ಚಿತ್ರ ಬರೆಯುವ ಕೆಲಸ ಮುಗಿಸಿ, ಬಿಡದಿಗೆ ಬಂದಾಗ ಆ ಓಟೆಯ ನೆನಪು ಬಂತು. ಅದನ್ನು ತೆಗೆದು ಪರಿಶೀಲಿಸಿದ. ಅದು ಬರೇ ಓಟೆಯಾಗಿರಲಿಲ್ಲ. ಅದರ ಒಳಗೊಂದು ಓಲೆಯೂ ಇತ್ತು. ಅದರಲ್ಲಿ ಗೂಢವಾದ ಅಕ್ಷರಗಳಲ್ಲಿ ಏನೋ ಬರೆದಿತ್ತು. ಅದಾದರೂ ಚಿತ್ರಕನ ಕುತೂಹಲಕ್ಕೆ ಕಾರಣವಾಗುತ್ತಿರಲಿಲ್ಲ. ಅದರಲ್ಲಿ ಸುಂದರವಾದ ನಕ್ಷೆಗಳಿದ್ದವು. ಒಂದು ಭವ್ಯ ಸೌಧದ ಚಿತ್ರವನ್ನೂ ಬರೆದಿತ್ತು. ಮತ್ತೆಮತ್ತೆ ನೋಡಿದಾಗ ಅದು ವಾರಣಾವತದ ಅರಮನೆಯ ಚಿತ್ರವೆಂದು ಸ್ಫುಟವಾಯಿತು.
ಭಟನಾಯಕ ಇನ್ನೇನು ಹೊರಡಬೇಕು, ಅಷ್ಟರಲ್ಲಿ ಕುಳ್ಳ ಅವನನ್ನು ಒಳಗೆ ಕರೆದ.
“ಏನು ಪ್ರಭೋ”
“ಭಟನಾಯಕ, ಆ ಚಿತ್ರಕನಲ್ಲಿ ಇರುವುದು ಕೇವಲ ರಹಸ್ಯದ ಮಾತು ಎಂದಾದರೆ ಅವನ ಬಾಯಿ ಮುಚ್ಚಿಸು. ಆದರೆ, ನನಗೇನೋ ಸಂಶಯವಿದೆ. ಇಲ್ಲಿಂದ ರಾಜಕುಮಾರ ಪುರೋಚನನಿಗೆ ಒಂದು ಓಲೆಯನ್ನು ಕಳುಹಿಸಿದ್ದ. ಅದರಲ್ಲಿ ವಾರಣಾವತದ ಗೋಪ್ಯ ವಿಚಾರಗಳಿವೆ. ಅತ್ಯಂತ ಜತನವಾಗಿ ಕಾಪಿಟ್ಟುಕೊಳ್ಳಬೇಕಾದ ಆ ಓಲೆಯನ್ನು ಯಾರೋ ಕದ್ದಿದ್ದಾರೆ. ವಾರಣಾವತಕ್ಕೆ ಬಂದ ಕೆಲಸಗಾರರಲ್ಲಿ ಯಾರೋ ಒಯ್ದಿರಬೇಕು ಎಂದು ಪುರೋಚನ ನಿನ್ನೆಯಷ್ಟೇ ಸುದ್ದಿ ಕಳುಹಿಸಿದ್ದ. ಆ ಓಲೆಯಲ್ಲಿ ನಕ್ಷೆಗಳು, ಚಿತ್ರಗಳೂ ಇವೆಯಂತೆ.
ಲೇಖನ ಗೂಢಲಿಪಿಯಲ್ಲಿರುವುದರಿಂದ ಯಾರಿಗೂ ಅದು ಸುಲಭದಲ್ಲಿ ತಿಳಿಯಲಾರದು. ಆದರೆ ಗೂಢಚರ್ಯೆ ಬಲ್ಲವರು ಸುಲಭವಾಗಿ ಓದಬಹುದು.
ಅದೇನಾದರೂ ಪುರೋಚನನ ನಿರ್ಲಕ್ಷ್ಯದಿಂದ ಚಿತ್ರಕನ ಕೈ ಸೇರಿದ್ದರೆ ಬಹಳ ಅಪಾಯ. ಅದನ್ನು ಸರಿಯಾಗಿ ತಿಳಿದುಕೊಳ್ಳಿ. ಅವಸರ ಮಾಡಿ ಚಿತ್ರಕನನ್ನು ಮುಗಿಸಿದರೆ, ಓಲೆಯ ವಿವರ ತಿಳಿಯಲಾರದು. ವಾರಣಾವತದ ನಮ್ಮ ಯೋಜನೆ ಕಾರ್ಯರೂಪಕ್ಕೆ ಬರುವ ಮೊದಲು ಆ ಓಲೆ ನಮ್ಮ ಕೈಸೇರಬೇಕು. ಸದ್ಯ ಅವನೊಬ್ಬನಿಗೆ ಇದು ಗೊತ್ತಿರುವುದೋ, ಅಥವಾ ಇನ್ನಾರಲ್ಲಾದರೂ ಬಾಯಿ ಬಿಟ್ಟಿದ್ದಾನೋ ಎನ್ನುವುದೂ ಗೊತ್ತಾಗಬೇಕು. ಇದೆಲ್ಲ ತುಂಬ ಗೋಪ್ಯವಾಗಿ ನಡೆಯಬೇಕು.
ಅವನು ಎಲ್ಲಿದ್ದರೂ ಜೀವಸಹಿತ ಹಿಡಿದು ತನ್ನಿ. ಇಲ್ಲಿಗೆಲ್ಲ ತರಬೇಡಿ. ಬಹಿರಂಗವಾದರೆ ಕಷ್ಟವಾಗುತ್ತದೆ. ಅದಕ್ಕಾಗಿ ಅವನನ್ನು ಆಗ ಹೋಗಲು ಬಿಟ್ಟೆ. ಅವನು ಸೆರೆ ಸಿಕ್ಕಿದೊಡನೆ ನಗರದ ಹೊರಗೆ ಹಳೆಯ ಸೌಧವಿದೆಯಲ್ಲ, ಅಲ್ಲಿಗೆ ತಂದು ವರದಿ ಮಾಡಿ. ಎಚ್ಚರವಿರಲಿ. ಅರಮನೆಯ ರಕ್ಷಕ ಭಟರನ್ನು ಇದಕ್ಕೆ ನಿಯೋಜಿಸಕೂಡದು. ಯುವರಾಜರ ಅಥವಾ ಸಿಂಧು ದೇಶದ ಭಟರನ್ನು ಇದಕ್ಕಾಗಿ ಬಳಸಿ. ಎಷ್ಟೇ ಪರಿಶ್ರಮವಾದರೂ ಚಿಂತಿಲ್ಲ. ಆ ಚಿತ್ರಕನನ್ನು ಮೊದಲು ಹಿಡಿಯಿರಿ”
ಕುಳ್ಳ ಇಷ್ಟು ಹೇಳಿ ಒಳಗೆ ಹೋದ.
ಭಟನಾಯಕ ಹೊರಗೆ ಬಂದ.
ಅವನ ಕೈಕೆಳಗೆ ಹತ್ತಾರು ಯೋಧರಿದ್ದರು.
ಅವರನ್ನು ಕರೆದು ಸೂಚನೆ ಕೊಟ್ಟ. ಒಂದಿನಿತು ತಪ್ಪಾದರೂ ತಲೆದಂಡ ಎಂದು ಹೆದರಿಸಿದ.
ಅವರೆಲ್ಲ ಚಿತ್ರಕನನ್ನು ಹುಡುಕುವುದಕ್ಕೆಂದು ಚದುರಿದರು. ಭಟನಾಯಕನೂ ಕುದುರೆ ಏರಿದ.
ಚಿತ್ರಕ ಆ ಭವನದಿಂದ ಹೊರಗೆ ಬಂದವನು ಮುಖ್ಯ ಬೀದಿಯಲ್ಲಿ ಸಾಗಿ, ನಗರದಿಂದ ಹೊರಗೆ ಬಂದ. ಅವನ ಮನೆಯತ್ತ ಸಾಗುತ್ತಿರುವಾಗ ಎಲ್ಲಿಯೋ ಏನೋ ತಪ್ಪಾಗಿದೆ ಎಂದು ಅವನ ಮನಸ್ಸು ಎಚ್ಚರಿಸುವುದಕ್ಕೆ ತೊಡಗಿತು. ಚಿತ್ರಕನಲ್ಲಿ ಲೋಕಜ್ಞಾನ ಕಡಮೆಯಿದ್ದರೂ, ಅರಿಯದ ಒಂದು ಅಂಜಿಕೆ, ಕುಳ್ಳನ ವರ್ತನೆಯನ್ನು ಕಂಡಾಗ ಅವನಲ್ಲಿ ಕಾಣಿಸಿಕೊಂಡಿತ್ತು. ಅದೇ ಅವನು ಜಾಗರೂಕನಾಗುವಂತೆ ಮಾಡಿತ್ತು. ಆ ಜಾಗರೂಕತೆ ತತ್ಕಾಲಕ್ಕೆ ಅವನ ಜೀವವನ್ನು ಉಳಿಸಿತ್ತು. ಯಾಕೆಂದರೆ ಅವನ ಉಡುಪಿನ ಒಳಗೆ ಒಂದು ಓಲೆ ಅಡಗಿ ಕುಳಿತಿತ್ತು. ಆ ಓಲೆ ಬಹಿರಂಗಕ್ಕೆ ಬಂದರೆ ಏನು ಅನಾಹುತವಾಗಲಿತ್ತೋ.
ಅದರಲ್ಲಿ ಏನು ವಿವರ ಇದೆ ಎಂಬುದು ಚಿತ್ರಕನಿಗೆ ಅರ್ಥವಾಗಿರಲಿಲ್ಲ. ಅದೊಂದು ಗೂಢಲಿಪಿಯಲ್ಲಿ ಬರೆದ ಓಲೆ.
ವಾರಣಾವತದ ಅರಮನೆಯ ಒಳ ಓವರಿಯಲ್ಲಿ ಅವನಿಗೆ ಸಿಕ್ಕಿತ್ತು. ಅದು ಸುಂದರವಾದ ಬಿದಿರಿನ ಓಟೆಯಲ್ಲಿತ್ತು.
ಅದು ರಹಸ್ಯವೆಂದಾಗಲಿ, ಅದರಲ್ಲಿರುವ ವಿವರ ಬಹಿರಂಗವಾದರೆ ಆಪತ್ತು ಎಂದಾಗಲಿ ಆಗ ಚಿತ್ರಕನಿಗೆ ಗೊತ್ತಾಗಲಿಲ್ಲ. ಅದನ್ನಿಟ್ಟಿದ್ದ ಓಟೆ ಚಂದ ಕಂಡಿತು. ಆ ಓಟೆ ಒಂದು ಕೊಳಲಿನಂತೆ ಇತ್ತು. ಆದರೆ ಅದರಲ್ಲಿ ಉಸಿರು ಊದುವುದಕ್ಕೆ ರಂಧ್ರಗಳಿರಲಿಲ್ಲ. ಇದೆಂತಹ ವಿಚಿತ್ರ ಕೊಳಲು?
ಅದಕ್ಕಾಗಿ ಅದನ್ನು ಎತ್ತಿಕೊಂಡಿದ್ದ. ಅವನು ಚಿತ್ರಗಾರನಷ್ಟೆ? ಇದೇನೋ ವಿಶೇಷವಾದುದು ಎಂದು ತೋರಿದ್ದರಿಂದ ಅದನ್ನು ಎತ್ತಿಟ್ಟಿದ್ದ. ಅರಮನೆಯಿಂದ ಬಿಡದಿಗೆ ಹಿಂತಿರುಗುವಾಗ ಅದನ್ನು ಕಾವಲಿದ್ದ ಭಟರಿಗೆ ಒಪ್ಪಿಸಬೇಕು ಎಂದು ಯೋಚಿಸಿದ್ದ. ಆದರೆ ಹೊರಡುವಾಗ ಮರೆತ. ಅದು ಅವನ ಉಡುಪಿನಲ್ಲಿ ಭದ್ರವಾಗಿ ಉಳಿಯಿತು.
ಚಿತ್ರ ಬರೆಯುವ ಕೆಲಸ ಮುಗಿಸಿ, ಬಿಡದಿಗೆ ಬಂದಾಗ ಆ ಓಟೆಯ ನೆನಪು ಬಂತು. ಅದನ್ನು ತೆಗೆದು ಪರಿಶೀಲಿಸಿದ. ಅದು ಬರೇ ಓಟೆಯಾಗಿರಲಿಲ್ಲ. ಅದರ ಒಳಗೊಂದು ಓಲೆಯೂ ಇತ್ತು. ಅದರಲ್ಲಿ ಗೂಢವಾದ ಅಕ್ಷರಗಳಲ್ಲಿ ಏನೋ ಬರೆದಿತ್ತು.
ಅದಾದರೂ ಚಿತ್ರಕನ ಕುತೂಹಲಕ್ಕೆ ಕಾರಣವಾಗುತ್ತಿರಲಿಲ್ಲ. ಅದರಲ್ಲಿ ಸುಂದರವಾದ ನಕ್ಷೆಗಳಿದ್ದವು. ಒಂದು ಭವ್ಯ ಸೌಧದ ಚಿತ್ರವನ್ನೂ ಬರೆದಿತ್ತು. ಮತ್ತೆಮತ್ತೆ ನೋಡಿದಾಗ ಅದು ವಾರಣಾವತದ ಅರಮನೆಯ ಚಿತ್ರವೆಂದು ಸ್ಫುಟವಾಯಿತು.
ಆದರೂ ಇದೇನು ಎಂದು ಅವನಿಗೆ ತಿಳಿಯಲಿಲ್ಲ.
ಯಾವಾಗ ಅರಮನೆಯ ಗೋಡೆ, ನೆಲಗಳು ಕೃತಕವೆಂದು ತಿಳಿಯಿತೋ ಆ ಕ್ಷಣ ಇದು ರಹಸ್ಯ ಎಂದೂ ತಿಳಿಯಿತು.
ಆ ಗಳಿಗೆಯಿಂದ ಕೈಯಲ್ಲಿ ಬೆಂಕಿಯ ಕೆಂಡವನ್ನು ಇಟ್ಟುಕೊಂಡ ಹಾಗಾಯಿತು. ಅದನ್ನು ಹಿಂದಿರುಗಿಸಿದರೆ ಇದನ್ನು ಒಯ್ದದ್ದೂ ಅಪರಾಧವೆಂದು ಭಾವಿಸಿ, ಶಿಕ್ಷಿಸಿದರೆ ಎಂದು ಅಂಜಿದ ಚಿತ್ರಕ, ಯಾರಿಗೂ ಆ ವಿಚಾರವನ್ನು ಹೇಳದೆ ಓಟೆಯನ್ನು ಓಲೆಯ ಸಹಿತ ಅಡಗಿಸಿಟ್ಟ. ಅದು ಅವನ ಜತೆಗೆ ವಾರಣಾವತದಿಂದ ಮನೆಗೂ ಬಂತು.
ಚಾರುವಿಗೂ ಓಲೆಯ ವಿಚಾರವನ್ನು ತಿಳಿಸದ ಚಿತ್ರಕ, ಆಚಾರ್ಯರಿಗೆ ಸ್ವತಃ ಅದನ್ನು ಒಪ್ಪಿಸಬೇಕೆಂದಿದ್ದ. ಒಪ್ಪಿಸುತ್ತಿದ್ದ ಕೂಡ. ಆದರೆ ಅವರನ್ನು ಕಾಣುವುದಕ್ಕಾಗಲಿಲ್ಲ. ತನ್ನನ್ನು ವಿಚಾರಿಸಿದ ಕುಳ್ಳ ವ್ಯಕ್ತಿಯಲ್ಲಿ ಏನೋ ಸಂಶಯ. ಓಲೆಯ ವಿಚಾರ ಹೇಳುವ ಧೈರ್ಯವೂ ಬರಲಿಲ್ಲ. ಹಾಗಾಗಿ ಅದಿನ್ನೂ ಚಿತ್ರಕನ ಕೈಯಲ್ಲಿಯೇ ಉಳಿದಿತ್ತು. ಇದನ್ನೆಲ್ಲ ಯೋಚಿಸುತ್ತ, ಇನ್ನೊಮ್ಮೆ ಆಚಾರ್ಯರನ್ನೇ ಕಾಣುವುದೇ ಅಥವಾ ಏನಾದರೂ ಆಗಲಿ ಎಂದು ಸುಮ್ಮನಿರುವುದು ಯುಕ್ತವೇ ಎಂದು ಚಿಂತಿಸುತ್ತ ಚಿತ್ರಕ ಮನೆ ಸೇರಿದ. ಆಗಲೇ ಕತ್ತಲಾವರಿಸುತ್ತಿತ್ತು.
ಚಾರುವಿಗೆ ಎಷ್ಟು ಬೇಕೋ ಅಷ್ಟನ್ನೇ ಹೇಳಿದ.
ಆ ದಿನ ಚಿತ್ರಕನ ಸಂಸಾರ ಬೇಗನೇ ಉಂಡು, ಮಲಗಿತು.
ಇನ್ನೇನು ಕಣ್ಣಿಗೆ ನಿದ್ರೆ ಹಿಡಿಯಬೇಕು ಅನ್ನುವಾಗ, ಚಾರು ಮೆಲ್ಲನೆ ಅವನ ತೋಳನ್ನು ಮುಟ್ಟಿದಳು. ಅವಳ ಸ್ಪರ್ಶದಲ್ಲಿ ಮುನ್ನೆಚ್ಚರಿಕೆಯ ಸಂಕೇತವನ್ನು ಗ್ರಹಿಸಿ, ಪಿಸುದನಿಯಲ್ಲಿ ಏನು ಎಂದು ಕೇಳಿದ.
“ಚಿತ್ರಕ, ಮನೆಯ ಹೊರಗೆ ಯಾರೋ ನಡೆದಾಡುತ್ತಿದ್ದಾರೆ. ಕಿವಿಗೊಟ್ಟರೆ, ರಕ್ಷಕ ಭಟರ ಹೆಜ್ಜೆಯ ಸದ್ದಿನಂತೆ ಕೇಳುತ್ತದೆ. ನನಗೇನೋ ಭಯವಾಗುತ್ತದೆ. ನೀನು ವಾರಣಾವತದ ವಿಚಾರದಲ್ಲಿ ಮಾಡಿದ್ದು ತಪ್ಪಾಯಿತೇನೋ. ನಿನ್ನನ್ನು ವಿಚಾರಿಸುವುದಕ್ಕೆಂದು ಭಟರು ಬಂದರೋ ಏನೋ. ಒಟ್ಟಿನಲ್ಲಿ ಸಂಕಟಕ್ಕೆ ಸಿಕ್ಕಿಕೊಂಡೆವು ಅನಿಸುತ್ತದೆ” ಅವಳೂ ಪಿಸುದನಿಯಲ್ಲಿ ನುಡಿದಳು.
ಚಿತ್ರಕನ ನಿದ್ರೆಯ ಮಂಪರು ಹಾರಿಹೋಯಿತು.
ಇದೇನು ಆಪತ್ತು ಬಂತಪ್ಪ?
ಯಾಕೆ ವಾರಣಾವತದ ವಿಚಾರವನ್ನು ಹೇಳುವುದಕ್ಕೆ ಹೋದೆನೊ! ಅದರಿಂದಲೇ ಇರಬೇಕು, ರಕ್ಷಕ ಭಟರು ನನ್ನನ್ನು ಹುಡುಕಿ ಬಂದಿರಬೇಕು. ಬಂಧಿಸಿ ಸೆರೆಮನೆಗೆ ತಳ್ಳುತ್ತಾರೋ ಏನೋ. ದೇವರೇ, ಈ ಕಷ್ಟದಿಂದ ಪಾರು ಮಾಡಪ್ಪ ಎಂದು ಪ್ರಾರ್ಥಿಸುತ್ತ ಎದ್ದ ಚಿತ್ರಕ. ಬಾಗಿಲ ಪಕ್ಕದಲ್ಲಿ ಒಂದು ಕಿರುಗವಾಕ್ಷಿ ಇತ್ತು. ಸದ್ದಾಗದಂತೆ ಅದರ ಕದವನ್ನು ಕೊಂಚವೇ ಓಸರಿಸಿ ನೋಡಿದ. ಚೌತಿಯ ಚಂದ್ರನ ಕ್ಷೀಣವಾದ ಬೆಳಕು ಹಬ್ಬಿತ್ತು. ಆ ಬೆಳಕಿನಲ್ಲಿ ಗಮನಿಸಿದರೆ, ಒಬ್ಬ ರಕ್ಷಕ ಭಟ ಎಚ್ಚರಿಕೆಯಿಂದ ಬಲು ನಿಧಾನವಾಗಿ ಅಂಗಳದಲ್ಲಿ ನಡೆದು ಬರುತ್ತಿದ್ದುದು ಕಾಣಿಸಿತು. ಅವನು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ, ಆ ಕಡೆ ಈ ಕಡೆ ಪರೀಕ್ಷಾರ್ಥ ನೋಡುತ್ತಲೂ ಇದ್ದ. ಅವನು ಬಂಧಿಸುವುದಕ್ಕೆ ಬಂದ ಭಟನಂತೆ ಕಾಣುತ್ತಿರಲಿಲ್ಲ. ಹಾಗೆ ಬರುವವನಾದರೆ ಇಷ್ಟೆಲ್ಲ ಮುನ್ನೆಚ್ಚರಿಕೆ ವಹಿಸಬೇಕಾಗಿ ಇರಲಿಲ್ಲ.
ಚಿತ್ರಕ ನೋಡುತ್ತಿದ್ದಂತೆ ಆ ಭಟ ಬಾಗಿಲನ್ನು ಸಮೀಪಿಸಿ, ಮೆಲ್ಲನೆ ಬೆರಳಿನಿಂದ ಕದವನ್ನು ತಟ್ಟಿದ. ಅತ್ಯಂತ ಕ್ಷೀಣವಾದ ಸ್ವರದಲ್ಲಿ, “ಚಿತ್ರಕ, ಚಿತ್ರಕ, ಮಲಗಿದ್ದೀಯೇನು?” ಎಂದು ಕೇಳಿದ. ಅಬ್ಬಾ! ಅವನು ಶಂಖ. ಚಿತ್ರಕನಿಗೆ ಪರಿಚಿತ. ದೂರದ ಬಂಧುವೂ ಹೌದು. ಈಗ ಧೈರ್ಯ ತಾಳಿದ ಚಿತ್ರಕ ಬಾಗಿಲ ಕೀಲನ್ನು ಸರಿಸಿದ.
“ಏನಿದು ಶಂಖ? ನಮ್ಮನ್ನು ಹೆದರಿಸಿಬಿಟ್ಟೆಯಲ್ಲ? ಈ ಹೊತ್ತಿಗೆ ಯಾಕೆ ಬಂದೆ?” ಎಂದು ಪ್ರಶ್ನಿಸಿದ ಚಿತ್ರಕ.
“ಹಾ..ಹಾ..ಮೆಲ್ಲ..ಮೆಲ್ಲ.. ಗಟ್ಟಿಯಾಗಿ ಕೂಗಬೇಡ. ತೀರ ಅನಿವಾರ್ಯವಲ್ಲದಿದ್ದರೆ ಹೀಗೆ ಬರುವುದುಂಟೆ? ಬಹು ಗಂಭೀರ ವಿಚಾರವಿದೆ. ನನಗೊಂದಿಷ್ಟು ನೀರು ಕೊಡು”
ಚಾರು ತಣ್ಣನೆಯ ನೀರನ್ನು ತಂಬಿಗೆಯೊಂದರಲ್ಲಿ ತಂದಿಟ್ಟಳು.
ಅವಳಿಗೂ ಶಂಖ ಪರಿಚಿತನೇ. ತಂಬಿಗೆಯನ್ನೆತ್ತಿ ಒಂದಿಷ್ಟು ನೀರನ್ನು ಗಟಗಟನೆ ಕುಡಿದ ಶಂಖ, ಅಲ್ಲೇ ನೆಲದ ಮೇಲೆ ಕುಳಿತ.
“ಚಿತ್ರಕ, ಇಂದು ಶಕುನಿಯ ಸೌಧಕ್ಕೆ ಹೋಗಿದ್ದೆಯೇನು?”
ಚಿತ್ರಕ ಬೆರಗಾದ.
ಅದು ಶಂಖನಿಗೆ ತಿಳಿದುದಕ್ಕಲ್ಲ. ತಾನು ಹೋದುದು ಶಕುನಿಯ ಮನೆಗೆ ಎಂದು ಅವನಿಗೇ ತಿಳಿದಿರಲಿಲ್ಲ. ಯಾರೋ ಆಚಾರ್ಯರ ನಿಕಟವರ್ತಿ ಎಂದು ತಾನು ಭಾವಿಸಿದವನು ಶಕುನಿಯೆ? ಅವನ ಕುರಿತು ಜನರು ಮಾತಾಡುವುದನ್ನು ಚಿತ್ರಕ ಕೇಳಿದ್ದ. ನೋಡಿದ್ದಿರಲಿಲ್ಲ. ತನಗಾಗದವರನ್ನು ಸದ್ದಿಲ್ಲದೆ ಬಗ್ಗುಬಡಿಯುವ ತಂತ್ರಗಾರ ಅನ್ನುತ್ತಿದ್ದರು. ತಾನು ಅವನನ್ನು ಕಂಡುದೇ?
“ಆಚಾರ್ಯ ಭೀಷ್ಮರನ್ನು ಕಾಣುವ ಉದ್ದೇಶಕ್ಕೆ ಹೋಗಿದ್ದೆ. ಯಾರೋ ಯೋಧನೊಬ್ಬ ನನ್ನನ್ನು ಸೌಧಕ್ಕೆ ಕರೆದೊಯ್ದ. ಅದು ಶಕುನಿಯ ಭವನವೆಂದು ನನಗೆ ಗೊತ್ತಾಗಲಿಲ್ಲ. ನಾನೇನೂ ತಪ್ಪು ಮಾಡಿಲ್ಲವಲ್ಲ? ಈಗೇನಾಯಿತು? ನೀನೇಕೆ ಈ ರಾತ್ರಿಯ ಹೊತ್ತು ಇಲ್ಲಿಗೆ ಓಡಿಬಂದೆ?” ಚಿತ್ರಕ ಕೇಳಿದ.
ಶಂಖ ಒಂದು ಕ್ಷಣ ಮೌನವಾಗಿದ್ದ. ಬಳಿಕ ಹೇಳಿದ,
“ಚಿತ್ರಕ, ನನ್ನಲ್ಲಿ ಗುಟ್ಟು ಮಾಡಬೇಡ. ಅಲ್ಲಿ ಹೋದವನು ಏನೋ ವಾರಣಾವತದ ರಹಸ್ಯವನ್ನು ಹೇಳಿದೆಯಂತೆ. ಅದೀಗ ನಿನ್ನ ತಲೆಯ ಮೇಲೆ ಬಂದಿದೆ. ನಿನ್ನ ಬಾಯಿ ಮುಚ್ಚಿಸಬೇಕು ಎಂದು ಶಕುನಿ ಆಜ್ಞೆ ಹೊರಡಿಸಿದ್ದಾನೆ. ನೀನು ಅಂತಹ ಸೂಕ್ಷ÷್ಮ ವಿಚಾರಗಳನ್ನು ರಾಜ ಪುರುಷರಲ್ಲಿ ನೇರವಾಗಿ ಮಾತನಾಡುವುದೆ? ಸದ್ಯ ನಿನ್ನ ಪರಿಚಿತರಾರೂ ಅಲ್ಲಿ ಇರಲಿಲ್ಲ. ಹಾಗಾಗಿ ಚಿತ್ರಕ ಎಂಬ ವ್ಯಕ್ತಿಯನ್ನು ಸಂದೇಹಿಸುತ್ತಿದ್ದಾರೆ. ಆದರೆ ವಾರಣಾವತಕ್ಕೆ ಹೋದ ಕೆಲಸಗಾರರಲ್ಲಿ ಒಬ್ಬ ಎಂದಾಗ ನನಗೆ ಅದು ನೀನು ಎಂಬುದು ಖಚಿತವಾಯಿತು. ಅವರಿಗೆ ನಿನ್ನ ವಿವರ ತಿಳಿದಿಲ್ಲ. ಇನ್ನೀಗ ರಾಜಧಾನಿಯ ಮನೆಮನೆಯನ್ನೂ ಹುಡುಕಿ ನೋಡುತ್ತಾರೆ.
ಅವರಲ್ಲಿ ಯಾರೊಬ್ಬನಿಗೆ ನಿನ್ನ ಕುರಿತು ತಿಳಿದಿದ್ದರೂ ಆಪತ್ತು ಖಂಡಿತ. ಅಲ್ಲಿಯೂ ಸುಳಿವು ಸಿಗದೆ ಹೋದರೆ ವಾರಣಾವತದ ಅರಮನೆಯ ಕೆಲಸಗಳಿಗೆ ಜನರನ್ನು ತಂದವರನ್ನು ವಿಚಾರಿಸುತ್ತಾರೆ. ನೀನು ಚಿತ್ರ ಬರೆಯಲು ಹೋದವನು ಎಂದು ಅವರಿಗೆ ತಿಳಿಯುವುದು ನಿಧಾನವಾದೀತು. ಆದರೆ ಇವತ್ತಲ್ಲ, ನಾಳೆ ಸಿಕ್ಕಿ ಬೀಳುವುದು ಖಚಿತ. ಯಾವುದಕ್ಕೂ ನೀನು ಕೆಲವು ತಿಂಗಳು ದೂರ ದೇಶಕ್ಕೆ ಹೋಗಿರುವುದು ಒಳ್ಳೆಯದು” ಶಂಖ ಎಚ್ಚರಿಸಿದ.
“ಅಯ್ಯೋ.. ನಾನೆಲ್ಲಿಗೆ ಹೋಗಲಯ್ಯ? ನನ್ನ ಸಂಸಾರದ ಗತಿ ಏನು? ಹಾಗೆ ಹೋದರೆ ಹಿಂದೆ ಬರುವ ಅವಕಾಶ ಸಿಗದೆ ಇದ್ದರೆ ನಾನೇನು ಮಾಡಲಿ?” ಚಿತ್ರಕ ಅಳುದನಿಯಲ್ಲಿ ನುಡಿದ.
“ಹೌದು ಶಂಖ. ಅವನೊಬ್ಬನನ್ನು ಎಲ್ಲಿಗೋ ಕಳುಹಿಸಿ ನಾವು ನೆಮ್ಮದಿಯಾಗಿರುವುದುಂಟೆ? ನಮಗಾದರೂ ಬೇರೆ ಯಾರಿದ್ದಾರೆ”? ಚಾರು ದನಿಗೂಡಿಸಿದಳು.
ಕೊಂಚ ಹೊತ್ತು ಯೋಚನೆ ಮಾಡಿ, ಶಂಖನೆಂದ, “ನೋಡೋಣ. ನಾನು ಅರಮನೆಯಲ್ಲಿ ನಡೆದ ವಿಚಾರಗಳನ್ನು ತಿಳಿದುಕೊಳ್ಳುತ್ತೇನೆ. ಅಲ್ಲಿ ನನಗೆ ಬೇಕಾದ ವಿಶ್ವಾಸಿಗಳಿದ್ದಾರೆ. ಇದು ಎಲ್ಲಿಗೆ ಮುಟ್ಟುತ್ತದೆ ಎಂದು ನನಗೆ ಗೊತ್ತಾಗದೆ ಇರಲಾರದು. ಏನಿದ್ದರೂ ನೀನು ಸ್ವಲ್ಪ ಕಾಲ ಊರು ಬಿಡಬೇಕಾದೀತು. ಅದಕ್ಕೆ ಸಿದ್ಧನಾಗಿರುವುದು ಒಳ್ಳೆಯದು. ಆದಷ್ಟು ಮನೆಯೊಳಗೆ ಇರು. ಹೊರಗೆ ಕಾಣಿಸಿಕೊಳ್ಳಬೇಡ”
ಶಂಖ ಬಂದ ಹಾಗೇ ಹೊರಟು ಹೋದ.
ಚಿತ್ರಕ ಮತ್ತು ಚಾರು ಮಾತಿಲ್ಲದೆ ಕುಳಿತಿದ್ದರು.
* * *
ಆ ಪ್ರಕರಣ ಶಂಖ ಊಹಿಸಿದ್ದಕ್ಕಿಂತಲೂ ಗಂಭೀರವಾಗಿತ್ತು.
ಶಕುನಿ ನಿಯೋಜಿಸಿದ ಭಟನಾಯಕ ಬಹಳ ಚಾಣಾಕ್ಷನಿದ್ದ.
ಅವನು ಮೊದಲು ಮಾಡಿದ ಕೆಲಸ ಹಸ್ತಿನಾವತಿಯ ಮನೆಮನೆಯ ಶೋಧವಲ್ಲ. ವಾರಣಾವತದ ಅರಮನೆಯ ಕೆಲಸಕ್ಕೆ ಕರ್ಮಿಗಳನ್ನು ಕರೆತಂದವರನ್ನು ಹಿಡಿದ. ಅವರನ್ನು ವಿಚಾರಿಸುವಾಗ ಒಂದು ದಿನ ಕಳೆದಿತ್ತು. ಚಿತ್ರಕನನ್ನು ಹಿಡಿಯುವುದಕ್ಕೆ ಆಜ್ಞೆಯಾದ ಮರುದಿನ ಸಾಯಂಕಾಲದ ಹೊತ್ತಿಗೆ ಭಟ ನಾಯಕನಿಗೆ ಸಣ್ಣಮಟ್ಟಿಗೆ ವಿವರ ಸಿಕ್ಕಿತು.
ಕೆಲಸಗಾರರಲ್ಲಿ ಚಿತ್ರಕ ಎಂಬವನೊಬ್ಬನಿದ್ದ. ಆದರೆ ಅವನು ಮುದುಕ. ಕೆಲಸಗಾರರಲ್ಲದೆ ಗೋಡೆಯ ಮೇಲೆ ಚಿತ್ರ ಬರೆಯುವುದಕ್ಕೆ ಒಬ್ಬ ಬಂದಿದ್ದನಂತೆ. ಅವನ ಹೆಸರೂ ಚಿತ್ರಕನೆಂದು. ಇಷ್ಟಾಗುವಾಗ ರಾತ್ರಿ ಮೀರಿತ್ತು. ಆದರೂ ಅವನನ್ನು ನಿಯೋಜಿಸಿದವರು ಯಾರು ಎಂದು ಶೋಧಿಸಿದ.
ಅದು ರಾಜಪುತ್ರ ದುಶ್ಶಾಸನನ ಭವನದಿಂದ ಯಾರೋ ನಿಯೋಜಿಸಿದ್ದರು ಎಂದು ಗೊತ್ತಾಯಿತು. ಇಷ್ಟಾದ ಬಳಿಕ ಚಿತ್ರಕನನ್ನು ಹಿಡಿಯುವುದು ಕಷ್ಟವೇನಲ್ಲ ಎಂದು ಭರವಸೆ ಬಂತು. ಆ ರಾತ್ರಿ ಕಳೆಯಿತು.
ಮರುದಿನ ಬೆಳಗಿನ ಹೊತ್ತು.
ಭಟ ನಾಯಕ ಶಕುನಿಯ ಓಲೆಯನ್ನು ಹೊತ್ತು ದುಶ್ಶಾಸನನ ಭವನಕ್ಕೆ ಹೋದ. ಅಲ್ಲಿ ಸೂಕ್ತ ವ್ಯಕ್ತಿಗಳನ್ನು ಕಂಡು, ಶಕುನಿಯ ಓಲೆಯನ್ನು ಹಸ್ತಾಂತರಿಸಿದ ಮೇಲೆ ಅವನಿಗೆ ಬೇಕಿದ್ದ ವ್ಯಕ್ತಿ ಸಿಕ್ಕಿದ.
ಅವನೇ ಚಿತ್ರಕನನ್ನು ನಿಯೋಜಿಸಿದವನು.
“ಅವನು ಭಿತ್ತಿಗಳಲ್ಲಿ ಚಿತ್ರ ಬರೆಯುವವನು. ಚೆನ್ನಾಗಿ ಬರೆಯುತ್ತಾನೆ ಎಂದು ಯಾರೋ ಹೇಳಿದರು. ಹಾಗಾಗಿ ಅವನನ್ನು ನೇಮಿಸಿದೆ. ಅಷ್ಟು ಬಣ್ಣದ ಚಿತ್ರಗಳನ್ನು ಗೋಡೆಗಳಲ್ಲಿ ಬರೆಯಿಸಿದರೆ, ಒಳಗೇನಿದೆ ಎಂದು ಸುಲಭದಲ್ಲಿ ತಿಳಿಯಲಾರದು ಎಂದು ಯೋಚಿಸಿದೆ” ಎಂದ.
“ಅವನೆಲ್ಲಿಯವನು? ರಾಜಧಾನಿ ನಗರದಲ್ಲಿ ಇರುವವನೋ? ಹೊರಗಿನವನೋ?” ಭಟ ನಾಯಕ ವಿಚಾರಿಸಿದ.
“ಪಟ್ಟಣದವನಲ್ಲ. ಹೊರವಲಯದ ಹಳ್ಳಿಗಾಡಿನವ. ಆಮ್ರಪುರವೋ ಏನೋ ಹೆಸರು. ನಿರ್ದಿಷ್ಟವಾಗಿ ಅವನ ಮನೆಯೆಲ್ಲಿ ಎಂದು ಹೇಳುವುದು ಕಷ್ಟ. ವಿಚಾರಿಸಿ ಆಗಬೇಕು. ಚಿತ್ರ ಬರೆಯುವ ಚಿತ್ರಕ ಎಂದರೆ ಸುಲಭದಲ್ಲಿ ಯಾರಾದರೂ ಮನೆಯನ್ನು ತೋರಿಸಿಯಾರು”
ಭಟನಾಯಕ ಅಲ್ಲಿಂದ ಹೊರಟ. ಇಷ್ಟು ಹೊತ್ತಿಗೆ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಭಟನಾಯಕ ಅವಸರ ಅವಸರವಾಗಿ ನಾಲ್ಕು ಮಂದಿ ಭಟರನ್ನು ಕರೆದುಕೊಂಡು ಆಮ್ರಪುರದತ್ತ ಧಾವಿಸಿದ. ಸಾಯಂಕಾಲ ಕಳೆದು ಕತ್ತಲು ಇಣುಕುವ ಹೊತ್ತಿಗೆ ಚಿತ್ರಕನ ಮನೆಯೂ ಸಿಕ್ಕಿತು.
ಅಲ್ಲಿ ನೋಡಿದರೆ ಯಾರೂ ಇಲ್ಲ.
ಇಡೀ ಸಂಸಾರ ಬೆಳಗಿನ ಹೊತ್ತಿಗೇ ಮನೆಬಿಟ್ಟು ಎಲ್ಲೋ ಹೋಗಿರಬೇಕು ಎಂದು ಹಳ್ಳಿಗರು ತಿಳಿಸಿದರು.
ಈ ಪ್ರಕರಣ ತನ್ನ ಕೈ ಮೀರಿದೆ ಎಂದು ಭಟನಾಯಕನಿಗೆ ಅರ್ಥವಾಯಿತು.
(ಸಶೇಷ)