‘ಒಂದು ದೇಶವನ್ನು ನಾಶಮಾಡಲು ಯಾವುದೇ ಅಣುಬಾಂಬನ್ನು ಪ್ರಯೋಗಿಸುವ ಆವಶ್ಯಕತೆ ಇಲ್ಲ, ಆ ದೇಶದ ಶಿಕ್ಷಣವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡಿದರೆ ಸಾಕು, ಆ ದೇಶ ಅಧಃಪತನಗೊಳ್ಳುತ್ತದೆ’ ಎಂದು ಪ್ರಾಚೀನರೊಬ್ಬರು ಹೇಳಿದ ಮಾತು ಶಿಕ್ಷಣಕ್ಕೆ ಇರುವ ಪ್ರಾಮುಖ್ಯ ಏನು ಎಂಬುದನ್ನು ತಿಳಿಸುತ್ತದೆ. ಈಚೆಗೆ ಪ್ರಚಲಿತವಾಗಿರುವ ಮತ್ತು ಚರ್ಚೆಯಲ್ಲಿರುವ ವಿಷಯಗಳಲ್ಲಿ ಶಿಕ್ಷಣವೂ ಒಂದು. ತಾವು ಅವಿದ್ಯಾವಂತರಾಗಿದ್ದರೂ ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎಂದು ಆಶಿಸುವ ಪಾಲಕರಿಗೇನೂ ಕೊರತೆಯಿಲ್ಲ. ಕೊರೋನಾದಂತಹ ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮ ಮಕ್ಕಳಿಗೆ ಶಾಲೆಯ ಬೆಂಚುಗಳ ಸಾಲಿನಲ್ಲಿ ಕುಳ್ಳಿರಿಸಿ ಶಿಕ್ಷಣ ನೀಡುವುದೇ ಅಥವಾ ಆನ್ಲೈನ್ ಮೂಲಕ ಶಿಕ್ಷಣ ನೀಡಬೇಕೇ ಎಂಬ ಕುರಿತು ಸಾಕಷ್ಟು ಟೀಕೆ, ಟಿಪ್ಪಣಿ, ಸಲಹೆಗಳು ವ್ಯಕ್ತವಾಗಿವೆ. ಒಟ್ಟಿನಲ್ಲಿ ಪರೀಕ್ಷೆ ಬರೆದು ರ್ಯಾಂಕ್ ಗಳಿಸುವುದೇ ಶಿಕ್ಷಣದ ಉದ್ದೇಶ ಎಂಬುದು ಬಹುತೇಕ ಪಾಲಕ ಮತ್ತು ವಿದ್ಯಾರ್ಥಿಗಳ ಅನಿಸಿಕೆ. ಕೇವಲ ಜ್ಞಾನಾರ್ಜನೆ, ರ್ಯಾಂಕ್ ಗಳಿಕೆ, ಪ್ರಮಾಣಪತ್ರ, ಉದ್ಯೋಗ ದೊರಕಿಸಿಕೊಳ್ಳುವಿಕೆ ಇವುಗಳೇ ಶಿಕ್ಷಣದ ಉದ್ದೇಶವೇ ಎಂಬುದರ ಅವಲೋಕನ ಇಂದಿನ ಸಂದರ್ಭದಲ್ಲಿ ಅತ್ಯಗತ್ಯ.
ವ್ಯಕ್ತಿಯೊಬ್ಬ ಎಂತಹ ಶಿಕ್ಷಣ ಪಡೆದಿದ್ದಾನೆ ಎಂಬುದನ್ನು ತಿಳಿಯಲು ಅವನ ಜೀವನಕ್ರಮವನ್ನೊಮ್ಮೆ ಅವಲೋಕಿಸಬೇಕು. ಈ ಬಗೆಗೆ ಇದಕ್ಕೆ ಪೂರಕವಾದ ಸಂಗತಿಯನ್ನು ಹೇಳುವುದಾದರೆ, ಒಬ್ಬ ತನ್ನ ಮನೆಯ ದುಬಾರಿ ಮೊತ್ತದ ನಾಯಿಯೊಂದು ಕಳೆದುಹೋಗಿರುವ ಜಾಹೀರಾತನ್ನು ಪತ್ರಿಕೆಯಲ್ಲಿ ಪ್ರಕಟಿಸಿದ. ಜಾಹೀರಾತನ್ನು ನೋಡಿದ ವ್ಯಕ್ತಿಯೊಬ್ಬ ನಾಯಿಯ ಮಾಲೀಕರಿಗೆ ಫೋನ್ ಕರೆ ಮಾಡಿ, ‘ನಿಮ್ಮ ನಾಯಿ ನಿಮ್ಮ ತಾಯಿಯನ್ನು ಹುಡುಕಿಕೊಂಡು ನಮ್ಮ ವೃದ್ಧಾಶ್ರಮಕ್ಕೆ ಬಂದಿದೆ, ಕರೆದುಕೊಂಡು ಹೋಗಿ’ ಎಂದು ಹೇಳುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅಲೆದಾಡುತ್ತಿದ್ದ ಈ ಸಂಗತಿ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ವಾಸ್ತವಕ್ಕೆ ಎಷ್ಟು ಹತ್ತಿರ ಅಲ್ಲವೇ? ನಾಯಿಯ ಮೇಲಿರುವ ಕಾಳಜಿ ತನ್ನನ್ನು ಹೊತ್ತು ಹೆತ್ತು ಸಾಕಿ ಸಲಹಿದ ತಾಯಿಯ ಮೇಲೆ ಇಲ್ಲದಿರುವ ಇಂತಹ ವ್ಯಕ್ತಿಗಳು ಪಡೆದಿರುವ ಶಿಕ್ಷಣ ಯಾವ ನೈತಿಕಮೌಲ್ಯವನ್ನು ಒಳಗೊಂಡಿದೆ ಹೇಳಿ?
ಇದೇ ರೀತಿಯ ಉದಾಹರಣೆಯನ್ನು ಟಿ.ಪಿ. ಕೈಲಾಸಂ ಅವರು ತಮ್ಮ ‘ಟೊಳ್ಳು-ಗಟ್ಟಿ’ ಎಂಬ ನಾಟಕದ ಮೂಲಕ ನೀಡುತ್ತಾರೆ. ಇಬ್ಬರು ಮಕ್ಕಳಿರುವ ಕುಟುಂಬದಲ್ಲಿ ಒಬ್ಬ ಶಾಲೆಗೆ ಹೋಗಿ ಚೆನ್ನಾಗಿ ಕಲಿತವ, ಇನ್ನೊಬ್ಬ ಶಾಲೆಯಲ್ಲಿ ತೇರ್ಗಡೆಯಾಗದೆ ಮನೆಯಲ್ಲೇ ಕೆಲಸ ಮಾಡಿಕೊಂಡಿರುವವ. ಓದಿನಲ್ಲಿ ಮುಂದಿರುವ ವಿದ್ಯಾವಂತ ಮಗನ ಮೇಲೆ ತಂದೆಗೆ ಅತಿಯಾದ ಪ್ರೀತಿ. ಒಂದು ದಿನ ಮನೆಗೆ ಬೆಂಕಿ ಬಿದ್ದ ಸಂದರ್ಭದಲ್ಲಿ, ತನ್ನ ಭವಿಷ್ಯ ಪುಸ್ತಕಗಳು ಎಂದು ತಿಳಿದ ವಿದ್ಯಾವಂತ ತನ್ನೆಲ್ಲ ಪುಸ್ತಕಗಳನ್ನು ಹುಡುಕಿ ಬಾಚಿಕೊಂಡು ಹೊರಗೆ ಓಡಿಬಂದ. ಆದರೆ ಇನ್ನೊಬ್ಬ ತನ್ನ ತಂದೆ ತಾಯಿಯನ್ನು ಹುಡುಕಿ ಮನೆಯಿಂದ ಹೊರಗೆ ಕರೆತಂದು ಅವರ ಪ್ರಾಣ ಉಳಿಸಿದ. ಇವರಲ್ಲಿ ಟೊಳ್ಳು ಯಾರು, ಗಟ್ಟಿ ಯಾರು ಹೇಳಿ? ಅವಿದ್ಯಾವಂತನಾದರೂ ಮಾನವೀಯತೆ ಮೆರೆದವನು ಗಟ್ಟಿ ಎನಿಸಿಕೊಂಡ ಎಂಬುದನ್ನು ಮತ್ತು ಮೌಲ್ಯಾಧಾರಿತ ಶಿಕ್ಷಣದ ಆವಶ್ಯಕತೆಯನ್ನು ನಾಟಕದಲ್ಲಿ ಮಾರ್ಮಿಕವಾಗಿ ನಿರೂಪಿಸಿದ್ದಾರೆ.
ಉನ್ನತಶಿಕ್ಷಣ ಪಡೆದಂತಹ ಮಕ್ಕಳಲ್ಲಿ ತಂದೆ ತಾಯಿಯರನ್ನು, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಇಲ್ಲದಿದ್ದರೆ ಅವರು ಶಿಕ್ಷಣದಿಂದ ಪಡೆದದ್ದು ಏನನ್ನು? ಅದೇ ರೀತಿ ಉನ್ನತಹುದ್ದೆ, ಸ್ಥಾನಮಾನ ಅಲಂಕರಿಸಿದ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡದಿದ್ದರೆ ಅವರು ಕಲಿತ ವಿದ್ಯೆಗೇನು ಬೆಲೆ? ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸಬೇಕು, ತಾವು ಕಲಿತ ವಿದ್ಯೆಯಿಂದ ಸಮಾಜಕ್ಕೇನಾದರೂ ಕೊಡುಗೆ ನೀಡಬೇಕು, ದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾಲೂ ಇರಬೇಕು ಎಂಬ ಸಮಷ್ಟಿಯ ಹಿತಚಿಂತನೆ ಇಲ್ಲದೆ ಹೋದರೆ ಪಡೆದ ಶಿಕ್ಷಣ ಖಂಡಿತ ವ್ಯರ್ಥ. ಹಾಗೆಯೇ ಮನುಷ್ಯನಲ್ಲಿ ಮನುಷ್ಯತ್ವವನ್ನು ಕಲಿಸದೆ ಇರುವ ಶಿಕ್ಷಣ ಶಿಕ್ಷಣವಲ್ಲ. ಯಾವುದು ತನ್ನಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಿ, ತನ್ನೊಟ್ಟಿಗೆ ಸಾಮಾಜಿಕ ಸಾಮರಸ್ಯವನ್ನು ಮೂಡಿಸಿ, ನೈತಿಕಮೌಲ್ಯಗಳನ್ನು ಅಳವಡಿಸಿಕೊಂಡು, ಬದುಕಿನಲ್ಲಿ ಹೋರಾಟ ಮತ್ತು ಶ್ರಮದ ಮೂಲಕ ಯಶಸ್ಸನ್ನು ಗಳಿಸುವ ಕಲೆಯನ್ನು ನೀಡುತ್ತದೆಯೋ ಅದುವೇ ಶಿಕ್ಷಣ.
ಶಿಕ್ಷಣತಜ್ಞರೂ ಮತ್ತು ಭಾರತದ ರಾಷ್ಟ್ರಪತಿಗಳೂ ಆಗಿದ್ದ ಎಸ್. ರಾಧಾಕೃಷ್ಣನ್ರವರ ಪ್ರಕಾರ “ಆತ್ಮದ ಅನಿರ್ಬಂಧ ಬೆಳವಣಿಗೆಗೆ ನೆರವು ನೀಡುವುದೇ ಶಿಕ್ಷಣದ ಉದ್ದೇಶ.” ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ “ಶಿಕ್ಷಣವೆಂದರೆ ಬರಿ ಓದಲ್ಲ, ಬರಿ ಪುಸ್ತಕಜ್ಞಾನವೂ ಅಲ್ಲ, ಅದು ಮಾನವತೆಯ ವಿಕಾಸ.” ವಿದ್ವಾಂಸರ ಹೇಳಿಕೆಗಳಂತೆ ಶಿಕ್ಷಣ ಒಂದುಬಾರಿ ಕಲಿತು ಬಿಡುವಂತಹದ್ದಲ್ಲ; ಅದು ನಿರಂತರ ಪ್ರಕ್ರಿಯೆ. ಜೀವನದಲ್ಲಿ ಪಡೆಯುವ ಸ್ವಂತ ಅನುಭವಗಳು ಹಾಗೂ ಮಹಾನ್ ವ್ಯಕ್ತಿಗಳ ಜೀವನಾನುಭವಗಳೂ ನಮ್ಮ ಶಿಕ್ಷಣದ ಒಂದು ಭಾಗ.
ಶಿಕ್ಷಣ ಸೇವಾವಲಯದಲ್ಲಿ ಬರುವ ವಿಷಯವಾಗಿದ್ದರೂ, ಇಂದು ವ್ಯವಹಾರವಾಗಿ ಪರಿವರ್ತನೆ ಹೊಂದಿರುವುದು ವಿಷಾದನೀಯ ಸಂಗತಿಯೇ ಹೌದು. ಹೆಚ್ಚು ಶುಲ್ಕ ವಸೂಲಿ ಮಾಡುವ ಶಾಲೆಗಳು ಒಳ್ಳೆಯ ಶಿಕ್ಷಣ ನೀಡುತ್ತವೆ ಎಂಬ ಭ್ರಮೆಯಲ್ಲಿ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುತ್ತಿರುವ ಪಾಲಕರೇನೂ ಕಡಮೆ ಇಲ್ಲ. ರ್ಯಾಂಕ್ ಗಳಿಕೆಯೇ ಗುರಿ ಎಂಬುದನ್ನು ಮುಗ್ಧ ಮಕ್ಕಳ ಮನಸ್ಸಿನಲ್ಲಿ ತುಂಬುತ್ತೇವೆಯೇ ಹೊರತು, ಹೂವನ್ನು ನೈಸರ್ಗಿಕವಾಗಿ ಅರಳಲು ಬಿಡುವುದೇ ಇಲ್ಲ. ಈ ವಿಚಾರದಲ್ಲಿ ಪಾಲಕರು ಎಚ್ಚರಿಕೆ ವಹಿಸಬೇಕಾದುದು ಅಗತ್ಯ. ಬದುಕಿನಲ್ಲಿ ಒಳಿತು ಕೆಡುಕುಗಳನ್ನು ಗುರುತಿಸಿ, ಕೆಡುಕುಗಳನ್ನು ತ್ಯಜಿಸಿ, ಒಳ್ಳೆಯ ವಿಚಾರವನ್ನು ಮೆಚ್ಚುವ ಮತ್ತು ಅನುಸರಿಸುವ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾದುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಬದುಕಿಗೆ ಎಂತಹ ಶಿಕ್ಷಣದ ಕೋರಿಕೆ ಇರಬೇಕು ಎಂಬುದನ್ನು ಕವಿ ಕೆ.ಸಿ. ಶಿವಪ್ಪರವರು ಈ ಪದ್ಯದಲ್ಲಿ ತಿಳಿಸಿದ್ದಾರೆ:
ಕಲಿಸೆನಗೆ ಓ ಗುರುವೆ ಮರುಗುವುದ ಮಣಿಯುವುದ
ಪರಸುಖಕೆ ಹಿಗ್ಗುವುದ, ನೋವನಿಳಿಸುವುದ.
ಬೀಗದಿಹ ಮನವೊಂದ, ಸರಳತೆಯ ನೀಡೆನಗೆ,
ಮನ್ನಿಸೈ ತಪ್ಪುಗಳ – ಮುದ್ದುರಾಮ.
ನಮಗಾಗಿ ಬದುಕುವುದಷ್ಟೆ ಬಾಳಲ್ಲ, ಯಾವುದನ್ನು ನಮಗಾಗಿ ಬಯಸುತ್ತೇವೆಯೋ, ಅದನ್ನು ಎಲ್ಲರಿಗೂ ಕೇಳಿಕೊಳ್ಳಬೇಕು. ನಮಗೆ ಬಯಸದಿರುವ ಕೆಡುಕನ್ನು ಇತರರಿಗೂ ಬಯಸಬಾರದು. ಅಂತಹ ಗುಣವನ್ನು, ಔದಾರ್ಯವನ್ನು, ಸರಳತೆಯನ್ನು ಕೊಡುವ ಶಿಕ್ಷಣವನ್ನು ಅರಸಬೇಕೆಂಬುದು ಕವಿಯ ಆಶಯ. ಕೇವಲ ಪುಸ್ತಕಜ್ಞಾನವನ್ನು ತುಂಬಿಕೊಳ್ಳುವುದಷ್ಟೇ ಅಲ್ಲ, ಸಮಾಜದಲ್ಲಿ ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸುವ ಸಾಮಾನ್ಯಜ್ಞಾನವನ್ನು ನೀಡುವ ಶಿಕ್ಷಣ ನಮ್ಮದಾಗಬೇಕು. ಅಂಕಶ್ರೇಣಿತ ವ್ಯವಸ್ಥೆಗೆ ಜೋತುಬೀಳದೆ ಜೀವನವನ್ನು ಕ್ರಮಬದ್ಧವಾಗಿ ನಡೆಸಲು ಬೇಕಾದ ಉಪಕ್ರಮಗಳನ್ನು ಕಲಿಸಬೇಕು.
ಈಗಾಗಲೇ ಹೇಳಿದಂತೆ ಶಿಕ್ಷಣ ನಿರಂತರವಾದುದು. ಕಲಿಕೆಯಲ್ಲಿ ಆಸಕ್ತಿಯನ್ನು ಅರಳಿಸುವಂತಹ, ನಡವಳಿಕೆಯಲ್ಲಿ ಸುಸಂಬದ್ಧತೆಯನ್ನು ತರುವಂತಹ, ಧರ್ಮಮಾರ್ಗವನ್ನು ತೋರುವ ಶಿಕ್ಷಣ ಸಿಗಬೇಕು. ಸತ್ಯನಿಷ್ಠೆ, ಪ್ರಾಮಾಣಿಕತೆ, ದೇಶಪ್ರೇಮ, ಸಾಮಾಜಿಕ ಕಳಕಳಿ, ಮಾನವೀಯಮೌಲ್ಯಗಳನ್ನು ಬೆಳೆಸುವ ಶಿಕ್ಷಣ ಇಂದಿನ ಆವಶ್ಯಕತೆಯಾಗಿದೆ. ತಾನೊಬ್ಬ ಇಂಜಿನಿಯರ್ ಆದರೆ ತನಗೆ ಮತ್ತು ತನ್ನ ಕುಟುಂಬಕ್ಕೆಷ್ಟು ಲಾಭ ಎಂದು ಸ್ವಾರ್ಥಚಿಂತನೆ ಮಾಡದೆ, ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಯಾವ ರೀತಿ ತಾನು ಗಳಿಸಿದ ಜ್ಞಾನದ ಬಳಕೆ ಮಾಡಿಕೊಳ್ಳಬೇಕು ಎಂಬ ಚಿಂತನೆ ಮಾಡಬೇಕು. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯ. ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಕೊರತೆಯಿರುವ ನೈತಿಕಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಮತ್ತು ದೊಡ್ಡವರು ಅವುಗಳನ್ನು ಅನುಸರಿಸಬೇಕು. ಈ ನೆಲದ ಕಾನೂನನ್ನು ಗೌರವಿಸುವ, ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಜೀವನವನ್ನು ಒಂದು ಶಿಸ್ತಿಗೆ ಒಳಪಡಿಸಿ, ವ್ಯಕ್ತಿಯ ಸಮಗ್ರ ವ್ಯಕ್ತಿತ್ವವಿಕಾಸಕ್ಕೆ ಪೂರಕವೆನಿಸುವ ಶಿಕ್ಷಣ ನೀಡುವುದು ಎಲ್ಲ ಪಾಲಕರ ಮತ್ತು ಶಿಕ್ಷಣಸಂಸ್ಥೆಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬ ಗಾದೆಮಾತಿನಂತೆ, ಕೇವಲ ಮಾಹಿತಿಯ ಸಂಗ್ರಹಣೆ ಮತ್ತು ಅನುಕರಣೆಗಿಂತ, ಗ್ರಹಿಕೆ ಮತ್ತು ಅನುಸರಣೆ ಮುಖ್ಯ ಎಂಬುದನ್ನು ಅರಿತು, ಬದುಕಿನಲ್ಲಿ ಸಮಚಿತ್ತತೆ ತರುವ ಮತ್ತು ಮನುಷ್ಯತ್ವವನ್ನು ಸದಾ ಜಾಗೃತಗೊಳಿಸುವ ಶಿಕ್ಷಣ ಎಲ್ಲರಿಗೂ ಪ್ರಾಪ್ತಿಯಾಗಲಿ ಎಂದು ಆಶಿಸೋಣ.
‘ಶಿಕ್ಷಣದ ಸಾರ ಆಗಿರಲಿ ಸಂಸ್ಕಾರ.’