ಶಂಖನೂ, ಚಿತ್ರಕನ ಕುಟುಂಬವೂ ದಟ್ಟವಾದ ಕಾಡಿನಲ್ಲಿ ದಾರಿ ಮಾಡಿಕೊಳ್ಳುತ್ತ ಮುಂದುವರಿಯುತ್ತಿದ್ದರು. ಎಷ್ಟು ಶೀಘ್ರವಾಗಿ ಹೋಗಬೇಕು ಎಂದು ಎಣಿಸಿದರೂ, ದಾರಿಯ ಅಡಚಣೆ ಅವರ ಗತಿಯನ್ನು ತಡೆಯುತ್ತಿತ್ತು. ಜಿತುವು ಅವರಷ್ಟು ವೇಗವಾಗಿ ನಡೆಯಲಾರದ ಹುಡುಗ. ಅಲ್ಲಲ್ಲಿ ಎದುರಾಗುತ್ತಿದ್ದ ಕಣಿವೆ, ಕಂದರಗಳು, ಕಡಿದಾದ ದಿಣ್ಣೆಗಳು, ಸಂಚರಿಸುತ್ತಿದ್ದ ಕ್ರೂರ ಮೃಗಗಳು ಅವರ ವೇಗವನ್ನು ಕುಂಠಿತಗೊಳಿಸುತ್ತಿದ್ದವು. ನಡುನಡುವೆ ನಿಂತು, ಸೂರ್ಯ ಚಲನೆಯನ್ನು ಗಮನಿಸಿ, ಪ್ರಯಾಣದ ದಿಕ್ಕನ್ನು ಖಚಿತಪಡಿಸಿಕೊಳ್ಳಬೇಕಾಗುತ್ತಿತ್ತು.
ಹೆಜ್ಜೆ ಇಡುವ ಮೊದಲು, ವಿಷಯುಕ್ತವಾದ ಹಾವುಗಳು ಇರುವವೇನೋ ಎಂದು ಗಮನಿಸಿ, ಮುಂದೆ ಕಾಲೂರಬೇಕಿತ್ತು.
ಶಂಖ ತನ್ನ ಬಟ್ಟೆಯ ಜೋಳಿಗೆಯನ್ನು ಹೆಗಲಿಗೇರಿಸಿಕೊಂಡು ಇವರತ್ತ ಬಂದ. ಅವನ ಹೆಗಲಿನಲ್ಲಿ ಒಂದು ಧನುಸ್ಸು, ಬೆನ್ನಿಗೆ ಬತ್ತಳಿಕೆ, ಒರೆಯಲ್ಲಿ ಖಡ್ಗವೂ ಇತ್ತು.
“ಅವರು ನನ್ನ ಸ್ನೇಹಿತರು. ಮುಂದಿನ ಪ್ರಯಾಣ ಕಾಲುನಡಿಗೆಯಲ್ಲಿ. ಇಲ್ಲಿಯವರೆಗೆ ತಂದ ಕುದುರೆಯನ್ನು ಹಿಂದೆ ಒಯ್ಯುವುದಕ್ಕೆ ಬಂದವರು’’ ಚಿತ್ರಕನ ಸಂಶಯದ ನೋಟಕ್ಕೆ ಅವನೇ ಸಮಾಧಾನ ಹೇಳಿದ.
“ಹೆದರಬೇಡ. ನೀವು ಯಾರು ಎಂಬುದು ಅವರಿಗೆ ಗೊತ್ತಿಲ್ಲ. ಎಲ್ಲಿಗೆ ಹೋಗುವವರು ಎನ್ನುವುದೂ ಗೊತ್ತಿಲ್ಲ. ಕಳವಳಬೇಡ” ಅಂದ.
“ರೊಟ್ಟಿ ತಿನ್ನುತ್ತೀಯ ಶಂಖ?’’ ಚಾರು ಕೇಳಿದಳು.
“ಬೇಡ. ನಾನು ಹೊಟ್ಟೆ ತುಂಬಿಸಿಕೊಂಡೇ ಹೊರಟವನು. ನಿಮಗೆ ತಿಂದು ಆಗಿದ್ದರೆ ಹೊರಡೋಣ. ವಿಳಂಬ ಮಾಡಿದಷ್ಟು ಅಪಾಯ ಹೆಚ್ಚು” ಎಂದು ಅವಸರಿಸಿದನವ. ಅಷ್ಟುಹೊತ್ತಿಗೆ ಜಿತು ಮತ್ತು ಚಂಪಾ ಇಬ್ಬರೂ ರೊಟ್ಟಿಗಳನ್ನು ತಿಂದು ಮುಗಿಸಿದ್ದರು. ಅವರವರ ಗಂಟುಗಳನ್ನು ಹೆಗಲಿಗೇರಿಸಿ ಸಿದ್ಧರಾದರು.
“ನಾವು ಸ್ವಲ್ಪ ದೂರ ಅರಣ್ಯದಲ್ಲಿ ನಡೆದು, ಅಲ್ಲಿಂದ ಪೂರ್ವ ದಿಕ್ಕಿನತ್ತ ಸಾಗಬೇಕು. ಕಾಡಿನೊಳಗೆ ಸರಿಯಾದ ದಾರಿ ಇರುವುದಿಲ್ಲ. ಪ್ರಾಣಿಗಳು ಮಾಡಿದ ಜಾಡಿನಲ್ಲಿ ಹೋಗಬೇಕು. ಸರಯೂ ನದಿಯ ಉಪನದಿಗಳಲ್ಲಿ ಯಾವುದಾದರೂ ಸಿಕ್ಕಿದರೆ ಅದರ ದಡದಲ್ಲಿ ಮುಂದುವರಿಯುವ. ಕೆಲವು ಹರದಾರಿ ದೂರದಲ್ಲಿ ಘೋಷಗಳಿವೆ. ಅದರಲ್ಲೊಂದರಲ್ಲಿ ನಮಗೆ ಬೇಕಾದವನಿದ್ದಾನೆ. ನಿಮ್ಮನ್ನು ಅಲ್ಲಿಗೆ ತಲಪಿಸಿ ನಾನು ನಗರಕ್ಕೆ ಹಿಂದಿರುಗುತ್ತೇನೆ. ಮೊದಲು ಆ ಘೋಷವನ್ನು ಹುಡುಕಬೇಕು. ನಡೆಯಿರಿ’’
ಎಂದು ಶಂಖ ಹೆಜ್ಜೆ ಮುಂದಿಟ್ಟ.
ಸೈಂಧವನ ಆದೇಶದಂತೆ ರುದ್ರ ಯೋಧರ ಪಡೆಯನ್ನು ತಂಡಗಳಾಗಿ ವಿಭಜಿಸಿದ. ಐವರ ತಂಡ. ಅದರಲ್ಲಿ ಒಬ್ಬ ನಾಯಕ. ಒಂದು ತಂಡಕ್ಕೆ ಅವನೇ ನಾಯಕ. ಉಳಿದ ತಂಡಗಳನ್ನು ಬೇರೆಬೇರೆ ದಿಕ್ಕುಗಳಲ್ಲಿ ಕಳುಹಿಸಿದ. ಒಂದು ತಂಡವನ್ನು ನಗರದೊಳಗೆ ಮನೆಗಳ ಶೋಧಕ್ಕೆ ನಿಯಮಿಸಿದ.
ಇದೆಲ್ಲ ಬಹಳ ಗೋಪ್ಯವಾಗಿ ನಡೆಯಬೇಕಿತ್ತು. ಮಹಾರಾಜನ ಅಥವಾ ಪ್ರಧಾನಮಂತ್ರಿಯ ಆಜ್ಞೆಯಿಲ್ಲದೆ ಹೀಗೆಲ್ಲ ಶೋಧಕ್ಕೆ ಹೋಗುವುದು ಅಪಾಯಕಾರಿಯಾದ ಕೆಲಸ. ಅದರಲ್ಲೂ ಈ ಯೋಧರು ಹಸ್ತಿನಾವತಿಗೆ ಸಂಬಂಧಿಸಿದವರಲ್ಲ. ಸೈಂಧವನ ಪಡೆ ಎಂದು ಸ್ವಲ್ಪಮಟ್ಟಿಗೆ ರಕ್ಷಣೆ ಇತ್ತಾದರೂ, ಅವರು ಮಾಡುವ ಎಲ್ಲ ಕೆಲಸಗಳಿಗೂ ಅಲ್ಲ. ಹಾಗಾಗಿ ನಗರದೊಳಗಿನ ಶೋಧಕಾರ್ಯ ಸೂಕ್ಷ್ಮವಾಗಿ ಮಾಡಬೇಕಾಗಿತ್ತು. ಹೊರಗಿನ ಗ್ರಾಮಗಳಲ್ಲಿ ಮಾಡುವ ಶೋಧವು ಮಹಾರಾಜನ ಗಮನಕ್ಕೆ ಬರುವ ಸಾಧ್ಯತೆ ಕಡಮೆ.
ಸೂರ್ಯನ ಮೊದಲ ಕಿರಣ ಭೂಮಿಯನ್ನು ಸ್ಪರ್ಶಿಸುವ ಹೊತ್ತಿಗೆ ತಂಡಗಳು ಹೊರಟವು. ರುದ್ರ ತನ್ನ ತಂಡದವರನ್ನು ಕರೆದುಕೊಂಡು, ಆಮ್ರಪುರ ಹಳ್ಳಿಯತ್ತ ಸಾಗಿದ. ಅವರೆಲ್ಲ ವೇಗವಾಗಿ ಸಾಗುವ ಕುದುರೆಗಳನ್ನೇರಿದ್ದರು. ಅವರಲ್ಲಿ ಶಸ್ತ್ರಾಸ್ತ್ರಗಳು ಸಾಕಷ್ಟಿದ್ದವು.
ಆಮ್ರಪುರದಲ್ಲಿ ವಿಚಾರಿಸಿದರೆ ಚಿತ್ರಕನ ಕುಟುಂಬದ ಪಲಾಯನದ ಕುರುಹು ಸಿಗುವುದೆಂದು ಅವನ ತರ್ಕ. ಅವರಿಗೆ ಆಶ್ರಯ ನೀಡುವ ಬಂಧುಗಳು ಯಾರೂ ಇಲ್ಲ ಎಂದು ರುದ್ರ ತಿಳಿದುಕೊಂಡಿದ್ದ. ಏನಿದ್ದರೂ ಚಿತ್ರಕನ ಕುಟುಂಬ ಉತ್ತರದ ಅರಣ್ಯದತ್ತ ಹೋಗಿರುವ ಸಾಧ್ಯತೆಯೇ ಹೆಚ್ಚು. ಬೇರೆ ಯಾವ ದಿಕ್ಕಿನಲ್ಲಿ ಅವರು ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿದರೂ, ಒಂದಲ್ಲ ಒಂದು ಊರಿನ ಮೂಲಕವೇ ಹೋಗಬೇಕಿತ್ತು. ಅಲ್ಲಿ ಯಾರಾದರೂ ಇವರ ಪಲಾಯನವನ್ನು ಗಮನಿಸಿಯೇ ಗಮನಿಸುತ್ತಾರೆ. ಅದು ತಮಗೆ ತಿಳಿಯುವುದು ಸುಲಭ. ಆದುದರಿಂದ ಅಂತಹ ಸಾಹಸಕ್ಕೆ ಚಿತ್ರಕ ಮುಂದಾಗಲಾರ. ತಪ್ಪಿಸಿಕೊಂಡು ಓಡುವವರು ಆರಿಸುವುದು ಜನರಿಲ್ಲದ ದಾರಿಯನ್ನೇ ತಾನೇ? ಹಾಗಾಗಿ ಅತ್ತ ಅವನೇ ಹೊರಟಿದ್ದ. ರುದ್ರ ಬಲಿಷ್ಠ, ಹೋರಾಟದಲ್ಲಿ ಪರಿಣತ. ಅದರ ಜತೆಗೆ ಬಹಳ ಬುದ್ಧಿಶಾಲಿಯೂ ಆಗಿದ್ದ. ಅವನ ಗೃಧ್ರದೃಷ್ಟಿಯಿಂದ ತಪ್ಪಿಸಿಕೊಂಡು ಪಾರಾಗುವುದು ಕಷ್ಟವಿತ್ತು.
ಅವನ ತಂಡದಲ್ಲಿ ಅವನಲ್ಲದೆ ಐವರಿದ್ದರು. ಅವರೆಲ್ಲ ರುದ್ರನಂತೆಯೇ ಸಮರ್ಥ ಯೋಧರು. ಅವರು ಏರಿಕೊಂಡಿದ್ದ ಕುದುರೆಗಳು ಬಹು ವೇಗವಾಗಿ ಧಾವಿಸಬಲ್ಲ ಸಾಮರ್ಥ್ಯವುಳ್ಳವು. ತಾವು ಚಿತ್ರಕ ಹೋದ ದಾರಿಯ ಸುಳಿವನ್ನು ತಿಳಿದು, ಆ ದಿಕ್ಕಿನಲ್ಲಿ ಧಾವಿಸಿದರೆ ಒಂದೇ ದಿನದಲ್ಲಿ ಅವರನ್ನು ಹಿಡಿಯಬಲ್ಲೆವು ಎಂದು ರುದ್ರನಿಗೆ ವಿಶ್ವಾಸವಿತ್ತು. ಇಡೀ ತಂಡವು ಅತ್ಯಂತ ಉತ್ಸಾಹದಿಂದ ಶೋಧಕ್ಕೆ ಮುಂದಾಗಿತ್ತು. ಅವರ ಈ ಅತ್ಯುತ್ಸಾಹಕ್ಕೆ ಕಾರಣ ಸೈಂಧವ ಘೋಷಿಸಿದ ಬಹುಮಾನ. ಚಿತ್ರಕನನ್ನು ಮತ್ತವನ ಸಂಸಾರವನ್ನು ಜೀವಂತ ಹಿಡಿಯಬೇಕು. ಅದು ಸಾಧ್ಯವೇ ಇಲ್ಲವಾದರೆ ಕೊಂದಾದರೂ ಬರಬೇಕು. ಇಷ್ಟು ಮಾಡಿದರೆ ಒಬ್ಬೊಬ್ಬನಿಗೂ ನೂರು ಸುವರ್ಣ ನಾಣ್ಯಗಳು. ರುದ್ರನಿಗೆ ಅದರ ಇಮ್ಮಡಿ ನಾಣ್ಯಗಳನ್ನು ಬಹುಮಾನವಾಗಿ ಕೊಡುತ್ತೇನೆ ಎಂದು ಸೈಂಧವ ಘೋಷಿಸಿದ್ದ. ಆ ನಾಣ್ಯಗಳ ಝಣತ್ಕಾರ ಅವರ ಕಿವಿಗಳಲ್ಲಿ ಮೊಳಗುತ್ತಿತ್ತು. ತಮಗೆ ವಹಿಸಿದ ಕಾರ್ಯವನ್ನು ಬಹು ಸುಲಭವಾಗಿ ಮಾಡಿ ಬಹುಮಾನ ಪಡೆಯುತ್ತೇವೆ ಎಂಬ ಆತ್ಮವಿಶ್ವಾಸ ಅವರ ಮುಖದಲ್ಲಿ ಕುಣಿಯುತ್ತಿತ್ತು.
ರುದ್ರನ ತರ್ಕ ಸುಳ್ಳಾಗಲಿಲ್ಲ.
ಆಮ್ರಪುರದಲ್ಲಿ ಯಾರಿಗೂ ಚಿತ್ರಕಾದಿಗಳ ಪಲಾಯನದ ವಿಚಾರ ತಿಳಿದಿರಲಿಲ್ಲ. ಆದರೆ ಹಳ್ಳಿಯ ಅಂಚಿನಲ್ಲಿ ಗುಡಿಸಲು ಕಟ್ಟಿಕೊಂಡಿದ್ದ ದನಗಾಹಿಯೊಬ್ಬ ಅವರಿಗೆ ಅಗತ್ಯವಾದ ಸುಳಿವು ಕೊಟ್ಟ. ಅವನು ನಿನ್ನೆ ಪ್ರಾತಃಕಾಲದಲ್ಲಿ ಬಹಿರ್ದೆಸೆಗೆ ಗುಡಿಸಲಿನಿಂದ ಹೊರಗೆ ಬಂದಾಗ ಹೊಲಗದ್ದೆಗಳ ಆಚೆ ದೂರದಲ್ಲಿ ನಾಲ್ವರು ತ್ವರಿತವಾಗಿ ಸಾಗುತ್ತಿರುವುದನ್ನು ಗಮನಿಸಿದ್ದ. ನಾಲ್ವರಲ್ಲಿ ಇಬ್ಬರು ಸ್ತಿçÃಯರು. ಒಬ್ಬ ವಯಸ್ಕ ಹಾಗೂ ಇನ್ನೊಬ್ಬ ಹುಡುಗ. ಏನೋ ಗಂಟುಗಳನ್ನು ಹೊತ್ತುಕೊಂಡು, ಗೋಮಾಳದ ದಿಕ್ಕಿನಲ್ಲಿ ಸಾಗುತ್ತಿದ್ದರು. ಅರೆಗತ್ತಲಿನಲ್ಲಿ ಹೆಚ್ಚು ವಿವರ ಗಮನಕ್ಕೆ ಬರಲಿಲ್ಲ ಎಂದನವ.
ಅವನಿಗೆ ಒಂದು ನಾಣ್ಯವನ್ನು ಮೆಚ್ಚು ನೀಡಿ ರುದ್ರ ತನ್ನವರೊಂದಿಗೆ ಗೋಮಾಳದತ್ತ ಧಾವಿಸಿದ.
ಅಷ್ಟುಹೊತ್ತಿಗೆ ಸೂರ್ಯ ಮೇಲೇರಿ ಬಂದಿದ್ದ. ಬಿಸಿಲು ಬಿಸಿಯೇರಿತ್ತು. ಅವರು ಗೋಮಾಳದ ಪಕ್ಕದ ಕೊಳದಲ್ಲಿ ಕೈಕಾಲು, ಮುಖಗಳನ್ನು ತೊಳೆದುಕೊಂಡು ಕುದುರೆಗಳಿಗೆ ನೀರು ಕುಡಿಸಿ, ತಾವೂ ಕುಡಿದರು. ಒಂದಿಷ್ಟು ಕಾಲ ವಿಶ್ರಾಂತಿಗೆ ಪಕ್ಕದಲ್ಲಿದ್ದ ಆಲದ ಮರದ ನೆರಳಿಗೆ ಹೋದರು. ಮೆತ್ತನೆಯ ಹುಲ್ಲಿನಲ್ಲಿ ಕಾಲು ಚಾಚಿ ಕುಳಿತರು. ಅತ್ತಿತ್ತ ನೋಡುತ್ತಿದ್ದ ರುದ್ರನ ಗಮನ ಆ ಹುಲ್ಲುಹಾಸಿನ ಮೇಲೆ ಬಿದ್ದಿದ್ದ ಒಂದೆರಡು ಅರ್ಧ ಒಣಗಿದ ಎಲೆಗಳತ್ತ ಹೋಯಿತು. ಅವನಿಗೆ ಕುತೂಹಲವಾಯಿತು. ಆಲದ ಎಲೆಗಳಲ್ಲ. ಅದಕ್ಕಿಂತ ಅಗಲವಾದ ಎಲೆಗಳು. ಆಲದ ಮರದ ಕೆಳಗೆ ಅವು ಹೇಗೆ ಬಂದವು? ಹತ್ತಿರ ಹೋಗಿ ಗಮನಿಸಿದ. ಆ ಎಲೆಗಳು ಯಾರೋ ಅದರಲ್ಲಿ ಆಹಾರ ತಿಂದ ಹಾಗಿತ್ತು. ಅಲ್ಲಲ್ಲಿ ಸಣ್ಣಸಣ್ಣ ರೊಟ್ಟಿಯ ತುಣುಕುಗಳಿಗೆ ಇರುವೆಗಳು ಮುತ್ತಿದ್ದವು.
ಓಹೋ! ಇದು ಚಿತ್ರಕನ ಕುಟುಂಬ ವಿಶ್ರಾಂತಿ ಪಡೆದ ತಾಣವೇ ಇರಬೇಕು. ಅವರು ಇಲ್ಲಿಂದ ಎಲ್ಲಿ ಹೋದರು?
ರುದ್ರನಿಗೆ ವಿಶ್ರಾಂತಿ ಮರೆತುಹೋಯಿತು.
ಆಲದ ಮರದ ಸುತ್ತಲೂ ಗಮನಿಸಿದ.
ಅಲ್ಲಲ್ಲಿ ಕುದುರೆಗಳ ಹೆಜ್ಜೆ ಗುರುತುಗಳು ಕಾಣಿಸಿದವು.
“ಓಹೋ…ಇದು ಕುದುರೆಗಳ ಗೊರಸಿನ ಗುರುತುಗಳು. ಇಲ್ಲೆಲ್ಲ ಕುದುರೆಗಳು ನಡೆದಾಡಿವೆ. ಬಹುಶಃ ಇಲ್ಲಿಂದ ಕುದುರೆಗಳನ್ನೇರಿ ಹೋಗಿರಬೇಕು. ಅಂದರೆ ವೇಗವಾಗಿ ಸಾಗಿದ್ದಾರೆ. ಅವರನ್ನು ಹಿಡಿಯುವುದು ನಮಗೆ ಸ್ವಲ್ಪ ಕಷ್ಟವಾದೀತು ಎಂದು ತೋರುತ್ತದೆ. ಆದರೆ ಒಂದು ಅನುಕೂಲವೂ ಇದೆ. ಅವರು ಹೋದ ಜಾಡನ್ನು ಈ ಗುರುತುಗಳಿಂದ ಕಂಡು ಹಿಡಿಯಬಹುದು. ಏಳಿ…ಏಳಿ..ನಾವು ಬೇಗನೇ ಹೋಗಬೇಕಿದೆ’’ ಎಂದು ಅವಸರಿಸಿ ಅನುಚರರನ್ನು ಹೊರಡಿಸಿದ.
ಅವರು ಕುದುರೆಗಳ ಖುರದ ಗುರುತುಗಳನ್ನು ಗಮನಿಸುತ್ತ ದಕ್ಷಿಣದ ದಾರಿ ಹಿಡಿದರು. ಕೊಂಚ ದೂರ ಹೋದಾಗ ರುದ್ರನಿಗೆ ಸಂದೇಹ ಬಂತು. ಈ ದಾರಿ ಮುಂದೆ ಹಸ್ತಿನಾವತಿಗೆ ಹೋಗುವ ರಾಜಮಾರ್ಗವನ್ನು ಸಂಧಿಸುತ್ತದೆ. ಚಿತ್ರಕ ಈ ದಾರಿಯಲ್ಲಿ ಯಾಕೆ ಬಂದ? ತಲೆಮರೆಸಿಕೊಂಡು ಓಡುವವರು ಜನಸಮ್ಮರ್ದವಿರುವ ಮಾರ್ಗಕ್ಕೆ ಯಾಕೆ ಬರುತ್ತಾರೆ? ಚಿತ್ರಕನ ಕುಟುಂಬ ಎಲ್ಲೋ ಮರೆಯಾಗಿ ಅವಿತಿರುವ ಯತ್ನ ಮಾಡುವುದು ಸಹಜ. ಅದು ಬಿಟ್ಟು ರಾಜಾರೋಷವಾಗಿ ಕುದುರೆಗಳನ್ನು ಏರಿಕೊಂಡು ಅಥವಾ ಇದು ಅವರು ಬಂದ ಕುದುರೆಗಳ ಗುರುತು ಅಲ್ಲವೋ? ರುದ್ರ ಓಡುತ್ತಿದ್ದ ತನ್ನ ಕುದುರೆಯನ್ನು ನಿಲ್ಲಿಸಿದ. ತಾನು ತಪ್ಪು ಮಾಡಿದೆ ಎಂದು ಅವನಿಗೆ ಅರ್ಥವಾಯಿತು. ಆ ಬಡಪಾಯಿಗೆ ಕುದುರೆಗಳೆಲ್ಲಿಂದ? ಅಷ್ಟಕ್ಕೂ ಅವರೆಲ್ಲ ಕುದುರೆಗಳ ನಡೆಸುವುದನ್ನು ಬಲ್ಲವರೆ? ಇಲ್ಲ… ಅವರು ನಡೆದುಕೊಂಡೇ ಹೋಗಿರಬೇಕು. ಇದಾರೋ ಅಶ್ವಾರೋಹಿಗಳಾದವರ ಕುದುರೆಗಳ ಗುರುತು. ತಾನು ಹುಡುಕಬೇಕಾದ್ದು ಮನುಷ್ಯರ ಹೆಜ್ಜೆಗುರುತುಗಳನ್ನು.
“ಹಿಂದಿರುಗಿ” ತನ್ನ ಕುದುರೆಯನ್ನು ಹಿಂದಕ್ಕೆ ತಿರುಗಿಸುತ್ತ್ತ ಉಚ್ಚಕಂಠದಲ್ಲಿ ಅನುಚರರಿಗೆ ಆದೇಶ ನೀಡಿ, ಆಲದ ಮರದತ್ತ ಧಾವಿಸಿದ. ಅಲ್ಲಿ ಹುಡುಕಿದರೆ ಏನಾದರೂ ಸುಳಿವು ಸಿಗಬಹುದು ಎಂದು ನಿರೀಕ್ಷಿಸಿದ್ದ. ಆದರೆ ಅಂತಹ ಯಾವ ಸುಳಿವೂ ಇರಲಿಲ್ಲ. ಗೊರಸುಗಳ ಗುರುತಿನಂತೆ ಮನುಷ್ಯರ ಹೆಜ್ಜೆ ಗುರುತು ಆಳವಾಗಿ ಮೂಡುವುದಿಲ್ಲ. ಅಲ್ಲದೆ ಈಗಾಗಲೇ ಒಂದು ದಿನ ಕಳೆದಿದೆ. ಇನ್ನು ಕೇವಲ ತರ್ಕವನ್ನು ಆಧರಿಸಿಯೇ ಶೋಧ ಮಾಡಬೇಕಷ್ಟೆ.
ಎಲ್ಲಿಗೆ ಹೋಗಿರಬಹುದು ಅವರು?
ಹಸ್ತಿನಾವತಿಯ ಸರಹದ್ದಿನೊಳಗೆ ಇರುವುದು ಅಪಾಯ ಎಂದು ಅರಿವಾಗಿ ಪಲಾಯನಕ್ಕೆ ಹೊರಟವರು. ಅನ್ಯರಾಜ್ಯಗಳಲ್ಲಿ ಆಶ್ರಯ ಪಡೆಯಬೇಕಷ್ಟೆ? ಉತ್ತರದಲ್ಲಿ ಅರಣ್ಯ. ಪಶ್ಚಿಮ ಹಾಗೂ ದಕ್ಷಿಣದಲ್ಲಿ ಹಸ್ತಿನಾವತಿಯ ಸೀಮಾರೇಖೆ. ಪೂರ್ವದತ್ತ ಸಾಗಿರಬೇಕು. ಪ್ರಬಲವಾಗಿರುವುದು ಪಾಂಚಾಲ. ಉಳಿದ ದುರ್ಬಲ ರಾಜ್ಯಗಳು ರಾಜದ್ರೋಹಿಗಳಿಗೆ ಆಶ್ರಯ ನೀಡಲಾರವು. ಉತ್ತರ ಪಾಂಚಾಲವನ್ನು ರಾಜಾ ದ್ರುಪದನಿಂದ ದ್ರೋಣರು ವಶಪಡಿಸಿಕೊಂಡಿದ್ದರು. ಅದು ಹಸ್ತಿನಾವತಿಯ ಅಧೀನದಲ್ಲಿಯೇ ಇದೆ. ಚಿತ್ರಕಾದಿಗಳು ಅಲ್ಲಿಗೆ ಹೋಗುವ ಸಾಧ್ಯತೆಯಿಲ್ಲ. ದಕ್ಷಿಣ ಪಾಂಚಾಲಕ್ಕೆ ಹೋಗಿರಬಹುದೆ ಎಂದರೆ ಅದೂ ಅಶಕ್ಯ. ವಿಶಾಲವಾದ ಗಂಗಾ ನದಿ ಪ್ರವಾಹವನ್ನು ಅವರು ದಾಟುವುದು ಹೇಗೆ ಸಾಧ್ಯ? ಅಂದರೆ ಅವರಿಗೆ ಅರಣ್ಯಕ್ಕೆ ಹೋಗಿ ಋಷ್ಯಾಶ್ರಮಗಳಲ್ಲಿ ಆಶ್ರಯ ಬೇಡುವುದು ಬಿಟ್ಟು ಬೇರೆ ದಾರಿಯಿಲ್ಲ. ಉತ್ತರ ದಿಕ್ಕಿನಲ್ಲೇ ಹೋಗಿರಬೇಕು.
ಹೀಗೆ ತರ್ಕಿಸಿದ ರುದ್ರ, ಅರಣ್ಯದಲ್ಲಿ ಅವರನ್ನು ಹುಡುಕುವುದಕ್ಕೆ ತನ್ನ ಯೋಧರ ಸಂಖ್ಯೆ ಸಾಲದು ಎಂದು ಭಾವಿಸಿದ. ಅನುಚರರಲ್ಲಿ ಒಬ್ಬನನ್ನು ಕರೆದು,
“ನೀನು ಶೀಘ್ರವಾಗಿ ರಾಜಧಾನಿಗೆ ಹೋಗು. ಅಲ್ಲಿ ಶೋಧ ನಡೆಸುವ ಅಗತ್ಯವಿಲ್ಲ. ಆ ತಂಡವನ್ನು ಕೂಡಲೇ ಬಂದು ನಮ್ಮನ್ನು ಸೇರಿಕೊಳ್ಳುವಂತೆ ತಿಳಿಸು. ಅವರು ಇನ್ನಷ್ಟು ಶಸ್ತ್ರಾಸ್ತ್ರಗಳ ಸಮೇತ ಬರಲಿ. ವಿಳಂಬ ಕೂಡದು. ನಾವು ಐವರು ಉತ್ತರದ ಅರಣ್ಯದಲ್ಲಿ ಮುಂದುವರಿಯುತ್ತೇವೆ. ನೀವು ಒಟ್ಟಾಗಿ ನೇರ ರೇಖೆಯಲ್ಲಿ ಬನ್ನಿ. ನಾವು ಸಂಧಿಸೋಣ. ದಾರಿಯಲ್ಲಿ ಕುರುಹುಗಳನ್ನು ಬಿಡುತ್ತೇವೆ” ಎಂದು ಅವನ್ನು ನಗರದತ್ತ ಅಟ್ಟಿದ.
ಉಳಿದ ನಾಲ್ವರನ್ನು ಕೂಡಿಕೊಂಡು ಉತ್ತರದತ್ತ ಸಾಗಿದ.
* * *
ಶಂಖನೂ, ಚಿತ್ರಕನ ಕುಟುಂಬವೂ ದಟ್ಟವಾದ ಕಾಡಿನಲ್ಲಿ ದಾರಿ ಮಾಡಿಕೊಳ್ಳುತ್ತ ಮುಂದುವರಿಯುತ್ತಿದ್ದರು. ಎಷ್ಟು ಶೀಘ್ರವಾಗಿ ಹೋಗಬೇಕು ಎಂದು ಎಣಿಸಿದರೂ, ದಾರಿಯ ಅಡಚಣೆ ಅವರ ಗತಿಯನ್ನು ತಡೆಯುತ್ತಿತ್ತು. ಜಿತುವು ಅವರಷ್ಟು ವೇಗವಾಗಿ ನಡೆಯಲಾರದ ಹುಡುಗ. ಅಲ್ಲಲ್ಲಿ ಎದುರಾಗುತ್ತಿದ್ದ ಕಣಿವೆ, ಕಂದರಗಳು, ಕಡಿದಾದ ದಿಣ್ಣೆಗಳು, ಸಂಚರಿಸುತ್ತಿದ್ದ ಕ್ರೂರ ಮೃಗಗಳು ಅವರ ವೇಗವನ್ನು ಕುಂಠಿತಗೊಳಿಸುತ್ತಿದ್ದವು. ನಡುನಡುವೆ ನಿಂತು, ಸೂರ್ಯ ಚಲನೆಯನ್ನು ಗಮನಿಸಿ, ಪ್ರಯಾಣದ ದಿಕ್ಕನ್ನು ಖಚಿತಪಡಿಸಿಕೊಳ್ಳಬೇಕಾಗುತ್ತಿತ್ತು.
ಹೆಜ್ಜೆ ಇಡುವ ಮೊದಲು, ವಿಷಯುಕ್ತವಾದ ಹಾವುಗಳು ಇರುವವೇನೋ ಎಂದು ಗಮನಿಸಿ, ಮುಂದೆ ಕಾಲೂರಬೇಕಿತ್ತು.
ಅಲ್ಲಲ್ಲಿ ನೀರು ಹರಿಯುತ್ತಿದ್ದ ಹಳ್ಳಗಳು… ಇದೆಲ್ಲ ಅಡ್ಡಿಗಳಿಂದಾಗಿ ಅವರ ಪ್ರಯಾಣ ಬಹಳ ನಿಧಾನವಾಗಿತ್ತು.
ಒಂದು ಹಗಲಿನಲ್ಲಿ ಇಪ್ಪತ್ತು ಕ್ರೋಶ ದೂರವನ್ನಾದರೂ ಕ್ರಮಿಸಬೇಕಿತ್ತು. ಅದರ ಕಾಲುಭಾಗದಷ್ಟು ದೂರವೂ ಬಂದಿರಲಿಲ್ಲ ಅವರು.
ಒಂದೆರಡು ಕಡೆ ವಿಶ್ರಾಂತಿಗಾಗಿ ನಿಲ್ಲಬೇಕಾಯಿತು.
ಅಪರಾಹ್ನದ ವೇಳೆ ಸ್ವಲ್ಪ ಆಹಾರ ಸೇವನೆಗೆಂದು ಸಮಯ ಹೋಯಿತು. ಸಂಜೆಯ ಸೂರ್ಯ ಮರೆಯಾಗುವ ಹೊತ್ತಿಗೆ ಅವರು ಅಗಲವಾಗಿ ಮೈಚಾಚಿದ್ದ ಬಂಡೆಯೊಂದರ ಹತ್ತಿರ ಬಂದರು. ಕತ್ತಲು ಪೂರ್ಣವಾಗಿ ಮುಸುಕುವ ಮುನ್ನವೇ ಪ್ರಯಾಣ ನಿಲ್ಲಿಸುವುದು ಒಳಿತು ಎಂದ ಶಂಖ.
ಆ ಬಂಡೆ ನೆಲದಿಂದ ಕೊಂಚ ಎತ್ತರದಲ್ಲಿದ್ದು ಕಾಡುಪ್ರಾಣಿಗಳಿಂದ ರಕ್ಷಣೆ ಒದಗಿಸುವ ಹಾಗಿತ್ತು. ಅನತಿ ದೂರದಲ್ಲಿ ಸಣ್ಣ ತೊರೆಯೂ ಹರಿಯುತ್ತಿತ್ತು.
ಒಂದೆರಡು ಹೊತ್ತಿಗೆ ಸಾಕಾಗುವಷ್ಟು ಆಹಾರ ಅವರ ಗಂಟುಗಳಲ್ಲಿತ್ತು. ತೊರೆಯ ನೀರಿನಲ್ಲಿ ಮೈ ತೊಳೆದುಕೊಂಡು, ಒಂದಿಷ್ಟು ಆಹಾರ ಸೇವಿಸಿ, ನೀರು ಕುಡಿದು, ಬಂಡೆಯ ಮೇಲೆ ಸಾಲಾಗಿ ಮಲಗಿಕೊಂಡರು.
ಅವರಿಗೆಲ್ಲ ಆಯಾಸದಿಂದ ಗಾಢವಾದ ನಿದ್ರೆ ಬರಬೇಕಿತ್ತು. ಆದರೆ ನಿಶ್ಚಿಂತೆಯಿಂದ ನಿದ್ರಿಸಿದ್ದು ಶಂಖ ಮತ್ತು ಜಿತು ಮಾತ್ರ.
ಚಿತ್ರಕನಾಗಲಿ, ಚಾರುವಾಗಲಿ ಹೇಗೆ ತಾನೇ ನಿದ್ರಿಸಿಯಾರು, ಮುಂದಿನ ಭವಿಷ್ಯ ಕರಾಳವಾಗಿ ಭಯ ಹುಟ್ಟಿಸುತ್ತಿರುವಾಗ? ಅವರ ಚಿಂತೆಯ ಬಿಸಿ ತನಗೂ ಸೋಕಿತೋ ಎನ್ನುವಂತೆ ಚಂಪೆಯೂ ನಿದ್ರೆಯಿಲ್ಲದೆ ಆ ಕಡೆ ಈ ಕಡೆ ಮಗ್ಗುಲು ಬದಲಿಸುತ್ತಲೇ ಇದ್ದಳು.
ಚಾರು ನಾಲ್ಕಾರು ಸಲ ತನ್ನ ಗಂಡನಲ್ಲಿ ಏನೋ ಹೇಳಬೇಕು ಎಂದು ಗಂಟಲು ಸರಿಮಾಡಿಕೊಂಡಳು. ಆದರೆ ಅವಳ ಪಕ್ಕದಲ್ಲಿ ಚಂಪೆ ನಿದ್ರೆ ಬಾರದೆ ನಿಟ್ಟುಸಿರು ಬಿಡುತ್ತಿದ್ದುದನ್ನು ಗಮನಿಸಿ ಬಾಯಿ ಮುಚ್ಚಿಕೊಂಡಳು.
ಚಿತ್ರಕ ಕೆಲವು ದಿನಗಳಿಂದ ಆತಂಕದಲ್ಲಿದ್ದ. ಈ ಅರಣ್ಯ ಮಧ್ಯದಲ್ಲಿ ಕಲ್ಲುಬಂಡೆಯ ಮೇಲೆ ಮಲಗಿದ ತನ್ನ ಮಡದಿ ಮಕ್ಕಳನ್ನು ನೋಡಿದರೆ ಅವನ ಹೃದಯಕ್ಕೆ ತಿವಿದಂತಾಗುತ್ತಿತ್ತು.
ಏನು ಮಾಡಲಾದೀತು?
ತಾನೇ ತಂದುಕೊಂಡ ಸಂಕಟ ಇದು. ವಾರಣಾವತದ ವಿಚಾರದಲ್ಲಿ ಬಾಯಿ ಮುಚ್ಚಿಕೊಂಡಿದ್ದರೆ ನೆಮ್ಮದಿಯಾಗಿ ಇರಬಹುದಿತ್ತು. ಏನೋ ಧಾರ್ಮಿಕರಾದ ಪಾಂಡವರ ಜೀವಕ್ಕೆ ಆಪತ್ತಿದೆ ಎಂದು ಅದನ್ನು ಅರಮನೆಗೆ ತಿಳಿಸುವುದಕ್ಕೆ ಹೊರಟೆ. ಈಗ ತಮ್ಮ ಜೀವಗಳೇ ಅಪಾಯದಲ್ಲಿವೆ.
ಅವನು ಒಂದೆರಡು ಗಳಿಗೆ ಕಣ್ಣು ಮುಚ್ವಿದ್ದನೋ ಇಲ್ಲವೋ.
ಮೂಡಣ ಬಾನು ಕೆಂಪೇರಿತು. ನಿದ್ರೆಗೆಟ್ಟ ಅವರ ಕಣ್ಣುಗಳಂತೆ ಕೆಂಪಾದ ಸೂರ್ಯನೂ ಕಾಣಿಸಿಕೊಂಡ.