ಪ್ರಸಿದ್ಧ ಪತ್ರಕರ್ತ, ಲೇಖಕ ಪಿ. ಸಾಯಿನಾಥ್ ಅವರು ಭಾರತದ ಮೂಲೆಮೂಲೆಗೂ ಭೇಟಿನೀಡಿ ಗ್ರಾಮೀಣ ಬಡತನದ ಬಗೆಗೆ ಆಳವೂ, ಅರ್ಥಪೂರ್ಣವೂ ಆದ ಅಧ್ಯಯನವನ್ನು ನಡೆಸಿ ಬರೆದ ಪುಸ್ತಕಕ್ಕೆ `Everybody Loves a Good Drought’ ‘ ಎನ್ನುವ ಹೆಸರಿಟ್ಟಿದ್ದಾರೆ. ರೈತರು, ಕೃಷಿ ಕೂಲಿಕಾರರು ಸೇರಿದಂತೆ ಗ್ರಾಮೀಣಜನ ಯಾವ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅವರ ಕಡುಬಡತನದ ಕಾರಣಗಳೇನು? ಅವರ ಶೋಷಕರು ಯಾರ್ಯಾರು? ಮುಂತಾದ ವಿವರಗಳನ್ನು ನೀಡುವ ಗ್ರಂಥಕ್ಕೆ ಶೀರ್ಷಿಕೆ ನೀಡಲು ಅವರು ಆರಿಸಿಕೊಂಡದ್ದು ಬರದ ಹಿನ್ನೆಲೆಯಲ್ಲಿ ನಡೆಯುವ ಗ್ರಾಮೀಣ ಬಡಜನರ ಶೋಷಣೆ.
ಬರ ಬಂತೆಂದು ಸಂತೋಷ ಪಡುವುದು ಎಲ್ಲಿಯಾದರೂ ಉಂಟೆ? ಆ ಜನ ಎಂತಹ ಕ್ರೂರಿಗಳು ಅಥವಾ ವಿಘ್ನಸಂತೋಷಿಗಳು ಎನಿಸಬಹುದು. ಆದರೆ ಇವತ್ತು ಬರ ಬಂತೆಂದರೆ ವಸ್ತುತ ಸಂತೋಷಪಡುವ ಜನ ಇದ್ದಾರೆ; ಅವರ ಸ್ವಾರ್ಥದ ಕಾರಣಕ್ಕಾಗಿ. ಬರದ ಲಕ್ಷಣಗಳು ಕಾಣಿಸಿಕೊಳ್ಳುತ್ತಲೇ ಅವರು ಬೊಬ್ಬೆ ಹೊಡೆಯಲು ಆರಂಭಿಸುತ್ತಾರೆ, “ರಾಜ್ಯದ ಇಷ್ಟು ಜಿಲ್ಲೆಗಳ ಇಷ್ಟು ತಾಲ್ಲೂಕುಗಳಲ್ಲಿ ಬರ ಉಂಟಾಗಿದೆ; ಜನ-ಜಾನುವಾರು ಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೆ ಪರಿಹಾರದ ಕ್ರಮ ಕೈಗೊಳ್ಳಬೇಕು, ಮುಖ್ಯವಾಗಿ ಹಣ ಬಿಡುಗಡೆ ಮಾಡಬೇಕು” ಎನ್ನುವ ಅವರ ಆಗ್ರಹ ಮುಗಿಲು ಮುಟ್ಟುತ್ತದೆ. ಜನರ ಬಗೆಗಿನ ಅವರ ಅನುಕಂಪ ಯಾವ ಮಟ್ಟದ್ದು? ಅವರು ಎಷ್ಟೊಂದು ಪರೋಪಕಾರಿಗಳು ಎಂದು ಯಾರಾದರೂ ಅಚ್ಚರಿಪಡಲೇಬೇಕು; ಕೆನ್ನೆಗೆ ಹೊಡೆದುಕೊಳ್ಳಲೇಬೇಕು
(ಆ ಪುಣ್ಯಜೀವಿಗಳನ್ನು ಸ್ಮರಿಸಿ).
ಆದರೆ ಸ್ವಾರ್ಥ ಎಂಬುದು ಎಷ್ಟು ಸುಲಭವಾಗಿ ಗೋಮುಖವ್ಯಾಘ್ರಗಳನ್ನು ಸೃಷ್ಟಿಸಿಬಿಡುತ್ತದೆ? ಭಾವನೆ, ಅಂತಃಕರಣ ಎಂಬುದು ಇಲ್ಲದಿದ್ದರೆ ಎಂಥ ನಾಟಕ ಮಾಡುವುದಕ್ಕೂ ಮನುಷ್ಯನಿಗೆ ಕಷ್ಟವಾಗುವುದಿಲ್ಲ. ಪಾಪ-ಪುಣ್ಯ ಎಂದು ನಮ್ಮ ಹಿರಿಯರು ಅಂಜುತ್ತಿದ್ದ ಮೌಲ್ಯಗಳು `ಶುದ್ಧ ಬೊಗಳೆ’ ಎಂದು ಆತ ಸುಲಭದಲ್ಲಿ ತೀರ್ಮಾನಿಸಿಬಿಡುತ್ತಾರೆ. `ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ’ `…. ಮದುವೆಯಲ್ಲಿ ಉಂಡವನೇ ಜಾಣ’ ಎಂಬಂತಹ ಗಾದೆಗಳು ಅವನ ಅನುಕೂಲಕ್ಕೆ ಬರುತ್ತವೆ. ಸರ್ಕಾರ ಬಿಡುಗಡೆ ಮಾಡುವ ಹಣವನ್ನು ಹೇಗಾದರೂ ಸಾಕಷ್ಟು ಲಪಟಾಯಿಸಿ ಜೇಬು ತುಂಬಿಸಿಕೊಳ್ಳುತ್ತಾನೆ.
ಈ ದುರುಳರ ಅನುಕೂಲಕ್ಕೆ ಬರುವ ಇನ್ನೊಂದು ವಿಷಯವೆಂದರೆ ಭೂಕಂಪದಂತಹ ಪ್ರಾಕೃತಿಕ ವಿಕೋಪಗಳು. ಎಲ್ಲ ಸಂದರ್ಭಗಳಲ್ಲೂ ಸಾಮಾನ್ಯವಾಗಿ ಜನ ಮುಗ್ಧರು ಮತ್ತು ಹೃದಯವಂತರು. ಯಾವುದೇ ದೇಶದಲ್ಲಿ, ಯಾವುದೋ ಊರಿನಲ್ಲಿ ತಮ್ಮಂಥದೇ ಜನರಿಗಾದ ಕಷ್ಟಕ್ಕೆ ಅವರು ಕರಗಿಬಿಡುತ್ತಾರೆ; ಕೈಯಲ್ಲಿರುವ ಅಷ್ಟೋ ಇಷ್ಟೋ ಹಣವನ್ನು ಹೊಟ್ಟೆಗಿಲ್ಲದೆ ನಲುಗುವ ಆ ಸಂತ್ರಸ್ತರಿಗಾಗಿ ಕೊಟ್ಟುಬಿಡೋಣ ಎಂದು ಅವರಿಗನಿಸುತ್ತದೆ. ಮೇಲೆ ಹೇಳಿದ ಬರವನ್ನು ಇಷ್ಟಪಡುವ ದುಷ್ಟಕೂಟ ಭೀಕರ ಸ್ವರೂಪದ ಭೂಕಂಪವನ್ನು ಬಳಸಿಕೊಳ್ಳದೆ ಇರುತ್ತದೆಯೆ? ಈಗ ಅದೇ ಆಗುತ್ತಿರುವುದು ಎನಿಸುತ್ತದೆ.
೫೦೦೦ಕ್ಕೂ ಮಿಕ್ಕಿ ಜನರನ್ನು ಬಲಿತೆಗೆದುಕೊಂಡು, ಲಕ್ಷಗಟ್ಟಲೆ ಜನರನ್ನು ಬರಿಗೈಯಲ್ಲಿ ಬೀದಿಗೆ ತಳ್ಳಿದ ಭೂಕಂಪದ ಸಂತ್ರಸ್ತರಿಗಾಗಿ ಸಾಕಷ್ಟು ಜನ ಈಗ ಭಿಕ್ಷಾಪಾತ್ರೆ ಹಿಡಿಯಲಿದ್ದಾರೆ ಎನಿಸುತ್ತದೆ. ನೆನಪಿಡಿ; ಇವರಿಗೆ ಸಂತ್ರಸ್ತರ ಬಗ್ಗೆ ಯಾವ ಅನುಕಂಪವೂ ಇಲ್ಲ; ಪಾಪ-ಪುಣ್ಯ ಎಂಬ ಭಯ-ಭೀತಿಯೂ ಇಲ್ಲ. ಸಾಮಾಜಿಕ ಅಂಜಿಕೆ-ನಾಚಿಕೆಗಳೂ ಇಲ್ಲ. ಇನ್ನು ಇವರು ರಾಜಕಾರಣಿಗಳೋ ಅಥವಾ ಅವರ ಕರುಳಬಳ್ಳಿಯ ಸಂಬಂಧ ಇರುವವರೋ ಆದರೆ ಅವರ ಬಳಿ ತಾವು ಮಾಡುತ್ತಿರುವುದಕ್ಕೆ ಸಮರ್ಥನೆಯೂ ಇರಬಹುದು. ಆ ಸಮರ್ಥನೆಯನ್ನು ಬೆಂಬಲಿಸುವ ಅಥವಾ ಒಪ್ಪಿಕೊಳ್ಳುವ ಓತಿಕ್ಯಾತಗಳ ಇನ್ನೊಂದು ವರ್ಗವೂ ಇರಬಹುದು.
ಆದ್ದರಿಂದ ಜನತೆ ಸಹಾನುಭೂತಿ, ಅನುಕಂಪಗಳನ್ನು ಪಕ್ಕಕ್ಕಿಡದಿದ್ದರೂ ತಮ್ಮ ಮುಗ್ಧತೆಯನ್ನು ಒಂದು ಕ್ಷಣ ಬದಿಗಿಟ್ಟು ತಮ್ಮ ಮುಂದೆ ಬರುವ ವೇಷಧಾರಿ ನಕಲಿ ಶ್ಯಾಮರ ಬಗ್ಗೆ ಯೋಚಿಸಬೇಕು. ತಾವು ಕೊಡುವ ಹಣ ಯಾರಲ್ಲಿ ಕೊಟ್ಟರೆ ಸಂತ್ರಸ್ತರಿಗೆ ನೇರವಾಗಿ ತಲಪಬಹುದೆಂದು ಯೋಚಿಸಿಯೇ ಕೊಡಬೇಕು. ಅದರಲ್ಲಿ `ಪ್ರಧಾನಿಯವರ ವಿಪತ್ತು ಪರಿಹಾರ ನಿಧಿ’ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಅದೇ ರೀತಿ ಆರೆಸ್ಸೆಸ್ ನಂತಹ ನಂಬಿಕೆಗೆ ಅರ್ಹವಾದ ಸಂಸ್ಥೆಯಲ್ಲೂ ನೀಡಬಹುದು. ಇಲ್ಲಿ ಇನ್ನೊಂದು ಅಂಶವನ್ನು ಕೂಡ ಹೇಳಬೇಕು. ಜನರನ್ನು ಈ ರೀತಿ ವಂಚಿಸುವ ತಮ್ಮ ದಂಧೆಗೆ ಕೆಲವು ವೇಷಧಾರಿಗಳು ಶಾಲಾಮಕ್ಕಳನ್ನು ಕೂಡ ಬಳಸಿಕೊಳ್ಳುವ ಸಾಧ್ಯತೆ ಇದೆ. ಮಕ್ಕಳನ್ನು ಕಂಡಾಗ ಕರಗುವ ಜನರ ಭಾವನೆಗಳ ದುರುಪಯೋಗಕ್ಕೆ ಇದು ಇನ್ನೊಂದು ತಂತ್ರ. ಅಂಥವರಿಗೂ ಜನ ಪಾಠಕಲಿಸಬೇಕು. ಹೆತ್ತವರು ಕೂಡ ತಮ್ಮ ಮಕ್ಕಳು ಯಾವುದೋ ವಂಚಕರ ಕೈಗೊಂಬೆ ಆಗದಂತೆ ಎಚ್ಚರ ವಹಿಸಬೇಕು. ಒಟ್ಟಿನಲ್ಲಿ ಪರಿಹಾರಕ್ಕೆ ಮೊತ್ತ-ಸೊತ್ತು ಸಂಗ್ರಹಕ್ಕೆ ತಡೆಯಾಗದಿರಲಿ; ಅದು ವಂಚಕ, ಸೋಗಲಾಡಿಗಳ ಕೈ ಸೇರದಿರಲಿ, ಅಷ್ಟೇ.