ತನ್ನ ನಾಲ್ವರು ಭಟರೊಂದಿಗೆ ಕುದುರೆಯೇರಿ ಹೊರಟಿದ್ದ ರುದ್ರ ಕುಪಿತನಾಗಿದ್ದ. ಅದಕ್ಕೆ ಒಂದು ಕಾರಣ, ನಗರದಲ್ಲಿದ್ದ ತನ್ನ ಪಡೆ ಇನ್ನೂ ತಮ್ಮನ್ನು ಕೂಡಿಕೊಂಡಿಲ್ಲ ಎಂಬುದು. ಇನ್ನೊಂದು ಅವರಿಗಾಗಿ ನಿರೀಕ್ಷಿಸುತ್ತ ತಮ್ಮ ನಡೆ ನಿಧಾನವಾದುದು. ಕುದುರೆಗಳಿಗೂ ಕಾಡಿನ ನಡುವೆ ಸಾಗುವುದು ಕಠಿಣವೇ ಆಗಿತ್ತು. ತಾವು ವಿಳಂಬಿಸಿದಷ್ಟೂ ಚಿತ್ರಕನ ಕುಟುಂಬ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಅವರು ಸಾಗಿದ ದಾರಿಯ ಕುರುಹುಗಳೂ ಅಳಿಯುತ್ತವೆ. ಹೇಗಾದರೂ ಅವರನ್ನು ಹಿಡಿದು ಬಂಧಿಸಿ ನಗರಕ್ಕೆ ಒಯ್ಯಬೇಕಲ್ಲ!
ಬೆಳಗಾಯಿತು. ಶಂಖನೂ, ಚಿತ್ರಕನ ಕುಟುಂಬವೂ ಘೋಷದ ದಿಕ್ಕಿನಲ್ಲಿ ಹೆಜ್ಜೆಹಾಕತೊಡಗಿದರು. ಪೂರ್ವದಿಕ್ಕಿನ ಅರಣ್ಯದೊಳಗೆ, ತೆರವಿಲ್ಲದೆ ಹಬ್ಬಕೊಂಡ ಪೊದರುಗಳು, ಗಿಡಬಳ್ಳಿಗಳು, ಮುಳ್ಳಕಂಟಿಗಳ ನಡುವೆ ದಾರಿಯೆಲ್ಲಿಂದ? ಆದರೂ ದಿಕ್ಕಿನ ಕಲ್ಪನೆಯನ್ನು ಮಾಡಿಕೊಂಡು, ಶಂಖನ ಊಹೆಯನ್ನು ನಂಬಿ ಮುಂದುವರಿದರು. ಹಾಗೂಹೀಗೂ ಹರದಾರಿಯಷ್ಟು ದೂರ ಸಾಗಿದ ಮೇಲೆ ಪ್ರಾಣಿಗಳು ನಡೆದಾಡುವ ಜಾಡು ಕಾಣಿಸಿತು. ಅದನ್ನೇ ಆಧರಿಸಿ ಮತ್ತೂ ಮುಂದೆ ಹೆಜ್ಜೆಹಾಕಿದರು. ಕೊಂಚ ದೂರ ಮುಂದುವರಿದಾಗ ಶಂಖನಿಗೆ ಸಂಶಯ ಬಂತು.
“ಕೊಂಚ ನಿಲ್ಲಿ. ನಾವೀಗ ಹೋಗುತ್ತಿರುವ ದಾರಿಯ ಕುರಿತು ನನಗೆ ಸಂದೇಹ ಉಂಟಾಗುತ್ತಿದೆ. ಹೋಗುತ್ತಿರುವುದು ಪೂರ್ವಕ್ಕೇ ಹೌದಾದರೂ, ನಮ್ಮ ಜಾಡು ದಕ್ಷಿಣಕ್ಕೆ ಒತ್ತಿದರೆ ಕಷ್ಟ. ಈಗಾಗಲೇ ನಮಗೆ ಸರಯೂ ನದಿಯ ಉಪನದಿಗಳಲ್ಲಿ ಒಂದಾದರೂ ಸಿಗಬೇಕಿತ್ತು. ಅದೇನೂ ಸಿಕ್ಕಿಲ್ಲ ಅಂದರೆ?’’
ಶಂಖ ಮಾತು ನಿಲ್ಲಿಸಿದ. ಅವನ ಹೆಜ್ಜೆಗಳೂ ಸ್ಥಗಿತವಾದವು. ಅವನೊಂದಿಗೆ ಉಳಿದವರೂ ನಿಂತರು.
“ಈಗ ಸರಿಯಾದ ದಾರಿ ಗೊತ್ತಾಗುವುದು ಹೇಗೆ?’’ ಎಂದು ಕೇಳಿದ ಚಿತ್ರಕ. ಅದೇ ಪ್ರಶ್ನೆ ಉಳಿದವರ ಮುಖದಲ್ಲೂ ಮೂಡಿತು.
“ಹತ್ತಿರದಲ್ಲಿ ಯಾವುದಾದರೂ ಋಷಿಗಳ ಆಶ್ರಮವಿದ್ದಲ್ಲಿ ಕೇಳಬಹುದಿತ್ತು. ಅಂತಹುದೇನೂ ಕಾಣಿಸುವುದಿಲ್ಲ” ಎಂದಳು, ಚಂಪೆ. ಶಂಖನಿಗೆ ಅವಳ ಬುದ್ಧಿವಂತಿಕೆಯ ಮಾತಿನಿಂದ ಆಶ್ಚರ್ಯವಾಯಿತು. ಅದನ್ನು ತೋರಗೊಡದೆ ಹೇಳಿದ,
“ಆದರೆ ಇಲ್ಲಿ ಆಶ್ರಮಗಳಾವುದೂ ಇದ್ದಂತೆ ಕಾಣದು. ಒಂದು ವೇಳೆ ಆಶ್ರಮ ಕಾಣಿಸಿದರೂ ಪ್ರಯೋಜನವಿಲ್ಲ. ಯಾಕೆಂದರೆ ನಾವು ಘೋಷದ ದಾರಿಯನ್ನು ಕೇಳಿದ್ದು ಶೋಧಕ್ಕೆ ಹೊರಟ ಭಟರಿಗೆ ತಿಳಿದರೆ ಅದು ಕಷ್ಟಕ್ಕೀಡು ಮಾಡುತ್ತದೆ.’’
“ಮತ್ತೇನು ಮಾಡೋಣ?’’ ಎಂದಳು ಚಾರು. ಅವಳಿಗೆ ನಡೆದ ಆಯಾಸದ ಪರಿಣಾಮ ಏದುಸಿರು ಬರುತ್ತಿತ್ತು.
“ನಾವೇ ಏನಾದರೂ ದಾರಿ ಹುಡುಕಬೇಕಷ್ಟೆ. ಒಂದು ಕೆಲಸ ಮಾಡೋಣ. ಜಿತುವಿಗಂತೂ ಹೆಜ್ಜೆಯಿಡುವುದು ಕಷ್ಟವಾಗುತ್ತಿದೆ. ಅಲ್ಲದೆ ಬಿಸಿಲೂ ಏರುತ್ತಿದೆ. ನೀವು ಇಲ್ಲಿ ಮರದ ಕೆಳಗೆ ಕೊಂಚ ವಿಶ್ರಾಂತಿ ಪಡೆಯಿರಿ. ನಾನು ಎತ್ತರದ ಮರವನ್ನು ಹತ್ತಿ, ಘೋಷದ ಸುಳಿವು ಸಿಗುವುದೋ ನೋಡುತ್ತೇನೆ” ಎಂದ ಶಂಖ. ಉಳಿದವರು ಅವನ ಮಾತನ್ನು ಕೂಡಲೇ ಒಪ್ಪಿಕೊಂಡರು.
ಶಂಖ ತುಸುದೂರ ಸರಿದು, ನೀಳವಾದ ಒಂದು ಮರವನ್ನು ಏರಿದ. ಹತ್ತಾರು ಮಾರು ಎತ್ತರದಲ್ಲಿ ಕವಲೊಡೆದ ಜಾಗದಲ್ಲಿ ಕುಳಿತು ಸುತ್ತಲೂ ಪರೀಕ್ಷಾರ್ಥ ದೃಷ್ಟಿಹರಿಸಿದ. ಕಾನನದ ದಟ್ಟವಾದ ಹಸಿರ ಸಮದ್ರವಲ್ಲದೆ ಬೇರೇನೂ ಗೋಚರಿಸಲಿಲ್ಲ. ಹಕ್ಕಿಗಳ ಕೂಜನ, ಮೃಗಗಳ ಕೂಗು ಬಿಟ್ಟರೆ ಮನುಷ್ಯರ ಸದ್ದೇನೂ ಇಲ್ಲ. ಈಗ ಶಂಖನಿಗೂ ಗೊಂದಲವಾಯಿತು. ಬರುವಾಗ ಜಾಡು ತಪ್ಪಿ, ಇನ್ನೆಲ್ಲಿಗಾದರೂ ಚಿತ್ರಕನ ಸಂಸಾರವನ್ನು ಕರೆತಂದ ಹಾಗಾಯಿತೆ? ಉಪಕಾರಕ್ಕೆ ಹೊರಟು ಅವರನ್ನೂ ಕಷ್ಟಕ್ಕೀಡು ಮಾಡಿದೆನೆ? ಇಲ್ಲ, ಹಾಗಾಗುವುದು ಶಕ್ಯವಿಲ್ಲ. ಹೊರಟ ದಿಕ್ಕು ಸರಿಯಾಗಿಯೇ ಇದೆ. ಆದರೂ ಘೋಷದ ಸುಳಿವೇಕೆ ಕಾಣುತ್ತಿಲ್ಲ? ಅಥವಾ ತನ್ನ ಕಣ್ಣುಗಳೇ ಮೋಸ ಮಾಡುತ್ತಿವೆಯೆ?
ಗಮನಿಸಿದ್ದು ಸಾಕಾಗಲಿಲ್ಲವೆಂದುಕೊಂಡು ಮತ್ತೂ ಸೂಕ್ಷ್ಮವಾಗಿ ನೋಡಿದಾಗ, ಬಲು ದೂರದಲ್ಲಿ ಒಂದಿಷ್ಟು ಹೊಗೆಯ ಸುಳಿವು ಕಂಡಿತು. ಅಬ್ಬಾ! ಬದುಕಿದೆ. ಅದೇ ಘೋಷವಿರಬೇಕು. ಅಥವಾ ಅದೇನಾದರೂ ಋಷ್ಯಾಶ್ರಮವೆ? ತಾನು ತಿಳಿದಂತೆ ಈ ಸರಹದ್ದಿನಲ್ಲಿ ಯಾವ ಆಶ್ರಮವೂ ಇಲ್ಲ. ಆದರೂ ಈ ಋಷಿಗಳ ವರ್ತನೆ ಹೀಗೆ ಎಂದು ನಿರ್ಧರಿಸುವುದೆಂತು? ಏಕಾಂತಕ್ಕಾಗಿ ಅರಣ್ಯದ ಯಾವ ಭಾಗದಲ್ಲೂ ಅವರು ಆಶ್ರಮ ಕಟ್ಟಿಕೊಂಡಾರು. ಅಂತಹ ಹೊಸ ಆಶ್ರಮದ ಕುರುಹೇ ಇದು? ಅವನಿಗೆ ತತ್ಕ್ಷಣ ಯಾವ ನಿರ್ಣಯಕ್ಕೂ ಬರಲಾಗಲಿಲ್ಲ. ಹೊಗೆ ಕಾಣಿಸುತ್ತಿದ್ದ ಪ್ರದೇಶವಂತೂ ಒಂದೆರಡು ಹರದಾರಿಗಳಷ್ಟು ದೂರದಲ್ಲಿತ್ತು. ಹತ್ತಿರಕ್ಕೆ ಹೋಗದೆ ನಿಜ ತಿಳಿಯಲಾರದು. ಅಷ್ಟು ದೂರ ಇವರನ್ನೆಲ್ಲ ನಡೆಸಿಕೊಂಡು ಹೋಗಿ, ಅಲ್ಲಿದ್ದವರಿಗೆ ತಮ್ಮ ಗುಟ್ಟು ಗೊತ್ತಾದರೆ, ತಮಗಾಗಿ ಹುಡುಕುತ್ತಿರುವ ಪಡೆಗಳಿಗೆ ತಾವು ಸುಲಭದ ತುತ್ತಾಗುತ್ತೇವೆ. ಇಲ್ಲ, ಇಲ್ಲ ಹಾಗಾಗಕೂಡದು. ಮರದಲ್ಲೇ ಕುಳಿತು ತೀವ್ರವಾಗಿ ಚಿಂತಿಸಿದ ಶಂಖ. ಏನೋ ಒಂದು ನಿರ್ಧಾರಕ್ಕೆ ಬಂದ. ಮರದ ಮೇಲಿಂದ ಕೆಳಗಿಳಿದ.
ಚಿತ್ರಕನ ಕುಟುಂಬ ವಿಶ್ರಾಂತಿ ಪಡೆಯುತ್ತಿದ್ದಲ್ಲಿಗೆ ಬಂದ.
“ನೀವು ಇಲ್ಲಿಯೇ ಕುಳಿತಿರಿ. ಹತ್ತಿರದಲ್ಲಿ ಯಾವುದೋ ಸಣ್ಣ ತೊರೆ ಹರಿಯುವ ಸದ್ದು ಕೇಳಿಸುತ್ತಿದೆ. ಕೈಕಾಲು ತೊಳೆದು ನೀರು ಕುಡಿಯಿರಿ. ಆಹಾರವೇನಾದರೂ ಉಳಿದಿದ್ದ ಪಕ್ಷ ಅದನ್ನು ಸೇವಿಸಿ. ನಾನು ಇನ್ನಷ್ಟು ಪರಿಶೀಲನೆ ಮಾಡಿ ಒಂದು ಗಳಿಗೆಯಲ್ಲಿ ಹಿಂದೆ ಬರುತ್ತೇನೆ. ಚಿತ್ರಕ, ಈ ಖಡ್ಗವನ್ನು ಜತೆಯಲ್ಲಿರಿಸಿಕೋ. ಕ್ರೂರ ಪ್ರಾಣಿಗಳು ಎರಗುವ ಸಾಧ್ಯತೆಯಿದೆ. ಎಚ್ಚರವಿರಲಿ” ಎಂದು ಹೇಳಿ, ತಾನೂ ಒಂದು ಕಿರುಗತ್ತಿಯನ್ನು ಎತ್ತಿಕೊಂಡ. ಅವನ ಮಾತಿಗೆ ಚಿತ್ರಕ ತಲೆಯಾಡಿಸಿದ ಮಾತ್ರ. ಮತ್ತೇನು ತಾನೇ ಮಾಡಬಲ್ಲ? ಅರಣ್ಯದೊಳಗೆ ಬಂದಾಗಲೇ ಅವನಿಗೆ ದಿಕ್ಕು ದೆಸೆಯ ಅರಿವು ತಪ್ಪಿಹೋಗಿತ್ತು.
ಶಂಖ ಮೊದಲು ತಾನೇರಿದ ಮರದ ದಿಕ್ಕಿನಲ್ಲಿ ಬಂದು, ಅಲ್ಲಿಂದ ಮುಂದೆ ಹೆಜ್ಜೆಹಾಕಿದ. ತಾನು ಬಂದ ಜಾಡು ತಿಳಿಯುವಂತೆ ಅಲ್ಲಲ್ಲಿ ಸಣ್ಣ ರೆಂಬೆಗಳನ್ನು ಕತ್ತರಿಸಿ ಹಾಕಿದ. ಅರ್ಧ ಹರದಾರಿ ಬಂದಾಗ ದಿನ್ನೆಯಂತಹ ಪ್ರದೇಶ ಸಿಕ್ಕಿತು. ಅಲ್ಲಿ ಎತ್ತರವಾಗಿ ಬೆಳೆದ ಮರವೊಂದಿತ್ತು. ಅದನ್ನು ಏರಿ, ಹಿಂದಿನಂತೆ ಗಮನಿಸಿ ನೋಡಿದ. ಹೊಗೆ ಸ್ಪಷ್ಟವಾಗಿ ಕಾಣಿಸಿತು. ಒಂದೆಡೆಯಲ್ಲ, ಅಲ್ಲಲ್ಲಿ ಕಾಣಿಸಿದವು. ಹತ್ತಾರು ಕುಟುಂಬಗಳು ಒಟ್ಟಿಗೇ ವಾಸಿಸುವ ಕುರುಹು ಅದು. ಅದರಿಂದ ಅಚೆಗೆ ಅರಣ್ಯವೂ ತೆರವಾಗಿದ್ದಂತೆ ತೋರಿತು. ಕೊಂಚ ಬಯಲಿನಂತೆ ಇದ್ದ ಆ ಭಾಗದಲ್ಲಿ ಹಸಿರು ಬೆಳೆದಿತ್ತು. ಬಹುಶಃ ಹುಲ್ಲುಗಾವಲು ಇರಬಹುದೆಂದು ಶಂಖ ತರ್ಕಿಸಿದ. ತಾನೇರಿದ್ದ ಮರದಿಂದ ಎಡಕ್ಕೆ ಅನತಿ ದೂರದಲ್ಲಿ ಸಣ್ಣ ದಾರಿಯಂತಹ ಜಾಡೂ ಇತ್ತು. ಈಗ ಅವನಿಗೆ ತಾವು ಮಾಡಿದ ತಪ್ಪು ಅರಿವಿಗೆ ಬಂತು. ಹಿಂದೆ ಎಲ್ಲಿಯೋ ಒಂದು ಕಡೆ, ಹೋಗಬೇಕಾದ ಜಾಡನ್ನು ಬಿಟ್ಟು ಬಲಕ್ಕೆ ಹೊರಳಿದ್ದೇವೆ.
ಮತ್ತೆ ಹಿಂದೆ ಹೋಗಿ, ಆ ಜಾಡನ್ನು ಹಿಡಿದರೆ ಸೂರ್ಯ ಮುಳುಗುವ ಮುನ್ನ ಘೋಷವನ್ನು ಸೇರಬಹುದು ಎಂದು ತೋರಿತು. ಅವನು ಕೆಳಗಿಳಿದ.
* * *
ತನ್ನ ನಾಲ್ವರು ಭಟರೊಂದಿಗೆ ಕುದುರೆಯೇರಿ ಹೊರಟಿದ್ದ ರುದ್ರ ಕುಪಿತನಾಗಿದ್ದ. ಅದಕ್ಕೆ ಒಂದು ಕಾರಣ, ನಗರದಲ್ಲಿದ್ದ ತನ್ನ ಪಡೆ ಇನ್ನೂ ತಮ್ಮನ್ನು ಕೂಡಿಕೊಂಡಿಲ್ಲ ಎಂಬುದು. ಇನ್ನೊಂದು ಅವರಿಗಾಗಿ ನಿರೀಕ್ಷಿಸುತ್ತ ತಮ್ಮ ನಡೆ ನಿಧಾನವಾದುದು. ಕುದುರೆಗಳಿಗೂ ಕಾಡಿನ ನಡುವೆ ಸಾಗುವುದು ಕಠಿಣವೇ ಆಗಿತ್ತು. ತಾವು ವಿಳಂಬಿಸಿದಷ್ಟೂ ಚಿತ್ರಕನ ಕುಟುಂಬ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಅವರು ಸಾಗಿದ ದಾರಿಯ ಕುರುಹುಗಳೂ ಅಳಿಯುತ್ತವೆ. ಹೇಗಾದರೂ ಅವರನ್ನು ಹಿಡಿದು ಬಂಧಿಸಿ ನಗರಕ್ಕೆ ಒಯ್ಯಬೇಕಲ್ಲ? ಒಂದೆಡೆಯಲ್ಲಿ ಚಿತ್ರಕಾದಿಗಳನ್ನು ಹಿಡಿಯುವ ಆತುರವೂ, ಇನ್ನೊಂದೆಡೆ ತನ್ನ ಪಡೆಗಾಗಿ ವಿಳಂಬಿಸುವ ಅನಿವಾರ್ಯವೂ ಅವನ ಮನಸ್ಸನ್ನು ಕ್ಷುಬ್ದವಾಗಿಸುತ್ತಿತ್ತು. ತಾವೇ ಐವರು ಆ ಕುಟುಂಬದ ನಾಲ್ವರನ್ನು ಸೆರೆಹಿಡಿದು ಒಯ್ಯುವುದು ಕಷ್ಟ. ಅದಕ್ಕಾಗಿ ತನ್ನ ಹದಿನಾರು ಯೋಧರ ಪಡೆಗಾಗಿ ನಿರೀಕ್ಷಿಸುವುದು ಅನಿವಾರ್ಯ. ತಾವು ಮುಂದೆ ಹೋದಷ್ಟೂ ತನ್ನ ಪಡೆ ತನ್ನನ್ನು ಸೇರುವುದು ವಿಳಂಬವಾಗುತ್ತದೆ. ಅಥವಾ ಅವರು ಜಾಡು ತಪ್ಪಿ, ಇನ್ನೆಲ್ಲಿಗೋ ಹೋದರೂ ಸಮಸ್ಯೆಯೇ.
ಹೀಗೆಲ್ಲ ಚಿಂತಿಸುತ್ತ ನಿಧಾನವಾಗಿ ಕುದುರೆಯನ್ನು ನಡೆಸುತ್ತ ಮುಂದೆ ಸಾಗುತ್ತಿದ್ದ ರುದ್ರನಿಗೆ ಬಹು ದೂರದಿಂದ ಸಿಳ್ಳೆಯ ಧ್ವನಿಯೊಂದನ್ನು ಕೇಳಿದಂತಾಯಿತು. ಅವನು ಕುದುರೆಯನ್ನು ನಿಲ್ಲಿಸಿದ. ಅವನ ಹಿಂದಿದ್ದವರೂ ನಿಂತರು.
“ಅದೇನು?’’ ಎಂದ ರುದ್ರ. ನಾಲ್ವರೂ ಅವನ ಮುಖ ನೋಡಿದರು.
“ಬಹುಶಃ ನಮ್ಮವರೇ ಇರಬೇಕು. ಸ್ವಲ್ಪ ತಡೆಯೋಣ. ಇದೇ ದಾರಿಯಲ್ಲಿ ಬರುತ್ತಿರಬೇಕು. ಯಾರಾದರೂ ಪ್ರತಿಯಾಗಿ ಸಿಳ್ಳೆ ಹಾಕಿ. ಖಡ್ಗ ಹಿರಿದಿರಿ. ಯಾವುದೇ ಸನ್ನಿವೇಶಕ್ಕೆ ಸಿದ್ಧರಾಗಿ’’ ಎಂದು ತನ್ನ ಸಹಚರರಿಗೆ ಎಚ್ಚರಿಸಿದ.
ಒಬ್ಬ ಯೋಧ ಸಿಳ್ಳೆ ಹಾಕಿದ. ಉತ್ತರ ಬಂತು. ತಮ್ಮವರೇ ಎಂಬುದು ಖಚಿತವಾಯಿತು.
ಕೊಂಚ ಹೊತ್ತಿನಲ್ಲಿ ಇಬ್ಬರು ರಾವುತರು ಬಂದು ಸೇರಿದರು.
“ಉಳಿದವರೆಲ್ಲಿ?’’
“ನಾಯಕ, ಅವರು ಅಲ್ಲಿಯೇ ನಿಂತಿದ್ದಾರೆ. ಒಂದು ಕೂಗಳತೆಯ ದೂರದಲ್ಲಿ ಅಗಲವಾಗಿ ಚಾಚಿಕೊಂಡ ಬಂಡೆಯಿದೆ. ಅಲ್ಲಿ ಕೆಲವರು ವಿಶ್ರಾಂತಿ ಪಡೆದ ಕುರುಹುಗಳಿವೆ. ಅವರೇ ಇರಬಹುದೋ ಏನೋ. ಒಮ್ಮೆ ನೀವು ಬಂದು ನೋಡುವುದು ಒಳಿತು ಅನಿಸಿ ನಾವಿಬ್ಬರೇ ಈ ಕಡೆ ಬಂದೆವು’’ ಎಂದ, ಬಂದ ರಾವುತರಲ್ಲಿ ಒಬ್ಬ.
ರುದ್ರ ತಡಮಾಡಲಿಲ್ಲ. “ನಡೆಯಿರಿ” ಎಂದು ತನ್ನ ಕುದುರೆಯನ್ನು ತಿರುಗಿಸಿದ.
ಅವರು ನಡೆದುಬಂದ ಜಾಡಿನಿಂದ ಕೊಂಚ ಪಕ್ಕಕ್ಕಿದ್ದ ಬಂಡೆಯದು. ಅಲ್ಲಿ ಯಾರೋ ತಿಂದುಬಿಟ್ಟ ರೊಟ್ಟಿಯ ಚೂರುಗಳು, ಅಲ್ಲಲ್ಲಿ ನೀರು ಚೆಲ್ಲಿ ಹಸಿಯಾಗಿದ್ದ ನೆಲ, ಮನುಷ್ಯರು ಓಡಾಡಿದ ಗುರುತುಗಳು ಚಿತ್ರಕನ ಕುಟುಂಬ ಅಲ್ಲಿ ವಿಶ್ರಮಿಸಿತ್ತು ಎಂಬುದಕ್ಕೆ ಸಾಕ್ಷಿಯಾಗಿದ್ದವು.
“ಓಹೋ. ಅವರು ಇಲ್ಲಿಯೇ ನಡೆದು ಹೋಗಿದ್ದಾರೆ ಎಂಬುದು ಸ್ಪಷ್ಟ. ನಾವು ಮೊದಲು ಇದನ್ನು ಗಮನಿಸಲಿಲ್ಲ. ನೀವು ಗುರುತಿಸಿ ಒಳ್ಳೆಯ ಕೆಲಸ ಮಾಡಿದಿರಿ” ಎಂದ ರುದ್ರ, ಅವರು ಹೋಗಿರಬಹುದಾದ ಜಾಡನ್ನು ಅರಸಿದ.
ಅಲ್ಲಲ್ಲಿ ಮುದುರಿದ ಪೊದರುಗಳು, ತುಂಡಾದ ಸಣ್ಣಸಣ್ಣ ರೆಂಬೆಗಳು ಸುಲಭವಾಗಿ ಗುಟ್ಟು ಬಿಟ್ಟುಕೊಟ್ಟವು.
ಅದೇ ಕುರುಹುಗಳನ್ನು ನೋಡುತ್ತ, ಅವರು ಮುಂದೆ ಸಾಗಿದರು.
ಸಾಯಂಕಾಲ ತಿರುಗಿ ಕತ್ತಲಾವರಿಸುವ ಹೊತ್ತಿಗೆ, ಚಿತ್ರಕನೇ ಮೊದಲಾದವರು ವಿಶ್ರಾಂತಿಗಾಗಿ ಕುಳಿತಿದ್ದ ಸ್ಥಳವನ್ನು ಸೇರಿದರು. “ಸದ್ಯ ರಾತ್ರಿ ಸಮೀಪಿಸುತ್ತಿದೆ. ಇನ್ನು ಮುಂದುವರಿಯುವ ಹಾಗಿಲ್ಲ. ಹತ್ತಿರದಲ್ಲಿ ದಿನ್ನೆಯಂತಹ ಜಾಗ ಕಾಣಿಸುತ್ತಿದೆ. ನಾವು ಅಲ್ಲಿಯೇ ರಾತ್ರಿಯನ್ನು ಕಳೆದು, ಹಗಲಿನ ವೇಳೆ ಅವರನ್ನು ಹುಡುಕುತ್ತ ಹೋಗೋಣ. ಬಹಳ ದೂರವಂತೂ ಹೋಗಿರಲಾರರು. ನಮಗೂ ಅವರಿಗೂ ಹೆಚ್ಚೆಂದರೆ ಒಂದು ದಿನದ ಅಂತರ. ಅವರ ಬೆನ್ನು ಹಿಡಿಯುವುದು ಇನ್ನು ಕಷ್ಟವಲ್ಲ. ದಿನ್ನೆಯ ಮೇಲೆ ಡೇರೆಯ ಬಟ್ಟೆಯನ್ನು ಬಿಡಿಸಿ” ಎಂದು ರುದ್ರ ಆದೇಶಿಸಿದ.
ಅವರು ಅಲ್ಲಿಯೇ ಆಹಾರವನ್ನು ತಿಂದು ಒಂದಿಷ್ಟು ಮದಿರೆಯನ್ನೂ ಕುಡಿದರು. ಕುದುರೆಗಳನ್ನು ಗುಂಪಾಗಿ ಕಟ್ಟಿ, ಅವುಗಳಿಗೆ ನೀರು ಕುಡಿಸಿ, ಒಂದಿಷ್ಟು ಹುಲ್ಲು, ಸೊಪ್ಪುಗಳನ್ನು ಹಾಕಿದರು. ಸರದಿಯಲ್ಲಿ ಕಾವಲಿಗೆ ವ್ಯವಸ್ಥೆ ಮಾಡಿಕೊಂಡು ಮಲಗಿದರು.
ಬೆಳಗಾಯಿತು. ಮೌನವಾಗಿದ್ದ ಪರಿಸರ ನಾನಾ ಸದ್ದುಗಳಿಂದ ತುಂಬಿತು. ರುದ್ರನೂ ಅವನ ಭಟರೂ ಬೆಳಗಿನ ವಿಧಿಗಳನ್ನು ಅಲ್ಲಿ ಹರಿಯುತ್ತಿದ್ದ ಸಣ್ಣ ತೊರೆಯಲ್ಲಿ ಮುಗಿಸಿಕೊಂಡು ಮುಂದಿನ ಪಯಣಕ್ಕೆ ಸನ್ನದ್ಧರಾದರು.
ರುದ್ರ ಈಗ ತೀವ್ರವಾಗಿ ಯೋಚಿಸುತ್ತಿದ್ದ.
ಚಿತ್ರಕನ ಸಂಸಾರ ಈ ಕಗ್ಗಾಡಿನಲ್ಲಿ ಎಲ್ಲಿ ಅವಿತಿರಬಹುದು? ಅಥವಾ ಮುಂದೆಲ್ಲಾದರೂ ಸಾಗಿ ಆಶ್ರಯ ಪಡೆಯುವ ಯೋಚನೆ ಮಾಡಿರಬಹುದೆ?
ಅವರು ಬಹಳ ದೂರ ಈ ಜಾಡಿನಲ್ಲಿ ಸಾಗುವಂತಿಲ್ಲ. ಕೆಲವು ಹರದಾರಿಗಳ ಆಚೆಗೆ ಸರಯೂ ನದಿ ಹರಿಯುತ್ತದೆ. ಅದನ್ನು ಹೆಂಡತಿ ಮಕ್ಕಳ ಜತೆ ಚಿತ್ರಕ ದಾಟಲಾರ. ಮತ್ತೆ ಉತ್ತರಕ್ಕೆ ಹೋದರೆ ಕಡಿದಾದ ಬೆಟ್ಟಗಳು. ಅವುಗಳನ್ನು ಏರುವುದು ದುಷ್ಕರ. ಏನೂ ಭದ್ರತೆಯಿಲ್ಲದೆ ಅವಿತು ಕುಳಿತರೆ ಒಂದೋ ಹೊಟ್ಟೆಗೆ ಆಹಾರವಿಲ್ಲದೆ ಸಾಯಬೇಕಾದೀತು. ಅಥವಾ ಕ್ರೂರ ಮೃಗಗಳಿಗೆ ಅವರೇ ಆಹಾರವಾಗಬೇಕಾದೀತು. ಎಲ್ಲಿ ಹೋಗಿರಬಹುದು?
ಇಲ್ಲೇನಾದರೂ ಋಷ್ಯಾಶ್ರಮಗಳಿರಬಹುದೆ? ತಪಸ್ವಿಗಳಾದ ಋಷಿಗಳನ್ನು ಆಶ್ರಯಕ್ಕಾಗಿ ಬೇಡಿಕೊಂಡಿರಬಹುದೆ ಚಿತ್ರಕ? ಹಾಗೊಂದು ವೇಳೆ ಆಗಿದ್ದರೆ ನಮಗೆ ಕಷ್ಟವೇ. ತಪಸ್ವಿಗಳು ಕೋಪಿಷ್ಟರು. ಅವರನ್ನು ಎದುರು ಹಾಕಿಕೊಂಡು ಚಿತ್ರಕನನ್ನು ಸೆರೆಹಿಡಿಯುವುದಕ್ಕೆ ಮುಂದಾದರೆ ಶಾಪಕ್ಕೆ ಮೈಗೊಡಬೇಕಾದೀತು. ಅವರು ಆಶ್ರಯ ನೀಡಿದವರು ರಾಜದ್ರೋಹಿಗಳು ಎಂದೇನಾದರೂ ಹೇಳಿ? ಇದೆಲ್ಲ ಒಟ್ಟು ಸಮಸ್ಯೆಯಾಗಿ ಕಾಣಿಸಿತು. ಅವನ ಚಿಂತೆಯನ್ನು ಗಮನಿಸಿದ ಭಟರಲ್ಲಿ ಒಬ್ಬ,
“ಒಡೆಯ” ಎಂದ.
“ಏನೋ?’’
“ಒಡೆಯಾ, ಇಲ್ಲಿಂದ ಪೂರ್ವಕ್ಕೆ ಎರಡು ಮೂರು ಹರದಾರಿ ದೂರದಲ್ಲಿ ಒಂದು ಗೋಮಾಳವಿದೆ. ಅಲ್ಲಿಯೇ ಹತ್ತಿರದಲ್ಲಿ ಗೊಲ್ಲರ ಹತ್ತಾರು ಹಟ್ಟಿಗಳಿವೆ ಎಂದು ಕೇಳಿದ್ದೇನೆ. ಅವರೇನಾದರೂ ಅಲ್ಲಿಗೆ ಹೋಗಿರಬಹುದೋ?’’
ಭಟನ ಮಾತು ಕೇಳಿದೊಡನೆ ರುದ್ರ ಚುರುಕಾದ.
“ಅದೇ ನಡೆದಿರಬಹುದು. ಬೇರೆಲ್ಲೂ ಮನುಷ್ಯರ ಸುಳಿವಿಲ್ಲ. ಅವರೇನಾದರೂ ಕಾಡಿನೊಳಗೇ ಇದ್ದರೂ ತಿನ್ನುವುದಕ್ಕೆ, ಮಲಗುವುದಕ್ಕೆ ಯಾವ ಅನುಕೂಲವೂ ಇಲ್ಲ. ಅಲ್ಲದೆ ಹಾಗೆ ಇದ್ದರೆ ಜೀವಕ್ಕೆ ಗಂಡಾಂತರ. ನೀನು ಹೇಳಿದ್ದೇ ಸರಿಯಿರಬೇಕು.
ಅವರು ಅಲ್ಲಿಯೇ ಇರಬಹುದು. ಆ ಗೋಮಾಳ ಎಲ್ಲಿ ಎಂದು ಮೊದಲು ಹುಡುಕೋಣ. ಬನ್ನಿ’’ ಎಂದ.
ಬನ್ನಿ ಎಂದದ್ದೇನೋ ಹೌದು.
ದಟ್ಟವಾದ ಅರಣ್ಯದಲ್ಲಿ ಆ ಗೋಮಾಳವನ್ನು ಹೇಗೆ ಕಂಡು ಹಿಡಿಯುವುದು ಎಂದು ಅವನಿಗೂ ತಿಳಿಯಲಿಲ್ಲ. ಅಲ್ಲದೆ ಒಟ್ಟು ಗದ್ದಲವಾಗುವಂತೆ ನುಗ್ಗುವ ಹಾಗೂ ಇಲ್ಲ. ಅವರಿಗೇನಾದರೂ ಗೊತ್ತಾಗಿ ಅಲ್ಲಿಂದ ಪಲಾಯನ ಮಾಡಿದರೆ, ಕೈಗೆ ಸಿಕ್ಕಿದ ಹಕ್ಕಿಗಳು ಹಾರಿಹೋದಂತೆಯೆ ಸರಿ. ಅದಕ್ಕಾಗಿ ಎಚ್ಚರ ವಹಿಸುವುದು ಅಗತ್ಯ. ಹೀಗೆ ಆಲೋಚಿಸಿ, ಪೂರ್ವದತ್ತ ನಿಧಾನವಾಗಿ ತನ್ನ ಪಡೆಯನ್ನು ನಡೆಸಿದ ರುದ್ರ.
ಅಲ್ಲಲ್ಲಿ ನಿಂತು, ದಿಕ್ಕನ್ನು ಖಚಿತಪಡಿಸಿಕೊಳ್ಳುತ್ತ ಮುಂದುವರಿದರು. ಸೂರ್ಯ ನಡುನೆತ್ತಿಗೆ ಬಂದಾಗ ಹೊಟ್ಟೆ ತುಂಬಿಸಿಕೊಂಡು, ಎರಡು ಗಳಿಗೆ ವಿಶ್ರಾಂತಿಯನ್ನು ಪಡೆದರು.
ಮುಂದೆ ಸಾಗುತ್ತಿದ್ದ ಹಾಗೆ, ಎಡ ಪಾರ್ಶ್ವದಲ್ಲಿ ಒಂದು ದಿನ್ನೆ ಕಾಣಿಸಿತು. ಅಲ್ಲಿ ನಿಂತು ಗಮನಿಸಿದಾಗ, ಅತಿ ದೂರದಲ್ಲಿ ಜನವಸತಿಯ ಕುರುಹುಗಳು ಗೋಚರಿಸಿದವು. ಅದೇ ಗೊಲ್ಲರ ಹಟ್ಟಿಗಳೆಂದು ನಿರ್ಧರಿಸಿ ಆ ದಿಕ್ಕಿನಲ್ಲಿ ಸಾಗಿದರು.
ಅವರು ಅಲ್ಲಿಗೆ ತಲಪಿದಾಗ ಸೂರ್ಯ ಪಶ್ಚಿಮದತ್ತ ವಾಲುತ್ತಿದ್ದ. ಹಟ್ಟಿಗಳ ಸುತ್ತಲೂ ಇದ್ದ ಬೇಲಿಯ ಆವರಣಕ್ಕಿಂತ ಕೊಂಚ ದೂರದಲ್ಲಿ ಅವರೆಲ್ಲ ನಿಂತರು. ಸೂಕ್ಷ್ಮವಾಗಿ ಗಮನಿಸಿದರು. ಬೇಲಿಯ ಆಚೆಗೆ ಕೂಗಳತೆಯ ದೂರದಲ್ಲಿ ಹತ್ತಿಪ್ಪತ್ತು ಗುಡಿಸಲುಗಳಿದ್ದವು. ಹಲವಾರು ಗೋಪಾಲಕರೂ, ವಿಶಾಲ ಗೋಮಾಳದಲ್ಲಿ ಮೇಯುತ್ತಿದ್ದ ದನಕರುಗಳೂ ಕಾಣಿಸಿದವು. ಅವುಗಳ ಕೊರಳ ಗಂಟೆಗಳ ನಾದ ಅರಣ್ಯದ ಮೌನವನ್ನು ಕದಡುತ್ತಿದ್ದವು.