ಆ ಪುರೋಚನನ ಅಜಾಗರೂಕತೆಯಿಂದ ಹೀಗೆಲ್ಲ ಆಗಿಹೋಯಿತು. ಇನ್ನೀಗ ಅವನನ್ನು ಶಿಕ್ಷಿಸುವ ಹಾಗೂ ಇಲ್ಲ. ಅವನಿಗೆ ಸ್ಪಷ್ಟ ಸೂಚನೆಗಳನ್ನು ಕೊಟ್ಟು, ಒಟ್ಟು ಯೋಜನೆಯ ರೂಪರೇಷೆಗಳನ್ನು ವಿವರಿಸಿ, ಯುವರಾಜನ ಮುದ್ರೆಯನ್ನು ಒತ್ತಿ ಕಳುಹಿಸಿದ ಓಲೆಯದು. ಅದೇನಾದರೂ ಬಹಿರಂಗಕ್ಕೆ ಬಂದರೆ ನಮ್ಮೆಲ್ಲರ ಕಥೆಯೂ ಮುಗಿಯಿತು. ರಾಜಪುತ್ರರ ಕಗ್ಗೊಲೆಗೆ ಸಂಚು ಹೂಡಿದ ಅಪರಾಧ ಸಣ್ಣದಲ್ಲ. ಇಂತಹ ಕಾರಸ್ಥಾನವನ್ನು ಭೀಷ್ಮ ಸಹಿಸಲಾರ. ಹಸ್ತಿನಾವತಿಯಲ್ಲಿ ಅವನು ಇನ್ನೂ ಪ್ರಭಾವಶಾಲಿಯಾಗಿಯೇ ಇದ್ದಾನೆ. ರಾಜಕುಮಾರರು ಶಿಕ್ಷೆಯಿಂದ ಪಾರಾದರೂ ಆಗಬಹುದು. ಧೃತರಾಷ್ಟ್ರನ ಪುತ್ರಮೋಹ ಅವರನ್ನು ಉಳಿಸಿದರೂ ಉಳಿಸಬಹುದು. ಆದರೆ ನಾನಾಗಲಿ, ಸೈಂಧವನಾಗಲಿ ಶಿರಚ್ಛೇದಕ್ಕೆ ಗುರಿಯಾಗಬೇಕಾದೀತು.
ಭಟನಾಯಕ ತನ್ನ ಅನುಚರರ ಜತೆ ಶಕುನಿಯ ಭವನದತ್ತ ಧಾವಿಸಿ ಬಂದ. ಆಗಲೇ ಮಧ್ಯರಾತ್ರಿ ಸಮೀಪಿಸುತ್ತಿತ್ತು.
ಅವನ ಆತಂಕವನ್ನು ಕಂಡ ಬಾಗಿಲ ಭಟ ಒಳಗೆ ಹೋಗಿ ಯಜಮಾನನನ್ನು ಎಬ್ಬಿಸಿದ. ಅರೆನಿದ್ರೆಯಲ್ಲಿ ಹೊರಗೆ ಬಂದವನಿಗೆ ಭಟನಾಯಕನನ್ನು ಕಂಡು ಅಚ್ಚರಿಯಾಯಿತು.
ಅವನು ಹೇಳಿದ ವರ್ತಮಾನವನ್ನು ಕೇಳಿದಾಗ ನಿದ್ರೆ ಹಾರಿಹೋಯಿತು.
ಚಿತ್ರಕನ ಕುಟುಂಬ ಕಾಣೆಯಾಗಿದೆ!
ಇದೀಗ ಹೊಸ ಕಂಟಕವೊಂದು ಎದುರಾಯಿತಲ್ಲ.
ಯಾರಿಗೂ ಯಾವ ಸುಳಿವೂ ಸಿಗದಂತೆ ಮಾಡಿದ ಕಾರಸ್ಥಾನ. ಇನ್ನೇನು ಕೆಲವು ದಿನಗಳಲ್ಲಿ ವಾರಣಾವತದ ಅರಮನೆಗೆ ಬೆಂಕಿಬಿದ್ದು ಪಾಂಡವರು ಸುಟ್ಟುಹೋಗುತ್ತಾರೆ ಎಂದು ನಿಶ್ಚಿಂತೆಯಿಂದ ಇದ್ದನವ. ಅಲ್ಲದೆ ಈ ಉಪಾಯವನ್ನು ಯುವರಾಜನಿಗೆ ಹೇಳಿದವನು ಅವನೇ. ಎಲ್ಲವನ್ನೂ ಪೂರ್ವಯೋಜಿತವಾಗಿ ಸರಿಯಾಗಿ ಆಗುವಂತೆ ಮಾಡುವ ಹೊಣೆಯನ್ನು ಯುವರಾಜನ ಆಪ್ತನೂ, ಬಹು ವಿಶ್ವಾಸ ಪಾತ್ರನೂ, ಇಂತಹ ಕಾರ್ಯಗಳಲ್ಲಿ ಪ್ರಚಂಡನೂ ಆದ ಪುರೋಚನನಿಗೆ ಒಪ್ಪಿಸಿದ್ದ. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದಿತ್ತು. ಪಾಂಡವರು ವಾರಣಾವತಕ್ಕೆ ಹೊರಟು ನಿಂತಿದ್ದರು. ಅಲ್ಲಿ ವಾರ್ಷಿಕವಾಗಿ ನಡೆಯುವ ಪಶುಪತಿಯ ಉತ್ಸವಕ್ಕೆ ಮೊದಲೇ ಅವರನ್ನು ಕಳುಹಿಸುವುದಿತ್ತು. ಒಂದೆರಡು ದಿನಗಳಲ್ಲಿ ಅವರು ಅಲ್ಲಿಗೆ ಪ್ರಯಾಣ ಬೆಳೆಸಲಿದ್ದರು.
ಇಂತಹ ಸಂಧಿಕಾಲದಲ್ಲಿ ಇದೊಂದು ಆತಂಕ ಬಂತಲ್ಲ.
ಆ ಪುರೋಚನನ ಅಜಾಗರೂಕತೆಯಿಂದ ಹೀಗೆಲ್ಲ ಆಗಿಹೋಯಿತು. ಇನ್ನೀಗ ಅವನನ್ನು ಶಿಕ್ಷಿಸುವ ಹಾಗೂ ಇಲ್ಲ. ಅವನಿಗೆ ಸ್ಪಷ್ಟ ಸೂಚನೆಗಳನ್ನು ಕೊಟ್ಟು, ಒಟ್ಟು ಯೋಜನೆಯ ರೂಪುರೇಷೆಗಳನ್ನು ವಿವರಿಸಿ, ಯುವರಾಜನ ಮುದ್ರೆಯನ್ನು ಒತ್ತಿ ಕಳುಹಿಸಿದ ಓಲೆಯದು. ಅದೇನಾದರೂ ಬಹಿರಂಗಕ್ಕೆ ಬಂದರೆ ನಮ್ಮೆಲ್ಲರ ಕಥೆಯೂ ಮುಗಿಯಿತು. ರಾಜಪುತ್ರರ ಕಗ್ಗೊಲೆಗೆ ಸಂಚು ಹೂಡಿದ ಅಪರಾಧ ಸಣ್ಣದಲ್ಲ. ಇಂತಹ ಕಾರಸ್ಥಾನವನ್ನು ಭೀಷ್ಮ ಸಹಿಸಲಾರ. ಹಸ್ತಿನಾವತಿಯಲ್ಲಿ ಅವನು ಇನ್ನೂ ಪ್ರಭಾವಶಾಲಿಯಾಗಿಯೇ ಇದ್ದಾನೆ. ರಾಜಕುಮಾರರು ಶಿಕ್ಷೆಯಿಂದ ಪಾರಾದರೂ ಆಗಬಹುದು. ಧೃತರಾಷ್ಟ್ರನ ಪುತ್ರಮೋಹ ಅವರನ್ನು ಉಳಿಸಿದರೂ ಉಳಿಸಬಹುದು. ಆದರೆ ನಾನಾಗಲಿ, ಸೈಂಧವನಾಗಲಿ ಶಿರಚ್ಛೇದಕ್ಕೆ ಗುರಿಯಾಗಬೇಕಾದೀತು.
ಇದನ್ನೆಲ್ಲ ಎಣಿಸುತ್ತ ಅವನ ಮೈಯಲ್ಲಿ ಬೆವರೊಡೆಯಿತು.
ಇದನ್ನು ಈ ಭಟನಾಯಕನಿಗೆ ಬಿಟ್ಟರೆ ಕೆಲಸ ಕೆಡುತ್ತದೆ. ಎಷ್ಟು ವಿಶ್ವಾಸಿಯಾದರೂ ಅವನಲ್ಲಿ ಇದನ್ನೆಲ್ಲ ನಿರ್ವಹಿಸುವ ಚಾಕಚಕ್ಯತೆಯಿಲ್ಲ. ಏನು ಮಾಡೋಣ?
“ಹುಂ. ಈ ಓಲೆಯ ವಿಚಾರ, ಚಿತ್ರಕ ಬಂದು ಹೇಳಿದ ವಿಚಾರಗಳನ್ನು ನಿನ್ನ ಭಟರಿಗೆ ತಿಳಿಸಿದ್ದೀಯೇನು?’’
ಅವನ ಮಾತಿಗೆ ಭಟನಾಯಕ,
“ಇಲ್ಲ ಪ್ರಭೋ. ಚಿತ್ರಕ ಎಂಬವನನ್ನು ಜೀವಸಹಿತ ಸೆರೆಹಿಡಿಯಬೇಕಾಗಿದೆ. ಅವನಲ್ಲಿರುವ ಓಲೆಯನ್ನು ಜತನವಾಗಿ ಪ್ರಭುಗಳಿಗೆ ಒಪ್ಪಿಸಬೇಕಾಗಿದೆ ಎಂದಷ್ಟೇ ಹೇಳಿದ್ದೇನೆ. ಯಾವ ವಿಷಯಕ್ಕೆ ಸಂಬಂಧಿಸಿದ್ದು ಎಂಬುದು ಅವರಿಗೆ ಏನೇನೂ ತಿಳಿಯದು” ಎಂದ.
“ಸರಿ. ನೀನು ಮನೆಗೆ ಹೋಗು. ಈ ವಿಚಾರವನ್ನು ಇಲ್ಲಿಗೇ ಮರೆತುಬಿಡು. ಯಾರಲ್ಲಿಯೂ ಬಾಯಿ ಬಿಡಬೇಡ. ಅರ್ಥವಾಯಿತಲ್ಲ. ಮುಂದಿನದನ್ನು ನಾನೇ ನೋಡಿಕೊಳ್ಳುತ್ತೇನೆ” ಎಂದು ಭಟನಾಯಕನನ್ನು ಮನೆಗೆ ಕಳುಹಿಸಿದ. ವಿಳಂಬಿಸದೆ ಸಾರಥಿಯನ್ನು ಕರೆದು ತನ್ನ ರಥವನ್ನು ಸಿದ್ಧ ಮಾಡುವಂತೆ ಹೇಳಿದ. ಕ್ಷಿಪ್ರವಾಗಿ ರಥ ಅಂಗಳಕ್ಕೆ ಬಂತು. ಅದನ್ನೇರಿ ಶಕುನಿ ಸೈಂಧವನ ಮನೆಯತ್ತ ಧಾವಿಸಿದ.
ಅಪರ ವೇಳೆಯಲ್ಲಿ ಸೈಂಧವನ ಮನೆಗೆ ಹೋಗಿ, ಅವನನ್ನು ಎಬ್ಬಿಸಿ, ಪ್ರಕರಣದ ಗಂಭೀರತೆಯನ್ನು ಕೆಲವೇ ಮಾತುಗಳಲ್ಲಿ ವಿವರಿಸಿದ. ಸೈಂಧವನೂ ಗಾಢ ಯೋಚನೆಗೆ ಬಿದ್ದ.
“ಏನಾದರೂ ಮಾಡಿ ಆ ಚಿತ್ರಕನನ್ನು ಹಿಡಿಯಬೇಕು. ಅವನೇನಾದರೂ ಹೊರಗೆ ಬಾಯಿಬಿಟ್ಟರೆ ನಮ್ಮ ತಲೆ ಹೋಗುತ್ತದೆ. ಯುವರಾಜನಾಗಲಿ, ಅವನ ತಮ್ಮಂದಿರಾಗಲಿ ನಮ್ಮನ್ನು ಉಳಿಸಲಾರರು. ಅವರು ಪಾರಾಗುವುದಕ್ಕೆ ನಮ್ಮನ್ನು ಬಲಿಗೊಟ್ಟರೂ ಆಶ್ಚರ್ಯವಿಲ್ಲ. ಪ್ರಕರಣ ಹೊರಬರುತ್ತಿದ್ದಂತೆ ‘ಮುದುಕ’ ಜಾಗೃತನಾಗುತ್ತಾನೆ. ಅವನು ಗಂಭೀರ ಶೋಧಕ್ಕೆ ಹೊರಟರೆ ನಮ್ಮ ಯೋಜನೆ ಅರ್ಧದಲ್ಲೇ ವಿಫಲವಾಗುತ್ತದೆ. ಪಾಂಡವರೂ ಉಳಿಯುತ್ತಾರೆ. ಏನಾದರೂ ಮಾಡಬೇಕೀಗ.’’
ಕುಳ್ಳ ಸೈಂಧವನಿಗೆ ವಿವರಿಸಿ ಹೇಳಿದ.
“ನಿಮ್ಮ ವಿಶ್ವಾಸಿ ಭಟರ ತಂಡವನ್ನು ಕೂಡಲೇ ಅಟ್ಟಬೇಕಿತ್ತು. ಈಗಾಗಲೇ ಅವನು ಎಷ್ಟು ದೂರ ಓಡಿದ್ದಾನೋ ಯಾರಿಗೆ ಗೊತ್ತು?’’ ಸೈಂಧವನೆಂದ.
“ನಮ್ಮ ಭಟರು ಅಷ್ಟೆಲ್ಲ ಸಮರ್ಥರಲ್ಲ. ಇದಕ್ಕೆ ದೇಹ ಬಲ ಸಾಲದು. ಬುದ್ಧಿ ಬಲವೂ ಬೇಕು. ಅಗತ್ಯವಿದ್ದರೆ ಕತ್ತರಿಸಿ ಕೊಲ್ಲಲೂ ಹಿಂದೆ-ಮುಂದೆ ನೋಡದ ಸ್ವಭಾವದವರಾಗಬೇಕು. ಅದಕ್ಕೇ ನಿನ್ನ ಬಳಿಗೆ ಓಡೋಡಿ ಬಂದೆ. ನಿನ್ನ ಸಿಂಧೂ ದೇಶದ ಸಣ್ಣ ಪಡೆಯುಂಟಲ್ಲ, ಅದರಿಂದ ಆರಿಸಿದ ಯೋಧರನ್ನು ನಿಯೋಜಿಸಬೇಕಾಗಿದೆ. ಅವರು ಶಸ್ತಾçಸ್ತç ಪ್ರಯೋಗದಲ್ಲಿ ಸಮರ್ಥರೂ, ಕ್ರೂರಮತಿಗಳೂ, ಬುದ್ಧಿಶಾಲಿಗಳೂ ಆಗಿರಬೇಕು. ಅವರಿಗೆ ಈ ಶೋಧಕಾರ್ಯಕ್ಕೆ ಏನು ಸಹಾಯ ಬೇಕೋ ಅದನ್ನೆಲ್ಲ ಒದಗಿಸೋಣ. ವೆಚ್ಚಕ್ಕೆ ಬೇಕಾದಷ್ಟು ಹೊನ್ನು, ಮದ್ಯ ಎಲ್ಲವನ್ನೂ ಕೊಡೋಣ. ಅವನನ್ನು ಹುಡುಕಿ ತರುವುದಕ್ಕಾಗಿ ಅವರನ್ನು ಈಗಲೇ ಹೊರಡಿಸಬೇಕು. ಅರ್ಥವಾಯಿತೆ ನಾನು ಹೇಳಿದ್ದು?’’
ಅವನ ಮಾತಿಗೆ ಸೈಂಧವ ತಲೆಯಾಡಿಸಿ ಸಮ್ಮತಿಸಿದ.
ಅವನೇನೋ ಹೇಳುವ ಮೊದಲು ಕುಳ್ಳ ಬಾಯಿ ಹಾಕಿದ,
“ಇನ್ನೂ ಒಂದು ಅಗತ್ಯವಾದ ಕಾರ್ಯ ಶೀಘ್ರವಾಗಿ ಆಗಬೇಕು. ನಮ್ಮ ಭಟ ನಾಯಕನೊಬ್ಬನಿಗೆ ಇದೆಲ್ಲ ವಿವರಗಳೂ ಗೊತ್ತಾಗಿವೆ. ಅವನು ಬೇರೆಲ್ಲೂ ಬಾಯಿಬಿಟ್ಟಿಲ್ಲ. ಅವನೇನೋ ಬಹಳ ವಿಶ್ವಾಸ ಪಾತ್ರ ನಿಜ. ಆದರೆ?’’
“ಸರಿ ಸರಿ ಅರ್ಥವಾಯಿತು. ಅದಕ್ಕಾಗಿ ಇಬ್ಬರನ್ನು ಕಳುಹಿಸುತ್ತೇನೆ. ಆ ಭಟನಾಯಕನ ಮನೆ ನಮ್ಮವರಿಗೆ ಗೊತ್ತಿರುತ್ತದೆ” ಎಂದು ಚಪ್ಪಾಳೆ ತಟ್ಟಿದ. ಒಳಗೆ ಬಂದ ಪರಿಚಾರಿಕೆಗೆ ಏನೋ ತಿಳಿಸಿದ. ಕೊಂಚವೇ ಹೊತ್ತಿನಲ್ಲಿ ಇಬ್ಬರು ಕಟ್ಟಾಳುಗಳು ಬಾಗಿಲಿನಲ್ಲಿ ಕಾಣಿಸಿಕೊಂಡರು.
ಸೈಂಧವ ಅವರ ಕಿವಿಯಲ್ಲಿ ಏನೋ ಪಿಸುಗಿದ.
ಅವರಿಬ್ಬರೂ ತಲೆಯಾಡಿಸಿ, ಕೂಡಲೇ ಹೊರಬಂದು ಕುದುರೆಗಳನ್ನೇರಿದರು. ಅವರು ಪಕ್ಕೆಗಳನ್ನು ಪಾದಗಳಿಂದ ತಾಡಿಸಿದೊಡನೆ ಪಳಗಿದ ಕುದುರೆಗಳು ನಾಗಾಲೋಟಕ್ಕೆ ತೊಡಗಿದವು.
ಭಟನಾಯಕನ ಮನೆಯ ಸಮೀಪ ಬಂದ ಅವರು ಕುದುರೆಗಳಿಂದ ಕೆಳಗಿಳಿದರು. ಅವರಲ್ಲಿ ಒಬ್ಭ ಕುದುರೆಗಳ ಸಮೀಪವೇ ನಿಂತುಕೊಂಡ. ಇನ್ನೊಬ್ಬ ಭಟನಾಯಕನ ಮನೆಯ ಕದ ತಟ್ಟಿದ. ಭಟನಾಯಕ ಮಂಪರುಗಣ್ಣುಗಳನ್ನು ಉಜ್ಜಿಕೊಳ್ಳುತ್ತ ಹೊರಗೆ ಬಂದ.
“ಪ್ರಭುಗಳು ಬರಹೇಳಿದ್ದಾರೆ. ಈ ಕೂಡಲೇ ಭವನಕ್ಕೆ ಬರಬೇಕಂತೆ. ನಿನಗೆ ವಹಿಸಿದ ಕೆಲಸದ ಕುರಿತು ಏನೋ ಕೇಳಬೇಕಂತೆ” ಎಂದ. ಇಂತಹ ಸಂದರ್ಭಗಳು ಭಟನಾಯಕನ ಜೀವನದಲ್ಲಿ ಹೊಸತಲ್ಲ. ಅವನ ವೃತ್ತಿಯೇ ಅಂತಹುದು. ಮನೆಯೊಳಗೆ ಹೋದವನು, ಮನೆಯಾಕೆಗೆ ಏನೋ ಹೇಳಿದ. ಮರುಗಳಿಗೆಯಲ್ಲಿ ಉಷ್ಣೀಷವೊಂದನ್ನು ತಲೆಗೇರಿಸಿಕೊಂಡು ಹೊರಬಂದ. ಕಾದಿದ್ದವನ ಜತೆ ಅವಸರವಸರವಾಗಿ ಹೆಜ್ಜೆಹಾಕಿದ. ಅಷ್ಟೇ. ಆ ಬಳಿಕ ಅವನನ್ನು ಜೀವಂತ ಕಂಡವರಿಲ್ಲ.
* * *
ಸೈಂಧವ ತನ್ನ ಯೋಧರ ಒಂದು ಪಡೆಗೆ ಸೂಕ್ತ ನಿರ್ದೇಶನ ನೀಡಿ, ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು, ವೆಚ್ಚಕ್ಕೆ ಹೊನ್ನು, ಕುದುರೆಗಳು, ರಥಗಳನ್ನು ಒದಗಿಸಿದ. ಕಾಣೆಯಾದ ಚಿತ್ರಕನ ಕುಟುಂಬ ಯಾವ ದಿಕ್ಕಿನಲ್ಲಿ ತಲೆತಪ್ಪಿಸಿಕೊಂಡು ಓಡಿದೆ ಎಂಬುದು ತಿಳಿಯದಿದ್ದ ಕಾರಣ, ನಾಲ್ಕೈದು ಮಂದಿಯ ತಂಡಗಳಾಗಿ ಶೋಧಕಾರ್ಯಕ್ಕೆ ತೊಡಗುವಂತೆ ತಿಳಿಸಿದ.
ಅವರಿಗೆಲ್ಲ ನಾಯಕ ರುದ್ರ ಎಂಬವನು. ಯುದ್ಧ ತಂತ್ರ ಪ್ರವೀಣ, ಬಲಶಾಲಿ. ಬುದ್ಧಿವಂತನೂ ಆಗಿದ್ದ. ಸೈಂಧವನ ತೀರ ಆಪ್ತನಾದ ಅವನಿಗೆ ಕಾರ್ಯ ಸಾಧನೆಯ ಕೌಶಲವಿತ್ತು. ಅವನಿಗೆ ಯಾವ ಕೆಲಸವನ್ನು ವಹಿಸಿದರೂ ಅದನ್ನು ನ್ಯೂನವಿಲ್ಲದೆ ಪೂರ್ಣಗೊಳಿಸಿ ಬರುತ್ತಿದ್ದ. ಹಾಗಾಗಿ ಅವನಿಗೆ ಚಿತ್ರಕನ ಕುಟುಂಬವನ್ನು ಹುಡುಕುವ ಹೊಣೆ ವಹಿಸಿದ ಬಳಿಕ ನಿಶ್ಚಿಂತನಾದ.
“ನಾವೀಗ ಯೋಚಿಸಬೇಕಾಗಿರುವುದು ಚಿತ್ರಕನ ಕುರಿತು ಅಲ್ಲ. ವಾರಣಾವತದ ಯೋಜನೆಯನ್ನು ಅರ್ಧಕ್ಕೆ ಕೈಬಿಡಬೇಕೋ, ಯೋಜನೆಯಂತೆ ಮುಂದುವರಿಸಬೇಕೋ ಅಥವಾ ಮುಂದೂಡಬೇಕೋ ಎನ್ನುವ ಕುರಿತು. ಯಾರಿಗಾದರೂ ಈ ವಿಷಯದಲ್ಲಿ ಎಳ್ಳಷ್ಟು ಸಂಶಯ ಬಂದರೂ ನಾವು ಕೆಟ್ಟೆವು. ಒಮ್ಮೆ ಸಂಶಯ ಬಂದರೂ `ಮುದುಕ’ನನ್ನನ್ನು ಗಾಂಧಾರಕ್ಕೂ, ನಿನ್ನನ್ನು ಸಿಂಧೂದೇಶಕ್ಕೂ ಕಳುಹಿಸದೆ ಬಿಡುವವನಲ್ಲ. ಈ ದಿಕ್ಕಿನಲ್ಲಿಯೂ ನಾವು ಚಿಂತಿಸಬೇಕಾಗಿದೆ. ಏನು ಮಾಡೋಣ?’’
ಕುಳ್ಳನ ಚಿಂತೆಯನ್ನು ಕಂಡು ಸೈಂಧವ ನಕ್ಕ.
“ಅಯ್ಯೋ ಅಷ್ಟೆಲ್ಲ ಕಳವಳ ಬೇಕಾಗಿಲ್ಲ. ನನ್ನ ಯೋಧಪಡೆ ಬಲು ಸಮರ್ಥವಾಗಿದೆ. ಅವರಿಗೆ ಹಸ್ತಿನಾವತಿಯ ನಗರ, ನಗರದ ಹೊರವಲಯ ಮಾತ್ರವಲ್ಲ, ಸುತ್ತಣ ಅರಣ್ಯಪ್ರದೇಶವೂ ಸುಪರಿಚಿತ. ಮೀನನ್ನು ಬಲೆಯಲ್ಲಿ ಸಿಲುಕಿಸಿದಂತೆ ಚಿತ್ರಕನನ್ನೂ ಅವನ ಕುಟುಂಬವನ್ನೂ ಹಿಡಿದು ತರುತ್ತಾರೆ.
ಅವರಿಗೆ ಹೊಣೆಯನ್ನು ವಹಿಸಿದ ಮೇಲೆ ನಮ್ಮ ಯೋಜನೆಯನ್ನು ನಿರಾತಂಕವಾಗಿ ಮುಂದುವರಿಸಬಹುದು. ಇಷ್ಟಕ್ಕೆ ಹೆದರಿ ಯೋಜನೆಯಲ್ಲಿ ವ್ಯತ್ಯಾಸ ಮಾಡುವುದೋ, ಕೈಬಿಡುವುದೋ ಮಾಡಿದರೆ, ಯುವರಾಜನ ಆಶಾಸಿದ್ಧಿಯಾಗುವುದಿಲ್ಲ. ಇದೊಂದು ಸದವಕಾಶ. ಇದೊಂದೇ ಅವಕಾಶ ನಮಗಿರುವುದು. ಪುರೋಚನ ಯೋಜನೆಯಲ್ಲಿ ಮುಂದುವರಿಯಲಿ” ಅವನ ಭರವಸೆ ಕುಳ್ಳನ ಆತಂಕವನ್ನು ಕೊಂಚ ತಗ್ಗಿಸಿತು.
ಅವನು ಹಗುರವಾದ ದನಿಯಲ್ಲಿ, “ಸರಿ. ನಾನು ಇಲ್ಲಿದ್ದು ಮಾಡುವುದೇನೂ ಇಲ್ಲವಲ್ಲ. ರಾತ್ರಿ ಕಳೆಯುತ್ತ ಬಂತು. ಮನೆಗೆ ಹೋಗಿ ಸಾಧ್ಯವಾದರೆ ಒಂದಿಷ್ಟು ನಿದ್ರಿಸುವ ಯತ್ನ ಮಾಡುತ್ತೇನೆ” ಎಂದು ಎದ್ದ.
* * *
ಕತ್ತಲೆ ಇನ್ನೂ ಹರಿದಿರಲಿಲ್ಲ.
ಅವರು ನಾಲ್ವರು ಅವಸರವಸರವಾಗಿ ಹೆಜ್ಜೆಯಿಡುತ್ತ ನಡೆಯುತ್ತಿದ್ದರು. ಬೆಳಗಾಗುವುದಕ್ಕೆ ಒಂದು ಜಾವ ಮುನ್ನವೇ ಮನೆಯಿಂದ ಹೊರಟಿದ್ದರು. ನಡುನಡುವೆ ಯಾರಾದರೂ ಹಿಂಬಾಲಿಸುತ್ತಿದ್ದಾರೋ ಎಂಬ ಸಂಶಯದಿಂದ ಹಿಂದಕ್ಕೆ ತಿರುಗಿ ನೋಡುತ್ತಲೂ ಇದ್ದರು. ಪರಸ್ಪರ ಮಾತನಾಡುವ ಧೈರ್ಯವೂ ಇಲ್ಲದೆ ಮೌನವಾಗಿ ದಾರಿ ಸವೆಸುತ್ತಿದ್ದರು. ಅವರು ತಾವಿದ್ದ ಪರಿಸ್ಥಿತಿಯಲ್ಲಿ ಬೆಳಕಾಗದೆ ಇರಲಿ ಎಂದು ಪ್ರಾರ್ಥಿಸುತ್ತಿದ್ದಂತಿತ್ತು. ಬೆಳಕು ಬಂದರೆ ಯಾರಾದರೂ ಗಮನಿಸಿ, ಹೀಗೆ ನಾಲ್ವರ ಕುಟುಂಬವೊಂದು ಕದ್ದು ಮುಚ್ಚಿ ಓಡಿಹೋಗುತ್ತಿತ್ತು ಎಂದು ತಿಳಿದರೆ ಎನ್ನುವ ಭಯ. ಕತ್ತಲಿನಲ್ಲಿ ಯಾರಿಗೂ ತಿಳಿಯಲಾರದಷ್ಟೆ?
ಅವರಲ್ಲಿ ಮುಂದಿದ್ದವನು ಆ ಸಂಸಾರದ ಯಜಮಾನ. ನಡುವಿನಲ್ಲಿ ಇಬ್ಬರು ಮಕ್ಕಳು. ಒಬ್ಬ ಹತ್ತರ ಪ್ರಾಯದ ಹುಡುಗ. ಇನ್ನೊಬ್ಬಳು ಎಳೆಯ ವಯಸ್ಸಿನ ತರುಣಿ. ಎಲ್ಲರಿಗಿಂತ ಹಿಂದೆ ಆ ಮಕ್ಕಳ ತಾಯಿ. ಎಷ್ಟು ವೇಗವಾಗಿ ಹೋಗಬೇಕೆಂದು ಬಯಸಿದರೂ, ಕಲ್ಲು ಮುಳ್ಳಿನ ದಾರಿ, ಅದೂ ಕಾಣಿಸದಷ್ಟು ಕತ್ತಲು ಅವರ ವೇಗವನ್ನು ತಡೆಯುತ್ತಿತ್ತು. ತಮಗೇನೋ ಆಪತ್ತು ಬಂದಿದೆ. ಇದರಿಂದ ತಪ್ಪಿಸಿಕೊಳ್ಳಬೇಕು ಎಂದಷ್ಟೇ ತಿಳಿದ ಆ ಮಕ್ಕಳು ಸಾಧ್ಯವಾದಷ್ಟು ಬೇಗನೆ ನಡೆಯುವ ಪ್ರಯತ್ನ ಮಾಡುತ್ತಿದ್ದರು. ಎಲ್ಲರ ಕೈಗಳಲ್ಲೂ ಬಟ್ಟೆಯ ಗಂಟುಗಳು. ಒಂದಿಷ್ಟು ಆಹಾರ, ಮನೆಯಲ್ಲಿದ್ದ ಅಮೂಲ್ಯ ಎಂದವರು ಭಾವಿಸಿದ ಆಭರಣವೋ ಇತ್ಯಾದಿ ಆ ಗಂಟುಗಳಲ್ಲಿ ಇದ್ದಿರಬೇಕು.
ಹೌದು. ಚಿತ್ರಕನ ಕುಟುಂಬವೇ ಅದು.
ಬೆಳಗಾಗುವ ಮೊದಲೇ ಅಜ್ಞಾತವಾದ ಗಮ್ಯದತ್ತ ಜೀವರಕ್ಷಣೆಗಾಗಿ ಧಾವಿಸುತ್ತಿದ್ದರು. ಇನ್ನೇನು ಒಂದು ಹರದಾರಿ ಸಾಗಿದರೆ ಅವರು ಕಾದು ನಿಲ್ಲಬೇಕಾದ ಸ್ಥಳ ಬಂದು ಬಿಡುತ್ತದೆ.
ಅಲ್ಲಿಗೆ ಅವನೂ ಬರುತ್ತೇನೆ ಎಂದಿದ್ದಾನೆ. ಬಂದಾನು ಎಂಬ ಭರವಸೆಯಿದೆ. ಒಂದು ವೇಳೆ ಬಾರದಿದ್ದರೆ..
ಅವನು ಅಂದರೆ ಶಂಖ. ಹಿಂದಿನ ದಿನ ಚಿತ್ರಕನ ಸಂಸಾರಕ್ಕೆ ಬಂದೆರಗಲಿರುವ ಆಪತ್ತನ್ನು ತಿಳಿಸಿದವನು. ಎಲ್ಲಾದರೂ ದೂರ ಹೋಗಿ, ರಕ್ಷಣೆ ಪಡೆಯುವುದಕ್ಕೆ ಸಹಾಯ ಮಾಡುತ್ತೇನೆ ಅಂದಿದ್ದಾನೆ. ಅವರಿದ್ದ ಆಮ್ರಪುರ ಎಂಬ ಹಳ್ಳಿಯಿಂದ ದೂರದಲ್ಲಿ ಹೊಲಗದ್ದೆಗಳಾಚೆ, ಅರಣ್ಯ ಪ್ರಾರಂಭವಾಗುವಲ್ಲಿ ದೊಡ್ಡದೊಂದು ಕೊಳವೂ, ಅದರ ಪಕ್ಕದಲ್ಲಿ ಒಂದು ಬೃಹತ್ತಾದ ಆಲದ ಮರವೂ ಇದೆ. ಅಲ್ಲಿ ನಿಂತು ನಿರೀಕ್ಷಿಸುತ್ತಿರಿ ಅಂದಿದ್ದಾನೆ. ಅಲ್ಲಿಗೆ ಸೇರುವುದಕ್ಕಾಗಿ ಅವರು ಹೀಗೆ ಧಾವಿಸುತ್ತಿದ್ದಾರೆ.
“ಅಪ್ಪಾ, ಇನ್ನೆಷ್ಟು ದೂರ ನಡೆಯಬೇಕು?’’ ಎಂದು ಕೇಳಿದ, ಸಣ್ಣವನಾದ ಜಿತು.
“ಶ್..ಮೆಲ್ಲ ಮಾತನಾಡು” ಎಂದು ಎಚ್ಚರಿಸಿದಳು, ಅವನ ಅಕ್ಕ ಚಂಪಾ.
“ಆಯಿತು ಮಗೂ. ಬಂದು ಬಿಟ್ಟೆವು. ಇನ್ನೇನು ಹತ್ತು ಹೆಜ್ಜೆ” ಎಂದು ಸಣ್ಣದನಿಯಲ್ಲಿ ಸಮಾಧಾನ ಹೇಳಿದ ಚಿತ್ರಕ.
“ಅಪ್ಪಾ, ಅಪ್ಪಾ, ನನಗೆ ಹಸಿವಾಗುತ್ತಿದೆ” ಎಂದನವ. ತಮಗೆ ಒದಗಿದ ಸಂಕಷ್ಟದ ಪೂರ್ಣ ಕಲ್ಪನೆ ಅವನಿಗಿಲ್ಲ.
“ಸ್ವಲ್ಪ ದೂರ ಮಗು. ಆಲದ ಮರ ಕಂಡೊಡನೆ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯೋಣ. ಅಲ್ಲಿ ಏನಾದರೂ ತಿನ್ನಲು ಕೊಡುತ್ತೇನೆ” ಎಂದಳು ಚಾರು. ಅವಳ ಹೆತ್ತಕರುಳು ಮಗುವಿಗಾಗಿ ಮಿಡಿಯದಿರುವುದೆ?
ಅಷ್ಟು ಹೊತ್ತಿಗೆ ಅವರೆಲ್ಲ ತುಸು ಎತ್ತರದ ದಿನ್ನೆಯಂತಹ ಪ್ರದೇಶಕ್ಕೆ ತಲಪಿದ್ದರು. ಅಲ್ಲಿ ನಿಂತು ಒಂದು ಸಲ ಸುತ್ತ ನೋಡಿದರು. ಆಗಷ್ಟೇ ನಸುಕು ಬೆಳಕು ಹರಡುವುದಕ್ಕೆ ಪ್ರಾರಂಭವಾಗಿತ್ತು. ಹಳ್ಳಿಗಳು, ಹೊಲಗದ್ದೆಗಳು ಹಿಂದಾಗಿದ್ದವು.
ದೂರದಲ್ಲೊಂದು ವಿಸ್ತಾರವಾದ ಗೋಮಾಳ ಕಾಣಿಸುತ್ತಿತ್ತು.
ಅದರಾಚೆಗೆ ಅಲ್ಲಲ್ಲಿ ಬೆಳೆದ ಕುರುಚಲು ಗಿಡಗಳು, ಮರಗಳು. ಅದರಿಂದಲೂ ದೂರದಲ್ಲಿ ದಟ್ಟವಾಗಿ ಹಬ್ಬಿದ ಅರಣ್ಯ.
ಚಿತ್ರಕ ಗಮನವಿಟ್ಟು ನೋಡಿದ. ಗೋಮಾಳದ ಪಕ್ಕದಲ್ಲಿ ಒಂದು ವಿಶಾಲವಾದ ಕೊಳವೂ, ಅದರ ಹತ್ತಿರವೇ ಬೆಳೆದು ನಿಂತ ದೊಡ್ಡದೊಂದು ಅಲದ ಮರವೂ ಕಾಣಿಸಿದವು. ತಾವು ಶಂಖನಿಗಾಗಿ ನಿರೀಕ್ಷಿಸಬೇಕಾಗಿರುವುದು ಅಲ್ಲಿಯೇ ಎಂಬುದು ಸ್ಪಷ್ಟವಾಯಿತು.
“ಬನ್ನಿ. ಓ ಅಲ್ಲಿಯವರೆಗೆ ಹೋದರಾಯಿತು. ಅಲ್ಲೊಂದಿಷ್ಟು ಹೊತ್ತು ಕುಳಿತು ದಣಿವಾರಿಸಿಕೊಳ್ಳೋಣ. ಏನಾದರೂ ಸ್ವಲ್ಪ ಹೊಟ್ಟೆಗೂ ಹಾಕಿಕೊಳ್ಳೋಣ. ಮತ್ತೆ ಇನ್ನೆಲ್ಲಿ ಅವಕಾಶ ಸಿಗುವುದೋ ಅಥವಾ?’’
ಚಿತ್ರಕ ಅರ್ಧದಲ್ಲಿ ಮಾತು ನಿಲ್ಲಿಸಿದ.
ಚಾರುವಿಗೆ ಉಳಿದ ಅರ್ಧ ಅರ್ಥವಾಯಿತು.
ಅವರು ದಿನ್ನೆಯನ್ನು ಇಳಿದು ಗೋಮಾಳದ ಬದಿಯಿಂದ ಮುಂದುವರಿದರು. ಈಗ ಬೆಳಕು ಹರಿದು ದಾರಿ ನಿಚ್ಚಳವಾಗಿ ಕಾಣಿಸುತ್ತಿತ್ತು. ಕೊಳದ ಸಮೀಪದಲ್ಲಿದ್ದ ಆಲದ ಮರದ ಕೆಳಗೆ ಮೆತ್ತನೆಯ ಹುಲ್ಲು ಬೆಳೆದಿತ್ತು. ಅವರೆಲ್ಲ ಅಲ್ಲಿ ಕುಳಿತು ಆಯಾಸವನ್ನು ನೀಗುವ ಯತ್ನಮಾಡಿದರು. ತಂದ ಬುತ್ತಿಯನ್ನು ಬಿಚ್ಚುವುದೋ ಬೇಡವೋ ಎಂದು ಚಾರು ಅರೆಮನಸ್ಸಿನಲ್ಲಿದ್ದಳು.
ಎಲ್ಲರಿಗೂ ಹಸಿವಾಗಿತ್ತು. ಆದರೆ ಶಂಖನ ಸುಳಿವಿಲ್ಲ. ಚಿತ್ರಕ ಅವನು ಬಂದ ಬಳಿಕ ಹಂಚಿ ತಿನ್ನೋಣ ಎನ್ನುತ್ತಾನೋ ಏನೋ ಎಂದು ಅವನ ಮುಖ ನೋಡಿದಳು. ಅವನಾದರೋ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ.
ಚಾರು ಗಂಟನ್ನು ಬಿಚ್ಚಿ ಒಂದಿಷ್ಟು ರೊಟ್ಟಿಗಳನ್ನು ತೆಗೆದು, ಏನೋ ವ್ಯಂಜನವನ್ನು ಸೇರಿಸಿ, ಮಕ್ಕಳಿಗೆ ಕೊಟ್ಟಳು.
ಒಂದು ಅಗಲವಾದ ಎಲೆಯಲ್ಲಿ ಎರಡು ರೊಟ್ಟಿಗಳನ್ನು ಹಾಕಿ ಚಿತ್ರಕನ ಮುಂದಿಟ್ಟಳು. ತಾನೂ ತಿನ್ನತೊಡಗಿದಳು. ಚಿತ್ತಕ ಯಾಂತ್ರಿಕವಾಗಿ ರೊಟ್ಟಿಯನ್ನು ಜಗಿಯತೊಡಗಿದ. ಅದರೊಂದಿಗೆ ಕಳೆದ ದಿನಗಳ ನೆನಪುಗಳು ಸುಳಿಯತೊಡಗಿದವು.
(ಸಶೇಷ)