ಒಂದು ಅರಮನೆಯನ್ನು ಕಟ್ಟುವಾಗ ಹೀಗೆ ಕಟ್ಟುವ ಕ್ರಮವುಂಟೆ? ಗೋಡೆಯ ಒಳಗೆ ಇರಬೇಕಾದ ಮಣ್ಣು, ಕಲ್ಲು, ಗಾರೆ ಇತ್ಯಾದಿಗಳ ಬದಲು, ಹತ್ತಿ, ನಾರು, ತುಪ್ಪ, ಎಣ್ಣೆ, ಅರಗು? ಇದೇನು ಚೋದ್ಯ? ಎಲ್ಲಿಯೋ ಒಂದು ಕಡೆ ಆಗಿದ್ದರೆ, ಹೇಗೋ ಸೇರಿಕೊಂಡಿದೆ ಎಂದು ಭಾವಿಸಬಹುದಿತ್ತು. ಆದರೆ ಇಡೀ ಅರಮನೆಯ ಕಟ್ಟೋಣವೇ ಹೀಗಿದ್ದಂತೆ ಚಿತ್ರಕನಿಗೆ ಭಾಸವಾಯಿತು. ಯಾರೂ ಇಲ್ಲದಿದ್ದ ಹೊತ್ತು ಸಾಧಿಸಿ, ನೆಲವನ್ನೂ ಕೆರೆದು ನೋಡಿದ್ದ. ಅಲ್ಲಿಯೂ ಇದೇ ರೀತಿ ಇತ್ತು. ಅಂದರೆ ಇದು ಉದ್ದೇಶಪೂರ್ವಕವಾಗಿ ಯಾರೋ ಮಾಡಿದ್ದು ಎನ್ನುವುದು ಖಚಿತ. ಆದರೆ ಯಾಕೆ? ಕೇಳುವುದಾದರೂ ಯಾರಲ್ಲಿ? ಹೆಚ್ಚಿನವರೆಲ್ಲ ಕಟ್ಟೋಣದ ಕೆಲಸಕ್ಕೆ ನಿಯುಕ್ತರಾದ ಚಾರಕ ವರ್ಗದವರು. ಅವರನ್ನು ಬಿಟ್ಟರೆ ಅವರನ್ನೆಲ್ಲ ನೋಡಿಕೊಳ್ಳುವುದಕ್ಕೆ, ರಕ್ಷಣೆಗೆ ಬಂದಿದ್ದ ರಾಜಭಟರು. ಅವರಿಗೆ ಹೆಚ್ಚೇನು ತಿಳಿದಿದ್ದೀತು?
ಚಿತ್ರಕ ಹೊಸ ಅರಮನೆಯ ವೈಭವಕ್ಕೆ ದಂಗಾಗಿದ್ದ. ಏನು ಅಲಂಕಾರ, ಏನು ಅಚ್ಚುಕಟ್ಟು! ಹುಲ್ಲು ಹೊದೆಸಿದ ಗುಡಿಸಲಿನಲ್ಲಿ ಬಾಳುತ್ತಿದ್ದ ಅವನಿಗೆ ಇದೊಂದು ಸೌಧ ಮನುಷ್ಯರು ವಾಸ ಮಾಡುವುದಕ್ಕಾಗಿ ಎಂದು ನಂಬುವುದು ಕಷ್ಟವಾಗುವಂತಿತ್ತು. ಅವನು ಇಲ್ಲಿಯವರೆಗೆ ಯಾವ ಅರಮನೆಯ ಒಳಗೂ ಹೋದವನಲ್ಲ. ಹಸ್ತಿನಾವತಿಯ ಅರಮನೆ ಬಹು ಭವ್ಯವಾಗಿದೆ ಎಂದು ಅಲ್ಲಿನ ಪರಿಚಾರಕರು ಹೇಳುವುದನ್ನು ಕೇಳಿದ್ದ. ಅವರು ಮಾಡುವ ವರ್ಣನೆಯಿಂದ ಅದರ ಭವ್ಯತೆಯನ್ನು ಕಲ್ಪಿಸಿಕೊಂಡಿದ್ದ. ಅವನ ಕಲ್ಪನೆಯಾದರೂ ಎಷ್ಟು? ತಾನು ಚಿತ್ರ ಬರೆಯುವುದಕ್ಕೆ ಹೋದ ಶ್ರೀಮಂತರ ಭವನಗಳನ್ನು ಮೀರುವುದಕ್ಕೆ ಕಲ್ಪನೆಗೂ ಶಕ್ಯವಿರಲಿಲ್ಲ. ಹಾಗಿರಬಹುದು, ಹೀಗಿರಬಹುದು ಎಂದು ಊಹಿಸಿಕೊಂಡಿದ್ದನಷ್ಟೆ. ಆದರೆ ವಾರಣಾವತದ ಈ ಅರಮನೆಯ ಭವ್ಯತೆಯನ್ನು ಕಂಡ ಮೇಲೆ ಹೀಗೂ ಇದ್ದೀತು ಎಂದು ತಿಳಿಯುವುದಕ್ಕೆ ಸಾಧ್ಯವಾಯಿತು. ಪುರಾಣಿಕರು ವಿವರಿಸುತ್ತಿದ್ದ ಸ್ವರ್ಗದ ದೇವೇಂದ್ರನ ಅಮರಾವತಿಯ ಕಲ್ಪನೆ ಇಲ್ಲಿ ಸಾಕಾರವಾದಂತೆ ಅವನಿಗೆ ಕಂಡಿತು.

ಈ ಅರಮನೆಯ ಸೌಧದ ಗೋಡೆಗಳಿಗೆ ಚಿತ್ರ ಬರೆಯುವ ಕೆಲಸ ಒಂದು ಸಂತೋಷವನ್ನೂ ಕೊಟ್ಟಿತು. ಅದು ಪಾಂಡವರ ವಾಸಕ್ಕಾಗಿ ಕಟ್ಟಿದ್ದು ಎಂದು ಹೇಳುವುದನ್ನು ಚಿತ್ರಕ ಕೇಳಿದ್ದ. ಅವನಿಗೆ ಈ ಚಿತ್ರ ಬರೆಯುವ ಕೆಲಸ ವಹಿಸುವ ಎಷ್ಟೋ ಮೊದಲೇ ಅರಮನೆಯ ನಿರ್ಮಾಣಕಾರ್ಯ ಪ್ರಾರಂಭವಾಗಿತ್ತಂತೆ. ತಿಂಗಳುಗಟ್ಟಲೆ ನಡೆದ ದೊಡ್ಡ ಕೆಲಸವಂತೆ ಅದು. ನೂರಾರು ಕೆಲಸಗಾರರು ಹಸ್ತಿನಾವತಿಯಿಂದಲೇ ಬಂದು ಇಲ್ಲಿ ದುಡಿಯುತ್ತಿದ್ದರಂತೆ. ಈಗಲೂ ಪೂರ್ಣವಾಗಿರಲಿಲ್ಲ. ಸಣ್ಣಪುಟ್ಟ ಕೆಲಸಗಳು ನಡೆಯುತ್ತಲೇ ಇದ್ದವು. ಇದೆಲ್ಲ ಇಲ್ಲಿಗೆ ಬಂದ ಮೇಲೆ ಅವರಿವರು ಮಾತನಾಡುವುದನ್ನು ಕೇಳಿ ಅವನಿಗೆ ತಿಳಿಯಿತಷ್ಟೆ.
ಪಾಂಡವರು ಎಂದರೆ ಬಹಳ ಧಾರ್ಮಿಕರು ಅನ್ನುವುದು ಚಿತ್ರಕನಿಗೆ ತಿಳಿದಿತ್ತು. ಅದರಲ್ಲೂ ಹಿರಿಯವನಾದ ಯುಧಿಷ್ಠಿರ ಪ್ರಜಾಪ್ರೇಮಿಯಾಗಿದ್ದ. ಅವನನ್ನೂ, ಅವನ ತಮ್ಮಂದಿರನ್ನೂ ಚಿತ್ರಕ ದೂರದಿಂದ ನೋಡಿದ್ದೂ ಇತ್ತು. ಪಾಂಡವರ ಬಗೆಗೆ ಅಭಿಮಾನವಿಟ್ಟುಕೊಂಡ ಅನೇಕ ಪೌರರಂತೆ ಚಿತ್ರಕನೂ ಅವರ ಕುರಿತು ಗೌರವ, ಆದರಗಳನ್ನು ಹೊಂದಿದ್ದ. ಅವರ ಅರಮನೆಯ ಗೋಡೆಗಳಲ್ಲಿ ತಾನು ಬರೆಯುವ ಚಿತ್ರಗಳು ಸೊಗಸಾಗಿರಬೇಕು ಎಂದು ಅವನಿಗೂ ಅಪೇಕ್ಷೆ ಹುಟ್ಟಿತ್ತು. ಇಲ್ಲವಾದರೆ ಎಂದಿನಂತೆ ಒಂದು ಕೆಲಸ ಎಂಬಂತೆ ಮಾಡುತ್ತಿದ್ದ. ಅದನ್ನು ಪ್ರಾಮಾಣಿಕವಾಗಿಯೇ ಮಾಡುತ್ತಿದ್ದ ಎನ್ನೋಣ. ಅಂತೂ ಚಿತ್ರಕ ತನ್ನ ಕೆಲಸಕ್ಕೆ ಉತ್ಸಾಹದಿಂದಲೆ ಉಜ್ಜುಗಿಸಿದ.
ಅರಮನೆಯ ಗೋಡೆಗಳ ಮೇಲೆ ಬೇಗಬೇಗನೆ ಚಿತ್ರ ಬರೆಯುವುದಕ್ಕೆ ಪ್ರಾರಂಭಿಸಿದ. ಸಾಮಾನ್ಯವಾಗಿ ಗೋಡೆಯನ್ನು ಸ್ವಚ್ಛಮಾಡಿ, ಒಂದು ಪದರ ತಿಳಿ ಅಥವಾ ಗಾಢವಾದ ಒಂದೇ ಬಣ್ಣವನ್ನು ಲೇಪಿಸಿ, ಅದು ಒಣಗಿದ ಬಳಿಕ ಚಿತ್ರದ ಆವರಣವನ್ನು, ಒಳಗಿನ ವಿವರಗಳನ್ನು ರೇಖೆಗಳಲ್ಲಿ ಮೂಡಿಸುವುದು. ಮಣ್ಣಿನ ಗೋಡೆಯಾದರೆ ನೀರಿನಲ್ಲೂ, ಕಲ್ಲಿನ ಗೋಡೆಯಾದರೆ ಎಣ್ಣೆಯಲ್ಲೂ ಬಣ್ಣಗಳನ್ನು ಕಲಸಿ, ರೇಖೆಯಲ್ಲಿ ರೂಪಗೊಳಿಸಿದ ಚಿತ್ರಗಳಿಗೆ ತುಂಬುವುದು.
ಆಮೇಲೆ ಅದಕ್ಕೆ ತಕ್ಕಂತೆ ಅಲಂಕರಣ ಪ್ರಕ್ರಿಯೆ. ಯಾವತ್ತೂ ಇದೆಲ್ಲ ಕಷ್ಟವೇ ಅಲ್ಲ ಅವನಿಗೆ. ಆದರೆ ಇಂದೇಕೋ ಯಾವತ್ತಿನಂತೆ ಸುಲಲಿತವಾಗಿ ಅವನ ಕೈಗಳು ಚಲಿಸುತ್ತಿರಲಿಲ್ಲ. ಒಂದೊಂದು ಗೆರೆಯೂ ಸ್ಫುಟವಾಗಿ ಮೂಡುವುದಕ್ಕೆ ಅಗತ್ಯಕ್ಕಿಂತ ಹೆಚ್ಚು ಸಮಯ ಬೇಕಾಗುತ್ತಿತ್ತು.
ಇದೇಕೆ ಎಂದು ಅರ್ಥವಾಗಲಿಲ್ಲ. ನೀರಿನಲ್ಲಿ ಕಲಸಿದರೂ, ಎಣ್ಣೆಯಲ್ಲಿ ಕಲಸಿದರೂ ಬಣ್ಣ ಮಾತ್ರ ಹರಡಿಕೊಂಡು ಚಿತ್ರ ಸ್ಫುಟವಾಗುತ್ತಿರಲಿಲ್ಲ ಅಥವಾ ಪೂರ್ತಿ ಕೆಡುತ್ತಿತ್ತು. ಒಂದು ಚಿತ್ರವನ್ನು ಪೂರ್ಣಗೊಳಿಸುವುದಕ್ಕೆ ಸಾಮಾನ್ಯಕ್ಕಿಂತ ಮೂರುಪಟ್ಟು ಹೊತ್ತು ಬೇಕಾಗುತ್ತಿತ್ತು. ಇಲ್ಲಿಯವರೆಗೆ ಚಿತ್ರಕ ಗಳಿಸಿದ ಅನುಭವ ವ್ಯರ್ಥವಾಗಿ ಕಂಡಿತು. ಇದೇಕೆ ಹೀಗೆ? ಚಿತ್ರಕ ಚಿಂತಿತನಾದ. ಗೋಡೆಯನ್ನು ಕೆರೆದು ನೋಡಿದರೆ ಏನಾದರೂ ಗೊತ್ತಾದೀತು ಎಂದು ಸಣ್ಣ ಚೂರಿಯೊಂದರಿಂದ ಗೀರಿ ನೋಡಿದ.
ಏನಾಶ್ಚರ್ಯ! ಹೊರಗಿನ ಗಾರೆ ಸಾಮಾನ್ಯಕ್ಕಿಂತ ದಪ್ಪವಾಗಿತ್ತು. ಆದರೆ ಅದಕ್ಕೂ ಚಿತ್ರ ಸರಿಯಾಗಿ ಮೂಡದಿರುವುದಕ್ಕೂ ಏನೂ ಸಂಬಂಧವಿರಲಿಲ್ಲ. ಆದರೂ ಕುತೂಹಲ ಹೆಚ್ಚಿ ಮತ್ತಷ್ಟು ಕೆರೆದ. ಆಗ ಮಣ್ಣು ಸುಣ್ಣಗಳ ಪದರ ಕಳಚಿತು. ಏನೋ ಪರಿಮಳ ಬಂತು. ತುಪ್ಪವೊ, ಎಣ್ಣೆಯೊ ಅಥವಾ ಇನ್ನೇನೋ ಪರಿಮಳ. ಅದೇನು ಎಂದು ಹೇಳುವುದು ಕಷ್ಟ. ಗಾರೆಯ ವಾಸನೆಯಂತೂ ಆಗಿರಲಿಲ್ಲ. ಚೂರಿಯ ಮೊನೆಗೆ ಅಂಟಿಕೊಂಡು ಏನೋ ನಾರಿನಂತಹ ವಸ್ತುವಿನ ತುಣುಕೊಂದು ಹೊರಬಂತು. ಗೋಡೆಯೊಳಗೆ ಇದೇನು ಹುದುಗಿದೆ? ಇನ್ನೊಂದೆಡೆಯಲ್ಲಿಯೂ ಹೀಗೇ ಇತ್ತು. ಒಳಗೆ ನಾರು, ಹತ್ತಿ ಇತ್ಯಾದಿ. ಅದನ್ನು ಚೂರಿಯಿಂದ ಬಿಡಿಸಿ ನೋಡುವಷ್ಟರಲ್ಲಿ ಅಲ್ಲಿನ ಕಾವಲ ಭಟನೊಬ್ಬ ಗದರಿದ,
“ಏಯ್, ಏನೋ ಅದು? ಏನು ನೋಡುತ್ತಿದ್ದೀಯೆ? ನಿನ್ನನ್ನು ಪರಿಶೀಲನೆಗೆ ನೇಮಿಸಿದ್ದೋ ಅಲ್ಲ, ಚಿತ್ರ ಬರೆಯುವುದಕ್ಕೆಂದೋ? ನಿನ್ನ ಕೆಲಸವೇನೋ ಅಷ್ಟು ಮಾಡು. ಇಲ್ಲದಿದ್ದರೆ ನಾನು ಭಟನಾಯಕನಿಗೆ ಹೇಳಬೇಕಾಗುತ್ತದೆ. ತಲೆ ಹೋದೀತು ತಲೆ.’’ ಗಟ್ಟಿಯಾದ ಧ್ವನಿಯಲ್ಲಿ ಅವನ ಮಾತು ಕೇಳಿದ ಚಿತ್ರಕನಿಗೆ ಬೆವರು ಬಂತು.
“ಇಲ್ಲ ಇಲ್ಲ. ಅಂಥದ್ದೇನಿಲ್ಲ. ನಾನು ಹಚ್ಚಿದ ಬಣ್ಣವೆಲ್ಲ ಗೋಡೆಯಲ್ಲಿ ಹರಡಿಕೊಂಡು ಚಿತ್ರ ಮಾಡುವುದು ಕಷ್ಟವಾಗಿದೆ. ಎರಡುಪಟ್ಟು ಬಣ್ಣವನ್ನು ಗೋಡೆಯೇ ಹೀರಿಕೊಳ್ಳುತ್ತದೆ. ಇದೇಕೆ ಎಂದು ಗಮನಿಸಿದೆ ಅಷ್ಟೇ’’ ಎಂದು ಮೆಲುವಾಗಿ ಉತ್ತರಿಸಿದ.
“ಹಾ…ಹಾ.. ಅದನ್ನೆಲ್ಲ ನೀನು ಗಮನಿಸುವ ಅಗತ್ಯವಿಲ್ಲ. ಬಣ್ಣ ಬೇಕಾದರೆ ಎರಡಲ್ಲ, ಮೂರುಪಟ್ಟು ಹಚ್ಚು. ಗೋಡೆಯನ್ನು ಹಾಳು ಮಾಡಿದರೆ ಜೋಕೆ. ನಾನೇ ನಿನ್ನ ಬೆನ್ನುಮೂಳೆ ಮುರಿಯುತ್ತೇನೆ. ನಮಗೆ ಇಂಥದ್ದೆಲ್ಲ ಮಾಡದಂತೆ ನೋಡಿಕೊಳ್ಳಬೇಕು ಎಂದು ಕಟ್ಟಾಜ್ಞೆ ಇದೆ. ಅರ್ಥವಾಯಿತೇನು?’’ ಎಂದು ಭಟ ಮತ್ತೊಮ್ಮೆ ಅಬ್ಬರಿಸಿದ.
ಚಿತ್ರಕನ ನಾಲಗೆಯ ತೇವ ಆರಿಹೋಯಿತು.
“ಇಲ್ಲ ಇಲ್ಲ. ನಾನು ಹಾಗೇನೂ ನೋಡುವುದಿಲ್ಲ. ನನ್ನದು ತಪ್ಪಾಯಿತು, ಕ್ಷಮಿಸು’’ ಎಂದು ಬೇಡಿಕೊಂಡ.
ಭಟ ಬರಿದೆ ಹೂಂಕರಿಸಿದ ಮಾತ್ರ. ಆದರೆ ಆ ಬಳಿಕ ಚಿತ್ರಕನ ಕೆಲಸ ನಡೆಯುತ್ತಿರುವಾಗ ಯಾರಾದರೂ ಒಬ್ಬ ಕಾವಲುಗಾರ ಅಲ್ಲಿಯೇ ಇದ್ದು ಅವನನ್ನು ಗಮನಿಸುತ್ತಿದ್ದರು.
ಚಿತ್ರಕ ಮೊದಲೇ ಭೀರು. ಈಗಂತೂ ಕಾವಲ ಭಟರ ಕೈಯ ಖಡ್ಗವನ್ನು ನೋಡುತ್ತ ಚಿತ್ರ ಬರೆಯುವುದಿರಲಿ, ಸುಮ್ಮನಿರುವುದೂ ಅವನಿಗೆ ಕಷ್ಟವಾಗಿ ಕಂಡಿತು. ಹಾಗೆಂದು ಒಪ್ಪಿದ ಕೆಲಸವನ್ನು ಮಾಡದಿರುವುದು ಸಾಧ್ಯವೆ? ಅರಮನೆಯ ಕೋಪ ತನ್ನ ಮೇಲೆ ತಿರುಗಿದರೆ ಪ್ರಾಣ ಉಳಿಯುವುದು ಖಚಿತವಿಲ್ಲ. ತಾನು ಯಾಕಾದರೂ ಈ ಕೆಲಸಕ್ಕೆ ಒಪ್ಪಿಕೊಂಡೆನೋ ಎಂದು ತನ್ನನ್ನೇ ಶಪಿಸಿಕೊಂಡ. ಒಮ್ಮೆ ಇದನ್ನು ಮುಗಿಸಿದರೆ ಸಾಕಪ್ಪ ಎಂದು ಅಂಜಿಕೊಂಡೇ ತನ್ನ ಕೆಲಸ ಮುಂದುವರಿಸಿದ.
ಚಿತ್ರಗಳನ್ನೇನೋ ಕಷ್ಟಪಟ್ಟು ಬರೆದು ಮುಗಿಸಿದ. ಆದರೆ ಅವನ ಮನಸ್ಸಿನೊಳಗೆ ಹುಟ್ಟಿದ ಕುತೂಹಲ ಬೆಳೆಯುತ್ತಲೇ ಇತ್ತು.
ಒಂದು ಅರಮನೆಯನ್ನು ಕಟ್ಟುವಾಗ ಹೀಗೆ ಕಟ್ಟುವ ಕ್ರಮವುಂಟೆ? ಗೋಡೆಯ ಒಳಗೆ ಇರಬೇಕಾದ ಮಣ್ಣು, ಕಲ್ಲು, ಗಾರೆ ಇತ್ಯಾದಿಗಳ ಬದಲು, ಹತ್ತಿ, ನಾರು, ತುಪ್ಪ, ಎಣ್ಣೆ, ಅರಗು? ಇದೇನು ಚೋದ್ಯ? ಎಲ್ಲಿಯೋ ಒಂದು ಕಡೆ ಆಗಿದ್ದರೆ, ಹೇಗೋ ಸೇರಿಕೊಂಡಿದೆ ಎಂದು ಭಾವಿಸಬಹುದಿತ್ತು. ಆದರೆ ಇಡೀ ಅರಮನೆಯ ಕಟ್ಟೋಣವೇ ಹೀಗಿದ್ದಂತೆ ಚಿತ್ರಕನಿಗೆ ಭಾಸವಾಯಿತು. ಯಾರೂ ಇಲ್ಲದಿದ್ದ ಹೊತ್ತು ಸಾಧಿಸಿ, ನೆಲವನ್ನೂ ಕೆರೆದು ನೋಡಿದ್ದ. ಅಲ್ಲಿಯೂ ಇದೇ ರೀತಿ ಇತ್ತು. ಅಂದರೆ ಇದು ಉದ್ದೇಶಪೂರ್ವಕವಾಗಿ ಯಾರೋ ಮಾಡಿದ್ದು ಎನ್ನುವುದು ಖಚಿತ. ಆದರೆ ಯಾಕೆ? ಕೇಳುವುದಾದರೂ ಯಾರಲ್ಲಿ? ಹೆಚ್ಚಿನವರೆಲ್ಲ ಕಟ್ಟೋಣದ ಕೆಲಸಕ್ಕೆ ನಿಯುಕ್ತರಾದ ಚಾರಕ ವರ್ಗದವರು. ಅವರನ್ನು ಬಿಟ್ಟರೆ ಅವರನ್ನೆಲ್ಲ ನೋಡಿಕೊಳ್ಳುವುದಕ್ಕೆ, ರಕ್ಷಣೆಗೆ ಬಂದಿದ್ದ ರಾಜಭಟರು. ಅವರಿಗೆ ಹೆಚ್ಚೇನು ತಿಳಿದಿದ್ದೀತು?
ತನ್ನ ಗುಡಿಸಲಿನಲ್ಲಿ ಕುಳಿತು ಇದನ್ನೇ ಆಲೋಚಿಸುತ್ತಿದ್ದ ಚಿತ್ರಕನಿಗೆ ಇದ್ದಕ್ಕಿದ್ದ ಹಾಗೆ ಒಂದು ಸತ್ಯ ಗೋಚರಿಸಿತು. ಗೋಡೆಯೊಳಗೆ, ನೆಲದ ಕೆಳಗೆ ತುಂಬಿರುವ ವಸ್ತುಗಳಲ್ಲಿ ಒಂದು ಸಾಮಾನ್ಯ ಗುಣವಿತ್ತು. ಅವುಗಳೆಲ್ಲ ಬಹುಬೇಗನೆ ಉರಿಯತಕ್ಕವು. ಒಂದು, ಒಂದೇ ಒಂದು ಬೆಂಕಿಯ ಕಿಡಿ ಸೋಕಿದರೂ ಇಡೀ ಅರಮನೆಯೇ ಉರಿದು, ಭಸ್ಮವಾಗಿ ಹೋದೀತು. ಇದನ್ನು ಗ್ರಹಿಸಿದೊಡನೆ ಚಿತ್ರಕನ ಕಣ್ಣಿಗೆ ಅದಾವುದೋ ಒಂದು ಒಳಸಂಚು, ಒಂದು ಭಾರೀ ಹುನ್ನಾರದ ಬಲೆಯೊಂದು ಅಸ್ಪಷ್ಟವಾಗಿ ಗೋಚರಿಸತೊಡಗಿತು.
ವಾರಣಾವತದ ಈ ಅರಮನೆ ಪಾಂಡುಪುತ್ರರ ವಾಸಕ್ಕಾಗಿ ನಿರ್ಮಾಣವಾದದ್ದು. ಅದು ಅತ್ಯಂತ ಸುರಕ್ಷಿತವಾಗಿ ಇರಬೇಕಾಗಿತ್ತು. ಅವರಿಗೆ ಯಾವ ಆಪತ್ತೂ ಬಾರದಂತೆ, ಅವರು ನೆಮ್ಮದಿಯಾಗಿ ಇರುವಂತೆ ಆಗಬೇಕಾದ ನಿವಾಸವು ಹೀಗೆ ಆಪತ್ತನ್ನು ತರುವಂತಿದ್ದರೆ?
ಇದು ಪ್ರಮಾದ ಎನ್ನುವ ಹಾಗೂ ಇಲ್ಲ. ಇಡೀ ಅರಮನೆಯ ಕಟ್ಟೋಣವೇ ಬೆಂಕಿ ಹಾಕಿ ಉರಿಸುವುದಕ್ಕೆ ಸಜ್ಜುಗೊಳಿಸಿದ ಒಣ ಉರುವಲ ರಾಶಿಯಂತೆ ಇದೆ. ಅಂದರೆ ಬೆಂಕಿ ಹಚ್ಚುವ ಉದ್ದೇಶಕ್ಕಾಗಿ ಇದನ್ನು ಮಾಡಿದರೆ? ನಾಳೆ ಪಾಂಡವರು ಇಲ್ಲಿ ಬಂದು ವಾಸವಾದ ಮೇಲೆ ಎಲ್ಲಾದರೂ ಆಕಸ್ಮಿಕವಾಗಿ ಬೆಂಕಿ ಬಿದ್ದರೆ? ಅಥವಾ ಅವರನ್ನು ಸುಟ್ಟು ಹಾಕುವುದಕ್ಕೆಂದೇ ಇದನ್ನು ಕಟ್ಟಿದರೆ? ಚಿತ್ರಕ ಇಲ್ಲಿಗೆ ಬಂದಲ್ಲಿಂದಲೂ ಏನೋ ಗೋಪ್ಯತೆಯನ್ನು ಗಮನಿಸಿದ್ದ. ಯಾರಿಗೂ, ಯಾವ ವಿಚಾರವೂ ಪೂರ್ಣವಾಗಿ ಗೊತ್ತಿರಲಿಲ್ಲ. ಗೊತ್ತಿದ್ದವರೂ ಬಾಯಿ ಬಿಡುತ್ತಿರಲಿಲ್ಲ. ಮೊದಲು ಅಸ್ಪಷ್ಟವಾಗಿದ್ದ ಬಲೆ ಈಗೀಗ ಸ್ಪುಟವಾಗಿ ಕಾಣಿಸಲಾರಂಭಿಸಿತು.
ಪಾಂಡವರ ಕುರಿತು ಧಾರ್ತರಾಷ್ಟ್ರರಿಗೆ ಇರುವ ಹಗೆ ಪ್ರಸಿದ್ಧವೇ ಇತ್ತು. ಆ ಹಗೆತನಕ್ಕೆ ಒಂದು ಹಿನ್ನೆಲೆಯೂ ಇತ್ತು. ವಿಚಿತ್ರವೀರ್ಯನ ರಾಣಿಯರು ನಿಯೋಗದಿಂದ ಪಡೆದ ಮಕ್ಕಳಲ್ಲಿ ಹಿರಿಯ ಧೃತರಾಷ್ಟ್ರ ಕುರುಡ. ಹಾಗಾಗಿ ಅವನ ತಮ್ಮನಾದ ಪಾಂಡು ಸಿಂಹಾಸನ ಏರಿದ. ಅಣ್ಣತಮ್ಮಂದಿರಿಗೆ ವಿವಾಹವಾದರೂ ಸಂತಾನವಾಗಲಿಲ್ಲ. ಯಾವುದೋ ಋಷಿ ಮಹಾರಾಜನಾಗಿದ್ದ ಪಾಂಡುವಿಗೆ ಶಾಪಕೊಟ್ಟನಂತೆ. ಇದರಿಂದ ಪಾಂಡುವಿಗೆ ವೈರಾಗ್ಯ ಬಂದು ಅರಣ್ಯಕ್ಕೆ ಹೋದನಂತೆ.
ಅಲ್ಲಿ ದೇವತೆಗಳ ಅನುಗ್ರಹದಿಂದ ಅವನಿಗೆ ಮಕ್ಕಳಾದರಂತೆ. ಆಮೇಲೆ ಗಾಂಧಾರಿಗೂ ಮಕ್ಕಳಾದರಂತೆ. ಪಾಂಡು ತೀರಿಕೊಂಡ ಮೇಲೆ ಕುಂತೀ ದೇವಿ ಮಕ್ಕಳ ಸಮೇತ ಹಸ್ತಿನಾವತಿಗೆ ಬಂದಳಂತೆ. ಅವಳ ಹಿರಿಯ ಮಗನಾದ ಯುಧಿಷ್ಠಿರನೇ ಸಿಂಹಾಸನಕ್ಕೆ ಉತ್ತರಾಧಿಕಾರಿಯಂತೆ. ಇದರಿಂದ ಹತಾಶರಾದ ಕೌರವರು ಪಾಂಡವರ ವಿರುದ್ಧ ಸದಾ ಕತ್ತಿ ಮಸೆಯುತ್ತಲೇ ಇದ್ದಾರಂತೆ.
ಹೀಗೆಲ್ಲ ಜನರು ಮಾತನಾಡಿಕೊಳ್ಳುತ್ತಿದ್ದರು. ಜನರ ಮಾತುಗಳು ಚಿತ್ರಕನ ಕಿವಿಗಳಿಗೆ ಬೀಳದಿರುತ್ತವೆಯೆ?
ಹಸ್ತಿನಾವತಿಯ ಅರಮನೆಯಲ್ಲಿ ಉಭಯ ಪಕ್ಷಗಳ ರಾಜಕುಮಾರರ ಮಧ್ಯೆ ಆಗಾಗ ನಡೆಯುತ್ತಿದ್ದ ಸಂಘರ್ಷವೂ ಮನೆಮಾತಾಗಿತ್ತು. ಇದನ್ನೂ ಚಿತ್ರಕ ಕೇಳಿದವನಿದ್ದ. ಭೀಮನನ್ನು ಕೊಲ್ಲಿಸುವುದಕ್ಕೆ ದುರ್ಯೋಧನ ಕೆಲವು ಸಲ ಪ್ರಯತ್ನ ಮಾಡಿದ್ದ. ಮಹಾಮಂತ್ರಿಯಾಗಿದ್ದ ವಿದುರ, ಪಾಂಡವರ ಪರವಾಗಿದ್ದ ಎಂದು ಪ್ರತೀತಿ. ವಿದುರ, ಅಂಧರಾಜನಾಗಿದ್ದ ಧೃತರಾಷ್ಟ್ರನ ಕಣ್ಣುಗಳಂತೆ ಆಪ್ತನಾಗಿ ಇದ್ದವನು. ಹಾಗಾಗಿ ಇಂತಹ ಸಂಚುಗಳು ಅವನ ಗಮನಕ್ಕೆ ಬಂದುಬಿಡುತ್ತಿದ್ದವು. ಸುದೈವವಶಾತ್ ಅವನ ಎಚ್ಚರಿಕೆಯಿಂದಾಗಿ ಕೌರವರ ಪಥಕಗಳಾವುವೂ ಈಡೇರಲಿಲ್ಲ.
ಬಹುಶಃ ಪಾಂಡವರನ್ನು ಕೊಲ್ಲಿಸುವುದಕ್ಕೇ ಈ ಸಂಚು ಹೂಡಿರಬಹುದು ಎಂದು ಊಹಿಸುವಷ್ಟು ಬುದ್ಧಿಶಕ್ತಿ ಅವನಿಗಿತ್ತು. ಅವನು ಪಾಂಡವರನ್ನು ಹತ್ತಿರದಿಂದ ಕಂಡವನಲ್ಲ. ಆದರೆ ಅವರ ಕುರಿತು ಉಳಿದವರು ಹೇಳುವುದನ್ನು ಕೇಳಿದ್ದ. ಅವರ ಸಾತ್ತ್ವಿಕ ಗುಣ, ಧರ್ಮಪ್ರಜ್ಞೆ, ಸಚ್ಚಾರಿತ್ರ್ಯ ಇತ್ಯಾದಿಗಳ ಕುರಿತು ಮೆಚ್ಚುಗೆಯ ಮಾತುಗಳು ಅನೇಕರ ಬಾಯಿಯಲ್ಲಿ ಬರುತ್ತಿದ್ದವು. ಎಲ್ಲೋ ಒಂದೆರಡು ಸಲ ಉತ್ಸವಗಳ ಸಂದರ್ಭದಲ್ಲಿ ಅವರನ್ನು ದೂರದಿಂದ ನೋಡಿದ್ದ ಕೂಡ. ಪಾಂಡುಪುತ್ರರು ಪ್ರಜೆಗಳ ಕುರಿತು ವಾತ್ಸಲ್ಯ ಉಳ್ಳವರು ಎನ್ನುವುದಕ್ಕೆ ಸಾಕ್ಷಿಯಾಗಿ ಚಿತ್ರಕನಿಗೆ ಸಮೀಪವರ್ತಿಗಳು, ಪಾಂಡವರ ಒಡನಾಟವನ್ನು ಅನುಭವಿಸಿದವರು ಹೇಳಿದ ಮಾತುಗಳೇ ಆಧಾರ. ಹೀಗೆ ಅವರ ಕುರಿತು ಸದಭಿಪ್ರಾಯವನ್ನು ಹೊಂದಿದ್ದ ಚಿತ್ರಕನಿಗೆ ಆ ರಾಜಕುಮಾರರು ಇಂತಹ ಒಂದು ಸಂಚಿಗೆ ಬಲಿಯಾಗುತ್ತಾರೆ ಎಂಬುದನ್ನು ಊಹಿಸುವುದು ಕಷ್ಟವೆನಿಸುತ್ತಿತ್ತು.
ಆದರೆ ಅವನ ತರ್ಕ, ಊಹೆಗಳನ್ನು ಬೇರೆಯವರ ಜೊತೆ ಆಡುವುದಕ್ಕೆ ಅವನಿಗೆ ಧೈರ್ಯ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಇವೆಲ್ಲ ತನ್ನ ಸಾಮರ್ಥ್ಯಕ್ಕೆ ಮೀರಿದ ವಿಚಾರವಾಗಿ ಅವನಿಗೆ ಕಂಡಿತು. ತಾನೇನಾದರೂ ಈ ವಿಚಾರವನ್ನು ಇನ್ನೊಬ್ಬರಿಗೆ ತಿಳಿಸಿ, ಅವರು ರಾಜಭಟರಿಗೆ ಚಾಡಿ ಹೇಳಿದರೆ ತನ್ನ ತಲೆ ಹೋದೀತು ಎಂಬ ಭಯವೂ ಅವನಿಗಿತ್ತು. ಇಷ್ಟಾಗಿಯೂ ಇಂತಹ ಒಂದು ಗೋಪ್ಯ ಸಂಚು ಇರುವುದು ಖಚಿತವೆಂದು ಹೇಳುವಂತೆಯೂ ಇರಲಿಲ್ಲ. ಅದನ್ನು ಪರೀಕ್ಷಿಸುವ ಅವಕಾಶವೂ ಅವನಿಗಿರಲಿಲ್ಲ. ದೊಡ್ಡವರ ವ್ಯವಹಾರಗಳಿಗೆ ತನ್ನಂತಹ ಸಣ್ಣವರು ತಲೆ ಹಾಕದಿರುವುದು ಕ್ಷೇಮ ಎಂದು ಅವನಿಗೆ ಅನಿಸುತ್ತಿತ್ತು.
ಆದರೂ ಅವನ ಒಳಗಿನಿಂದ ಒಂದು ದನಿ ಪಿಸುಗುಡುತ್ತಲೇ ಇತ್ತು. ಇಂತಹ ಒಂದು ಸಂಚು ನಡೆಯುತ್ತಿರುವುದು ಹೌದಾದರೆ, ಆ ಮುಗ್ಧ ಕುಮಾರರು ಅದಕ್ಕೆ ಬಲಿಯಾಗುವುದು ಅನ್ಯಾಯ ಎನ್ನುತ್ತಿತ್ತು ಆ ದನಿ. ‘ಅಧರ್ಮಕ್ಕೆ ತಲೆ ಬಾಗುವುದು ತಪ್ಪು. ಅನ್ಯಾಯವೋ ಅನೀತಿಯೋ ನಡೆಯುವಾಗ ಅದನ್ನು ಪ್ರಶ್ನಿಸಿ, ವಿರೋಧಿಸಬೇಕಾದುದು ಸತ್ಪ್ರಜೆಗಳ ಕರ್ತವ್ಯ’ ಎಂದು ಆಚಾರ್ಯ ಭೀಷ್ಮರು ಹೇಳುತ್ತಿರುತ್ತಾರಂತೆ. ತಂದೆಗಾಗಿ ಎಲ್ಲವನ್ನೂ ಪರಿತ್ಯಜಿಸಿದ ತ್ಯಾಗಜೀವಿ ಭೀಷ್ಮರು. ಕ್ಷತ್ರಿಯರಿಗೆ ಸಹಜವಲ್ಲದ ‘ಆಚಾರ್ಯ’ ಎಂಬ ಗೌರವಕ್ಕೆ ಪಾತ್ರರಾದವರು. ಅವರ ಮಾತುಗಳಿಗೆ ವಿಶೇಷ ಬೆಲೆಯಿತ್ತು. ಅವರ ಮಾತಿನಂತೆ ನಡೆಯದೆ, ತಾನು ಮೌನವಾಗಿದ್ದರೆ ಅಧರ್ಮವನ್ನು ಒಪ್ಪಿದಂತಾಗಲಿಲ್ಲವೆ?
ಏನು ಮಾಡಲಿ?
ಚಿತ್ರಕನಿಗೆ ಒಂದು ದಾರಿ ಹೊಳೆಯಿತು. ಹೇಗೂ ತಾನು ಪ್ರಾರಂಭಿಸಿದ ಚಿತ್ರ ಬರೆಯುವ ಕೆಲಸ ಮುಗಿಯುವ ಹಂತದಲ್ಲಿದೆ. ಅದನ್ನು ಬೇಗನೆ ಪೂರ್ಣಗೊಳಿಸಿ, ಅವರು ಕೊಟ್ಟ ಪ್ರತಿಫಲವನ್ನು ಪಡೆದುಕೊಂಡು ಊರಿಗೆ ಮರಳುವುದು. ಅಲ್ಲಿ ಯಾರಾದರೂ ಕುರುವಂಶದ ದೊಡ್ಡವರಿಗೆ ಈ ಸಂಚಿನ ಸುಳಿವನ್ನು ನೀಡುವುದು. ಬೇರೆ ಯಾರನ್ನೋ ಯಾಕೆ ಹುಡುಕಬೇಕು? ಎಲ್ಲರೂ ಗೌರವಿಸುವ ಆಚಾರ್ಯ ಭೀಷ್ಮರೇ ಇದ್ದಾರಲ್ಲ, ಅವರಲ್ಲಿಯೇ ವಿಷಯವನ್ನು ನಿವೇದಿಸಿದರಾಯಿತು. ಅವರು ಇದನ್ನು ಶೋಧಿಸಿ ಸತ್ಯವನ್ನು ತಿಳಿದಾರು. ಪಾಂಡವರ ಪ್ರಾಣವೂ ಉಳಿದೀತು. ಹೇಗಿದ್ದರೂ ಅರಮನೆಯ ಅಲಂಕರಣ ಕೆಲಸಗಳು ಪೂರ್ಣವಾಗಿ, ಪಾಂಡವರು ಬರುವುದಕ್ಕೆ ಕಾಲಾವಕಾಶವಿತ್ತು.
ಹೀಗೊಂದು ಸರಳವಾದ ಪರಿಹಾರದ ದಾರಿ ಚಿತ್ರಕನಿಗೆ ಗೋಚರಿಸಿತು.
ಆದರೆ ಅದು ಅವನು ತಿಳಿದದ್ದಕ್ಕಿಂತ ಜಟಿಲವಾಗಿತ್ತು. ಅಪಾಯಕಾರಿಯೂ ಆಗಿತ್ತು.
(ಸಶೇಷ)