ಮನುಷ್ಯನ ಹುಟ್ಟು ಮತ್ತು ಸಾವು ಹೇಗೆ ನಿಗೂಢವೋ ಹಾಗೆಯೇ ಅವನ ಶರೀರರಚನೆ, ಮನಸ್ಸು, ಚಿಂತನೆಗಳು ಕೂಡಾ. ದೇಹ, ಮನಸ್ಸು, ಬುದ್ಧಿ ಇತ್ಯಾದಿ ಶಕ್ತಿಗಳು ದೇವರ ವರಪ್ರಸಾದದಿಂದಲೇ ಲಭ್ಯವಾಗುವಂತಹದ್ದು. ಇವುಗಳನ್ನು ಸರಿಯಾದ ಮಾರ್ಗದಲ್ಲಿ ಉದ್ದೀಪನಗೊಳಿಸಿ ನಮ್ಮ ಚೇತನವನ್ನು ಬಲಗೊಳಿಸಿದಾಗ ಮಾತ್ರ ಸಚ್ಚಿದಾನಂದ ತೃಪ್ತಿ ಸಾಧ್ಯ. ಅದನ್ನೇ ಮೋಕ್ಷವೆನ್ನುವರು. ಆದರೆ ನಾವೇನು ಮಾಡುತ್ತಿದ್ದೇವೆ? ಬೇಡದಿರುವ ವಿಚಾರಗಳಲ್ಲಿ ನಮ್ಮ ದೇಹ, ಮನಸ್ಸು, ಬುದ್ಧಿಗಳನ್ನು ತೊಡಗಿಸುತ್ತಾ ನಮ್ಮ ಶಕ್ತಿಯನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ತೀವ್ರವಾಗಿ ಆಲೋಚಿಸಿದಾಗ, ನಮ್ಮಲ್ಲಿ ದೈವೀಕ ಅಂಶ ಕಡಮೆಯಾಗುತ್ತಿದೆಯೆಂದು ನಮಗೇ ಅನಿಸುವುದಲ್ಲವೇ? ಕಾರಣವೇನು? ಒತ್ತಡದ ಬದುಕು ಒಂದೆಡೆಯಾದರೆ, ಅಸಮರ್ಪಕ ಜೀವನಶೈಲಿಯೂ ಇನ್ನೊಂದು ಕಾರಣ. ಹಿಂದೆಲ್ಲಾ ಭೋಗರಹಿತ ಯೋಗಸಹಿತ ಜೀವನಶೈಲಿಯನ್ನು ಅಳವಡಿಸಿಕೊಂಡು ಮನುಷ್ಯ ರೋಗರಹಿತನಾಗಿದ್ದ. ಆದರೆ ಇಂದಿನ ಬದುಕಿನಲ್ಲಿ ಯೋಗಕ್ಕೆ ಸಮಯವೆಲ್ಲಿ? ಧ್ಯಾನಕ್ಕೆ ವೇಳೆಯೆಲ್ಲಿ? ದಿನದ ೧೪೪೦ ನಿಮಿಷಗಳಲ್ಲಿ ಕೇವಲ ೪೦ನಿಮಿಷ ಧ್ಯಾನ-ಯೋಗಕ್ಕೆ ಮೀಸಲಿಡಲು ಸಾಧ್ಯವಿಲ್ಲವೇ? ಕೇವಲ ಐದು ನಿಮಿಷಗಳಲ್ಲಿ ನಮ್ಮ ಪ್ರಾರ್ಥನೆ ಪೂಜೆ ಮುಗಿಸಿಬಿಡುತ್ತೇವೆ. ಆದರೆ ಗೆಳೆಯರೊಂದಿಗೆ ಹೋಟೆಲ್ಗಳಲ್ಲಿ ಕಾಫಿ ಕುಡಿಯುತ್ತಲೋ ಅಥವಾ ಮೊಬೈಲ್ನಲ್ಲಿ ಮಾತನಾಡುತ್ತಲೋ ಗಂಟೆಗಳನ್ನು ಕಳೆಯುತ್ತೇವೆ. ಇವಕ್ಕೆಲ್ಲಾ ನಮಗೆ ಸಮಯದ ಅಭಾವವಿಲ್ಲ!
ದೇವಸ್ಥಾನಗಳನ್ನು ಕಂಡಾಗ ದೇವರಿಗೆ ಹೊರಗಿನಿಂದಲೇ ಕೈ ಮುಗಿದು ಹೊರಟುಬಿಡುತ್ತೇವೆ. ದೇವಸ್ಥಾನಗಳು ಮನಸ್ಸನ್ನು ಶುಚಿಗೊಳಿಸುವ ಪವಿತ್ರ ಸ್ಥಳಗಳು. ತೀರಾ ತೊಂದರೆಗೊಳಗಾದಾಗ, ಸಾಲದ ಹೊರೆ ಹೆಚ್ಚಾದಾಗ, ಅನಾರೋಗ್ಯ ಕಾಡುವಾಗ, ಯಾವುದೋ ಒಂದು ಕೆಲಸ ಆಗುವಾಗ ಮಾತ್ರ ದೇವರಿಗೆ ಮೊರೆಹೋಗುವುದು ದುರ್ಬಲ ಮನಸ್ಸಿನ ಲಕ್ಷಣ. ದೇವಸ್ಥಾನವು ನಮ್ಮ ದೌರ್ಬಲ್ಯಗಳನ್ನು ಹೊಡೆದೋಡಿಸಿ, ಮನೋಬಲವನ್ನು ಹೆಚ್ಚಿಸಿಕೊಳ್ಳುವ ಪವಿತ್ರ ಸ್ಥಳ. ಹಾಗೆಂದು ಬರೀ ದೇವಸ್ಥಾನಗಳಿಗೆ ಎಡತಾಕುವುದರಿಂದಲೇ ನಮ್ಮೆಲ್ಲ ಸಮಸ್ಯೆಗಳೂ ಪರಿಹಾರಗೊಳ್ಳುವವು ಎಂದುಕೊಳ್ಳುವುದು ಮೂರ್ಖತನವಾದೀತು. ಅಲ್ಲಿ ನಾವು ಮಾಡುವ ಧ್ಯಾನ, ಮನನ, ಚಿಂತನಗಳಿಂದಾಗಿ ಮನಸ್ಸು ಶುದ್ಧಗೊಂಡು ಶರೀರ ಹೊಸ ಸ್ಫೂರ್ತಿ ಪಡೆಯುವುದು. ಹಾಗಾದಾಗ, ಸಮಸ್ಯೆಗಳನ್ನು ಎದುರಿಸುವ ಶಕ್ತಿ ನೂರ್ಮಡಿಸುವುದು.
ಕಷ್ಟ-ಕಾರ್ಪಣ್ಯಗಳು, ಸಮಸ್ಯೆ-ಕ್ಲೇಶೆಗಳು ಎಲ್ಲರ ಬದುಕಿನಲ್ಲಿಯೂ ಇರುವಂತಹದ್ದೇ. ನಿರಂತರವಾದ ಯೋಗಾಭ್ಯಾಸದಿಂದ, ಉತ್ತಮವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಯಾವುದೇ ಸಮಸ್ಯೆಯನ್ನು ಎದುರಿಸುವುದು ಸುಲಭಸಾಧ್ಯ. ಯೋಗಾಭ್ಯಾಸವೆನ್ನುವುದು ವಿಶ್ವಕ್ಕೆ ಭಾರತೀಯರ ಹೆಮ್ಮೆಯ ಕೊಡುಗೆ. ಸನಾತನವಾದ ನಮ್ಮ ಯೋಗವಿದ್ಯೆಗೆ ಈಗ ವಿಶ್ವಮನ್ನಣೆ ದೊರಕಿದೆ. ಪ್ರತಿವರ್ಷ ಜೂನ್ ೨೧ರಂದು ‘ಅಂತಾರಾಷ್ಟ್ರೀಯ ಯೋಗದಿನ’ವೆಂದು ಆಚರಿಸುವುದಾಗಿ ವಿಶ್ವಸಂಸ್ಥೆ ಈಗಾಗಲೇ ಘೋಷಿಸಿದೆ. ವಿಶ್ವ ಮನ್ನಣೆ ಪಡೆದ ಯೋಗ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ಯೋಗವೆನ್ನುವುದು ಬರೀ ಆಸನ ಪ್ರಾಣಾಯಾಮಗಳ ವ್ಯಾಯಾಮವಲ್ಲ. ಅದೊಂದು ಜೀವನ ವಿಧಾನ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮದ ನಡುವಿನ ಸಮನ್ವಯ ಸಾಧನ. ಶಾಂತಿಯುತ ಮತ್ತು ಆರೋಗ್ಯಕರ ಜೀವನಕ್ಕೆ ಯೋಗವೊಂದೆ ಪರಿಹಾರ. ಪ್ರಶ್ನಾತೀತವಾದ ಯೋಗಪದ್ಧತಿ ಪ್ರತಿಯೊಬ್ಬರ ಜೀವನಕ್ರಮವಾಗಲಿ. ಆರೋಗ್ಯಕರ ಜನರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗಲಿ. ಭಾರತ ವಿಶ್ವಮಾನ್ಯವಾಗಲಿ.?
Comments are closed.