ಇಂದ್ರಜಾಲ ಪ್ರದರ್ಶನ ಎಂಬ ಮೂವತ್ತನೆಯ ಉಪಾಖ್ಯಾನ
ಬಳಿಕ ರಾಜನು ಸಿಂಹಾಸನವನ್ನು ಏರಲು ತೊಡಗಿದಾಗ ಮತ್ತೊಂದು ಗೊಂಬೆಯು “ಭೋಜರಾಜನೆ, ವಿಕ್ರಮನಂತೆ ಔದಾರ್ಯಾದಿ ಗುಣಗಳಿದ್ದವನೇ ಈ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಯೋಗ್ಯನು, ಮತ್ತೊಬ್ಬನಲ್ಲ” ಎಂದಿತು. ರಾಜನು ವಿಕ್ರಮನ ಔದಾರ್ಯ ಗುಣವೃತ್ತಾಂತವನ್ನು ಹೇಳುವಂತೆ ಕೇಳಿದಾಗ ಗೊಂಬೆಯು ಕಥೆಯನ್ನು ಆರಂಭಿಸಿತು.
ಒಮ್ಮೆ ರಾಜನಾದ ವಿಕ್ರಮನು ಎಲ್ಲಾ ಸಾಮಂತರಾಜಕುಮಾರರೊಡನೆ ಮಾತನಾಡುತ್ತಾ ಸಿಂಹಾಸನದಲ್ಲಿ ಕುಳಿತುಕೊಂಡಿದ್ದನು. ಆಗ ಐಂದ್ರಜಾಲಿಕನೊಬ್ಬ ಬಂದು ರಾಜನಿಗೆ ನಮಸ್ಕರಿಸಿ “ಎಲೈ ದೇವನೆ, ನೀನು ಸಕಲಕಲೆಗಳನ್ನು ಬಲ್ಲವನು. ನಿನ್ನ ಹತ್ತಿರ ಬಂದು ಅನೇಕ ಐಂದ್ರಜಾಲಿಕರು ಲೀಲಾಜಾಲವಾಗಿರುವ ಪ್ರದರ್ಶನವನ್ನು ತೋರಿಸಿಯೇ ಇರುತ್ತಾರೆ. ಇಂದು ದಯವಿಟ್ಟು ನನ್ನ ಪ್ರದರ್ಶನವನ್ನು ನೋಡು” ಎಂದನು.
ವಿಕ್ರಮನು “ಎಲೈ ಐಂದ್ರಜಾಲಿಕ, ಇಂದು ನಮಗೆ ಸಮಯವಿಲ್ಲ. ಸ್ನಾನಭೋಜನಾದಿಗಳಿಗೆ ಸಮಯ ಆಗಿದೆ. ನಾಳೆ ಬೆಳಗ್ಗೆ ನೋಡೋಣ” ಎಂದನು.
ಮರುದಿನ ಬೆಳಗ್ಗೆ ವಿಕ್ರಮನು ಸಭೆಯಲ್ಲಿ ಕುಳಿತಿರುವಾಗ ಯಾರೋ ಒಬ್ಬ ದೊಡ್ಡಶರೀರವುಳ್ಳವನು ರಾಜಸಭೆಗೆ ಪ್ರವೇಶಿಸಿದನು. ಅವನ ಮುಖದಲ್ಲಿ ದೊಡ್ಡ ಮೀಸೆ ಇತ್ತು, ಕಂಠವು ವಿಶಾಲವಾಗಿದ್ದು ಶರೀರವು ಎತ್ತರವಾಗಿತ್ತು. ಅವನ ಕೈಯಲ್ಲಿ ಖಡ್ಗ ಇತ್ತು. ಅವನ ಜೊತೆಗೆ ಒಬ್ಬಳು ಸುಂದರವಾದ ಸ್ತಿçà ಇದ್ದಳು. ಅವನು ರಾಜಸಭೆಗೆ ಬಂದು ಕುಳಿತಿದ್ದ ರಾಜನಿಗೆ ನಮಸ್ಕರಿಸಿದನು.
ರಾಜನು ಅವನನ್ನು “ಯಾರು ನೀನು? ಎಲ್ಲಿಂದ ಬಂದೆ?’’ ಎಂದು ಕೇಳಿದನು.
ಅವನು “ಎಲೈ ರಾಜನೆ, ನಾನು ದೇವರಾಜನಾದ ಮಹೇಂದ್ರನ ಸೇವಕನಿದ್ದೇನೆ. ಯಾವುದೋ ಕಾರಣದಿಂದ ನಮ್ಮ ಒಡೆಯನಿಂದ ಶಪಿಸಲ್ಪಟ್ಟು ಈಗ ಭೂಮಂಡಲದಲ್ಲಿ ಇದ್ದೇನೆ. ಇವಳು ನನ್ನ ಹೆಂಡತಿ. ಇಂದು ದೇವತೆಗಳಿಗೂ ರಾಕ್ಷಸರಿಗೂ ದೊಡ್ಡ ಯುದ್ಧ ನಡೆಯುತ್ತಿದೆ. ಆದ್ದರಿಂದ ನಾನು ಅಲ್ಲಿಗೆ ಹೋಗಬೇಕಾಗಿದೆ. ಆದರೆ ಹೆಂಡತಿಯನ್ನು ಏನು ಮಾಡಲಿ? ಮಹಾರಾಜ ವಿಕ್ರಮನು ಜಿತೇಂದ್ರಿಯ ಎಂದು ನಾನು ಕೇಳಿ ತಿಳಿದಿದ್ದೇನೆ. ಆದ್ದರಿಂದ ನನ್ನ ಹೆಂಡತಿ ನಿನ್ನ ಬಳಿ ಇದ್ದರೆ ಸುರಕ್ಷಿತವಾಗಿ ಇರುವಳು ಎಂದು ವಿಚಾರಿಸಿ ಅವಳನ್ನು ನಿನ್ನಲ್ಲಿ ನ್ಯಾಸವಾಗಿಟ್ಟು ಯುದ್ಧಕ್ಕೆ ಹೋಗಲೆಂದು ಬಂದಿರುವೆನು” ಎಂದು ಹೇಳಿದನು. ಅದನ್ನು ಕೇಳಿ ರಾಜನು ಮತ್ತು ಬೇರೆಯವರು ಆಶ್ಚರ್ಯಪಟ್ಟರು.
ಬಳಿಕ ಆ ವೀರನು ರಾಜನ ಬಳಿ ತನ್ನ ಹೆಂಡತಿಯನ್ನು ಬಿಟ್ಟು ಖಡ್ಗವನ್ನು ತೆಗೆದುಕೊಂಡು ಆಕಾಶಕ್ಕೆ ಹಾರಿದನು. ಆಗ ಆಕಾಶದಲ್ಲಿ ಭಯಂಕರ ಶಬ್ದವು ಉಂಟಾಯಿತು. “ರೇ ರೇ, ಕೊಲ್ಲಿರಿ, ಹೊಡೆಯಿರಿ” ಎಂಬ ಮಾತುಗಳು ಕೇಳಿಸಿದವು. ಸಭೆಯಲ್ಲಿ ಕುಳಿತವರೆಲ್ಲ ಆಶ್ಚರ್ಯದಿಂದ ಮೇಲೆ ನೋಡುತ್ತಿದ್ದರು. ಸ್ವಲ್ಪ ಸಮಯ ಕಳೆದಾಗ ರಾಜಸಭೆಯ ಮಧ್ಯಭಾಗದಲ್ಲಿ ಆಕಾಶದಿಂದ ರಕ್ತ ಅಂಟಿದ ಖಡ್ಗವೊಂದು ಕೆಳಗೆ ಬಿತ್ತು. ಹಾಗೆಯೇ ಒಂದು ಕೈಯೂ ಸಹ ಬಿತ್ತು. ಇದೆಲ್ಲವನ್ನೂ ನೋಡಿ ಎಲ್ಲರೂ – “ಅಹೋ, ಈ ಸ್ತಿçÃಯ ಗಂಡನನ್ನು ಯುದ್ಧದಲ್ಲಿ ಶತ್ರುಗಳು ಕೊಂದಿದ್ದಾರೆ. ಅವನ ಒಂದು ಕೈ ಮತ್ತು ಖಡ್ಗ ಇಲ್ಲಿ ಬಿದ್ದಿವೆ” ಎಂದು ಹೇಳಿದರು.
ಅವರು ಹೀಗೆ ಹೇಳುತ್ತಿದ್ದಂತೆ ಆಕಾಶದಿಂದ ರುಂಡವು ಬಿತ್ತು, ಆಮೇಲೆ ಮುಂಡವೂ ಬಿತ್ತು. ಇದೆಲ್ಲವನ್ನು ನೋಡಿ ಆ ವೀರವನಿತೆ – “ಎಲೈ ದೇವತೆಗಳೆ, ನನ್ನ ಗಂಡನು ರಣರಂಗದಲ್ಲಿ ಸಾವನ್ನಪ್ಪಿದ್ದಾನೆ. ಇದು ಅವನ ಶರೀರ, ಇದು ಅವನ ಖಡ್ಗ, ಇದು ಕೈ, ರುಂಡ ಎಲ್ಲಾ ಬಿದ್ದಿವೆ. ಹೀಗಿರುವಾಗ ನನ್ನ ಗಂಡನು ಸ್ವರ್ಗವನ್ನು ಸೇರಿರುತ್ತಾನೆ. ಇನ್ನು ಅವನನ್ನು ದೇವಲೋಕದ ಅಂಗನೆಯರು ಸೇವಿಸುತ್ತಾರೆ. ನನ್ನ ಗಂಡನೇ ಇಲ್ಲದ ಮೇಲೆ ನಾನು ಇನ್ನು ಯಾರಿಗಾಗಿ ಬದುಕಿ ಉಳಿಯಲಿ? ಮಹಿಳೆಯರು ಪತಿಯನ್ನು ಅನುಸರಿಸುವುದು ಲೋಕರೂಢಿ. ಆದ್ದರಿಂದ ನಾನೂ ಅಗ್ನಿಪ್ರವೇಶ ಮಾಡಿ ನನ್ನ ಪತಿಯನ್ನು ಅನುಸರಿಸುತ್ತೇನೆ, ದಯವಿಟ್ಟು ಅದಕ್ಕೆ ವ್ಯವಸ್ಥೆ ಮಾಡಿ” ಎಂದು ಹೇಳುತ್ತಾ ವಿಕ್ರಮನ ಕಾಲಿಗೆ ಬಿದ್ದಳು.
ವಿಕ್ರಮನು ಅವಳ ಮಾತನ್ನು ಕೇಳಿ ಕರುಣೆಯಿಂದ ಕೂಡಿದ ಹೃದಯವುಳ್ಳವನಾಗಿ ಶ್ರೀಗಂಧದ ಕಟ್ಟಿಗೆಗಳಿಂದ ಚಿತೆಯನ್ನು ಸಿದ್ಧಪಡಿಸಿ ಅವಳಿಗೆ ಚಿತೆಯನ್ನು ಏರಲು ಅಪ್ಪಣೆಯನ್ನು ಕೊಟ್ಟನು. ಅವಳೂ ರಾಜನ ಅನುಮತಿ ಪಡೆದು ಗಂಡನ ಶರೀರದ ಜೊತೆಗೆ ತಾನೂ ಅಗ್ನಿಯನ್ನು ಪ್ರವೇಶಿಸಿದಳು.
ಮರುದಿನ ಬೆಳಗ್ಗೆ ರಾಜನು ಸಂಧ್ಯಾದಿ ಕರ್ಮಗಳನ್ನು ಮುಗಿಸಿ ಸಿಂಹಾಸನದಲ್ಲಿ ಕುಳಿತಿದ್ದನು. ಸಾಮಂತರೂ ಎದುರಿಗಿದ್ದರು. ಅಗ ಹಿಂದಿನ ದಿನ ಬಂದಿದ್ದ ಅದೇ ದೊಡ್ಡ ಮೀಸೆಯ ವ್ಯಕ್ತಿ ಕೈಯಲ್ಲಿ ಖಡ್ಗ ಹಿಡಿದುಕೊಂಡು ರಾಜನ ಹತ್ತಿರ ಬಂದು ಅವನ ಕೊರಳಿಗೆ ಕಲ್ಪವೃಕ್ಷದ ಹೂಗಳಿಂದ ಕೂಡಿದ ಮಾಲೆಯನ್ನು ಹಾಕಿ ಯುದ್ಧದ ವಾರ್ತೆಯನ್ನು ಹೇಳಲು ಪ್ರಾರಂಭಿಸಿದನು –
“ರಾಜನ್! ನಾನು ಇಲ್ಲಿಂದ ಹೋದಾಗ ಮಹೇಂದ್ರನಿಗೂ ರಾಕ್ಷಸರಿಗೂ ಘೋರವಾದ ಯುದ್ಧ ನಡೆಯಿತು. ಆ ಸಂದರ್ಭದಲ್ಲಿ ಅನೇಕ ರಾಕ್ಷಸರು ಹತರಾದರು. ಕೆಲವರು ಪಲಾಯನ ಮಾಡಿದರು. ಯುದ್ಧದ ಕೊನೆಯಲ್ಲಿ ದೇವೇಂದ್ರನು ಸಂತುಷ್ಟನಾಗಿ – “ಎಲೈ ವೀರ! ನೀನು ಇನ್ನು ಭೋಲೋಕಕ್ಕೆ ಹೋಗಬೇಕಾಗಿಲ್ಲ. ನಿನ್ನ ಶಾಪ ಕೊನೆಗೊಂಡಿತು. ನಿನ್ನಲ್ಲಿ ಸಂತುಷ್ಟನಾಗಿದ್ದೇನೆ, ಇದನ್ನು ತೆಗೆದುಕೋ” ಎಂದು ಹೇಳಿ ತನ್ನ ಕೈಯಿಂದ ರತ್ನಖಚಿತವಾದ ಮುತ್ತಿನ ಬಳೆಯೊಂದನ್ನು ನನಗೆ ಕೊಟ್ಟನು. ಆಗ ನಾನು “ಸ್ವಾಮಿನ್! ಇಲ್ಲಿಗೆ ಬರುವ ಮೊದಲು ನಾನು ನನ್ನ ಹೆಂಡತಿಯನ್ನು ವಿಕ್ರಮನಲ್ಲಿ ನ್ಯಾಸವಾಗಿ ಇಟ್ಟು ಬಂದಿರುವೆ. ಅವಳನ್ನು ಕರೆದುಕೊಂಡು ತತ್ಕ್ಷಣವೇ ಬರುವೆ” ಎಂದು ಹೇಳಿದೆ. ಆ ಕಾರಣದಿಂದ ಈಗ ನನ್ನ ಹೆಂಡತಿಯನ್ನು ಕರೆದೊಯ್ಯಲು ಬಂದಿರುವೆ. ನೀನು ಧಾರ್ಮಿಕ ಚೂಡಾಮಣಿ. ನನ್ನ ಹೆಂಡತಿಯನ್ನು ಕೊಡು. ಅವಳೊಂದಿಗೆ ನಾನು ಮತ್ತೆ ಸ್ವರ್ಗಲೋಕಕ್ಕೆ ತೆರಳುವೆ” ಎಂದನು.
ಅವನ ಮಾತನ್ನು ಕೇಳಿ ರಾಜನಿಗೆ ಆಶ್ಚರ್ಯವಾಯಿತು. ಸಭೆಯಲ್ಲಿ ಕುಳಿತವರೆಲ್ಲರೂ ಆಶ್ಚರ್ಯಪಟ್ಟರು. ಮತ್ತೆ ಐಂದ್ರಜಾಲಿಕನು “ರಾಜನ್! ಯಾಕೆ ಮೌನವಾಗಿರುವೆ?’’ ಎಂದನು.
ರಾಜನ ಹತ್ತಿರದವರು “ನಿನ್ನ ಹೆಂಡತಿ ಚಿತಾಪ್ರವೇಶ ಮಾಡಿದಳು” ಎಂದು ಹೇಳಿದರು. ಅದಕ್ಕೆ ಅವನು
“ಯಾಕೆ?’’ ಎಂದು ಕೇಳಲು ಅವರೆಲ್ಲರೂ ನಿರುತ್ತರರಾದರು. ಆಗ ಅವನು “ಮಹಾರಾಜ! ವಿಕ್ರಮಭೂಪಾಲ! ಎಂತಹ ಕೆಲಸ ಮಾಡಿದೆ? ನನ್ನ ಹೆಂಡತಿಯನ್ನು ರಕ್ಷಿಸದೇ ಹೋದೆಯಲ್ಲ? ಈಗ ನಾನೇನು ಮಾಡಲಿ? ನನ್ನ ಹೆಂಡತಿಯನ್ನು ನನಗೆ ಕೊಡು” ಎಂದು ಹೇಳಿದನು.
ಆಗ ರಾಜನು – “ಎಲೈ ವೀರ! ಖಡ್ಗ ಬಾಹುಗಳ ಸಮೇತವಾಗಿ ನಿನ್ನ ರುಂಡ-ಮುಂಡಗಳೆರಡೂ ಆಕಾಶದಿಂದ ಕೆಳಗೆ ಬಿದ್ದವು. ಅದನ್ನು ನೋಡಿ ನಾವು ನೀನು ಯುದ್ಧದಲ್ಲಿ ಮರಣ ಹೊಂದಿರುವೆ ಎಂದು ನಿಶ್ಚಯ ಮಾಡಿದೆವು. ಆದ್ದರಿಂದ ಸಭಾಸದರ ಮತ್ತು ನನ್ನ ಅನುಮತಿಯನ್ನು ಪಡೆದೇ ನಿನ್ನ ಹೆಂಡತಿ ಚಿತಾಗ್ನಿಯನ್ನು ಪ್ರವೇಶಿಸಿದ್ದಾಳೆ” ಎಂದು ಹೇಳಿದನು.
ವೀರನು “ರಾಜನ್! ಇದು ಸುಳ್ಳು. ರೂಪವತಿಯಾದ ಸ್ತ್ರೀಯನ್ನು ಕಂಡು ನೀನೇ ಅವಳನ್ನು ಮನೆಯೊಳಗೆ ಮುಚ್ಚಿಟ್ಟಿರುವೆ. ನಾನು ಸತ್ತಾಗ ಅಗ್ನಿಪ್ರವೇಶ ಮಾಡದೆ ಅವಳು ಸಶರೀರವಾಗಿಯೇ ಸ್ವರ್ಗಕ್ಕೆ ಹೋಗಬೇಕೆಂದು ನಿರ್ಧಾರವಾಗಿತ್ತು” ಎಂದನು.
ಆಗ ಸಭಾಸದರೆಲ್ಲರೂ “ಮಹಾರಾಜನು ಹೇಳಿರುವುದು ಸತ್ಯ. ಆಕೆ ನಮ್ಮ ಎದುರೇ ಅಗ್ನಿಪ್ರವೇಶ ಮಾಡಿರುತ್ತಾಳೆ” ಎಂದರು.
ಆದರೆ ಆತನು “ಇಲ್ಲ, ನಾನು ಹೇಳಿರುವುದೇ ಸತ್ಯ” ಎನ್ನುತ್ತಾ ಪಕ್ಕದಲ್ಲೇ ಇದ್ದ ಮನೆಯೊಳಗಿನಿಂದ ಓರ್ವ ಹೆಣ್ಣನ್ನು ಕೈಹಿಡಿದು ರಾಜಸಭೆಯ ಮಧ್ಯಭಾಗಕ್ಕೆ ತಂದು ಅವಳ ಮುಖದ ಮುಸುಕನ್ನು ತೆಗೆದು ತೋರಿಸಿದಾಗ ಎಲ್ಲರೂ ನಾಚಿಕೆ ಪಟ್ಟರು. ಅವರಿಗೆಲ್ಲ ಆಶ್ಚರ್ಯವೂ ಉಂಟಾಯಿತು. ಏಕೆಂದರೆ ಅವಳು ಆ ವೀರನ ಹೆಂಡತಿಯೇ ಆಗಿದ್ದಳು.
ಅನಂತರ ವೀರನು ರಾಜನಿಗೆ “ಮಹಾರಾಜ! ಮೊನ್ನೆ ನಿನ್ನ ಆಸ್ಥಾನಕ್ಕೆ ಬಂದಿದ್ದ ಐಂದ್ರಜಾಲಿಕನೇ ನಾನು. ನಿನ್ನ ಎದುರು ನಾನು ಇಂದ್ರಜಾಲವನ್ನು ಪ್ರದರ್ಶಿಸಿದ್ದೇನೆ. ನೀವೆಲ್ಲ ಇದುವರೆಗೆ ನೋಡಿರುವುದು ಅದನ್ನೇ” ಎಂದನು.
ರಾಜನೂ ಸೇರಿ ಎಲ್ಲರೂ ಆಶ್ಚರ್ಯಪಟ್ಟರು. ಅದೇ ಹೊತ್ತಿಗೆ ಸರಿಯಾಗಿ ಕೋಶಾಧಿಕಾರಿ ಬಂದು “ರಾಜನ್! ಪಾಂಡ್ಯರಾಜನು ಕಪ್ಪಕಾಣಿಕೆಗಳೆಂದು ಬಂಗಾರ, ಮುತ್ತು, ರತ್ನ, ಆನೆ, ಕುದುರೆಗಳೂ ಸೇರಿದಂತೆ ತುಂಬಾ ಸಂಪತ್ತನ್ನು ಕಳಿಸಿದ್ದಾನೆ” ಎಂದು ನಿವೇದಿಸಿಕೊಂಡನು.
ರಾಜನು ಕೂಡಲೇ “ಅದೆಲ್ಲವನ್ನೂ ಈ ಐಂದ್ರಜಾಲಿಕನಿಗೆ ಕೊಡು” ಎಂದು ಆಜ್ಞಾಪಿಸಿದನು. ಕೋಶಾಧಿಕಾರಿಯು ಎಲ್ಲವನ್ನೂ ಅವನಿಗೆ ಕೊಟ್ಟನು.
ಈ ಕಥೆಯನ್ನು ಹೇಳಿ ಗೊಂಬೆಯು “ರಾಜನ್! ನಿನ್ನಲ್ಲಿ ಇಂತಹ ಔದಾರ್ಯವಿದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು.
ಭೋಜರಾಜನು ಮುಖವನ್ನು ಕೆಳಗೆ ಮಾಡಿ ನಿಂತನು.