ಮಕ್ಕಳಲ್ಲಿ ಇಂತಹ ಬುದ್ಧಿ ಕಾಣಿಸುವಾಗ ಯಾಕೆ ಅರಮನೆಯಲ್ಲಿ ಯಾರೂ ತಿದ್ದುವುದಕ್ಕೆ ಮುಂದಾಗಲಿಲ್ಲವೋ ನನಗೆ ಅರ್ಥವಾಗಲಿಲ್ಲ. ತುಂಟತನವೇ ಆದರೂ ಬಲಿತ ಮೇಲೆ ಅದನ್ನು ತಿದ್ದಲಾದೀತೇ? ನಮ್ಮಂತಹವರ ಮಕ್ಕಳಾದರೆ ದುರ್ಬುದ್ಧಿ ಮಾಡಿದಾಗಲೇ ಎರಡು ಏಟು ಬಾರಿಸಿ, ಹೀಗೆ ಮಾಡಬಾರದು ಅನ್ನುವ ಪಾಠ ಕಲಿಸುತ್ತಿದ್ದೆವು. ಆದರೆ ಅರಮನೆಯ ರಾಜಕುಮಾರರಿಗೆ ಹೀಗೆ ಮಾಡುವುದಿರಲಿ, ಹೇಳುವುದೂ ಅಪಾಯವೇ. ಆದರೆ ನನ್ನ ಮಗ ವಿದುರ ಮಾತ್ರ ಕಾಲಕಾಲಕ್ಕೆ ಕೌರವರ ತಪ್ಪುಗಳನ್ನು ಎತ್ತಿ ಆಡುತ್ತಿದ್ದ. ಅದರಿಂದ ಕೌರವರಿಗೆ ಅವನನ್ನು ಕಂಡರಾಗದು ಎನ್ನುವಂತಾಯಿತು. ಆಚಾರ್ಯ ಭೀಷ್ಮರು ಇದನ್ನೆಲ್ಲ ಹುಡುಗಾಟ ಎಂದು ಭಾವಿದರೋ, ಅಥವಾ ತಂದೆಗೇ ಇಲ್ಲದ ಚಿಂತೆ ತನಗೆ ಯಾಕೆ ಎಂದುಕೊಂಡರೋ ಅವರೂ ಮೌನವನ್ನೇ ವಹಿಸಿದರು. ಇದರಿಂದಾಗಿ ಕೌರವರು ಮಾಡಿದ್ದನ್ನು ಕೇಳುವವರಿಲ್ಲ ಎನ್ನುವ ಹಾಗಾಯಿತು. ಹಿರಿಯರಾದವರು ಮಕ್ಕಳಲ್ಲಿ ಅಕಾರಣ ದ್ವೇಷ, ಮತ್ಸರಗಳು ಕಾಣಿಸಿದಾಗ ಮುಂದೆ ಅಪಾಯವುಂಟು ಎಂದು ತಿಳಿಯದಿದ್ದರೆ ಅವರ ಹಿರಿತನಕ್ಕೆ ಏನು ಬೆಲೆ?
ಭವಿಷ್ಯದ ಕುರಿತು ಒಂದು ರೀತಿಯ ಹತಾಶೆಯೇ ಅರಮನೆಯನ್ನು ಆವರಿಸಿತ್ತು ಎಂದೆನಲ್ಲ.
ಭೀಷ್ಮಾಚಾರ್ಯರಿಗೆ ತಾನು ಪ್ರತಿಜ್ಞೆಯ ಮೂಲಕ ಅಧಿಕಾರ, ಸಂಸಾರಗಳನ್ನು ತ್ಯಾಗ ಮಾಡಿಯೂ ಪ್ರಯೋಜನವಾಗಲಿಲ್ಲ ಎಂಬ ಭಾವನೆ ಬಂದಿರಬಹುದು. ವಿಚಿತ್ರವೆಂದರೆ ಅವರು ತ್ಯಾಗ ಮಾಡಿದ ಎರಡೂ ಅವರನ್ನು ಬಿಡಲೇ ಇಲ್ಲ. ಹಸ್ತಿನಾವತಿಯ ಸಮಸ್ತ ಅಧಿಕಾರದ ಸೂತ್ರವನ್ನು ಅವರೇ ಹಿಡಿದಿರಬೇಕಾಯಿತು. ತನ್ನದಲ್ಲದ ಸಂಸಾರದ ಹಿರಿತನದ ಹೊಣೆಯು ಅವರನ್ನೇ ಅವಲಂಬಿಸಿತು. ಇಷ್ಟೆಲ್ಲ ಆದ ಬಳಿಕವೂ ವೈರಾಗ್ಯ ಮಾರ್ಗವನ್ನು ಹಿಡಿದು ತನ್ನ ಅಣ್ಣ ಕೃಷ್ಣ ದ್ವೈಪಾಯನರ ದಾರಿಯಲ್ಲಿ ಸಾಗುವುದಕ್ಕೂ ಅವರಿಗೆ ಸಾಧ್ಯವಾಗಲಿಲ್ಲ. ಇತ್ತ ವಂಶದ ಉತ್ಕರ್ಷದ ಕನಸೂ ಸಾಕಾರವಾಗಲಿಲ್ಲ.
ರಾಜಮಾತೆ ಸತ್ಯವತಿ ದೇವಿಯವರ ಅಭಿಲಾಷೆಯೂ ಕಮರಿದಂತೆ ಕಾಣುತ್ತಿತ್ತು. ಅವರ ಸಂತಾನವು ಸಿಂಹಾಸದ ಹಕ್ಕನ್ನು ಪಡೆಯಬೇಕು ಎಂಬುದು ಶಂತನು ಮಹಾರಾಜರನ್ನು ಮದುವೆಯಾಗುವಾಗ ಇದ್ದ ಹಂಬಲವಂತೆ. ಆದರೆ ಆದದ್ದೇನು? ಆ ಕಡೆ ಶಂತನು ಭೂಪತಿಗಳ ರಕ್ತಕ್ಕೂ ಸಿಂಹಾಸನಾಧಿಕಾರ ದಕ್ಕಲಿಲ್ಲ. ಈ ಕಡೆ ಸತ್ಯವತಿ ದೇವಿಯವರ ರಕ್ತಕ್ಕೂ ಸಿಕ್ಕಲಿಲ್ಲ. ಒಟ್ಟಿನಲ್ಲಿ ಭೀಷ್ಮರ ಪ್ರತಿಜ್ಞೆಯಿಂದ ನಾಡಿಗೆ ಪ್ರಯೋಜನವಾದದ್ದು ಕಾಣೆ. ಈ ದೊಡ್ಡ ದೊಡ್ಡ ಮನೆತನದ ಕಥೆಯೆಲ್ಲ ಹೀಗೆಯೋ ಏನೋ. ಯಾರೋ ಹಿಂದಿನ ರಾಜರು ಸಂತಾನವಿಲ್ಲದೆ ಸತ್ತಾಗ, ಅವರ ದೇಹವನ್ನು ಮಥನ ಮಾಡಿ ಮಕ್ಕಳನ್ನು ಪಡೆದ ಕಥೆ ಕೇಳಿದ್ದೆ. ಹಸ್ತಿನಾವತಿಯಲ್ಲಿಯೂ ಇಂತಹ ಪವಾಡವೇನಾದರೂ ನಡೆಯಬೇಕೋ ಏನೋ.
ಏನಿದ್ದರೂ ನನ್ನಂತಹವರು ಮೌನವಾಗಿ ನೋಡುವುದು ಮಾತ್ರ. ಬೇರೆ ಏನೂ ಮಾಡಲಾಗದ ಅಸಹಾಯ ಸ್ಥಿತಿ ನಮ್ಮದು. ನಮಗೆಲ್ಲ ಸಂತಾನ ಇಲ್ಲದಿದ್ದರೆ ನಷ್ಟವೇನೂ ಆಗಲಾರದು. ಮಕ್ಕಳಿಗೆ ಆಳುವುದಕ್ಕೆ ಯಾವ ಸಾಮ್ರಾಜ್ಯವನ್ನು ಕೊಡೋಣ? ನಮಗೆಲ್ಲ ಮಕ್ಕಳು ಬೇಕು ಅನಿಸುವುದು ನಮ್ಮ ಸಂತೋಷಕ್ಕೆ ಮಾತ್ರ. ಹೆಚ್ಚೆಂದರೆ ಮುದುಕರಾದಾಗ ನಮ್ಮನ್ನು ನೋಡಿಕೊಂಡಾರು ಅನ್ನುವ ಆಸೆಗೆ ಅಷ್ಟೇ. ದಿಕ್ಕಿಲ್ಲದ ನನಗೆ ಅಂತಹ ಒಂದು ಭಾಗ್ಯವನ್ನು ವಿದುರನ ರೂಪದಲ್ಲಿ ದೇವರು ಕರುಣಿಸಿದ. ನನಗೇನೋ ಚಿಂತೆಯಿಲ್ಲ. ಆದರೂ ನನಗೆ ಅನ್ನ ನೀಡಿದ ಅರಮನೆಯಲ್ಲಿ ಬೇಸರ ತುಂಬಿದಾಗ ಅದು ನನಗೆ ಸಂತೋಷವನ್ನು ಕೊಟ್ಟೀತೇ?
ಹೀಗಿರುವಾಗ ಒಂದು ದಿನ ವೇದವ್ಯಾಸರು ಅರಮನೆಗೆ ಬಂದರು. ಬಂದವರು ಅಂತಃಪುರದಲ್ಲಿದ್ದ ಗಾಂಧಾರಿಯನ್ನು ಕರೆದು, “ಮಗಳೆ, ಇದೋ ಈ ಮಂತ್ರಪಿಂಡವನ್ನು ಸ್ವೀಕರಿಸು. ಇದರಿಂದ ನಿನ್ನ ಗರ್ಭದಲ್ಲಿ ನೂರು ಮಂದಿ ಮಕ್ಕಳು ಹುಟ್ಟುತ್ತಾರೆ” ಎಂದು ಅನುಗ್ರಹಿಸಿದರು. ಅವಳಿಗೆ ಮೊದಲೇ ಶಿವಾನುಗ್ರಹವಾಗಿತ್ತಂತೆ. ಅದರ ಪ್ರಕಾರ ಅವಳಿಗೆ ನೂರು ಮಂದಿ ಮಕ್ಕಳನ್ನು ಪಡೆಯುವ ಯೋಗವಿತ್ತಂತೆ. ವ್ಯಾಸರು ಕೊಟ್ಟ ಮಂತ್ರಪಿಂಡದಿಂದ ನೂರು ಮಂದಿ ಮಕ್ಕಳಾಗುತ್ತಾರೆ ಎಂಬ ಭವಿಷ್ಯವೂ, ಶಿವಾನುಗ್ರಹವೂ ಜೊತೆಯಾದಂತಾಯಿತಷ್ಟೆ. ಈ ಕಾರಣದಿಂದ ಹಸ್ತಿನಾವತಿ ಸಂಪನ್ನವಾಯಿತು ಎನ್ನುವ ಭಾವನೆ ಅರಮನೆಯಲ್ಲಿ ಉಂಟಾಯಿತು. ಗಾಂಧಾರಿಯು ಬಸುರಿಯಾದಳು. ಬಸುರಿಯಾದಳು ನಿಜ, ಆದರೆ ಹೆರಲಿಲ್ಲ. ಗರ್ಭ ಬೆಳೆಯಿತು. ಮೂರು ವರ್ಷದ ತನಕವೂ ಹೆರಿಗೆಯಾಗಲಿಲ್ಲ.
ಇದರೊಂದಿಗೆ ಇನ್ನೂ ಒಂದು ಬೆಳವಣಿಗೆಯಾಯಿತು. ತನ್ನ ಇಬ್ಬರು ರಾಣಿಯರೊಂದಿಗೆ ಪಾಂಡು ಅರಣ್ಯಕ್ಕೆ ಹೋಗಿದ್ದನಷ್ಟೆ? ಅವರು ಅಲ್ಲೆಲ್ಲೋ ಶತಶೃಂಗ ಎಂಬ ಪರ್ವತದಲ್ಲಿ ವಾಸವಿದ್ದರಂತೆ. ಶತಶೃಂಗದಿಂದ ಒಂದು ಸುದ್ದಿ ಬಂತು. ಪಾಂಡುವಿಗೆ ಪುತ್ರನೊಬ್ಬ ಜನಿಸಿದ ಎಂಬ ಸುದ್ದಿ ಅದು. ನನಗೆ ಅಚ್ಚರಿಯೆನಿಸಿತು. ಇದು ಶಕ್ಯವೆ? ಏಕೆಂದರೆ ಪಾಂಡುವು ಬೇಟೆಯಾಡುವಾಗ ಜಿಂಕೆಯ ರೂಪದಲ್ಲಿದ್ದ ಋಷಿದಂಪತಿಗೆ ಬಾಣ ಹೊಡೆದು ಕೊಂದ ಎಂಬ ಕಾರಣಕ್ಕೆ ಅವನಿಗೆ ತನ್ನ ಪತ್ನಿಯರನ್ನು ಸೇರಿದರೆ ಮೃತ್ಯು ಬರುವುದು ಎಂಬ ಶಾಪವಿತ್ತು. ಹಾಗಾಗಿ ಮಕ್ಕಳಾಗುವ ಸಾಧ್ಯತೆಯೇ ಇರಲಿಲ್ಲ. ಮತ್ತೆ ಹೇಗೆ ಮಕ್ಕಳಾದರು?
ಆ ಮೇಲೆ ಗೊತ್ತಾಯಿತು. ಅದಕ್ಕೂ ಒಬ್ಬರು ಋಷಿಗಳ ಅನುಗ್ರಹವೇ ಕಾರಣ. ದುರ್ವಾಸರೆಂಬ ಮಹರ್ಷಿಗಳು ಬಹಳ ಹಿಂದೆ ಕುಂತಿಗೆ ಒಂದು ಮಂತ್ರವನ್ನು ಉಪದೇಶ ಮಾಡಿದ್ದರಂತೆ. ಅದರ ಪ್ರಕಾರ ಯಾವ ದೇವತೆಯನ್ನಾದರೂ ಮಂತ್ರಬಲದಿಂದ ಒಲಿಸಿಕೊಂಡರೆ, ಆ ದೇವತೆಯ ಅಂಶದ ಪುತ್ರ ಹುಟ್ಟುತ್ತಾನೆ ಎಂದಿದ್ದರಂತೆ ದುರ್ವಾಸರು. ಕುಂತಿ ಯಮಧರ್ಮ, ವಾಯು ಹಾಗೂ ಇಂದ್ರರ ಅನುಗ್ರಹದಿಂದ ಮೂವರು ಮಕ್ಕಳನ್ನು ಪಡೆದಳಂತೆ. ಮಾದ್ರಿಯೂ ಅದೇ ಮಂತ್ರದಿಂದ ಇಬ್ಬರು ಮಕ್ಕಳನ್ನು ಹೆತ್ತಳಂತೆ. ಕುಂತಿಗೆ ಮಗ ಹುಟ್ಟಿದ ಎಂಬ ಸುದ್ದಿ ಬಂದಾಗಲೇ ಗಾಂಧಾರಿಗೆ ಚಿಂತೆಯಾಗಿತ್ತು. ತನ್ನ ಗರ್ಭದಿಂದ ಮಗು ಜನಿಸಲಿಲ್ಲ ಎಂಬುದಕ್ಕಿಂತ ಕುಂತಿ ಹೆತ್ತಳಲ್ಲ ಎಂಬ ಸಂಕಟವೇ ಹೆಚ್ಚಿರಬೇಕು. ಒಂದು ದಿನ ಈ ಸಂಕಟವನ್ನು ತಾಳಲಾರದೆ ಹೊಟ್ಟೆಯನ್ನು ಹೊಸಕಿಕೊಂಡಳು. ಅದರಿಂದಾಗಿ ಪೂರ್ಣ ಬೆಳೆಯದೆ ಇದ್ದ ಒಂದು ಪಿಂಡ ಕೆಳಗೆ ಬಿತ್ತು.
ಬಿದ್ದ ಪಿಂಡ ಒಡೆದು ಹಲವು ಚೂರುಗಳಾಯಿತು. ಏನು ಮಾಡುವುದೆಂದು ಎಲ್ಲರೂ ಚಿಂತೆಯಲ್ಲಿದ್ದಾಗ ಮತ್ತೊಮ್ಮೆ ವ್ಯಾಸರೇ ಬಂದರು. ಅವುಗಳನ್ನೆಲ್ಲ್ಲ ತುಪ್ಪ ತುಂಬಿದ ಭಾಂಡಗಳಲ್ಲಿರಿಸಿ, ಇವುಗಳೇ ನೂರು ಮಂದಿ ಮಕ್ಕಳಾಗಿ ಬೆಳೆಯುತ್ತಾರೆ ಎಂದರು. ಹಾಗೆಯೇ ಆಯಿತು. ಆದರೆ ಈ ಪ್ರಕರಣದಿಂದ ಗಾಂಧಾರಿಗೆ ಕುಖ್ಯಾತಿ ಬಂತು. ಅವಳು ಮತ್ಸರದಿಂದ ಹೊಟ್ಟೆ ಹಿಸುಕಿಕೊಂಡಳು. ಇಲ್ಲವಾದರೆ ಪೂರ್ಣ ಯೋಗ್ಯತೆಯ ಒಬ್ಬ ಸುಪುತ್ರ ಜನಿಸುತ್ತಿದ್ದ ಎಂಬ ಮಾತು ಹುಟ್ಟಿತು. ನನಗೆ ಮಾತ್ರ ಹಾಗೆ ತೋರಲಿಲ್ಲ. ವ್ಯಾಸರ ಮಾತು ನೂರು ಮಂದಿ ಮಕ್ಕಳಾಗುತ್ತಾರೆ ಎಂದಲ್ಲವೆ? ಶಿವನ ಅನುಗ್ರಹವೂ ಅದೇ ಅಲ್ಲವೆ? ಹಾಗಿರುವಾಗ ಗಾಂಧಾರಿ ಹೊಟ್ಟೆ ಹಿಸುಕಿಕೊಳ್ಳದಿದ್ದರೂ ಅದೇ ಆಗಬೇಕಿತ್ತಲ್ಲ? ಅಥವಾ ಇದೂ ದೇವರ ಸಂಕಲ್ಪವೇ ಇರಬಹುದು ಅನಿಸಿತು. ಆದರೆ ನಮ್ಮಂತಹ ಸಾಮಾನ್ಯರಿಗೆ ಅನಿಸಿದಂತೆ ದೊಡ್ಡವರಿಗೆ ಅನಿಸುವುದಿಲ್ಲ. ಹಾಗೆ ಗಾಂಧಾರಿ ಮತ್ಸರಿ ಎಂದೇ ಆಗಿಹೋಯಿತು.
ವ್ಯಾಸರ ಮಾತಿನಂತೆ ಆ ಮಕ್ಕಳು ಬೆಳೆದರು. ಅವರಲ್ಲಿ ಹಿರಿಯವನು ದುರ್ಯೋಧನ. ಅವನು ಹುಟ್ಟಿದಾಗ ಏನೇನೋ ಅಪಶಕುನಗಳು, ಉತ್ಪಾತಗಳು ಕಾಣಿಸಿದವು. ಲಕ್ಷಣಗಳನ್ನು ಗಮನಿಸಿದವರು ಇವನಿಂದ ಕುಲಕ್ಕೆ ಆಪತ್ತು. ತ್ಯಜಿಸುವುದು ಉತ್ತಮ ಎಂಬ ಸಲಹೆ ಕೊಟ್ಟರು. ಊರಿಗೆ ಒಳಿತಾಗುವುದಿದ್ದರೆ ಒಬ್ಬನನ್ನು ತ್ಯಾಗ ಮಾಡಬಹುದು, ಅದರಲ್ಲಿ ತಪ್ಪಿಲ್ಲ ಎಂದರು. ಆದರೆ ಹೆತ್ತವರಿಗೆ ಮನಸ್ಸು ಬಂದೀತೆ? ಹಿರಿಯವನು. ಅವನೇ ಸಿಂಹಾಸನ ಏರಬೇಕಾದವನು. ಏರುತ್ತಾನೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ಸಿಂಹಾಸನ ಏರಬೇಕಾದರೆ ವಯಸ್ಸಾಗಬೇಕಲ್ಲ. ಅಷ್ಟಾಗುವ ಮೊದಲೇ ಇನ್ನೊಂದು ಘಟನೆ ನಡೆಯಿತು. ಒಂದು ದಿನ ಕೆಲವರು ಋಷಿಗಳು ಕುಂತಿಯನ್ನೂ ಅವಳ ಜೊತೆ ಐವರು ಪಾಂಡುಪುತ್ರರನ್ನೂ ಕರೆದುಕೊಂಡು ಹಸ್ತಿನಾವತಿಗೆ ಬಂದರು. ಋಷ್ಯಶೃಂಗದಲ್ಲಿದ್ದ ಪಾಂಡು ಮೃತನಾದನಂತೆ. ಅವನ ಜೊತೆಗೆ ಮಾದ್ರಿ ಸಹಗಮನ ಮಾಡಿದಳಂತೆ. ಉಳಿದವರನ್ನು ಹಸ್ತಿನಾವತಿಯಲ್ಲಿ ಭೀಷ್ಮರ ಕೈಗೆ ಒಪ್ಪಿಸಲೆಂದು ಈ ಋಷಿಗಳು ಅವರನ್ನು ಕರೆದು ತಂದಿದ್ದರು. ಭೀಷ್ಮಾಚಾರ್ಯರು ಅತ್ಯಂತ ಸಂತೋಷದಿಂದ ಪಾಂಡವರನ್ನು ಸ್ವೀಕರಿಸಿದರು. ಅರಮನೆ ಅರಗುವರರಿಂದ ತುಂಬಿಹೋಯಿತು. ಎಲ್ಲರಲ್ಲೂ ಸಂಭ್ರಮ.
ಆದರೆ ಈ ಸಂಭ್ರಮ ಹೆಚ್ಚುಕಾಲ ಉಳಿಯಲಿಲ್ಲ. ಧೃತರಾಷ್ಟ್ರನ ಮಕ್ಕಳಿಗೂ ಪಾಂಡವರಿಗೂ ಪರಸ್ಪರ ಪ್ರೀತಿ ಬೆಳೆಯಲಿಲ್ಲ. ಅವರೊಳಗೆ ಜಗಳ ಪ್ರಾರಂಭವಾಯಿತು. ಅವರು ಬಂದದ್ದೇ ಕೌರವರಿಗೆ ಇಷ್ಟವಾಗಲಿಲ್ಲ. ಅವರನ್ನು ತೊಲಗಿಸುವುದು ಹೇಗೆ? ಎಂಬುದು ಇವರ ಆಲೋಚನೆ. ಕ್ಷೇಮವಾಗಿ ಉಳಿಯುವುದು ಹೇಗೆ ಎಂದವರ ಚಿಂತೆ. ಪಾಂಡವರ ಬಗೆಗೆ ದುರ್ಯೋಧನನಿಗೆ ಅಸಹನೆ. ತಾನು ಏರಬೇಕಾದ ಸಿಂಹಾಸನಕ್ಕೆ ಪಾಲುದಾರರು ಬಂದರು ಎಂದು ಅವನಿಗೆ ಅಸಮಾಧಾನ. ಪಾಂಡವರಲ್ಲಿ ದೊಡ್ಡವನಾದ ಯುಧಿಷ್ಠಿರ ಮುಂದಿನ ರಾಜನಾಗುವುದು ಧರ್ಮವಂತೆ. ಇಲ್ಲಿಯವರೆಗೆ ತಾನೇ ರಾಜನಾಗುವವನು ಎಂಬ ದುರ್ಯೋಧನನ ವಿಶ್ವಾಸ ಕುಸಿಯಿತು. ತನ್ನ ಅಧಿಕಾರಕ್ಕೆ ಈ ಪಾಂಡವರು ಅಡ್ಡಿ ಎಂದು ಅವನು ಭಾವಿಸಿದ. ಅವರ ನಾಶದ ಪ್ರಯತ್ನಕ್ಕೂ ತೊಡಗಿದ. ಪಾಂಡವರಲ್ಲಿ ಎರಡನೆಯವ ಭೀಮ. ಅವನು ಬಲಾಢ್ಯನಾಗಿದ್ದ. ಅವನ ಕುರಿತು ದುರ್ಯೋಧನನಿಗೆ ವಿಪರೀತ ಅಸಹನೆ, ದ್ವೇಷ. ಅವನನ್ನು ಕೊಲ್ಲುವ ಪ್ತಯತ್ನವನ್ನೂ ಮಾಡಿದ್ದ. ಏನೋ ಅದೃಷ್ಟದಿಂದ ಭೀಮ ಅದರಿಂದ ಪಾರಾದ.
ಪಾಂಡವರು ಮಾತ್ರ ಕೌರವರ ಹಾಗಾಗಲಿಲ್ಲ. ಅವರಲ್ಲಿ ಹಿರಿಯವನಾದ ಯುಧಿಷ್ಠಿರ ಧರ್ಮಾತ್ಮನಾಗಿದ್ದ. ಅವನ ಮಾತನ್ನು ತಮ್ಮಂದಿರು ಮೀರುತ್ತಿರಲಿಲ್ಲ. ಐದು ಮಂದಿಯೂ ತಾಯಿ ಕುಂತೀದೇವಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು. ಭೀಷ್ಮರಂತಹವರೇ ಧರ್ಮದ ವಿಚಾರದಲ್ಲಿ ಸಂದಿಗ್ಧ ಉಂಟಾದಾಗ ಯುಧಿಷ್ಠಿರನ ಮುಖ ನೋಡುವುದಿತ್ತು. ಎಲ್ಲಿಂದ ಕಲಿತನೋ ಇದನ್ನೆಲ್ಲ. ಕೆಲವು ಸಲ ನನಗೆ ಅವನನ್ನು ನೋಡಿದಾಗ ವಿದುರನನ್ನೇ ನೋಡಿದ ಹಾಗಾಗುತ್ತಿತ್ತು. ಅವನ ತಾಯಿ ಕುಂತಿ ಮಕ್ಕಳನ್ನು ಬೆಳೆಸಿದ ರೀತಿಯೇ ಹಾಗಿತ್ತು ಅನಿಸುತ್ತದೆ. ಮಹಾತಾಯಿ ಅವಳು. ಮಾದ್ರಿ ಸಹಗಮನ ಮಾಡುವಾಗ, ತನ್ನಿಬ್ಬರು ಮಕ್ಕಳನ್ನು ಕುಂತಿಯ ಮಡಿಲಿಗೆ ಹಾಕಿದ್ದಳಂತೆ. ಮಾದ್ರಿಯ ವಿಶ್ವಾಸಕ್ಕೆ ಒಂದಿಷ್ಟೂ ಕುಂದುಬಾರದಂತೆ ನಕುಲ ಸಹದೇವರನ್ನು ಬೆಳೆಸಿದವಳು ಕುಂತಿ. ಅವರಿಬ್ಬರಿಗೆ ತಮ್ಮ ತಾಯಿ ಮಾದ್ರಿ ಎಂಬುದೇ ಮರೆತುಹೋಗಿರಬೇಕು. ಅಷ್ಟು ವಾತ್ಯಲ್ಯ ಕುಂತಿಗೆ ಅವರ ಕುರಿತು.
ಮಕ್ಕಳಲ್ಲಿ ಇಂತಹ ಬುದ್ಧಿ ಕಾಣಿಸುವಾಗ ಯಾಕೆ ಅರಮನೆಯಲ್ಲಿ ಯಾರೂ ತಿದ್ದುವುದಕ್ಕೆ ಮುಂದಾಗಲಿಲ್ಲವೋ ನನಗೆ ಅರ್ಥವಾಗಲಿಲ್ಲ. ತುಂಟತನವೇ ಆದರೂ ಬಲಿತ ಮೇಲೆ ಅದನ್ನು ತಿದ್ದಲಾದೀತೇ? ನಮ್ಮಂತಹವರ ಮಕ್ಕಳಾದರೆ ದುರ್ಬುದ್ಧಿ ಮಾಡಿದಾಗಲೇ ಎರಡು ಏಟು ಬಾರಿಸಿ, ಹೀಗೆ ಮಾಡಬಾರದು ಅನ್ನುವ ಪಾಠ ಕಲಿಸುತ್ತಿದ್ದೆವು. ಆದರೆ ಅರಮನೆಯ ರಾಜಕುಮಾರರಿಗೆ ಹೀಗೆ ಮಾಡುವುದಿರಲಿ, ಹೇಳುವುದೂ ಅಪಾಯವೇ. ಆದರೆ ನನ್ನ ಮಗ ವಿದುರ ಮಾತ್ರ ಕಾಲಕಾಲಕ್ಕೆ ಕೌರವರ ತಪ್ಪುಗಳನ್ನು ಎತ್ತಿ ಆಡುತ್ತಿದ್ದ. ಅದರಿಂದ ಕೌರವರಿಗೆ ಅವನನ್ನು ಕಂಡರಾಗದು ಎನ್ನುವಂತಾಯಿತು. ಆಚಾರ್ಯ ಭೀಷ್ಮರು ಇದನ್ನೆಲ್ಲ ಹುಡುಗಾಟ ಎಂದು ಭಾವಿದರೋ, ಅಥವಾ ತಂದೆಗೇ ಇಲ್ಲದ ಚಿಂತೆ ತನಗೆ ಯಾಕೆ ಎಂದುಕೊAಡರೋ ಅವರೂ ಮೌನವನ್ನೇ ವಹಿಸಿದರು. ಇದರಿಂದಾಗಿ ಕೌರವರು ಮಾಡಿದ್ದನ್ನು ಕೇಳುವವರಿಲ್ಲ ಎನ್ನುವ ಹಾಗಾಯಿತು. ಹಿರಿಯರಾದವರು ಮಕ್ಕಳಲ್ಲಿ ಅಕಾರಣ ದ್ವೇಷ, ಮತ್ಸರಗಳು ಕಾಣಿಸಿದಾಗ ಮುಂದೆ ಅಪಾಯವುಂಟು ಎಂದು ತಿಳಿಯದಿದ್ದರೆ ಅವರ ಹಿರಿತನಕ್ಕೆ ಏನು ಬೆಲೆ?
ಪಾಂಡುಪುತ್ರರಿಗೆ ಶತಶೃಂಗದಲ್ಲಿದ್ದಾಗಲೇ ಪ್ರಾರಂಭಿಕ ಹಂತದ ವಿದ್ಯಾಭ್ಯಾಸ ಆಗಿತ್ತಂತೆ. ರಾಜಪುರೋಹಿತರಾದ ಕೃಪಾಚಾರ್ಯರು ಶಾಸ್ತ್ರ ಇತ್ಯಾದಿಗಳನ್ನು ರಾಜಕುಮಾರರಿಗೆ ಕಲಿಸುತ್ತಿದ್ದರು. ಈ ಪುಂಡರನ್ನು ನಿಯಂತ್ರಿಸುವುದು ಅವರಿಂದಾಗುತ್ತಿರಲಿಲ್ಲ. ಅದೇ ವೇಳೆಗೆ ಅವರ ತಂಗಿ ಕೃಪಿಯ ಗಂಡ ದ್ರೋಣಾಚಾರ್ಯರು ಅರಮನೆಗೆ ಬಂದರು. ಪರಶುರಾಮರಿಂದ ಮಂತ್ರಾಸ್ತ್ರಗಳನ್ನು ಕಲಿತವರಂತೆ. ಅವರಿಗೆ ತೀರದ ಬಡತನ. ವಿದ್ಯೆಯಲ್ಲಿ ಮಾತ್ರ ಶ್ರೀಮಂತರು. ಅವರನ್ನು ನೋಡಿ ಭೀಷ್ಮರಿಗೆ ಬಹಳ ಸಂತೋಷವಾಯಿತು. ರಾಜಕುಮಾರರಿಗೆ ಗುರುಗಳಾಗುವಂತೆ ಅವರನ್ನು ಕೇಳಿಕೊಂಡರು. ಅವರಿಗೂ ಅದೇ ಬೇಕಾಗಿತ್ತೆಂದು ತೋರುತ್ತದೆ, ಒಪ್ಪಿಕೊಂಡರು. ಅರಮನೆಯೇ ಗುರುಕುಲವಾಯಿತು. ಪಾಠ ಪ್ರಾರಂಭವಾಯಿತು. ಅಲ್ಲಿಯೂ ಸ್ಪರ್ಧೆ, ಜಗಳ ಇತ್ತು.
ಇದೇ ಸಮಯಕ್ಕೆ ವೇದವ್ಯಾಸರು ಮತ್ತೊಮ್ಮೆ ಅರಮನೆಗೆ ಬಂದರು. ಅವರು ಬಂದದ್ದು ರಾಜಮಾತೆ ಸತ್ಯವತಿಯನ್ನು ನೋಡುವುದಕ್ಕೆ. ಆಗ ನಾನೂ ಅಂತಃಪುರದಲ್ಲಿಯೇ ಇದ್ದೆ. ಕೆಲಸ ಮಾಡಲೆಂದು ಅಲ್ಲ. ಈಗೀಗ ಮುದುಕಿಯಾದ ಮೇಲೆ ಏನು ಕೆಲಸ ಮಾಡಲಾದೀತು? ಅದರ ಅಗತ್ಯವೂ ಇರಲಿಲ್ಲ. ಮಗ ವಿದುರ ಮಂತ್ರಿಯಾಗಿದ್ದ. ನನಗೆ ಆ ನೆಲೆಯಲ್ಲೂ ಗೌರವ ಸಲ್ಲುತ್ತಿತ್ತು. ಅಂಬಿಕೆಗಾಗಿ, ಅವಳ ಜತೆಗಿರುವುದಕ್ಕಾಗಿ ನಾನು ಅಲ್ಲಿಗೆ ಹೋಗುತ್ತಿದ್ದೆನಷ್ಟೆ. ವ್ಯಾಸರು ಬಂದು ಸತ್ಯವತಿ ದೇವಿಯವರಲ್ಲಿ, “ತಾಯಿ, ನೀನು ಇನ್ನು ಹಸ್ತಿನಾವತಿಯ ಅರಮನೆಯಲ್ಲಿ ಇರುವುದು ಬೇಡ. ವಾನಪ್ರಸ್ಥಕ್ಕೆ ಹೊರಡುವ ಕಾಲ ಬಂತು” ಎಂದರು. ಕಾಲಜ್ಞರು ಅವರು. ಅವರು ಹೇಳಿದ ಮಾತು ಕೇಳಿ ರಾಜಮಾತೆಗೆ ಕುತೂಹಲವಾಯಿತು. “ಯಾಕೆ ಮಗೂ ಹಾಗೆನ್ನುತ್ತೀ?’’ ಎಂದು ಕೇಳಿದರು.
“ಅಮ್ಮಾ, ಎಲ್ಲವನ್ನೂ ನಾನು ಬಿಡಿಸಿ ಹೇಳಬಾರದು. ನೀನೇ ಕಾಣುತ್ತಿರುವೆಯಲ್ಲ, ಈ ಎಳೆಯ ತಲೆಮಾರು ಬೆಳೆಯುತ್ತಿರುವ ಬಗೆಯನ್ನು. ಅವರ ಬುದ್ಧಿಯನ್ನು ತಿದ್ದುವವರಿಲ್ಲ, ತಿದ್ದಿದರೂ ಸರಿಯಾದೀತು ಎನ್ನಲಾರೆ. ಇವರು ಬೆಳೆದಂತೆ ದ್ವೇಷವೂ ಬೆಳೆಯುತ್ತದೆ. ಕ್ಷತ್ರಿಯರ ದ್ವೇಷಕ್ಕೆ ಮುಕ್ತಾಯವೆಲ್ಲಿ ಎಂದು ಗೊತ್ತಿದೆಯಷ್ಟೆ? ನೀನು ಇಲ್ಲಿದ್ದು ಇದಕ್ಕೆ ಸಾಕ್ಷಿಯಾಗುವುದು ಸರಿಯಲ್ಲ. ನಿನಗೂ ಅರಮನೆಯ ಮೋಹ ಇನ್ನೂ ಉಳಿದಿರಲಾರದು. ಈ ವಯಸ್ಸಿಗೆ ಇರಬೇಕಾದ್ದು ರಾಗವಲ್ಲ, ವೈರಾಗ್ಯ. ಆದಷ್ಟು ಬೇಗ ಪ್ರೇಮಪಾಶವನ್ನು ಕಳೆದುಕೊಂಡು ಹೊರಡಲು ಸಿದ್ಧಳಾಗು” ಎಂದರು.
ಅವರ ಮಾತು ಕೇಳಿ ಸತ್ಯವತಿಗೂ ಅದೇ ಸರಿ ಎನಿಸಿತು. ಅವರ ಜೊತೆ ಸೊಸೆಯಂದಿರಿಬ್ಬರೂ ಹೊರಟು ನಿಂತರು. ಅವರ ಬದುಕನ್ನು ಕಂಡವರಿಗೆ ಇದು ಸಾಕು ಎಂದು ಅನಿಸುವಾಗ, ಅವರಿಗೆ ವೈರಾಗ್ಯ ಬಾರದಿದ್ದೀತೆ? ಅರಮನೆಯಲ್ಲಿ ನಡೆಯುತ್ತಿರುವುದನ್ನು ಅಸಹಾಯಕರಾಗಿ ನೋಡುತ್ತಾ ಇರುವುದಕ್ಕಿಂತ ಕಾಡಿಗೆ ಹೋಗುವುದೇ ಒಳ್ಳೆಯದು ಎಂದು ಅವರು ನಿರ್ಣಯಿಸಿದರು. ಹೀಗೆ ಮೂವರು ಹಳೇ ರಾಣಿಯರು ಕಾಡಿಗೆ ಹೊರಟು ನಿಂತರು. ಅದನ್ನು ಬೇಡ ಅಂತ ತಡೆದವರು ಯಾರೂ ಇಲ್ಲ. ಅಂದರೆ ವ್ಯಾಸರು ಹೇಳಿದ ಮಾತು ಎಷ್ಟು ಸತ್ಯ ಅನ್ನುವುದು ಅವರ ಅನುಭವಕ್ಕೇ ಬಂತು.
ಈ ಹೊತ್ತಿಗೆ ನನಗೂ ಒಂದು ಸಂದಿಗ್ಧ. ಅಂಬಿಕೆಯ ಜೊತೆಗೆ ಇಷ್ಟು ಕಾಲ ಬಾಳಿದವಳು. ನನ್ನನ್ನು ದಾಸಿ ಅನ್ನುವುದಕ್ಕಿಂತ ಹೆಚ್ಚು ಗೆಳತಿಯಾಗಿ ಕಂಡ ಅಂಬಿಕೆಯನ್ನು ಬಿಟ್ಟಿರುವುದು ಹೇಗೆ? ಅವಳಿಗಿಂತಲೂ ಮುದುಕಿ ನಾನು. ಅವಳನ್ನು ಕಾಡಿಗೆ ಕಳುಹಿಸಿ ನಾನು ಊರಿನಲ್ಲಿ ಸುಖವಾಗಿರಬಲ್ಲೆನೆ? ಅವಳಿಗಿಂತ ಮೊದಲು ನನಗೆ ವೈರಾಗ್ಯ ಬರಬೇಕಿತ್ತು. ಆದರೆ ಮಗ ವಿದುರ, ಸೊಸೆ, ಮೊಮ್ಮಕ್ಕಳ ಪ್ರೀತಿಯ ಹೊಳೆಯಲ್ಲಿ ವೈರಾಗ್ಯ ಬರುವುದೆಂತು? ನಾನು ಕಾಡಿಗೆ ಹೋಗುವೆನೆಂದರೆ ನನ್ನ ಮೊಮ್ಮಕ್ಕಳು ಬಿಟ್ಟಾರೆ? ಆದರೂ ನಾನು ಅಂಬಿಕೆಯ ಜೊತೆಗೆ ಹೊರಟೇಬಿಟ್ಟೆ.
ನನ್ನ ಊರು, ನನ್ನ ಮನೆ ಎಂಬುದಿಲ್ಲದೆ ಹೋದಲ್ಲಿ ಬೇರು ಬಿಟ್ಟ ಮರದಂತೆ ನನ್ನ ಬಾಳು. ನನಗೆ ನಾಡೇನು, ಕಾಡೇನು? ಎಲ್ಲವೂ ಒಂದೇ. ರಾಣಿಯರು ಹೊರಟಾಗ ಅರಮನೆಯಲ್ಲಿ ಯಾರಿಗೂ ಏನೂ ಅನಿಸಲಿಲ್ಲ. ಆದರೆ ನಾನು ಮನೆಯಿಂದ ಹೊರಡುವಾಗ ಮಗ, ಸೊಸೆ ಮೊಮ್ಮಕ್ಕಳು ಕಣ್ಣೀರು ಸುರಿಸಿದರು. ಕೈಹಿಡಿದು ತಡೆದರು. ನಮ್ಮನ್ನು ಬಿಟ್ಟು ಹೋಗಬೇಡ ಎಂದು ಬೇಡಿದರು. ಯಾವ ಸಂಪತ್ತೂ ಇಲ್ಲದ, ಹೆಸರೂ ಇಲ್ಲದ ದಾಸಿ ನಾನು. ಈ ವಿಚಾರದಲ್ಲಿ ಮಾತ್ರ ಮಹಾರಾಣಿಯರಿಗಿಲ್ಲ ಭಾಗ್ಯ ನನ್ನದು.
ಇದನ್ನೆಲ್ಲ ಆಲೋಚಿಸುತ್ತ, ಮಂಜಾದ ಕಣ್ಣುಗಳಿಂದ ನನ್ನ ಮೊಮ್ಮಕ್ಕಳನ್ನು ತಿರುತಿರುಗಿ ನೋಡುತ್ತ, ರಾಣಿಯರ ಬೆನ್ನು ಹಿಡಿದು ಕಾಡಿನತ್ತ ನಡೆಯತೊಡಗಿದೆ.