‘ದ್ವಾತ್ರಿಂಶತ್ ಪುತ್ತಲಿಕಾ ಸಿಂಹಾಸನಮ್’ ಕಥೆಗಳು
ವಿಕ್ರಮನನ್ನು ನೋಡಿ ಕಾಮಧೇನು ಆರ್ತನಾದ ಮಾಡಿತು. ಆ ಶಬ್ದವನ್ನು ಕೇಳಿ ಕರುಣೆಯಿಂದ ಹತ್ತಿರಕ್ಕೆ ಬಂದ ವಿಕ್ರಮನು ಅದನ್ನು ಕೆಸರಿನಿಂದ ಎತ್ತಲು ಪ್ರಯತ್ನ ಮಾಡಿದನು. ಆಗಲೇ ಸೂರ್ಯಾಸ್ತ್ತವಾಗಿತ್ತು.
ಪುನಃ ಭೋಜರಾಜನು ಸಿಂಹಾಸನವನ್ನು ಏರಲು ಬಂದಾಗ ಮತ್ತೊಂದು ಗೊಂಬೆಯು ಅವನನ್ನು ತಡೆದು “ರಾಜನ್! ವಿಕ್ರಮನ ಸದೃಶವಾದ ಔದಾರ್ಯಾದಿಗುಣಗಳು ನಿನ್ನಲ್ಲಿದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು.
ಅದನ್ನು ಕೇಳಿ ಭೋಜರಾಜನು “ಗೊಂಬೆಯೇ, ಅವನ ಔದಾರ್ಯಾದಿ ಗುಣಗಳ ಬಗ್ಗೆ ತಿಳಿಸು”ಎಂದಾಗ ಗೊಂಬೆಯು ಕಥೆಯನ್ನು ಆರಂಭಿಸಿತು.
ಒಮ್ಮೆ ಸ್ವರ್ಗದಲ್ಲಿ ಇಂದ್ರನು ಸಿಂಹಾಸನದಲ್ಲಿ ಕುಳಿತಿದ್ದನು. ಅವನ ಸಭೆಯಲ್ಲಿ ಋಷಿಗಳು ಹಾಗೂ ದೇವತೆಗಳು ಇದ್ದರು. ದಿಕ್ಪಾಲಕರು, ಮರುದ್ಗಣಗಳು, ದ್ವಾದಶಾದಿತ್ಯರೂ ಇದ್ದರು. ನಾರದ, ತುಂಬುರು ಮೊದಲಾದ ದೇವರ್ಷಿಗಳೂ, ಊರ್ವಶಿ, ಮೇನಕೆ, ರಂಭೆ, ತಿಲೋತ್ತಮೆ, ಘೃತಾಚಿ, ಮಂಜುಘೋಷಾ ಮೊದಲಾದ ಅಪ್ಸರೆಯರೂ ಅಲ್ಲಿ ಕುಳಿತಿದ್ದರು. ಎಲ್ಲ ಗಂಧರ್ವರೂ ಸೇರಿದ್ದರು. ಆಗ ನಾರದರು – “ಸಕಲಭೂಮಂಡಲದಲ್ಲಿ ವಿಕ್ರಮನಿಗೆ ಸಮಾನನಾದ ಕೀರ್ತಿವಂತನಾದ ಪರೋಪಕಾರಿಯಾದ ಮತ್ತೊಬ್ಬ ಮಹಾನುಭಾವನಿಲ್ಲ” ಎಂದರು.
ಅದನ್ನು ಕೇಳಿ ಎಲ್ಲಾ ದೇವತೆಗಳು ಆಶ್ಚರ್ಯ ಹೊಂದಿದರು. ದೇವೇಂದ್ರನಿಗೆ ಇದನ್ನು ಪರೀಕ್ಷಿಸಬೇಕೆಂದು ಅನಿಸಿತು. ಅವನು ಕೂಡಲೇ ಕಾಮಧೇನುವಿಗೆ “ನೀನು ಭೂಲೋಕಕ್ಕೆ ಹೋಗಿ ವಿಕ್ರಮನ ದಯೆ, ಪರೋಪಕಾರಗಳನ್ನು ಪರೀಕ್ಷಿಸಿ ಬಾ” ಎಂದು ಆಜ್ಞಾಪಿಸಿದನು.
ಕಾಮಧೇನುವು ತೀರಾ ಬಡಕಲಾದ ಒಂದು ಹಸುವಿನ ರೂಪವನ್ನು ಧರಿಸಿ ಭೂಲೋಕಕ್ಕೆ ಬಂದಳು. ಆಗ ಅದೇ ದಾರಿಯಲ್ಲಿ ಎದುರಿನಿಂದ ವಿಕ್ರಮನು ಬರುತ್ತ್ತಿದ್ದನು. ಅದನ್ನು ತಿಳಿದು ಕಾಮಧೇನುವು ತನ್ನ ಮಾಯೆಯಿಂದ ಒಂದು ನಾಟಕವನ್ನು ಕಲ್ಪಿಸಿದಳು. ಅದರಂತೆ ಅವಳು ದೊಡ್ಡ ಕೆಸರಿನಲ್ಲಿ ಸಿಲುಕಿಹಾಕಿಕೊಂಡಳು. ಅಲ್ಲಿಂದ ಎಷ್ಟು ಕಷ್ಟಪಟ್ಟರೂ ಹೊರಕ್ಕೆ ಬರುವುದು ಸಾಧ್ಯವಿರಲಿಲ್ಲ. ಪಕ್ಕದಲ್ಲಿ ಒಂದು ಭಯಾನಕ ಹುಲಿ ಬಂದು ನಿಂತುಕೊಂಡು ಹಸುವನ್ನು ತಿನ್ನಲು ಆಸೆಯಿಂದ ಹೊಂಚು ಹಾಕುತ್ತಾ ನಿಂತಿತ್ತು.
ಆಗ ಅಲ್ಲಿಗೆ ಬಂದ ವಿಕ್ರಮನನ್ನು ನೋಡಿ ಕಾಮಧೇನು ಆರ್ತನಾದ ಮಾಡಿತು. ಆ ಶಬ್ದವನ್ನು ಕೇಳಿ ಕರುಣೆಯಿಂದ ಹತ್ತಿರಕ್ಕೆ ಬಂದ ವಿಕ್ರಮನು ಅದನ್ನು ಕೆಸರಿನಿಂದ ಎತ್ತಲು ಪ್ರಯತ್ನ ಮಾಡಿದನು. ಆಗಲೇ ಸೂರ್ಯಾಸ್ತ್ತವಾಗಿತ್ತು. ಬಳಿಕ ಕ್ರಮವಾಗಿ ಕತ್ತಲೆ ಆವರಿಸಿ ರಾತ್ರಿಯೂ ಆಯಿತು. ಹಸುವನ್ನು ಕೆಸರಿನಿಂದ ಎತ್ತುವುದು ಸಾಧ್ಯವಾಗಲಿಲ್ಲವಾದರೂ ಅನಾಥೆಯಾದ ಆಕೆ ಕೆಸರಿನಲ್ಲಿ ಮುಳುಗಿ ಹೋಗದ ಹಾಗೆ ಅವನು ಗೋವನ್ನು ರಕ್ಷಿಸುತ್ತಾ ಅಲ್ಲೇ ನಿಂತನು. ಹೀಗೆ ಅವನು ಇಡೀ ರಾತ್ರಿ ಅಲ್ಲೇ ನಿಂತಿದ್ದನು. ಅವನು ಇದ್ದಿದ್ದುದರಿಂದ ಹುಲಿಯೂ ಹತ್ತಿರ ಬರಲಿಲ್ಲ.
ಬಳಿಕ ಸೂರ್ಯೋದಯವಾದಾಗ ಕಾಮಧೇನುವು ವಿಕ್ರಮನ ದಯಾಗುಣವನ್ನು ನೋಡಿ ತಾನೇ ಕೆಸರಿನಿಂದ ಎದ್ದು ಬಂದಳು. ಮತ್ತು ರಾಜನಿಗೆ “ರಾಜನ್! ನಾನು ಕಾಮಧೇನು. ನಿನ್ನನ್ನು ಪರೀಕ್ಷಿಸಲೆಂದೇ ಸ್ವರ್ಗದಿಂದ ಇಲ್ಲಿಗೆ ಬಂದಿರುವೆ. ನಿನ್ನಂತಹ ದಯಾಪರನಾದ ರಾಜ ಭೂತಲದಲ್ಲಿ ಬೇರೆ ಯಾರೂ ಇಲ್ಲ ಎಂದು ನನಗೆ ಈಗ ನಂಬಿಕೆಯಾಗಿದೆ. ನಾನು ಪ್ರಸನ್ನಳಾಗಿರುವೆ. ಬೇಕಾದ ವರವನ್ನು ಬೇಡಿಕೋ” ಎಂದಳು.
ರಾಜನು – “ತಾಯಿ! ನಿನ್ನ ಅನುಗ್ರಹದಿಂದ ನನಗೆ ಯಾವ ಕೊರತೆಯೂ ಇಲ್ಲ. ಹೀಗಿರುವಾಗ ನಾನು ಏನನ್ನು ಬೇಡಲಿ?’’ ಎಂದನು.
ಆಗ ಕಾಮಧೇನು “ನನ್ನ ಮಾತು ಎಂದಿಗೂ ನಿಷ್ಫಲವಾಗುವುದಿಲ್ಲ. ನಾನು ನಿನ್ನ ಬಳಿಯೇ ಇದ್ದುಬಿಡುತ್ತೇನೆ” ಎಂದು ಹೇಳುತ್ತಾ ರಾಜನೊಂದಿಗೆ ಹೊರಟುಬಿಟ್ಟಳು. ವಿಕ್ರಮನು ಅವಳೊಂದಿಗೆ ನಡೆದು ಬರುತ್ತಿದ್ದಾಗ ಒಬ್ಬ ಬ್ರಾಹ್ಮಣನು ಎದುರಿಗೆ ಬಂದನು. ಅವನು ರಾಜನನ್ನು ಆಶೀರ್ವದಿಸಿ “ರಾಜನ್! ನಾನೊಬ್ಬ ಬಡಬ್ರಾಹ್ಮಣ. ಹೊಟ್ಟೆ ಹೊರೆದುಕೊಳ್ಳುವುದಕ್ಕಾಗಿ ಅಲ್ಲಿಂದಿಲ್ಲಿಗೆ ತಿರುಗಾಡುತ್ತೇನೆ. ಎಲ್ಲ ಜನರ ಬಳಿ ದೀನನಾಗಿ ನೋಡುತ್ತೇನೆ. ಆದರೆ ನನ್ನ ಬಡತನದ ಕಾರಣದಿಂದಾಗಿ ಯಾರೂ ನನ್ನತ್ತ ನೋಡುವುದಿಲ್ಲ” ಎಂದು ವಿಷಾದದಿಂದ ಹೇಳಿದನು.
ರಾಜನು – “ಎಲೈ ಬ್ರಾಹ್ಮಣ, ಹಾಗಿದ್ದರೆ ನಿನಗೆ ಏನು ಬೇಕು?’’ ಎಂದು ಕೇಳಿದನು.
ಬ್ರಾಹ್ಮಣನು – “ರಾಜನ್, ನೀನು ಬೇಡಿದವರಿಗೆ ಬೇಕಾದ್ದನ್ನು ಕೊಡುವ ಕಲ್ಪವೃಕ್ಷವೇ ಆಗಿರುವೆ. ಆದ್ದರಿಂದ ನನಗೂ ಒಂದು ವ್ಯವಸ್ಥೆಯನ್ನು ಮಾಡು. ನಾನು ಬದುಕಿರುವವರೆಗೂ ನನಗೆ ಬಡತನ ಇರದ ಹಾಗೆ ಮಾಡು” ಎಂದು ಹೇಳಿದನು.
ರಾಜನು – “ಹಾಗೇ ಆಗಲಿ. ಇವಳು ಕೇಳಿದ್ದನ್ನೆಲ್ಲ ಕೊಡುವ ಕಾಮಧೇನು. ಇವಳನ್ನು ನಿನಗೇ ಕೊಡುತ್ತೇನೆ. ಸ್ವೀಕರಿಸು” ಎಂದು ಹೇಳಿ ಕಾಮಧೇನುವನ್ನು ಆ ಬ್ರಾಹ್ಮಣನಿಗೆ ಕೊಟ್ಟನು.
ಬ್ರಾಹ್ಮಣನು ಸ್ವರ್ಗಸುಖವನ್ನು ಪಡೆದಂತೆ ಸಂತೋಷಪಟ್ಟು ಕಾಮಧೇನುವಿನೊಂದಿಗೆ ತನ್ನ ಸ್ಥಾನಕ್ಕೆ ಹೊರಟನು. ರಾಜನೂ ತನ್ನ ನಗರಕ್ಕೆ ಹೋದನು.
ಹೀಗೆಂದು ಕತೆಯನ್ನು ಹೇಳಿ ಗೊಂಬೆಯು “ರಾಜನ್, ನಿನ್ನಲ್ಲಿ ಈ ರೀತಿಯ ಔದಾರ್ಯವು ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ರಾಜನು ನಿರುತ್ತರನಾದನು.
ದ್ಯೂತಕರಸಂವಾದ ಎಂಬ ಇಪ್ಪತ್ತೇಳನೇ ಉಪಾಖ್ಯಾನ
ಬಳಿಕ ಭೋಜರಾಜನು ಸಿಂಹಾಸನವನ್ನು ಏರಲು ತೊಡಗಿದಾಗ ಮುಂದಿನ ಮೆಟ್ಟಿಲಿನಲ್ಲಿರುವ ಗೊಂಬೆಯು ಅವನನ್ನು ತಡೆದು – “ಎಲೈ ರಾಜನೇ, ವಿಕ್ರಮನಂತೆ ಯಾರಲ್ಲಿ ದಯಾ-ದಾಕ್ಷಿಣ್ಯ-ಔದಾರ್ಯಗಳೆಂಬ ಗುಣಗಳು ಇವೆಯೋ ಅವನೇ ಈ ಸಿಂಹಾಸನಲ್ಲಿ ಕುಳಿತುಕೊಳ್ಳಲು ಅರ್ಹ” ಎಂದಿತು.
ರಾಜನು – “ಎಲೈ ಗೊಂಬೆಯೇ, ಆ ವಿಕ್ರಮನ ದಯಾದಾಕ್ಷಿಣ್ಯ ಔದಾರ್ಯಾದಿ ಗುಣಗಳ ವೃತ್ತಾಂತವನ್ನು ಹೇಳು” ಎನ್ನಲು, ಗೊಂಬೆಯು ಕಥೆಯನ್ನು ಪ್ರಾರಂಭಿಸಿತು.
ವಿಕ್ರಮರಾಜನು ಭೂಮಿಯಲ್ಲಿ ಸಂಚರಿಸುತ್ತಾ ಒಮ್ಮೆ ಒಂದು ನಗರಕ್ಕೆ ಹೋದನು. ಅಲ್ಲಿರುವ ರಾಜನು ಅತ್ಯಂತ ಧಾರ್ಮಿಕನಾಗಿದ್ದು ಶ್ರುತಿ-ಸ್ಮೃತಿಗಳನ್ನು ಬಲ್ಲವನೂ ಅನುಷ್ಠಾನ ಮಾಡುವವನೂ ಆಗಿದ್ದನು. ಅವನು ಪ್ರಜೆಗಳನ್ನು ಪ್ರೀತಿಯಿಂದ ಪಾಲಿಸುತ್ತಿದ್ದನು. ಅಲ್ಲಿರುವ ಎಲ್ಲ ಪ್ರಜೆಗಳೂ ಸದಾಚಾರನಿರತರೂ, ಅತಿಥಿಪ್ರಿಯರೂ, ದಯಾಪರರೂ ಆಗಿದ್ದರು. ವಿಕ್ರಮನು ಮೂರೋ ಅಥವಾ ಐದೋ ದಿನಗಳವರೆಗೆ ನಾನು ಈ ನಗರದಲ್ಲಿ ಉಳಿದುಕೊಳ್ಳುತ್ತೇನೆ ಎಂದು ತೀರ್ಮಾನಿಸಿ ಒಂದು ಸುಂದರವಾದ ದೇವಾಲಯಕ್ಕೆ ಬಂದನು. ಅಲ್ಲಿ ದೇವರಿಗೆ ಕೈಮುಗಿದು ರಂಗಮಂಟಪದಲ್ಲಿ ಕುಳಿತುಕೊಂಡನು.
ಈ ನಡುವೆ ರಾಜಕುಮಾರನಂತೆ ಸುಂದರನಾಗಿರುವ ಒಬ್ಬ ಯುವಕನು ಅಲ್ಲಿಗೆ ಬಂದನು. ಅವನು ರೇಷ್ಮೆ ಬಟ್ಟೆಯನ್ನು ತೊಟ್ಟಿದ್ದನು. ಅನೇಕ ಆಭರಣಗಳಿಂದ ಅಲಂಕೃತನಾಗಿದ್ದನು. ಕುಂಕುಮ-ಕರ್ಪೂರ-ಕಸ್ತೂರಿ ಇವುಗಳಿಂದ ಮಿಶ್ರಿತವಾದ ಚಂದನವನ್ನೂ ಮೈಗೆ ಬಳಿದುಕೊಂಡಿದ್ದನು. ಅವನು ತನ್ನ ಗೆಳೆಯರೊಂದಿಗೆ ಅಲ್ಲಿಗೆ ಬಂದು ಸ್ವಲ್ಪ ಹೊತ್ತು ಕುಳಿತುಕೊಂಡು ನಾನಾವಿಧದ ವಿನೋದಕಥೆಗಳನ್ನು ಹೇಳಿ ಆಮೇಲೆ ಅವರೊಂದಿಗೆ ಅಲ್ಲಿಂದ ಹೊರಟುಹೋದನು. ರಾಜನು ಅವನನ್ನು ನೋಡಿ ‘ಇವನು ಯಾರಿರಬಹುದು?’ ಎಂದು ತನ್ನ ಮನಸ್ಸಿನಲ್ಲಿಯೇ ಪ್ರಶ್ನಿಸಿಕೊಂಡನು.
ಎರಡನೇ ದಿನವೂ ವಿಕ್ರಮನು ಅದೇ ದೇವಾಲಯಕ್ಕೆ ಹೋಗಿ ಕುಳಿತುಕೊಂಡಿದ್ದನು. ಆ ಯುವಕನು ಇಂದೂ ಸಹ ಅಲ್ಲಿಗೆ ಬಂದನು. ಆದರೆ ಇಂದು ಅವನು ಒಬ್ಬಂಟಿಯಾಗಿ ಬಂದಿದ್ದನು. ಅವನ ಮೈಮೇಲೆ ಒಂದು ಆಭರಣವೂ ಇರಲಿಲ್ಲ. ರೇಷ್ಮೆವಸ್ತ್ರ ಹೋಗಲಿ, ಸಾಮಾನ್ಯವಸ್ತ್ರವೂ ಇರಲಿಲ್ಲ. ಕೇವಲ ಒಂದು ಕೌಪೀನವನ್ನು ಮಾತ್ರ ಅವನು ಧರಿಸಿದ್ದನು. ಅವನು ಬಂದು ದೇವಾಲಯದ ರಂಗಮಂಟಪದಲ್ಲಿ ಬಿದ್ದುಬಿಟ್ಟನು.
ರಾಜನು ಅವನನ್ನು ನೋಡಿ ಕುತೂಹಲದಿಂದ – “ಎಲೈ ಮಹಾಶಯ! ನೀನು ನಿನ್ನೆ ಸರ್ವಾಲಂಕಾರ ಭೂಷಿತನಾಗಿ ರಾಜಕುಮಾರನಂತೆ ಕಂಗೊಳಿಸುತ್ತ ಗೆಳೆಯರೊಂದಿಗೆ ಇಲ್ಲಿ ಬಂದಿದ್ದೆಯಲ್ಲವೇ? ಇಂದು ಈ ಅವಸ್ಥೆಯಲ್ಲಿರುವೆ. ಇದೇನಿದು?’’ ಎಂದು ಕೇಳಿದನು.
ಅವನು “ಸ್ವಾಮಿನ್! ಏನು ಹೇಳಲಿ, ನಿನ್ನೆ ನಾನು ಹಾಗೇ ಇದ್ದೆ. ಇಂದು ದೈವಯೋಗದಿಂದ ಹೀಗಾಗಿದ್ದೇನೆ. ಏನು ಮಾಡೋಣ!’’ ಎಂದನು.
ರಾಜನು “ನೀನು ಯಾರು?’’ ಎಂದು ಕೇಳಿದನು.
ಅವನು “ನನ್ನ ಹೆಸರು ದೇವದತ್ತ. ಜೂಜಾಡುವುದೇ ನನ್ನ ಹವ್ಯಾಸ” ಎಂದು ಹೇಳಿದನು.
ರಾಜನು “ಹಾಗಿದ್ದರೆ ನಿನಗೆ ದ್ಯೂತಕ್ರೀಡೆ ಚೆನ್ನಾಗಿ ಗೊತ್ತಿದೆಯಲ್ಲವೆ?’’ ಎಂದು ಕೇಳಿದನು.
ಆಗ ಆ ಯುವಕನು “ಗೊತ್ತಿಲ್ಲದೇ ಏನು? ದ್ಯೂತವಿದ್ಯೆಯಲ್ಲಿ ನಾನು ಚೆನ್ನಾಗಿ ಪಳಗಿ ನಿಪುಣನಾಗಿದ್ದೇನೆ. ಅಲ್ಲದೆ ಚದುರಂಗದ ಆಟವನ್ನೂ ನಾನು ಬಲ್ಲೆ. ಆದರೆ ಏನು ಮಾಡೋಣ, ವಿಧಿ ಅನುಕೂಲವಾಗಿಲ್ಲದಿದ್ದಲ್ಲಿ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ” ಎಂದನು.
ರಾಜನು “ಎಲೈ ದೇವದತ್ತ! ನೀನು ಬುದ್ಧಿವಂತನಾಗಿ ತೋರುತ್ತಿದ್ದೀಯೆ. ಹೀಗಿದ್ದೂ ಅತಿ-ಪಾಪಕರವಾದ ಈ ದ್ಯೂತಕ್ರೀಡೆಯಲ್ಲಿ ಯಾಕೆ ತೊಡಗಿರುವೆ? ದ್ಯೂತವು ತುಂಬಾ ಕಷ್ಟಗಳಿಗೆ ಮೂಲ. ಅದು ಏಳು ಮಹಾಪಾಪಗಳಲ್ಲಿ ಒಂದು ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ನೀನು ಆ ಮಹಾಪಾಪವನ್ನು ಬಿಡಬೇಕು” ಎಂದನು.
ದೇವದತ್ತನು “ಎಲೈ ಸ್ವಾಮಿಯೇ! ನನಗೆ ದ್ಯೂತವೇ ಬದುಕು. ಅದನ್ನು ಹೇಗೆ ಬಿಡಲಿ? ನೀನು ನನ್ನಲ್ಲಿ ಕೃಪೆತೋರಿಸಿ ಯಾವುದಾದರೂ ಧನಾರ್ಜನೆಯ ಉಪಾಯವನ್ನು ಹೇಳುವೆಯಾದರೆ ಆಗ ನಾನು ದ್ಯೂತವನ್ನು ಬಿಟ್ಟುಬಿಡುವೆ” ಎಂದನು.
ಅದೇ ಸಮಯದಲ್ಲಿ ವಿದೇಶವಾಸಿಗಳಾದ ಇಬ್ಬರು ಬ್ರಾಹ್ಮಣರು ಆ ದೇವಾಲಯಕ್ಕೆ ಬಂದು ಒಂದು ಕಡೆ ಕುಳಿತು ಮಾತನಾಡತೊಡಗಿದರು. ಅವರಲ್ಲಿ ಒಬ್ಬನು ಹೇಳಿದನು – “ನಾನು ಪಿಶಾಚಲಿಪಿಕಲ್ಪ ಎಂಬ ಗ್ರಂಥವನ್ನು ಪೂರ್ಣವಾಗಿ ಅವಲೋಕಿಸಿದೆ. ಅದರಲ್ಲಿ – ಈ ದೇವಾಲಯದ ಈಶಾನ್ಯಭಾಗದಲ್ಲಿ ಐದುಬಿಲ್ಲಿನಷ್ಟು ಆಳದಲ್ಲಿ ಚಿನ್ನದ ದೀನಾರಗಳಿಂದ ತುಂಬಿರುವ ಮೂರು ಮಡಿಕೆಗಳಿವೆ. ಅದರ ಹತ್ತಿರವೇ ಭೈರವನ ಪ್ರತಿಮೆ ಇದೆ. ಯಾರಾದರೂ ಧೈರ್ಯವಂತರು ತನ್ನ ರಕ್ತದಿಂದ ಭೈರವನಿಗೆ ಅಭಿಷೇಕ ಮಾಡಿದರೆ ಆ ಮೂರೂ ಮಡಿಕೆಗಳೂ ಅವನದಾಗುತ್ತವೆ ಎಂದು ಬರೆಯಲಾಗಿದೆ. ಅದು ನಿಜವೇ ಇರಬಹುದು” ಎಂದು.
ರಾಜಾ ವಿಕ್ರಮನು ಆ ಮಾತನ್ನು ಕೇಳಿಸಿಕೊಂಡು ಕೂಡಲೇ ಈಶಾನ್ಯದಿಕ್ಕಿಗೆ ಹೋಗಿ ನೋಡಿದನು. ಅಲ್ಲಿ ಭೈರವನ ಪ್ರತಿಮೆ ಇತ್ತು. ವಿಕ್ರಮನು ಬೇರೇನೂ ಯೋಚನೆ ಮಾಡದೆ ತನ್ನ ದೇಹದ ರಕ್ತದಿಂದ ಭೈರವನಿಗೆ ಅಭಿಷೇಕ ಮಾಡಿದನು. ಆ ಕೂಡಲೇ ಪ್ರತ್ಯಕ್ಷನಾದ ಭೈರವನು “ರಾಜನ್! ನಿನ್ನಲ್ಲಿ ಪ್ರಸನ್ನನಾಗಿದ್ದೇನೆ, ಬೇಕಾದ ವರವನ್ನು ಬೇಡಿಕೋ” ಎಂದನು.
ರಾಜನು “ದೇವ, ನೀನು ಪ್ರಸನ್ನನಾಗಿರುವುದು ನಿಜವಾಗಿದ್ದರೆ ಚಿನ್ನದ ದೀನಾರಗಳು ತುಂಬಿರುವ ಮೂರು ಮಡಿಕೆಗಳನ್ನು ಈ ದೇವದತ್ತನಿಗೆ ಕೊಡು” ಎಂದನು.
ಅವನ ಪ್ರಾರ್ಥನೆಯನ್ನು ಕೇಳಿ ಭೈರವನು ಆ ಮೂರೂ ಮಡಿಕೆಗಳನ್ನು ದೇವದತ್ತನಿಗೆ ಕೊಟ್ಟನು. ದೇವದತ್ತನು ರಾಜನನ್ನು ಹೊಗಳಿ ತನ್ನ ನಗರಕ್ಕೆ ತೆರಳಿದನು.
ಈ ಕಥೆಯನ್ನು ಹೇಳಿ ಗೊಂಬೆಯು “ರಾಜನ್! ಈ ರೀತಿಯ ಧೈರ್ಯ ಔದಾರ್ಯಾದಿ ಪರೋಪಕಾರ ಗುಣಗಳು ನಿನ್ನಲ್ಲಿ ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು.
ರಾಜನು ಸುಮ್ಮನಾದನು.