ದ್ರವ್ಯವಿಲ್ಲದ ಬಡವನಾದರೂ ಚಿತ್ರಕನಿಗೆ ಕಲೆಯ ಬಡತನವಿರಲಿಲ್ಲ. ನೋಡಿದವರು, ‘ಆಹಾ, ಎಷ್ಟು ಸೊಗಸಾಗಿದೆ’ ಎಂದು ಮೆಚ್ಚಿಕೊಳ್ಳುವಂತೆ ಚಿತ್ರಗಳನ್ನು ಬರೆಯುತ್ತಿದ್ದ. ಅವರು ಕೊಟ್ಟ ಧಾನ್ಯವೋ, ಬಟ್ಟೆಯೋ, ಒಂದೆರಡು ನಾಣ್ಯಗಳೋ ಸಂಸಾರದ ಹೊಟ್ಟೆಗೆ ಸಾಕಾಗುತ್ತಿತ್ತು. ಅವನಿಗೆ ಚಿತ್ರ ಬರೆಯುವುದು ಬಿಟ್ಟು ಬೇರೆ ಏನೂ ಗೊತ್ತಿರಲಿಲ್ಲ. ಚಿತ್ರಗಾರನಾಗಿ ತನ್ನ ಯೋಗ್ಯತೆಯ ಕಲ್ಪನೆಯೂ ಅವನಿಗಿರಲಿಲ್ಲ. ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯ ತಿಳಿವು ಇಲ್ಲದಿದ್ದರೆ ಅಹಂಕಾರ ಇರುವುದಿಲ್ಲ. ಅಂತೆಯೇ ಅದಕ್ಕೆ ಬೆಲೆಯೂ ಬರುವುದಿಲ್ಲ. ತಾನು ಪ್ರತಿಭಾಶಾಲಿ ಎಂದು ತಿಳಿದುಕೊಂಡವನು ಅದಕ್ಕೆ ಲೋಕದ ಜನರಿಂದ ಮನ್ನಣೆಯನ್ನು ಅಪೇಕ್ಷಿಸುತ್ತಾನೆ. ತನ್ನ ಯೋಗ್ಯತೆ ಅವರ ಗಮನಕ್ಕೆ ಬರುವಂತೆ ಯತ್ನಿಸುತ್ತಾನೆ. ಯಾರೂ ಗಮನಿಸದೆ ಇದ್ದರೆ ದುಃಖವನ್ನು ಅನುಭವಿಸುತ್ತಾನೆ. ಇದರ ಅರಿವಿಲ್ಲದಿದ್ದವನು ಕಾನನದ ಅಜ್ಞಾತ ಕುಸುಮದಂತೆ. ಅದು ತನ್ನಷ್ಟಕ್ಕೆ ಅರಳಿ, ಪರಿಮಳಿಸಿ ನಲಿವಂತೆ ಮುಗ್ಧ ಕಲಾವಂತನ ಪಾಡು. ಅವನಿಗೆ ಅದರಲ್ಲಿ ದುಃಖವಾಗಲಿ, ಅತೃಪ್ತಿಯಾಗಲಿ ಇರುವುದಿಲ್ಲ. ಚಿತ್ರಕನ ಅವಸ್ಥೆಯೂ ಹಾಗೆಯೇ ಇತ್ತು.
ಪ್ರಾರಂಭ
ಅದೊಂದು ಮಹಾರಹಸ್ಯ.
ಆ ರಹಸ್ಯವನ್ನು ಅರಿಯದೇ ಅರಿತ ಒಬ್ಬ ಅಮಾಯಕ.
ಅವನನ್ನು ಬೇಟೆಯಾಡುವುದಕ್ಕೆ ಸನ್ನದ್ಧವಾದ ದುಷ್ಟ ಕೂಟ.
ತನ್ನನ್ನೂ, ತನ್ನವರನ್ನೂ ಕಾಪಾಡಿಕೊಳ್ಳುವುದಕ್ಕೆ ಮನೆಮಾರು ಬಿಟ್ಟು ತಲೆಮರೆಸಿಕೊಳ್ಳುವ ಅನಿವಾರ್ಯ.
ಸುತ್ತಿಕೊಂಡ ಬೆಂಕಿಯ ಬಲೆಯೊಳಗೆ ಓಡುವುದಾದರೂ ಎಲ್ಲಿಗೆ?
ಕಣ್ಣುಕಟ್ಟುವ ಕತ್ತಲಲ್ಲಿ, ಬೆಂಬತ್ತಿದ ದುಷ್ಟರ ಕತ್ತಿಗೆ ಬಲಿಯಾಗದೆ ಪಾರಾಗುವುದು ಹೇಗೆ?
ಈ ಸಂಕಟದಿಂದ ಪಾರು ಮಾಡುವ ದೇವರೆಲ್ಲಿದ್ದಾನೆ?
ಯುಗಾಂತರದ ಹಿಂದೆ ಮುಗ್ಧ ಸಂಸಾರವೊಂದು ಜೀವರಕ್ಷಣೆಗೆ ಆಶ್ರಯವನ್ನು ಅರಸುತ್ತ ಪಲಾಯನ ಮಾಡುವ ರೋಚಕ ಕಥನವಿದು.
* * *
ಚಿತ್ರಕನ ಕುಟುಂಬ ಸಣ್ಣದು.
ಅವನ ಹೆಂಡತಿ ಚಾರು, ಇಪ್ಪತ್ತರ ಹರೆಯದ ಚೆಲುವೆ ಚಂಪಾ ಮತ್ತು ಹತ್ತರ ಹುಡುಗ ಜಿತು ಎಂಬ ಇಬ್ಬರು ಮಕ್ಕಳು.
ಚಿತ್ರಕ ಗೋಡೆಯಲ್ಲಿ ಬಣ್ಣದ ಚಿತ್ರಗಳನ್ನು ಬರೆಯುವ ಚಿತ್ರಕಾರ, ಹೆಸರಿಗೆ ತಕ್ಕಂತೆ. ಸಂಪಾದನೆಯೂ ಅಲ್ಲಿಂದಲ್ಲಿಗೆ ಜೀವನ ಸಾಗುವಷ್ಟು ಮಾತ್ರ. ಅದಕ್ಕಿಂತ ಹೆಚ್ಚು ಅವನಿಗೂ ಬಯಕೆಯಿಲ್ಲ. ಚಾರು ಗಂಡನ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಸಾಗುವ ಸಾಧ್ವಿ.
ಅವರ ಬದುಕು ಪ್ರವಾಹದ ಸೆಳೆತವಿಲ್ಲದ ನದಿಯ ನೀರಿನಲ್ಲಿ ಚಲಿಸುವ ನಾವೆಯಂತೆ ನಿಧಾನವಾಗಿ ಸಾಗುತ್ತಿತ್ತು. ಹೆಚ್ಚು ಬೇಕು ಎಂಬ ಬಯಕೆಯಿದ್ದರೆ ತಾನೇ ಅತೃಪ್ತಿ? ಚಿತ್ರಕನ ಬಯಕೆಗಳು ಮಿತವಾಗಿದ್ದವು. ಹಾಗಾಗಿ ನೆಮ್ಮದಿಯಿತ್ತು.
ಚಿತ್ರಕ ಹಸ್ತಿನಾವತಿಯ ಪ್ರಜೆ. ಹಸ್ತಿನಾವತಿ ಎಂಬುದು ಒಂದು ಮಹಾನಗರಿ. ಅದು ಚಂದ್ರವಂಶೀಯರಾದ ಅರಸರ ರಾಜಧಾನಿಯೂ ಹೌದು. ಚಿತ್ರಕನ ಮನೆಯಿದ್ದುದು ಆ ನಗರದ ಹೊರವಲಯದ ಒಂದು ಹಳ್ಳಿಯಲ್ಲಿ.
ಚಿತ್ರಕನ ಬದುಕು ಸ್ವಲ್ಪ ವಿಚಿತ್ರವೇ. ಅವನ ತಂದೆ ಏನೋ ಒಂದು ವೃತ್ತಿ ಮಾಡುತ್ತಿದ್ದ. ಅವನ ವೃತ್ತಿ ಕೌಶಲವನ್ನು ಚಿತ್ರಕ ಕಲಿಯಲಿಲ್ಲ. ಎಳವೆಯಿಂದಲೂ ಅವನಿಗೆ ಬಣ್ಣಗಳ ಕುರಿತು ಏನೋ ಆಕರ್ಷಣೆ. ಬಾನಿನ ನೀಲಿ, ಮೋಡಗಳ ಬಿಳುಪು, ವನರಾಜಿಯ ಹಸಿರು, ನೀರಿನ ನಿರ್ವರ್ಣ, ಮಣ್ಣಿನ ಬಣ್ಣ ಅವನಿಗೆ ಕುತೂಹಲವನ್ನೂ ಆಸಕ್ತಿಯನ್ನೂ ಮೂಡಿಸುತ್ತಿದ್ದವು. ಅವನ ಓರಗೆಯ ಮಕ್ಕಳು ಅವರವರ ತಂದೆ ಮಾಡುತ್ತಿದ್ದ ಕೆಲಸಗಳನ್ನು ಕಲಿತು, ಜೀವನೋಪಾಯಕ್ಕೆ ಸಂಪಾದನೆ ಮಾಡಲು ತೊಡಗುವಾಗ, ಚಿತ್ರಕ ಊರು ಬಿಟ್ಟು ಬೇರೆಲ್ಲೆಲ್ಲೋ ತಿರುಗಾಡುತ್ತಿದ್ದ. ಅವನಿಗೆ ಅರಿವಿಲ್ಲದೆ ಚಿತ್ರಗಾರರ ಮನೆಗಳಲ್ಲಿ ಸೇವಕನಾಗಿ ಅವರಿಂದ ಪರೋಕ್ಷವಾಗಿ ಕಲಿಯುತ್ತಿದ್ದ. ಆ ಕಾಲದಲ್ಲಿ ಚಿತ್ರಗಾರಿಕೆಯು ಒಂದು ಉದ್ಯೋಗವಾಗಿ ಇರಲಿಲ್ಲ. ಶಿಲ್ಪಕಾರರೋ, ಮರಗೆತ್ತನೆಯವರೋ ಅಲ್ಲಿ ಇಲ್ಲಿ ಕಲೆಯೆಂದು ಅಲ್ಲ, ಸ್ವಲ್ಪ ಸುಂದರವಾಗಿರಲಿ ಎಂದು ಏನೋ ಚಿತ್ರಿಸುವ ಪ್ರಯತ್ನ ಮಾಡುತ್ತಿದ್ದರು ಅಷ್ಟೇ. ಅಂತಹ ಕೆಲವರು ಇವನ ಆಸಕ್ತಿ, ಶ್ರದ್ಧೆಗಳನ್ನು ಗಮನಿಸಿ, ಒಂದಿಷ್ಟು ಹೇಳಿಕೊಡುವುದಿತ್ತು. ಆದರೆ ಅವರೆಲ್ಲ ಪೂರ್ವ ಪರಂಪರೆಯನ್ನು ಮುಂದುವರಿಸುತ್ತಿದ್ದವರು. ಅಂದರೆ ಯಾರೋ ಮಾಡಿದ ಚಿತ್ರಗಳನ್ನು ನೋಡಿ ಅನುಕರಿಸುತ್ತಿದ್ದರು. ಅದರಲ್ಲಿ ಹೊಸತು ಎಂಬ ಕಲ್ಪನೆಯೇ ಇರಲಿಲ್ಲ. ಚಿತ್ರಕನಿಗೆ ಅಷ್ಟರಿಂದ ತೃಪ್ತಿಯಿರಲಿಲ್ಲ. ಅವನು ಬೇರೆ ವಿಧವಾಗಿ ಚಿತ್ರಿಸುವುದಕ್ಕೆ ಹೊರಟರೆ, ಅವರಿಗೆ ಅಸಮಾಧಾನವಾಗಿ ಇವನನ್ನು ಹೊರಹಾಕುತ್ತಿದ್ದರು. ಅಲ್ಲಿಂದ ಇನ್ನೆಲ್ಲಿಗೋ ಚಿತ್ರಕನ ಪಯಣ.
ಹೀಗೆ ಉಳಿದವರಿಗೆ ನಿರುಪಯುಕ್ತ ಅನಿಸುವಂತೆ ಚಿತ್ರಕನ ಬದುಕು. ಊರ ಮಂದಿ ಉಡಾಳ ಹುಡುಗ ಎಂಬಂತೆ ಚಿತ್ರಕನಿದ್ದ.
ಅವನ ತಂದೆ ವೃದ್ಧನಾಗಿ ಅನಾರೋಗ್ಯಕ್ಕೆ ಈಡಾದ ಹೊತ್ತಿಗೆ ಅನಿವಾರ್ಯವಾಗಿ ಚಿತ್ರಕ ಮನೆಗೆ ಬಂದ. ಕೆಲವೇ ದಿನಗಳಲ್ಲಿ ದೂರದ ನೆಂಟರ ಮನೆಯ ಹುಡುಗಿ ಚಾರುವಿನ ಜತೆಗೆ ಅವನ ಮದುವೆಯೂ ಆಯಿತು. ತಂದೆ ಹೆಚ್ಚು ಕಾಲ ಬಾಳಲಿಲ್ಲ. ಅವನ ಸಾವಿನ ಬಳಿಕ ಮನೆ ನಡೆಸುವ ಹೊಣೆ ಚಿತ್ರಕನ ಹೆಗಲಿಗೆ ಬಂತು. ಜೀವನೋಪಾಯಕ್ಕೆ ಏನು ಮಾಡುವುದು?
ಆಗ ಯಾರೋ ತಮ್ಮ ಮನೆಯ ಗೋಡೆಯಲ್ಲಿ ಚಿತ್ರ ಬರೆಯಲು ಕರೆದರು. ನಗರಕ್ಕೆ ಹೋಗಿ ಬಂದವರು ಅಲ್ಲಿ ನೋಡಿದ ಭಿತ್ತಿಚಿತ್ರಗಳಂತೆ ತಮ್ಮ ಮನೆಯ ಗೋಡೆಗಳಲ್ಲಿಯೂ ಚಿತ್ರ ಬರೆಯಿಸುವ ಯೋಚನೆ ಮಾಡಿದಾಗ ಅವರಿಗೆ ಸಿಕ್ಕಿದ್ದು ಈ ಚಿತ್ರಕ. ಅವನ ಚಿತ್ರಗಳು ಕೆಲವರಿಗೆ ಮೆಚ್ಚುಗೆಯಾದವು. ಬಳಿಕ ಅದೇ ಅವನ ಜೀವನೋಪಾಯದ ಉದ್ಯೋಗವಾಯಿತು.
ಯಾರಾದರೂ ಹೊಸ ಮನೆಯನ್ನು ಕಟ್ಟಿದರೆ, ಅವರಿಗೆ ಸದಭಿರುಚಿಯಿದ್ದರೆ, ಆಗ ಚಿತ್ರಕನಿಗೆ ಕರೆ ಬರುತ್ತಿತ್ತು.
ಮನೆಯ ಭಿತ್ತಿಗಳಲ್ಲಿ ಒಂದಿಷ್ಟು ಬಣ್ಣದ ಚಿತ್ರಗಳನ್ನು ಚಿತ್ರಿಸುವಂತೆ ಕೋರುತ್ತಿದ್ದರು. ದ್ರವ್ಯವಿಲ್ಲದ ಬಡವನಾದರೂ ಚಿತ್ರಕನಿಗೆ ಕಲೆಯ ಬಡತನವಿರಲಿಲ್ಲ. ನೋಡಿದವರು, ‘ಆಹಾ, ಎಷ್ಟು ಸೊಗಸಾಗಿದೆ’ ಎಂದು ಮೆಚ್ಚಿಕೊಳ್ಳುವಂತೆ ಚಿತ್ರಗಳನ್ನು ಬರೆಯುತ್ತಿದ್ದ. ಅವರು ಕೊಟ್ಟ ಧಾನ್ಯವೋ, ಬಟ್ಟೆಯೋ, ಒಂದೆರಡು ನಾಣ್ಯಗಳೋ ಸಂಸಾರದ ಹೊಟ್ಟೆಗೆ ಸಾಕಾಗುತ್ತಿತ್ತು. ಅವನಿಗೆ ಚಿತ್ರ ಬರೆಯುವುದು ಬಿಟ್ಟು ಬೇರೆ ಏನೂ ಗೊತ್ತಿರಲಿಲ್ಲ. ಚಿತ್ರಗಾರನಾಗಿ ತನ್ನ ಯೋಗ್ಯತೆಯ ಕಲ್ಪನೆಯೂ ಅವನಿಗಿರಲಿಲ್ಲ. ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯ ತಿಳಿವು ಇಲ್ಲದಿದ್ದರೆ ಅಹಂಕಾರ ಇರುವುದಿಲ್ಲ. ಅಂತೆಯೇ ಅದಕ್ಕೆ ಬೆಲೆಯೂ ಬರುವುದಿಲ್ಲ. ತಾನು ಪ್ರತಿಭಾಶಾಲಿ ಎಂದು ತಿಳಿದುಕೊಂಡವನು ಅದಕ್ಕೆ ಲೋಕದ ಜನರಿಂದ ಮನ್ನಣೆಯನ್ನು ಅಪೇಕ್ಷಿಸುತ್ತಾನೆ. ತನ್ನ ಯೋಗ್ಯತೆ ಅವರ ಗಮನಕ್ಕೆ ಬರುವಂತೆ ಯತ್ನಿಸುತ್ತಾನೆ. ಯಾರೂ ಗಮನಿಸದೆ ಇದ್ದರೆ ದುಃಖವನ್ನು ಅನುಭವಿಸುತ್ತಾನೆ. ಇದರ ಅರಿವಿಲ್ಲದಿದ್ದವನು ಕಾನನದ ಅಜ್ಞಾತ ಕುಸುಮದಂತೆ. ಅದು ತನ್ನಷ್ಟಕ್ಕೆ ಅರಳಿ, ಪರಿಮಳಿಸಿ ನಲಿವಂತೆ ಮುಗ್ಧ ಕಲಾವಂತನ ಪಾಡು. ಅವನಿಗೆ ಅದರಲ್ಲಿ ದುಃಖವಾಗಲಿ, ಅತೃಪ್ತಿಯಾಗಲಿ ಇರುವುದಿಲ್ಲ. ಚಿತ್ರಕನ ಅವಸ್ಥೆಯೂ ಹಾಗೆಯೇ ಇತ್ತು.
ಅವನಿಂದ ಚಿತ್ರಗಳನ್ನು ಬರೆಯಿಸಿದವರೂ, ಅವನ ಕೌಶಲವನ್ನು ಮೆಚ್ಚಿ ಬರೆಯಿಸುತ್ತಾರೆ ಎನ್ನಲಾಗದು. ‘ಓ ಅವನ ಮನೆಯಲ್ಲಿ ಚಿತ್ರ ಬರೆಸಿದ್ದಾರೆ. ಹಾಗಾಗಿ ನನ್ನ ಮನೆಯಲ್ಲಿಯೂ ಬರೆಯಿಸಬೇಕು’ ಎಂಬ ಹಂಬಲದಿಂದಾಗಿ ಇವರೂ ಬರೆಯಿಸುತ್ತಿದ್ದರು ಅಷ್ಟೇ. ಕಲೆ ಎಂದಲ್ಲ, ಸೌಂದರ್ಯಪ್ರಜ್ಞೆಯಿಂದಲೂ ಅಲ್ಲ. ಅದೆಲ್ಲ ಚಿತ್ರಕನಿಗೆ ಅರ್ಥವಾಗುತ್ತಿರಲಿಲ್ಲ. ಅವನಿಗೆ ತಾನು ಚಿತ್ರ ಬರೆಯುವಾಗ ಏನೋ ಉಲ್ಲಾಸ ಉಂಟಾಗುತ್ತಿತ್ತು. ಅದಕ್ಕೆ ದೊರೆತ ಪ್ರತಿಫಲದಿಂದ ಹೊಟ್ಟೆಪಾಡು ನಡೆಯುತ್ತಿತ್ತು.
ಅವನ ಮಡದಿಯೂ ಮನೆವಾರ್ತೆಯ ಕೆಲಸಗಳು ಮುಗಿದ ಬಳಿಕ ಹತ್ತಿರದ ಮನೆಗಳಲ್ಲಿ ಸಣ್ಣಪುಟ್ಟ ಸಹಾಯಕ್ಕೆ ಹೋಗುತ್ತಿದ್ದಳು. ಅವರು ಏನಾದರೂ ಕೊಟ್ಟರೆ ಉಂಟು. ಕೆಲವರು ಅಷ್ಟಿಷ್ಟು ಕೊಡುವುದೂ ಇತ್ತು. ಚಿತ್ರಕನ ಮಗಳು ಚಂಪಾ ಮದುವೆಗೆ ಸಿದ್ಧಳಾಗಿ ವರ್ಷಗಳಾದವು. ಯೋಗ್ಯ ಹುಡುಗನನ್ನು ಹುಡುಕಿ ಮದುವೆ ಮಾಡಬೇಕು. ಅದಕ್ಕೆ ದ್ರವ್ಯ ಬೇಕು. ಹೀಗೆ ಗಂಡ ಹೆಂಡತಿ ಮಾತನಾಡುತ್ತಲೇ ಕಾಲ ಸರಿಯುತ್ತಿತ್ತು. ಚಂಪಾ ಸದ್ಗುಣವಂತೆ. ಹೆತ್ತವರ ಕಷ್ಟದ ಅರಿವು ಅವಳಿಗಿತ್ತು. ಚಿತ್ರಕ ಸಾಕಿದ್ದ ಒಂದೆರಡು ಹಸುಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಕಿರಿಯ ಹುಡುಗ ಜಿತುವಿಗೆ ಇನ್ನು ಹುಡುಗಾಟದ ಪ್ರಾಯ.
ಚಿತ್ರಕನ ಈ ಸರಳವಾದ ಬದುಕಿನಲ್ಲಿ ಒಂದು ಪರಿವರ್ತನೆಯ ಗಳಿಗೆ ಬಂತು. ಹಸ್ತಿನಾವತಿಯನ್ನು ಆಳುವ ಪ್ರಭುತ್ವ ಅವನಿಗೆ ಕರೆ ಕಳುಹಿಸಿದಾಗ, ಚಿತ್ರಕ ನಿಜವಾಗಿ ಹೆದರಿದ್ದ. ತನ್ನಿಂದ ಏನೋ ಅಪರಾಧವಾಗಿರಬೇಕು. ಅದಕ್ಕಾಗಿ ಶಿಕ್ಷಿಸುವುದಕ್ಕೆ ಬರಹೇಳಿದ್ದಾರೆ ಎಂದು ನಡುಗುತ್ತಲೇ ರಾಜಸೌಧದ ಮಹಾದ್ವಾರದ ಎದುರು ನಿಂತ. ಅವನನ್ನು ಕಂಡ ಕಾವಲ ಭಟರಲ್ಲಿ ಒಬ್ಬ ಒಳಗೆ ಕರೆದೊಯ್ದ. ಅಲ್ಲಿದ್ದವನು ರಾಜಪುತ್ರ ದುಶ್ಶಾಸನನ ನಿಕಟವರ್ತಿ.
“ನೀನೇ ಏನು ಚಿತ್ರಕ ಅಂದರೆ?’’ ಗದರಿಸುವಂತೆ ಕೇಳಿದ.
ಚಿತ್ರಕನಿಗೆ ಕೈಕಾಲು ನಡುಗಿತು. “ಹೌದು ಮಹಾಸ್ವಾಮಿ’’
“ನೀನು ಗೋಡೆಗಳ ಮೇಲೆ ಚಿತ್ರ ಬರೆಯುತ್ತೀಯಂತೆ?’’
ಚಿತ್ರಕನ ಗಂಟಲೊಣಗಿತ್ತು. ಬರಿದೇ ತಲೆಯಾಡಿಸಿದ ಮಾತ್ರ.
“ಹೂಂ. ನಿನ್ನ ಚಿತ್ರಗಳು ಚೆನ್ನಾಗಿರುತ್ತವೆ ಅಂತ ಜನರು ಹೇಳಿದ್ದು ಮಹಾಪ್ರಭುಗಳ ಗಮನಕ್ಕೆ ಬಂದಿದೆ. ಸದ್ಯ ನಿನ್ನಿಂದ ಒಂದು ಕೆಲಸವಾಗಬೇಕು. ಅದಕ್ಕಾಗಿ ಕರೆ ಕಳುಹಿಸಿದೆ’’ ನಿಕಟವರ್ತಿ ಹೇಳಿದ.
ಈಗ ಚಿತ್ರಕನಿಗೆ ಕೊಂಚ ಧೈರ್ಯ ಬಂದಿತ್ತು.
“ಅಪ್ಪಣೆಯಾಗಲಿ ಪ್ರಭು’’ ಎಂದ.
“ಬೇರೇನಿಲ್ಲ. ದೂರದ ವಾರಣಾವತದಲ್ಲಿ ಪಾಂಡುಪುತ್ರರಿಗಾಗಿ ಒಂದು ಅರಮನೆ ನಿರ್ಮಾಣವಾಗಿದೆ. ಅವರು ಸದ್ಯದಲ್ಲಿ ಅಲ್ಲಿಗೆ ತೆರಳುವರಿದ್ದಾರೆ. ಆದರೆ ಅದಕ್ಕೆ ಮೊದಲು ಅರಮನೆಯ ಗೋಡೆಗಳಲ್ಲಿ ಚಿತ್ರ ಬರೆಯಬೇಕಾಗಿದೆ. ರಾಜಪುತ್ರರ ನಿವಾಸಕ್ಕೆ ತಕ್ಕಂತೆ ಸುಂದರವಾದ ಚಿತ್ರಗಳನ್ನು ಬರೆದುಕೊಡಬೇಕು. ಕೆಲವು ದಿನಗಳ ಕಾಲ ಅಲ್ಲಿ ಉಳಿಯಬೇಕಾದೀತು. ಅದಕ್ಕೆ ತಕ್ಕ ಪ್ರತಿಫಲ ಅರಮನೆಯಿಂದ ನೀಡುತ್ತೇವೆ. ನಿನಗೆ ಬೇಕಾದ ಬಣ್ಣ ಇತ್ಯಾದಿ ಅಗತ್ಯವಸ್ತುಗಳೊಂದಿಗೆ ಸಿದ್ಧನಾಗಿರು. ಒಂದೆರಡು ದಿನಗಳಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಕರೆ ಕಳುಹಿಸಿದಾಗ ಬಂದುಬಿಡು’’ ಇಷ್ಟು ಹೇಳಿದ ನಿಕಟವರ್ತಿ ಚಿತ್ರಕನ ಕೈಗೆ ಒಂದು ಸುವರ್ಣ ನಾಣ್ಯವನ್ನಿತ್ತು ಹಿಂದೆ ಕಳುಹಿಸಿದ. ಅವತ್ತೇ ಅವನ ಮನೆಗೆ ಕೆಲವು ದಿನಗಳಿಗಾಗುವಷ್ಟು ದವಸಧಾನ್ಯದ ಮೂಟೆಯೂ ಬಂತು.
ಬೇರೆಯವರಿಗಾದರೆ, ಕೆಲವು ದಿನಗಳ ಉದ್ಯೋಗ ದೊರೆಯಿತು ಎಂಬ ಸಂತೋಷ, ಅರಮನೆಯ ಜನರ ಸಂಪರ್ಕವಾಯಿತೆಂಬ ಹೆಮ್ಮೆ ಎರಡೂ ಉಂಟಾಗುತ್ತಿತ್ತು. ಆದರೆ ಚಿತ್ರಕನಿಗೆ ಮಾತ್ರ ಹಾಗಾಗಲಿಲ್ಲ. ದೊಡ್ಡ ಮನುಷ್ಯರ ವ್ಯವಹಾರದಲ್ಲಿ ಅವನು ಆಸಕ್ತನೇ ಅಲ್ಲ. ಅಂತಹ ಅಗತ್ಯವೂ ಅವನಿಗೆ ಬಂದಿರಲಿಲ್ಲ. ಹೊಟ್ಟೆಯ ಹಸಿವು ನೀಗುವಷ್ಟು ಅನ್ನವೂ, ಮಾನ ಮುಚ್ಚುವಷ್ಟು ಬಟ್ಟೆಯೂ ಇದ್ದರೆ ಅವನು ತೃಪ್ತ. ಅರಮನೆಯವರು ಕೊಟ್ಟ ಈ ಕೆಲಸವಾದರೂ ಅಷ್ಟೇ. ಅಥವಾ ಸಾಮಾನ್ಯ ಜನರು ಕೊಟ್ಟ ಕೆಲಸವಾದರೂ ಅಷ್ಟೇ. ಅವನಿಗೆ ವ್ಯತ್ಯಾಸ ಕಾಣದು. ಇದರಲ್ಲಿ ಇನ್ನೊಂದು ಸಂಕಟ ಇತ್ತು. ತನ್ನ ಕುಟುಂಬವನ್ನು ಅಗಲಿ ತಿಂಗಳುಗಟ್ಟಲೆ ವಾರಣಾವತದಲ್ಲಿ ಇರಬೇಕು ಎನ್ನುವುದು ಅವನಿಗೆ ಅಪ್ರಿಯವಾಗಿತ್ತು. ತನ್ನ ಕುಟುಂಬದ ಕುರಿತು ಚಿತ್ರಕನಿಗೆ ಹೆಚ್ಚು ಅನಿಸುವಷ್ಟು ಪ್ರೀತಿ. ಆದುದರಿಂದ ಅಷ್ಟು ದಿನ ದೂರದ ಊರಿನಲ್ಲಿ ಒಬ್ಬನೇ ಇರಬೇಕಲ್ಲ ಎಂಬುದು ಸಂಕಟಕ್ಕೆ ಕಾರಣ. ಈ ಕೆಲಸ ಬೇಡ ಎನ್ನಬಹುದಿತ್ತು. ಹಾಗೆ ಹೇಳಿದರೆ ಅರಸೊತ್ತಿಗೆಯ ಆಗ್ರಹಕ್ಕೆ ಗುರಿಯಾಗಬೇಕು. ಅದು ವಿಪತ್ತಿಗೆ ದಾರಿ. ಆದುದರಿಂದಲೇ ಒಪ್ಪಿಕೊಂಡ ಎನ್ನುವಂತೆಯೂ ಇಲ್ಲ. ಅನಾರೋಗ್ಯವೋ ಇನ್ನೇನೋ ನೆಪವನ್ನು ಹೇಳಿದರೆ ಅರಸರ ಕೋಪದಿಂದ ಪಾರಾಗಬಹುದಿತ್ತು. ಅವನು ಈ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೊಂದು ಹಿನ್ನೆಲೆಯೂ ಇತ್ತು.
ಈಗಲೀಗ ಮಗಳು ಚಂಪೆಯ ಮದುವೆಯ ವಿಚಾರವು ಚಿತ್ರಕನ ಯೋಚನೆಗೆ ಕಾರಣವಾಗಿತ್ತು. ಮಗಳು ಬೆಳೆದಿದ್ದಾಳೆ, ಅವಳ ಮದುವೆಗೆ ಒಂದಿಷ್ಟು ಧನದ ಅಗತ್ಯವಿದೆ ಎನ್ನುವುದರಿಂದ, ಕಷ್ಟವೆನಿಸಿದರೂ ಈ ಕೆಲಸಕ್ಕೆ ಸಮ್ಮತಿಸಿದ. ಅರಮನೆಯ ಕೆಲಸವಲ್ಲವೆ? ಸಾಮಾನ್ಯರು ಕೊಡುವುದಕ್ಕಿಂತ ಹೆಚ್ಚು ಸಂಭಾವನೆ ಕೊಟ್ಟಾರು. ಒಂದೋ ಎರಡೋ ಪಕ್ಷ ಅಲ್ಲಿದ್ದು ಚಿತ್ರ ರಚಿಸಿಕೊಟ್ಟರೆ, ಹಿಂದೆ ಬರುವಾಗ ಬೊಗಸೆ ತುಂಬ ವರಹಗಳನ್ನು ತರಬಹುದು ಎಂದು ಆಶೆಯಿತ್ತು. ಹಾಗಾಗಿ ವಾರಣಾವತದ ಕೆಲಸವನ್ನು ಅಂಗೀಕರಿಸಿದ.
ಗಾಳಕ್ಕೆ ಸಿಲುಕಿಸಿದ ಆಹಾರದ ತುಣುಕಿಗೆ ಆಶೆಪಡುವ ಮೀನಿನಂತೆ, ಚಿತ್ರಕನಿಗೂ ಆಯಿತೋ ಏನೋ. ಇದರಲ್ಲಿ ಯಾವ ತೊಡಕೂ ಅವನಿಗೆ ಕಾಣಿಸಲಿಲ್ಲ.
ಕೆಲಸವನ್ನು ಒಪ್ಪಿ, ಹಸ್ತಿನಾವತಿಯ ಅರಮನೆಯಿಂದ ಹಿಂದೆ ಬಂದು ಎರಡು ದಿನಗಳಷ್ಟೇ ಕಳೆದಿದ್ದವು. ‘ವಾರಣಾವತಕ್ಕೆ ನಾಳೆ ಹೊರಡಲು ಸಿದ್ಧನಾಗಿರು’ ಎನ್ನುವ ಸಂದೇಶ ಬಂತು. ಸಂದೇಶ ಅನ್ನುವುದಕ್ಕಿಂತಲೂ ಆದೇಶ ಎಂಬುದೇ ಸರಿ. ಚಿತ್ರಕ ಹೊರಡಲು ಸಿದ್ಧನಾದ. ಅವನ ಮಗ ಜಿತು ತಾನೂ ಅಪ್ಪನೊಂದಿಗೆ ಬರುತ್ತೇನೆ ಎಂದು ಅಳುವುದಕ್ಕೆ ತೊಡಗಿದ. “ಅಳಬೇಡ ಕಂದ. ಕೆಲವೇ ದಿನಗಳಲ್ಲಿ ನಾನು ಹಿಂದೆ ಬರುತ್ತೇನಲ್ಲ. ಬರುವಾಗ ನಿನಗೆ ಸಿಹಿಯಾದ ತಿನಿಸನ್ನು ತರುವೆ. ಈಗ ಅಳಬೇಡ’’ ಎಂದು ಸಮಾಧಾನ ಮಾಡಿದ. ಸಮಾಧಾನದ ಕೊನೆಯ ವಾಕ್ಯವನ್ನಾಡುವ ಹೊತ್ತಿಗೆ ಸ್ವತಃ ಅವನ ಕಂಠವೇ ಗದ್ಗದವಾಯಿತು. ಹೆಂಡತಿ ಮತ್ತು ಮಗಳು ಮೊದಲೇ ಹನಿಗಣ್ಣಾಗಿದ್ದರು. ಅಂತೂ ಅವರನ್ನು ಬೀಳ್ಗೊಟ್ಟು, ತನ್ನ ಬಗಲ ಚೀಲವನ್ನೂ, ಭಾರವಾದ ಹೃದಯವನ್ನೂ ಹೊತ್ತು, ವಾರಣಾವತಕ್ಕೆ ಹೋಗುವ ಚಾರಕರೊಂದಿಗೆ ತಾನೂ ಹೊರಟುಬಿಟ್ಟ.
* * *
ಅವರನ್ನೆಲ್ಲ ಹೊತ್ತ ಬಂಡಿಗಳು ಹಲವು ಮಜಲುಗಳಲ್ಲಿ ಪಯಣ ಬೆಳೆಸಿ ವಾರಣಾವತಕ್ಕೆ ತಲಪುವಾಗ ಒಂದು ಸಪ್ತಾಹವೇ ಕಳೆದಿತ್ತು. ಪ್ರಯಾಣದಲ್ಲಿ ಯಾವ ತೊಂದರೆಯೂ ಬಾರದಂತೆ, ಆಹಾರ ಇತ್ಯಾದಿಗಳಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಿದ್ದರು. ಸುಖವಾದ ಪ್ರಯಾಣವಾದರೂ, ಚಿತ್ರಕ ತನ್ನ ಕುಟುಂಬವನ್ನು ಬಿಟ್ಟು ಬಂದುದರಿಂದ ಅನ್ಯಮನಸ್ಕನೇ ಆಗಿದ್ದ. ಜೊತೆಯಲ್ಲಿದ್ದ ಕೆಲವರು ಪೂರ್ವ ಪರಿಚಿತರು. ಅವರು ಸಲುಗೆಯಿಂದ, ಸ್ನೇಹದಿಂದ ಮಾತನಾಡಿಸಿದರೂ ಅವರಲ್ಲಿ ಒಂದೆರಡು ವಾಕ್ಯಗಳಲ್ಲೇ ಸಂಭಾಷಣೆ ಮುಗಿಸುತ್ತಿದ್ದ ಚಿತ್ರಕ. ಕೆಲವು ಸಲ ಮಾತು ಬೆಳೆಸಲು ಯತ್ನಿಸಿ ವಿಫಲರಾಗಿ ಮತ್ತೆ ಅವರೂ ಸುಮ್ಮನಾಗಿದ್ದರು. ಅಂತೂ ಅವರ ತಂಡ ವಾರಣಾವತವನ್ನು ಸೇರಿಕೊಂಡಿತು.
ಕೆಲಸಗಾರರಿಗೆ ಅಲ್ಲಿ ಉಳಿಯುವುದಕ್ಕೆ ನೂತನ ಅರಮನೆಯ ಪಕ್ಕದಲ್ಲಿ ತಾತ್ಪೂರ್ತಿಕವಾಗಿ ನಿರ್ಮಿಸಿದ್ದ ಹುಲ್ಲು ಹೊದೆಸಿದ ಗುಡಿಸಲುಗಳಿದ್ದವು. ಅಂತಹ ಒಂದು ಗುಡಿಸಲನ್ನು ಚಿತ್ರಕನಿಗೆ ಒದಗಿಸಿದರು. ಅವನ ಚಿತ್ರಗಾರಿಕೆಗೆ ಬೇಕಾದ ವಸ್ತುಗಳನ್ನಿಟ್ಟುಕೊಳ್ಳಲು ಅನುಕೂಲವಾಗುವಂತೆ ಪ್ರತ್ಯೇಕ ವ್ಯವಸ್ಥೆ ಅದು. ಹೊತ್ತುಹೊತ್ತಿಗೆ ಅನ್ನಾಹಾರಗಳು ಅಲ್ಲಿಗೇ ಬರುತ್ತಿದ್ದವು. ಏಕಾಗ್ರತೆಯಿಂದ ಚಿತ್ರ ಬರೆಯುವುದಕ್ಕೆ ಎಲ್ಲ ಅನುಕೂಲಗಳನ್ನೂ ಒದಗಿಸಿಕೊಟ್ಟಿದ್ದರು.
ಅರಮನೆಯನ್ನು ತೋರಿಸಿ, ಯಾವ ಗೋಡೆಯ ಮೇಲೆ ಎಂತಹ ಚಿತ್ರಗಳಿರಬೇಕು ಎಂದೆಲ್ಲ ವಿವರಿಸಿದರು. ಚಿತ್ರಕನಿಗೆ ಇದೊಂದು ವಿಶೇಷವೆಂದು ತೋರಲಿಲ್ಲ. ಎಂದಿನಿಂದಲೋ ಮಾಡುತ್ತ ಬಂದಿದ್ದ ಕೆಲಸ ಅದು. ನಡುರಾತ್ರಿ ನಿದ್ರೆಯಿಂದ ಎಚ್ಚರಿಸಿ, ಈಗ ಚಿತ್ರಬರೆ ಎಂದರೂ, ಅವನು ಸಿದ್ಧನೇ. ಹಾಗಿರುವಾಗ ಇದೇನು ದೊಡ್ಡ ಕೆಲಸವಲ್ಲ. ಅರಮನೆಯನ್ನು ತೋರಿಸಿದ ಭಟನಾಯಕ ಮಾತ್ರ ಅದೊಂದು ಬಹಳ ಗಂಭೀರ ವಿಚಾರವೆಂಬಂತೆ ಮತ್ತೆ ಮತ್ತೆ ವಿವರಿಸುತ್ತಿದ್ದ. ಅಷ್ಟು ಹೊತ್ತಿಗಾಗಲೇ ಚಿತ್ರಕನ ತಲೆಯೊಳಗೆ ಬರೆಯಬೇಕಾದ ಚಿತ್ರಗಳ ಕಲ್ಪನೆ ಸ್ಫುಟವಾಗಿತ್ತು. ಮನಸ್ಸು ಚಿತ್ರದ ಆವರಣ ರೇಖೆಗಳನ್ನು ಎಳೆಯುತ್ತಿತ್ತು.
ಮರುದಿನದಿಂದಲೇ ಚಿತ್ರಕನ ಕೆಲಸ ಆರಂಭವಾಯಿತು. ಚಿತ್ರ ಬರೆಯಲು ಸೂಚಿಸಿದ್ದ ಭಿತ್ತಿಗಳ ಬಣ್ಣಕ್ಕೆ ಹೊಂದುವಂತೆ, ರೇಖೆಗಳನ್ನು ಎಳೆದು, ಅದರಲ್ಲಿ ದೇವಾನುದೇವತೆಗಳ ರೂಪವನ್ನು ಮೂಡಿಸಿ ಬಣ್ಣ ತುಂಬುವ ಕೆಲಸ. ಕೆಲವು ಗೋಡೆಗಳಿಗೆ ಚಂದ್ರವಂಶದ ಪುರಾತನ ಮಹಾರಾಜರುಗಳ ಚಿತ್ರಗಳು. ಇನ್ನು ಕೆಲವೆಡೆ ಮೃಗಪಕ್ಷಿ, ಗಿಡಮರ, ಬಳ್ಳಿಗಳು, ಮತ್ತೆ ಕೆಲವು ಗೋಡೆಗಳಿಗೆ ಹೂಗಳು, ಇನ್ನು ಕೆಲವು ಕಡೆ ನಾನಾ ವರ್ಣಗಳ ವಿನ್ಯಾಸಗಳು. ಚಿತ್ರಕ ಪರಂಪರೆಯಿAದ, ಕುಲವೃತ್ತಿಯಾಗಿ ಚಿತ್ರಗಾರಿಕೆ ಕಲಿತವನಲ್ಲ. ಯಾರಿಂದಲೋ ಕೇಳಿ, ಯಾವುದನ್ನೋ ನೋಡಿ, ತಾನೇ ಪ್ರಯೋಗ ಮಾಡಿ ಕಲಿತವನಾದುದರಿಂದ ನೂತನತೆ ತಾನಾಗಿ ಕಾಣುತ್ತಿತ್ತು.
ಅವನಿಗೆ ಈ ಕೆಲಸ ಕೊಟ್ಟವರಿಗೆ ಸೌಂದರ್ಯದ ಪ್ರಜ್ಞೆಯಾಗಲಿ, ಕಲೆಯ ತಿಳಿವಳಿಕೆಯಾಗಲಿ ಇದ್ದಹಾಗಿರಲಿಲ್ಲ. ಅವರ ಮೇಲಿನವರು ಹೀಗಾಗಬೇಕು ಎಂದರು. ಇವರು ಅದಕ್ಕೊಬ್ಬನನ್ನು ನಿಯೋಜಿಸಿದರು. ಅಷ್ಟೇ.
ಆದರೆ ಅಷ್ಟೇ ಅಲ್ಲ ಎಂದು ಮೊದಲು ಅರಿವಾದುದು ಚಿತ್ರಕನಿಗೆ.
(ಸಶೇಷ)