ಇಂದು ಪ್ರಪಂಚದಾದ್ಯಂತ ತೀವ್ರ ಚರ್ಚೆಗೊಳಗಾಗುತ್ತಿರುವ ವಿಷಯಗಳಲ್ಲಿ ನೀರಿನ ಸಂರಕ್ಷಣೆಯೂ ಒಂದು.
ಐದು ದಶಕಗಳ ಹಿಂದೆ ನೀರಿನ ಬಗ್ಗೆ ಯಾರೂ ಇಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆಗೆಲ್ಲಾ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಲಿದ್ದು, ಕೆರೆ ಕಾಲುವೆಗಳು ಭರ್ತಿಯಾಗಿರುತ್ತಿದ್ದವು. ದಶಕಗಳಿಂದೀಚೆಗೆ, ಜನಸಂಖ್ಯೆ ಹೆಚ್ಚುತ್ತಾ, ಮಾನವನ ಅಗತ್ಯತೆಗಳಿಗನುಗುಣವಾಗಿ ಕರೆ ಕಾಲುವೆಗಳು ಒತ್ತರಿಸಿಕೊಳ್ಳುತ್ತಾ ಮರೆಯಾಗುತ್ತಿವೆ. ಅತಿ ಔದ್ಯೋಗೀಕರಣದ ಫಲವಾಗಿ ಪರಿಸರ ಮಾಲಿನ್ಯವುಂಟಾಗುತ್ತಾ ನದಿಗಳು ಕಲುಷಿತಗೊಳ್ಳುತ್ತಾ ಸಾಗಿದೆ. ಹವಾಮಾನ ವೈಪರೀತ್ಯಗಳಿಂದಾಗಿ ಮಳೆ ಮರೀಚಿಕೆಯಾಗುತ್ತಿದೆ. ಕೆಲವೊಂದು ಕಡೆ ಅತಿವೃಷ್ಟಿಯೂ, ಮತ್ತೆ ಕೆಲವು ಕಡೆ ಅನಾವೃಷ್ಟಿಯೂ ಆಗಿ ಜೀವ ಸಂಕುಲ ಪರದಾಡುವಂತಾಗಿದೆ. ಒಂದು ಸಮೀಕ್ಷೆಯ ಪ್ರಕಾರ, ೨೦೫೦ರ ವೇಳೆಗೆ ಭೂಮಿಯಲ್ಲಿ ಕುಡಿಯುವ ನೀರಿನ ಬವಣೆ ಈಗಿನ ದುಪ್ಪಟ್ಟು ಆಗಲಿದೆ. ಹಾಗಾದರೆ ಮುಂದಿನ ಪೀಳಿಗೆಗೆ ನೀರಿನ ಸಂರಕ್ಷಣೆಯ ದಾರಿ ಯಾವುದು? ಈಗಲೇ ಎಚ್ಚೆತ್ತುಕೊಂಡು ನೀರಿನ ಸರಿಯಾದ ನಿರ್ವಹಣೆ ಮಾಡಿದರೆ, ಮುಂದಿನ ತಮಾರಿಗೆ ಹಿತವಾದೀತು.
ಒಂದು ಅಂದಾಜಿನ ಪ್ರಕಾರ, ಭೂಮಿಯ ೭೦% ಭಾಗ ಜಲಾವೃತವಾಗಿದೆ. ಆದರೆ, ಈ ಭೂಮಿಯ ಮೇಲಿರುವ ನೀರಿನ ೯೭% ನೀರು ಲವಣಗಳಿಂದ ಕೂಡಿ ಬಳಕೆಗೆ ಬಾರದಾಗಿದೆ. ಈ ಲವಣಾಂಶಗಳನ್ನು ನೀರಿನಿಂದ ಬೇರ್ಪಡಿಸಿ, ನೀರನ್ನು ಕುಡಿಯಲು ಯೋಗ್ಯಗೊಳಿಸುವ ವಿಧಾನಗಳಿವೆಯಾದರೂ, ಇವೆಲ್ಲಾ ತುಂಬಾ ತ್ರಾಸದಾಯಕ ಹಾಗೂ ದುಬಾರಿಯಾದ ವಿಧಾನಗಳು.
ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಹಿಮರೂಪದಲ್ಲಿರುವ ೨% ನೀರು ಕುಡಿಯಲು ಯೋಗ್ಯವಾದುದಾದರೂ, ಜನವಸತಿ ಪ್ರದೇಶಗಳಿಂದ ತುಂಬ ದೂರದಲ್ಲಿರುವುದರಿಂದ ಆ ನೀರಿನ ಬಳಕೆ ಅಸಾಧ್ಯ.
ಆಹಾರವಿಲ್ಲದೇ ಮನುಜ ಹಲವಾರು ವಾರಗಳು ಬದುಕಿರಬಲ್ಲ. ಆದರೆ ನೀರಿಲ್ಲದೇ ಕೆಲವು ದಿನಗಳೂ ಬದುಕಿರಲಾರ. ಪ್ರತಿ ದಿನ ಆರರಿಂದ ಎಂಟು ಲೋಟ ಶುದ್ಧ ಜಲ ಸೇವನೆ ಮಾನವನನ್ನು ಆರೋಗ್ಯವಾಗಿಡಬಲ್ಲದು.
ನಮ್ಮ ದೇಹದ ಸುಮಾರು ೭೦% ಭಾಗ ನೀರಿನಿಂದ ಕೂಡಿದೆ. ಇಷ್ಟೊಂದು ಪ್ರಮುಖವಾದ ನೀರನ್ನು ಸರಿಯಾಗಿ ಸದ್ಬಳಕೆ ಮಾಡಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ ?
ನೀರಿನ ಸಂರಕ್ಷಣೆಗೆ ಕೆಲವು ಸಲಹೆಗಳು-
- ಮನೆಯಲ್ಲಿನ ನೀರಿನ ಕೊಳವೆಗಳು ಸೋರುತ್ತಿವೆಯೇ ಎಂದು ಪರೀಕ್ಷಿಸಿ. ನೆನಪಿಡಿ, ಕೊಳವೆಯಲ್ಲಿ ಒಂದು ಸಣ್ಣ ರಂಧ್ರವಿದ್ದರೂ, ಅದರ ಮೂಲಕ ಹೊರಚೆಲ್ಲುವ ನೀರು ೨೦-೨೫ ಗ್ಯಾಲನ್ಗಳಷ್ಟಾಗುತ್ತದೆ. ಒಂದು ನಿಮಿಷಕ್ಕೆ ೧೫ ಬಾರಿ ತೊಟ್ಟಿಕ್ಕುವ ನೀರು ದಿನವೊಂದಕ್ಕೆ ೩ ಗ್ಯಾಲನ್ಗಳಷ್ಟಾಗುತ್ತದೆ. ಉದಾಸೀನ ಮಾಡಿ ಒಂದು ಚಿಕ್ಕ ರಂಧ್ರದಿಂದ ವ್ಯಯಿಸಿದ ನೀರು ವರ್ಷಕ್ಕೆ ೭೮೮ ಗ್ಯಾಲನ್ಗಳಷ್ಟಾಗುತ್ತದೆ. ಈ ರೀತಿಯಾದಾಗ ನೀರು ಪೋಲಾಗುವುದರ ಜೊತೆಗೆ ಹಣವೂ ದಂಡ.
- ವೃಷ್ಟಿಮಜ್ಜನಾಕಾಂಕ್ಷಿಗಳು ಶವರ್ನ ಅವಧಿಯನ್ನು ಐದು ನಿಮಿಷಗಳಿಗೆ ಮಿತಗೊಳಿಸುವುದೊಳಿತು. ಏಕೆಂದರೆ, ಐದು ನಿಮಿಷದ ಶವರ್ ೨೫ ಗ್ಯಾಲನ್ ನೀರು ಬೇಡುತ್ತದೆ !
- ಪ್ರತಿ ದಿನ ನಿಮ್ಮ ಮನೆಯ ಗ್ಯಾರೇಜ್, ನಡೆದಾಡುವ ದಾರಿ ಮುಂತಾದ ಜಾಗಗಳನ್ನು ಸ್ವಚ್ಚವಾಗಿ ಗುಡಿಸುವುದೊಳಿತು. ವಾರಕ್ಕೋ, ಹದಿನೈದು ದಿನಗಳಿಗೊಮ್ಮೆಯೋ ತೊಳೆದರೆ, ನೀರಿನ ಮಿತವ್ಯಯ ಸಾಧ್ಯ.
- ಕಾರ್ ಮತ್ತು ಬೈಕ್ ಹಾಗೂ ಇತರ ವಾಹನಗಳನ್ನು ಪೈಪ್ ಮೂಲಕ ತೊಳೆಯುವುದರ ಬದಲು ಬಕೆಟ್ ನೀರಿನಿಂದ ತೊಳೆದು ಒರೆಸುವುದರ ಮೂಲಕ ನೀರಿನ ಮಿತವ್ಯಯ ಸಾಧ್ಯ.
- ನಿಮ್ಮ ಮನೆಗಳಲ್ಲಿ ಹುಲ್ಲುಗಾವಲುಗಳಿದ್ದರೆ, ಅವುಗಳನ್ನು ನಸುಕಿನಲ್ಲಿ ಅಥವಾ ಸಂಜೆಯ ವೇಳೆ ನೀರು ಹಾಯಿಸುವುದರಿಂದ, ಹೆಚ್ಚು ನೀರು ಪೋಲಾಗುವುದನ್ನು ತಡೆಯಬಹುದು.
- ಅವಶ್ಯವಿದ್ದಾಗ ಮಾತ್ರ ನೀರನ್ನು ಬಳಸಿ. ನಲ್ಲಿಯಲ್ಲಿ ಅನಗತ್ಯವಾಗಿ ನೀರು ಸುರಿಯುವುದನ್ನು ತಡೆಗಟ್ಟಿ. ನಿಮ್ಮ ಅಗತ್ಯತೆ ಪೂರೈಸಿದ ಕೂಡಲೇ ನೀರು ನಿಲ್ಲಿಸುವುದನ್ನು ಮರೆಯದಿರಿ.
- ಪ್ರತಿ ವರ್ಷ ಮಾರ್ಚ್ ೨೨ರಂದು ‘ವಿಶ್ವ ಜಲದಿನ’ ಆಚರಿಸಲಾಗುತ್ತದೆ. ಸಮೀಕ್ಷೆಗಳ ಪ್ರಕಾರ ವಿಶ್ವದಲ್ಲಿ ಒಂದು ಶತಕೋಟಿಗೂ ಅಧಿಕ ಜನ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ ಹಾಗೂ ಎರಡು ಶತಕೋಟಿಗೂ ಅಧಿಕ ಜನ ಮೂಲ ನೈರ್ಮಲ್ಯ ವಂಚಿತರಾಗಿ ರೋಗಪೀಡಿತರಾಗಿದ್ದಾರೆ.
ಬನ್ನಿ, ನಾವು ನೀವೆಲ್ಲಾ ಕೂಡಿ ನೀರನ್ನು ಸಂರಕ್ಷಿಸೋಣ. ಮುಂದಿನ ಪೀಳಿಗೆಗಳಿಗೆ ಮಾದರಿಯಾಗೋಣ.
Good Works