ಯಜ್ಞದಿಂದ ಸಿಕ್ಕಿದ ಹಣ್ಣಿನ ದಾನ ಎಂಬ ಹತ್ತನೆಯ ಕಥೆ
ಭೋಜರಾಜನು ಮತ್ತೆ ಸಿಂಹಾಸನವನ್ನು ಏರಲು ಹೋದಾಗ ಮತ್ತೊಂದು ಗೊಂಬೆಯು ಅವನನ್ನು ತಡೆದು “ರಾಜನೇ ಕೇಳು, ವಿಕ್ರಮಾರ್ಕನು ರಾಜ್ಯವನ್ನು ಪಾಲಿಸುತ್ತಿದ್ದಾಗ ಯೋಗಿಯೊಬ್ಬನು ಉಜ್ಜಯಿನಿಗೆ ಬಂದನು. ಅವನು ವೇದ, ಶಾಸ್ತ್ರ, ವೈದ್ಯಕೀಯ-ಜ್ಯೋತಿಷ್ಯ ಮೊದಲಾದ ವಿಷಯಗಳಲ್ಲಿ ಪಾರಂಗತನಾಗಿದ್ದನು. ಅವನಿಗೆ ಸಮನಾದವನು ಇನ್ನೊಬ್ಬ ಇರಲಿಲ್ಲ. ಅವನು ಸಾಕ್ಷಾತ್ ಸರ್ವಜ್ಞನೇ ಆಗಿದ್ದನು. ವಿಕ್ರಮಾರ್ಕನು ಅವನ ಪ್ರಸಿದ್ಧಿಯನ್ನು ಕೇಳಿ ಅವನನ್ನು ರಾಜಭವನಕ್ಕೆ ಕರೆತರಲು ತನ್ನ ಪುರೋಹಿತನನ್ನು ಕಳಿಸಿದನು. ಪುರೋಹಿತನು ಯೋಗಿಯ ಬಳಿಗೆ ಹೋಗಿ, ನಮಸ್ಕರಿಸಿ “ಎಲೈ ಯೋಗೀಶ್ವರನೆ, ರಾಜನು ನಿನ್ನನ್ನು ಆಹ್ವಾನಿಸಿದ್ದಾನೆ. ನೀನು ಅಲ್ಲಿಗೆ ಬರಬೇಕು” ಎಂದನು.
ಯೋಗಿಯು ಅವನ ಮಾತನ್ನು ಒಪ್ಪಿದನು. ಆಮೇಲೆ ರಾಜಭವನಕ್ಕೆ ಬಂದು ರಾಜನಿಗೆ ‘‘ರಾಜನ್, ನಾನು ನಿನಗೆ ಒಂದು ಮಂತ್ರವನ್ನು ಉಪದೇಶಿಸುತ್ತೇನೆ. ನಾನು ಹೇಳುವ ಕ್ರಮದಲ್ಲಿ ನೀನು ಮಂತ್ರಸಾಧನೆ ಮಾಡುವೆಯಾದರೆ ಮುಪ್ಪು ಹಾಗೂ ಮರಣದಿಂದ ಮುಕ್ತನಾಗುತ್ತೀಯೆ” ಎಂದನು. ರಾಜನು “ಹಾಗಾದರೆ ಮಂತ್ರವನ್ನು ಉಪದೇಶಿಸು. ನಾನು ಮಂತ್ರಸಾಧನೆ ಮಾಡುತ್ತೇನೆ” ಎಂದನು.
ಬಳಿಕ ಯೋಗಿಯು ರಾಜನಿಗೆ ಮಂತ್ರವನ್ನು ಉಪದೇಶಿಸಿ ‘‘ರಾಜನ್, ಬ್ರಹ್ಮಚರ್ಯವ್ರತದಲ್ಲಿ ಇದ್ದುಕೊಂಡು ಒಂದು ವರ್ಷದವರೆಗೆ ಮಂತ್ರಪಠನ ಮಾಡಿ, ಕೊನೆಗೆ ಗರಿಕೆಯ ದಳಗಳಿಂದ ಅಗ್ನಿಯಲ್ಲಿ ದಶಾಂಶಹವನವನ್ನು ಮಾಡಬೇಕು. ಅನಂತರ ಪೂರ್ಣಾಹುತಿಯ ಸಮಯದಲ್ಲಿ ಹೋಮಕುಂಡದಿಂದ ಒಬ್ಬ ಪುರುಷನು ಹೊರಗೆ ಬಂದು ದಿವ್ಯವಾದ ಹಣ್ಣೊಂದನ್ನು ನಿನಗೆ ಕೊಡುತ್ತಾನೆ. ಆ ಹಣ್ಣನ್ನು ಸೇವಿಸಿದರೆ ನೀನು ಮುಪ್ಪು ಮರಣಗಳಿಂದ ಮುಕ್ತನಾಗುತ್ತೀಯೆ, ವಜ್ರಕಾಯನಾಗುತ್ತೀಯೆ” ಎಂದನು. ಅನಂತರ ಯೋಗಿಯು ತನ್ನ ಸ್ಥಾನಕ್ಕೆ ಹಿಂದಿರುಗಿದನು.
ವಿಕ್ರಮಾರ್ಕನು ನಗರದ ಹೊರಗೆ ಒಂದು ವರ್ಷಕಾಲ ಬ್ರಹ್ಮಚರ್ಯದಿಂದ ಇದ್ದುಕೊಂಡು ಮಂತ್ರವನ್ನು ಪಠಿಸಿ ದೂರ್ವಾಂಕುರಗಳಿಂದ ದಶಾಂಶಹೋಮವನ್ನು ಮಾಡಿದನು. ಪೂರ್ಣಾಹುತಿಯ ಹೊತ್ತಿಗೆ ಹೋಮಕುಂಡದಿಂದ ಒಬ್ಬ ಪುರುಷನು ಹೊರಗೆ ಬಂದು ದಿವ್ಯವಾದ ಹಣ್ಣನ್ನು ರಾಜನಿಗೆ ಕೊಟ್ಟನು. ರಾಜನು ತುಂಬಾ ಸಂತೋಷದಿಂದ ಅದನ್ನು ತೆಗೆದುಕೊಂಡು ನಗರಕ್ಕೆ ಹೊರಟನು.
ರಾಜಮಾರ್ಗದಲ್ಲಿ ಬರುತ್ತಿದ್ದಾಗ ಕುಷ್ಠರೋಗದಿಂದ ಪೀಡಿತನಾಗಿದ್ದ ಬ್ರಾಹ್ಮಣನೊಬ್ಬನು ಎದುರಿಗೆ ಬಂದನು. ಅವನು ರಾಜನಿಗೆ ಆಶೀರ್ವಾದ ಮಾಡಿ ‘‘ರಾಜನ್, ರಾಜನೆಂದರೆ ಜಗತ್ತಿಗೆ ತಂದೆ, ತಾಯಿ, ಗುರು. ಯಾಕೆಂದರೆ ಆತ ಪ್ರಜೆಗಳೆಲ್ಲರ ಕಷ್ಟಗಳನ್ನೂ ದೂರ ಮಾಡುತ್ತಾನೆ. ನೀನಾದರೋ ವಿಶ್ವದ ಪೀಡೆಯನ್ನು ದೂರ ಮಾಡುತ್ತೀಯಾ ಎಂಬ ಪ್ರಸಿದ್ಧಿ ಇದೆ.
ಆದ್ದರಿಂದ ನನ್ನ ಪೀಡೆಯನ್ನೂ ದೂರಮಾಡು. ಈ ಕುಷ್ಠರೋಗದಿಂದ ನನ್ನ ಶರೀರವು ನಶಿಸುತ್ತಿದೆ. ನಾನು ಚೆನ್ನಾಗಿ ಧರ್ಮಕಾರ್ಯಗಳನ್ನು ಮಾಡುತ್ತೇನೆ. ಎಲ್ಲ ಧರ್ಮಕಾರ್ಯಗಳಿಗೂ ಶರೀರವೇ ಮೊದಲ ಸಾಧನವಲ್ಲವೆ? ಹಾಗಾಗಿ ನೀನು ನನ್ನ ಶರೀರವನ್ನು ರೊಗರಹಿತವಾಗಿ ಆರೋಗ್ಯಪೂರ್ಣವಾಗಿರುವಂತೆ ಮಾಡು” ಎಂದನು.
ಬ್ರಾಹ್ಮಣನ ಮಾತುಗಳನ್ನು ಕೇಳಿ ರಾಜನು ತಾನು ತುಂಬ ಪರಿಶ್ರಮಪಟ್ಟು ಪಡೆದಿದ್ದ ಆ ಹಣ್ಣನ್ನು ಅವನಿಗೆ ಕೊಟ್ಟನು. ಬ್ರಾಹ್ಮಣನು ಅದನ್ನು ತಿಂದು ರೋಗರಹಿತನಾಗಿ, ದಿವ್ಯಶರೀರವುಳ್ಳವನಾಗಿ ಸಂತೋಷದಿಂದ ತನ್ನ ಸ್ಥಳಕ್ಕೆ ಹೋದನು. ರಾಜನೂ ತನ್ನ ಭವನಕ್ಕೆ ತೆರಳಿದನು.”
– ಎಂದು ಕಥೆಯನ್ನು ಹೇಳಿ ಗೊಂಬೆಯು ‘‘ಭೋಜರಾಜನೆ, ಈ ರೀತಿಯ ಔದಾರ್ಯ ಹಾಗೂ ಧೈರ್ಯಗಳು ನಿನ್ನಲ್ಲಿ ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೊ” ಎಂದಿತು. ರಾಜನು ಅದನ್ನು ಕೇಳಿ ಸುಮ್ಮನಾದನು.
ರಾಕ್ಷಸಭೀತಿ ನಿವಾರಣೆ ಎಂಬ ಹನ್ನೊಂದನೆಯ ಕಥೆ
ಅನಂತರ ಭೋಜರಾಜನು ಸಿಂಹಾಸನದಲ್ಲಿ ಕುಳಿತುಕೊಳ್ಳಲು ಬಂದಾಗ ಗೊಂಬೆಯು ಅವನನ್ನು ತಡೆದು ‘‘ಎಲೈ ರಾಜನೇ, ಕೇಳು – ವಿಕ್ರಮನು ರಾಜ್ಯವಾಳುತ್ತಿದ್ದಾಗ ಭೂಮಂಡಲದಲ್ಲಿ ದುಷ್ಟರಾಗಲಿ, ಕಳ್ಳರಾಗಲಿ, ಪಾಪಕಾರ್ಯದಲ್ಲಿ ತೊಡಗಿದವರಾಗಲಿ ಯಾರೂ ಇರಲಿಲ್ಲ. ಒಮ್ಮೆ ಅವನು ರಾಜ್ಯಭಾರವನ್ನು ಮಂತ್ರಿಗಳಿಗೆ ಒಪ್ಪಿಸಿ ತಾನು ಯೋಗಿಯ ವೇಷವನ್ನು ಧರಿಸಿ ಇನ್ನೊಂದು ಸ್ಥಳಕ್ಕೆ ಹೊರಟನು. ಎಲ್ಲಿ ತನ್ನ ಮನಸ್ಸಿಗೆ ಸುಖ ದೊರೆಯುತ್ತದೆಯೋ ಅಲ್ಲಿ ಅವನು ಹೆಚ್ಚು ದಿನ ತಂಗುತ್ತಿದ್ದನು. ಆಶ್ಚರ್ಯಕರವಾದ ವಿಷಯಗಳನ್ನು ಕಂಡಲ್ಲಿಯೂ ಹೆಚ್ಚು ದಿನ ವಾಸಿಸುತ್ತಿದ್ದನು.
ಹೀಗೆ ಅವನು ಸಂಚರಿಸುತ್ತಾ ಒಂದು ದಿನ ದೊಡ್ಡದಾದ ಒಂದು ಅರಣ್ಯದ ಮಧ್ಯಭಾಗವನ್ನು ಪ್ರವೇಶಿಸಿದನು. ಆಗ ಸೂರ್ಯನು ಮುಳುಗಿದನು. ಅದನ್ನು ನೋಡಿ ರಾಜನು ಒಂದು ಮರದ ಬುಡವನ್ನು ಆಶ್ರಯಿಸಿ ರಾತ್ರಿ ಅಲ್ಲಿಯೇ ನಿಂತನು. ಆ ಮರದಲ್ಲಿ ಚಿರಂಜೀವಿ ಎಂಬ ಮುದಿಹಕ್ಕಿ ವಾಸವಾಗಿತ್ತು. ಅದರ ಮಕ್ಕಳು, ಮೊಮ್ಮಕ್ಕಳು ಪ್ರತಿದಿನ ಬೇರೆ ಸ್ಥಳಗಳಿಗೆ ಹೋಗಿ ತಮ್ಮ ಹೊಟ್ಟೆ ತುಂಬಿಸಿಕೊಂಡು ಸಾಯಂಕಾಲ ಗೂಡಿಗೆ ಹಿಂತಿರುಗುತ್ತಿದ್ದವು. ಆಗ ಪ್ರತಿಯೊಂದು ಹಕ್ಕಿಯೂ ಒಂದೊಂದು ಹಣ್ಣನ್ನು ಮುದಿಹಕ್ಕಿ ಚಿರಂಜೀವಿಗೆ ಕೊಡುತ್ತಿತ್ತು. ಅದು ಸಾವಧಾನವಾಗಿ ತಿನ್ನುತ್ತಿತ್ತು.
ಆ ರಾತ್ರಿ ಚಿರಂಜೀವಿ ಹೀಗೆ ಸುಖವಾಗಿ ಕುಳಿತು ಹಣ್ಣು ತಿನ್ನುತ್ತಿದ್ದಾಗ ಆ ಹಕ್ಕಿಗಳನ್ನು – ‘‘ಮಕ್ಕಳೇ, ನೀವು ನಾನಾ ದೇಶಗಳನ್ನು ತಿರುಗುತ್ತೀರಿ. ಹೀಗೆ ತಿರುಗುವಾಗ ಏನಾದರೂ ವಿಚಿತ್ರವಾದುದನ್ನು ಕಂಡಿರಾ?” ಎಂದು ಕೇಳಿತು.
ಒಂದು ಹಕ್ಕಿಯು ‘‘ನಾನು ವಿಚಿತ್ರವಾದುದೇನನ್ನೂ ನೋಡಲಿಲ್ಲ, ಆದರೆ ನನಗೆ ತುಂಬ ದುಃಖ ಆಗಿದೆ” ಎಂದಿತು.
‘‘ಹೌದೆ, ನಿನ್ನ ದುಃಖದ ಕಾರಣವೇನು?” ಎಂದು ಚಿರಂಜೀವಿ ಕೇಳಿತು. ಆಗ ಆ ಹಕ್ಕಿಯು ‘‘ಹೇಳುವುದರಿಂದ ಏನು ಪ್ರಯೋಜನ?” ಎಂದು ಕೇಳಿತು. ಚಿರಂಜೀವಿಯು ‘‘ಮಗು, ಹಾಗಂದುಕೊಳ್ಳಬೇಡ. ದುಃಖವನ್ನು ಇನ್ನೊಬ್ಬರಲ್ಲಿ ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ. ಆದ್ದರಿಂದ ಹೇಳು” ಎಂದು ಹೇಳಿತು.
ಆಗ ಆ ಹಕ್ಕಿ ಈ ರೀತಿಯಾಗಿ ತನ್ನ ದುಃಖದ ಕಾರಣವನ್ನು ಹೇಳಿತು – ‘‘ಉತ್ತರದಿಕ್ಕಿನಲ್ಲಿ ಶೈವಾಲಘೋಷ ಎಂಬ ಪರ್ವತವಿದೆ. ಅದರ ಹತ್ತಿರ ಪಲಾಶ ನಗರವಿದೆ. ಆ ಪರ್ವತದಲ್ಲಿ ಇರುವ ಬಕಾಸುರ ಎಂಬ ರಾಕ್ಷಸನು ಪ್ರತಿದಿನ ನಗರಕ್ಕೆ ಬಂದು ಎದುರಿಗೆ ಕಾಣಿಸಿದ ಯಾವ ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ, ಮಕ್ಕಳನ್ನಾಗಲಿ ಹಿಡಿದು ಪರ್ವತಕ್ಕೆ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದ. ಒಂದು ದಿನ ನಗರವಾಸಿಗಳೆಲ್ಲರೂ ಆ ರಾಕ್ಷಸನ ಬಳಿಗೆ ಬಂದು “ಎಲೈ ಬಕಾಸುರ, ನೀನು ಹೀಗೆ ಎದುರಿಗೆ ಕಾಣಿಸಿದ ಯಾರನ್ನಾದರೂ ತಿನ್ನಬೇಡ. ನಾವೆಲ್ಲರೂ ಪ್ರತಿದಿನ ನಿನ್ನ ಆಹಾರಕ್ಕೆಂದೇ ಒಬ್ಬ ಮನುಷ್ಯನನ್ನು ನೀನಿರುವಲ್ಲಿಗೇ ಕಳಿಸುತ್ತೇವೆ. ನೀನು ಅವನನ್ನು ತಿನ್ನು. ಉಳಿದವರಿಗೆ ಪೀಡೆ ಕೊಡಬೇಡ” ಎಂದು ನಿವೇದಿಸಿಕೊಂಡರು. ಅವನೂ ಆ ಮಾತನ್ನು ಒಪ್ಪಿದನು.
ಅದಾದಮೇಲೆ ಅಲ್ಲಿರುವ ಜನರು ಪ್ರತಿದಿನ ಸರದಿಯ ಕ್ರಮದಲ್ಲಿ ಅವನಿಗೆ ಒಬ್ಬ ಮನುಷ್ಯನನ್ನು ಆಹಾರವಾಗಿ ಕೊಡತೊಡಗಿದರು. ಹೀಗೆ ತುಂಬ ಕಾಲ ಕಳೆಯಿತು. ಇಂದು ಪೂರ್ವಜನ್ಮದಲ್ಲಿಯೂ ನನಗೆ ಗೆಳೆಯನಾಗಿದ್ದ ಒಬ್ಬ ಬ್ರಾಹ್ಮಣನ ಸರದಿ ಬಂದಿದೆ. ಅವನಿಗೆ ಒಬ್ಬನೇ ಮಗ. ಮಗನನ್ನು ಕೊಟ್ಟರೆ ಸಂತತಿಚ್ಛೇದವಾಗುವುದು. ತನ್ನನ್ನು ಕೊಟ್ಟರೆ ಹೆಂಡತಿಯು ವಿಧವೆಯಾಗುತ್ತಾಳೆ, ಹೆಂಡತಿಯನ್ನು ಕೊಟ್ಟರೆ ಗೃಹಸ್ಥಾಶ್ರಮ ಭ್ರಂಶವಾಗುತ್ತದೆ. ಹೀಗೆ ಯೋಚಿಸಿ ಎಲ್ಲರೂ ದುಃಖಿತರಾಗಿದ್ದಾರೆ. ಅವರ ದುಃಖದಿಂದ ನನಗೂ ದುಃಖವಾಗಿದೆ” ಎಂದಿತು.
ಅದರ ಮಾತನ್ನು ಕೇಳಿ ಅಲ್ಲಿರುವ ಪಕ್ಷಿಗಳು ‘‘ಬೇರೆಯವರ ದುಃಖದಿಂದ ದುಃಖಪಡುವವನೇ ನಿಜವಾದ ಗೆಳೆಯ. ಇದೇ ಗೆಳೆತನ” ಎಂದವು.
ಮರದ ಕೆಳಗೆ ಕುಳಿತಿರುವ ವಿಕ್ರಮಾಂಕರಾಜನು ಪಕ್ಷಿಗಳ ಮಾತನ್ನು ಕೇಳಿದನು. ಅವನಿಗೆ ಪಕ್ಷಿಗಳ ಭಾಷೆ ಗೊತ್ತಿತ್ತು. ಅವನು ಆ ಬ್ರಾಹ್ಮಣನ ಕುಟುಂಬಕ್ಕೆ ಸಹಾಯ ಮಾಡುವೆನೆಂದು ನಿರ್ಣಯ ಮಾಡಿದನು. ತತ್ಕ್ಷಣವೇ ಪಲಾಶನಗರಕ್ಕೆ ಹೋಗಿ ಆ ವಧ್ಯಶಿಲೆಯ ಸಮೀಪಕ್ಕೆ ಬಂದನು. ಅಲ್ಲಿ ಬ್ರಾಹ್ಮಣನನ್ನು ಕುರಿತು – ‘‘ಎಲೈ ವಿಪ್ರ, ನೀನು ನಿಶ್ಚಿಂತೆಯಿಂದ ಮನೆಗೆ ಹೋಗು. ನಿನ್ನ ಬದಲಾಗಿ ನಾನು ರಾಕ್ಷಸನ ಆಹಾರವಾಗಿ ಹೋಗುತ್ತೇನೆ” ಎಂದು ಹೇಳಿ ಅವನನ್ನು ಮನೆಗೆ ಕಳಿಸಿದನು. ತಾನು ಹತ್ತಿರವಿರುವ ಸರೋವರದಲ್ಲಿ ಸ್ನಾನ ಮಾಡಿ ವಧ್ಯಶಿಲೆಯಲ್ಲಿ ಕುಳಿತುಕೊಂಡನು.
ಅದೇ ಸಮಯದಲ್ಲಿ ರಾಕ್ಷಸನು ಬಂದು ನಗುಮೊಗದಿಂದಿರುವ ಅವನನ್ನು ನೋಡಿ ಆಶ್ಚರ್ಯಗೊಂಡು ಕೇಳಿದನು – ‘‘ಎಲೈ ಮಹಾಸತ್ತ್ವ, ಈ ವಧ್ಯಶಿಲೆಯಲ್ಲಿ ಕುಳಿತುಕೊಂಡವನು ನಾನು ಬರುವ ಮೊದಲೇ ಭಯದಿಂದ ಸತ್ತುಹೋಗುತ್ತಾನೆ. ನೀನು ತುಂಬಾ ಧೈರ್ಯಶಾಲಿಯಾಗಿ ಕಾಣಿಸುತ್ತೀಯೆ. ಮರಣಕಾಲವು ಸಮೀಪಿಸಿದವನಿಗೆ ಅವನ ಇಂದ್ರಿಯಗಳು ಗ್ಲಾನಿಯನ್ನು ಹೊಂದುತ್ತವೆ. ನೀನಾದರೋ ಹೆಚ್ಚು ಕಾಂತಿಯನ್ನು ಪಡೆದು ನಗುತ್ತಿದ್ದೀಯ. ನೀನು ಯಾರು?” ಎಂದು ಕೇಳಿದನು.
ರಾಜನು ‘‘ನಾನು ಪರೋಪಕಾರಕ್ಕಾಗಿ ಈ ಶರೀರವನ್ನು ಸ್ವಇಚ್ಛೆಯಿಂದ ಕೊಡುತ್ತಿದ್ದೇನೆ. ಅದರಿಂದ ನನಗೆ ಯಾವ ರೀತಿಯ ದುಃಖವೂ ಇಲ್ಲ. ಇದನ್ನೆಲ್ಲಾ ವಿಚಾರಿಸುವುದರಿಂದ ನಿನಗೇನು ಪ್ರಯೋಜನ? ನೀನು ನಿನ್ನಿಚ್ಛೆಯಂತೆ ಮಾಡು” ಎಂದನು. ಆಗ ರಾಕ್ಷಸನು ತನ್ನ ಮನಸ್ಸಿನಲ್ಲಿ ‘ಇವನು ಸಜ್ಜನ. ತನ್ನ ಸುಖ ಭೋಗ ಇಚ್ಛೆಗಳನ್ನು ತೊರೆದು ಪರರಿಗೋಸ್ಕರ ದುಃಖಪಟ್ಟು ಇಲ್ಲಿಗೆ ಬಂದಿದ್ದಾನೆ’ ಎಂದು ಚಿಂತಿಸಿ ಹೇಳಿದನು – ‘‘ನಿಶ್ಚಯವಾಗಿಯೂ ನೀನು ಮಹಾಪುರುಷನೇ ಆಗಿರುವೆ. ನಿನ್ನಂಥವರು ಯಾವಾಗಲೂ ಪರಾನುಗ್ರಹತತ್ಪರರಾಗಿರುತ್ತಾರೆ. ಎಲೈ ಮಹಾಸತ್ತ್ವ, ನಿನ್ನ ಈ ಪರೋಪಕಾರದಿಂದ ನಾನು ಸಂತುಷ್ಟನಾಗಿರುವೆ. ಬೇಕಾದ ವರವನ್ನು ಬೇಡಿಕೋ” ಎಂದು.
ರಾಜನು ‘‘ಎಲೈ ರಾಕ್ಷಸನೇ, ನೀನು ನನ್ನಲ್ಲಿ ಪ್ರಸನ್ನನಾಗಿದ್ದರೆ ಇನ್ನು ಮುಂದೆ ಮನುಷ್ಯರನ್ನು ತಿನ್ನುವುದನ್ನು ನಿಲ್ಲಿಸು, ಹೇಗೆ ನಿನಗೆ ನಿನ್ನ ಪ್ರಾಣಗಳು ಪ್ರಿಯವೋ ಹಾಗೆ ಎಲ್ಲ ಜೀವಿಗಳಿಗೂ ಅವರವರ ಪ್ರಾಣಗಳು ಇಷ್ಟವಾಗಿರುತ್ತವೆ. ಹಾಗಾಗಿ ಅವುಗಳನ್ನು ರಕ್ಷಿಸಬೇಕು” ಎಂದು ಹೇಳಿದನು.
ಹೀಗೆ ಕಥೆಯನ್ನು ಹೇಳಿ ಗೊಂಬೆಯು ಭೋಜರಾಜನಿಗೆ – ‘‘ರಾಜನೇ, ನಿನ್ನಲ್ಲಿ ಈ ರೀತಿಯ ಪರೋಪಕಾರಾದಿ ಗುಣಗಳು ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ರಾಜನು ಸುಮ್ಮನಾದನು.