ಒಬ್ಬ ಹೆಣ್ಣುಮಗಳಿಗೆ ಮದುವೆ ಎಂದರೆ ಅವಳಲ್ಲಿ ಮೂಡುವ ಚಿತ್ರಣವೇ ಅತಿಮಧುರ, ಜತೆಗೆ ಒಂದಷ್ಟು ಸುಂದರ ಅನುಭವ. ಶಾಸ್ತ್ರ ಸಂಪ್ರದಾಯಗಳು, ಅದರಲ್ಲಿನ ಒಡನಾಟ, ಅಕ್ಕಪಕ್ಕದವರಿಂದ ಚೇಡಿಕೆಯ ಮಾತುಗಳೂ… ಹೀಗೆ ಈ ಮಧುರ ಬೆಸುಗೆಗೆ ಹಾತೊರೆಯುವ ಮನಸು ರೋಮಾಂಚಗೊಳ್ಳುವ ಕ್ಷಣಗಳು ಜೀವನದ ಒಂದು ಸುಂದರ ಘಟ್ಟ!
ಇದಾವುದೂ ಅಲ್ಲದ, ಅದೊಂದು ವಿಶೇಷ ಮದುವೆಗೆ ನಾನೂ ನನ್ನ ಗೆಳತಿಯರೂ ಸಾಕ್ಷಿಯಾದೆವು.
ನಡೆದದ್ದಿಷ್ಟು; ನನ್ನ ಆತ್ಮೀಯ ಗೆಳತಿಯೋರ್ವರಿಗೆ ಪುತ್ರಿರತ್ನವೊಂದರ ಜನನವಾಯಿತು. ತಾಯ್ತನದ ಸುಖ ಕೊಟ್ಟ ಮಗು ಭುವಿಗೆ ಬಂದಾಗಲೇ ತಿಳಿದದ್ದು ಅದು ವಿಶೇಷ ಮಗುವೆಂದು. ಆಗೆಲ್ಲ ಅವಳ ವೇದನೆ ರೋದನ ಹೇಳತೀರದು. ಆರ್ಥಿಕವಾಗಿ ಅವರೇನು ಅಂಥ ಸ್ಥಿತಿವಂತರೇನಲ್ಲ. ಗೆಳತಿಯ ಮನದಲ್ಲೋ ನೂರಾರು ಆಲೋಚನೆಗಳ ತರಂಗಗಳೆದ್ದು ಕಾಡಲಾರಂಭಿಸಿತು. ಇವಳ ದೈಹಿಕ ಮಾನಸಿಕ ಬೆಳವಣಿಗೆ, ಹೆಣ್ಣಿನ ಜೀವನದಲ್ಲಿ ಬರುವ ವಯೋಸಹಜ ಬದಲಾವಣೆಗಳು ಅದನ್ನು ನಿಭಾಯಿಸಿಕೊಳ್ಳುವ ಪರಿ…. ಎಲ್ಲವೂ ಕಣ್ಣಮುಂದೆ ಬಂದಾಗ ಕಂಗಾಲಾದಳು. ‘ಯಾಕೆ ಭಗವಂತ, ಕೊಡೋದು ಕೊಡ್ತೀಯ ಇಂಥಹ ಪ್ರಸಾದವನ್ನೇಕೆ ಕೊಟ್ಟೆ? ಅದರ ಬದಲು ಕೊಡದಿದ್ದರೆ ಆಗುತ್ತಿತ್ತಲ್ಲವೇ?’ ಎಂದು ಪ್ರಶ್ನಿಸಿದಳು. ‘ಭಗವಂತ ಕೊಟ್ಟಾಗಿದೆ…. ಅದರ ಜೀವವಿರುವವರೆಗೂ ಇಲ್ಲ ತನ್ನ ಜೀವವಿರುವರೆಗೂ ನಾನು ಸಾಕಲೇಬೇಕು, ಅದು ಬದುಕಲೇಬೇಕು – ಇದು ವಿಧಿನಿಯಮ’ವೆಂದು ಮನಸ್ಸನ್ನು ಗಟ್ಟಿ ಮಾಡಿಕೊಂಡಳು.
ಕಾಲಕ್ರಮೇಣ ಮಗುವಿನ ಬೆಳವಣಿಗೆ ಸಾಗಿತು. ಆಗಾಗ ವೈದ್ಯರ ಭೇಟಿಯೂ ಆಗುತಿತ್ತು. ಪ್ರತಿಬಾರಿಯೂ ವೈದ್ಯರ ಒಂದೇ ಮಾತು – ‘ಬೆಳವಣಿಗೆಯೆಲ್ಲ ನಾರ್ಮಲ್, ಐಕ್ಯೂ ಸಾಮಾನ್ಯ ಮಗುವಿಗಿಂತ ಸ್ವಲ್ಪ ಕಮ್ಮಿ ಅಷ್ಟೇ. ನಿಧಾನವಾಗಿ ಸರಿಹೋಗುತ್ತೆ ಬಿಡಿ’ ಎನ್ನುವ ಸಮಾಧಾನದ ಆಶ್ವಾಸನೆಗಳು. ಆ ಕ್ಷಣಕ್ಕದು ಗೆಳತಿಯ ಮನದಲ್ಲಿ ಧೈರ್ಯ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡುತ್ತಿದ್ದವಷ್ಟೇ. ಅದು ಅವಳಿಗೂ ಗೊತ್ತು, ವೈದ್ಯರಿಗೂ ಗೊತ್ತು. ಏನೋ ಒಂದು ಭರವಸೆಯ ಹೊತ್ತು ಆಸ್ಪತ್ರೆಯಿಂದ ಹೊರಬರುತ್ತಿದ್ದಳು.
ತಕ್ಷಣ ನೋಡಿದಾಗ ಆ ಮಗುವಿನಲ್ಲಿ ಯಾವ ನ್ಯೂನತೆಯೂ ಕಾಣುತ್ತಿರಲಿಲ್ಲ. ಅವಳು ನಡೆಯವಾಗ ತಡವರಿಸುತ್ತಿದ್ದಳು, ಮಂದಗತಿಯಲ್ಲಿ ಮಾತಿನ ಲಹರಿ ಹರಿಯುತ್ತಿದ್ದಳು, ನಗಲು ಪ್ರಾರಂಭಿಸಿದರೆ ನಿಲ್ಲಿಸಲಾಗುತ್ತಿರಲಿಲ್ಲ. ತನ್ನ ವಯಸ್ಸಿಗಿಂತ ಹತ್ತು ವರುಷ ಹಿಂದೆ ಇರುತ್ತಿದ್ದಳು. ದೇಹ ಬೆಳೆಯುತ್ತಿದ್ದರೂ… ಮನಸ್ಸು ಬೆಳೆಯಲಿಲ್ಲ. ಸಾಮಾನ್ಯ ಶಾಲೆಯಲ್ಲಿ ಅಡ್ಮಿಷನ್ಗೆ ಎಷ್ಟೇ ಪ್ರಯತ್ನಿಸಿದರೂ ಸೀಟು ಸಿಗಲಿಲ್ಲ. ವಿಶೇಷ ಶಾಲೆಗೆ ಕಳುಹಿಸುವ ಪರಿಸ್ಥಿತಿ ಬಂದಾಗ ತಾಯಿ ನೊಂದಳು. ಆದರೆ ಆತ್ಮಸ್ಥೈರ್ಯ ಬಿಡಲಿಲ್ಲ. ಮಗುವನ್ನು ವಿಶೇಷ ಶಾಲೆಗೆ ಸೇರಿಸಿದಳು. ಅಲ್ಲಿ ಅದರ ಬೆಳವಣಿಗೆ, ತರಬೇತು ನೀಡುತ್ತಿದ್ದ ಶಿಕ್ಷಕವೃಂದ ಆ ಮಗುವನ್ನು ಎಷ್ಟರಮಟ್ಟಿಗೆ ಬೆಳೆಸಿದರೆಂದರೆ ಕೇವಲ 2ರಿಂದ 3 ವರುಷಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳನ್ನೇ ಕಂಡರು. ಅವಳ ವಾಕ್ಶಕ್ತಿ ಬಹಳವೇ ಸುಧಾರಣೆ ಕಂಡಿತ್ತು. ನಡಿಗೆಯಲ್ಲಿ, ನಡತೆಯಲ್ಲಿ, ಬೇರೆಯವರಿಗೆ ಸ್ಪಂದಿಸುವ ಪರಿಯಲ್ಲಿ ಗಮನಾರ್ಹ ಬದಲಾವಣೆಗಳನ್ನೇ ಕಂಡರು. ತಾಯಿಗಂತೂ ಆನಂದವೋ ಆನಂದ…. ಎರಡನೇ ಮಗು ಬೇಕೋ ಬೇಡವೋ ಎಂಬ ಗೊಂದಲಗಳ ನಡುವೆಯೇ ಇದೊಂದನ್ನು ಸಾಕಿ ಸಲಹಿದರೆ ಸಾಕು… ನನ್ನ ಈ ಜನ್ಮಕ್ಕೆ ಇಷ್ಟೇ ಸಾಕು… ಇದಕ್ಕಾಗಿಯೇ ನನ್ನ ಜೀವನ ಮೀಸಲು… ಇದು ದೇವರ ಮಗುವೇ ಹೌದು ಎಂಬ ದೃಢನಿರ್ಧಾರ ಮಾಡಿದ್ದಳು ಗೆಳತಿ. ಅವಳ ಆ ನಿರ್ಧಾರಕ್ಕೆ ನನ್ನದೊಂದು ಬಿಗ್ ಸೆಲ್ಯೂಟ್!
ಮಗು ಋತುಮತಿಯಾಗುವ ವಯಸ್ಸು ಬಂದೊಡನೆ ಗೆಳತಿಗೆ ಮತ್ತೆ ಛಾಲೆಂಜಿಂಗ್ ಎನಿಸಿತು. ದೇವರು ನೀಡುತ್ತಿರುವನೆಂದು ಸ್ವೀಕರಿಸಿದಳು! ಅವಳಿಗೆ ಈ ದೈಹಿಕಕ್ರಿಯೆಯ ಬಗ್ಗೆ ಸೂಕ್ಷ್ಮವಾಗಿ ಹೇಳಲು ಅಣಿಯಾದಳು. ಪ್ರಾರಂಭಿಕ ಹಂತದಲ್ಲಿ ಆ ಮಗುವಿಗೇನು ಅರ್ಥವಾಗುತ್ತಿರಲಿಲ್ಲ. ಗೆಳತಿ ಇದಕ್ಕಾಗಿಯೇ ಇರುವ ಪುಸ್ತಕಗಳನ್ನು ಓದಿ ಅರ್ಥೈಸಿಕೊಂಡು ಅವಳಲ್ಲಿ ಮಾನಸಿಕಸ್ಥೈರ್ಯವನ್ನು ತುಂಬುತ್ತಿದ್ದಳು. ಯೂಟ್ಯೂಬ್ ತೋರಿಸಿ ಮಗಳು ತನ್ನನ್ನು ಹೇಗೆ ಪ್ರೊಟೆಕ್ಟ್ ಮಾಡಿಕೊಳ್ಳಬೇಕೆಂದು ವಿವರಿಸುತ್ತಿದ್ದಳು. ಮಗು ಆಗೆಲ್ಲ ಚಪ್ಪಾಳೆ ತಟ್ಟುತ್ತ ಕಣ್ಣುಮುಚ್ಚುತ್ತ ಊರಗಲ ಬಾಯಿ ತೆರೆಯುತ್ತ ನಗುತ್ತಿದ್ದಳು. ಈ ಥರದ ಕ್ರಿಯೆಗಳನ್ನು ಗೆಳತಿ ಟ್ಯೂನ್ ಮಾಡುತ್ತ ಬಂದಳು. ನನ್ನ ಗೆಳತಿ ಈಗ ಒಳ್ಳೆಯ ಟ್ರೈನರ್ ಆಗಿದ್ದಾಳೆ. ನ್ಯಾಪ್ಕಿನ್ ಉಪಯೋಗಿಸುವ ಪರಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಆ ದಿನಗಳಲ್ಲಿ ನಡೆದುಕೊಳ್ಳುವ ರೀತಿ… ಮುಂಜಾಗರೂಕತಾಕ್ರಮಗಳನ್ನು ವಹಿಸುವ ರೀತಿ… ಹೀಗೆ ಪ್ರತಿ ಹಂತದಲ್ಲೂ ಸಹಾಯಕಳಾಗಿ ನಿಂತಳು; ಮಗಳಲ್ಲಿ ಬಲ ತರುವ ಹಿಮಾಲಯವಾದಳು. ಋತುಮತಿಯಾಗುತ್ತಿದ್ದಂತೆಯೇ ತಾಯಿ ಹೇಳಿಕೊಟ್ಟ ಎಲ್ಲವನ್ನೂ ಶಾಲೆಯಲ್ಲಿನ ಶಿಕ್ಷಕಿಯರ ಬೋಧನೆಗಳನ್ನೂ ಚಾಚೂ ತಪ್ಪದೆ ಕೇಳುತ್ತ ನಡೆದಳು. ಇದೊಂದು ಹಂತ ಮುಗಿಯುತ್ತಿದ್ದಂತೆ ಮಗಳಲ್ಲಿ ಹಲವಾರು ಬದಲಾವಣೆಗಳು ಆಗತೊಡಗಿದವು. ಸ್ವಲ್ಪ ಸ್ವಲ್ಪವೇ ಟ್ಯೂನ್ ಆಗತೊಡಗಿದಳು. ಶಾಲೆಯಲ್ಲೂ ತನ್ನ ಜೂನಿಯರ್ಸ್ಗೆ ಟ್ರೈನಿಂಗ್ ಕೊಡುವಷ್ಟು ದೊಡ್ಡವಳಾದ ಮಗಳ ಉತ್ತಮ ಬೆಳವಣಿಗೆ ತಾಯಿಯಲ್ಲಿ ಸಂತಸ ಮೂಡಿಸಿತು. ಈಗೀಗ ಅವಳೊಬ್ಬಳೇ ಶಾಲೆಗೆ ಹೋಗಿ ಬರುತ್ತಿದ್ದಾಳೆ.
ಕೆಲವಾರು ಬದಲಾವಣೆಗಳು ಅವಳಲ್ಲಿ ಆಗುವುದನ್ನು ಕಂಡು ತಾಯಿಯ ಮನದಲ್ಲಿ ಅವಳಿಗೊಂದು ಮದುವೆ ಮಾಡುವ ಸಹಜ ಆಸೆ ಮೂಡಿದೆ. ಗಟ್ಟಿ ಮನಸ್ಸಿನೊಂದಿಗೆ ಡಾಕ್ಟರ್ರ ಸಲಹೆ ಕೇಳಿದಳು. ಡಾಕ್ಟರ್ ಕಡೆಯಿಂದ ಒಪ್ಪಿಗೆ ದೊರೆತಾಗ ಮಗಳಿಗೆ ಕಂಕಣಭಾಗ್ಯ ಒದಗಿಯೇ ಬಂದಿತೇನೋ ಎಂಬಷ್ಟು ಸಂತಸ ತಾಯಿಗಾಯಿತು. ಆಗುತ್ತದೆಯೋ, ಬಿಡುತ್ತದೆಯೋ ಅದು ಎರಡನೇ ಮಾತು. ಮಗಳು ಆ ಜೀವನಕ್ಕೂ ರೆಡಿಯಾದಳಲ್ಲ ಎಂದು ಅತೀವ ಆನಂದವಾಯಿತು. ಇದೀಗ ಇಂತಹ ಹುಡುಗಿಯ ಕನ್ಯಾಸೆರೆಯನ್ನು ಬಿಡಿಸುವ ಧೈರ್ಯವನ್ನು ಯಾರು ಮಾಡಿಯಾರು ಎಂಬ ಗೊಂದಲ. ತಾಯಿಯ ಪ್ರಯತ್ನ ಸಾಗಿತ್ತು. ಜೀವನದುದ್ದಕ್ಕೂ ತಾಯಿ ಪಟ್ಟ ಕಷ್ಟಕ್ಕೋ ಅವಳ ವೇದನೆ ನೋವುಗಳಿಗೆ ಮುಕ್ತಿಯೋ ಎಂಬಂತೆ ಒಬ್ಬ ಒಳ್ಳೆಯ ಹುಡುಗನೇ ಸಿಕ್ಕಿದ. ದೇವರಕೃಪೆ ಅಪಾರ. ಇಂತಹ ಭಾಗ್ಯ ಎಷ್ಟು ಜನಕ್ಕೆ ದೊರಕೀತು?
ಅಷ್ಟರಲ್ಲಾಗಲೇ ಆ ಹುಡುಗಿಯ ಮನದಲ್ಲಿ ಏನೇನೋ ಕಲ್ಪನೆ ಭಾವನೆಗಳು. ವೈವಾಹಿಕ ಜೀವನದ ಸುಂದರ ಕಲ್ಪನೆಗಳು. ಟಿವಿ ಸೀರಿಯಲ್ ನೋಡುತ್ತಿದ್ದು ಅದರಲ್ಲಿ ಬರುವ ಎಲ್ಲ ಸೀನ್ಗಳನ್ನೂ ತನ್ನ ಜೀವನಕ್ಕೆ ಹೋಲಿಸಿಕೊಂಡು ರೋಮಾಂಚಗೊಳ್ಳುತ್ತಿದ್ದಳು. ತಾಯಿ ಇಂತಹದ್ದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಹತ್ತಿರದ ಗೆಳತಿಯ ಮಗಳನ್ನು ಕರೆಸಿ ಮದುವೆಯ ಬಗೆಗಿನ ವಿಷಯಗಳನ್ನು ತಿಳಿಸಲು ಅಣಿಯಾದಳು. ಇವೆಲ್ಲ ಸೂಕ್ಷ್ಮವಿಷಯಗಳಾದರೂ ಘನ ನಿರ್ಧಾರ ತೆಗೆದುಕೊಳ್ಳುವಂಥದ್ದು. ಇವಳೊಟ್ಟಿಗೆ ಮದುವೆಯಾಗುವ ಹುಡುಗನಿಗೂ ವೈದ್ಯರ ಸಲಹೆ ಕೊಡಿಸಿದರು. ಎಲ್ಲಕ್ಕೂ ಮನಸು ದೇಹ ಅಣಿಯಾಗುತ್ತಿದ್ದಂತೆ ಮದುವೆಯ ದಿನ ಹತ್ತಿರ ಬಂದೇಬಿಟ್ಟಿತ್ತು. ಮನೆಯಲ್ಲಿ ನೆಂಟರಿಷ್ಟರು ಬಂಧು-ಬಾಂಧವರೆಲ್ಲ ಸೇರಿದರು. ಶಾಸ್ತ್ರ ಸಂಪ್ರದಾಯಗಳು ಕಳೆಕೊಟ್ಟಿತು. ಮನೆಯಲ್ಲಿ ಸಡಗರವೋ ಸಡಗರ. ತಾಯಿ ಮಗಳನ್ನು ಈ ರೀತಿಯಲ್ಲಿ ನೋಡುವಾಗ ಪಟ್ಟ ಆನಂದ ಅಷ್ಟಿಷ್ಟಲ್ಲ. ತರಹ ತರಹದ ಬಟ್ಟೆ-ಬರೆಗಳು, ವಡವೆ ಆಭರಣಗಳು ನೆಂಟರಿಷ್ಟರ ಸಂತಸಗಳು ಸ್ವರ್ಗವೇ ಭುವಿಗಿಳಿದುಬಂತೇನೋ ಎಂಬಂತೆ ಸೃಷ್ಟಿಯಾಗಿತ್ತು. ಎರಡು ದಿನಗಳ ಮದುವೆ ಬಹಳ ವಿಜೃಂಭಣೆಯಿಂದಲೇ ನಡೆಯಿತು. ಮದುವೆಗೆ ಬಂದ ಅದೇ ಶಾಲೆಯ ಮಕ್ಕಳು ಓಡಾಡುತ್ತಾ ನಲಿದಾಡುತ್ತಲಿದ್ದರು. ಅವರನ್ನೇ ನೋಡುತ್ತಿದ್ದವರು ಮಾತಾಡಿಕೊಳ್ಳತೊಡಗಿದರು, ಪಾಪ! ಇಂಥ ಮಗುವನ್ನು ಈ ರೀತಿಯಾಗಿ ಬೆಳೆಸಲು ಎಷ್ಟೆಲ್ಲಾ ಕಷ್ಟಪಟ್ಟಿದ್ದಾಳೆ ಅಲ್ವಾ, ಪಾಪ! ಈಗ ಆ ತಾಯಿಗೂ ಮಗುವಿಗೂ ಇಬ್ಬರಿಗೂ ನೆಮ್ಮದಿ. ಗುರಿ ಮುಟ್ಟಿಸಿರುವ ಸಂತಸ ತಾಯಿಗಾದರೆ, ಹೊಸಬಾಳಿಗೆ ಅಡಿಯಿಡುತ್ತಿರುವ ಸಂತಸ ಈ ಮಗುವಿಗೆ. ಒಟ್ಟಿನಲ್ಲಿ ಇವರು ಅದೃಷ್ಟವಂತರೇ ಹೌದು. ಮೂರು ಹೊತ್ತು ನಡೆದ ಆ ಮದುವೆಗೆ ನಾನು ನನ್ನ ಗೆಳತಿಯರು ಸಾಕ್ಷಿಯಾಗಿದ್ದೆವು.
ಕೊನೆಯ ಹೊತ್ತು ಶುಭಹಾರೈಸಿ ಊಟಮುಗಿಸಿ ಹೊರಗೆ ಕಾರಿಗಾಗಿ ಕಾಯುತ್ತಿದ್ದ ನಮಗೆ ಒಂದು ದೃಶ್ಯ ಕಣ್ಣಿಗೆಬಿದ್ದು ತುಂಬ ನೊಂದುಬಿಟ್ಟೆವು. ಆ ತಾಯಿಗೆ ಇಬ್ಬರು ಹೆಣ್ಣುಮಕ್ಕಳು. ಅವರಿಬ್ಬರೂ ಈ ಮದುಮಗಳ ಗೆಳತಿಯರು. ಇಬ್ಬರೂ ವಿಶೇಷ ಮಕ್ಕಳೇ. ಪಾರ್ಕಿಂಗ್ನಿಂದ ಅಪ್ಪ ತರಬೇಕಿದ್ದ ಕಾರಿಗಾಗಿ ಕಾಯುತ್ತಿದ್ದರು. ಆ ಮುಗ್ಧಮಕ್ಕಳ ಪ್ರಶ್ನೆಗಳಿಗೆ ಸಹನಾಮೂರ್ತಿ ತಾಯಿ ಉತ್ತರಿಸುತ್ತಲೇ ಇದ್ದಳು. ಕೊನೆಗೆ ಆ ಮಕ್ಕಳಲ್ಲಿ ಒಬ್ಬಳು, ‘ಅಮ್ಮಾ ನನಗೂ ಮದುವೆ ಮಾಡು. ನಾನು ಅವಳ ಥರಾನೇ ಆಗಬೇಕು’ ಎಂದಳು. ಅದನ್ನು ನೋಡಿದ ಅವಳ ಸಹೋದರಿಯೂ ‘ನನಗೂ ಮದುವೆ ಬೇಕು, ಪ್ಲೀಸ್’ ಎಂದು ಗೋಗರೆದಳು. ತಾಯಿಗೇನೂ ತೋಚದೆ ನಮ್ಮ ಮುಖ ನೋಡಹತ್ತಿದರು. ನಾವೇನೋ ‘ಇವರಿಗೂ ಅದೃಷ್ಟ ಒದಗಿಬರುತ್ತದೆ ಬಿಡಿ ಯೋಚಿಸಬೇಡಿ’ ಎಂದು ಆಕೆಗೆ ಧೈರ್ಯ ತುಂಬಿದಾಗ, ನಗುತ್ತಾ ಆಕೆ, ‘ಎಲ್ಲರಿಗೂ ಇಂಥ ಅದೃಷ್ಟ ಇರುತ್ತದೆಯಾ ಮೇಡಂ. ಎಲ್ಲೋ ಸಾವಿರಕ್ಕೆ ಒಬ್ಬರು ಅಷ್ಟೇ’ ಎನ್ನುತ್ತ ದುಃಖನುಂಗಿ ಕಾರು ಹತ್ತಿದರು.
ದೇಹ ಹೇಗೇ ಇರಲಿ, ಆ ವಯಸ್ಸು ಬಂದೊಡನೆ ಮನಸ್ಸಿಗೆ ಭಾವನೆಗಳು ಲಗ್ಗೆ ಇಡುತ್ತವೆ. ಪ್ರೇಮ ಕಾಮನೆಗಳ ಅರಿವಾಗುತ್ತವೆ. ಅವುಗಳ ಸಖ್ಯ ಬಯಸುತ್ತವೆ. ಹೌದಲ್ಲವೇ? ಇದೇ ಜೀವನವಲ್ಲವೇ?