‘ದ್ವಾತ್ರಿಂಶತ್ ಪುತ್ತಲಿಕಾ ಸಿಂಹಾಸನಮ್’ಕಥೆಗಳು
“ಎಲೈ ಮಹಾಜನರೆ ! ಇವನ ಶರೀರ ಅತ್ಯಂತ ದುರ್ಬಲವಾಗಿದೆ. ಅಲ್ಲದೆ ಇವನು ಭಯಗೊಂಡಿದ್ದಾನೆ. ಇವನ ಶರೀರವನ್ನು ಬಲಿ ಕೊಡುವುದರಿಂದ ದೇವತೆಗೆ ಹೇಗೆ ತೃಪ್ತಿ ಆಗೀತು ? ಇವನನ್ನು ಬಿಟ್ಟು ಬಿಡಿ. ಅದರ ಬದಲಾಗಿ ನಾನು ನನ್ನ ಶರೀರವನ್ನು ಕೊಡುತ್ತೇನೆ.

ಮತ್ತೆ ಭೋಜರಾಜನು ಸಿಂಹಾಸನವನ್ನು ಏರಲು ಮುಂದಾದಾಗ ಮುಂದಿನ ಮೆಟ್ಟಿಲಿನಲ್ಲಿರುವ ಗೊಂಬೆಯು ಅವನನ್ನು ತಡೆದು “ಎಲೈ ರಾಜನೇ, ಔದಾರ್ಯ ಧೈರ್ಯ ಮೊದಲಾದ ಗುಣಗಳಿಂದ ಕೂಡಿದ ವಿಕ್ರಮನೇ ಈ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಅರ್ಹನು’’ ಎಂದಿತು.
ಅದನ್ನು ಕೇಳಿ ರಾಜನು – “ಎಲೈ ಗೊಂಬೆಯೆ, ನನಗೆ ವಿಕ್ರಮನ ಗುಣಗಳ ಬಗ್ಗೆ ಕೇಳುವ ಮನಸ್ಸಾಗಿದೆ. ಹೇಳು’’ ಎಂದನು. ಆಗ ಗೊಂಬೆಯು ಕಥೆಯನ್ನು ಆರಂಭಿಸಿತು –
ಒಮ್ಮೆ ವಿಕ್ರಮರಾಜನು ಭೂಮಂಡಲದಲ್ಲಿ ಸಂಚರಿಸುತ್ತಾ ಒಂದು ನಗರಕ್ಕೆ ಬಂದನು. ಆ ನಗರದ ಬಳಿ ಶುದ್ಧವಾದ ನೀರಿನಿಂದ ಕೂಡಿದ ಒಂದು ನದಿ ಹರಿಯುತ್ತಿತ್ತು. ನದೀತೀರವು ನಾನಾಪ್ರಕಾರದ ಮರ-ಹೂ-ಹಣ್ಣುಗಳಿಂದ ಶೋಭಿತವಾಗಿತ್ತು. ಅದರ ಮಧ್ಯಬಾಗದಲ್ಲಿ ಸುಂದರವಾದ ಒಂದು ದೇವಾಲಯ ಇತ್ತು. ರಾಜನು ನದಿಯ ನಿರ್ಮಲವಾದ ನೀರಿನಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ನಮಸ್ಕರಿಸಿ ಕುಳಿತುಕೊಂಡನು.
ಈ ನಡುವೆ ನಾಲ್ವರು ವಿದೇಶೀಯರು ಅಲ್ಲಗೆ ಬಂದು ರಾಜನ ಹತ್ತಿರ ಕುಳಿತುಕೊಂಡರು. ಬಳಿಕ ರಾಜನು ಅವರನ್ನು – “ನೀವೆಲ್ಲ ಎಲ್ಲಿಂದ ಬಂದಿದ್ದೀರಿ ?’’ ಎಂದು ಕೇಳಿದನು.
ಅವರಲ್ಲಿ ಒಬ್ಬನು – “ನಾವು ಪೂರ್ವದೇಶದಿಂದ ಬಂದಿದ್ದೇವೆ’’ ಎಂದನು.
ರಾಜನು “ನೀವು ಆ ದೇಶದಲ್ಲಿ ಅಪೂರ್ವವಾದ ಏನನ್ನಾದರೂ ಕಂಡಿರಾ ?’’ ಎಂದು ಪ್ರಶ್ನಿಸಿದನು.
ಅದಕ್ಕೆ ಅವರು – “ಆ ದೇಶದಲ್ಲಿ ವೇತಾಲಪುರಿ ಎಂಬ ಒಂದು ನಗರವಿದೆ. ಅಲ್ಲಿ ಶೋಣಿತಪ್ರಿಯಾ ಎಂಬ ದೇವಿ ಇದ್ದಾಳೆ. ಆ ದೇಶದ ಮಹಾರಾಜನೂ ಮಹಾಜನರೂ ಸೇರಿ ಪ್ರತಿವರ್ಷವೂ ತಮ್ಮ ಮನೋರಥಪೂರ್ತಿಗಾಗಿ ಮತ್ತು ಅಶುಭದ ನಿವಾರಣೆಗಾಗಿ ಆ ದೇವತೆಗೆ ಒಬ್ಬ ಪುರುಷನನ್ನು ಬಲಿ ಕೊಡುತ್ತಾರೆ. ಆ ದಿನ ಯಾರಾದರೂ ವಿದೇಶೀಯರು ಬಂದಿದ್ದರೆ ಅವರನ್ನೇ ಪಶುವಿನಂತೆ ಆ ದೇವತೆಗೆ ಬಲಿ ಕೊಡುತ್ತಾರೆ. ನಾವು ಆ ದಿನ ಅದೇ ಮಾರ್ಗವಾಗಿ ಆ ನಗರಕ್ಕೆ ಹೋಗಿದ್ದೆವು. ಆಗ ಅವರು ನಮ್ಮನ್ನು ಕಂಡು, ಹಿಡಿಯಲು ಹತ್ತಿರ ಬಂದರು. ನಾವು ಹೇಗೋ ಅವರನ್ನು ತಳ್ಳಿ ಪ್ರಾಣಭಯದಿಂದ ಪಲಾಯನ ಮಾಡಿ ಇಲ್ಲಿಗೆ ಬಂದಿರುತ್ತೇವೆ. ಈ ದೊಡ್ಡ ಆಶ್ಚರ್ಯವನ್ನು ನಾವು ನೋಡಿದ್ದೇವೆ’’ ಎಂದರು.
ಅದನ್ನು ಕೇಳಿ ರಾಜಾ ವಿಕ್ರಮನು ಕುತೂಹಲಪರವಶನಾಗಿ ಆ ನಗರಕ್ಕೆ ಹೋಗಿ ಭಯಂಕರಿಯಾದ ಆ ದೇವಿಯನ್ನು ನೋಡಿ ನಮಸ್ಕರಿಸಿ ಅನೇಕ ರೀತಿಯಲ್ಲಿ ಸ್ತುತಿ ಮಾಡಿ, ರಂಗಮAಟಪದಲ್ಲಿ ಕುಳಿತುಕೊಂಡನು.
ಆ ಸಂದರ್ಭದಲ್ಲಿ ಮಹಾಜನರು ವಾದ್ಯಘೋಷ ಮಾಡುತ್ತಾ ಒಬ್ಬ ಮನುಷ್ಯನನ್ನು ಅಲ್ಲಿಗೆ ತಂದರು. ಅವನ ಮುಖ ಕಳಾಹೀನವಾಗಿತ್ತು. ರಾಜನು ಅವನನ್ನು ನೋಡಿ ಮನಸ್ಸಿನಲ್ಲಿ ‘ಓಹೋ, ಇವನು ದೇವತಾಬಲಿಗಾಗಿ ತಂದಿರುವ ಯಾವನೋ ಒಬ್ಬ ವಿದೇಶೀಯನಿರಬೇಕು. ನಾನು ಇವನ ರಕ್ಷಣೆ ಮಾಡುವೆನು. ಅವನ ಬದಲಾಗಿ ನನ್ನ ಶರೀರವನ್ನು ಕೊಟ್ಟು ಅವನನ್ನು ಬಿಡಿಸುತ್ತೇನೆ.’ ಹೀಗೆಂದು ಚಿಂತಿಸಿ ಅವನು ಆ ಮಹಾಜನರನ್ನು ಕುರಿತು – “ಈತನನ್ನು ಏತಕ್ಕಾಗಿ ಇಲ್ಲಿಗೆ ತಂದಿರುತ್ತೀರಿ ?’’ ಎಂದು ಪ್ರಶ್ನೆ ಮಾಡಿದನು.
ಅವರು – “ಇವನನ್ನು ನಾವು ದೇವತೆಗೆ ಬಲಿಕೊಡುತ್ತೇವೆ. ಅದರಿಂದ ಸಂತೋಷಗೊಂಡ ಅವಳು ನಮ್ಮ ಮನೋರಥವನ್ನು ಪೂರೈಸುತ್ತಾಳೆ’’ ಎಂದರು.
ರಾಜನು “ಎಲೈ ಮಹಾಜನರೆ ! ಇವನ ಶರೀರ ಅತ್ಯಂತ ದುರ್ಬಲವಾಗಿದೆ. ಅಲ್ಲದೆ ಇವನು ಭಯಗೊಂಡಿದ್ದಾನೆ. ಇವನ ಶರೀರವನ್ನು ಬಲಿ ಕೊಡುವುದರಿಂದ ದೇವತೆಗೆ ಹೇಗೆ ತೃಪ್ತಿ ಆಗೀತು ? ಇವನನ್ನು ಬಿಟ್ಟು ಬಿಡಿ. ಅದರ ಬದಲಾಗಿ ನಾನು ನನ್ನ ಶರೀರವನ್ನು ಕೊಡುತ್ತೇನೆ. ದಷ್ಟಪುಷ್ಟನಾಗಿರುವ ನನ್ನನ್ನು ಬಲಿ ಕೊಟ್ಟರೆ ದೇವತೆಗೆ ತೃಪ್ತಿಯಾಗುತ್ತದೆ’’ ಎಂದು ಹೇಳಿ ಅವನನ್ನು ಬಿಡಿಸಿ ಸ್ವತಃ ತಾನೇ ದೇವತೆಯ ಎದುರು ನಿಂತು ಖಡ್ಗವನ್ನು ತನ್ನ ಕುತ್ತಿಗೆಯ ಮೇಲೆ ಪ್ರಯೋಗಿಸಲು ಸಿದ್ಧನಾದನು. ಅಷ್ಟರಲ್ಲಿ ದೇವತೆಯು ಪ್ರತ್ಯಕ್ಷಳಾಗಿ ಆ ಖಡ್ಗವನ್ನು ಹಿಡಿದು – “ಎಲೈ ಮಹಾಸತ್ತ್ವ! ನಿನ್ನ ಧೈರ್ಯ ಮತ್ತು ಪರೋಪಕಾರದಿಂದ ಸಂತುಷ್ಟಳಾಗಿದ್ದೇನೆ. ಬೇಕಾದ ವರವನ್ನು ಬೇಡಿಕೋ’’ ಎಂದಳು.
ರಾಜನು “ಎಲೈ ದೇವಿಯೇ ! ನೀನು ಸಂತುಷ್ಟಳಾಗಿದ್ದರೆ ಇವತ್ತಿನಿಂದ ನರಬಲಿಯನ್ನು ಸೇವಿಸುವುದನ್ನು ಬಿಟ್ಟುಬಿಡು’’ ಎಂದನು.
ದೇವತೆಯು “ಹಾಗೆಯೇ ಆಗಲಿ’’ ಎಂದು ಅನುಗ್ರಹಿಸಿದಳು. ಇದೆಲ್ಲವನ್ನೂ ನೋಡಿ ಮಹಾಜನರು ರಾಜನಿಗೆ “ಹೇ ರಾಜನೇ ! ನೀನು ನಿನ್ನ ಸುಖವನ್ನು ಲೆಕ್ಕಿಸದೆ ಪರರಿಗಾಗಿ ದುಃಖ ಪಡುವೆ. ನಾವು ನಿನ್ನಂತಹ ಪರೋಪಕಾರಿಯನ್ನು ಎಂದೂ ಎಲ್ಲೂ ನೋಡಿಲ್ಲ. ನಿನಗೆ ಶುಭವಾಗಲಿ’’ ಎಂದು ಹೇಳಿ ಅಲ್ಲಿಂದ ಹೊರಟುಹೋದರು. ಬಳಿಕ ರಾಜನು ತನ್ನ ನಗರಕ್ಕೆ ಹೋದನು.
ಹೀಗೆ ಕಥೆಯನ್ನು ಹೇಳಿ ಗೊಂಬೆಯು “ಎಲೈ ರಾಜನೇ, ನಿನ್ನಲ್ಲಿ ಇಂತಹ ಗುಣಗಳು ಇದ್ದರೆ ಈ ಸಿಂಹಾಸನವನ್ನು ಏರು’’ ಎಂದಿತು.
ರಾಜನು ಸುಮ್ಮನಾದನು.
ದಾರಿದ್ರ್ಯಮೋಚನ ಎಂಬ ಇಪ್ಪತ್ತೊಂಭತ್ತನೆಯ ಉಪಾಖ್ಯಾನ
ಮತ್ತೆ ಭೋಜರಾಜನು ಸಿಂಹಾಸನವನ್ನು ಏರಲು ತೊಡಗಿದಾಗ ಮುಂದಿನ ಮೆಟ್ಟಿಲಿನಲ್ಲಿದ್ದ ಗೊಂಬೆಯು ಅವನನ್ನು ತಡೆದು – “ಎಲೈ ರಾಜನೆ, ವಿಕ್ರಮನಂತೆ ಔದಾರ್ಯ ಮೊದಲಾದ ಗುಣಗಳು ಇದ್ದವನೇ ಈ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಅರ್ಹನಾಗುತ್ತಾನೆ. ಬೇರಾರೂ ಅಲ್ಲ’’ ಎಂದಿತು.
ಭೋಜರಾಜನು “ಹಾಗಿದ್ದರೆ ವಿಕ್ರಮನ ಕಥೆಯನ್ನು ಹೇಳು’’ ಎಂದನು.

ಆಗ ಗೊಂಬೆಯು ಹೇಳಲಾರಂಭಿಸಿತು – ಒಮ್ಮೆ ವಿಕ್ರಮನು ರಾಜಕುಮಾರರಿಂದ ಒಡಗೂಡಿ ಸಭೆಯಲ್ಲಿ ಕುಳಿತಿದ್ದನು. ಆಗ ಸ್ತುತಿಪಾಠಕನೊಬ್ಬ ಸಭೆಗೆ ಬಂದು ರಾಜನನ್ನು ಸ್ತುತಿಸಿ “ಎಲೈ ರಾಜನೆ, ನಾನು ದೂರದೇಶದಲ್ಲಿ ವಾಸಿಸುವವನು. ನಿ ಕೀರ್ತಿಯನ್ನು ಕೇಳಿ ಬಂದಿದ್ದೇನೆ. ನೀನು ಯಾಚಕರಿಗೆ ಕಲ್ಪವೃಕ್ಷ ಎಂದು ಕೇಳಿದ್ದೇನೆ. ನಿನ್ನನ್ನು ನೋಡಿ ನಾನು ಧನೇಶ್ವರನೆಂಬ ರಾಜನನ್ನು ನೆನಪಿಸಿಕೊಂಡೆ. ಉತ್ತರದಿಕ್ಕಿನಲ್ಲಿ ಜಂಬೀರವೆಂಬ ನಗರದಲ್ಲಿ ಅವನು ವಾಸವಾಗಿದ್ದಾನೆ. ಅವನು ಯಾಚಕರ ದಾರಿದ್ರ್ಯವನ್ನು ನಿವಾರಿಸಲು ಹಣವನ್ನು ಕೊಡುತ್ತಾನೆ. ಒಮ್ಮೆ ಧನೇಶ್ವರನು ಮಾಘಶುಕ್ಲಸಪ್ತಮಿಯಂದು ವಸಂತಪೂಜೆ ಮಾಡಿದಾಗ ಬಹುದೂರದಿಂದಲೂ ಯಾಚಕರು ಬಂದಿದ್ದರು. ಆಗ ರಾಜನು ಅವರಿಗೆ ದಾನವಾಗಿ ಹದಿನೆಂಟು ಕೋಟಿ ಚಿನ್ನವನ್ನು ಕೊಟ್ಟನು. ನಾನು ಕಂಡ ಈ ರೀತಿಯ ಔದಾರ್ಯವಿರುವ ಮತ್ತೊಬ್ಬ ರಾಜ ನೀನು ಮಾತ್ರ’’ ಎಂದನು.
ಆ ಮಾತನ್ನು ಕೇಳಿ ವಿಕ್ರಮಾದಿತ್ಯನು ಕೋಶಾಧ್ಯಕ್ಷನನ್ನು ಕರೆದು “ಎಲೈ ಕೋಶಾಧ್ಯಕ್ಷ, ಈ ಸ್ತುತಿಪಾಠಕನನ್ನು ಕೋಶಾಗಾರಕ್ಕೆ ಕರೆದುಕೊಂಡು ಹೋಗಿ ಬೆಲೆಬಾಳುವ ರತ್ನಗಳನ್ನು ತೋರಿಸು’’ ಎಂದನು.
ಆ ಬಳಿಕ ಕೋಶಾಧ್ಯಕ್ಷನು ಅವನನ್ನು ಕೋಶಾಗಾರಕ್ಕೆ ಕರೆದೊಯ್ದು ಬೇರೆ ಬೇರೆ ವಸ್ತುಗಳನ್ನೂ ರತ್ನಗಳನ್ನೂ ತೋರಿಸಿದನು. ಸ್ತುತಿಪಾಠಕನು ಅವುಗಳಲ್ಲಿ ತನಗೆ ಇಷ್ಟವಾದ ರತ್ನಗಳನ್ನು ತೆಗೆದುಕೊಂಡು ತನ್ನ ಮನೋರಥವನ್ನು ಈಡೇರಿಸಿಕೊಂಡು ರಾಜನ ಹತ್ತಿರ ಬಂದು – “ಎಲೈ ರಾಜನೆ, ಮಹೇಶ್ವರನಾದ ನಿನ್ನ ಅನುಗ್ರಹದಿಂದ ನಾನು ಧನಪತಿಯಾಗಿರುವೆ. ಅಮೂಲ್ಯ ನಿಧಿಗಳು ನನಗೆ ದೊರೆತಿವೆ. ಈಗ ನಿನ್ನ ಚರಿತ್ರೆಯು ಹೋಲಿಕೆಯನ್ನೂ ಮೀರಿದೆ. ನಿನಗೆ ಹರಿಹರಬ್ರಹ್ಮಾದಿಗಳೂ ಸಮನಲ್ಲ’’ ಎಂದನು. ಹೀಗೆ ಸ್ತುತಿಪಾಠಕನು ರಾಜನನ್ನು ಹೊಗಳಿ “ದೀರ್ಘಾಯುಷ್ಮಂತನಾಗು’’ ಎಂದು ಅವನನ್ನು ಆಶೀರ್ವದಿಸಿ ಅಭಿನಂದಿಸಿ ತನ್ನ ಮನೆಗೆ ಹೋದನು.
ಹೀಗೆ ಕಥೆಯನ್ನು ಹೇಳಿ ಗೊಂಬೆಯು – “ರಾಜನೆ ! ನಿನ್ನಲ್ಲಿ ಈ ಬಗೆಯ ಔದಾರ್ಯ ಇದ್ದರೆ ಮಾತ್ರ ಈ ಸಿಂಹಾಸನದಲ್ಲಿ ಕುಳಿತುಕೋ’’ ಎಂದಿತು. ರಾಜನು ಸುಮ್ಮನಾದನು.