ಒಂದು ಕಣ್ಣು ಕಣ್ಣಲ್ಲ, ಒಂದು ಮಗು ಮಗುವಲ್ಲ ಎನ್ನುವುದು ನಮ್ಮ ಕಾಲದ ಗಾದೆಯಾದರೆ ‘ಮಗುವೆಂದರೇ ಹೊರೆ, ಎರಡಾದರೆ ಗಾಯದ ಮೇಲೆ ಬರೆ’ ಎನ್ನುವುದು ಈಗಿನವರ ಉದ್ಗಾರ.
ಮಗು ಆಗುವುದೇ ಅಪರೂಪ ಎಂದಿರುವಾಗ ಒಡಹುಟ್ಟಿದವರೊಡನೆ ಒಡನಾಡುವ ಭಾಗ್ಯವಾದರೂ ಎಲ್ಲಿ? ಕುಟುಂಬದ ಜ್ಯೋತಿಯಂತೆ ಮಗಳು. ಆಕೆ ಆ ಮನೆಯ ಸಂಪ್ರದಾಯ, ಪರಂಪರೆ ಸಂಸ್ಕೃತಿಗಳನ್ನೆಲ್ಲ ಅಮ್ಮನಿಂದ ಕಲಿಯುತ್ತಾಳೆ. ತನ್ನಮ್ಮ ಅದೆಷ್ಟು ಜಾಣ್ಮೆಯಿಂದ ಗೃಹಕೃತ್ಯಗಳನ್ನು ನಿಭಾಯಿಸುತ್ತಾಳೆ ಎಂಬುದನ್ನು
ಗಮನಿಸುತ್ತಿರುವ ಹುಡುಗಿಯ ಒಳಗಿರುವ ‘ಅಮ್ಮ’ ಸಕಾಲದಲ್ಲಿ, ಸಂದರ್ಭೋಚಿತವಾಗಿ ಎಚ್ಚೆತ್ತುಕೊಳ್ಳುತ್ತಾಳೆ.
ಈ ಮನೆಯ ಅಕ್ಕ ಮುಂದೆ ಸೇರುವ ಕುಟುಂಬದಲ್ಲಿ ಪತ್ನಿಯಷ್ಟೇ ಅಲ್ಲದೆ ಸೊಸೆ, ಅತ್ತಿಗೆ, ವಾರಗಿತ್ತಿ ಹೀಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಹುಟ್ಟಿದ ಮನೆಯಲ್ಲಿ ಪ್ರೀತಿಯಿಂದ ಬೆಳೆದವಳು ತವರಿನ ಶ್ರೇಷ್ಠ ಮೌಲ್ಯಗಳನ್ನು ಪತಿಗೃಹದಲ್ಲಿ ಪ್ರತಿಷ್ಠಾಪಿಸುತ್ತಾಳೆ. ಗಂಡನ ಮನೆ ಸೇರಿದರೂ ಸದಾ ತವರಿನ ಶ್ರೇಯಸ್ಸನ್ನೇ ಬಯಸುವ ಆಕೆಯ ಅಕ್ಕನಸ್ಥಾನವೂ ಭದ್ರವಾಗಿರುತ್ತದೆ. ಅಲ್ಲಿಯ ಆಗುಹೋಗುಗಳ ಬಗ್ಗೆ, ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಅವಳ ಕಳಕಳಿ, ಕಾಳಜಿ ಹಸಿರಾಗಿಯೇ ಇರುತ್ತದೆ.
ಅಕ್ಕನ ಬಗ್ಗೆ ಪೋಷಕರಿಗೆ ಪ್ರೀತಿ ಹೆಚ್ಚಾಗಿರುವಂತೆ ಅವರಿಂದ ನಿರೀಕ್ಷೆಯೂ ಹೆಚ್ಚಾಗಿಯೇ ಇರುತ್ತದೆ. “ಅವನಂತೂ ಚಿಕ್ಕವನು….. ಹಾಗೆ ಮಾಡಿದ… ನೀನೂ ಅವನ ಜೊತೆ ಹೀಗೆಲ್ಲ ಕುಣಿಯೋದಾ; ಬುದ್ಧಿ ಹೇಳೋಕಾಗಲಿಲ್ಲವಾ…?” ಎಂಬಂತಹ ಆಕ್ಷೇಪಣೆ. ಚಿಕ್ಕವರು ಯಾವಾಗಲೂ ಚಿಕ್ಕವರೆ! ಒಂದು ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಹಿರಿಯವಳು ಚಿಕ್ಕವರನ್ನು ಸಂಭಾಳಿಸುವುದು, ಅವರು ಚೇಷ್ಟೆ ಮಾಡದಂತೆ ಕಾಯ್ದುಕೊಳ್ಳುವುದು, ಏನೂ ಪೆಟ್ಟು ಮಾಡಿಕೊಳ್ಳದಂತೆ ಗಮನಿಸುವುದು ಎಲ್ಲವೂ ಅಕ್ಕನದೇ ಜವಾಬ್ದಾರಿ.
ಅಮ್ಮನೊಂದಿಗೆ ಹೇಳಲಾರದ್ದನ್ನು ಕೆಲವೊಮ್ಮೆ ಅಕ್ಕನೊಂದಿಗೆ ಹಂಚಿಕೊಳ್ಳುವ ಸಲಿಗೆಯಿರುತ್ತದೆ.
ಮದುವೆಗೆ ಸಂಬಂಧ ಕುದುರಿಸುವಾಗಲೂ ಮನೆತನದ ಬಗ್ಗೆ ವಿಚಾರಿಸುವಾಗ, “ಇವರ ಹಿರಿಮಗಳು ಚೆನ್ನಾಗಿ ಹೊಂದಿಕೊಂಡು ಹೋಗ್ತಿದ್ದಾಳೆ. ನಯ, ನಾಜೂಕು ಎಲ್ಲ ಗೊತ್ತಂತೆ. ಜೋರಾಗಿ ಮಾತನಾಡಿಯೇ ಗೊತ್ತಿಲ್ಲವಂತೆ ಹುಡುಗಿಗೆ. ತಂಗಿಯೂ ಹಾಗೆಯೇ ಇದ್ದಾಳು. ಸಂಬಂಧ ಬೆಳೆಸಬಹುದು ಅಂತ ಅನ್ನಿಸತ್ತೆ. ಹೀಗೆ ಅಕ್ಕನ ಮದುವೆಯಾದ ಮೇಲೂ ಅವಳ ನಡೆನುಡಿಗಳನ್ನು ದುರ್ಬೀನಿನ ಕಣ್ಣುಗಳು ಪರಾಮರ್ಶಿಸುತ್ತಿದ್ದುದು ಸಹಜವೇ ಆಗಿತ್ತು.
ನಾಲ್ಕು ಹೆಣ್ಣು, ಐದು ಗಂಡು ಮಕ್ಕಳ ತುಂಬುಕುಟುಂಬದಲ್ಲಿ ಆರನೆಯವಳಾಗಿ ಹುಟ್ಟಿದ ನನಗೆ ಇಬ್ಬರು ಅಕ್ಕಂದಿರು. ಅಣ್ಣ-ತಮ್ಮ-ತಂಗಿ ಎಲ್ಲರನ್ನೂ ಪಡೆದ ಭಾಗ್ಯ ನನ್ನದು. ನನಗೆ ಒಂದು ವರ್ಷವಿರುವಾಗಲೆ ಹದಿನಾಲ್ಕರ ದೊಡ್ಡಕ್ಕನಿಗೆ ಮದುವೆಯಾಗಿದ್ದರಿಂದ ಅಕ್ಕನೊಡನೆ ತವರಿನಲ್ಲಿ ಒಡನಾಡಿದ್ದು ತುಸು ಕಡಮೆಯೆ. ಅಮ್ಮನ ತವರಿನ ಏಕಮಾತ್ರ ಸಂಬಂಧದ ತಂತು ಎಂದು ಭಾವನವರ ತಂದೆಯವರೇ ಈ ನೆಂಟಸ್ತನವನ್ನು ಬೆಳೆಸಲು ಅಪೇಕ್ಷಿಸಿದ್ದು. ಕೆಂಪು ಮಣ್ಣಿನ ಧರೆ, ಗುಡ್ಡ-ಬೆಟ್ಟ, ಕಾಡು, ಶರಾವತಿ ನದಿ, ಅಡಿಕೆ ತೋಟ, ಹಳ್ಳಿಯ ವಿಶಾಲವಾದ ಮನೆ, ದೊಡ್ಡದಾದ ಬಾವಿ ಎಲ್ಲವನ್ನೂ ನಾನು ಮೊದಲಿಗೆ ಕಂಡಿದ್ದು ದೊಡ್ಡಕ್ಕನ ಮನೆಯಲ್ಲಿ. ನನಗೆ ಹತ್ತು ವರ್ಷವಿರುವಾಗ ಹದಿನೇಳರ ಎರಡನೆಯ ಅಕ್ಕನಿಗೆ ಮದುವೆ. ಎಲ್ಲರೂ ಅಳುತ್ತ ಬೀಳ್ಕೊಡುವುದನ್ನು ಕಂಡಾಗ, “ಹಾಗಿದ್ದರೆ ಯಾಕೆ ಮದುವೆ ಮಾಡಬೇಕಿತ್ತು?” ಎನ್ನುವ ನನ್ನ ಪ್ರಶ್ನೆಗೆ, “ನೀನೂ ಒಂದು ದಿವಸ ಹೀಗೆ ಹೋಗುವವಳೆ” ಎಂಬ ಅಮ್ಮನ ಕಣ್ಣೀರಿನ ಉತ್ತರ ಗಲಿಬಿಲಿಗೊಳಿಸಿತ್ತು.
ಅಕ್ಕ-ಅಕ್ಕರೆ
ನನಗೂ, ತಂಗಿಗೂ ತಲೆ ಬಾಚಿ, ಅಂದವಾಗಿ ಜಡೆ ಹೆಣೆಯುವ, ಹೂ ಕಟ್ಟಿ ಮುಡಿಸುವ, ಅಮ್ಮನ ಎಲ್ಲ ಕೆಲಸಗಳಲ್ಲೂ ನೆರವಾಗುತ್ತಿದ್ದ ಅಕ್ಕ ಅಳುತ್ತಾ ಭಾವನೊಂದಿಗೆ ಹೊರಟು ನಿಂತಿದ್ದಾಳೆ. ಕಣ್ಣುತುಂಬಿ ನಿಂತಿದ್ದ ನನ್ನ ಬಳಿ ಬಂದು, “ಚೆನ್ನಾಗಿ ಓದಿಕೊ, ರಜೆಯಿದ್ದಾಗ ಬಾ” ಎಂಬ ಅಕ್ಕನ ಕರೆ ಆಗಲೇ ಹೊರಟುಬಿಡಲೆ ಎಂಬಷ್ಟು ಆಪ್ಯಾಯಮಾನವಾಗಿತ್ತು. ತಾನಿನ್ನೂ ಆ ಮನೆ ಸೇರುವ ಮೊದಲೇ ನನ್ನಕ್ಕನ ಆತ್ಮೀಯ ಕರೆ…
ಮನೆ ತುಂಬಾ ಜನ ಇದ್ದರೂ ಅಕ್ಕನಿಲ್ಲದ ಮನೆ ಬಿಕೋ ಎನ್ನಿಸುತ್ತಿತ್ತು. ಅಕ್ಕನ ಪತ್ರ ಬಂದಾಗ ಅಕ್ಕನೇ ಹತ್ತಿರ ಇರುವಂತೆ ಭಾಸವಾಗಿ ಮತ್ತೆ ಮತ್ತೆ ಓದುತ್ತಿದ್ದೆವು.
ದೊಡ್ಡಕ್ಕನ ಊರಿಗೆ ಹೋಗುತ್ತಿದ್ದ ನಮಗೆ ಇದೀಗ ರಜೆ ಬಂದಾಗ ಎರಡನೆಯ ಅಕ್ಕನ ಊರಿಗೆ ಹೋಗುವ ಸಂಭ್ರಮ. ಶಿವಮೊಗ್ಗದಿಂದ ಹೋಗುವಾಗ ತೀರ್ಥಹಳ್ಳಿಗಿಂತಲೂ ನಾಲ್ಕು ಮೈಲು ಮೊದಲು ಸಿಗುವ ಕುಡುಮಲ್ಲಿಗೆಯಲ್ಲಿ ಇಳಿದುಕೊಂಡು ಎರಡೂವರೆ ಮೈಲು ನಡೆದರೆ ಅಕ್ಕ ಇರುವ ‘ಹೆಗ್ಗಾರು’ ಸಿಗುತ್ತದೆ. ಮಧ್ಯಾಹ್ನದ ಬಸ್ಸಿನಲ್ಲಿ ಕುಳಿತರೆ ಆ ಬಸ್ಸು ಕೈ ಅಡ್ಡಹಾಕಿದಲ್ಲೆಲ್ಲ ನಿಲ್ಲಿಸುತ್ತ ಕೆಲವೊಮ್ಮೆ ಊರೊಳಗೆ ಪ್ರದಕ್ಷಿಣೆ ಹಾಕಿಕೊಂಡು ಕೊನೆಗೂ ಕುಡುಮಲ್ಲಿಗೆ ತಲಪುವಾಗ ಐದು ಗಂಟೆಯನ್ನು ಸಮೀಪಿಸಿರುತ್ತಿತ್ತು. ನಮಗೋ ಊರು ಸೇರುವ ಕಾತರದಿಂದ ಕಣ್ಣು ಹಾಯಿಸುತ್ತಿದ್ದರೆ ಅದಾಗಲೇ ನಮ್ಮ ನಿರೀಕ್ಷೆಯಲ್ಲಿರುತ್ತಿದ್ದ ಭಾವ, “ಬಂದೆಯಾ… ದಾರಿಯಲ್ಲೇನೂ ತೊಂದರೆಯಾಗಲಿಲ್ಲ ತಾನೆ? ಮನೆಯಲ್ಲೆಲ್ಲಾ ಆರಾಮವಾ?” ಎಂದೆಲ್ಲ ಉಭಯಕುಶಲೋಪರಿಯೊಂದಿಗೆ ಆದರದಿಂದ ಬರಮಾಡಿಕೊಂಡು ನಮ್ಮ ಲಗೇಜನ್ನು ತಾವೇ ಹಿಡಿದುಕೊಂಡು ಹೆಜ್ಜೆಹಾಕುವ ಭಾವನನ್ನು ಅನುಸರಿಸುತ್ತ ನಡೆಯುವುದು ಅದೆಷ್ಟು ಹಿತವಾಗಿರುತ್ತಿತ್ತು. ಅಲ್ಲಿಯ ಸ್ವಾರಸ್ಯಕರ ಪ್ರಸಂಗಗಳನ್ನು ಹೇಳುತ್ತಾ, ದಾರಿಯಲ್ಲಿ ಸಿಗುವ ಗದ್ದೆ, ತೋಟ, ನೆಟ್ಟಿ, ಕೊಯಿಲಿನ ಬಗ್ಗೆ ವಿವರಿಸುತ್ತ ಹೋಗುತ್ತಿದ್ದರೆ ದಾರಿ ಸವೆದದ್ದೇ ತಿಳಿಯದು.
ನಿರೀಕ್ಷೆಯ ಭಾರ
ಉದ್ದ ಲಂಗವನ್ನು ಕೈಗಳಿಂದ ಮೇಲೆತ್ತಿ ಹಿಡಿದು ಅಲ್ಲಲ್ಲಿ ಸಿಗುವ ಮುಳ್ಳು ಬೇಲಿ, ಉಣಗೋಲು ದಾಟುತ್ತಿದ್ದರೆ ಎಲ್ಲಿಯೋ ಸರಸರ ಎಂದು ಸದ್ದಾದಾಗ ಹಾವೇ ಇರಬಹುದು ಎಂಬ ದಿಗಿಲು. “ಹಂಗೆಲ್ಲಾ ಹೆದುರುವುದೆಂತಕ್ಕೆ… ಕೇರೆಹಾವು, ಕೊಳಕು ಮಂಡಲ, ಹಸಿರುಹಾವು ಅಲ್ಲಿ ಇಲ್ಲಿ ಇದ್ದಾವು. ಅವು ಏನೂ ಮಾಡೊಲ್ಲ. ಅವಕ್ಕೂ ನಮ್ಮನ್ನು ಕಂಡರೆ ಭಯ ಇರುತ್ತಲ್ಲವಾ…” ಎಂದು ಧೈರ್ಯದ ಮಾತುಗಳನ್ನಾಡುತ್ತಿದ್ದರೆ ನಮಗೂ ಕೊಂಚ ನಿರಾಳವಾಗುತ್ತಿತ್ತು.
ದೂರದಲ್ಲಿ ನಾವು ಬರುವುದನ್ನೇ ನಿರೀಕ್ಷಿಸುತ್ತಾ, ಇಷ್ಟು ದೂರಕ್ಕೂ ಕಣ್ಣು ಹಾಯಿಸುತ್ತಾ ನಿಂತಿರುತ್ತಿದ್ದ ಅಕ್ಕನನ್ನು ಕಂಡಾಗ ಅದೇನು ಸಂತಸ. “ಬೇಗ ಕಾಲ್ತೊಳ್ಕಂಡು ಬಾ” ಎಂದು ಅವಸರಿಸುತ್ತಿದ್ದ ಅಕ್ಕನಿಗೆ ಮಲೆನಾಡಿನ ಅಪರೂಪದ ತಿಂಡಿಗಳನ್ನು ತಂಗಿಯರಿಗೆ ಆದಷ್ಟೂ ತಿನ್ನಿಸುವ ಆತುರ.
ಶಿವಮೊಗ್ಗದಂತಹ ಪಟ್ಟಣದಲ್ಲಿ ಹುಟ್ಟಿಬೆಳೆದ ಅಕ್ಕ, ಹೆಗ್ಗಾರಿನಂತಹ ಹಳ್ಳಿಯಲ್ಲಿ ಎಷ್ಟು ಸಹಜವಾಗಿ ಇಲ್ಲಿನ ಗಾಳಿ, ನೀರು, ಬೆಟ್ಟ, ಕಾಡು, ದನ-ಕರು, ಪ್ರಾಣಿಗಳು, ಹಕ್ಕಿಗಳೊಂದಿಗೆ ಬೆರೆತುಹೋಗಿದ್ದಾಳೆಂಬುದೇ ಒಂದು ದೊಡ್ಡ ವಿಸ್ಮಯ. ಅದೇ ಅಕ್ಕನ ವಿಶೇಷ ಗುಣ. ತುಸುವೂ ಗೊಣಗುಡದೆ, ಯಾರನ್ನೂ ದೂರದೆ, “ನಾಳೆ ಹೋದವರ ಮನೆಯಲ್ಲಿ ಹೆತ್ತವರಿಗೆ ಒಂದು ಮಾತು ಬಾರದೆ ಇರೋ ಹಾಗೆ ನಡೆದುಕೊಳ್ಳಬೇಕು” ಎಂಬ ಅಮ್ಮನ ಹಿತನುಡಿಗಳನ್ನು ಶಿರಸಾವಹಿಸಿ ಪಾಲಿಸಿದವಳು ನನ್ನಕ್ಕ. ಅವಳ ಪ್ರತಿಯೊಂದು ಕೆಲಸವೂ ಅದೆಷ್ಟು ಅಚ್ಚುಕಟ್ಟು. ಉಟ್ಟಿದ್ದ ಸೀರೆಯನ್ನು ಸ್ವಲ್ಪವೂ ಒದ್ದೆ ಮಾಡಿಕೊಳ್ಳದೆ, ಸದ್ದುಗದ್ದಲವಿಲ್ಲದೆ ಅದೆಷ್ಟು ಬೇಗ ಮಾಡಿ ಮುಗಿಸುತ್ತಿದ್ದಳು! ತಾವೇ ಕೊಂಡಿದ್ದೋ, ಅಥವಾ ಯಾರಾದರೂ ಕೊಟ್ಟಿದ್ದೋ ಯಾವುದೇ ವಸ್ತುಗಳಿರಲಿ ವರ್ಷಗಳಾದರೂ ಅದನ್ನು ಜೋಪಾನವಾಗಿ, ಎಚ್ಚರಿಕೆಯಿಂದ ಅವಳು ಬಳಸಿಕೊಳ್ಳುವ ರೀತಿಯೇ ಅಸಾಧಾರಣವಾದುದು. ಯಾವುದೇ ಪದಾರ್ಥ, ವಸ್ತುಗಳನ್ನಾಗಲೀ ಕೊಂಡು ಹಾಳುಮಾಡುವ ಕೊಳ್ಳುಬಾಕುತನ ಅವಳಲ್ಲಿ ಇಲ್ಲವೇ ಇಲ್ಲ. ಮನೆಗೆ ಬಂದವರಿಗೆ ರುಚಿರುಚಿಯಾಗಿ ಮಾಡಿ ಬಡಿಸುವುದರಲ್ಲಿ ಅಷ್ಟೇ ಆಸಕ್ತಿ. ಊಟ ಬಡಿಸುವ ಕೈ ಅನ್ನಪೂರ್ಣೇಶ್ವರಿಯಂತೆ. ಕೊಡುವ ಕೈ ಮುಂದು. ಅಕ್ಕ-ಭಾವ ಇಬ್ಬರದೂ ಹಾಗೆ. ಮಾಡಿದ್ದನ್ನು ಎಂದೂ ಹೇಳಿಕೊಳ್ಳುವವರಲ್ಲ.
ಕರುಳು ಕಂಡ ಭವಿಷ್ಯ
ಪ್ರತಿಬಾರಿ ಹೆಗ್ಗಾರಿಗೆ ಹೋದಾಗಲೂ ನಾವೆಷ್ಟೇ ದಿನವಿದ್ದರೂ ಅವರಿಗೆ ಸಾಲದು. ಮತ್ತಷ್ಟು ದಿನ ಇರುವಂತೆ ಪ್ರೀತಿಯ ಆಗ್ರಹ ಇದ್ದೇಇರುತ್ತಿತ್ತು. ಹೀಗೊಮ್ಮೆ ನಾನು ಮತ್ತು ತಂಗಿ ಊಟ ಮಾಡಿ ಅಕ್ಕನ ಮನೆಯಿಂದ ಮಧ್ಯಾಹ್ನ ಹೊರಡಬೇಕೆಂದಿರುವಾಗ, “ಯಾಕೋ ತುಂಬಾ ಅನ್ನಸ್ತಿದೆ. ಈಗ ಹೊರಡ್ಬೇಡಿ. ನಾಳೆ ಬೆಳಗ್ಗೆ ತಿಂಡಿ ತಿಂದು ಹೋದರಾಯಿತು. ಆಗ ನಾನೇನೂ ಒತ್ತಾಯಿಸುವುದಿಲ್ಲ” ಎಂದು ಹೇಳತೊಡಗಿದ್ದಳು ಅಕ್ಕ. ಅಷ್ಟೊಂದು ಒತ್ತಾಯದಿಂದ ಹೇಳುವಾಗ ಹೊರಡುವ ಮನಸ್ಸಾಗದೆ ಆ ದಿನ ಅಲ್ಲಿಯೇ ಉಳಿದುಕೊಂಡೆವು. ಆದರೆ ಮರುದಿನ ಸುದ್ದಿ ಕೇಳಿ ಮೈ ಜುಮ್ ಎಂದಿತ್ತು. ನಾವು ಪ್ರಯಾಣಿಸಬೇಕಿದ್ದ ಬಸ್ಸು ಅಪಘಾತಕ್ಕೊಳಗಾಗಿ ಅನೇಕ ಸಾವು ನೋವುಗಳಾಗಿದ್ದವು. ನಮಗಾದ ಅಚ್ಚರಿಯೆಂದರೆ ಅಕ್ಕನ ಪ್ರೀತಿಗೆ ತಂಗಿಯರ ಪ್ರಾಣರಕ್ಷಣೆಯ ಮಹಿಮೆಯೂ ಇದೆಯೇ ಎಂದು.
ತವರಿನಲ್ಲಿ ಅಮ್ಮನಿಗೆ ಸಹಾಯಕ್ಕೆ ಬೇಕಾದಾಗೆಲ್ಲ ಅಕ್ಕ ಧಾವಿಸಿ ಬಂದುಬಿಡುತ್ತಿದ್ದಳು. ನಮ್ಮ ಬಾಣಂತನದ ಸಂದರ್ಭಗಳಲ್ಲಿಯೂ ಅಮ್ಮನಿಗೆ ಅಕ್ಕನದೇ ನೆರವಿನ ಹಸ್ತ. ಮನೆಯಲ್ಲಿ ಆಗುವ ಯಾವುದೇ ಉತ್ಸವ, ಸಮಾರಂಭಗಳಿಗೂ ಅಕ್ಕ ಬಂದುಬಿಟ್ಟರೆ ಅಮ್ಮನಿಗೆ ನಿಶ್ಚಿಂತೆ. ಅಕ್ಕ ಎಂದರೆ ಅಮ್ಮನ ಬಲಗೈಯಂತೆ.
ನಮ್ಮ ಮಗಳ ಬಾಣಂತನಕ್ಕೂ ಅವಳೇ ಬಂದು ನೆರವಾಗಿದ್ದಳು. ಅಮ್ಮ ಮಕ್ಕಳಿಗಾಗಿ ಅನುವು ಆಪತ್ತುಗಳಲ್ಲಿ ಹೇಗೆ ಅಂತಃಕರಣದಿಂದ ಕಾಳಜಿ ವಹಿಸುತ್ತಾರೋ ಹಾಗೆಯೇ ಅಕ್ಕ ಅಮ್ಮನಿಲ್ಲದ ಶೂನ್ಯವನ್ನು ತುಂಬಿದ್ದರು.
ಅಕ್ಕ ತವರಿಗೆ ಬರುವುದನ್ನೇ ನಾವು ಸಂಭ್ರಮದಿಂದ ಕಾಯುತ್ತಿದ್ದೆವು. ಹಳ್ಳಿಯಲ್ಲಿನ ವಿಶೇಷ ತಿಂಡಿ, ಹಣ್ಣುಗಳನ್ನು ಎಲ್ಲರಿಗೂ ಹಂಚುತ್ತ, ನಾವು ಅದನ್ನು ಖುಶಿಯಾಗಿ ತಿನ್ನುವಾಗ ಅಕ್ಕನ ಮುಖದಲ್ಲಿ ಸಂತೃಪ್ತಿಯ ಲಾಸ್ಯ.
ಹಲಸಿನಕಾಯಿಯ ಹಪ್ಪಳವಂತೂ ಸರಿಯೇ ಸರಿ….ಆದರೆ ಊರಿಗೆ ಬರುವಾಗ ಹಪ್ಪಳದ ಹಿಟ್ಟನ್ನು ತಯಾರಿಸಿ ಅಷ್ಟೆಲ್ಲ ದೂರ ಅದನ್ನು ಹೊತ್ತು ತರುವ ಅಕ್ಕನ ಅಕ್ಕರೆಗೆ ಬೆಲೆ ಕಟ್ಟಲಾದೀತೆ? ಜೇನುತುಪ್ಪದಂತೆ ಸವಿಯಾಗಿರುವ ಚಂದ್ರಬಕ್ಕೆಯಂತಹ ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸಿ, ಕಾಯಿಸಿದ ಬಾಳೆಲೆಯಲ್ಲಿ ಸುತ್ತಿ ತರುವ ಆ ಕಳಕಳಿಗೆ, ಮುತುವರ್ಜಿಯಿಂದಾಗಿ ರುಚಿ ಮತ್ತಷ್ಟು ಹೆಚ್ಚುತ್ತಿತ್ತು.
ಹಳ್ಳಿಯಲ್ಲಿ ಯಾವ ಮನರಂಜನೆಯೂ ಇರುತ್ತಿರಲಿಲ್ಲವಾದ್ದರಿಂದ ಅಕ್ಕನಿಗೆ ಶಿವಮೊಗ್ಗಕ್ಕೆ ಬಂದಾಗ ಒಂದೆರಡು ಸಿನೆಮಾಗಳನ್ನು ನೋಡುವ ಇಚ್ಛೆ. ಹೀಗೆ ಅಕ್ಕ, ಭಾವ ಸಿನೆಮಾಕ್ಕೆ ಹೊರಟಾಗ ಸರದಿಯ ಪ್ರಕಾರ ನನ್ನನ್ನೋ, ತಂಗಿಯನ್ನೋ ಕರೆದುಕೊಂಡು ಹೋಗುತ್ತಿದ್ದುದು ಅಭ್ಯಾಸವೇ ಆಗಿಬಿಟ್ಟಿತ್ತು. ಶಿವಪೂಜೆಯ ನಡುವೆ ಕರಡಿಯಂತೆ ಎಂಬ ಭಾವನೆಯೇ ಅವರಿಗಿರಲಿಲ್ಲ.
ಅತ್ತೆ-ಮಾವ, ಮೈದುನ, ರಜೆಯಲ್ಲಿ ಬರುವ ಭಾವನ ಅಕ್ಕನ ಮಕ್ಕಳು ಹೀಗೆ ತುಂಬಿದ ಕುಟುಂಬ ಅವರದು.
ಸೋಜಿಗ
ನಾವು ರಜೆಗೆ ಹೋದಾಗ ಒಮ್ಮೊಮ್ಮೆ ಅಕ್ಕ ಹತ್ತಿರ ಬಂದು, “ಇಲ್ಲಿ ಬೇಜಾರಾಗತ್ತ, ಹಳ್ಳಿಮನೆ, ಹಸಿವಾಗತ್ತಾ? ಏನಾದರೂ ಬೇಕಾದರೆ ಹೇಳು. ಅತ್ತೆಯವರ ಹತ್ತಿರ ಹೇಳ್ತೀನಿ” ಎಂದು ಕಳಕಳಿಯಿಂದ ವಿಚಾರಿಸಿಕೊಳ್ಳುತ್ತಿದ್ದ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಸೋಜಿಗವೆಂದರೆ ಅಕ್ಕನ ಅತ್ತೆಯವರೂ ನಮ್ಮನ್ನು ಅಷ್ಟೇ ಅಕ್ಕರೆಯಿಂದ ವಿಚಾರಿಸಿಕೊಳ್ಳುತ್ತ ಉಂಡೆ, ಬಾಳೆಕಾಯಿ ಬುರುಬುರಿ ಎಂದೆಲ್ಲ ಕೊಡುತ್ತಿದ್ದರು.
ಕಾಲ ಉರುಳಿದಂತೆ ಅಕ್ಕನ ಅತ್ತೆ, ಮಾವ ತೀರಿಕೊಂಡು ಅಕ್ಕ, ಭಾವನವರು ಶಿವಮೊಗ್ಗದಲ್ಲೇ ನೆಲೆಸಿದ್ದಾರೆ. ನಮ್ಮ ಅಪ್ಪ, ಅಮ್ಮನೂ ನಮ್ಮಿಂದ ದೂರವಾಗಿ ವರ್ಷಗಳೇ ಕಳೆದಿವೆ. ಅಚ್ಚರಿಯೋ, ಅದೃಷ್ಟವೋ ಅಕ್ಕ ಇರುವುದು ಮೊದಲು ನಾವು ಹುಟ್ಟಿ ಬೆಳೆದಿದ್ದ ಮನೆಯ ಸಮೀಪವೆ. ನಾವೀಗ ಶಿವಮೊಗ್ಗದಲ್ಲಿ ಏನಾದರೂ ಸಮಾರಂಭಗಳಿಗೊ, ಅಪ್ಪ ಅಮ್ಮನ ತಿಥಿಗೋ ಹೋದಾಗ ಅಕ್ಕನ ಮನೆಗೆ ಹೋಗುತ್ತೇವೆ. ಅವರು ಆದರದಿಂದ ಬರಮಾಡಿಕೊಳ್ಳುವ ರೀತಿ, ಆತ್ಮೀಯತೆ, ಕಳಕಳಿ ಎಲ್ಲವೂ ಅಮ್ಮನಂತೆಯೆ. ಅಮ್ಮನೇ ಅಕ್ಕನ ರೂಪದಲ್ಲಿ ಇರುವಂತೆ ಭಾಸವಾಗುತ್ತದೆ. ಅಡುಗೆ, ತಿಂಡಿಗಳು ಅದೇ ರುಚಿ. ಎಲ್ಲವೂ ಅಮ್ಮ ಮಾಡಿದಂತೆಯೆ. ಸಟ್ಟುಗದಿಂದ ಇಷ್ಟು ಅನ್ನ ತಟ್ಟೆಗೆ ಜಾರಿಸಿ ಪ್ರೀತಿಯಿಂದ ಮತ್ತೆರಡು ಸೌಟು ಮೇಲೋಗರ ಹಾಕುವಾಗ ಆ ಹೆಚ್ಚಾದದ್ದು ಕೂಡ ಮೆಲ್ಲಗೆ ಗಂಟಲೊಳಗೆ ಜಾರಿ ಉದರವನ್ನು ಸೇರುತ್ತದೆ. ಅಕ್ಕನ ಅಕ್ಕರೆಗೆ ಗಂಟಲ ಸೆರೆ ಉಬ್ಬುತ್ತದೆ.
ನಾವು ಪ್ರತಿಬಾರಿ ಅವರ ಮನೆಯಿಂದ ಹೊರಡುವಾಗಲೂ ಕಾಂಪೌಂಡ್ ಗೇಟನ್ನೂ ದಾಟಿ ಮನೆಯ ಹೊರಗೆ ಬಂದು ನಮ್ಮ ಆಟೋ ಆ ರಸ್ತೆಯ ತುದಿಯಲ್ಲಿ ಮರೆಯಾಗುವವರೆಗೂ ಕತ್ತು ಉದ್ದ ಮಾಡಿ ನಮ್ಮನ್ನು ನೋಡುತ್ತಲೇ ಬೀಳ್ಕೊಡುವಾಗ ನಾವೂ ಹಿಂತಿರುಗಿ ನೋಡುತ್ತಲೇ ಕಣ್ತುಂಬಿಕೊಂಡು ಹೊರಡುತ್ತೇವೆ. “ಮನೆಗೆ ತಲಪಿದ ಕೂಡಲೇ ಫೋನ್ ಮಾಡಿ” ಎಂದು ಪದೇಪದೇ ಎಚ್ಚರಿಸುವ ಅವರು ನಾವು ಮನೆಗೆ ತಲಪುವ ಮುನ್ನವೇ ಫೋನ್ ಮಾಡಿ ವಿಚಾರಿಸಿಕೊಂಡಿರುತ್ತಾರೆ.
ಇಂತಹ ಪ್ರೀತಿಯು ಅಕ್ಷರಗಳ ಅಳವಿಗೆ ನಿಲುಕೀತೆ!
ಅಕ್ಕನೆಂದರೆ ನಮಗೆ ಅಕ್ಕರೆಯ ಸಾಕಾರ
ಸಕ್ಕರೆಯ ಸವಿಯವಳ ಮಾತು
ಆಕೆಯಲ್ಲವೆ ನಿಜಕೂ ಅಮ್ಮನದೇ ಪ್ರತಿರೂಪ
ಬೇಕಿಂಥ ಅಕ್ಕನಾ ಒಲವು
ಹೆಕ್ಕಿ ತೆಗೆಯುವ ನಿಪುಣೆ ಬೇಸರವ, ಬೇಗುದಿಯ
ನಕ್ಕು ಹಗುರಾಗಿಸುವ ಕಲೆಯು
ಅಕ್ಕ ಬಯಸುವುದಿಲ್ಲ ಬೇರೇನೂ ನಮ್ಮಿಂದ
ಸುಖ, ಶಾಂತಿ ನಮ್ಮದೇ ಹಿತವು.