಪಿಸಿದರೆ ಮಳೆ ಬರುತ್ತದೆ.’’
ಅದನ್ನು ಕೇಳಿ ರಾಜನು ‘ಅಂತಹ ಪುರುಷನನ್ನು ಎಲ್ಲಿಂದ ಕರೆತರಬೇಕು?’ ಎಂದು ತುಂಬ ಚಿಂತಿಸಿದನು. ಅಂತಹ ಯಾರೂ ಅವನ ಮನಸ್ಸಿಗೆ ಬರಲಿಲ್ಲ. ಅನಂತರ ಆ ರೀತಿಯ ಲಕ್ಷಣಗಳಿರುವ ಪುರುಷ ನಾನೇ ಎಂಬುದು ಅವನಿಗೆ ನೆನಪಾಯ್ತು. ಆ ಕೂಡಲೇ ಅವನು ದೇವಾಲಯಕ್ಕೆ ತೆರಳಿ, ದೇವಿಗೆ ನಮಸ್ಕರಿಸಿ, ಖಡ್ಗವನ್ನು ಹಿರಿದು ತನ್ನ ಕತ್ತನ್ನು ಕತ್ತರಿಸಲು ಉದ್ಯುಕ್ತನಾದನು.
ಆಗ ದೇವಿಯು ಪ್ರತ್ಯಕ್ಷಳಾಗಿ ಅವನನ್ನು ತಡೆದು, ಆ ಖಡ್ಗವನ್ನು ಹಿಡಿದು “ರಾಜನ್, ಸಾಹಸವನ್ನು ನಿಲ್ಲಿಸು. ನಿನ್ನ ಔದಾರ್ಯದಿಂದ ಪ್ರಸನ್ನಳಾಗಿದ್ದೇನೆ. ಬೇಕಾದ ವರವನ್ನು ಬೇಡಿಕೋ” ಎಂದಳು.
ರಾಜನು “ದೇವಿ, ನೀನು ನನ್ನಲ್ಲಿ ಪ್ರಸನ್ನಳಾಗಿದ್ದರೆ ಈ ಅನಾವೃಷ್ಟಿಯನ್ನು ಹೋಗಲಾಡಿಸು” ಎಂದನು. ದೇವತೆಯು “ತಥಾಸ್ತು” ಎಂದು ಹೇಳಿ ಅದೃಶ್ಯಳಾದಳು. ಬಳಿಕ ರಾಜನು ದೇವಾಲಯದಿಂದ ಹಿಂತಿರುಗಿ ತನ್ನ ಅರಮನೆಗೆ ಹೊರಟನು. ಆಗಲೇ ಆಕಾಶವು ಮೋಡದಿಂದ ಆವರಿಸಿತು. ಮೋಡದ ಗುಡುಗಿನ ಗರ್ಜನೆಯನ್ನು ಕೇಳಿ ನವಿಲುಗಳು ನರ್ತಿಸಿದವು. ಚಾತಕಪಕ್ಷಿಗಳು ಸಂತೋಷಗೊಂಡವು. ಸ್ವಲ್ಪ ಕಾಲದಲ್ಲೇ ಬಹಳ ಜೋರಾಗಿ ಮಳೆಯಾಯಿತು. ಸರೋವರ, ಕೆರೆ, ಕೊಳಗಳೆಲ್ಲ ನೀರಿನಿಂದ ತುಂಬಿದವು. ವಿಕ್ರಮನು ಸಂತುಷ್ಟನಾದನು.
ಹೀಗೆ ಕತೆಯನ್ನು ಹೇಳಿ ಗೊಂಬೆಯು “ರಾಜನೆ, ನಿನ್ನಲ್ಲಿ ಈ ರೀತಿಯ ಪರೋಪಕಾರ ಮೊದಲಾದ ಗುಣಗಳಿದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ರಾಜನು ಸುಮ್ಮನಾದನು.