“ಅಯ್ಯೋ ನೀನೇಕೆ ಭಯಪಡುತ್ತೀಯೆ? ಆಚಾರ್ಯರೂ, ವಿದುರ ಮಂತ್ರಿಗಳೂ ಇರುವಾಗ ಅಂತಹುದೆಲ್ಲ ನಡೆಯಲಾರದು. ಆದರೂ ನಾವು ಇದನ್ನು ಆಚಾರ್ಯರ ಅವಗಾಹನೆಗೆ ತರುವುದು ಒಳ್ಳೆಯದೇನೋ ಅನಿಸುತ್ತಿದೆ. ಅವರು ಏನಾದರೂ ಮಾಡಿಯಾರು. ಕನಿಷ್ಠ ಪಕ್ಷ ನಾವು ಸಾಧ್ಯವಿರುವುದನ್ನು ಮಾಡಿದ ಸಮಾಧಾನವಾದರೂ ನಮಗಿರುತ್ತದಲ್ಲ? ನಾಳೆ ನೀನು ಆಚಾರ್ಯರ ಭವನಕ್ಕೆ ಹೋಗು. ಅಲ್ಲಿ ಅವರನ್ನು ಏಕಾಂತದಲ್ಲಿ ಕಂಡು ಇದನ್ನು ನಿವೇದಿಸಿಕೋ. ನೀನು ಏನು ಹೇಳಿದ್ದಿ ಎನ್ನುವುದು ಉಳಿದ ಯಾರಿಗೂ ತಿಳಿಯದಿದ್ದರಾಯಿತು ಅಷ್ಟೆ” ಚಾರು ಹೀಗೊಂದು ದಾರಿ ತೋರಿಸಿದಳು.
ಚಿತ್ರಕ ವಾರಣಾವತದ ಚಿತ್ರಗಾರಿಕೆಯ ಕೆಲಸ ಪೂರೈಸಿ ತನ್ನ ಮನೆಗೆ ಮರಳಿದ. ಕೆಲಸಕ್ಕೆ ಪ್ರತಿಫಲವಾಗಿ ಯಥೇಚ್ಛ ಹೊನ್ನು ಸಿಕ್ಕಿತ್ತು. ಅದರಿಂದ ಸಂತೋಷವಾದರೂ, ತಾನು ಶಂಕಿಸಿದ ಸಂಚಿನ ವಿಚಾರ ಭೀತಿ ಹುಟ್ಟಿಸುತ್ತಿತ್ತು. ಅದನ್ನು ಭೀಷ್ಮರಲ್ಲಿ ನಿವೇದಿಸಬೇಕು ಎಂದು ವಾರಣಾವತದಲ್ಲಿದ್ದಾಗಲೇ ಅವನು ನಿರ್ಣಯ ಮಾಡಿಕೊಂಡಿದ್ದನಷ್ಟೆ! ಆ ಕೆಲಸವನ್ನು ಪೂರೈಸಿದರೆ ಅವನಿಗೆ ಮಾಡಬೇಕಾದುದನ್ನು ಮಾಡಿದೆ ಎಂದು ಸಮಾಧಾನವಾಗುತ್ತಿತ್ತು.
ಇದರಲ್ಲಿ ಒಂದು ಸಮಸ್ಯೆಯೂ ಇತ್ತು. ಚಿತ್ರಕನಂತಹ ಸಾಮಾನ್ಯನೊಬ್ಬ ಭೀಷ್ಮರಂತಹ ಮುತ್ಸದ್ಧಿಯನ್ನು ಕಾಣುವುದು ಸುಲಭವೆ? ಹೇಗೋ ಕಾಣಲು ಸಾಧ್ಯವಾದರೂ, ಅವರು ಇವನ ಮಾತನ್ನು ನಂಬುತ್ತಾರೆಯೆ? ಅದರಲ್ಲೂ ರಾಜಪುತ್ರರಿಗೆ ಸಂಬಂಧಿಸಿದ ವಿಚಾರವಿದು. ಪಾಂಡವರನ್ನು ಕೊಲ್ಲಿಸುವ ಸಂಚು ಮಾಡುವವರು ಯಾರು ಎಂಬುದು ಖಚಿತವಾಗಿ ತಿಳಿಯದು. ಕೌರವರದೇ ಪಥಕ ಎಂಬುದು ಚಿತ್ರಕನ ಊಹೆಯಷ್ಟೇ. ಒಂದು ವೇಳೆ ಈ ಊಹೆ ಸುಳ್ಳಾದರೆ, ಅದು ರಾಜದ್ರೋಹ ಎಂದು ಪರಿಗಣಿಸಲ್ಪಟ್ಟು, ಚಿತ್ರಕನನ್ನು ಸೆರೆಮನೆಗೆ ತಳ್ಳಿದರೆ? ಅನಗತ್ಯವಾಗಿ ಇಲ್ಲದ ತೊಂದರೆಯನ್ನು ಮೈಮೇಲೆ ಎಳೆದುಕೊಂಡಂತೆ ಆದೀತಲ್ಲ. ಸುಮ್ಮನೇ ತನಗೇಕೆ ಇದೆಲ್ಲ? ಯಾರು ಸತ್ತರೂ, ಯಾರು ಕೊಂದರೂ ತನ್ನ ಜೀವನದಲ್ಲಿ ವ್ಯತ್ಯಾಸವೇನೂ ಆಗಲಾರದಷ್ಟೆ? ಹೀಗೆ ಚಿಂತಿಸಿದಾಗ ತಾನು ಬಾಯಿ ಮುಚ್ಚಿಕೊಂಡಿರುವುದು ಕ್ಷೇಮ ಎಂದು ಅವನಿಗೆ ತೋರಿತು.
ಆದರೂ ಸುಮ್ಮನಿರಲಾರದೆ ತನ್ನ ಮಡದಿ ಚಾರುವಿನ ಕಿವಿಯಲ್ಲಿ ಇದನ್ನೆಲ್ಲ ಪಿಸುಗಿದ. ಅವಳು ಚಿತ್ರಕನಿಗಿಂತ ಜಾಣೆ. ಅವನಿಗಿಂತ ಧೈರ್ಯಶಾಲಿನಿಯೂ ಆಗಿದ್ದಳು. ಅವಳು ಚಿತ್ರಕ ಇದುವರೆಗೆ ಯೋಚಿಸದೆ ಇದ್ದ ವಿಚಾರವನ್ನು ಅವನ ಮುಂದಿಟ್ಟಳು.
“ನೀನು ಹೇಳುವುದು ಕೇಳಿದರೆ, ಇದೇನೋ ಬಹಳ ದೊಡ್ಡ ಯೋಜನೆ ಇದ್ದ ಹಾಗೆ ನನಗೆ ಕಾಣುತ್ತದೆ. ಎಲ್ಲಿಯೂ ಆ ರೀತಿಯ ಅರಮನೆ ಕಟ್ಟುವ ಕ್ರಮ ಇಲ್ಲವಲ್ಲ? ಬೆಂಕಿ ತಾಗದಂತೆ ಜಾಗ್ರತೆ ವಹಿಸುತ್ತಾರೆಯೇ ಹೊರತು, ಉರಿಯುವುದಕ್ಕೆ ಅನುಕೂಲವಾಗುವಂತೆ ಕಟ್ಟುತ್ತಾರೇನು? ಇದು ಪಾಂಡವರನ್ನೂ, ಅವರ ತಾಯಿಯನ್ನೂ ಕೊಲ್ಲಿಸುವ ಸಂಚು ಎನ್ನುವುದು ಖಂಡಿತ. ರಾಜ್ಯಲಾಭಕ್ಕಾಗಿ ಈ ಕ್ಷತ್ರಿಯರು ಏನೂ ಮಾಡಿಯಾರು. ಸಿಂಹಾಸನ ಏರುವ ಅಧಿಕಾರ ಯುಧಿಷ್ಠಿರನಿಗೇ ಅಂತೆ. ಪಾಂಡವರು ಬದುಕಿದ್ದರೆ ತಾನೇ ಇದೆಲ್ಲ? ಹಾಗಾಗಿ ಅವರನ್ನು ಕೊಲ್ಲಿಸುವ ಉಪಾಯ ಮಾಡಿರಬೇಕು. ನನಗಂತೂ ಕೌರವರ ಮೇಲೆ ಅನುಮಾನ.’’
“ಅದು ನಿಜವೇ ಇರಬಹುದು. ನಾವು ಸಾಮಾನ್ಯ ಜನ. ಏನು ಮಾಡಲಾದೀತು? ಆಚಾರ್ಯರಿಗೆ ಈ ವಿಚಾರ ತಿಳಿಸಬಹುದು. ಒಂದು ವೇಳೆ ಕೌರವರು ಹೂಡಿದ ಸಂಚು ಅಲ್ಲವಾದರೆ ನಾವು ಸುಳ್ಳು ಹೇಳಿದೆವು ಎಂದಾಗುವುದಿಲ್ಲವೆ? ರಾಜಪುತ್ರರ ಮೇಲೆ ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ನನಗೇ ಶಿಕ್ಷೆಯಾದರೆ ಏನು ಗತಿ?’’ ಎಂದ ಚಿತ್ರಕ.
“ಅಯ್ಯೋ.. ನೀನು ಕೌರವರು ಇದನ್ನು ಮಾಡಿಸಿದ್ದು ಎಂದು ಹೇಳುವುದು ಯಾಕೆ? ವಾರಣಾವತದ ಅರಮನೆಯಲ್ಲಿ ಇಂತಹ ಒಂದು ವಿಚಿತ್ರವನ್ನು ನೋಡಿದೆ. ಇದರಿಂದ ರಾಜಕುಮಾರರಿಗೆ ಆಪತ್ತು ಉಂಟಾದೀತು ಎಂದು ತೋರುತ್ತದೆ ಎಂದಷ್ಟೇ ಹೇಳು. ನಿಜ ಏನೆಂದು ನಿನಗೂ ಗೊತ್ತಿಲ್ಲವಷ್ಟೆ? ಅವರೇ ಶೋಧನೆ ಮಾಡಿ ಸತ್ಯವನ್ನು ಕಂಡುಕೊಳ್ಳಲಿ” ಚಾರು ಉಪಾಯವನ್ನು ಸೂಚಿಸಿದಳು.
“ಅಷ್ಟೇ ಅಲ್ಲ. ನನಗೆ ಇನ್ನೊಂದು ಗುಟ್ಟೂ ಗೊತ್ತಾಗಿದೆ. ಯಾರಲ್ಲೂ ಹೇಳುವ ಧೈರ್ಯ ಇಲ್ಲದೆ ಸುಮ್ಮನಿದ್ದೇನೆ. ದುರ್ಯೋಧನನ ಹತ್ತಿರದ ಚಾಕರನೊಬ್ಬ ಇದ್ದಾನಂತೆ. ಪುರೋಚನ ಎಂದವನ ಹೆಸರು. ಅವನು ಕಟ್ಟೋಣದ ಕೆಲಸದಲ್ಲಿ ಬಹು ನಿಪುಣನಂತೆ. ಅವನೇ ಈ ಅರಮನೆಯನ್ನು ಕಟ್ಟಿದವನು. ವಾರಣಾವತದಲ್ಲಿ ನಾನಿದ್ದಾಗ ಅವನೂ ಅಲ್ಲೇ ಇದ್ದ. ಜನಸಾಮಾನ್ಯರಿಗೆ ಆ ಅರಮನೆಯ ಸೌಂದರ್ಯವನ್ನು ನೋಡುವ ಆಸೆ. ಆದರೆ ಯಾರಿಗೂ ಒಳಗೆ ಪ್ರವೇಶವಿಲ್ಲ. ಅದು ಪುರೋಚನ ಕಟ್ಟಾಜ್ಞೆ. ಯಾರಾದರೂ ಕೇಳಿದರೆ ಹಸ್ತಿನಾವತಿಯ ಪ್ರಭುತ್ವ ತನಗೆ ಆದೇಶಿಸಿದ್ದು ಎಂದು ಹೇಳುತ್ತಿದ್ದ. ನಾವು ಹಗಲಿನ ಹೊತ್ತು ಕೆಲಸ ಮಾಡಿ ಹೊರಗೆ ಬಂದ ಮೇಲೆ ದೀವಟಿಗೆಯ ಬೆಳಕಿನಲ್ಲಿ ರಾತ್ರಿಯಿಡೀ ಏನೋ ಕೆಲಸ ನಡೆಯುತ್ತಿತ್ತು. ಅರಮನೆಯ ಹೆಚ್ಚಿನ ಕೆಲಸಗಳು ಇರುಳಿನಲ್ಲೇ ನಡೆದದ್ದು ಅನ್ನುತ್ತಾರೆ. ಈ ಪುರೋಚನ ಇನ್ನೂ ವಾರಣಾವತದಲ್ಲೇ ಇದ್ದಾನೆ. ಅವನು ಕೊಲೆಗೆಲಸದಲ್ಲಿ ನಿಷ್ಣಾತನಂತೆ. ಇದರಲ್ಲಿ ಏನೋ ಕುತಂತ್ರ ಇದೆ ಖಂಡಿತ. ನನಗೆ ತುಂಬ ಭಯವಾಗುತ್ತಿದೆ ಚಾರು. ರಾಜಕುಮಾರರ ಜೀವಕ್ಕೇ ಭದ್ರತೆಯಿಲ್ಲ ಅಂದಮೇಲೆ ನಮ್ಮಂತಹವರ ಪಾಡೇನು? ಈಗಲಂತೂ ಏನು ಮಾಡುವುದೋ ತಿಳಿಯದಾಗಿದೆ.’’
“ಅಯ್ಯೋ ನೀನೇಕೆ ಭಯಪಡುತ್ತೀಯೆ? ಆಚಾರ್ಯರೂ, ವಿದುರ ಮಂತ್ರಿಗಳೂ ಇರುವಾಗ ಅಂತಹುದೆಲ್ಲ ನಡೆಯಲಾರದು. ಆದರೂ ನಾವು ಇದನ್ನು ಆಚಾರ್ಯರ ಅವಗಾಹನೆಗೆ ತರುವುದು ಒಳ್ಳೆಯದೇನೋ ಅನಿಸುತ್ತಿದೆ. ಅವರು ಏನಾದರೂ ಮಾಡಿಯಾರು. ಕನಿಷ್ಠ ಪಕ್ಷ ನಾವು ಸಾಧ್ಯವಿರುವುದನ್ನು ಮಾಡಿದ ಸಮಾಧಾನವಾದರೂ ನಮಗಿರುತ್ತದಲ್ಲ? ನಾಳೆ ನೀನು ಆಚಾರ್ಯರ ಭವನಕ್ಕೆ ಹೋಗು. ಅಲ್ಲಿ ಅವರನ್ನು ಏಕಾಂತದಲ್ಲಿ ಕಂಡು ಇದನ್ನು ನಿವೇದಿಸಿಕೋ. ನೀನು ಏನು ಹೇಳಿದ್ದಿ ಎನ್ನುವುದು ಉಳಿದ ಯಾರಿಗೂ ತಿಳಿಯದಿದ್ದರಾಯಿತು ಅಷ್ಟೆ.’’ ಚಾರು ಹೀಗೊಂದು ದಾರಿ ತೋರಿಸಿದಳು.
ಚಿತ್ರಕನಿಗೂ ಇದು ಸರಿಯೆಂದು ಕಂಡಿತು.
“ಹೌದು. ನೀನು ಹೇಳಿದ್ದು ಸರಿ. ನಾಳೆ ಹಾಗೆಯೇ ಮಾಡುತ್ತೇನೆ. ಮುಂದಿನದು ದೈವಕ್ಕೆ ಬಿಟ್ಟದ್ದು” ಎಂದು ಹೇಳಿದ. ಇಬ್ಬರ ತಲೆಯ ಮೇಲಿನ ಹೊರೆಯ ಭಾಗ ಒಂದಿನಿತು ತಗ್ಗಿತು. ನೆಮ್ಮದಿಯನ್ನು ತಂದುಕೊಂಡು ಇಬ್ಬರೂ ಮಲಗಿದರು.
ಪಾಪ, ಅವರ ನೆಮ್ಮದಿ ಹೆಚ್ಚುಕಾಲ ಉಳಿಯುವುದಿಲ್ಲ ಎಂಬುದು ಅವರಿಗೆ ತಿಳಿದಿರಲಿಲ್ಲ.
* * *
ಮರುದಿನ ಬೆಳಗಾಯಿತು. ಸೂರ್ಯ ಮೇಲೆ ಬರುವಷ್ಟರಲ್ಲಿ ತನ್ನ ನಿತ್ಯದ ಕಾರ್ಯಗಳನ್ನು ಪೂರೈಸಿದ ಚಿತ್ರಕ ರಾಜಧಾನಿಯತ್ತ ಹೊರಟು ನಿಂತ. ಕುದುರೆಯ ಮೇಲೆ ಹೋದರೆ ಅವನ ಹಳ್ಳಿಯಿಂದ ಹಸ್ತಿನಾವತಿಗೆ ಅರ್ಧ ಹಗಲಿನ ಪ್ರಯಾಣ. ಚಿತ್ರಕನಲ್ಲಿ ಕುದುರೆ ಎಲ್ಲಿಂದ ಬರಬೇಕು? ಕಾಲ್ನಡಿಗೆಯಲ್ಲಿ ಹೊರಟ ಅವನು ನಗರಕ್ಕೆ ತಲಪುವ ವೇಳೆ ಕತ್ತಲಾವರಿಸಿತ್ತು. ಅಲ್ಲಿ ದೂರದ ಬಂಧು ಒಬ್ಬನ ಮನೆಯಿತ್ತು. ಚಿತ್ರಕ ಅವನ ಮನೆಯಲ್ಲಿ ಉಳಿದುಕೊಂಡ.
ಮರುದಿನ ಮುಂಜಾವದಲ್ಲಿ ಎದ್ದು, ಆಚಾರ್ಯರ ಭವನವನ್ನು ಅರಸುತ್ತ ಹೊರಟ. ಗ್ರಾಮವಾಸಿಯಾಗಿದ್ದ ಚಿತ್ರಕನಿಗೆ ನಗರದ ನಡವಳಿಕೆಗಳ ಅರಿವು ಇರಲಿಲ್ಲವೆನ್ನಬೇಕು. ಆಚಾರ್ಯ ಭೀಷ್ಮರ ಭವನ ಎಲ್ಲಿ ಎಂಬುದೂ ಅವನಿಗೆ ಗೊತ್ತಿರಲಿಲ್ಲ. ಯಾರನ್ನಾದರೂ ಕೇಳಿದರಾಯಿತು, ತೋರಿಸುತ್ತಾರೆ. ಒಳಗೆ ಹೋಗಿ ಅವರನ್ನು ಕಂಡು ವಿಚಾರವನ್ನು ನಿವೇದಿಸಿ ಮರಳಿ ಬರುವುದು. ಮುಂದಿನದು ಅವರಿಗೆ ಬಿಟ್ಟದ್ದು ಎಂದು ಭಾವಿಸಿಕೊಂಡಿದ್ದ. ಅಷ್ಟೇ ಆಗಿದ್ದರೆ ತೊಂದರೆಯೇನೂ ಇರಲಿಲ್ಲ. ಆದರೆ ಚಿತ್ರಕ ನಗರದ ಜನಸಮ್ಮರ್ದದಲ್ಲಿ ಗೊಂದಲಕ್ಕೊಳಗಾದ. ಮೊದಲೊಮ್ಮೆ ಬಂದಿದ್ದನಾದರೂ, ಅದು ಅರಮನೆಯವರು ಬರ ಹೇಳಿದ್ದು. ಅವರೇ ಕರೆದೊಯ್ದಿದ್ದರು. ಈಗ ಅವನಷ್ಟಕ್ಕೇ ಬಂದಿದ್ದಾನೆ. ಯಾರನ್ನು ಕೇಳಬೇಕು ಎಂಬುದೂ ತಿಳಿಯಲಿಲ್ಲ. ಸುಮ್ಮನೆ ಅಲೆದಾಡುತ್ತ, ಕೊಂಚ ಸಮಯ ಕಳೆದ.
ಕೊನೆಗೆ ಹೀಗೇ ಅಲೆಯುತ್ತ ಸಮಯ ಕಳೆಯುವುದಕ್ಕಿಂತ, ಯಾರಾದರೂ ರಾಜಭಟರನ್ನು ಕೇಳಿದರೆ ಆಚಾರ್ಯರ ಮನೆ ಎಲ್ಲಿ ಎಂದು ತಿಳಿದೀತು ಎಂದು ಹೊಳೆಯಿತು. ಕುದುರೆಯ ಮೇಲೆ ದಾವಿಸುತ್ತಿದ್ದ ಭಟನೊಬ್ಬನ್ನು ತಡೆದು ನಿಲ್ಲಿಸಿದ ಚಿತ್ರಕ.
“ಏನಯ್ಯ?’’ ಎಂದು ಚಿತ್ರಕನನ್ನು ಕಾಲಿನಿಂದ ತಲೆಯವರೆಗೆ ಚುಚ್ಚುವಂತೆ ನೋಡಿದ ಆ ಭಟ. ಚಿತ್ರಕ ಆಚಾರ್ಯರ ಭವನ ಎಲ್ಲಿ ಎಂದಷ್ಟು ಮಾತ್ರ ಕೇಳಿದ್ದರೆ ಬಹುಶಃ ಮುಂದಿನ ಯಾವ ಸಂಕಷ್ಟವೂ ಕಾಡುತ್ತಿರಲಿಲ್ಲ. ಆದರೆ ಚಿತ್ರಕ, “ಆಚಾರ್ಯರಿಗೆ ವಾರಣಾವತದ ವಿಚಾರ ಹೇಳುವುದಕ್ಕಿದೆ’’ ಎಂದು ಹೇಳಿದ.
ಕೆಲವು ಸಲ ಪ್ರಾಜ್ಞರೆನಿಸಿದವರ ಬುದ್ಧಿಯೇ ಮಂಕಾಗುತ್ತದೆ. ಅಂತಹುದರಲ್ಲಿ ಅಂಜುಕುಳಿಯೂ, ಲೋಕ ಜ್ಞಾನ ಇಲ್ಲದವನೂ ಆದ ಚಿತ್ರಕನ ಸ್ಥಿತಿಯೇನು? ಹಿಂದೆ ಮುಂದೆ ಯೋಚಿಸದೆ ಚಿತ್ರಕ ಆಡಿದ ಈ ಮಾತು ಅವನ ಬದುಕನ್ನು ಛಿದ್ರಗೊಳಿಸುತ್ತದೆ ಎಂಬ ಸಣ್ಣ ಶಂಕೆಯೂ ಅವನಿಗೆ ಬರಲಿಲ್ಲ.
‘ವಾರಣಾವತದ ವಿಚಾರ’ ಎಂದೊಡನೆ ಭಟನ ಬುದ್ಧಿ ಚುರುಕಾಯಿತು. “ಹೌದೆ? ಆ ವಿಚಾರವೆ? ನನ್ನ ಜೊತೆ ಬಾ” ಎಂದು ಯಾವ ಯಾವುದೋ ಬೀದಿಗಳಲ್ಲಿ ಸಾಗಿ, ಭವ್ಯವಾದ ಸೌಧದ ಎದುರು ನಿಲ್ಲಿಸಿದ. “ನೀನು ಇಲ್ಲಿಯೇ ಇರು. ನಾನು ಒಳಗೆ ಹೋಗಿ, ಅನುಮತಿ ಪಡೆದು ಬರುತ್ತೇನೆ’’ ಎಂದು ಅವನು ಒಳಗೆ ಹೋದ. ಕೊಂಚ ಹೊತ್ತಿನ ಬಳಿಕ ಅವನು ಹೊರಗೆ ಬಂದು, ಕಾದು ಕಳಿತಿದ್ದ ಚಿತ್ರಕನಿಗೆ, “ಈಗ ನೀನು ಒಳಗೆ ಹೋಗು. ನಿನಗೆ ಗೊತ್ತಿರುವ ವಿಚಾರವನ್ನೆಲ್ಲ ವಿವರವಾಗಿ ತಿಳಿಸು” ಎಂದು ಸೂಚಿಸಿ ಎತ್ತಲೋ ಧಾವಿಸಿದ. ಚಿತ್ರಕ ಕಾವಲಿನವನನ್ನು ದಾಟಿ ಒಳಗೆ ಹೋದ.
ಒಳಾಂಗಣದಲ್ಲಿ ಒಬ್ಬ ಪರಿಚಾರಕ ಕಾದು ನಿಂತಿದ್ದ.
“ನೀನೇ ಏನು ಚಿತ್ರಕ ಅಂದರೆ?’’
ಅಲ್ಲಿನ ವಾತಾವರಣವನ್ನು ಕಂಡು ಬೆರಗುವಡೆದಿದ್ದ ಚಿತ್ರಕ ಬರಿದೇ ತಲೆಯಾಡಿಸಿದ.
“ಇಲ್ಲಿಯೇ ಕಾದಿರು. ದೊಡ್ಡವರು ಬರುತ್ತಾರೆ” ಎಂದು ಪರಿಚಾರಕ ಒಳಗೆ ಹೋದ.
ಕೊಂಚ ಹೊತ್ತಿನಲ್ಲೇ ಮೂವರು ಭಟರನ್ನು ಹಿಂದಿಟ್ಟುಕೊಂಡು ಯಾರೋ ಅಪರಿಚಿತ ವ್ಯಕ್ತಿ ಹೊರಬಂದ. ಆಚಾರ್ಯರಂತೂ ಅಲ್ಲ. ಚಿತ್ರಕ ಅವನನ್ನು ಪರೀಶಿಲನೆಯ ದೃಷ್ಟಿಯಿಂದ ನೋಡಿದ.
ಸಣ್ಣದಾಗಿ ಕತ್ತರಿಸಿದ ಗಡ್ಡ. ಕುಳ್ಳನೆಯ ಆಕೃತಿ. ಕೂದಲು ಅಲ್ಲಲ್ಲಿ ಬಿಳಿಯಾಗಿತ್ತು. ಚಂಚಲವಾದ, ಆದರೆ ತೀಕ್ಷ್ಣವಾದ ದೃಷ್ಟಿ. ತಲೆಯ ಮೇಲೆ ರೇಷ್ಮೆ ವಸ್ತ್ರದ ಉಷ್ಣೀಷ. ಯಾರಿವರು?
“ಏನಯ್ಯ ನಿನ್ನದು?’’ ಎಂದು ಬಂದಿದ್ದ ಅಪರಿಚಿತ ಕೇಳಿದ.
ಚಿತ್ರಕನಿಗೆ ಈಗ ಚಿಂತೆಯಾಯಿತು. ಕಂಡಕಂಡವರಲ್ಲಿ ಹೇಳುವ ವಿಚಾರ ಇದಲ್ಲ. ಹಾಗಾಗಿ ಅಳುಕುತ್ತಲೇ ಹೇಳಿದ,
“ನಾನು ಹೇಳಬೇಕಾಗಿರುವುದು ರಹಸ್ಯದ ಮಾತು. ಅದನ್ನು ಆಚಾರ್ಯ ಭೀಷ್ಮರಲ್ಲಿಯೇ ಹೇಳಬೇಕು” ಅಂದ.
ಕುಳ್ಳ ವ್ಯಕ್ತಿ ಗಟ್ಟಿಯಾಗಿ ನಕ್ಕ. ಅವನ ನಗುವಿಗೆ ಚಿತ್ರಕನ ಮೈಯ ರೋಮಗಳು ನಿಮಿರಿದವು. ಅಷ್ಟು ಭಯ ಹುಟ್ಟಿಸುವಂತಿತ್ತು ಅವನ ನಗು.
“ಯಾಕೆ ಅಷ್ಟು ಅಳುಕು? ನಾವು ವಿಶ್ವಾಸಕ್ಕೆ ಯೋಗ್ಯರಲ್ಲವೇನು? ಹೆದರಬೇಡ. ಆಚಾರ್ಯರು ಹಾಗೆಲ್ಲ ಕಾಣಿಸಿಕೊಳ್ಳುವ ಕ್ರಮವಿಲ್ಲ. ನಾನು ಅವರ ಆಪ್ತವಲಯದವನು. ನೀನು ಹೇಳಿದ ಮಾತನ್ನು ಅಕ್ಷರಶಃ ಅವರಿಗೆ ಮುಟ್ಟಿಸುತ್ತೇನೆ. ನೀನೇನು ಅವರ ಗುಪ್ತಚರನೆ?’’
“ಅಲ್ಲ ಅಲ್ಲ, ನಾನು ಅಂತಹವನಲ್ಲ ಮಹಾಸ್ವಾಮಿ. ಅವರಿಗೆ ನನ್ನ ಪರಿಚಯವಿಲ್ಲ. ಹೇಳಬೇಕಾಗಿರುವ ವಿಚಾರ ಸೂಕ್ಷ್ಮವಾಗಿರುವುದರಿಂದ ಅವರಲ್ಲಿಯೇ ಹೇಳಬೇಕು ಎಂದಷ್ಟೆ ನನಗಿರುವುದು.’’
“ಹೆದರಬೇಡ. ನೀನಾಡುವ ಯಾವ ಮಾತೂ ಇನ್ನೊಂದು ಕಿವಿಗೆ ಬೀಳಲಾರದು. ನನ್ನಲ್ಲಿ ನಿಶ್ಶಂಕೆಯಿಂದ ಹೇಳು. ತಿಳಿಯಿತೆ?’’ ಈಗ ಅವನ ಮಾತು ಹಿಂದಿಗಿಂತ ಮೃದುವಾಗಿತ್ತು.
ಆದರೂ ಚಿತ್ರಕ ಅನುಮಾನಿಸುತ್ತಿರುವುದನ್ನು ಗಮನಿಸಿ, ಭಟರತ್ತ ನೋಡಿದ. ಅವರು ಮಾತಿಲ್ಲದೆ ಒಳಗೆ ಸರಿದರು.
“ಈಗ ಹೇಳು. ಏನದು ಗೋಪ್ಯ ವಿಚಾರ?’’
ಚಿತ್ರಕನಿಗೆ ಹೇಳದೆ ವಿಧಿಯಿಲ್ಲವಾಯಿತು. ಚಾರುವಿನ ಮಾತು ಕೇಳಿ ಈ ಸಾಹಸಕ್ಕೆ ತೊಡಗಬಾರದಿತ್ತು ಅನಿಸಿತು. ಆದರೇನು ಮಾಡಲಿ, ಬಂದಾಗಿದೆ. ಇವನೂ ರಾಜಕುಟುಂಬಕ್ಕೆ ಸೇರಿದವನಿರಬೇಕು. ಇಲ್ಲದಿದ್ದರೆ ಆಚಾರ್ಯರ ಭವನದಲ್ಲಿ ಇಷ್ಟು ಅಧಿಕಾರಯುತವಾಗಿ ಮಾತನಾಡುವುದಕ್ಕುಂಟೆ?
ತನಗಿರುವ ಸಂಶಯವನ್ನು ನಿವೇದಿಸುವುದು. ಉಳಿದದ್ದು ಆಚಾರ್ಯರಿಗೂ, ಇವನಿಗೂ ಬಿಟ್ಟದ್ದು. ತಾನೇನು ಅಪರಾಧ ಮಾಡಿಲ್ಲವಷ್ಟೆ?
ಚಿತ್ರಕ ನಿಧಾನವಾಗಿ ಬಾಯಿಬಿಟ್ಟ.
ಕುಳ್ಳ ಎಲ್ಲವನ್ನೂ ಗಮನವಿಟ್ಟು ಕೇಳಿದ. ಕೆಲವು ಸಲ ಹುಬ್ಬುಗಂಟಿಕ್ಕಿದ. ಚಿತ್ರಕನ ಮಾತುಗಳ ನಡುವೆ ಪ್ರಶ್ನೆ ಕೇಳಿ ಸಂಶಯ ನಿವಾರಿಸಿಕೊಂಡ. ಎಲ್ಲವನ್ನೂ ಹೇಳಿದ ಚಿತ್ರಕ ಬೆವರೊರೆಸಿಕೊಂಡ. ಕುಳ್ಳ ಕೇಳಿದ,
“ಇದೇ ಏನು ನೀನು ಹೇಳಲಿಕ್ಕಿರುವುದು?’’
“ಹೌದು ಮಹಾಸ್ವಾಮಿ. ನನಗೆ ಬಂದ ಸಂಶಯವನ್ನು ನಿವೇದಿಸಿಕೊಂಡಿದ್ದೇನೆ. ಯಾರೋ ದುಷ್ಟರಿಂದ ರಾಜಕುಮಾರರಿಗೆ ಆಪತ್ತು ಬಾರದಿರಲಿ ಎಂಬ ಉದ್ದೇಶವಷ್ಟೆ ನನ್ನದು. ಇದಕ್ಕಿಂತ ಹೆಚ್ಚು ನನಗೆ ತಿಳಿಯದು. ದಯಮಾಡಿ ಈ ವಿಚಾರ ಆಚಾರ್ಯರ ಗಮನಕ್ಕೆ ಬಂದರೆ ಸಾಕು’’
ಕುಳ್ಳ ಮೆಲುವಾಗಿ ನಕ್ಕ.
“ಸರಿ ಸರಿ. ಇದನ್ನು ಬೇರೆ ಯಾರಲ್ಲಾದರೂ ಹೇಳಿರುವಿಯೇನು?’’
ಚಿತ್ರಕ ಇಲ್ಲವೆಂಬಂತೆ ತಲೆಯಾಡಿಸಿದ.
“ಸರಿ. ಒಳ್ಳೆಯದಾಯಿತು. ನೀನು ಮಾಡಿದ್ದು ಸರಿಯಾಗಿದೆ. ಒಂದು ಮಾತು ನೆನಪಿಡು. ಇದನ್ನು ಇನ್ನಾರಲ್ಲಿಯೂ, ತಪ್ಪಿಯೂ ಬಾಯಿಬಿಡಕೂಡದು. ನೀನು ಇಲ್ಲಿಗೆ ಬಂದದ್ದಾಗಲಿ, ನನ್ನಲ್ಲಿ ಮಾತನಾಡಿದ್ದಾಗಲಿ ನಡೆದೇ ಇಲ್ಲ ಎಂಬಂತೆ ಇದನ್ನು ಮರೆತುಬಿಡು. ಅರ್ಥವಾಯಿತೇ ನಾನು ಹೇಳಿದ್ದು?’’ ಗದರಿಸುವಂತೆ ಕೇಳಿದನಾತ.
“ಅರ್ಥವಾಯಿತು ಮಹಾಸ್ವಾಮಿ. ನಾನು ಯಾರಲ್ಲೂ ಹೇಳುವುದಿಲ್ಲ.’’
“ಹೇಳಿದರೆ ನಿನ್ನ ಕುಟುಂಬಕ್ಕೂ, ನಿನಗೂ ಅಪಾಯವಿದೆ. ಗೊತ್ತಿರಲಿ. ಇನ್ನು ನೀನು ಹೋಗು.’’
ಅಷ್ಟು ಮಾತು ಅವನ ಬಾಯಿಂದ ಹೊರಬರುತ್ತಲೇ ಚಿತ್ರಕ ಅವನಿಗೆ ನಮಸ್ಕರಿಸಿ, ಹೊರಬಾಗಿಲು ದಾಟಿದ.
ಕುಳ್ಳ ಮತ್ತೇನೋ ಜ್ಞಾಪಿಸಿಕೊಂಡು ಅದನ್ನು ಕೇಳಬೇಕೆಂದು ತಿರುಗಿ ನೋಡಿದರೆ ಚಿತ್ರಕನೆಲ್ಲಿದ್ದಾನೆ?
ಕುಳ್ಳ ವ್ಯಕ್ತಿ ಒಳಗೆ ಹೋದವನು. ತನ್ನ ಆಪ್ತ ಭಟನಾಯಕನನ್ನು ಕರೆದ.
“ಈಗ ಬಂದನಲ್ಲ, ಅವನು ಯಾರು? ಅವನ ಇತಿವೃತ್ತಗಳೇನು? ತಿಳಿದಿವೆಯೇ?’’
“ಇಲ್ಲ ಪ್ರಭು. ನಮಗೆ ಅವನದು ಹೊಸಮುಖ.’’
“ಹೌದೆ? ನಾನು ಅವನು ಹಸ್ತಿನಾವತಿಯವನೆಂದು ತಿಳಿದಿದ್ದೆ. ಅವನು ಹೇಳಿದ ವಿಚಾರ ಕೇಳಿ ಸ್ವಲ್ಪ ಯೋಚನೆಗೆ ಬಿದ್ದೆ. ಅವಸರದಲ್ಲಿ ಅವನ ಹೆಸರು ಮಾತ್ರ ಕೇಳಿದೆ. ಚಿತ್ರಕ ಎಂದು ಹೇಳಿದ. ವಾರಣಾವತಕ್ಕೆ ದುಡಿಮೆಗೆ ಹೋದವನು. ಈ ಪ್ರದೇಶದಲ್ಲಿ ಎಷ್ಟು ಜನ ಆ ಹೆಸರಿನವರಿದ್ದಾರೋ ಏನೋ? ಏನೇ ಇರಲಿ, ವಾರಣಾವತಕ್ಕೆ ಕೆಲಸಕ್ಕೆ ಹೋದವರಲ್ಲಿ ಚಿತ್ರಕ ಎಂಬ ವ್ಯಕ್ತಿಯ ವಿವರಗಳು ನನಗೆ ಬೇಕು. ಶೀಘ್ರದಲ್ಲಿ ಅದನ್ನು ತಿಳಿದು ಬನ್ನಿ. ಅವನು ಹೊರಗೆಲ್ಲ ಬಾಯಿಬಿಟ್ಟರೆ ಕೆಲಸ ಕೆಡುತ್ತದೆ. ಈ ಎಚ್ಚರವಿರಲಿ.’’
“ಅಪ್ಪಣೆ ಪ್ರಭೋ. ಅವನ ವಿವರವನ್ನು ಶೀಘ್ರವಾಗಿ ಸಂಗ್ರಹಿಸಿ ಒಪ್ಪಿಸುತ್ತೇನೆ. ಸೂಕ್ತ ಭಟರನ್ನು ನಿಯೋಜಿಸುತ್ತೇನೆ” ಎಂದು ಭಟನಾಯಕ ಭರವಸೆ ನೀಡಿದ.
“ಸರಿ ಯಾವುದಕ್ಕೂ ನಾನೊಮ್ಮೆ ದುಶ್ಶಾಸನ ಕುಮಾರನನ್ನು ಕಂಡು ಬರುತ್ತೇನೆ. ನಿನ್ನ ಕೆಲಸ ಮುಂದುವರಿಸು” ಎಂದ ಕುಳ್ಳ, ಹೊರಡಲು ಸಿದ್ಧನಾದ.
(ಸಶೇಷ)