ಲೋಕದಲ್ಲಿ ಅನೇಕರು ದುಃಖಿಗಳಿದ್ದಾರೆ. ಯಾಕೆ ಅವರಿಗೆ ದುಃಖ ಉಂಟಾಗುತ್ತದೆ? ಪರಿಹರಿಸಲಾರದ ಸಂಕಟವಾದರೆ ದುಃಖವುಂಟಾಗುವುದು ಸ್ವಾಭಾವಿಕ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದುಃಖಿಸುವುದು ತನಗೆ ಬಯಸಿದ್ದು ಸಿಗಲಿಲ್ಲ ಎಂಬುದರಿಂದ. ಹೆಚ್ಚಿನ ಬಯಕೆಯೇ ಇಲ್ಲದವನಿಗೆ ಈ ದುಃಖವೂ ಇಲ್ಲ. ಬಯಕೆಗಳನ್ನು ಮಿತಿಯಲ್ಲಿಟ್ಟುಕೊಂಡರೆ ಅನೇಕ ಜನರ ದುಃಖ ಇಲ್ಲವಾದೀತು. ಆದರೆ ಪ್ರತಿಯೊಬ್ಬನೂ ತನಗೆ ಅರ್ಹತೆ ಮತ್ತು ಅವಕಾಶ ಇಲ್ಲವಾದಾಗಲೂ ಬೇಕು ಎನಿಸಿದುದನ್ನು ಪಡೆಯುವ ಪ್ರಯತ್ನಕ್ಕೆ ತೊಡಗುತ್ತಾನೆ. ಬಯಸಿದ್ದೆಲ್ಲ ಸಿಗುವುದಕ್ಕೆ ಸಾಧ್ಯವೆ? ಮೊದಲು ಇಲ್ಲವಲ್ಲ ಎಂಬ ದುಃಖ. ಆಮೇಲೆ ಪ್ರಯತ್ನಿಸಿಯೂ ಸಿಗಲಿಲ್ಲ ಎಂಬ ಮತ್ತೊಂದು ದುಃಖ. ಅಂತೂ ಆಶೆಗಳಿದ್ದವರಿಗೆ ಈ ದುಃಖ ತಪ್ಪಿದ್ದಲ್ಲ.
ವ್ಯಾಸರ ನಿಯೋಗದ ಫಲವಾಗಿ ಮಹಾರಾಣಿ ಅಂಬಿಕೆ ಮತ್ತು ಅಂಬಾಲಿಕೆ ಇಬ್ಬರು ಮಕ್ಕಳನ್ನು ಹೆತ್ತರು. ವ್ಯಾಸರ ಮಾತಿನಂತೆ ಆಯಿತು. ಇಬ್ಬರು ಮಕ್ಕಳೂ ನ್ಯೂನತೆಯೊಂದಿಗೇ ಜನಿಸಿದರು.
ಅಂಬಿಕೆಯ ಮಗನಿಗೆ ಹುಟ್ಟುವಾಗಲೇ ಕುರುಡು. ಎರಡು ಕಣ್ಣುಗಳು ತೆರೆದಿದ್ದರೂ ಅವನಿಗೆ ಏನೂ ಕಾಣಿಸುತ್ತಿರಲಿಲ್ಲ. ಅವನಿಗೆ ಧೃತರಾಷ್ಟ್ರ ಎಂದು ಹೆಸರಿಟ್ಟರು. ಅಂಬಾಲಿಕೆಯ ಮಗ ಪಾಂಡು. ಅವನಿಗೆ ಮೈಯೆಲ್ಲ ಬಿಳಚಿಕೊಂಡಿತ್ತು. ಅದೊಂದು ರೋಗವಂತೆ. ಹಸ್ತಿನಾವತಿಯ ದುರದೃಷ್ಟವೊ ಅಥವಾ ತಾಯಂದಿರ ದೌರ್ಭಾಗ್ಯವೊ ಧೃತರಾಷ್ಟ್ರನಾಗಲಿ, ಪಾಂಡುವಾಗಲಿ ಸಿಂಹಾಸನವನ್ನು ಏರುವುದಕ್ಕೆ ಅರ್ಹರಲ್ಲವೆಂದಾಯಿತು. ದೈಹಿಕ ನ್ಯೂನತೆಯಿದ್ದವರು ರಾಜರಾಗುವುದು ಸಾಧ್ಯವಿಲ್ಲವಂತೆ.
ನನಗೂ ಒಬ್ಬ ಮಗ ಜನಿಸಿದ. ತುಂಬ ಮುದ್ದಾಗಿದ್ದ. ಅವನಿಗೆ ವಿದುರ ಎಂದು ಹೆಸರಾಯಿತು. ತಾಯಿಗೆ ಹೆಸರಿಲ್ಲದಿದ್ದರೇನು? ಮಗನಿಗಾದರೂ ಉಂಟಲ್ಲ! ಅಷ್ಟೇ ಅಲ್ಲ, ಅವನು ತುಂಬ ಬುದ್ಧಿವಂತನೂ ಆಗಿ ಬೆಳೆದ. ಅವನನ್ನು ದಾಸೀಪುತ್ರ ಎಂದು ಹೆಚ್ಚಿನವರು ಗುರುತಿಸುತ್ತಿದ್ದರು. ಆದರೆ ವ್ಯಾಸರ ಮಾತಿಗೆ ಬೆಲೆ ಕೊಟ್ಟ ಅರಮನೆಯ ಮಂದಿ ಮಾತ್ರ ಅವನನ್ನು ತಮ್ಮಲ್ಲಿ ಒಬ್ಬ ಎಂದೇ ಕಾಣುತ್ತಿದ್ದರು. ವಿದ್ಯಾಭ್ಯಾಸವೂ ಉಳಿದಿಬ್ಬರಂತೆ ವಿದುರನಿಗೂ ಆಯಿತು. ಅವನು ಕ್ಷತ್ರಿಯರಂತೆ ಶಸ್ತಾçಭ್ಯಾಸವನ್ನೂ ಮಾಡಿದ. ಬ್ರಾಹ್ಮಣರಂತೆ ಶಾಸ್ತ್ರಾಭ್ಯಾಸವನ್ನೂ ಮಾಡಿದ. ಎರಡರಲ್ಲೂ ನಿಪುಣನಾದ. ಅವನ ನಡವಳಿಕೆ, ಸಂಸ್ಕಾರಯುಕ್ತವಾದ ವ್ಯಕ್ತಿತ್ವಗಳಿಗೆ ಗೌರವ ಸಲ್ಲುವುದನ್ನು ಕಂಡು ನಾನು ಹಿಗ್ಗುತ್ತಿದ್ದೆ. ಆಚಾರ್ಯ ಭೀಷ್ಮರ ಪ್ರೀತಿಗೂ ಅವನು ಪಾತ್ರನಾಗಿದ್ದ. ತಮ್ಮ ಹಾಗೆ ವಿದುರನೂ ಧಾರ್ಮಿಕನಿದ್ದಾನೆ ಎಂಬ ಕಾರಣ ಇದ್ದರೂ ಇರಬಹುದು.
ಎಲ್ಲಕ್ಕಿಂತ ಹೆಚ್ಚು ನನ್ನ ಮಗನಲ್ಲಿದ್ದುದು ಜ್ಞಾನದ ಹಂಬಲ. ಅವನು ಜ್ಞಾನವೃದ್ಧಿಯೇ ಜೀವನದ ಗುರಿ ಎಂದು ತಿಳಿದ ಹಾಗಿತ್ತು. ಶಾಸ್ತç, ಪುರಾಣ, ಇತಿಹಾಸ ಎಲ್ಲವನ್ನೂ ಪಟ್ಟು ಹಿಡಿದು ಅಭ್ಯಾಸ ಮಾಡುತ್ತಿದ್ದ. ಹಸ್ತಿನಾವತಿಯಲ್ಲಿ ಎಲ್ಲರೂ ಅವನನ್ನು ಜ್ಞಾನಿ ಎಂದೇ ಗುರುತಿಸತೊಡಗಿದರು. ಅದಕ್ಕೂ ಮಿಗಿಲಾಗಿ ಅವನಿಗೆ ಸರಿತಪ್ಪುಗಳ ಪ್ರಜ್ಞೆ ಸ್ಫುಟವಾಗಿತ್ತು. ತುಂಬ ಓದಿದವರಿಗೆಲ್ಲ ಸರಿತಪ್ಪುಗಳ ಪ್ರಜ್ಞೆ ಇರುತ್ತದೆ ಎನ್ನುವಂತಿಲ್ಲವಷ್ಟೆ? ಇವನು ಮಾತ್ರ ಯಾವುದು ಸರಿಯೋ ಅದನ್ನು ಮಾಡುತ್ತಿದ್ದ. ಯಾವುದು ತಪ್ಪೋ ಅದನ್ನು ಖಂಡಿಸುತ್ತಿದ್ದ. ಈ ಖಚಿತವಾದ ದೃಷ್ಟಿ ಇದ್ದುದರಿಂದ ಎಳೆಯ ವಯಸ್ಸಿನಲ್ಲಿಯೇ ಪ್ರೌಢನಾದಂತೆ ಕಾಣುತ್ತಿದ್ದ. ಸಾಮಾನ್ಯರಿಗಿಂತ ತುಂಬ ಎತ್ತರದಲ್ಲಿ ಅವನ ವ್ಯಕ್ತಿತ್ವವಿತ್ತು. ನನ್ನ ಹೊಟ್ಟೆಯಲ್ಲಿ ಜನಿಸಿದ್ದಾನೆ ಎಂಬುದು ಮಾತ್ರ ಅವನನ್ನು ಸೂತರ ವರ್ಗದಲ್ಲಿ ಗಣಿಸುವುದಕ್ಕೆ ಕಾರಣ. ಬೇರೆ ಭಾಗ್ಯವಂತೆಯೊಬ್ಬಳಿಗೆ ವಿದುರ ಮಗನಾಗುತ್ತಿದ್ದರೆ ಅವನು ಎಲ್ಲಿರುತ್ತಿದ್ದನೊ, ಏನಾಗುತ್ತಿದ್ದನೊ. ನಾನು ಹೀಗೆಲ್ಲ ಚಿಂತಿಸುವುದಿತ್ತಾದರೂ ಅವನು ಮಾತ್ರ ಅದನ್ನು ಗಣಿಸಿದಂತೆ ಇರಲಿಲ್ಲ. ನನ್ನ ಕುರಿತು ಅತ್ಯಂತ ಪ್ರೀತಿ, ಗೌರವಗಳಿಂದಲೇ ನಡೆದುಕೊಳ್ಳುತ್ತಿದ್ದ. ಅವನಿಗೆ ಬುದ್ದಿ ತಿಳಿದಲ್ಲಿಂದ ಇದುವರೆಗೆ ಅವನ ತಾಯಿಯಾದ ಬಗೆಗೆ ನಾನು ಅತ್ಯಂತ ಸಂತೋಷದಿಂದ ಇರುವಂತೆ ನೋಡಿಕೊಂಡವನು. ವಿದುರ ಬೆಳೆಯುತ್ತಿದ್ದಂತೆ, ನನಗೂ ಒಂದು ಸ್ಥಾನ ದೊರೆಯಿತು. ಅದು ‘ವಿದುರನ ಮಾತೆ’ ಎಂಬ ಪಟ್ಟ. ಇದರಿಂದ ತಾಯಿಯಾದ ನಾನು ಹಿಗ್ಗದೆ ಇರುವುದಕ್ಕುಂಟೆ? ಯಾರೂ ಗಮನಿಸದ, ಪ್ರಪಂಚಕ್ಕೆ ಅಜ್ಞಾತಳಾಗಿಯೇ ಉಳಿಯಬೇಕಿದ್ದ ನನ್ನನ್ನು ಲೋಕ ಗಮನಿಸುವಂತೆ ಮಾಡಿದ ನನ್ನ ಮಗ. ಅವನ ಕುರಿತು ಹೆಮ್ಮೆ ಪಡದಿದ್ದರೆ ನಾನು ತಾಯಿಯಾಗಿ ಏನು ಸಾರ್ಥಕ?
ಏನಾದರೂ, ವಿದುರ ಸಕಲ ಯೋಗ್ಯತೆಯನ್ನು ಹೊಂದಿದ್ದರೂ ಅವನಿಗೆ ಸಿಂಹಾಸನವನ್ನೇರುವ ಅದೃಷ್ಟ ಮಾತ್ರ ಇರಲಿಲ್ಲ. ಅದಕ್ಕೆ ಹಿನ್ನೆಲೆ ಅವನು ನನ್ನ ಮಗನಾಗಿದ್ದುದೇ. ಬಹಳ ಗಂಭೀರವಾದ ವಿಮರ್ಶೆಯ ಅನಂತರ ಪಾಂಡುವನ್ನು ಸಿಂಹಾಸನಕ್ಕೇರಿಸಿದರು. ಅದೇನೋ ಮಧ್ಯಮಾರ್ಹತೆಯಂತೆ. ಧೃತರಾಷ್ಟ್ರ ಹಿರಿಯವನಾಗಿ ರಾಜನಾಗಬೇಕಿತ್ತು. ಆದರೆ ಹುಟ್ಟುತ್ತಲೇ ಕುರುಡನಾಗಿದ್ದುದರಿಂದ ಅವನು ಅನರ್ಹನಾದ. ಪಾಂಡು ರೋಗಿಯಾದರೂ ಅದೇನೂ ದೈಹಿಕ ನ್ಯೂನತೆಯಾಗಿರಲಿಲ್ಲ. ಬಣ್ಣ ಮಾತ್ರ ತೀರ ಬಿಳಚಿಕೊಂಡಿತ್ತು ಅಷ್ಟೇ. ಅವನ ಅರ್ಹತೆಯು ಪ್ರಥಮ ಅಲ್ಲವಾದರೂ ಮಧ್ಯಮಮಟ್ಟದಲ್ಲಿದ್ದ ಕಾರಣ, ವಿದುರ ಮೊದಲೇ ಅನರ್ಹನಾದ ನಿಮಿತ್ತ ಪಾಂಡು ರಾಜನಾದ.
ನನಗೆ ಜೀವನದಲ್ಲಿ ದೊಡ್ಡ ದೊಡ್ಡ ಆಶೆಗಳಿರಲಿಲ್ಲ, ನಿಜ. ಆದರೆ ನನ್ನ ಮಗ ರಾಜನಾದರೆ ಆಗಿಬಿಡಲಿ ಎಂದು ಹಂಬಲಿಸಿದ್ದೆ. ಆದು ಈಡೇರಲಿಲ್ಲ ಎಂದು ವಿಷಾದವೂ ಇತ್ತು. ವಿದುರ ಮಾತ್ರ ಈ ಕುರಿತು ಯೋಚಿಸಲೇ ಇಲ್ಲ. ತನ್ನಿಂದ ಹಿರಿಯರಾದ ಧೃತರಾಷ್ಟ್ರ ಮತ್ತು ಪಾಂಡು ಅವರ ಕ್ಷೇಮ ಚಿಂತನೆಯೇ ಅವನ ಕರ್ತವ್ಯವಾಯಿತು. ಅದರಿಂದಾಚೆಗೆ ಅವನಿಗೆ ಬೇಕು ಎಂಬುದು ಯಾವುದೂ ಇರಲಿಲ್ಲ. ತನಗೆ ಎಷ್ಟು ಪ್ರಾಪ್ತಿ ಇದೆಯೋ ಅಷ್ಟು ಸಿಕ್ಕಿಯೇ ಸಿಗುತ್ತದೆ. ಅದರಿಂದ ಹೆಚ್ಚಿನದನ್ನು ತಾನು ಬಯಸಬಾರದು ಎಂಬ ದೃಷ್ಟಿ ಅವನದು. ಆದುದರಿಂದ ಸಿಂಹಾಸನ ಸಿಗಲಿಲ್ಲ ಎಂದು ದುಃಖವೂ ಆಗಲಿಲ್ಲ ಅವನಿಗೆ. ಅದನ್ನು ನೆನೆದಾಗ ಅವನ ಸಂಯಮದ ಕುರಿತು ನನಗೆ ಅಭಿಮಾನ ಎನಿಸುತ್ತಿತ್ತು.
ಲೋಕದಲ್ಲಿ ಅನೇಕರು ದುಃಖಿಗಳಿದ್ದಾರೆ. ಯಾಕೆ ಅವರಿಗೆ ದುಃಖ ಉಂಟಾಗುತ್ತದೆ? ಪರಿಹರಿಸಲಾರದ ಸಂಕಟವಾದರೆ ದುಃಖವುಂಟಾಗುವುದು ಸ್ವಾಭಾವಿಕ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದುಃಖಿಸುವುದು ತನಗೆ ಬಯಸಿದ್ದು ಸಿಗಲಿಲ್ಲ ಎಂಬುದರಿಂದ. ಹೆಚ್ಚಿನ ಬಯಕೆಯೇ ಇಲ್ಲದವನಿಗೆ ಈ ದುಃಖವೂ ಇಲ್ಲ. ಬಯಕೆಗಳನ್ನು ಮಿತಿಯಲ್ಲಿಟ್ಟುಕೊಂಡರೆ ಅನೇಕ ಜನರ ದುಃಖ ಇಲ್ಲವಾದೀತು. ಆದರೆ ಪ್ರತಿಯೊಬ್ಬನೂ ತನಗೆ ಅರ್ಹತೆ ಮತ್ತು ಅವಕಾಶ ಇಲ್ಲವಾದಾಗಲೂ ಬೇಕು ಎನಿಸಿದುದನ್ನು ಪಡೆಯುವ ಪ್ರಯತ್ನಕ್ಕೆ ತೊಡಗುತ್ತಾನೆ. ಬಯಸಿದ್ದೆಲ್ಲ ಸಿಗುವುದಕ್ಕೆ ಸಾಧ್ಯವೆ? ಮೊದಲು ಇಲ್ಲವಲ್ಲ ಎಂಬ ದುಃಖ. ಆಮೇಲೆ ಪ್ರಯತ್ನಿಸಿಯೂ ಸಿಗಲಿಲ್ಲ ಎಂಬ ಮತ್ತೊಂದು ದುಃಖ. ಅಂತೂ ಆಶೆಗಳಿದ್ದವರಿಗೆ ಈ ದುಃಖ ತಪ್ಪಿದ್ದಲ್ಲ. ನನಗೂ ನನ್ನ ಮಗ ರಾಜನಾಗಬೇಕು ಎಂಬ ಅಪೇಕ್ಷೆ ಇದ್ದುದರಿಂದಲ್ಲವೆ ಸ್ವಲ್ಪವಾದರೂ ಬೇಸರ ಉಂಟಾದದ್ದು? ಹಾಗೆ ಬಯಸದೇ ಇದ್ದಿದ್ದರೆ ಬೇಸರವೂ ಇರುತ್ತಿರಲಿಲ್ಲ.
ವಿದುರ ಜೀವನದ ಈ ರಹಸ್ಯವನ್ನು ಅರಿತಿದ್ದ.
ಆದುದರಿಂದ ಅವನು ಯಾವುದನ್ನೂ ತೀವ್ರವಾಗಿ ಬೇಕು ಎಂದು ಬಯಸಲಿಲ್ಲ. ತಾನು ಮಾಡಬೇಕಾದುದೇನು ಎಂದು ಮಾತ್ರ ಚಿಂತಿಸುತ್ತಿದ್ದ. ಸಾಮಾನ್ಯ ಜನರಲ್ಲಿ ಅನೇಕರು ತಾವು ಮಾಡಬೇಕಾದುದನ್ನು ಮಾಡುವುದಿಲ್ಲ. ಆ ಕುರಿತು ಯೋಚಿಸುವುದೂ ಇಲ್ಲ. ತನಗೇನು ಸಿಕ್ಕೀತು ಎಂದು ಮಾತ್ರ ಚಿಂತಿಸುತ್ತಾರೆ. ಅವರಿಗೆ ನೆಮ್ಮದಿಯಂತೂ ಇರಲಾರದು. ವಿದುರ ತನಗೇನು ಸಿಕ್ಕೀತು ಎಂದು ಯೋಚಿಸಲೇ ಇಲ್ಲ. ಹಾಗಾಗಿ ಇದು ಸಿಗಬೇಕಿತ್ತು. ಸಿಗಲಿಲ್ಲವಲ್ಲ ಎಂಬ ದುಃಖವೂ ಅವನಿಗಿರಲಿಲ್ಲ. ಏನನ್ನು ಮಾಡುವಾಗಲೂ ಇದು ಧರ್ಮವೇ ಅಧರ್ಮವೇ ಎಂಬ ಜಿಜ್ಞಾಸೆ ಅವನಲ್ಲಿ ಉಂಟಾಗುತ್ತಿತ್ತು. ಕೆಲವು ಸಲ ಆಚಾರ್ಯ ಭೀಷ್ಮರಲ್ಲಿ ಹೇಳಿಕೊಳ್ಳುತ್ತಿದ್ದ. ಈ ಪ್ರವೃತ್ತಿಯಿಂದಾಗಿ ಅವರಿಗೆ ವಿದುರ ಪರಮ ಪ್ರಿಯನೆನಿಸಿದ. ಅವರಿಗೂ ವಿದುರನು ಸಿಂಹಾಸನವೇರಲಿ ಎಂದು ಇತ್ತೋ ಏನೋ. ಶಾಸ್ತçದಲ್ಲಿ ಕಿಂಚಿತ್ತು ಅವಕಾಶವಿದ್ದರೂ ಅವನನ್ನೇ ರಾಜನನ್ನಾಗಿ ಮಾಡುತ್ತಿದ್ದರು ಆಂತ ತೋರುತ್ತದೆ. ಆದರೇನು? ಹಾಗೆ ಆಗಲಿಲ್ಲ. ಇದೆಲ್ಲದರಿಂದಾಗಿ ವಿದುರ ಸುಖವಾಗಿಯೇ ಇದ್ದ. ಎಲ್ಲರ ಗೌರವಾದರಗಳಿಗೂ ಪಾತ್ರನಾದ. ದಾಸಿಯ ಮಗ ಎಂಬ ನಿಂದೆ ಅವನಿಗೆ ಬರಲಿಲ್ಲ. ಕ್ಷತ್ರಿಯರು ಮಾತ್ರವಲ್ಲ, ಬ್ರಾಹ್ಮಣರೂ ಅವನನ್ನು ಗೌರವಿಸುತ್ತಿದ್ದರು. ರಾಜನಾಗದಿದ್ದರೂ ಅದಕ್ಕೆ ಕಡಿಮೆಯಲ್ಲದ ಗೌರವವದು.
ವಿದುರ ಸಿಂಹಾಸವೇರಲಾಗಲಿಲ್ಲ, ನಿಜ. ಅಂಧನಾಗಿದ್ದ ಧೃತರಾಷ್ಟ್ರನ ಆಧಾರ ಸ್ತಂಭದಂತೆ ಅವನಿಗೆ ಸೇವೆ ಮಾಡುತ್ತಿದ್ದ. ಅರಸನಾದ ಪಾಂಡುವಿಗೆ ಮಂತ್ರಿಯ ಸ್ಥಾನದಲ್ಲಿ ನಿಂತ. ಅವರಿಬ್ಬರಿಗೂ ತಮ್ಮನಾಗಿದ್ದರೂ ಅಣ್ಣನಂತೆ ಆಗಿಬಿಟ್ಟ.
ಸದಾಕಾಲ ಅವರಿಬ್ಬರ ಹಿತರಕ್ಷಣೆಯ ಹೊಣೆ ತನ್ನದು ಎಂಬಂತೆ ಇದ್ದ. ಕಾಲ ಉರುಳುತ್ತ ಸಾಗುತ್ತಿತ್ತು. ಮಕ್ಕಳಿಬ್ಬರ ಅಗಲಿಕೆಯಿಂದ ಕಂಗೆಟ್ಟ ರಾಜಮಾತೆ ಸತ್ಯವತೀ ದೇವಿ ಒಂದು ರೀತಿ ವಿರಕ್ತರಂತೆ ಆಗಿ ಬಿಟ್ಟಿದ್ದರು. ಅವರು ಅಂತಃಪುರದ ತಮ್ಮ ಓವರಿಯನ್ನು ಬಿಟ್ಟು ಹೊರಬರುತ್ತಿದ್ದುದು ಬಹು ವಿರಳ. ತೀರ ಅಗತ್ಯದ ಕೆಲಸಗಳಿಗೆ ಮಾತ್ರ ಹೊರಗೆ ಕಾಲಿಡುತ್ತಿದ್ದರು. ಉಳಿದವರೊಂದಿಗೆ ಮಾತು ಕೂಡ ಕಡಮೆಯಾಗಿತ್ತು. ಮುಖದಲ್ಲಿ ನಿರಾಸಕ್ತ ಭಾವ. ಮೊಮ್ಮಕ್ಕಳು ಬಂದು ಮಾತನಾಡಿಸಿದರೆ ಒಂದೆರಡು ವಾಕ್ಯಗಳಲ್ಲಿ ಮಾತು ಮುಗಿದು ಬಿಡುತ್ತಿತ್ತು.
ಭೀಷ್ಮರ ಹೆಗಲ ಹೊಣೆ ಇಳಿದಿರಲಿಲ್ಲ. ಮೂವರು ಗಂಡು ಮಕ್ಕಳು ಬೆಳೆದು ತರುಣರಾಗಿದ್ದರು. ಅವರಿಗೆ ಮದುವೆ ಮಾಡಿಸುವ ಅನಿವಾರ್ಯ ಅವರಿಗಿತ್ತು. ಆದರೆ ಹಿಂದೆ ತಮ್ಮನಿಗೆ ಮದುವೆ ಮಾಡಿಸುವುದಕ್ಕೆ ಹೊರಟು ಆದ ವಿಪರೀತಗಳು ನೆನಪಿನಲ್ಲಿದ್ದವೋ ಏನೋ. ಈ ವಿಚಾರದಲ್ಲಿ ಉತ್ಸಾಹವಿರಲಿಲ್ಲ. ಉತ್ಸಾಹವಿದ್ದರೂ ಇಲ್ಲದಿದ್ದರೂ ಕರ್ತವ್ಯ ಮಾಡಲೇಬೇಕಷ್ಟೆ? ಧೃತರಾಷ್ಟ್ರನಿಗೆ ಮದುವೆ ಮಾಡಿಸಲು ಹೊರಟಾಗ ಕೊಂಚ ಸಮಸ್ಯೆ ಬಂದಿರಬೇಕು. ಹುಡುಗ ಎಷ್ಟು ದೊಡ್ಡ ವಂಶದವನಾದರೂ ಕಣ್ಣಿಲ್ಲದವನಲ್ಲವೆ? ಸುಲಭದಲ್ಲಿ ಅವನಿಗೆ ಹೆಣ್ಣು ಕೊಡುವುದಕ್ಕೆ ಯಾರು ಸಿದ್ದರಾದಾರು? ಹುಡುಕಿ ಹುಡುಕಿ ಕೊನೆಗೆ ಗಾಂಧಾರದ ರಾಜಕುಮಾರಿ ಗಾಂಧಾರಿಯ ಜತೆ ಮದುವೆ ಮಾಡಿದರು. ಆ ಕಡೆಯಲ್ಲಿ ಸಾಕಷ್ಟು ಧನಸಂಪತ್ತು ಸ್ವೀಕರಿಸಿ ಹೆಣ್ಣನ್ನು ಕೊಡುವ ಪದ್ಧತಿ ಇತ್ತಂತೆ. ಹೆತ್ತ ಮಗಳನ್ನು ಹಣಕ್ಕೆ ಮಾರುವುದೆ? ಏನೋ ಈ ದೊಡ್ಡವರ ಮನಸ್ಸೇ ನನ್ನಂತಹವಳಿಗೆ ಅರ್ಥವಾಗದು. ಗಂಡ ಕುರುಡನೆಂದು ಗೊತ್ತಾದಾಗ ಆ ಕುಮಾರಿಗೆ ಏನನ್ನಿಸಿತೋ!
ಅವಳೇ, ‘ಗಂಡನಿಗಿಲ್ಲದ ದೃಷ್ಟಿಯ ಭಾಗ್ಯ ತನಗೂ ಬೇಡ’ ಅಂತ ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡಳು. ಹಾಗೆ ಮಾಡಿದ ಅವಳನ್ನು ಪತಿವ್ರತೆ ಅಂತ ಎಲ್ಲರೂ ಹೊಗಳಿದರು. ಅದಕ್ಕಿಂತ ಕಣ್ಣಿಲ್ಲದ ಗಂಡನಿಗೆ ಅವಳೇ ಕಣ್ಣಾಗಬಹುದಿತ್ತು ಎಂದು ನನಗೆ ಕಂಡಿತು. ಏನು ಮಾಡೋಣ? ನನಗೆ ಬಂದ ಯೋಚನೆ ಅವಳಿಗೆ ಬರಬೇಕಲ್ಲ.
ಆಮೇಲೆ ಯಾರೋ ಹೇಳಿದರು, ಗಾಂಧಾರಿ ಮೊದಲೇ ಶಿವನನ್ನು ಒಲಿಸಿಕೊಂಡು ನೂರು ಮಂದಿ ಮಕ್ಕಳಿಗೆ ತಾಯಿಯಾಗುವಂತೆ ವರವನ್ನು ಪಡೆದಿದ್ದಳಂತೆ. ಭೀಷ್ಮರಿಗೆ ಈ ವಿಚಾರ ಗೊತ್ತಾಗಿತ್ತಂತೆ. ಅರಮನೆಯ ತುಂಬ ಮಕ್ಕಳಾಗಲಿ ಎಂದು ಬಯಸಿ ಅವಳನ್ನು ಕರೆತಂದು ಧೃತರಾಷ್ಟ್ರನಿಗೆ ಮದುವೆ ಮಾಡಿದರಂತೆ.
ಪಾಂಡುವಿಗೂ ಮದುವೆಯಾಯಿತು. ಕುಂತೀಭೋಜನ ಸಾಕು ಮಗಳು, ಯಾದವ ಕನ್ಯೆ ಕುಂತಿಯನ್ನು ಪಾಂಡು ವರಿಸಿದ. ಅವನಿಗೆ ಮದ್ರದ ರಾಜಕುಮಾರಿ ಮಾದ್ರಿಯೂ ಪತ್ನಿಯಾದಳು. ಇನ್ನು ವಿದುರನಿಗೆ ಮದುವೆಯಾಗಬೇಕಲ್ಲ! ಉಳಿದವರ ಮದುವೆಗಿಂತ ಹೆಚ್ಚು ಕಷ್ಟ ಆದದ್ದು ಅವನ ಮದುವೆಯೇ. ಯಾಕೆಂದರೆ ಅವನಿಗೆ ಯಾವ ವರ್ಣದ ಹೆಣ್ಣನ್ನು ಮದುವೆ ಮಾಡಿಸುವುದು ಎಂಬುದು ಸಮಸ್ಯೆಯಾಯಿತು. ನನ್ನ ಮಗನಷ್ಟೇ ಆಗಿದ್ದರೆ ಯಾರಾದರೂ ನಮ್ಮಂತಹವರ ಮನೆಯ ಮಗಳನ್ನು ಮದುವೆ ಮಾಡಿಸಬಹುದಿತ್ತು. ಆದರೆ ಅವನು ಅರಸನ ತಮ್ಮನೂ ಹೌದಲ್ಲ? ಅದೇ ಭೀಷ್ಮರಿಗೂ ಸಮಸ್ಯೆಯಾಯಿತು. ಸುಮ್ಮನೆ ಯಾವುದಾದರೂ ವರ್ಣಕ್ಕೆ ಅಥವಾ ಜಾತಿಗೆ ಸೇರಿದ್ದರೆ ಮದುವೆ ಸರಳವಾಗುತ್ತಿತ್ತು. ಅದನ್ನು ಸರಿಯಾಗಿ ನಿರ್ಣಯಿಸಲಾಗದ ಕಾರಣ ಸರಳವಾದ ವಿಚಾರವೂ ಜಟಿಲವೆನಿಸಿತು. ಕೊನೆಗೆ, ಬಹಳ ಹುಡುಕಾಡಿದ ಮೇಲೆ ಒಬ್ಬಳು ಕನ್ಯೆ ದೊರಕಿದಳು. ಯದುಗಳಲ್ಲಿ ಪ್ರಮುಖನಾದ ದೇವಕ ಎಂಬವನು ಸಾಕಿದ ಹೆಣ್ಣು ಪಾರಸವಿ. ಅವಳ ಅಪ್ಪ ಬ್ರಾಹ್ಮಣನಂತೆ. ತಾಯಿ ಸೂತಕನ್ಯೆ. ತುಂಬ ಚೆಲುವೆಯಾಗಿದ್ದಳು ನನ್ನ ಸೊಸೆ. ಚೆಲುವೆ ಮಾತ್ರವಲ್ಲದೆ ವಿದುರನಿಗೆ ತಕ್ಕಂತೆ ಸದ್ಗುಣವಂತೆಯೂ ಆಗಿದ್ದಳು. ಮದುವೆಯಾಯಿತು.
ಮಕ್ಕಳು ಬೆಳೆದರು. ಅವರಿಗೆ ಮಕ್ಕಳೂ ಆದರು.
ನಾನು ಅಜ್ಜಿ ಎನಿಸಿದೆ. ಜೀವನದಲ್ಲಿ ಹೀಗೊಂದು ಸ್ವತಂತ್ರ ಕುಟುಂಬ ನನ್ನ ಪಾಲಿಗೆ ಬಂದೀತು ಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ. ನಾನು ಭಾಗ್ಯಹೀನೆ ಎಂದು ಸದಾ ಅಂದುಕೊಳ್ಳುತ್ತಿದ್ದ ಈ ದಾಸಿಯೂ ಭಾಗ್ಯವಂತೆ ಎಂದು ಭಾವಿಸುವಂತಾಯಿತು. ಅದಕ್ಕೆ ಕಾರಣ ವ್ಯಾಸರ ಅನುಗ್ರಹ ವಾಕ್ಯವೋ ಅಥವಾ ನನ್ನ ಹಣೆಯಲ್ಲಿ ಹಾಗಿತ್ತೋ ಯಾರಿಗೆ ಗೊತ್ತು. ಮಹಾರಾಣಿಯಾಗಿ ಸುಖವಾಗಿ ಇರಬೇಕಿದ್ದ ಅಂಬಿಕೆ ಅಥವಾ ಅಂಬಾಲಿಕೆ ಸುಖವಾಗಿದ್ದರೋ ಇಲ್ಲವೋ. ದಾಸಿಯಾಗಿ ಸದಾಕಾಲ ದೊಡ್ಡವರ ಸೇವೆಯಲ್ಲಿ ಇರಬೇಕಿದ್ದ ನಾನು ಅಂಬಿಕೆ ಅಂಬಾಲಿಕೆಯರಿಗೆ ದಕ್ಕದ ಸಂತೋಷವನ್ನು ಬದುಕಿನಲ್ಲಿ ಕಂಡೆ. ಅದರಲ್ಲೂ ಮಕ್ಕಳ ವಿಚಾರದಲ್ಲಿ ನನಗಿದ್ದ ನೆಮ್ಮದಿ ಅವರಿಬ್ಬರಿಗೂ ಇದ್ದಂತೆ ತೋರುತ್ತಿರಲಿಲ್ಲ.
ಅವರು ನನ್ನಂತೆ ಅಜ್ಜಿಯರಾಗಲಿಲ್ಲ. ಅವರು ಹೆತ್ತ ಮಕ್ಕಳಲ್ಲಿ ದೋಷವೇ ಅಂದರೆ ಅದೂ ಅಲ್ಲ. ಅವರು ಸಾಕಷ್ಟು ಸಾಧಕರೇ ಆಗಿದ್ದರು.
ಪರಾಕ್ರಮಿಯಾಗಿದ್ದ ಪಾಂಡು, ದಿಗ್ವಿಜಯ ಮಾಡಿ ಚಕ್ರವರ್ತಿ ಎನಿಸಿದ. ಧೃತರಾಷ್ಟ್ರ ಅರಸನಾಗದಿದ್ದರೂ ಅದಕ್ಕೆ ಸಮನಾದ ಗೌರವಕ್ಕೆ ಪಾತ್ರನಾಗಿದ್ದ. ಈ ವಿಚಾರದಲ್ಲಿ ತಾಯಂದಿರು ಚಿಂತಿಸಬೇಕಾದ ಪ್ರಮೇಯವೇನೂ ಇರಲಿಲ್ಲ. ಆದರೂ ಮೊಮ್ಮಕ್ಕಳು ಜನಿಸಲಿಲ್ಲ ಎಂಬುದು ಚಿಂತೆಗೆ ಕಾರಣವಾಗಿತ್ತು. ನೂರು ಮಕ್ಕಳನ್ನು ಹೆರಬೇಕಾದ ಗಾಂಧಾರಿಯು ಬಸಿರಾಗಲಿಲ್ಲ. ಕುಂತಿ ಮತ್ತು ಮಾದ್ರಿಗೂ ಸಂತಾನವಾಗಲಿಲ್ಲ. ಹೀಗಿರುವಾಗ ಇನ್ನೊಂದು ಘಟನೆ ನಡೆಯಿತು. ಒಂದು ದಿನ ಪಾಂಡು ಬೇಟೆಗೆ ಹೋದವನು ಋಷಿಶಾಪಕ್ಕೆ ಗುರಿಯಾದ. ಅದಾದರೂ ಎಂತಹ ಶಾಪ! ನಿನ್ನ ಮಡದಿಯರನ್ನು ನೀನು ಸೇರಿದರೆ ಆಗಲೇ ಸಾಯುತ್ತಿ ಎಂಬ ಶಾಪ. ಕಿಂದಮ ಎಂಬ ಋಷಿ ಕೊಟ್ಟುದಂತೆ. ಪಾಂಡು ಈ ಶಾಪದಿಂದ ತೀರ ವಿರಕ್ತನಾಗಿ ಅರಣ್ಯದಲ್ಲೇ ಉಳಿದ. ಅವನ ಮಡದಿಯರಾದ ಕುಂತಿ ಮತ್ತು ಮಾದ್ರಿ ಅವನ ಜತೆಯಲ್ಲೇ ಹೋಗಿದ್ದರು. ಅವರು ಮೂವರೂ ಹಸ್ತಿನಾವತಿಗೆ ಮರಳಿ ಬರಲಿಲ್ಲ.
ಒಟ್ಟಿನಲ್ಲಿ ಹಸ್ತಿನಾವತಿಯ ಸಿಂಹಾಸನಕ್ಕೆ ಉತ್ತರಾಧಿಕಾರಿಗಳಿಲ್ಲದ ಸನ್ನಿವೇಶ ಮತ್ತೊಮ್ಮೆ ಬರುವ ಹಾಗೆ ಕಾಣಿಸಿತು. ಆದರೆ ವಿಧಿವಿಲಾಸ ಬೇರೆಯೇ ಇತ್ತು.
(ಸಶೇಷ)