“ನೋಡೋಣ. ನನ್ನಿಂದಾಗುವ ಸಹಾಯ ಮಾಡುತ್ತೇನೆ ಅಂದೆನಲ್ಲ? ಇಲ್ಲಿಂದ ಪೂರ್ವಕ್ಕೆ ಕಾಡಿನ ನಡುವೆ ಒಂದು ಗೊಲ್ಲರ ಹಟ್ಟಿಯಿದೆ. ಅದರ ಯಜಮಾನ ನನಗೆ ಸ್ವಲ್ಪಮಟ್ಟಿಗೆ ಗೊತ್ತಿರುವವನು. ನೀವು ಗತಿಯಿಲ್ಲದೆ ಅಲೆಯುವವರು ಎಂದು ನಂಬಿಸಿದರೆ ಕೆಲವು ತಿಂಗಳು ಅಲ್ಲಿ ಇರುವುದಕ್ಕೆ ಅನುಮತಿ ಕೊಟ್ಟಾನು. ಅವರು ಕಾಡುಜನ. ಈ ಕಾರಸ್ಥಾನ, ಮತ್ತೊಂದು ಅವರಿಗೆ ಅರ್ಥವಾಗದು. ಬಡಪಾಯಿಗಳಿಗೆ ಇರುವುದಕ್ಕೆ ಒಂದು ಗುಡಿಸಲು ಬಿಟ್ಟುಕೊಟ್ಟಾರು. ನಿಮಗೆ ಹೇಗೂ ಹಸುಗಳನ್ನು ಸಾಕಿ ಗೊತ್ತಿದೆಯಷ್ಟೆ? ಇಲ್ಲಿ ದುಡಿಯುವ ಬದಲು ಅಲ್ಲಿ ದುಡಿದರಾಯಿತು. ಚಾರು ಹೇಳಿದ ಹಾಗೆ ದುಡಿದು ಉಣ್ಣುವವರಿಗೆ ಎಲ್ಲಾದರೇನು? ಅಲ್ಲವೆ? ನೀವು ಬೆಳಕಾಗುವುದಕ್ಕೆ ಒಂದು ಜಾವ ಮೊದಲೇ ಹೊರಟುಬಿಡಿ. ಆಮ್ರಪುರದ ಹೊರಗಿನ ಹೊಲಗದ್ದೆಗಳ ಆಚೆಗೆ ಒಂದು ಕೊಳವಿದೆ. ಅದರ ಪಕ್ಕದಲ್ಲಿ ದೊಡ್ಡ ಆಲದ ಮರ ಇದೆ. ಅಲ್ಲಿಗೆ ಹೋಗಿ ಸೇರುವಷ್ಟರಲ್ಲಿ ಚೆನ್ನಾಗಿ ಬೆಳಕು ಹರಿದಿರುತ್ತದೆ. ಆ ಸ್ಥಳವನ್ನು ಗುರುತಿಸುವುದು ಕಷ್ಟವಾಗಲಾರದು. ಅಲ್ಲಿ ನೀವು ಕಾದಿರಿ. ನಾನು ಒಂದಿಷ್ಟು ಸಿದ್ಧತೆ ಮಾಡಿಕೊಂಡು ಅಲ್ಲಿಗೆ ಬರುತ್ತೇನೆ.”
ಚಿತ್ರಕನ ಮನಸ್ಸಿನಲ್ಲಿ ನಾನಾ ನೆನಪುಗಳು; ಯೋಚನೆಗಳು.
ಇದೇನಾಗಿಹೋಯಿತು ನಮ್ಮ ಬದುಕು!
ಕಷ್ಟವೋ ಸುಖವೋ, ದುಡಿದು ಸಿಕ್ಕಿದ್ದನ್ನು ಉಂಡು ನೆಮ್ಮದಿಯಾಗಿಯೇ ಬಾಳುತ್ತಿದ್ದೆವು. ಹಾಳು ವಾರಣಾವತದ ಕೆಲಸದಿಂದಾಗಿ ಇಲ್ಲದ ಸಂಕಟಕ್ಕೆ ತುತ್ತಾದೆವು. ಅನಗತ್ಯವಾದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವ ಬುದ್ಧಿ ತನಗೆ ಯಾಕೆ ಬಂತೋ. ಅರಮನೆ ಉರಿಯಲಿ, ಉರಿಯದಿರಲಿ, ತನ್ನ ಮನೆಗೆ ಬೆಂಕಿ ಬೀಳದಿದ್ದರೆ ಸಾಕು ಎಂದು ಸುಮ್ಮನಿರುವುದನ್ನು ಬಿಟ್ಟು, ಇದೇನು ಮಾಡಿಕೊಂಡೆ ದೇವರೇ!
* * *
ಆ ಭವ್ಯಸೌಧದ ಕುಳ್ಳನನ್ನು ಕಂಡು ಬಂದ ಬಳಿಕ, ಅರಮನೆಯ ಉದ್ಯೋಗದಲ್ಲಿದ್ದ ಶಂಖ ಬಂದು ಎಚ್ಚರಿಸಿ ಹೋಗಿದ್ದ. ಆದಷ್ಟು ಹೊರಗೆಲ್ಲ ಹೋಗದೆ, ಯಾರ ಕಣ್ಣಿಗೂ ಬೀಳದಂತೆ ಮನೆಯೊಳಗೇ ಇರು, ವಿವರಗಳನ್ನು ತಿಳಿದು, ಮುಂದೇನು ಮಾಡಬೇಕು ಎಂದು ಹೇಳುತ್ತೇನೆ ಎಂದು ಸೂಚನೆ ಕೊಟ್ಟಿದ್ದ. ಚಿತ್ರಕ ಹಾಗೆಯೆ ಮನೆಯೊಳಗೇ ಇದ್ದ.
ಮರುದಿನ ಬಂದ ಶಂಖ ಮಾತ್ರ ವಿಚಲಿತನಾಗಿದ್ದ. ಅವನು ತಿಳಿಸಿದ ವಿಚಾರವನ್ನು ಕೇಳಿ, ತಲೆಯ ಮೇಲೆ ಬಂಡೆಗಲ್ಲು ಬಿದ್ದ ಹಾಗಾಗಿತ್ತು, ಚಿತ್ರಕನಿಗೆ. ತಮ್ಮ ಸಂಸಾರದ ಮೇಲೆ ರಕ್ಷಕ ಭಟರ ಕಣ್ಣು ಬಿದ್ದಿದೆ. ಯಾವ ಕಾರಣಕ್ಕೂ ಅವರ ಕೈಗೆ ಸಿಕ್ಕಿಬೀಳಬಾರದು. ಒಮ್ಮೆ ಸಿಕ್ಕಿಕೊಂಡರೆ ಮತ್ತೆ ಬಿಡುಗಡೆಯಿಲ್ಲ ಎಂದಿದ್ದ.
“ಚಿತ್ರಕ, ನಿನಗೆ ಏನೋ ರಹಸ್ಯದ ವಿಚಾರ ಗೊತ್ತಿದೆ ಎಂದು ಅವರಿಗೆ ಸಂಶಯ ಬಂದಿದೆ. ನಿನಗೆ ಹೆಚ್ಚು ಗೊತ್ತಿಲ್ಲದಿರಬಹುದು. ಏನೋ ಒಂದು ದೊಡ್ಡ ಕಾರಸ್ಥಾನಕ್ಕೆ ಕೆಲವರು ಯೋಜಿಸಿದ ಹಾಗಿದೆ. ನೀನು ಗೊತ್ತಿಲ್ಲವೆಂದರೂ ಅವರು ನಂಬುವುದಿಲ್ಲ. ರಹಸ್ಯ ಯೋಜನೆಯ ಸುಳಿವು ತಿಳಿದ ಯಾರನ್ನಾದರೂ ಅವರು ಮುಗಿಸದೆ ಬಿಡುವವರಲ್ಲ.
ಈಗಾಗಲೇ ನಿನ್ನ ಶೋಧಕ್ಕೆ ಸೈಂಧವನ ಭಟರು ಹೊರಟಿದ್ದಾರೆ. ಅವರು ವಿಚಾರಿಸುತ್ತ, ವಿವರ ಸಂಗ್ರಹಿಸುವುದಕ್ಕೆ ಬಹಳ ಕಾಲ ಬೇಕಾಗಲಾರದು. ಒಂದು ಸಲ ಅವರ ಕೈಯಲ್ಲಿ ಸಿಕ್ಕಿ ಬಿದ್ದರೆ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಾರೆ. ನಿನಗೆ ಮಾತ್ರವಲ್ಲ, ನಿನ್ನ ಕುಟುಂಬಕ್ಕೂ ಪ್ರಾಣಾಪಾಯವಿದೆ. ನಾನು ಅವರ ಅರಮನೆಯಲ್ಲಿ ಪರಿಚಾರಕನಾದುದರಿಂದ ಇದೆಲ್ಲ ನನಗೆ ಗೊತ್ತಾಯಿತು. ಚಿತ್ರಕ, ನೀನು ನಿನ್ನ ಮಡದಿ ಮಕ್ಕಳನ್ನು ಕಟ್ಟಿಕೊಂಡು, ದೂರದ ಪಾಂಚಾಲಕ್ಕೋ, ಕುಂತಲಕ್ಕೋ ಹೋಗಿಬಿಡುವುದು ಕ್ಷೇಮ.’’
ಶಂಖನ ಮಾತುಗಳನ್ನು ಕೇಳಿ ಚಿತ್ರಕನ ಮೈಯಲ್ಲಿ ಬೆವರಿಳಿಯತೊಡಗಿತು.
“ಶಂಖ, ನೀನು ಹೇಳುವುದನ್ನು ಕೇಳಿದರೆ ಬಹಳ ಭಯವಾಗುತ್ತದೆ. ನಾನು ಯಾರಿಗೂ ಕೇಡು ಬಗೆದವನಲ್ಲ. ನನ್ನ ಪಾಡಿಗೆ ಚಿತ್ರ ಬರೆಯುತ್ತ, ಬಂದದ್ದರಲ್ಲಿ ಸಂಸಾರ ಸಾಗಿಸುತ್ತಿದ್ದೆ. ಯಾರ ವೈರವನ್ನೂ ಕಟ್ಟಿಕೊಂಡವನಲ್ಲ. ಈಗ ಎಲ್ಲವನ್ನೂ ಬಿಟ್ಟು ಓಡಿಹೋಗಿ ಎಂದರೆ ನಾವು ಎಲ್ಲಿಗೆ ಹೋಗುವುದು ಶಂಖ? ನಮಗೆ ಯಾರಿದ್ದಾರೆ?’’
ಕೊನೆಯ ಮಾತಿಗೆ ಬಂದಾಗ ಅವನ ಕಣ್ಣುಗಳಲ್ಲಿ ನೀರೊಸರಿತು.
ಶಂಖನಿಗೆ ಅಯ್ಯೋ ಅನಿಸಿತು.
ಅವನಿಗೆ ಚಿತ್ರಕ ಮತ್ತು ಮನೆಯವರ ಪರಿಚಯ ಚೆನ್ನಾಗಿಯೇ ಇತ್ತು. ದೂರದ ಬಂಧುತ್ವವೂ ಇತ್ತು. ಕಾಲಕೂಡಿ ಬಂದರೆ ಚಂಪೆಯನ್ನು ಕೈ ಹಿಡಿದರಾದೀತೆಂದು ಸಣ್ಣ ಬಯಕೆಯೂ ಇತ್ತು. ಆದರೆ ಅದನ್ನು ಪ್ರಕಟಿಸುವ ಧೈರ್ಯ ಮಾಡಿರಲಿಲ್ಲ.
ಚಂಪಾ ಎದುರಿಗೆ ಸಿಕ್ಕಿದಾಗ ಅವಳ ಮುಗುಳುನಗೆಯಲ್ಲಿ ತೇಲಿಹೋಗುತ್ತಿದ್ದ. ಕನಸು ಕಟ್ಟುತ್ತಿದ್ದ. ಈಗ ಅವರ ಕುಟುಂಬಕ್ಕೆ ಬಂದ ಆಪತ್ತಿನಿಂದ ಅವರನ್ನು ಪಾರು ಮಾಡಬೇಕು ಎಂದೇನೋ ಕಾಣುತ್ತಿತ್ತು. ಆದರೆ ಅವನೂ ಅಸಹಾಯಕನೇ. ಅರಮನೆಯ ಕೆಲಸಗಾರರಲ್ಲಿ ಒಬ್ಬನಷ್ಟೇ. ಇಂತಹ ಸಂದರ್ಭದಲ್ಲಿ ಪ್ರಬಲರನ್ನು ಎದುರು ಹಾಕಿಕೊಂಡು ಚಿತ್ರಕನ ಸಂಸಾರವನ್ನು ಕಾಪಾಡುವುದು ಅವನ ಕೈ ಮೀರಿದ ಸಂಗತಿ. ಅಲ್ಲದೆ ಅವನ ಪ್ರಾಣಕ್ಕೂ ಅಪಾಯ.
“ಹೀಗೆ ಮಾಡಿದರೆ ಹೇಗೆ?’’ ಇದ್ದಕ್ಕಿದ್ದಂತೆ ಕೇಳಿದ ಚಿತ್ರಕನ ಪ್ರಶ್ನೆ ಶಂಖನನ್ನು ಎಚ್ಚರಿಸಿತು.
ಏನು ಎಂಬಂತೆ ಅವನ ಮುಖ ನೋಡಿದ.
“ನಾವು ಈ ರಾತ್ರಿಯೇ ಆಚಾರ್ಯರ ಭವನಕ್ಕೆ ಹೋಗಿ ಎಲ್ಲವನ್ನೂ ವಿವರಿಸಿ, ನಮ್ಮನ್ನು ಕಾಪಾಡಬೇಕು ಎಂದು ಕಾಲಿಗೆ ಬಿದ್ದರೆ ಹೇಗೆ? ಅವರು ಹಿರಿಯರು. ಧರ್ಮಾತ್ಮರು ಎಂದು ಕೇಳಿದ್ದೇನೆ. ನಮ್ಮಂತಹ ಬಡಪಾಯಿಗಳನ್ನು ಉಳಿಸಲಾರರೆ? ಅವರ ಮಾತಿಗೆ ಹಸ್ತಿನಾವತಿಯಲ್ಲಿ ರಾಜಾಜ್ಞೆಯಷ್ಟು ಬೆಲೆಯಿದೆಯಂತೆ. ನಮ್ಮನ್ನು ಏನೂ ಮಾಡಬೇಡಿ ಎಂದು ಅವರು ಹೇಳಿದರೆ ನಮಗೆ ಆಪತ್ತು ಬರಲಾರದು ಅಲ್ಲವೆ?’’
ಚಿತ್ರಕನ ಮುಗ್ಧತೆಗೆ ಏನು ಹೇಳುವುದೋ ಶಂಖನಿಗೆ ತಿಳಿಯಲಿಲ್ಲ.
“ಚಿತ್ರಕ ಅದೆಲ್ಲ ಅಷ್ಟು ಸುಲಭವಲ್ಲ. ಮೊದಲಿಗೆ ನಾವು ಪಟ್ಟಣವನ್ನು ಪ್ರವೇಶ ಮಾಡುವ ಮೊದಲೇ ಸೈಂಧವನ ಭಟರು ನಮ್ಮನ್ನು ಹಿಡಿದರೂ ಹಿಡಿದರೇ. ಅಥವಾ ಅವರ ಕಣ್ಣು ತಪ್ಪಿಸಿ, ಈ ಮಧ್ಯರಾತ್ರಿಯಲ್ಲಿ ಆಚಾರ್ಯರ ಭವನಕ್ಕೆ ಹೋದೆವು ಎಂದುಕೋ. ಅಲ್ಲಿ ಅವರನ್ನು ಕಾಣುವುದು ಸುಲಭವಲ್ಲ. ಅವರನ್ನು ಎಚ್ಚರಿಸುವುದಕ್ಕೆ ಬಾಗಿಲ ಭಟರು ಒಪ್ಪಬೇಕಲ್ಲ?
ಅವರಲ್ಲೇನಾದರೂ ಕುಳ್ಳನ ಬೇಹಿನವರು ಇರಲಾರರು ಎನ್ನುವ ಭರವಸೆಯೇನು? ಅವರಿಗೆ ಯಾವ ನೀತಿ, ಧರ್ಮವೂ ಇಲ್ಲ. ನಿಮ್ಮನ್ನು ಕಂಡ ಕೂಡಲೇ ಒಂದೋ ಸೆರೆಹಿಡಿಯುತ್ತಾರೆ. ಇಲ್ಲವೇ ತಲೆ ಹಾರಿಸುತ್ತಾರೆ. ಅವರಿಗೆ ಬಂದ ತೊಂದರೆಯಿಂದ ಪಾರಾಗುವುದಕ್ಕೆ ಏನೂ ಮಾಡಿಯಾರು. ಇಷ್ಟರ ಮೇಲೆ ಆಚಾರ್ಯರಾದರೂ ಇದನ್ನೆಲ್ಲ ನಂಬುತ್ತಾರೆ ಎನ್ನುವುದು ಹೇಗೆ? ನಿನ್ನ ಮುಖ ಹೊರಗೆ ಕಾಣಿಸಿದರೂ ಸಾಕು, ಅಲ್ಲಿಗೇ ಕಥೆ ಮುಗಿಯಿತು. ಅಂತಹ ಪ್ರಯತ್ನವೆಲ್ಲ ನಡೆಯಲಾರದು. ಈಗ ನಾನು ಹೇಳಿದ ದಾರಿಯೊಂದೇ ಇರುವುದು.’’
ಈಗ ಚಾರು ಬಾಯಿಬಿಟ್ಟಳು.
“ಹೌದು ಚಿತ್ರಕ. ಶಂಖ ಹೇಳುತ್ತಿರುವುದು ಸರಿ. ನಾವು ಗಂಟುಮೂಟೆ ಕಟ್ಟಿಕೊಂಡು ಈ ದುಷ್ಟರ ಬಲೆಯಿಂದ ದೂರ ಹೋಗೋಣ. ಇಲ್ಲಿ ಮನೆ, ಹಸುಗಳನ್ನು ಬಿಟ್ಟರೆ ನಮ್ಮದು ಎನ್ನುವುದು ಏನಿದೆ ಹೇಳು. ಇವರ ಭಯ ಇಲ್ಲದ ಊರಿನಲ್ಲಿ ನೆಮ್ಮದಿಯಾಗಿ ಇರಬಹುದು. ದುಡಿದು ಉಣ್ಣುವವರಿಗೆ ಯಾವ ಊರಾದರೇನು? ನಾವು ತಪ್ಪಿಸಿಕೊಳ್ಳುವುದಕ್ಕೆ ಶಂಖನೂ ಸಹಾಯ ಮಾಡಿಯಾನು.’’
“ನನ್ನಿಂದಾಗುವುದನ್ನು ಖಂಡಿತ ಮಾಡುತ್ತೇನೆ ಚಾರು. ಆದರೆ ಎಲ್ಲಿಯೂ ನಾನು ಸಹಾಯ ಮಾಡಿದೆ ಎನ್ನುವುದನ್ನು ಹೇಳಕೂಡದು. ಇದೆಲ್ಲ ಮುಗಿದ ಮೇಲೆ ತಣ್ಣಗೆ ಬಂದು ಮನೆ ಸೇರಿಕೊಳ್ಳಿ.’’ ಶಂಖ ಆಶ್ವಾಸನೆ ಕೊಟ್ಟ.
“ಗಂಟುಮೂಟೆ ಕಟ್ಟಿಕೊಂಡು ಹೋಗುವುದು ಹೌದು. ಎಲ್ಲಿಗೆ ಎಂದು ಬೇಕಲ್ಲ. ನಮಗೆ ಹೊರಗಿನ ರಾಜ್ಯದಲ್ಲಿ ನೆಂಟರಿಲ್ಲ. ನೆಂಟರು ಬಿಡು, ಗೊತ್ತಿರುವವರೂ ಇಲ್ಲ. ಏನೂ ತಿಳಿಯದ ಯಾವುದೋ ಊರಿಗೆ ಹೋಗಿ ಇರುವುದಾದರೂ ಎಲ್ಲಿ? ಅಯ್ಯೋ ದೇವರೇ, ಹುಟ್ಟಿದ ಊರಿನಲ್ಲೇ ಅನಾಥರಾದೆವಲ್ಲ! ಇದೆಂತಹ ಸಂಕಟ ಬಂತಪ್ಪ” – ಎಂದ ಚಿತ್ರಕ. ಅವನ ಬುದ್ಧಿಗೆ ಮಂಕುಬಡಿದಂತೆ ಆಗಿತ್ತು.
“ನೋಡೋಣ. ನನ್ನಿಂದಾಗುವ ಸಹಾಯ ಮಾಡುತ್ತೇನೆ ಅಂದೆನಲ್ಲ? ಇಲ್ಲಿಂದ ಪೂರ್ವಕ್ಕೆ ಕಾಡಿನ ನಡುವೆ ಒಂದು ಗೊಲ್ಲರ ಹಟ್ಟಿಯಿದೆ. ಅದರ ಯಜಮಾನ ನನಗೆ ಸ್ವಲ್ಪಮಟ್ಟಿಗೆ ಗೊತ್ತಿರುವವನು. ನೀವು ಗತಿಯಿಲ್ಲದೆ ಅಲೆಯುವವರು ಎಂದು ನಂಬಿಸಿದರೆ ಕೆಲವು ತಿಂಗಳು ಅಲ್ಲಿ ಇರುವುದಕ್ಕೆ ಅನುಮತಿ ಕೊಟ್ಟಾನು. ಅವರು ಕಾಡುಜನ. ಈ ಕಾರಸ್ಥಾನ, ಮತ್ತೊಂದು ಅವರಿಗೆ ಅರ್ಥವಾಗದು. ಬಡಪಾಯಿಗಳಿಗೆ ಇರುವುದಕ್ಕೆ ಒಂದು ಗುಡಿಸಲು ಬಿಟ್ಟುಕೊಟ್ಟಾರು. ನಿಮಗೆ ಹೇಗೂ ಹಸುಗಳನ್ನು ಸಾಕಿ ಗೊತ್ತಿದೆಯಷ್ಟೆ? ಇಲ್ಲಿ ದುಡಿಯುವ ಬದಲು ಅಲ್ಲಿ ದುಡಿದರಾಯಿತು. ಚಾರು ಹೇಳಿದ ಹಾಗೆ ದುಡಿದು ಉಣ್ಣುವವರಿಗೆ ಎಲ್ಲಾದರೇನು? ಅಲ್ಲವೆ? ನೀವು ಬೆಳಕಾಗುವುದಕ್ಕೆ ಒಂದು ಜಾವ ಮೊದಲೇ ಹೊರಟುಬಿಡಿ. ಆಮ್ರಪುರದ ಹೊರಗಿನ ಹೊಲಗದ್ದೆಗಳ ಆಚೆಗೆ ಒಂದು ಕೊಳವಿದೆ. ಅದರ ಪಕ್ಕದಲ್ಲಿ ದೊಡ್ಡ ಆಲದ ಮರ ಇದೆ. ಅಲ್ಲಿಗೆ ಹೋಗಿ ಸೇರುವಷ್ಟರಲ್ಲಿ ಚೆನ್ನಾಗಿ ಬೆಳಕು ಹರಿದಿರುತ್ತದೆ. ಆ ಸ್ಥಳವನ್ನು ಗುರುತಿಸುವುದು ಕಷ್ಟವಾಗಲಾರದು. ಅಲ್ಲಿ ನೀವು ಕಾದಿರಿ. ನಾನು ಒಂದಿಷ್ಟು ಸಿದ್ಧತೆ ಮಾಡಿಕೊಂಡು ಅಲ್ಲಿಗೆ ಬರುತ್ತೇನೆ. ಏನಾದರೂ ನೆಪ ಹೇಳಿ, ಉದ್ಯೋಗಕ್ಕೆ ನಾಲ್ಕು ದಿನ ಬರಲಾಗುವುದಿಲ್ಲವೆಂದು ತಿಳಿಸಿ ಬರುತ್ತೇನೆ. ಅರ್ಥವಾಯಿತೆ? ದೊಡ್ಡ ಮೂಟೆಗಳನ್ನು ತರಬೇಡಿ. ಕಂಡವರಿಗೆ ಏನೇನೋ ಸಂಶಯ ಬರುತ್ತದೆ. ಕಾಡಿನ ದಾರಿಯಲ್ಲಿ ಅದನ್ನೆಲ್ಲ ಹೊತ್ತುಕೊಂಡು ನಡೆಯುವುದೂ ಕಷ್ಟ’’ ಎಂದು ಶಂಖ ಸೂಚಿಸಿದ.
ಅದಕ್ಕೆ ಒಪ್ಪದೆ ಬೇರೆ ದಾರಿಯಿರಲಿಲ್ಲ ಅವರಿಗೆ.
ಶಂಖ ಏನು ಮಾಡಬೇಕೆಂದು ಮತ್ತೊಮ್ಮೆ ವಿವರಿಸಿ ಹೇಳಿ, ಹೊರಟುಹೋದ.
ಇಷ್ಟಾಗುವಾಗ ಚಿತ್ರಕ ಮತ್ತು ಚಾರು ಇಬ್ಬರ ನಿದ್ರೆಯೂ ಹಾರಿಹೋಗಿತ್ತು. ಆದರೂ ಸ್ವಲ್ಪ ಹೊತ್ತು ಚಾಪೆಯಲ್ಲಿ ಮೈಚೆಲ್ಲಿದರು. ಸೂರ್ಯೋದಯಕ್ಕೆ ಎಷ್ಟೋ ಮೊದಲೇ ಎದ್ದು, ಮಕ್ಕಳಿಬ್ಬರನ್ನೂ ಎಬ್ಬಿಸಿದರು. ಅವರಿಗೆ ತಮಗೆದುರಾದ ಸಂಕಟವನ್ನು ಅರ್ಥವಾಗುವಷ್ಟು ಹೇಳಿ, ಹೊರಡಿಸಿದರು. ಚಂಪಾ ಇವರು ಹೇಳದಿದ್ದರೂ ಆಪತ್ತಿನ ಗಂಭೀರತೆಯನ್ನು ಗ್ರಹಿಸಿದ್ದಳು. ತೀರ ಅಮೂಲ್ಯವಾದ ನಾಲ್ಕು ಬಂಗಾರದ ಒಡವೆಗಳು, ಆಪತ್ತಿಗೆಂದು ಬಚ್ಚಿಟ್ಟಿದ್ದ ಕೆಲವು ಚಿನ್ನ, ಬೆಳ್ಳಿಯ ನಾಣ್ಯಗಳು, ಒಂದಿಷ್ಟು ಬಟ್ಟೆ, ದಾರಿಯ ಮಧ್ಯದಲ್ಲಿ ಹಸಿವು ತೀರಿಸಿಕೊಳ್ಳುವುದಕ್ಕೆ ಸ್ವಲ್ಪ ಆಹಾರ ಹೀಗೆ ಅಗತ್ಯವಾದದ್ದನ್ನು ಗಂಟು ಕಟ್ಟಿದರು.
ಅವರಿಗೆ ದೊಡ್ಡ ಸಮಸ್ಯೆಯಾಗಿ ಕಾಣಿಸಿದ್ದು ಸಾಕಿದ ಹಸುಗಳು ಮತ್ತು ಅವುಗಳ ಕರುಗಳು. ಅವುಗಳನ್ನು ಜೊತೆಗೆ ಒಯ್ಯುವಂತೆಯೂ ಇಲ್ಲ. ಬಿಟ್ಟು ಹೋಗುವಂತೆಯೂ ಇಲ್ಲ. ಮನೆಯಾದರೆ ಹೊರಗಿನ ಚಿಲುಕ ಸಿಕ್ಕಿಸಿದರೆ ಸಾಕು. ಅದು ಎಲ್ಲಿಗೂ ಹೋಗಲಾರಷ್ಟೆ? ಆದರೆ ಹಸುಗಳ ವಿಚಾರ ಹಾಗಲ್ಲ. ಅವುಗಳು ಸಾಕಿದವರನ್ನು ನಂಬಿಕೊಂಡಿರುವವು. ಅವರನ್ನು ಬಿಟ್ಟು ಅವು ಇರಲಾರವು. ಸಾಕಿದವರಿಗೂ ಅಷ್ಟೇ. ಅವುಗಳ ಮೇಲೆ ಸಹಜವಾಗಿ ಒಂದು ಮಮತೆ ಬೆಳೆದಿರುತ್ತದೆ. ದನಕರುಗಳೆಂದರೆ ಮಕ್ಕಳ ಹಾಗೆ. ಅವುಗಳನ್ನು ಏನು ಮಾಡೋಣ ಎಂದು ನಾಲ್ಕು ಮಂದಿಯೂ ಚಿಂತಿಸಿದರು. ಹತ್ತಿರದ ಮನೆಯವರಲ್ಲಿ ಬಿಟ್ಟು ಹೋಗುವುದೆ? ಅವರು ಹಾಲಿನ ಆಸೆಗೆ ಒಪ್ಪಿಕೊಂಡಾರು. ಆದರೆ ಆಗ ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ಏನೆಂದು ಉತ್ತರಿಸುವುದು, ತಮಗೇ ಉತ್ತರ ಗೊತ್ತಿಲ್ಲದಿರುವಾಗ?
ಒಂದು ವೇಳೆ ರಾಜಭಟರು ಬಂದು ವಿಚಾರಣೆಗೆ ತೊಡಗಿದರೆ, ಇದೆಲ್ಲ ಗುಟ್ಟಾಗಿ ಉಳಿಯುವುದಿಲ್ಲ. ಚಾರುವಿನ ತವರಿನಲ್ಲಿ ಬಿಡಬಹುದಿತ್ತು. ಆದರೆ ಅವಳ ತಂದೆ, ತಾಯಿ ಅವಳ ಮದುವೆಯಾದ ಕೊಂಚ ಕಾಲದಲ್ಲೇ ತೀರಿಕೊಂಡಿದ್ದರು. ಅಲ್ಲದಿದ್ದರೂ ಅಲ್ಲಿಗೆಲ್ಲ ಹೊಡೆದುಕೊಂಡು ಹೋಗಿ ಬಿಟ್ಟು ಬರುವ ಅವಕಾಶವೂ ಇರಲಿಲ್ಲ. ಹಟ್ಟಿಯಲ್ಲಿ ಕಟ್ಟಿ ಹೋದರೆ ಹುಲ್ಲು ನೀರಿಲ್ಲದೆ ಸಾಯಬೇಕಷ್ಟೆ.
ಕೊನೆಗೆ ಅವುಗಳ ಕೊರಳ ಹಗ್ಗ ಕಳಚಿ ಬಿಟ್ಟುಬಿಟ್ಟರು. ಆಯುಸ್ಸಿದ್ದರೆ ಬದುಕಿಕೊಳ್ಳಲಿ ಎಂದ ಚಿತ್ರಕ. ಋಣವಿದ್ದರೆ, ತಾವು ಹಿಂದೆ ಬಂದರೆ ಮತ್ತೆ ನೋಡೋಣ ಎಂದುಕೊAಡರು.
ಆದರೆ ಹಗ್ಗ ಕಳಚುವಾಗ ಮಾತ್ರ ಚಾರುವಿಗೆ ದುಃಖ ತಡೆಯಲಾಗಲಿಲ್ಲ. ಅಷ್ಟು ಪ್ರೀತಿಯಿತ್ತು ಅವುಗಳ ಮೇಲೆ. ಚಂಪೆಯAತೂ ಕರುಗಳ ಕೊರಳನ್ನಪ್ಪಿ ಅತ್ತಳು. ಅವಳೇ ಅವುಗಳನ್ನು ಮೇಯಿಸುತ್ತಿದ್ದವಳು. ಆ ಹಸುಗಳಾದರೂ ಹಗ್ಗ ಬಿಚ್ಚಿದರೂ ಹಟ್ಟಿಯಿಂದ ಹೊರಹೋಗಲಿಲ್ಲ ಸಾಕಿದವರ ಮುಖ ಕೈಗಳನ್ನು ನೆಕ್ಕುತ್ತ ನಿಂತವು.
ಕೊನೆಗೆ ದೇವರ ಮೇಲೆ ಭಾರ ಹಾಕಿ ಹೊರಟೇಬಿಟ್ಟರು.
ಸದ್ದಾಗದಂತೆ ಹೆಜ್ಜೆಹಾಕುತ್ತ, ಆ ಕತ್ತಲಿನಲ್ಲಿ ಏನೂ ಕಾಣಿಸದಿದ್ದರೂ ತಿರುತಿರುಗಿ ನೋಡುತ್ತ ಸಾಗಿದರು.
ಇಷ್ಟು ಕಾಲ ತಮ್ಮದು ಎಂದುಕೊಂಡ ಮನೆ ಇದೀಗ ತಮ್ಮದಲ್ಲವಾಗಿತ್ತು. ಜಿತುವೂ ತಾನು ಆಡಿಕೊಂಡು ಬೆಳೆದ ಮನೆಯ ಅಂಗಳ ದಾಟುವಾಗ ಕಣ್ಣೀರು ಹರಿಸಿದ. ಅವನ ಮುಗ್ಧ ಮನಸ್ಸಿಗೆ ತಾವು ಇನ್ನು ಹಿಂದೆ ಬರುವುದಿಲ್ಲ ಎಂದು ಅರ್ಥವಾಗಿತ್ತೋ ಏನೋ. ತಾನು ಹುಟ್ಟಿ ಬೆಳೆದ, ಹೆತ್ತವರ ಮಮತೆಯನ್ನು ಉಂಡು ತಣಿದ ಮನೆಯನ್ನು ತ್ಯಜಿಸಿ ಹೋಗುವ ಹೊತ್ತು ಚಿತ್ರಕನ ಮನಸ್ಸೂ ತಲ್ಲಣಿಸಿತು. ತಾನು ಆಡಿ ಬೆಳೆದ ಜಗುಲಿ, ತಾಯಿ ಜೋಗುಳ ಹಾಡಿ ಮಲಗಿಸುತ್ತಿದ್ದ ಓವರಿ, ತಂದೆಯೊಂದಿಗೆ ಅವನ ಬೆರಳು ಹಿಡಿದು ನಡೆಗಲಿತ ಅಂಗಳ – ಮತ್ತೊಮ್ಮೆ ಮರುಕೊಳಿಸಿದ ನೆನಪುಗಳಿಂದ ಹೃದಯ ಭಾರವಾಯಿತು. ಮತ್ತೆ ಈ ಮನೆಗೆ ಬರುತ್ತೇವೋ ಇಲ್ಲವೋ?
ಚಾರು ಗಂಡನ ಬೇಗುದಿ ಅರ್ಥವಾದವಳಂತೆ ಮೌನವಾಗಿದ್ದಳು. ಅವಳಿಗೂ ಅಷ್ಟೇ ದುಃಖವಾಗುತ್ತಿತ್ತು. ಮದುವೆಯಾಗಿ ಬಂದು ಸೇರಿದ ಈ ಮನೆ, ಅದು ಗುಡಿಸಲೇ ಆದರೂ ಅವಳದೇ ಆಗಿತ್ತು. ಅಲ್ಲಿದ್ದ ಪ್ರತಿಯೊಂದು ವಸ್ತುವೂ ಅವಳ ಕೈಯ ಸ್ಪರ್ಶಕ್ಕೆ ಕಾಯುತ್ತಿದ್ದಂತೆ ಭಾಸವಾಯಿತು. ಅದನ್ನೆಲ್ಲ ಹಾಗೆಯೆ ಉಳಿಸಿ ಹೋಗುತ್ತಿದ್ದೇನೆ ಎನ್ನುವುದನ್ನು ನೆನೆದಾಗ ತವರಿನಿಂದ ಗಂಡನ ಜತೆ ಬರುವಾಗ ಆದಂತೆ ದುಃಖವಾಯಿತು. ಆಗ ಹೊಸ ಬದುಕಿನ ನಿರೀಕ್ಷೆಯಿತ್ತು, ಪುಳಕವಿತ್ತು. ಈಗ ಅಜ್ಞಾತವಾದ ಭೀತಿ ಮಾತ್ರ. ನಿಟ್ಟುಸಿರಿಟ್ಟು ಗಂಡ, ಮಕ್ಕಳ ಬೆನ್ನು ಹಿಡಿದು ನಡೆದಳು.
* * *
ಚಿತ್ರಕ ಎಲ್ಲವನ್ನೂ ಮೆಲುಕು ಹಾಕುತ್ತ ಚಾರು ನೀಡಿದ ರೊಟ್ಟಿಯನ್ನು ಮೆಲ್ಲುತ್ತಿದ್ದ. ತಾನು ತಿನ್ನುತ್ತಿರುವುದೇನು, ಅದರ ರುಚಿ ಹೇಗಿದೆ ಎಂದೇನಾದರೂ ಕೇಳಿದರೆ ಅವನಿಗೆ ಉತ್ತರಿಸುವುದು ಕಷ್ಟವಾಗುತ್ತಿತ್ತು. ಅಷ್ಟರಮಟ್ಟಿಗೆ ಅನ್ಯಮನಸ್ಕನಾಗಿದ್ದ.
ಅಷ್ಟರಲ್ಲಿ ಕುದುರೆಗಳ ಖುರಪುಟದ ಸದ್ದು ಕೇಳಿಸಿತು.
ಅದರ ಬೆನ್ನಿಗೇ ಶಂಖನ ಧ್ವನಿಯೂ ಮೊಳಗಿತು.
“ಓ…ನೀವು ಬಹು ಬೇಗನೇ ಬಂದುಬಿಟ್ಟಿದ್ದೀರಿ.’’
ಅವನೊಂದಿಗೆ ಒಂದಿಬ್ಬರು ಅಪರಿಚಿತರಿದ್ದರು ಅವರು ಕುದುರೆಗಳನ್ನೇರಿ ಬಂದಿದ್ದರು. ಎರಡು ಕುದುರೆಗಳು. ಒಂದರ ಮೇಲೆ ಇಬ್ಬರು. ಮತ್ತೊಂದು ಕುದುರೆಯ ಮೇಲೆ ಶಂಖ. ಅವನ ಕುದುರೆಯ ಬೆನ್ನ ಮೇಲೆ ಏನೋ ಬಟ್ಟೆಯ ಗಂಟೂ ಇತ್ತು.
ಅವರತ್ತ ಚಿತ್ರಕ ಪ್ರಶ್ನಾರ್ಥಕವಾಗಿ ನೋಡಿದ.
“ಈಗಷ್ಟೇ ಬಂದೆವು. ನೀನು…ಇವರು..’’ ತಡವರಿಸಿದ ಚಿತ್ರಕನ ಆತಂಕ ಅರ್ಥವಾದಂತೆ ಮುಗುಳ್ನಕ್ಕ ಶಂಖ, “ಈಗ ಬಂದೆ” ಎಂದು, ಅಪರಿಚಿತರಿಬ್ಬರನ್ನು ಕೊಂಚ ದೂರ ಕರೆದೊಯ್ದ. ಅವರೊಳಗೆ ಏನೋ ಮಾತುಕತೆ ನಡೆಯಿತು.
ಇಬ್ಬರಲ್ಲಿಯೂ ತಗ್ಗಿದ ದನಿಯಲ್ಲಿ ಏನೋ ಹೇಳಿ, ಅವರಿಬ್ಬರ ಬೆನ್ನುತಟ್ಟಿ ಕಳುಹಿಸಿ, ಶಂಖ ಈ ಕಡೆ ಬಂದ. ಅವರು ಕುದುರೆಗಳನ್ನೇರಿ ಎತ್ತಲೋ ಧಾವಿಸಿದರು.
(ಸಶೇಷ)