ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸೆಪ್ಟೆಂಬರ್ 2015 > ಬೇಕು ಮೂರ್ಖರ ಪೆಟ್ಟಿಗೆಗೆ ಮೂಗುದಾರ

ಬೇಕು ಮೂರ್ಖರ ಪೆಟ್ಟಿಗೆಗೆ ಮೂಗುದಾರ

ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಚ್ಯಾನಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ `ಸದಭಿರುಚಿಯಲ್ಲದ’ ದೃಶ್ಯಗಳನ್ನೆ ತೋರಿಸಲಾಗುತ್ತಿದೆ; ಕೆಟ್ಟ ಭಾಷೆಯ ಬಳಕೆಯಾಗುತ್ತಿದೆ.watching-tv ಮಹಿಳಾ ಪಾತ್ರಧಾರಿಯನ್ನು ರಾಕ್ಷಸಿಯಂತೆ ಬಿಂಬಿಸಲಾಗುತ್ತಿದೆ, ಮಾಟ-ಮಂತ್ರದಿಂದ ವಶೀಕರಣ ಮಾಡುವುದನ್ನು ತೋರಿಸಲಾಗುತ್ತಿದೆ, ಹಾಸ್ಯದ ಹೆಸರಿನಲ್ಲಿ ನಿರ್ದಿಷ್ಟ ಧರ್ಮದ ದೇವರು ಹಾಗೂ ಸಂತರನ್ನು ಬಫೂನ್‌ಗಳಂತೆ ಚಿತ್ರಿಸಲಾಗುತ್ತಿದೆ ಎಂದು ವೀಕ್ಷಕರು ಯಾವತ್ತೂ ದೂರುತ್ತಲೇ ಇರುತ್ತಾರೆ.

ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಜನಮಾನಸದ ಮೇಲೆ ಆಳವಾದ ಪ್ರಭಾವವನ್ನು ಹೊಂದಿರುವುದು ಸರ್ವವಿದಿತ. ಎಷ್ಟರಮಟ್ಟಿಗೆಯೆಂದರೆ “ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಡ್ಯಾನ್ಸ್ ಹೇಳಿಕೊಡಲಾಗುವುದು” ಎಂಬ ಬೋರ್ಡ್‌ಗಳು ಬೆಂಗಳೂರು ಹಾಗೂ ಇತರ ಜಿಲ್ಲಾ ಕೇಂದ್ರಗಳಲ್ಲಿ ತಲೆಯೆತ್ತಿವೆ. ಹೆಂಡತಿ ಧಾರಾವಾಹಿಗೆ ಅಂಟಿಕೊಂಡು ತನಗೆ ಊಟ ಬಡಿಸಲಿಲ್ಲ ಎಂದು ಕೋಪಗೊಂಡ ಗಂಡ ಆಕೆಯ ತಲೆ ಒಡೆದಿದ್ದಿದೆ!

ವಾಹಿನಿ ವೈವಿಧ್ಯ

ಇಂತಹ ಸನ್ನಿವೇಶದಲ್ಲಿ, ‘ಹಾಗಾದರೆ, ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಒಟ್ಟಾರೆ ವಿಷಯವಸ್ತುವಿನ ಮೇಲೆ ನಮಗೆ ನಿಯಂತ್ರಣವೇ ಇಲ್ಲವೆ?’ – ಎಂಬ ಪ್ರಶ್ನೆ ಎದುರಾಗುತ್ತದೆ. ಈ ಪ್ರಶ್ನೆಗೆ ಉತ್ತರಿಸುವ ಮೊದಲು ವಾಹಿನಿಗಳ ಸ್ಥೂಲಸ್ವರೂಪ ಹೇಗಿದೆ ನೋಡೋಣ. ವಾಹಿನಿಗಳಲ್ಲಿ ಹಲವು ವಿಧಗಳಿವೆ. ಜಿಇಸಿ – ಜೆನರಲ್ ಎಂಟರ್‌ಟೈನ್ಮೆಂಟ್ ಚ್ಯಾನಲ್‌ಗಳು, ನ್ಯೂಸ್ ಚ್ಯಾನಲ್‌ಗಳು, ಕಾರ್ಟೂನ್, ಆಟೋಮೊಬೈಲ್, ಧಾರ್ಮಿಕ, ಪ್ರಕೃತಿ, ಮಾರಾಟ, ವಾಣಿಜ್ಯ, ಸಿನೆಮಾ, ಹಾಸ್ಯ, ಸಂಗೀತ ಹೀಗೆ ವಿವಿಧ `ಡೆಡಿಕೇಟೆಡ್’ ಚ್ಯಾನಲ್‌ಗಳಿವೆ. ಕನ್ನಡದಲ್ಲಿ ಮುಖ್ಯವಾಗಿರುವುದು ಜಿಇಸಿ ಹಾಗೂ ನ್ಯೂಸ್ ಚ್ಯಾನಲ್‌ಗಳು ಮಾತ್ರ. ಕಾರ್ಟೂನ್, ಮ್ಯೂಸಿಕ್, ಸಿನೆಮಾ ಮತ್ತು ಧಾರ್ಮಿಕ ವಿಷಯದ ಚ್ಯಾನಲ್‌ಗಳೂ ಇವೆ. ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಇನ್ನು ಜಿಇಸಿ ವಾಹಿನಿಯೊಂದರ ಕಾರ್ಯಕ್ರಮ ವಿಂಗಡಣೆ ಹೇಗಿರುತ್ತದೆ ನೋಡೋಣ. ವಾಹಿನಿಯೊಂದರ ಒಟ್ಟಾರೆ ಕಾರ್ಯಕ್ರಮಗಳಲ್ಲಿ ಸ್ಥೂಲವಾಗಿ ಮೂರು ವಿಧ. ಪಿಕ್ಷನ್ (ಕಲ್ಪಿತ ವಿಷಯಗಳು), ನಾನ್-ಫಿಕ್ಷನ್ (ವಾಸ್ತವ ವಿಷಯಗಳು) ಹಾಗೂ ಜಾಹೀರಾತುಗಳು. ಪಿಕ್ಷನ್ ವಿಭಾಗದಲ್ಲಿ ಪ್ರಮುಖವಾಗಿ ಧಾರಾವಾಹಿಗಳು ಬರುತ್ತವೆ. ಇವು ಕೇವಲ ಕಲ್ಪಿತ ಕಥೆಗಳು. ಹೀಗಾಗಿ ಧಾರಾವಾಹಿಯ ಆರಂಭದಲ್ಲಿ – ‘ಇದು ಕೇವಲ ಕಾಲ್ಪನಿಕ ಕಥೆಯಾಗಿದ್ದು, ಇಲ್ಲಿ ಬರುವ ಸನ್ನಿವೇಶ ಮತ್ತು ಪಾತ್ರಗಳು ನಿಜಜೀವನದಲ್ಲಿ ಯಾರಿಗೂ ಸಂಬಂಧಪಟ್ಟಿರುವುದಿಲ್ಲ. ಸಂಬಂಧವಿದ್ದರೆ ಅದು ಕಾಕತಾಳೀಯ ಮಾತ್ರ’ ಎಂಬ `ಅಲ್ಲಗಳೆ ಪ್ರಕಟಣೆ’ (ಡಿಸ್‌ಕ್ಲೆಯ್ಮರ್) ಹಾಕಲಾಗುತ್ತದೆ. ನಾನ್-ಫಿಕ್ಷನ್ ವಿಭಾಗದಲ್ಲಿ ‘ಬಿಗ್ ಬಾಸ್’, ‘ಲೈಫ್ ಸೂಪರ್ ಗುರು’ನಂತಹ ರಿಯಾಲಿಟಿ ಶೋಗಳು, ಡ್ಯಾನ್ಸ್, ಹಾಡು, ಕ್ವಿಜ್, ಜ್ಯೋತಿಷ, ಅಡುಗೆ ಕಾರ್ಯಕ್ರಮಗಳು ಬರುತ್ತವೆ. ಇನ್ನು ಜಾಹೀರಾತುಗಳಲ್ಲಿ ೧೦ ಸೆಕೆಂಡಿನಿಂದ ಆರಂಭಿಸಿ ೧ ನಿಮಿಷದವರೆಗಿನ ಚಿಕ್ಕ ಕಮರ್ಷಿಯಲ್‌ಗಳು ಹಾಗೂ ೧೫ ನಿಮಿಷಗಳ `ಟೆಲಿ ಶಾಪಿಂಗ್’ ಬರುತ್ತವೆ.

ಸ್ವಯಂನಿಯಂತ್ರಣ

ಮುಖ್ಯಸವಾಲು ಇರುವುದು ಈ ಫಿಕ್ಷನ್ ಮತ್ತು ನಾನ್-ಪಿಕ್ಷನ್ ಕಾರ್ಯಕ್ರಮಗಳಲ್ಲಿ. ವಾಸ್ತವವಾಗಿ ಈ ವಿಭಾಗಗಳಲ್ಲಿ ಯಾವುದನ್ನು ತೋರಿಸಬೇಕು ಯಾವುದನ್ನು ತೋರಿಸಬಾರದು; ಯಾವುದನ್ನು ಎಷ್ಟು ತೋರಿಸಬೇಕು, ಎಷ್ಟು ಹೊತ್ತಿಗೆ ಯಾವುದು ತೋರಿಸಬೇಕು; ಯಾವ ವಿಷಯಗಳನ್ನು ತೋರಿಸಲೇಬಾರದು ಎಂಬುದಕ್ಕೆ ಅತ್ಯಂತ ವಿಸ್ತೃತವಾದ ಮಾರ್ಗಸೂಚಿಯಿದೆ. ಇದನ್ನು ‘ಸೆಲ್ಫ್ ರೆಗ್ಯುಲೇಟರಿ ಗೈಡ್‌ಲೈನ್ಸ್ ಫಾರ್ ನಾನ್ ನ್ಯೂಸ್ ಆಂಡ್ ಕರೆಂಟ್ ಅಫೆರ್ಸ್ ಪ್ರೋಗ್ರಾಂ’ ಎಂದು ಕರೆಯುತ್ತಾರೆ. ಈ ಸ್ವಯಂನಿಯಂತ್ರಣ ಮಾರ್ಗಸೂಚಿಯನ್ನು ಭಾರತದಲ್ಲಿರುವ ಎಲ್ಲ ಜಿಇಸಿಗಳು ಸೇರಿಕೊಂಡು ರೂಪಿಸಿವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಇದೆ. ಸ್ವಯಂನಿಯಂತ್ರಣ ಮಾರ್ಗಸೂಚಿಯೆಂದರೆ ಯಾವುದನ್ನು ತೋರಿಸಬೇಕು, ಎಷ್ಟು ತೋರಿಸಬೇಕು, ಯಾವಾಗ ತೋರಿಸಬೇಕು ಎಂಬ ಕುರಿತು ತಾವೇ ಹಾಕಿಕೊಂಡಿರುವ ಕೆಲವು ನಿಬಂಧನೆಗಳು. ಈ ಮಾರ್ಗಸೂಚಿಯನ್ನು ಪ್ರಮುಖವಾಗಿ ಏಳು ವಿಭಾಗಗಳಲ್ಲಿ ವಿಂಗಡಿಸಲಾಗಿದೆ:

 1. ಅಪರಾಧ ಮತ್ತು ಹಿಂಸೆ (ಕ್ರೈಮ್ ಆಂಡ್ ವಯಲೆನ್ಸ್)
 2. ಕಾಮ, ಅಶ್ಲೀಲತೆ ಮತ್ತು ನಗ್ನತೆ (ಸೆಕ್ಸ್, ಆಬ್ಸಿನಿಟಿ ಆಂಡ್ ನ್ಯೂಡಿಟಿ)
 3. ಭಯಾನಕ ಮತ್ತು ಅತೀಂದ್ರಿಯ (ಹಾರರ್ ಆಂಡ್ ಆಕಲ್ಟ್)
 4. ಮಾದಕವಸ್ತು ಸೇವನೆ, ಧೂಮಪಾನ, ತಂಬಾಕು, ದ್ರಾವಕ ಮತ್ತು ಮದ್ಯಪಾನ (ಡ್ರಗ್ಸ್, ಸ್ಮೋಕಿಂಗ್, ಟೊಬ್ಯಾಕೋ, ಸಾಲ್ವೆಂಟ್ಸ್ ಆಂಡ್ ಆಲ್ಕೋಹಾಲ್)
 5. ಜಾತಿ ಮತ್ತು ಸಮುದಾಯ (ರಿಲಿಜನ್ ಆಂಡ್ ಕಮ್ಯೂನಿಟಿ)
 6. ಅಪಾಯ ಮತ್ತು ದುಷ್ಕಾರ್ಯ (ಹಾರ್ಮ್ ಆಂಡ್ ಅsನ್ಸ್)
 7. ಇತರ ನಿಬಂಧನೆಗಳು (ಜೆನೆರಲ್ ರಿಸ್ಟ್ರಿಕ್ಷನ್ಸ್).

ಮೇಲಿನ ಪ್ರತಿಯೊಂದು ವಿಭಾಗಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ನಿರ್ದೇಶನಗಳಿವೆ. ಈ ಎಲ್ಲ ಸೂಚನೆಗಳನ್ನು ವಾಹಿನಿಗಳು ಕಡ್ಡಾಯವಾಗಿ ಪಾಲಿಸಲೇಬೇಕು –

 1. ಅಪರಾಧ ಮತ್ತು ಹಿಂಸೆ – ಕಾರ್ಯಕ್ರಮ ಯಾವುದೇ ರೀತಿಯಲ್ಲೂ ಅಪರಾಧ ಮತ್ತು ಹಿಂಸೆಗೆ ಕುಮ್ಮಕ್ಕು ಕೊಡುವ ಹಾಗೆ, ಹಿಂಸೆಯೇ ಅಂತಿಮ ಪರಿಹಾರ ಅನ್ನುವ ಹಾಗೆ, ನಿರ್ದಿಷ್ಟ ಸಮುದಾಯ, ಜಾತಿ, ಬಣ್ಣ, ಲಿಂಗ, ವಯಸ್ಸಿನ ವಿರುದ್ಧ ಪ್ರಚೋದಿಸುವ ಹಾಗೆ ಇರಬಾರದು. ಅಪರಾಧ ಪ್ರಕ್ರಿಯೆಯನ್ನು ವಿಶದವಾಗಿ ವಿವರಿಸಿ ಅದನ್ನು ಅನುಕರಿಸುವ ರೀತಿಯಲ್ಲಿ ಪ್ರದರ್ಶಿಸಬಾರದು. ಹಿಂಸೆಯನ್ನು ಗ್ಲಾಮರಸ್ ಅನ್ನುವ ರೀತಿಯಲ್ಲಿ ತೋರಿಸಬಾರದು.
 2. ಕಾಮ, ಅಶ್ಲೀಲತೆ ಮತ್ತು ನಗ್ನತೆ – ಕಾಮ, ಅಶ್ಲೀಲತೆ ಮತ್ತು ನಗ್ನತೆಯ ವಿಜೃಂಭಣೆ ಇರಬಾರದು. ಮಹಿಳೆಯನ್ನು ಅಥವಾ ಆಕೆಯ ರೂಪವನ್ನು ಕೇವಲ ಭೋಗದ ವಸ್ತುವಿನಂತೆ ತೋರಿಸಬಾರದು. ಅಶ್ಲೀಲತೆ ಮತ್ತು ಅಸಭ್ಯ ನಡವಳಿಕೆಯ ವೈಭವೀಕರಣ ಇರಬಾರದು. ಅಶ್ಲೀಲ ಸಂಭಾಷಣೆ, ವಕ್ಷಸ್ಥಲ, ಕಾಮುಕತೆಯನ್ನು ಸೂಚಿಸುವ ಸನ್ನೆಗಳು, ಪಾರ್ನ್ ಇದ್ಯಾವುದಕ್ಕೂ ಅವಕಾಶವಿಲ್ಲ.
 3. ಭಯಾನಕ ಮತ್ತು ಅತೀಂದ್ರಿಯ – ಭಯಾನಕ ಮತ್ತು ಅತೀಂದ್ರಿಯ ಘಟನೆಗಳನ್ನು ಪ್ರಚೋದಿಸಬಾರದು. ಇವುಗಳನ್ನು ನಂಬದೇಹೋದರೆ ಕೆಡುಕಾಗುತ್ತದೆ ಎಂಬುದನ್ನು ಬಿಂಬಿಸಬಾರದು. ಮೂಢನಂಬಿಕೆಯನ್ನು ಪ್ರಚೋದಿಸಬಾರದು. ಅತೀಂದ್ರಿಯ, ಮಾಯೆ, ಕಣ್ಕಟ್ಟು, ತಂತ್ರವನ್ನು ವಿವರಿಸಬಾರದು. ಮಹಿಳೆಯನ್ನು ಮಂತ್ರವಾದಿಯ ಹಾಗೆ ತೋರಿಸಬಾರದು. ತಂತ್ರಕ್ಕಾಗಿ ಪ್ರಾಣಿಬಲಿಯೂ ನಿಷೇಧ.
 4. ಮಾದಕವಸ್ತು ಸೇವನೆ, ಧೂಮಪಾನ, ತಂಬಾಕು, ದ್ರಾವಕ ಮತ್ತು ಮದ್ಯಪಾನ – ಈ ವಸ್ತುಗಳ ಸೇವನೆಯನ್ನು ಸಮರ್ಥಿಸಿಕೊಳ್ಳುವುದು, ಸೇವನೆಯನ್ನು ಪ್ರೋತ್ಸಾಹಿಸುವುದು, ವಿಜೃಂಭಿಸುವುದು ಮಾಡುವ ಹಾಗಿಲ್ಲ. ಇವುಗಳನ್ನು ಬಳಸುವ ಬಗೆ, ಇವುಗಳು ದೊರೆಯುವ ಬಗೆ, ಬೆಲೆಯ ಬಗ್ಗೆ ವೀಕ್ಷಕರಿಗೆ ವಿವರಿಸುವ ಹಾಗಿಲ್ಲ. ಈ ವಸ್ತುಗಳ ಸೇವನೆಯಿಂದ ಸಮಸ್ಯೆಗಳು ಪರಿಹಾರವಾದಂತೆ ಬಿಂಬಿಸುವಂತಿಲ್ಲ. ಅವುಗಳ ದುಷ್ಪರಿಣಾಮಗಳನ್ನು ತೋರಿಸದೆ ಬಿಡುವಂತಿಲ್ಲ.
 5. ಜಾತಿ ಮತ್ತು ಸಮುದಾಯ – ನಿರ್ದಿಷ್ಟ ಜಾತಿ ಮತ್ತು ಸಮುದಾಯವನ್ನು ಕೀಳಾಗಿ ತೋರಿಸುವುದು, ಒಂದು ಜಾತಿಯನ್ನು ಮತ್ತೊಂದರ ವಿರುದ್ಧ ಎತ್ತಿ ಕಟ್ಟುವುದು, ವಿಷಬೀಜ ಬಿತ್ತುವುದು, ಆಚರಣೆಗಳನ್ನು ಅಣಕಿಸುವುದು ಮಾಡುವ ಹಾಗಿಲ್ಲ. ಧಾರ್ಮಿಕ ಸ್ಥಳ, ಜಾತಿಯ ಕೇಂದ್ರಗಳನ್ನು ಧ್ವಂಸ ಮಾಡುವಂತೆ ಪ್ರಚೋದಿಸಬಾರದು. ನಿರ್ದಿಷ್ಟ ಸಮುದಾಯವನ್ನು ಇದೊಂದೇ ನಿಜವಾದ ಜಾತಿ, ಇದನ್ನು ಬಿಟ್ಟರೆ ಬೇರೆಯೆಲ್ಲವೂ ಸುಳ್ಳು ಎಂದು ಹೇಳಿ ಮತಾಂತರಕ್ಕೆ ಪ್ರೇರೇಪಿಸಬಾರದು. ನಿರ್ದಿಷ್ಟ ಜಾತಿ ಅಥವಾ ಪದ್ಧತಿಯನ್ನು ಅನುಸರಿಸದಿದ್ದರೆ ಕೆಡುಕುಂಟಾಗುತ್ತದೆ ಎಂದು ಹೆದರಿಸುವುದಾಗಲಿ, ಸೂಚಿಸುವುದಾಗಲಿ ಮಾಡಬಾರದು. ಜಾತಿ ಅಥವಾ ಆಚರಣೆಯ ಹೆಸರಲ್ಲಿ ಅಪಾಯಕಾರಿ ಪದ್ಧತಿಗಳನ್ನು ಅಥವಾ ಲಿಂಗ ತಾರತಮ್ಯವನ್ನು ಪುಷ್ಟೀಕರಿಸಬಾರದು.
 6. ಅಪಾಯ ಮತ್ತು ದುಷ್ಕಾರ್ಯ – ಅನವಶ್ಯಕವಾಗಿ ಜನರಲ್ಲಿ ಭೀತಿಯುಂಟುಮಾಡುವ ಸಂಗತಿಯನ್ನು ತೋರಿಸುವುದು, ವಿಕಲಚೇತನರನ್ನು ಹೀಯಾಳಿಸುವುದು, ಅಣಕಿಸುವುದು, ದೂಷಿಸುವುದು, ದೌರ್ಜನ್ಯವೆಸಗುವುದು, ಅನುಕರಿಸಿ ಹಾಸ್ಯಮಾಡುವುದು ಸಲ್ಲ. ಮಾನಸಿಕ ಅಸ್ವಸ್ಥರನ್ನು ಅಪಾಯಕಾರಿಯೆಂಬಂತೆ ಬಿಂಬಿಸುವುದು, ಮಕ್ಕಳಿಗೆ `ದೊಡ್ಡವರ’ ವಿಷಯಗಳನ್ನು ಕೇಳುವುದು, ಮಹಿಳೆಯನ್ನು ದ್ವಿತೀಯದರ್ಜೆ ಪ್ರಜೆಯಂತೆ ಬಿಂಬಿಸುವುದು ನಿಷಿದ್ಧ. ಪರಿಸರ ಸಮತೋಲವನ್ನು ಕೆಡಿಸುವ ಅಥವಾ ಪ್ರಾಣಿಗಳನ್ನು ಹಿಂಸಿಸುವ ಚಟುವಟಿಕೆಯನ್ನು ತೋರಿಸಲೇಬಾರದು.
 7. ಇತರ ನಿಬಂಧನೆಗಳು – ಭಾರತೀಯ ಕಾನೂನುಗಳ ಉಲ್ಲಂಘನೆ, ಸಂವಿಧಾನದ ವಿರುದ್ಧ ನಿರ್ದಿಷ್ಟ ಜಾತಿಯ ತುಷ್ಟೀಕರಣ, ನ್ಯಾಯಾಂಗ ನಿಂದನೆ, ದೇಶದ ಸಾಮರಸ್ಯಕ್ಕೆ ಧಕ್ಕೆ ತರುವ ವಿಚಾರ, ರಾಷ್ಟ್ರೀಯ ಚಿಹ್ನೆಗಳ ದುರ್ಬಳಕೆ ಎಲ್ಲವೂ ನಿಷಿದ್ಧ.

000del6101832jpg-dataಇಲ್ಲಿ ಕೇವಲ ಮಾರ್ಗಸೂಚಿಗಳ ಸಾರವನ್ನಷ್ಟೇ ನೀಡಲಾಗಿದೆ. ವಾಹಿನಿಗಳು ತಮ್ಮ ಕಾರ್ಯಕ್ರಮವನ್ನು ಮತ್ತೊಂದು ರೀತಿಯಲ್ಲಿ ವಿಂಗಡಿಸಿಕೊಂಡಿವೆ. ಜಿ (ಜೆನೆರಲ್) ಕೆಟಗರಿ ಕಾರ್ಯಕ್ರಮಗಳು. ಅಂದರೆ ಈ ಕಾರ್ಯಕ್ರಮಗಳನ್ನು ದಿನದ ೨೪ ಗಂಟೆಯೂ ಪ್ರಸಾರ ಮಾಡಬಹುದು. ಮತ್ತೊಂದು ಆರ್ (ರಿಸ್ಟ್ರಿಕ್ಟೆಡ್) ಕೆಟಗರಿ ಕಾರ್ಯಕ್ರಮಗಳು. ಈ ಕಾರ್ಯಕ್ರಮಗಳನ್ನು ರಾತ್ರಿ ೧೧ ಗಂಟೆಯ ಬಳಿಕ ಹಾಗೂ ಬೆಳಗ್ಗೆ ೫ ಗಂಟೆಯ ಒಳಗೆ ಮಾತ್ರ ಪ್ರಸಾರ ಮಾಡಬೇಕು. ಮೇಲೆ ಹೇಳಿದ ಅಂಶಗಳು ಈ ಕೆಟಗರಿಗಳನ್ನು ಆಧರಿಸಿ ಮತ್ತಷ್ಟು ನಿರ್ದಿಷ್ಟ ಹಾಗೂ ಸ್ಪಷ್ಟವಾಗುತ್ತವೆ.

ಪ್ರಾಣಿಗಳ ಬಳಕೆ ಸಾಧ್ಯವೆ?

ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಪ್ರಾಣಿಗಳ ಬಳಕೆಗೆ ಸಂಬಂಧಪಟ್ಟಂತೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ. ಇದಕ್ಕಾಗಿಯೇ ಚೆನ್ನೈನಲ್ಲಿರುವ ಅನಿಮಲ್ ವೆಲ್‌ಫೆರ್ ಬೋರ್ಡ್ ಆಫ್ ಇಂಡಿಯಾ (ಂWಃI) ಕಾರ್ಯನಿರ್ವಹಿಸುತ್ತಿದೆ. ಸಿಂಹ, ಕೋತಿ, ಚಿರತೆಯಂತಹ ಕೆಲ ಪ್ರಾಣಿಗಳನ್ನು ತೋರಿಸಲು ಸಂಪೂರ್ಣ ನಿಷೇಧವಿದೆ. ಅಂದರೆ ಈ ಪ್ರಾಣಿಗಳನ್ನು ತೋರಿಸುವ ಹಾಗೆಯೇ ಇಲ್ಲ. ಇದು ಸಿನೆಮಾಕ್ಕೂ ಅನ್ವಯಿಸುತ್ತದೆ. ಹೀಗಾಗಿಯೇ ಇಂತಹ ಪ್ರಾಣಿಗಳ ದೃಶ್ಯಗಳು ಬಂದಾಗ “ಈ ದೃಶ್ಯವನ್ನು ಭಾರತದಲ್ಲಿ ಚಿತ್ರೀಕರಿಸಲಾಗಿಲ್ಲ” ಎಂದು ಡಿಸ್‌ಕ್ಲೇಮರ್ ತೋರಿಸಲಾಗುತ್ತದೆ. ಅಂದರೆ ಭಾರತೀಯ ಕಾನೂನು ಅಪ್ಲೈ ಆಗದ ದೇಶದಲ್ಲಿ ಇವುಗಳನ್ನು ಶೂಟ್ ಮಾಡಲಾಗುತ್ತದೆ (ಇದಕ್ಕೆ ಕೇಂದ್ರ ಕಾನೂನು ಇಲಾಖೆ ಆಕ್ಷೇಪವನ್ನೆತ್ತಿದ್ದು ಪ್ರಸ್ತುತ ಚರ್ಚೆ ನಡೆಯುತ್ತಿದೆ).

ಉಳಿದ ಪ್ರಾಣಿಗಳ ಬಳಕೆಗೆ ಸಂಬಂಧಪಟ್ಟಂತೆ ಹಲವು ಮಾನದಂಡಗಳಿವೆ. ಚಿತ್ರೀಕರಣ ಮಾಡಬೇಕಾಗಿರುವ ಪ್ರಾಣಿಯ ವಿವರ ಹಾಗೂ ಆ ಪ್ರಾಣಿಯಿಂದ ಮಾಡಿಸಲಾಗುವ `ನಟನೆ’ ಬಗ್ಗೆ ಮೊದಲೇ ಂWಃIಗೆ ತಿಳಿಸಿ, ಚಿತ್ರೀಕರಣಕ್ಕೆ ಒಪ್ಪಿಗೆ ಪಡೆಯಬೇಕು. ಇದನ್ನು ಪ್ರಿಶೂಟ್ ಪರ್ಮಿಷನ್ ಎಂದು ಕರೆಯಲಾಗುತ್ತದೆ. ಒಮ್ಮೆ ಇದು ಸಿಕ್ಕ ನಂತರ ಚಿತ್ರೀಕರಣ ಮಾಡಿ, ಪ್ರಾಣಿಯನ್ನು ಬಳಸಿಕೊಂಡಿರುವ ಫೂಟೇಜ್‌ಅನ್ನು ಮತ್ತೆ ಂWಃIಗೆ ಕಳಿಸಿ `ನಿರಪೇಕ್ಷಣಾ ಪತ್ರ'(ಓಔಅ)ವನ್ನು ಪಡೆಯಬೇಕು. ಅದಾದ ಬಳಿಕವಷ್ಟೇ ಪ್ರಸಾರಕ್ಕೆ ಅನುಮತಿ ದೊರಕುತ್ತದೆ. ಚಿತ್ರೀಕರಣಕ್ಕೂ ಮೊದಲು ಹಾಗೂ ಚಿತ್ರೀಕರಣದ ನಂತರ ಪ್ರಾಣಿವೈದ್ಯರಿಂದ ಪ್ರಾಣಿಯ ಹೆಲ್ತ್ ಸರ್ಟಿಫಿಕೇಟ್ ಕೂಡ ಅಗತ್ಯವಿರುತ್ತದೆ. ಪ್ರಾಣಿಗಳಿಂದ ಅನೈಸರ್ಗಿಕ `ನಟನೆ’ ಮಾಡಿಸುವುದು ನಿಷಿದ್ಧವಾಗಿದೆ. ಉದಾ, ನಾಯಿಯನ್ನು ಎರಡು ಕಾಲಿನಿಂದ ನಡೆಸುವುದು, ಕುದುರೆಯನ್ನು ಹಿಮ್ಮುಖವಾಗಿ ಓಡಿಸುವುದು ಇತ್ಯಾದಿ. ಪ್ರಾಣಿಯ ಸ್ವಾಭಾವಿಕ ಗುಣಗಳಿಗೆ ಅನುಗುಣವಾಗಿಯೇ ಚಿತ್ರೀಕರಣ ಮಾಡಬೇಕು.

ಮಾರ್ಗದರ್ಶಿ ಸೂತ್ರಗಳನ್ನು ತಪ್ಪಿದರೆ?

ಹೌದು, ಅದಕ್ಕೆಂದೇ ವಾಹಿನಿಗಳು ವೀಕ್ಷಕರಿಗೆ ವೇದಿಕೆಯನ್ನು ಒದಗಿಸಿವೆ. ಯಾವುದೇ ಜಿಇಸಿ ವಾಹಿನಿ ನೋಡುವಾಗ, “ಈ ವಾಹಿನಿಯ ಯಾವುದೇ ಕಾರ್ಯಕ್ರಮಗಳ ಕುರಿತು ದೂರುಗಳಿದ್ದಲ್ಲಿ ಬಿಸಿಸಿಸಿಯನ್ನು ಸಂಪರ್ಕಿಸಿ” ಎಂಬ ಸ್ಕ್ರಾಲ್ ಬರುತ್ತಿರುವುದನ್ನು ನೀವು ಗಮನಿಸಿರಬಹುದು. ವಾಹಿನಿಯ ಯಾವುದೇ ಕಾರ್ಯಕ್ರಮದ ಮಾತು, ಘಟನೆ, ದೃಶ್ಯ ವೀಕ್ಷಕರಿಗೆ ತಪ್ಪು ಅನ್ನಿಸಿದರೆ ಅದರ ವಿರುದ್ಧ ದೂರು ನೀಡಬಹುದು. ಮೊದಲ ಹಂತದಲ್ಲಿ ವಾಹಿನಿಗೆ ದೂರು ಸಲ್ಲಿಸಬೇಕಾಗುತ್ತದೆ. ದೂರು ಬಂದ ಎರಡು ದಿನಗಳ ಒಳಗಾಗಿ ವಾಹಿನಿಯು ಸ್ವೀಕೃತಿ ಪತ್ರವನ್ನು ನೀಡಿ, ಏಳು ದಿನಗಳ ಒಳಗಾಗಿ ಉತ್ತರವನ್ನು ನೀಡಬೇಕು. ಈ ಉತ್ತರ ಸಮರ್ಪಕವಾಗಿದೆ ಎಂದು ದೂರುದಾರರಿಗೆ ಅನ್ನಿಸದೇ ಇದ್ದಲ್ಲಿ ನೇರವಾಗಿ ಬಿಸಿಸಿಸಿಗೆ ದೂರು ಸಲ್ಲಿಸಬಹುದು.tvflood

ಏನಿದು ಬಿಸಿಸಿಸಿ?

ವಾಹಿನಿಗಳೆಲ್ಲ ಸೇರಿಕೊಂಡು ಮಾಡಿರುವ ಸಂಘಟನೆ ‘ಐಬಿಎಫ್’ – ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಶನ್. ಐಬಿಎಫ್‌ನ ಅಂಗಸಂಸ್ಥೆಯೇ ಬಿಸಿಸಿಸಿ ಎಂದರೆ ಃಡಿoಚಿಜಛಿಚಿsಣiಟಿg ಅoಟಿಣeಟಿಣ ಅomಠಿಟಚಿiಟಿಣs ಅouಟಿಛಿiಟ. ಇದು ಸ್ಥಾಪನೆಯಾಗಿದ್ದು ೨೦೧೧ರಲ್ಲಿ. ವಾಹಿನಿಗಳು ಅನುಸರಿಸಬೇಕಾಗಿರುವ ಮಾರ್ಗಸೂಚಿ ಹಾಗೂ ದೂರು ನಿರ್ವಹಣಾ ಮಂಡಳಿ ಇದು. ಈ ಮಂಡಳಿಯ ಅಧ್ಯಕ್ಷರು ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು. ಮಂಡಳಿಗೆ ೧೨ ಸದಸ್ಯರಿದ್ದಾರೆ. ಇವರಲ್ಲಿ ನಾಲ್ವರು ಸದಸ್ಯರು ವಾಹಿನಿಗಳ ಪ್ರತಿನಿಧಿಗಳು, ನಾಲ್ವರು ಸದಸ್ಯರು ವಿವಿಧ ಆಯೋಗಗಳ (ಮಹಿಳಾ ಆಯೋಗ, ಅಲ್ಪಸಂಖ್ಯಾತರ ಆಯೋಗ ಇತ್ಯಾದಿ) ಅಧ್ಯಕ್ಷರು ಹಾಗೂ ಉಳಿದ ನಾಲ್ವರು ವಿವಿಧ ಕ್ಷೇತ್ರಗಳ ಪರಿಣತರು ಇದ್ದಾರೆ. ವಾಹಿನಿಗಳ ವಿರುದ್ಧ ಮಂಡಳಿಗೆ ದೂರು ಬಂದಾಗ ಇಲ್ಲಿ ವಿಚಾರಣೆ ನಡೆಯುತ್ತದೆ. ದೂರು ಸರಿಯಾಗಿದೆ ಅನ್ನಿಸಿದಲ್ಲಿ ವಾಹಿನಿಗೆ ಶಿಕ್ಷೆ ವಿಧಿಸಲಾಗುತ್ತದೆ. ಕ್ಷಮಾಪಣೆಯ ಸ್ಕ್ರಾಲ್ ಪ್ರಸಾರ ಮಾಡುವುದು, ದೂರು ಬಂದಿರುವ ದೃಶ್ಯ, ಮಾತು, ಫೂಟೇಜನ್ನು ಮರುಪ್ರಸಾರ ಮಾಡದೇ ಇರುವುದು ಹಾಗೂ ದಂಡವನ್ನೂ ಮಂಡಳಿ ವಿಧಿಸುತ್ತದೆ.

ಜಾಹೀರಾತುಗಳ ನಿಯಂತ್ರಣ ಹೇಗೆ?

ಜಾಹೀರಾತುಗಳಿಗೆ ಸಂಬಂಧಪಟ್ಟಂತೆ ಂSಅI (ಂಜveಡಿಣisiಟಿg Sಣಚಿಟಿಜಚಿಡಿಜs ಅouಟಿಛಿiಟ oಜಿ Iಟಿಜiಚಿ) ಎಂಬ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕೂಡ ಜಾಹೀರಾತುಗಳು ಯಾವ ರೀತಿ ಇರಬೇಕು ಎನ್ನುವುದಕ್ಕೆ ಸ್ಪಷ್ಟ ಮಾರ್ಗಸೂಚಿಯಿದೆ. ಜನರನ್ನು ದಿಕ್ಕುತಪ್ಪಿಸುವ, ಮೌಢ್ಯಕ್ಕೆ ತಳ್ಳುವ, ಈ ಕ್ರೀಮ್‌ನಿಂದ ಬೆಳ್ಳಗಾಗುತ್ತೀರಿ, ಈ ಕ್ಯಾಪ್ಸೂಲ್‌ನಿಂದ ತೂಕ ಕಳೆದುಕೊಳ್ಳುತ್ತೀರಿ, ಆ ಲಾಕೆಟ್ ಹಾಕಿಕೊಳ್ಳುವುದರಿಂದ ನಿಮ್ಮೆಲ್ಲ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬಂತಹ ಜಾಹೀರಾತುಗಳಿಗೆ ನಿಷೇಧವನ್ನೇ ವಿಧಿಸಲಾಗಿದೆ. ಇಲ್ಲಿ ಕೂಡ ವೀಕ್ಷಕರು ಮಂಡಳಿಗೆ ದೂರು ನೀಡಲು ಅವಕಾಶವಿದೆ.

ಯಾವುದು ಬಿಸಿಸಿಸಿ ವ್ಯಾಪ್ತಿಗೆ ಒಳಪಡುವುದಿಲ್ಲ?

 • ಪಾತ್ರಧಾರಿಗಳ ಆಯ್ಕೆ, ಬದಲಾವಣೆ.
 • ಕಥಾ ನಿರೂಪಣೆ, ಕಥೆಯ ವಿಸ್ತಾರ.
 • ಧಾರಾವಾಹಿಯನ್ನು ರಬ್ಬರ್‌ನಂತೆ ಎಳೆಯುವುದು.
 • ಅನಗತ್ಯ ದೃಶ್ಯಗಳ ಸೇರ್ಪಡೆ
 • ದಿಢೀರನೇ ಧಾರಾವಾಹಿಯ ಮುಕ್ತಾಯ.

ಇವೆಲ್ಲವೂ ಬಿಸಿಸಿಸಿ ವ್ಯಾಪ್ತಿಗೆ ಒಳಪಡುವುದಿಲ್ಲ.

ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಹಿಂದಿ ಮತ್ತು ಉಳಿದ ಭಾಷೆಗಳಿಗೆ ಹೋಲಿಸಿದರೆ ಕನ್ನಡ ವಾಹಿನಿಗಳ ಪರಿಸ್ಥಿತಿ ತುಂಬಾ ಚೆನ್ನಾಗಿದೆ ಎಂದೇ ಹೇಳಬಹುದು. ಅತಿಯಾದ ದ್ವೇಷ, ಮಹಿಳೆಯನ್ನು ಕೀಳಾಗಿ ತೋರಿಸುವುದು, ಮಕ್ಕಳ ದುರ್ಬಳಕೆ, ವಿಲಕ್ಷಣ ಕಥಾಹಂದರ, ಹಿಂಸೆಯ ವೈಭವೀಕರಣ ಎಂದೆಲ್ಲ ಉಳಿದ ಭಾಷೆಗಳ ಧಾರಾವಾಹಿಗಳ ಮೇಲೆ ಸಾಕಷ್ಟು ದೂರುಗಳು ಬರುತ್ತವೆ. ಆದರೆ ಕನ್ನಡ ಧಾರಾವಾಹಿಗಳ ಮೇಲೆ ದೂರುಗಳು ಬರುವುದು ತೀರ ಅಪರೂಪ. ಅಷ್ಟೇ ಅಲ್ಲ ಕನ್ನಡ ಕಿರುತೆರೆ ಕಳೆದ ಒಂದು ದಶಕದಲ್ಲಿ ಅತ್ಯುತ್ತಮ ಎನ್ನಿಸುವಂತಹ ಕಾರ್ಯಕ್ರಮವನ್ನು ತೋರಿಸಿವೆ. ಗುಡ್ಡದ ಭೂತ, ಗೃಹಭಂಗದಂತಹ ಕ್ಲಾಸಿಕ್‌ಗಳು, ಕಡಲ ತೀರದ ಭಾರ್ಗವ, ಎದೆತುಂಬಿ ಹಾಡುವೆನು ರೀತಿಯ ರಿಯಾಲಿಟಿ ಶೋಗಳು ಕನ್ನಡದಲ್ಲಿ ಬಂದಿವೆ. ಹಾಗೆಂದ ಮಾತ್ರಕ್ಕೆ ಹೆಮ್ಮೆಪಡುವಂತಿಲ್ಲ. ಏಕೆಂದರೆ, ಪ್ರಯೋಗದ ಹೆಸರಲ್ಲಿ ಕನ್ನಡದಲ್ಲೂ ವಿಚಿತ್ರ ಮತ್ತು ಅಸಹ್ಯ ಹುಟ್ಟಿಸುವ ರಿಯಾಲಿಟಿ ಶೋಗಳು, ತೀರ ಕೆಳದರ್ಜೆಯ ಧಾರಾವಾಹಿಗಳು ಬಂದಿವೆ. ವಿದೇಶಗಳಿಗೆ ಅಗತ್ಯವಾಗಿರುವ, ಅಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಹೊಂದಿಕೊಳ್ಳುವ ರಿಯಾಲಿಟಿ ಶೋಗಳನ್ನು ನೇರವಾಗಿ ಭಟ್ಟಿ ಇಳಿಸಿ ಕನ್ನಡ ವೀಕ್ಷಕರಿಗೆ ತೋರಿಸಲಾಗಿದೆ. ಆದರೆ ವಿಚಿತ್ರವೆಂದರೆ, ಇದಕ್ಕೆ ವೀಕ್ಷಕರಿಂದ ಬಲವಾದ ವಿರೋಧ ವ್ಯಕ್ತವಾಗಿಲ್ಲ. ಏನೇ ಆಗಲಿ, ಕೀಳು ಅಭಿರುಚಿಯ ಕಾರ್ಯಕ್ರಮಗಳ ಬಗ್ಗೆ ವೀಕ್ಷಕರು ಎಚ್ಚೆತ್ತರೆ ಮಾತ್ರ ಸದಭಿರುಚಿಯ ಕಾರ್ಯಕ್ರಮಗಳು ಪ್ರಸಾರವಾಗಲು ಸಾಧ್ಯ.

One Response to “ಬೇಕು ಮೂರ್ಖರ ಪೆಟ್ಟಿಗೆಗೆ ಮೂಗುದಾರ”

 1. Lakshmana P Bhandarkar

  Please provide link to unsubscribe to Utthana newsletter

  Reply

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ