ಪದ್ಮಪುರಾಣದ ಕಥೆಗಳು
ಪಟ್ಟಾಭಿಷಿಕ್ತನಾದ ಈ ರಾಜನಿಗೆ ತನ್ನ ಪೂರ್ವಜನ್ಮದ ಸ್ಮರಣೆ ಇದ್ದೇ ಇತ್ತು. ಅನೇಕರಿಗೆ ಕೆಸರನ್ನು ದಾಟಲು ಸಹಾಯ ಮಾಡಿದ್ದರಷ್ಟರಿಂದಲೇ ತಾನು ಈಗ ರಾಜನಾಗಿರುವೆ ಎಂಬುದು ಅವನ ಗಮನದಲ್ಲಿತ್ತು. ಅಂತೆಯೇ ಅವನು ಈಗ ತನ್ನ ರಾಜ್ಯದಲ್ಲಿ ಹತ್ತಾರು ಸೇತುವೆಗಳನ್ನು ಕಟ್ಟಿಸಿ ಜನಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದನು. ಅನೇಕ ಆಣೆಕಟ್ಟುಗಳನ್ನು ಕಟ್ಟಿಸಿದನು. ಅಲ್ಲಲ್ಲಿ ಬಾವಿ, ಕೆರೆ, ಕೊಳಗಳನ್ನು ನಿರ್ಮಿಸಿದನು. ಕೈದೋಟಗಳನ್ನೂ ಅರವಟ್ಟಿಗೆಗಳನ್ನೂ ಆರಂಭ ಮಾಡಿದನು. ಯಜ್ಞಗಳನ್ನು ಮಾಡಿಸಿದ್ದಲ್ಲದೆ ಕೊಡುಗೈಯಿಂದ ದಾನಗಳನ್ನೂ ನೀಡಿದನು.
ಹಿಂದೆ ಒಬ್ಬ ಕಳ್ಳನಿದ್ದನು. ಒಮ್ಮೆ ಅವನು ಕಳ್ಳತನಕ್ಕೆಂದು ಹೊರಟಿದ್ದಾಗ ದಾರಿಯಲ್ಲಿ ಕೆಸರಿನ ಹೊಂಡವೊಂದು ಎದುರಾಯ್ತು. ಅದನ್ನು ದಾಟುವುದು ದುಸ್ತರವಾಗಿತ್ತು. ಆಗ ಅವನು ಅತ್ತಿತ್ತ ಹುಡುಕಾಡಿ ಎಲ್ಲಿಂದಲೋ ಒಂದು ಹಸುವಿನ ತಲೆಯನ್ನು ತಂದು, ಆ ಕೆಸರಿನ ಮಧ್ಯಕ್ಕೆ ಎಸೆದು ಅದರ ಮೇಲೆ ಒಂದು ಕಾಲನ್ನಿಟ್ಟು ಹೇಗೋ ಕೆಸರನ್ನು ದಾಟಿದನು. ಆಮೇಲೆ ತಾನು ಅಂದುಕೊಂಡಿದ್ದಂತೆ ಗೃಹಸ್ಥನೊಬ್ಬನ ಮನೆಗೆ ನುಗ್ಗಿ ಅಲ್ಲಿಂದ ಹಣವನ್ನೂ ಅಮೂಲ್ಯ ಆಭರಣಗಳನ್ನೂ ಕದ್ದು ಅದೇ ದಾರಿಯಲ್ಲಿ ಮತ್ತೆ ಹಸುವಿನ ತಲೆಯ ಮೇಲೆ ಹೆಜ್ಜೆಯನ್ನಿಟ್ಟು ತನ್ನ ಜಾಗಕ್ಕೆ ಹಿಂದಿರುಗಿದನು.
ಕೆಸರಿನ ಮಧ್ಯದಲ್ಲಿ ಆ ಕಳ್ಳನು ಇರಿಸಿದ್ದ ಹಸುವಿನ ತಲೆ ಅಲ್ಲಿಯೇ ಇತ್ತು. ಮುಂದೆ ಆ ದಾರಿಯಲ್ಲಿ ಓಡಾಡುವವರೆಲ್ಲ ಕೆಸರಿನ ಮಧ್ಯದಲ್ಲಿದ್ದ ಹಸುವಿನ ತಲೆಯ ಮೇಲೆ ಕಾಲನ್ನು ಇರಿಸಿಯೇ ದಾಟುತ್ತಿದ್ದರು. ಅಂದರೆ ಅವರೆಲ್ಲರಿಗೂ ಕೆಸರನ್ನು ದಾಟಲು ಆ ಗೋವಿನ ತಲೆಯೇ ಸಾಧನವಾಗಿತ್ತು. ಇದರಿಂದಾಗಿ ಅವರೆಲ್ಲರಿಗೂ ಕೆಸರನ್ನು ದಾಟಲು ಸಹಾಯ ಮಾಡಿದ ಫಲವು ಕಳ್ಳನಿಗೆ ಸಿಗುತ್ತಿತ್ತು.
ಕೆಲವು ದಿನಗಳು ಕಳೆದ ಮೇಲೆ ಕಳ್ಳನು ಮರಣ ಹೊಂದಿದನು. ಚಿತ್ರಗುಪ್ತನು ಅವನನ್ನು ಯಮಧರ್ಮನ ಎದುರು ಹಾಜರುಪಡಿಸಿದನು. ಇವನು ಜೀವನವಿಡೀ ಕಳ್ಳತನ ಮಾಡಿಯೇ ಬದುಕಿದ್ದ. ಯಾವ ವಿಧವಾದ ಧರ್ಮಕಾರ್ಯವನ್ನೂ ಇವನು ಮಾಡಿಲ್ಲ. ಪರಹಿತವನ್ನೂ ಇವನು ಬಯಸಲಿಲ್ಲ ಎಂದು ನಿವೇದಿಸಿಕೊಂಡನು.
ಅದನ್ನು ಕೇಳಿ ಯಮಧರ್ಮನು ಹಾಗಿದ್ದರೆ ಇವನನ್ನು ನೇರವಾಗಿ ನರಕಕ್ಕೆ ಒಯ್ಯಿರಿ. ಇವನು ಅಲ್ಲಿಂದ ಹೊರಗೆ ಬಾರದಂತೆ ನೋಡಿಕೊಳ್ಳಿ ಎಂದು ತನ್ನ ಕಿಂಕರರಿಗೆ ಆಜ್ಞಾಪಿಸಿದನು.
ಆಗ ಚಿತ್ರಗುಪ್ತನು ನೆನಪಿಸಿಕೊಂಡು ಹೇಳಿದನು: ಸ್ವಾಮಿನ್! ಹೀಗಿದ್ದರೂ ಇವನು ಮಾಡಿದ ಒಂದು ಸತ್ಕಾರ್ಯವಿದೆ. ಇವನು ಗೋವಿನ ತಲೆಯನ್ನು ಕೆಸರಿನ ಮಧ್ಯದಲ್ಲಿ ಇರಿಸಿ ಅನೇಕ ಜನರು ಸುಲಭವಾಗಿ ಆ ಮಾರ್ಗದಲ್ಲಿ ನಡೆದಾಡುವಂತೆ ಮಾಡಿದ್ದಾನೆ.
ಅದನ್ನು ಕೇಳಿ ಯಮಧರ್ಮನು ಪುನಃ ಚಿಂತನೆ ಮಾಡಿ, ಒಬ್ಬ ವ್ಯಕ್ತಿಯನ್ನು ದಾಟಿಸಿದ್ದಕ್ಕೆ ಒಂದು ಚಾಂದ್ರಾಯಣವ್ರತವನ್ನು ಮಾಡಿದಷ್ಟು ಫಲವಿದೆ ಎಂಬುದನ್ನು ಲೆಕ್ಕ ಹಾಕಿ ಆ ಕಳ್ಳನಿಗೆ ಹೇಳಿದನು: ಎಲೈ ದುಷ್ಟ, ನೀನು ಮಾಡಿರುವ ಆ ಒಂದು ಪುಣ್ಯಕಾರ್ಯದ ಫಲವಾಗಿ ನೀನು ಭೂಲೋಕದಲ್ಲಿ ಹನ್ನೆರಡು ವರ್ಷಗಳವರೆಗೆ ರಾಜನಾಗಿ ಸುಖವನ್ನು ಅನುಭವಿಸು. ಅನಂತರ ಈ ನರಕವಾಸವನ್ನು ಅನುಭವಿಸು.
ಕಳ್ಳನು ವಿನಯದಿಂದ ಸ್ವಾಮಿನ್! ಹಾಗೆಯೇ ಆಗಲಿ. ಆದರೆ ದಯವಿಟ್ಟು ನನಗೆ ಪೂರ್ವಜನ್ಮದ ವೃತ್ತಾಂತವು ಸ್ಮರಣೆಯಲ್ಲಿರುವಂತೆ ಅನುಗ್ರಹ ಮಾಡು- ಎಂದನು.
ಯಮಧರ್ಮನು ಹಾಗೆಯೇ ಆಗಲಿ ಎಂದು ಅನುಗ್ರಹ ಮಾಡಿದನು.
ಮುಂದೆ ಆ ಕಳ್ಳನು ಭೂಲೋಕದಲ್ಲಿ ಕಡುಬಡವರ ಮನೆಯೊಂದರಲ್ಲಿ ಜನಿಸಿದನು. ತುಂಬ ಕಷ್ಟದಿಂದಲೇ ಅವನ ಬಾಲ್ಯ ಕಳೆಯಿತು. ಇಪ್ಪತ್ತೊಂದು ವರ್ಷ ವಯಸ್ಸಾಗುವವರೆಗೂ ಅವನು ಹೇಗೋ ಜೀವನ ಮಾಡಿಕೊಂಡಿದ್ದನು.
ಈ ನಡುವೆ ಅವನು ವಾಸವಾಗಿದ್ದ ರಾಜ್ಯದ ರಾಜನು ಅಕಸ್ಮಾತ್ ಆಗಿ ತೀರಿಕೊಂಡನು. ಅವನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಮುಂದೆ ಯಾರು ಸಿಂಹಾಸನವನ್ನು ಏರಬೇಕು ಎಂದು ಮಂತ್ರಿಗಳ ನಡುವೆ ಚರ್ಚೆಯಾಯ್ತು. ಕೊನೆಗೆ ಅವರೆಲ್ಲ ಸೇರಿ ದೈವಪ್ರೇರಣೆಯಾದವರಂತೆ ಈ ಕಳ್ಳನ ಹತ್ತಿರ ಬಂದು ಅವನಿಗೆ ರಾಜ್ಯಾಭಿಷೇಕ ಮಾಡಿ ಅವನನ್ನೇ ತಮ್ಮ ರಾಜನನ್ನಾಗಿ ಮಾಡಿಕೊಂಡರು.
ಪಟ್ಟಾಭಿಷಿಕ್ತನಾದ ಈ ರಾಜನಿಗೆ ತನ್ನ ಪೂರ್ವಜನ್ಮದ ಸ್ಮರಣೆ ಇದ್ದೇ ಇತ್ತು. ಅನೇಕರಿಗೆ ಕೆಸರನ್ನು ದಾಟಲು ಸಹಾಯ ಮಾಡಿದ್ದರಷ್ಟರಿಂದಲೇ ತಾನು ಈಗ ರಾಜನಾಗಿರುವೆ ಎಂಬುದು ಅವನ ಗಮನದಲ್ಲಿತ್ತು. ಅಂತೆಯೇ ಅವನು ಈಗ ತನ್ನ ರಾಜ್ಯದಲ್ಲಿ ಹತ್ತಾರು ಸೇತುವೆಗಳನ್ನು ಕಟ್ಟಿಸಿ ಜನಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದನು. ಅನೇಕ ಆಣೆಕಟ್ಟುಗಳನ್ನು ಕಟ್ಟಿಸಿದನು. ಅಲ್ಲಲ್ಲಿ ಬಾವಿ, ಕೆರೆ, ಕೊಳಗಳನ್ನು ನಿರ್ಮಿಸಿದನು. ಕೈದೋಟಗಳನ್ನೂ ಅರವಟ್ಟಿಗೆಗಳನ್ನೂ ಆರಂಭ ಮಾಡಿದನು. ಯಜ್ಞಗಳನ್ನು ಮಾಡಿಸಿದ್ದಲ್ಲದೆ ಕೊಡುಗೈಯಿಂದ ದಾನಗಳನ್ನೂ ಮಾಡಿದನು.
ಮುಂದೆ ಕಾಲಾನುಕ್ರಮದಿಂದ ಅವನು ಮರಣ ಹೊಂದಿದನು. ಯಥಾಪ್ರಕಾರ ಅವನನ್ನು ಯಮಧರ್ಮರಾಜನ ಎದುರು ಹಾಜರುಪಡಿಸಲಾಯ್ತು. ಯಮಧರ್ಮರಾಜ, ನನ್ನನ್ನು ಉದ್ಧರಿಸಬೇಕು ಎಂದು ಅವನು ಬೇಡಿಕೊಂಡನು.
ಕೂಡಲೇ ಚಿತ್ರಗುಪ್ತನು ನಿವೇದಿಸಿಕೊಂಡನು: ಸ್ವಾಮಿನ್! ಇವನ ಪಾಪವೆಲ್ಲ ತೊಡೆದುಹೋಗಿದೆ. ಇವನು ಈಗ ವಿಷ್ಣುಲೋಕಕ್ಕೆ ಅರ್ಹನಾಗಿದ್ದಾನೆ.
ಯಮನು ಅದರ ಕಾರಣವನ್ನು ತಿಳಿದುಕೊಂಡು ಪ್ರೀತಿಯಿಂದ ನಗುತ್ತಾ ಆಗಲಿ, ಇವನು ವಿಷ್ಣುಲೋಕಕ್ಕೇ ಹೋಗಲಿ ಎಂದು ಆಜ್ಞಾಪಿಸಿದನು. ಆ ಕೂಡಲೇ ದೇವಲೋಕದಿಂದ ವಿಮಾನವೊಂದು ಬಂದು ಅವನನ್ನು ವಿಷ್ಣುಲೋಕಕ್ಕೆ ಕೊಂಡುಹೋಯಿತು. ಕೊನೆಗೆ ಅವನು ವಿಷ್ಣುಸಾಯುಜ್ಯವನ್ನು ಹೊಂದಿದನು.
(ಸೃಷ್ಟಿಖಂಡ)