1. ದೇವೇಂದ್ರ
ಅವಳನ್ನು ನೋಡುವವರೆಗೆ ಬಹಳ ಕುತೂಹಲವಿತ್ತು ನನಗೆ. ಏಕೆಂದರೆ ಅವಳ ಬಗೆಗೆ ಉಳಿದವರಾಡುತ್ತಿದ್ದ ಬಣ್ಣನೆಯ ಮಾತುಗಳು ಹಾಗಿದ್ದವು. ಬ್ರಹ್ಮದೇವ ಒಂದಿನಿತೂ ಕೊರತೆಯಿಲ್ಲದ ಹೆಣ್ಣನ್ನು ಸೃಷ್ಟಿಸುತ್ತೇನೆ ಎಂದು ಇವಳನ್ನು ನಿರ್ಮಿಸಿದನಂತೆ. ನಮ್ಮ ಊರ್ವಶಿಯ ಚೆಲುವಿಗಿಂತ ಅಧಿಕ ಲಾವಣ್ಯವುಳ್ಳ ಹೆಣ್ಣಂತೆ ಅವಳು… ಹೀಗೆಲ್ಲ ಆಡಿಕೊಳ್ಳುತ್ತಿದ್ದರು. ನನಗೆ ಸ್ತ್ರೀಯರ ವಿಷಯವೇನೂ ಹೊಸತಲ್ಲ. ಬೇಕಾದಷ್ಟು ಅಪ್ಸರೆಯರೂ ಬಯಸಿದಷ್ಟು ಭೋಗವೂ ಕಾಲಬುಡದಲ್ಲೇ ಹರಡಿಕೊಂಡಿತ್ತು. ಅಲ್ಲದೆ ಅತ್ಯಂತ ಸುಂದರಿಯಾದ ಶಚಿ ನನ್ನ ಪತ್ನಿ. ಹೀಗಾಗಿ ಯಾರೋ ಹೇಳಿದ ಮಾತು ಕೇಳಿ ಹಂಬಲಿಸಬೇಕಾದ ದಾರಿದ್ರ್ಯವೇನಿರಲಿಲ್ಲ. ಆದರೂ ಚೆಲುವಿನ ಹೆಣ್ಣು ಅಂದಮೇಲೆ ಏನೋ ಒಂದು ಕುತೂಹಲ. ಹಾಗೆಂದು ನೋಡಬೇಕೆನಿಸಿದರೆ ಹೋಗಿ ನೋಡಬಹುದಿತ್ತು. ಅವಳು ಬ್ರಹ್ಮನ ಮಗಳೆನಿಸಿದ್ದರೂ ಸಾಕಿ ಬೆಳೆಸಿದವನು ಮುದ್ಗಲನೆಂಬ ಮಹರ್ಷಿ. ಕುರುಕ್ಷೇತ್ರದ ಹತ್ತಿರ ಅವನ ಆಶ್ರಮ. ಅಲ್ಲಿ ಅವಳಿರುವುದು. ಅದೇನೋ ನಿಜ. ಆದರೆ ದೇವರಾಜನಾದ ನಾನು ಅವಳನ್ನು ನೋಡಲೆಂದು ಹೋಗಬಹುದೆ? ನನ್ನ ಸ್ಥಾನದ ಘನತೆಯನ್ನು ಮರೆಯಲಾಗದಷ್ಟೆ? ‘ಯಾಕೆ ಬಂದೆ?’ ಎಂದು ಮುದ್ಗಲ ಕೇಳಿದರೆ ಉತ್ತರವಾಗಿ ಏನೋ ಒಂದು ಸುಳ್ಳನ್ನು ಹೇಳುವಂತಿಲ್ಲ.
ಅವಳು ತಾರುಣ್ಯಕ್ಕೆ ಕಾಲಿಡುತ್ತಿದ್ದಂತೆ ಆ ಕುರಿತು ಮಾತನಾಡುವವರೂ ಹೆಚ್ಚುತ್ತಿದ್ದರು. ಹೆಣ್ಣು ಎಂದರೆ ಮೊದಲೇ ಗಂಡು ಜಾತಿಗೆ ಬಹಳ ಕುತೂಹಲ. ಯುವತಿಯಾದರೆ ಕಾಮನೆಯೂ ಅದರ ಜತೆಗೂಡುತ್ತದೆ.
ಆಹಲ್ಯೆಯ ಸೌಂದರ್ಯವೂ ಆಗಲೇ ಪ್ರಸಿದ್ಧವಾಗಿತ್ತು. ಇದರಿಂದಾಗಿ ಮರದ ಮೇಲಿನ ಹಣ್ಣನ್ನು ಕಂಡು ಸಿಹಿಯನ್ನು ಕಲ್ಪಿಸಿಕೊಂಡಂತೆ ಜನ ಏನೇನೋ ಅತಿಶಯವಾಗಿ ಆಡಿಕೊಳ್ಳುತ್ತಿದ್ದರು. ಇರಬಹುದು. ನೋಡೋಣ, ಸಂದರ್ಭ ಒದಗಿದಾಗ ಕಂಡೇನು ಎಂಬ ಭಾವದಲ್ಲಿ ನಾನಿದ್ದೆ.
ಶೀಘ್ರದಲ್ಲೇ ಅಂತಹ ಒಂದು ಅನುಕೂಲ ಸನ್ನಿವೇಶ ಅಯಾಚಿತವಾಗಿ ಒದಗಿತು. ಅದಾದುದು ಹೀಗೆ. ಪ್ರಬುದ್ಧಳಾದ ಮಗಳಿಗೆ ಸ್ವಯಂವರ ಮಾಡುವುದು ಎಂಬ ನಿರ್ಣಯಕ್ಕೆ ಮುದ್ಗಲ ಬಂದ. ಹಲವು ಮಂದಿ ಯೋಗ್ಯತಾವಂತರನ್ನು ಶಿಷ್ಯರ ಮೂಲಕ ನಿಮಂತ್ರಿಸಿದ. ನನಗೂ ಆಮಂತ್ರಣ ಬಂತು. ಅದೊಂದು ಅಚ್ಚರಿಯೇ. ಭೂಮಿಯ ಮೇಲಣ ಇಂತಹ ವ್ಯವಹಾರಗಳಿಗೆ ದೇವತೆಗಳಾದ ನಾವು ಆಹ್ವಾನಿತರಲ್ಲ. ಆದರೂ ನನಗೆ ಆಹ್ವಾನ ಅಂದರೆ ಇದೇನು ಎನ್ನುವ ಪ್ರಶ್ನೆ ಮೂಡಿತು. ಸ್ವಯಂವರದ ನೋಟಕನಾಗಿ ಕರೆದುದಲ್ಲ. ಕನ್ಯೆಯೊಬ್ಬಳಿಗೆ ಬುದ್ಧಿ ಹಾಗೂ ದೇಹಗಳಲ್ಲಿ ಅರ್ಹರಾದವರನ್ನು ಆರಿಸಿಕೊಳ್ಳುವ ಅವಕಾಶ ಈ ಸ್ವಯಂವರ ಎಂಬ ಏರ್ಪಾಡು. ಬಹುಶಃ ಇಂದ್ರನು ತನ್ನ ಮಗಳಿಗೆ ತಕ್ಕವನು ಎಂಬ ಯೋಚನೆಯಿಂದ ಮುದ್ಗಲ ನನ್ನನ್ನು ಆಹ್ವಾನಿಸಿರಬಹುದು ಎಂಬುದು ನನ್ನ ತರ್ಕಕ್ಕೆ ಹೊಳೆದ ವಿಚಾರ. ವಿಶಿಷ್ಟ ಸಂದರ್ಭಗಳಲ್ಲಿ ಹೀಗೆ ವೈವಾಹಿಕ ಸಂಬಂಧ ಬಯಸುವುದೋ ಬೆಳೆಸುವುದೋ ಅಸಾಮಾನ್ಯವೇನೂ ಅಲ್ಲವಾದುದರಿಂದ ನಾನು ಸ್ವಯಂವರ ನಡೆಯಲಿದ್ದ ಕುರುಕ್ಷೇತ್ರದ ಮುದ್ಗಲಾಶ್ರಮಕ್ಕೆ ತೆರಳಿದೆ.
ಅಲ್ಲಿಗೆ ಹೋಗಿ ನೋಡಿದರೆ ವಿಶೇಷವಾಗಿ ಆಹೂತರಾದ ಕೆಲವರನ್ನು ಉಳಿದು ಬೇರೆ ಯಾರೂ ಬಂದಿರಲಿಲ್ಲ. ಬಂದವರಲ್ಲಿ ಗಣನೀಯನಾಗಿ ಕಂಡವನು ತಪಸ್ವಿಯಾದ ಗೌತಮ ಮಾತ್ರ. ಈ ಜಡ ಋಷಿಗೂ ಸ್ವಯಂವರದ ಹೇಳಿಕೆಯೆ? ಅದನ್ನೊಪ್ಪಿ ಬಂದದ್ದೂ ವಿಚಿತ್ರವೆನಿಸಿತು. ಆದರೂ ನಾನು ಪ್ರಕಟಿಸಲಿಲ್ಲ. ಮುದ್ಗಲ ನನ್ನ ಆಗಮನದಿಂದ ಚಕಿತನಾದಂತೆನಿಸಿತು. ನಾನು ಬರಲಾರೆ ಎಂದು ತಿಳಿದಿದ್ದನೋ ಏನೋ. ಆದರೆ ತೋರಗೊಡಲಿಲ್ಲ. ಸಂತುಷ್ಟನಾದೆ ಅಂದ. ಯಥಾಸಾಧ್ಯ ಸತ್ಕಾರವನ್ನು ಮಾಡಿದ. ನಾವೆಲ್ಲ ಸುಖಾಸೀನರಾದೆವು. ಎಲ್ಲರಿಗೂ ಈಗ ವಧುವನ್ನು ನೋಡುವ ಕಾತರ. ನಾನೂ ಅದಕ್ಕೆ ಹೊರತಾಗಿರಲಿಲ್ಲ ಅನ್ನೋಣ.
ಕೊನೆಗೂ ಅಹಲ್ಯೆ ಬಂದಳು. ಆಹಾ! ಮಿಂಚಿನ ಬಳ್ಳಿಯೇ ಹೆಣ್ಣಾಗಿ ಸುಳಿದಂತಾಯಿತು. ಒಮ್ಮೆ ಅವಳತ್ತ ಹರಿದ ನನ್ನ ಕಣ್ಣುಗಳು ಮತ್ತೆ ಆಚೀಚೆ ಸರಿಯಲಿಲ್ಲ. ಏನದ್ಭುತವಾದ ರೂಪರಾಶಿಯದು! ನಿತ್ಯ ಚೆಲುವೆಯರ ಸಂಸರ್ಗದಲ್ಲೇ ಇರುವ ನನಗೇ ಅವಳನ್ನು ಕಂಡು ದಿಗ್ಬ್ರಮೆಯಾಗಿರಬೇಕೆಂದರೆ ಉಳಿದವರ ಪಾಡೇನು? ಅಹಲ್ಯೆ ಅಂದರೆ ಕನ್ನೆನೆಲ ಅಥವಾ ಕೊರತೆಯೇ ಇಲ್ಲದವಳು ಎಂಬ ಅರ್ಥ. ಅದಂತೂ ನಿಜವೇ. ಕೊರತೆ ಎಂಬುದನ್ನು ಹೇಳುವುದಾದರೆ ಅವಳು ಮತ್ರ್ಯದಲ್ಲಿದ್ದಾಳೆ ಅನ್ನುವುದು ಮಾತ್ರ. ನಾನು ಕೇಳಿದ ಅವಳ ಚೆಲುವಿನ ಬಣ್ಣನೆಯ ಮಾತುಗಳು ಏನೇನೂ ಸಾಲವು ಅನ್ನಿಸಿತು. ಒಂದು ವೇಳೆ ಸ್ವಯಂವರಕ್ಕೆ ಬಾರದಿರುತ್ತಿದ್ದರೆ ದೇವದುರ್ಲಭವಾದ ಈ ಚೆಲುವೆಯ ದರ್ಶನಭಾಗ್ಯ ನನ್ನ ಪಾಲಿಗೆ ದೊರೆಯುತ್ತಿರಲಿಲ್ಲ. ಇಂತಹ ಅಮೂಲ್ಯ ಸೌಂದರ್ಯನಿಧಿಯನ್ನು ಸೃಷ್ಟಿಮಾಡಿದ ಬ್ರಹ್ಮದೇವನಿಗೆ ಮನಸಾ ವಂದಿಸಿದೆ.
ಅವಳೀಗ ಸ್ವಯಂವರ ವಧು. ನಾನು ಆಮಂತ್ರಿತ. ಅರ್ಥಾತ್ ವಿವಾಹೇಚ್ಛುವಾಗಿ ಬಂದವನು. ಅವಳು ನನ್ನನ್ನು ಆರಿಸಿದರೆ ಆ ಪುತ್ಥಳಿ ನನ್ನವಳು! ಆಹಾ… ನನ್ನ ಅಂತರಂಗ ಆನಂದದಿಂದ ತುಂಬಿತು. ಸುತ್ತ ದೃಷ್ಟಿಹರಿಸಿದೆ. ಅನತಿ ದೂರದಲ್ಲಿ ಕುಳಿತಿದ್ದ ಗೌತಮನೂ ಕನ್ಯಾಪೇಕ್ಷೆಯಿಂದ ಬಂದನೇ? ಈ ವೇದಜಡನಿಗೇಕೆ ವಿವಾಹದ ಗೋಜು? ಅದರಲ್ಲೂ ಅಹಲ್ಯೆಯನ್ನು ಅಪೇಕ್ಷಿಸಿ ಇಲ್ಲಿಗೆ ಬಂದನಲ್ಲ? ಯಾರೋ ಸಾಮಾನ್ಯ ಮುನಿವಧುವನ್ನು ಮದುವೆಯಾಗಿ ಗೃಹಸ್ಥನಾಗಬಾರದಿತ್ತೆ ಇವನಿಗೆ? ಬ್ರಹ್ಮಮಾನಸಪುತ್ರಿಯಾದ ಕನ್ಯಾರತ್ನವನ್ನು ಇವನು ಹೊಂದುವುದೆ? ಅಥವಾ ಅವಳು ಇವನನ್ನು ವರಿಸಿಯಾಳೆ?
ಚಂಚಲವಾದ ತನ್ನ ಮಿಂಚಿನಂತಹ ಕಣ್ಣುಗಳನ್ನು ಆಚೀಚೆ ಹರಿಸುತ್ತ ಒಮ್ಮೊಮ್ಮೆ ನನ್ನತ್ತ ನೋಡುತ್ತ ನಿಂತಿದ್ದ ಅಹಲ್ಯೆಯ ಚರ್ಯೆಯ ಅರ್ಥ ನನಗಾಗಲಿಲ್ಲ.
ಮುದ್ಗಲ ಮುಂದೆ ಬಂದ, ಎರಡೂ ಕೈಯೆತ್ತಿದ. ಸೇರಿದ್ದ ಜನರ ಗುಜಗುಜು ನಿಂತಿತು.
‘ಮಹಾಜನರೇ, ನಾವೊಂದು ಸಂದಿಗ್ಧದಲ್ಲಿ ಸಿಲುಕಿದ್ದೇವೆ. ಇಲ್ಲಿ ಸೇರಿದ ಮಹಿಮಾವಂತರಲ್ಲಿ ಅಧಿಕನಾದವನನ್ನು ಅಹಲ್ಯೆಯು ವರಿಸುವ ನಿರ್ಣಯವಿತ್ತು. ಆದರೆ ಮಹರ್ಷಿ ಗೌತಮ, ದೇವರಾಜ ಇಂದ್ರ ಮೊದಲಾದ ಪ್ರಭೃತಿಗಳ ಯೋಗ್ಯತೆಯನ್ನು ತೂಗಿ ನಿರ್ಣಯಿಸತಕ್ಕವರು ಯಾರು? ನಾವಂತೂ ಅಲ್ಲ. ಹಾಗಾಗಿ ಅವರವರೇ ತಮ್ಮ ಯೋಗ್ಯತೆ ಅಧಿಕವೆಂದು ಸ್ಥಾಪಿಸುವ ಪಣವೊಂದನ್ನು ಒಡ್ಡಬೇಕಾಗಿದೆ. ಯಾರು ಅತಿಶೀಘ್ರವಾಗಿ ಪ್ರಪಂಚ ಪರ್ಯಟನವನ್ನು ಮಾಡಿ ಬರುತ್ತಾರೋ ಅವರನ್ನು ಅಹಲ್ಯೆ ವರಿಸುತ್ತಾಳೆ.’
ಇಷ್ಟು ಹೇಳಿ ಮುದ್ಗಲ ಮೌನವಾದ. ಒಂದು ಸ್ವಯಂವರದಲ್ಲಿ ಇಂತಹದೆಲ್ಲ ಆಶ್ಚರ್ಯವಲ್ಲ. ಆದರೆ ಪಣದ ಕುರಿತು ಯೋಚಿಸಿದರೆ ಇದು ನನಗಾಗಿಯೇ ಯೋಜಿಸಿದಂತೆ ಕಾಣಿಸಿತು. ಸ್ವರ್ಗಾಧಿಪತಿಯಾದ ನಾನಲ್ಲದೆ ಇನ್ನಾರು ಮುಹೂರ್ತ ಕಾಲದಲ್ಲಿ ಪ್ರಪಂಚ ಪರ್ಯಟನೆ ಮಾಡಬಲ್ಲ ಶಕ್ತ? ಇನ್ನೊಬ್ಬ ಇದ್ದರೆ ತಾನೆ ಅಹಲ್ಯೆಗೆ ವರನಾಗುವುದು? ಸ್ವಯಂವರಕ್ಕೆ ಬಂದುದು ಸಾರ್ಥಕವಾಯಿತೆನಿಸಿತು. ಅಥವಾ ಇದು ಅವಳ ಮತ್ತು ಮುದ್ಗಲನ ಅಪೇಕ್ಷೆಯೊ? ಏನಿದ್ದರೂ ಉತ್ಸಾಹದಿಂದ ಮೈಯುಬ್ಬಿಸಿ ಸಿದ್ಧನಾದೆ.
ಅಹಲ್ಯೆಯ ಕುಡಿಗಣ್ಣ ಚೆಲುನೋಟ ನನ್ನನ್ನೊಮ್ಮೆ ತೋಯಿಸಿತು. ಅಂತರಂಗದಲ್ಲಿ ಸುಖದ ಪುಳಕವನ್ನೆಬ್ಬಿಸಿತು. ಮುದ್ಗಲ ಮಾತ್ರ ತನ್ನ ಮನೋವ್ಯಾಪಾರವನ್ನು ಬಹಿರಂಗದಲ್ಲಿ ತೋರಗೊಡದೆ ಗಂಭೀರ ಮುಖಭಾವದಲ್ಲಿ ನಿಂತಿದ್ದ. ಇಷ್ಟು ಕಾಲ ಮೌನವಾಗಿ ಆಸೀನನಾಗಿದ್ದ ಗೌತಮನೂ ಪಣದ ವಿಚಾರ ಬಂದೊಡನೆ ಪೀಠವನ್ನು ಬಿಟ್ಟು ಎದ್ದುನಿಂತ. ಅಚ್ಚರಿಯೆನಿಸಿತು. ದೇವೇಂದ್ರನೊಂದಿಗೆ ಸ್ಪರ್ಧೆಯೇ ಈ ಋಷಿಯದು? ಅಥವಾ ಸ್ವಯಂವರದಿಂದ ಹೊರಗಾದನೆ? ಏನೊ… ನಾನು ಐರಾವತವನ್ನೇರಿ ಒಂದು ಸಲ ತಿರುಗಿ ನೋಡಿದೆ. ಅಹಲ್ಯೆ ನನ್ನೆಡೆಗೆ ನಸುನಗೆಯ ಬೆಳಕು ಹರಿಸಿದಳು. ಹೆಣ್ಣಿನ ಒಲವು ಯಾವ ಸಾಹಸಕ್ಕಾದರೂ ಪುರುಷನನ್ನು ಪ್ರೇರಿಸುವುದು ನಿಜವಷ್ಟೆ? ಹಾಗಾಗಿ ವೃದ್ಧಾಪ್ಯದ ಸಮೀಪವಿರುವ ಗೌತಮನೂ ಸಾಹಸಕ್ಕಿಳಿದರೆ ಅಚ್ಚರಿಯಿಲ್ಲ. ನಾನು ವೇಗವಾಗಿ ಸಾಗಿದೆ.
*****
ಮನುಷ್ಯರ ಮನೋವೇಗಕ್ಕೂ ಮೀರಿದ ರಭಸವುಳ್ಳ ನಾನು ಪರ್ಯಟನವನ್ನು ಅತಿಶೀಘ್ರವಾಗಿ ಮುಗಿಸಿ ಪುನರಪಿ ಮುದ್ಗಲಾಶ್ರಮಕ್ಕೆ ತಲಪಿದಾಗ ಆಶ್ರಮದ ತುಂಬ ಸಡಗರ. ಎಲ್ಲರೂ ನಗುಮುಖದಿಂದ ಓಡಾಡುತ್ತಿದ್ದರು. ಇದೇನು? ಗೌತಮನೂ ಮುದ್ಗಲನೂ ಪರಸ್ಪರ ಸನಿಹದಲ್ಲಿ ಕುಳಿತು ಅತ್ಯಂತ ಆಪ್ತರಂತೆ ಮಾತನಾಡುತ್ತಿದ್ದಾರೆ! ನೇರ ಮುದ್ಗಲ ಮುನಿಯನ್ನು ಕುರಿತು ಹೇಳಿದೆ,
“ಮಹರ್ಷೇ, ನೀನಂದಂತೆ ಇದೋ ಪ್ರಪಂಚ ಪ್ರದಕ್ಷಿಣೆ ಪೂರ್ಣಗೊಳಿಸಿ ಬಂದಿದ್ದೇನೆ. ಪಣವನ್ನು ಗೆದ್ದಿದ್ದೇನೆ. ಎಲ್ಲಿ ವಧುವನ್ನು ಕರೆದು ತಾ.”
ಮುದ್ಗಲ ಒಮ್ಮೆ ನನ್ನ ಮುಖ ನೋಡಿದ. ಮತ್ತೊಮ್ಮೆ ಗೌತಮನತ್ತ ನೋಡಿದ. “ದೇವೇಂದ್ರ, ಸಾಮಾನ್ಯರಿಗೆ ಅತಿದುಷ್ಕರವೆನಿಸುವ ಸಾಹಸಗಳನ್ನು ನೀನು ಬಹುಸುಲಭವಾಗಿ ಮಾಡಬಲ್ಲವನು. ನಿನಗೆ ಪರ್ಯಟನ ದೊಡ್ಡದಲ್ಲ. ಆದರೆ ಪಣವಿರುವುದು ಕನ್ಯಾಪೇಕ್ಷೆಯುಳ್ಳವರಲ್ಲಿ ಪರ್ಯಟನವನ್ನು ಸಾಧಿಸಿದ ಮೊದಲಿಗನು ಯಾರು ಎಂಬುದಲ್ಲವೆ? ನಿನಗಿಂತ ಮುನ್ನವೇ ಈ ಗೌತಮ ಮಹರ್ಷಿ ಪಣವನ್ನು ಗೆದ್ದುಬಿಟ್ಟಿದ್ದಾನೆ. ಆದುದರಿಂದ ಅಹಲ್ಯೆ ಅವನನ್ನು ವರಿಸಬೇಕಾದುದು ಧರ್ಮವಷ್ಟೆ? ನೀನು ನಮ್ಮನ್ನು ಅನುಗ್ರಹಿಸಬೇಕು.”
ಒಂದು ಕ್ಷಣ ನನ್ನನ್ನು ಸ್ತಬ್ಧತೆ ಆವರಿಸಿತು. ಏನಿವನು ಹೇಳುತ್ತಿರುವುದು? ಪಣವನ್ನು ಗೌತಮ ಗೆದ್ದನೆ? ಅದೆಂತು ಶಕ್ಯ? ನನ್ನ ವೇಗವನ್ನು ಮೀರಿ ಹೋಗುವ ಸಾಮಥ್ರ್ಯ ಇವನಿಗೆಲ್ಲಿಯದು? ಮುದ್ಗಲನಲ್ಲಿ ನುಡಿದೆ, “ಇದೇನು ಮಹರ್ಷಿ ನೀನಾಡುತ್ತಿರುವುದು? ಪಣವನ್ನು ಗೆಲ್ಲುವಲ್ಲಿ ಗೌತಮನಿಗೆ ಅವಕಾಶವೇ ಇಲ್ಲವಲ್ಲ! ಅವನು ಹೊರಡಲೇ ಇಲ್ಲ. ನನ್ನನ್ನು ಮೀರಿ ಮುಂದೆ ಸಾಗಿದ್ದನ್ನು ನಾನು ಕಾಣಲಿಲ್ಲ. ಸ್ಪರ್ಧಿಸದೇ ಇದ್ದವನು ಗೆಲ್ಲುವುದು ಹೇಗೆ?” ನನ್ನ ಮಾತುಗಳಲ್ಲಿ ಅಸಹನೆ ಗೋಚರಿಸುವಷ್ಟು ಸ್ಪಷ್ಟವಿತ್ತು.
ಮುದ್ಗಲನಿಗೂ ನನ್ನ ಮಾತಿನ ಬಿಸುಪು ತಟ್ಟಿರಬೇಕು. ಆದರೂ ತೋರಗೊಡದೆ ನುಡಿದ, “ಸುರಪತೇ, ಹಾಗೇನೂ ಇಲ್ಲ. ಗೌತಮನು ಸ್ಪರ್ಧಿಸಿಯೇ ಗೆಲವನ್ನು ಪಡೆದಿದ್ದಾನೆ. ನಿನ್ನಂತೆ ಪ್ರದಕ್ಷಿಣೆ ಮಾಡಿಲ್ಲ. ಅದರೆ ಪಣದ ಅಂತರಾರ್ಥವನ್ನು ಅರಿತು ಅದರಂತೆ ವ್ಯವಹರಿಸಿದ್ದಾನೆ. ಅದೋ ಅಲ್ಲಿ ಗೋಶಾಲೆಯಲ್ಲಿರುವ ಸವತ್ಸ ಧೇನುವನ್ನು ಕಂಡೆಯ? ತ್ರಿಲೋಕಗಳಲ್ಲಿರುವ ಸಮಸ್ತವೂ ಆ ಗೋವಿನೊಳಗೆ ಹುದುಗಿದೆ. ಅದಕ್ಕೆ ಪ್ರದಕ್ಷಿಣೆ ಬರುವುದು ಅಂದರೆ ಪ್ರಪಂಚವನ್ನೇ ಸುತ್ತಿದಂತೆ. ಗೌತಮ ಅದನ್ನು ಮಾಡಿದ. ನಿನಗಿಂತ ಮೊದಲೇ ಪಣವನ್ನು ಗೆದ್ದ. ನ್ಯಾಯವಾಗಿಯೇ ಅಹಲ್ಯೆಗೆ ಪತಿಯೆನಿಸುತ್ತಾನೆ.”
“ಇದು ಯುಕ್ತವಲ್ಲ. ಮಾತ್ರವಲ್ಲ, ನಿನ್ನ ತೀರ್ಮಾನವೂ ಅನುಚಿತವಾದುದು. ಸ್ವಯಂವರದ ಸ್ಪರ್ಧೆಯಲ್ಲಿ ಅಕ್ಷರಾರ್ಥಕ್ಕೆ ಮಹತ್ತ್ವ. ಲೋಕಪ್ರದಕ್ಷಿಣೆಯನ್ನು ಅವನವನ ಶಕ್ತಿಯಿಂದ ಇತರರಿಗಿಂತ ಕ್ಷಿಪ್ರವಾಗಿ ಸಾಧಿಸಬೇಕೆಂಬುದು ಲಕ್ಷ್ಯವೇ ಹೊರತು ಉಪಾಯಾಂತರದಿಂದ ಅಲ್ಲ. ಎಂಬಲ್ಲಿ ನಾನೇ ಮೊದಲಿಗ. ಆದರೆ ನೀನು ಬೇರೇನೋ ಹೇಳುತ್ತಿರುವೆ. ಅಥವಾ ಪಣವನ್ನು ನಿರ್ಣಯಿಸುವಾಗಲೇ ಯುಕ್ತಿಯಿಂದ ಸಾಧಿಸಬಹುದು ಅನ್ನುವುದನ್ನು ಹೇಳಬೇಕಿತ್ತು, ಇದೀಗ ವಂಚಿಸಿದಂತಾಗುತ್ತದೆ.”
“ಇಂದ್ರ, ನೀನು ತಪ್ಪಾಗಿ ತಿಳಿದಿದ್ದೀಯೆ. ಪಣವನ್ನು ಸಾಧಿಸಿ ಅಹಲ್ಯೆಯನ್ನು ವರಿಸಿ ಎಂದಾಗ ನಿಮ್ಮ ನಿಮ್ಮ ದೇಹ ಸಾಮಥ್ರ್ಯ ಮಾತ್ರವಲ್ಲ ಬೌದ್ಧಿಕ ಸಾಮಥ್ರ್ಯವನ್ನೂ ವಿನಿಯೋಗಿಸಿಕೊಳ್ಳಿ ಎಂದೇ ಅರ್ಥವಲ್ಲವೆ? ನೀನು ಭೌತಿಕಬಲವನ್ನು ಆಶ್ರಯಿಸಿದೆ. ಅವನು ಬುದ್ಧಿಯನ್ನು. ಬ್ರಹ್ಮದೇವ, ನಾರದಾದಿಗಳು ಇದಕ್ಕೆ ಸಮ್ಮತಿಸಿದ್ದಾರೆ. ದಯವಿಟ್ಟು ವಿವೇಚಿಸು. ಕುಪಿತನಾಗಬೇಡ.”
ಮುದ್ಗಲನ ಮಾತುಗಳು ನನ್ನ ಅಸಮಾಧಾನವನ್ನು ಹೆಚ್ಚಿಸಿದವಾದರೂ, ವಾದಿಸಿ ಫಲವಿಲ್ಲ ಎಂಬುದನ್ನು ಸಾರುತ್ತಿದ್ದವು. ತಪಃಶಕ್ತಿಯುಳ್ಳ ಮುನಿಗಳಲ್ಲಿ ದೇವತೆಗಳಾದರೂ ನಾಲಗೆಯನ್ನು ನಿಯಂತ್ರಿಸಿಕೊಳ್ಳುವ ಅನಿವಾರ್ಯ ಇತ್ತು. ನಾನು ಮಾತನ್ನು ಮುಂದುವರಿಸಲಿಲ್ಲ. ಆದರೆ ಗೌತಮನ ಬುದ್ಧಿವಂತಿಕೆಯ ನಗೆ ಮಾತ್ರ ನನ್ನ ಅಂತರಂಗದಲ್ಲಿ ಕ್ರೋಧದ ಕಿಡಿಯನ್ನು ಹೊತ್ತಿಸಿತು. ‘ಒಳ್ಳೆಯದು’ ಎಂದಷ್ಟೇ ನುಡಿದು ಹಿಂದಿರುಗಿದೆ.
ಹಿಂದೆ ತಿರುಗಿದೆ ನಿಜ. ನನ್ನ ಕಣ್ಣುಗಳು ಮಾತ್ರ ಮನಸೂರೆಗೊಂಡ ಆ ಚೆಲುವೆ ಅಹಲ್ಯೆಯ ಸುಳಿವೇನಾದರೂ ಕಾಣುವುದೇನೊ ಎಂಬ ನಿರೀಕ್ಷೆಯಲ್ಲಿ ಆಶ್ರಮದ ದಿಕ್ಕಿನತ್ತಲೇ ನೆಟ್ಟಿದ್ದವು. ಇಲ್ಲವೇ ಇಲ್ಲ. ಅವಳೆಲ್ಲಿದ್ದಳೋ ಏನೋ. ಕೊನೆಗೊಮ್ಮೆ ವಿದಾಯ ಹೇಳುವುದಕ್ಕೂ ಅವಕಾಶವಿಲ್ಲದೇ ಹೋಯಿತು. ನಿರಾಶೆಯಿಂದ ದೂರ ಸರಿದೆ. ಕಾಣದಿದ್ದರೂ ಮನಸ್ಸು ಅವಳನ್ನೇ ಧ್ಯಾನಿಸುತ್ತಿದ್ದವು.
ತ್ರಿಲೋಕಾಧಿಪತಿಯಾದರೇನು, ಅವಳನ್ನು ಹೊಂದಲಾಗದೇ ಹೋದೆನಲ್ಲ ಎಂಬ ದುಗುಡ ನನ್ನನ್ನಾವರಿಸಿತ್ತು. ಹುಂ. ಆ ಗೌತಮ, ವೇದಜಡ, ಅವಳನ್ನು ವರಿಸುವ ಭಾಗ್ಯವನ್ನು ಪಡೆದನಲ್ಲ! ನನ್ನ ಮೇಲೆಯೇ ಮನಸ್ಸಿಟ್ಟವಳಂತೆ ಇದ್ದಳು. ನನ್ನನ್ನು ಮದುವೆಯಾಗಿ ಸ್ವರ್ಗದ ಸುಖವನ್ನು ನಿರಂತರ ಅನುಭವಿಸಬೇಕಿದ್ದ ಆ ಸುಕೋಮಲೆ ಗೌತಮನ ಕುಟೀರದ ಕಸಗುಡಿಸುವ ದುಃಸ್ಥಿತಿ ಉಂಟಾಯಿತಲ್ಲ?
ಹೀಗೆಲ್ಲ ಚಿಂತಿಸುತ್ತ ಇದ್ದಂತೆ ಅಹಲ್ಯೆಯ ಸೌಂದರ್ಯದ ಸ್ಥಾನದಲ್ಲಿ ವಂಚಿತನಾದೆ ಎಂಬ ಭಾವನೆ ಬಲಿಯುತ್ತಿತ್ತು. ಅವಳಿಗೆ ವರಣ ಮಾಲಿಕೆಯನ್ನು ಒಲಿದವನ ಕೊರಳಿಗೆ ತೊಡಿಸುವ ಸ್ವಾತಂತ್ರ್ಯವಿದ್ದಿದ್ದರೆ ನನ್ನನ್ನೇ ಆರಿಸುತ್ತಿದ್ದಳು. ಅದಾಗದೇ ಹೋಯಿತು. ಇದಕ್ಕೆ ಕಾರಣ ಆ ಮುದ್ಗಲನ ಸಂಚು. ಗೌತಮನಿಗೆ ಬುದ್ಧಿವಂತಿಕೆ ಹೇಳಿಕೊಟ್ಟವನೂ ಅವನೇ ಇರಬೇಕು. ಆ ಗೌತಮ, ಅವಳನ್ನು ಒಲಿಸಿಕೊಳ್ಳುವ ಯೋಗ್ಯತೆ ಇಲ್ಲದವನು ಅವಳ ತಂದೆಯ ಕಾರಣದಿಂದ ಗಂಡನೆನಿಸಿಬಿಟ್ಟ! ಹೆಣ್ಣಿನ ಮನಸ್ಸನ್ನು ಗೆಲ್ಲಲಾಗದಿದ್ದರೆ ಅವಳ ತಂದೆಯ ಕೃಪೆಯಿದ್ದರೂ ಸಾಕು ಎಂದಾಯಿತು. ಅಬ್ಬಾ ಈ ಮುನಿಗಳ ತಂತ್ರವೇ! ನನ್ನನ್ನು ಬರಮಾಡಿ ಆಸೆ ಹುಟ್ಟಿಸಿ ವಂಚಿಸಿದರಲ್ಲ! ಇಬ್ಬರೊಂದಾಗಿ. ಗೌತಮನಿಗಿಂತ ನಾನು ಬುದ್ಧಿಹೀನ ಎಂಬಂತೆ ಲೋಕದಲ್ಲಿ ಪ್ರಚಾರವನ್ನು ಮಾಡಿದರು. ಆತ್ಮಾಭಿಮಾನವುಳ್ಳವನಿಗೆ ಇದನ್ನೆಲ್ಲ ಸಹಿಸುವುದು ಕಷ್ಟ. ಛೇ… ಏನು ಮಾಡಲಿ?
ನನ್ನನ್ನು ಅಹಲ್ಯೆ ಮೆಚ್ಚಿಯೂ ವರಿಸಲಾಗದ ಸ್ಥಿತಿಯ ಕುರಿತು ಅಸಹಾಯಕತೆ, ಪಣವನ್ನು ಬುದ್ಧಿವಂತಿಕೆಯಿಂದ ಗೆದ್ದ ಗೌತಮನ ಕುರಿತು ಅಸಹನೆ, ಮುದ್ಗಲ ಉಪಾಯಾಂತರದಿಂದ ಮಗಳನ್ನು ನನಗೆ ಕೊಡದೆ ವಂಚಿಸಿದ ಬಗ್ಗೆ ಆಕ್ರೋಶ ಎಲ್ಲ ಮುಪ್ಪುರಿಗೊಂಡು ನನ್ನನ್ನು ತಿನ್ನುತ್ತಿದ್ದವು. ಇಲ್ಲ, ಇದನ್ನು ಹೀಗೆಯೇ ಬಿಡಲಾಗದು ಎಂಬ ಛಲವೊಂದು ತಲೆಯೆತ್ತಿತು. ಅವರಿಗೆ ಮರೆಯಲಾಗದ ಪಾಠವೊಂದನ್ನು ಕಲಿಸಬೇಕು. ಅಹಲ್ಯೆಯ ಚೆಲುವಿಗೂ, ಒಲವಿಗೂ ಮಾರ್ದನಿಯಾಗಬೇಕು. ಅಂತಹ ಒಂದು ಸಂದರ್ಭವು ಒದಗುವವರೆಗೆ ಕಾಯಬೇಕು. ಅಥವಾ ನಾನೇ ಉಂಟುಮಾಡಬೇಕು. ಆದರೆ ಹೇಗೆ ಎಂಬುದು ಹೊಳೆಯಲಿಲ್ಲ. ಇದನ್ನೆಲ್ಲ ಮತ್ತೆ ಮತ್ತೆ ಯೋಚಿಸುತ್ತ ಅಮರಾವತಿಗೆ ಮರಳಿ ಬಂದೆ.