ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಮಾಧ್ಯಮ

ಸರ್ಕಾರಿ ಶಾಲೆಗಳು

ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಮೆಯಾಗುತ್ತಿದೆ. ಕೂಲಿ ಮಾಡುವವರು, ಸೊಪ್ಪು ಮಾರುವವರು, ಮನೆಕೆಲಸ ಮಾಡುವವರು ಕೊನೆಗೆ ಸಮಾಜದ ಅತಿಕೆಳಸ್ತರದ ಕುಟುಂಬಗಳೂ ಕೂಡ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಬಯಸುತ್ತಿದ್ದಾರೆ. ಯಾಕೆ ಹೀಗೆ? ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ವಿತರಣೆ, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳು, ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ರೂಪಿಸಿರುವ ಯೋಜನೆಗಳು – ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಪ್ರತಿಭಾ ಪ್ರದರ್ಶನ, ಚಿಣ್ಣರಮೇಳ – ಇತ್ಯಾದಿಗಳು ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಮರ್ಥವಾಗಿಲ್ಲ. ಸರ್ಕಾರದ ಯೋಜನೆಗಳು ವಿಫಲವಾಗಲು ಕಾರಣವೇನು ಎಂಬುದರ ಬಗ್ಗೆ  ಚಿಂತನೆ ಅಗತ್ಯ.

ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟುತ್ತಿವೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಲು ಪಣತೊಟ್ಟಿರುವ ಸರ್ಕಾರ ಖಾಸಗಿ ಶಾಲೆಗಳನ್ನು ಆರಂಭಿಸಲು ಏಕೆ ಅನುಮತಿ ನೀಡುತ್ತಿದೆ?

ಕರ್ನಾಟಕದ ಶೇ. ೭೫ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನೀರಿನ ಸೌಲಭ್ಯವಿಲ್ಲ, ಶೌಚಾಲಯವಿಲ್ಲ, ಪ್ರಯೋಗಾಲಯವಿಲ್ಲ, ಗ್ರಂಥಾಲಯವಿಲ್ಲ, ಆಟದ ಮೈದಾನವಿಲ್ಲ, ಪಾಠೋಪಕರಣಗಳಿಲ್ಲ, ಪೀಠೋಪಕರಣಗಳಿಲ್ಲ, ಕಟ್ಟಡಗಳಿಲ್ಲ – ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯೂ ಇದೆ. ಹಲವಾರು `ಇಲ್ಲ’ಗಳ ನಡುವೆ ಸರ್ಕಾರಿ ಶಾಲೆಗಳು ಉಸಿರಾಡುತ್ತಿವೆ!

ಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸುವ ಮೊದಲು ಮೂಲಭೂತ ಸೌಕರ್ಯಗಳತ್ತ ಗಮನಹರಿಸಬೇಕು. ಶಾಲೆಯ ಅಭಿವೃದ್ಧಿ ಸಮಿತಿಗಳು ರಾಜಕೀಯ ಮಾಡದೆ, ಶಾಲೆಯ ಅಭಿವೃದ್ಧಿಗಾಗಿ ದುಡಿಯಬೇಕು. ಶಿಕ್ಷಕರು, ಸಮುದಾಯದವರೂ ಕಲಿಕೆಗೆ ಹೆಚ್ಚು ಒತ್ತು ನೀಡಿ ಶಾಲೆಯಲ್ಲಿ ಕಲಿಯುವ ವಾತಾವರಣ ಮೂಡಿಸಿದಲ್ಲಿ, ಸರ್ಕಾರಿ ಶಾಲೆಗಳು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.

ಸಿ.ಎನ್. ಮುಕ್ತಾ, ಲಕ್ಷ್ಮೀಪುರಂ, ಮೈಸೂರು

ಯಾವುದು ಧರ್ಮ?

ಇಂದು ಕೆಲವು ಶ್ರೀಮಂತ ದೇವಾಲಯಗಳ ಶ್ರೀಮಂತಿಕೆ ಮತ್ತೂ ಮತ್ತೂ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ದೇವರಿಗೆ ಬೇಕಾದಷ್ಟು ಆಭರಣ (ದೇವರಿಗೆ ಬೇಕಾಗಿಲ್ಲ) ಮಾಡಿಸಿದ್ದರೂ ಇನ್ನಷ್ಟು ಚಿನ್ನದ ಕಿರೀಟ, ವಜ್ರದ ಕಿರೀಟ, ವಜ್ರದ ಕವಚ, ಬೆಳ್ಳಿಯ ರಥ, ಪಾಲಕಿ, ಚಿನ್ನದ ರಥ, ಚಿನ್ನದ ಬಾಗಿಲು ಇತ್ಯಾದಿ ಮಾಡಿಸುತ್ತಿರುವುದನ್ನು ನೋಡುತ್ತಿದ್ದೇವೆ. ಯಜ್ಞ-ಯಾಗ ಎಂಬ ಹೆಸರಿನಲ್ಲಿ ಜನರಿಂದ ವಂತಿಗೆ ಸಂಗ್ರಹಮಾಡುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ಇನ್ನೊಂದೆಡೆ ಒಂದು ಹೊತ್ತೂ ಊಟಕ್ಕಿಲ್ಲದೆ ವಾಸಿಸಲು ಸರಿಯಾದ ಮನೆ ಇಲ್ಲದೆ ಬಳಲುತ್ತಿರುವ ಬಡಜನರನ್ನೂ ಕಾಣುತ್ತಿದ್ದೇವೆ.

ಧರ್ಮವೆಂದರೆ ಏನು?

ಸ್ವಾಮಿ ವಿವೇಕಾನಂದರ ನುಡಿಯೊಂದು ಹೀಗಿದೆ –

“ವಿಧವೆಯ ಕಣ್ಣೀರು ತೊಡೆಯಲಾರದ, ಹಸಿದ ಬಡವನ ಹೊಟ್ಟೆ ತುಂಬಿಸದ ಧರ್ಮವನ್ನು ಕಿತ್ತೊಗೆಯೋಣ.”

ಸ್ವಾಮಿ ವಿವೇಕಾನಂದರ ಈ ಅಮೃತವಾಣಿಯನ್ನು ನಾವೆಲ್ಲರು ಅರಿತುಕೊಳ್ಳುವುದು ಯಾವಾಗ?

ಕಾಗದದ ನೌಕೆಯಿಂ ಸಾಗರವ ದಾಂಟುವರೆ?

ತತ್ತ್ವಗಳನೋದಿದೊಡೆ ಮುಕ್ತಿ ದೊರಕುವುದೇನು?

ಧರ್ಮ ಕರ್ಮದೊಳಿರಲಿಬಾಲಗೋಪಾಲ||

ಎಂಬುದಾಗಿ ಬಾಲಗೋಪಾಲ ವಚನಕಾರರ ನುಡಿಯಂತೆ ಬರೇ ತತ್ತ್ವಗಳನ್ನು ಓದುವುದರಿಂದ, ಗ್ರಂಥಗಳನ್ನು ಪಠಿಸುವುದರಿಂದ ಮುಕ್ತಿಹೊಂದಲು ಸಾಧ್ಯವಿಲ್ಲ. ದೇವರಿಗೆ ಅದೆಷ್ಟೇ ಆಭರಣ ಮಾಡಿಸುವುದರಿಂದಲೂ ಮೋಕ್ಷ ಸಿಗಲಾರದು. ಸತ್ಕರ್ಮಗಳಿಂದ ಮುಕ್ತಿ ಸಿಗುವುದೆಂಬುದು ವಚನಕಾರರ ಅಭಿಪ್ರಾಯ. ಕಾಯಕವೇ ಕೈಲಾಸ ಎಂಬುದು ಬಸವಣ್ಣನವರ ನುಡಿ. ದೀನರ ಸೇವೆಯೇ ದೇವರ ಸೇವೆ.

ಒಂದು ಚಿನ್ನದ ರಥ, ಕಿರೀಟ ಮಾಡಿಸುವ ಖರ್ಚಿನಿಂದ ನೂರಾರು ಅನಾಥರಿಗೆ ಆಶ್ರಯ, ಆಹಾರ ನೀಡಬಹುದು. ಇದರಿಂದ ಶ್ರೇಯಸ್ಸು ಸಿಗುವುದು. ಹಳ್ಳಿಹಳ್ಳಿಗಳಲ್ಲಿ ಅದೆಷ್ಟೋ ಪಾಳುಬಿದ್ದ ದೇವಾಲಯಗಳಿವೆ. ಅವುಗಳನ್ನು ಜೀರ್ಣೋದ್ಧಾರ ಮಾಡಿಸಿಕೊಟ್ಟರೆ ಆ ಭಾಗದ ಜನರಿಗೆ ನೆಮ್ಮದಿಯ ತಾಣವಾಗಬಹುದು. ಸಂಪತ್ತು ಒಂದೇ ಕಡೆ ಜಮೆಯಾಗುವ ಬದಲು ಪ್ರಜೆಗಳ ಹಿತಕ್ಕಾಗಿ ಸೇವಾರೂಪದಲ್ಲಿ ವೆಚ್ಚವಾಗಲಿ.

                ಕೆ. ಗೋಪಾಲರಾವ್, ಕಡಬ, ಪುತ್ತೂರು

ಪ್ರಾಚೀನ ಶಿಕ್ಷಣದಲ್ಲಿ ಯೋಗ ಕಡ್ಡಾಯ

ಜೂನ್ ೨೧ರಂದು ‘ವಿಶ್ವಯೋಗ’ ದಿನವನ್ನಾಗಿ ಆಚರಿಸಲಾಯಿತು. ವಿಶ್ವಮಟ್ಟದಲ್ಲಿ ಯೋಗಕ್ಕೆ ದೊಡ್ಡ ಬೆಲೆ ಸಿಕ್ಕಿರುವುದು ಭಾರತೀಯರು ಹೆಮ್ಮೆ ಪಡಬೇಕಾದ ಸಂಗತಿ. ಆದರೆ ಯೋಗದ ಈ ಜನಪ್ರಿಯತೆಗಾಗಿ ನಾವು ಬೀಗಬೇಕಾಗಿಲ್ಲ. ಯೋಗದ ಮಹತ್ತ್ವವನ್ನು ನಾವು ಬಹಳ ತಡವಾಗಿ ಅರ್ಥಮಾಡಿಕೊಂಡು ಆ ಬಗ್ಗೆ ಜಾಗೃತಿ ಮೂಡಿಸಬೇಕಾದ ಪರಿಸ್ಥಿತಿಗಾಗಿ ವಿಷಾದಿಸಬೇಕಾಗಿದೆ.

ಭಾರತೀಯ ಸಂಸ್ಕೃತಿಗೆ ‘ಯೋಗ’ ಹೊಸದೇನಲ್ಲ. ವೇದಕಾಲದಿಂದಲೂ ಇದು ಪ್ರಚಲಿತವಾಗಿದೆ. ದೇವ-ದಾನವರು ಮಾಡುತ್ತಿದ್ದ ತಪಸ್ಸು ಕೂಡ ಯೋಗದ ಒಂದು ಅಂಗವೇ ಆಗಿದೆ. ಅಷ್ಟೇ ಅಲ್ಲ ಪ್ರಾಚೀನ ಶಿಕ್ಷಣಪದ್ಧತಿಯಲ್ಲಿ ಯೋಗ ಕಡ್ಡಾಯವಾಗಿತ್ತು.

ಈಗಿನಂತೆ ಶಾಲೆಗಳು ಇಲ್ಲದ ಪ್ರಾಚೀನ ಕಾಲದಲ್ಲಿ ಕಾಡಿನಲ್ಲಿ ಋಷಿಪುಂಗವರು ಕಟ್ಟಿ ವಾಸಿಸುತ್ತಿದ್ದ ಆಶ್ರಮಗಳೇ ವಿದ್ಯಾಕೇಂದ್ರಗಳಾಗಿದ್ದವು. ಅಲ್ಲಿ ವಿದ್ಯೆ ಕಲಿಯಲು ಹೋಗುತ್ತಿದ್ದವರೆಲ್ಲ ಕಡ್ಡಾಯವಾಗಿ ಯೋಗ ಕಲಿಯಬೇಕಾಗುತ್ತಿತ್ತು. ಯೋಗ ಕೇವಲ ಕಾಟಾಚಾರದ ಆಟವಾಗಿರಲಿಲ್ಲ. ಬದಲಾಗಿ ಬದುಕಿನ ಒಂದು ಭಾಗವಾಗಿತ್ತು. ಯೋಗದ ಅಭ್ಯಾಸದಿಂದ ಆರೋಗ್ಯ, ಮನೋಬಲ, ಸಂಯಮ, ಸಚ್ಚಾರಿತ್ರ್ಯ ಇತ್ಯಾದಿ ಗುಣಗಳನ್ನು ರೂಢಿಸಿಕೊಳ್ಳಬಹುದಾಗಿತ್ತು.

ಈಗಿನ ರಾಜ್ಯಸರ್ಕಾರ ಆ ಭಾಗ್ಯ, ಈ ಭಾಗ್ಯ ಎಂದೆಲ್ಲ ಹೇಳಿಕೊಂಡು ಸಾಧನೆಯ ಅಮಲಿನಲ್ಲಿ ತೇಲುತ್ತಿದೆ. ಆzರೆ ನಮ್ಮ ರಾಜಕಾರಣಿಗಳೂ ನಮ್ಮ ಗತ ಇತಿಹಾಸವನ್ನು ಗಮನಿಸಬೇಕು. ಶಾಲಾ ಮಕ್ಕಳಿಗೆ ನೀಡುವ ಇಂದಿನ ಬಿಸಿ ಊಟದ ಯೋಜನೆ ಹೊಸದೇನೂ ಅಲ್ಲ. ಹಿಂದೆ ಆಶ್ರಮಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಊಟ, ವಸತಿಯ ವ್ಯವಸ್ಥೆ ಎಲ್ಲ ಆಶ್ರಮಗಳಲ್ಲೂ ಇರುತ್ತಿತ್ತು. ಸರತಿಯಂತೆ ವಿದ್ಯಾರ್ಥಿಗಳು ಅನ್ನ, ಆಹಾರ ಧಾನ್ಯ ಮಧುಕರವೃತ್ತಿ(ಭಿಕ್ಷೆ)ಯಿಂದ ಸಂಪಾದಿಸಿ ತಂದು ಎಲ್ಲರೂ ಊಟಮಾಡುತ್ತಿದ್ದರು. ಕಾಡಿನ ಹಣ್ಣು-ಹಂಪಲು ಉಪಾಹಾರವಾಗಿದ್ದವು. ಶ್ರೀಕೃಷ್ಣ-ಬಲರಾಮರೂ ಕೂಡ ಆಶ್ರಮದಲ್ಲೇ ವಿದ್ಯೆ ಕಲಿತಿದ್ದರೆಂಬುದು ಗಮನಾರ್ಹ. ಸಾಂದೀಪನಿ ಮುನಿಗಳಲ್ಲಿ ಅವರು ಶಿಕ್ಷಣ ಪಡೆದರು. ಈ ರಾಜಕುವರರ ಜೊತೆ ‘ಸುದಾಮ’ನಂತಹ ಬಡವರೂ ಕಲಿಯುತ್ತಿದ್ದರು.

ಯೋಗ ಕೇವಲ ಅಂಗಾಂಗಗಳ ಕಸರತ್ತಲ್ಲ. ಅದು ದೇಹದ ಆಂತರಿಕ ಶಕ್ತಿ, ಚೈತನ್ಯಗಳ ಪುನಶ್ಚೇತನದ ಸಾಧನ. ನಮ್ಮಲ್ಲಿ ಅಡಗಿದ ಆಂತರಿಕ ಶಕ್ತಿಯನ್ನು ಬಲಗೊಳಿಸಲು ಯೋಗವು ಸಹಕಾರಿಯಾಗುತ್ತದೆ ಎಂದು ಶಾಸ್ತ್ರಗ್ರಂಥಗಳು ಹೇಳುತ್ತವೆ. ಯೋಗ ಸುಲಭ ಸಾಧನವಲ್ಲ; ಕಠಿಣ ಪರಿಶ್ರಮಕ್ಕೆ ದೇಹವನ್ನು ಒಗ್ಗಿಸುವ ಆವಶ್ಯಕತೆ ಇದೆ. ಶಿಸ್ತುಬದ್ಧ ಜೀವನಕ್ರಮ ಯೋಗಸಾಧನೆಗೆ ಹೆದ್ದಾರಿ ಇದ್ದಂತೆ. ವ್ಯಸನಮುಕ್ತರು ಮಾತ್ರ ಯೋಗ ಮಾಡಬಲ್ಲರು.

ಯೋಗದಿಂದ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಸಾಧಿಸಬಹುದು. ಬದುಕನ್ನು ಆರೋಗ್ಯಪೂರ್ಣವಾಗಿ ರೂಪಾಂತರಿಸಿಕೊಳ್ಳಬಹುದು.

ಆದರೆ ಇಂದಿನ ಸದ್ದು-ಗದ್ದಲ ಗಮನಿಸಿದರೆ ಯೋಗ ಕೂಡ ಒಂದು ಫ್ಯಾಶನ್ ಆಗುತ್ತಿದೆಯೇ ಎನ್ನುವ ಸಂಶಯ ಕಾಡುತ್ತಿದೆ. ಈ ರೀತಿಯ ಅಬ್ಬರದ ಪ್ರಚಾರದಲ್ಲಿ ಯೋಗವು ಉಳಿದ ದಿನಾಚರಣೆಗಳಂತೆ ನಿಗದಿತ ದಿನಕ್ಕೆ ಸೀಮಿತವಾದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಯೋಗಸಾಧನೆ ಸರಕಾರಿ ದಿನಾಚರಣೆಗಳಾಗಿ ಪ್ರಚಾರದ ವಸ್ತು ಆಗದೆ, ಅದು ನಿತ್ಯದ ಜೀವನಶೈಲಿಯಾಗಬೇಕು.

                – ಡಿ.ವಿ. ಬಡಿಗೇರ, ಗದಗಬೆಟಗೇರಿ

Comments are closed.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ