ಶಿವ ಶಿವಾ ಎನ್ನುವ ಚಳಿ ಹೋಗಿ, ಹರ ಹರ ಎನ್ನುವ ಬೇಸಿಗೆ ಶುರುವಾಗಿ ತಿಂಗಳುಗಳೇ ಕಳೆದಿದೆ. ಬೇಸಿಗೆ ಆರಂಭದ ಮಹಾಶಿವರಾತ್ರಿಯ ಸಮಾಪ್ತಿಯಾಗಿ, ಚಾಂದ್ರಮಾನ
ಯುಗಾದಿಯ ಶ್ರೀಕ್ರೋಧಿ ಸಂವತ್ಸರ ಪ್ರಾರಂಭವಾಗಿ ಶ್ರೀರಾಮ ನವಮಿಯೂ ಕಳೆದಿದೆ. ಈ ಬಾರಿಯ ಶ್ರೀರಾಮನವಮಿಗೆ ಹೆಚ್ಚಿನ ಮಹತ್ತ್ವವಿದ್ದುದು ಎಲ್ಲರಿಗೂ ತಿಳಿದೇ ಇದೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಭಾರತದ ಆತ್ಮಸ್ವರೂಪವು ಜಾಗೃತವೂ ಆಗಿದೆ.
ನಾನು ಅಂಗನವಾಡಿಗೆ ಹೋಗುತ್ತಿದ್ದಾಗ ಚೈತ್ರ, ವೈಶಾಖ, ಜೇಷ್ಠ, ಆಷಾಡ – ಹೀಗೆ ಋತು-ಮಾಸಗಳನ್ನು ಕಂಠಸ್ಥ ಮಾಡಿಸುತ್ತಿದ್ದರು. ಆರು ಋತುಗಳನ್ನು ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ, ಶಿಶಿರ ಎಂದು ಹೇಳುವಾಗ ಏನೋ ಖುಷಿಯಿರುತಿತ್ತು. ಹೀಗೆ ನಮಗೆ, ನಮ್ಮ ವಯೋಮಾನದವರಿಗೆ ನಮ್ಮ ಸ್ವಂತಿಕೆಯ ಪರಿಚಯವಾಗುತ್ತಿತ್ತು. ರಾಷ್ಟ್ರೀಯ ನೆಲೆಗಟ್ಟಿನ ನಮ್ಮದೇ ಆದ ಕಾಲಪದ್ಧತಿಯನ್ನು ತಿಳಿಯುತ್ತಿದ್ದೇವು. ಆದರೆ ಈಗಿನ ಮಕ್ಕಳು? ಚೈತ್ರ ವೈಶಾಖ ಹೇಳಿ – ಎಂದರೆ ಅವರ ಉತ್ತರ ಕೇಳಿ ನಮಗೆ ಶಾಕ್ ಆಗಲೇಬೇಕು! ಅದೇನು ನಂಗೊತ್ತಿಲ್ಲ. ಯಾಕೆ ತಿಳಿದುಕೊಳ್ಳಬೇಕು? ಎಂದೇ ಉತ್ತರಿಸುತ್ತಾರೆ.
ನಮ್ಮಲ್ಲಿ ಎಲ್ಲಿಯೂ ಲೋಪವಾಗುತ್ತಿದೆ. ನಾವೇ ಸರಿ ಹೋಗಬೇಕು, ಮಕ್ಕಳಲ್ಲ. ಮಕ್ಕಳು ಮೇಣದಂತೆ, ನೀಡಿದ ಆಕಾರ ಪಡೆಯುತ್ತಾರೆ. ನಾವೇ ನಮ್ಮ ಸಂಸ್ಕೃತಿಯನ್ನು ನಿರ್ಲಕ್ಷಿಸಿದ್ದೇವೆ. ನಮ್ಮ ಸಂಸ್ಕೃತಿ ಕೇವಲ ಕಟ್ಟುಕತೆ ಎಂದು ಬಿಂಬಿಸಲು ನಡೆಯುತ್ತಿರುವ ಸಂಚುಗಳಿಗೆ ಬಲಿಯಾಗಿದ್ದೇವೆ. ಈಗಲೂ ನಡೆಯುತ್ತಲೇ ಇದೆ. ಆದರೆ ಈಗ ಜಾಗೃತವಾಗುವ ಸಮಯವೂ ಬಂದಿದೆ. ನಿರ್ಲಕ್ಷಿಸಿದರೆ ಅವಸಾನ ನಿಶ್ಚಿತ ಎಂಬ ಎಚ್ಚರಿಕೆ ನಮ್ಮ ಮುಂದಿದೆ. ನಾವು ಶಾಲಾದಿನಗಳಲ್ಲಿ ಓದುತ್ತಿರುವುದು ದೋಷಪೂರಿತ ಇತಿಹಾಸದ ಪಠ್ಯಗಳನ್ನು ಎಂಬುದು ಅರಿವಾಗುತ್ತಿದೆ.
ಭಾರತೀಯ ಋತುಮಾನಗಳು ಪ್ರಕೃತಿಯನ್ನು ಆಧರಿಸಿವೆ. ಅದಕ್ಕೆ ಅವುಗಳ ಹೆಸರೇ ಸಾಕ್ಷಿ. ಹಾಗೆಯೇ ಅದು ಯಾವುದೇ ವ್ಯಕ್ತಿಯನ್ನು ಕೇಂದ್ರಿಕರಿಸಿ ರಚಿತವಾಗಿಲ್ಲ. ಪ್ರಕೃತಿಯಲ್ಲಿ ಎಲೆ-ಉದುರಿ ನವಚಿಗುರನ್ನು ಹೊದ್ದು ಮೈದುಂಬಿದ ಗಿಡಮರಗಳು ನಳನಳಿಸುವ ಪರ್ವದಲ್ಲಿ ಯುಗಾದಿಯ ಆಚರಣೆ. ಇದು ಕೇವಲ ಆಚರಣೆ ಮಾತ್ರವಲ್ಲ, ಅದಕ್ಕೆ ಮಹತ್ತ್ವವೂ ಇದೆ. ಬೇವುಬೆಲ್ಲವನ್ನು ಸವಿದು ನೂತನ ಸಂವತ್ಸರವನ್ನು ಬರಮಾಡಿಕೊಳ್ಳುತ್ತೇವೆ. ಸಿಹಿ-ಕಹಿ ಏನೇ ಆದರೂ, ಅದನ್ನು ಸಮವಾಗಿ ಸ್ವೀಕರಿಸುತ್ತೇವೆ ಎಂಬ ಆಶಯದೊಂದಿಗೆ. ನಮ್ಮೆಲ್ಲ ಆಚರಣೆಗಳೂ ಹೀಗೆಯೇ? ಅದರಲ್ಲಿ ಎಲ್ಲವನ್ನೂ ಸ್ವೀಕರಿಸುವ ಪ್ರಕೃತಿಗೆ ಕೃತಜ್ಞತೆಯಿದೆ, ಕೌಟುಂಬಿಕ ಭಾವನೆಯಿದೆ, ಉತ್ತಮ ಆರೋಗ್ಯದ ಆಶಯವಿದೆ.
ಈ ಹಿಂದೆ ಬೇಸಿಗೆಯಲ್ಲಿ ಮನೆಯ ಹೊರಗಿನ ಜಗುಲಿಯಲ್ಲಿ ಮಲಗುತ್ತಿದ್ದೆವು. ಬೆಳಗಿನಿಂದ ಕಾದ ಜಗುಲಿಯು ತನ್ನಲ್ಲಿರುವ ಅಲ್ಪಸ್ವಲ್ಪ ಶಾಖವನ್ನು ನಮ್ಮ ಮೈಗೆ ನೀಡುತ್ತಿತ್ತು. ತಣ್ಣನೆಯ ಗಾಳಿಯಲ್ಲಿ ಅಮ್ಮನ ತೊಡೆಯ ಮೇಲೆ ಮಲಗಿ ಆಕಾಶ ನೋಡುತ್ತಾ, ಬಾನಂಗಳದ ನಕ್ಷತ್ರಗಳನ್ನು ಎಣಿಸುತ್ತಾ ಲೋಕಾಭಿರಾಮವಾಗಿ ಮಾತನಾಡುವುದು ಅದೆಷ್ಟು ಚೆಂದ! ಅವು ಜೀವನದ ಬಹುಅಮೂಲ್ಯ ಗಳಿಗೆಗಳು. ಇಂದಿನ ಯುವಪೀಳಿಗೆ ಇದರಿಂದ ವಂಚಿತವಾಗಿವೆ. ವ್ಯಾವಹಾರಿಕ ಪ್ರಪಂಚದಲ್ಲಿ ಇದನ್ನು ಕಾಣುವುದು ವಿರಳವೇ ಸರಿ. ಅಕ್ಕಪಕ್ಕದ ಮನೆಗಳಲ್ಲಿರುವವರ ನೆರೆಹೊರೆಯವರ ಪರಿಚಯವೇ ಇಂದು ದೂರದ ಮಾತಾಗಿದೆ. ಇಂತಹ ಕಾಲಘಟ್ಟದಲ್ಲಿ ಭಾರತೀಯ ಕೌಟುಂಬಿಕ ಜೀವನದ ಮಹತ್ತ್ವವನ್ನು ಮಕ್ಕಳಿಗೆ ಯುವಪೀಳಿಗೆಗೆ ತಿಳಿಸಿಕೊಡಬೇಕಾದ ಹೊಣೆ ನಮ್ಮದಲ್ಲವೇ?
ಸ್ವಲ್ಪ ಆಲೋಚಿಸಿ, ನಾವು ಬಾಲ್ಯದಲ್ಲಿ ಕಲಿತ ಕವನ, ಪಾಠಗಳನ್ನು ಮಕ್ಕಳಿಗೆ ಹೇಳಿ ಕೊಡುವುದು ಮುಖ್ಯವಲ್ಲವೇ? ಪರಿಸರಸ್ನೇಹಿ-ಸರ್ವವನ್ನೂ ಗೌರವಿಸುವ ನಮ್ಮ ಸಂಸ್ಕೃತಿಯ ಬಗೆಗಿನ ಅರಿವನ್ನು ನಮ್ಮ ಮಕ್ಕಳಲ್ಲಿ ಮೂಡಿಸುವುದು ನಮ್ಮ ಜವಾಬ್ದಾರಿಯಲ್ಲವೇ? ಮಕ್ಕಳಿಗೆ ಕೇವಲ ಕೋಚಿಂಗ್, ಟ್ಯೂಷನ್ಗಳಿಗೆ ಸೀಮಿತವಾಗಿಸದೇ ನಮ್ಮ ಸಂಸ್ಕೃತಿ, ನಂಬಿಕೆಗಳು, ಆಚರಣೆಗಳು, ಹಬ್ಬಹರಿದಿನಗಳು, ಶ್ಲೋಕಗಳು, ಕಾಲಗಣನೆಗಳು (ವಾರ, ತಿಥಿ, ನಕ್ಷತ್ರ, ಮಾಸ, ಋತು-ಸಂವತ್ಸರಗಳು), ಅವುಗಳ ಮಹತ್ತ್ವದ ಬಗೆಗೆ ತಿಳಿಸಿಕೊಡೋಣ. ನಮ್ಮ ಪೂರ್ವಜರು ನಮಗೆ ಬಳುವಳಿಯಾಗಿ ನೀಡಿರುವ ಅಪಾರ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲಪಿಸೋಣ. ನಮ್ಮ ದೇಶದ ವಿವಿಧ ಸಂಸ್ಕöÈತಿಗಳು, ನೃತ್ಯಪ್ರಕಾರಗಳು, ದೇಸೀಆಟಗಳು, ಜಾನಪದನೃತ್ಯಗಳು – ಹೀಗೆ ಹಲವು ವಿಚಾರಗಳ ಪರಿಚಯ ನಮ್ಮ ಮುಂದಿನ ಪೀಳಿಗೆಗೆ ಮಾಡಿಕೊಡೋಣ.
ನಮ್ಮ ಸಂಸ್ಕೃತಿಯಲ್ಲಿರುವುದು ಗೊಡ್ಡು ಕಂದಾಚಾರಗಳಲ್ಲ; ಅದಕ್ಕೆ ವೈಜ್ಞಾನಿಕ ತಳಹದಿಯೂ ಇದೆ, ಆದರ್ಶ ಬದುಕಿನ ಮಾರ್ಗದರ್ಶನವೂ ಇದೆ ಎಂಬುದನ್ನು ನಾವು ಅರಿತು ನಮ್ಮ ಮಕ್ಕಳಲ್ಲಿ ಮೂಡಿಸೋಣ. ನಮ್ಮ ಯುವಪೀಳಿಗೆಯನ್ನು ರಾಷ್ಪನಿರ್ಮಾಣದ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸೋಣ.
ಬಿಎಸ್ಸಿ ವಿದ್ಯಾರ್ಥಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು