ನಮ್ಮ ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳು ಈಗಲೂ ಕೂಡ ಪಾಶ್ಚಾತ್ಯ ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮಲ್ಲಿ ಕೀಳರಿಮೆಯನ್ನು ಬೆಳೆಸುವಂತಹ ಕೆಲಸವನ್ನು ಮಾಡುತ್ತಿವೆ ಎನಿಸುತ್ತದೆ. ಅಮೆರಿಕದ ಪ್ರಜೆಗಳ ತಲಾ ಆದಾಯ ಇಷ್ಟು; ಭಾರತೀಯರದ್ದು ಇಷ್ಟು ಮಾತ್ರ. ಆಹಾರ, ಬಟ್ಟೆ ಮುಂತಾದವುಗಳ ಬಳಕೆಯ ವಿಚಾರದಲ್ಲೂ ಅಷ್ಟೆ. ಅಲ್ಲಿ ತಲಾ ಅಷ್ಟು ಬಳಸುತ್ತಾರೆ; ನಮ್ಮಲ್ಲಿ ಇಷ್ಟೇ. ಇದನ್ನೆಲ್ಲ ನಾವು ಇನ್ನೂ ಎಷ್ಟು ಕಾಲ ಮುಂದುವರಿಸುತ್ತೇವೋ!
ಆದರೆ ವಾಸ್ತವದ ಪರಿಸ್ಥಿತಿ ಬಹಳ ಮುಂದೆ ಹೋಗಿದೆ. ಪಾಶ್ಚಾತ್ಯ ದೇಶಗಳು ಯಾವುದನ್ನು ತಮ್ಮ ಆದರ್ಶಗಳೆಂದು ಹೆಮ್ಮೆಪಟ್ಟುಕೊಳ್ಳುತ್ತಾ ಬಂದರೋ, ಅಂತಹ ರಾಷ್ಟ್ರೀಯತೆ, ಪ್ರಜಾಪ್ರಭುತ್ವ ಮತ್ತು ಸಮಾಜವಾದ(ಸಮತಾವಾದ)ಗಳಲ್ಲೇ ಅವರಿಗೆ ಬಿಕ್ಕಟ್ಟು ಅಥವಾ ವೈಫಲ್ಯ ಗೋಚರಿಸಿದೆ. ರಾಷ್ಟ್ರೀಯತೆಯು ಇತರ ರಾಷ್ಟ್ರಗಳ ರಾಷ್ಟ್ರೀಯತೆಯೊಂದಿಗೆ ಢಿಕ್ಕಿಹೊಡೆದು ಅವುಗಳನ್ನು ಕಬಳಿಸಲು ಯತ್ನಿಸಿದೆ. ಪರಿಣಾಮವಾಗಿ ಯೂರೋಪಿನ ಇತಿಹಾಸವೆಂದರೆ ಬರೀ ಯುದ್ಧಗಳ ಕತೆ ಎಂಬಂತಾಗಿದೆ.
ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗೆ ಸ್ವಾತಂತ್ರ್ಯ ಎಂಬುದು ನಿಜ. ಆದರೆ ಅದು ಬಂಡವಾಳಶಾಹಿಯೊಂದಿಗೆ ಬೆಳೆದು ಬಂದುದರಿಂದ ಶೋಷಣೆ ಮತ್ತು ಅಧಿಕಾರ-ಸಂಪತ್ತುಗಳ ಕೇಂದ್ರೀಕರಣಕ್ಕೆ ದಾರಿಯಾಯಿತು. ಶೋಷಣೆಯನ್ನು ತೊಡೆದು ಹಾಕಲೆಂದು ಹೊರಟ ಸಮಾಜವಾದವು (ಸಮತಾವಾದ) ವ್ಯಕ್ತಿ ಸ್ವಾತಂತ್ರ್ಯಕ್ಕೆ ಇತಿಶ್ರೀ ಹಾಡಿದೆ. ವ್ಯಕ್ತಿಯ ಮಹತ್ತ್ವವನ್ನು ಮೊಟಕುಗೊಳಿಸಿದೆ; ಅಧಿಕಾರದ ವ್ಯಾಪ್ತಿಯನ್ನು ವಿಸ್ತರಿಸಿ ಸೃಜನಶೀಲ (ಕ್ರಿಯಾಶೀಲ) ಕಾರ್ಯಗಳನ್ನೆಲ್ಲ ತನ್ನ ಹತೋಟಿಯಲ್ಲಿಡಲು ಹೊರಟಿದೆ. ಒಟ್ಟಿನಲ್ಲಿ ಪಾಶ್ಚಾತ್ಯ ಪ್ರಪಂಚಕ್ಕೆ ಇಂದು ’ಬೇರೆ ಮಾರ್ಗ ಇಲ್ಲ’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ದೇಶಕ್ಕೆ ಸ್ವಾತಂತ್ರ್ಯ ಬಂದ ಒಂದೆರಡು ದಶಕಗಳಲ್ಲೇ ಮನಗಂಡ ಭಾರತೀಯ ಜನಸಂಘದ ನಿಡುಗಾಲದ ಪ್ರಧಾನ ಕಾರ್ಯದರ್ಶಿ ಪಂಡಿತ್ ದೀನದಯಾಳ ಉಪಾಧ್ಯಾಯ ಅವರು ಅದಕ್ಕೆ ಉತ್ತರವಾಗಿ ಭಾರತೀಯ ಸಂಸ್ಕೃತಿಯ ಕೊಡುಗೆ ಎನಿಸಿದ ಏಕಾತ್ಮ ಮಾನವತೆಯನ್ನು ಮುಂದಿಟ್ಟರು. ಓರ್ವ ಶ್ರೇಷ್ಠ ಚಿಂತಕರೂ ಆಗಿದ್ದ ಉಪಾಧ್ಯಾಯರ ಈ ಸಿದ್ಧಾಂತವು ದೇಶದ ಗಮನವನ್ನು ದೊಡ್ಡ ರೀತಿಯಲ್ಲೇ ಸೆಳೆದಿತ್ತು. ಈಗಲೂ ಅರ್ಥಪೂರ್ಣ ಆಗಿರುವ ಅದರ ವಿವರಗಳನ್ನು ಎನ್.ಪಿ. ಶಂಕರನಾರಾಯಣರಾವ್ ಅವರು ಪ್ರಸ್ತುತ ಪುಸ್ತಕದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. (ಪಂ. ದೀನದಯಾಳ ಉಪಾಧ್ಯಾಯ – ಏಕಾತ್ಮ ಮಾನವತೆ, ಪ್ರ: ರಾಷ್ಟ್ರೋತ್ಥಾನ ಸಾಹಿತ್ಯ, ಮೊದಲ ಮುದ್ರಣ ೧೯೭೯).
ಭಾರತೀಯ ಸಂಸ್ಕೃತಿಯ ಪ್ರಮುಖವಾದ ವೈಶಿಷ್ಟ್ಯವೆಂದರೆ ಅದು ಇಡೀ ಸೃಷ್ಟಿಯನ್ನು ಅವಿಭಾಜ್ಯವಾಗಿ ಪರಿಗಣಿಸುತ್ತದೆ ಎಂಬುದು. ಅದರ ದೃಷ್ಟಿಕೋನವು ಏಕಾತ್ಮವಾದಿ ಮತ್ತು ಸಮಗ್ರವಾದಿ(Iಟಿಣegಡಿಚಿಣeಜ). ಪಶ್ಚಿಮ ದೇಶಗಳಲ್ಲಿ ಎದ್ದಿರುವ ಗೊಂದಲಕ್ಕೆ ಮೂಲತಃ ಅವರು ಸೃಷ್ಟಿಯನ್ನು ಭಿನ್ನ ಭಿನ್ನ ಅಂಶಗಳಾಗಿ ಪರಿಗಣಿಸಿ, ಅನಂತರ ಅವುಗಳನ್ನು ತೇಪೆ ಹಾಕುವುದೇ ಮುಖ್ಯಕಾರಣ. ಸೃಷ್ಟಿಯಲ್ಲಿ ಅನೇಕತೆ ಅಥವಾ ವೈವಿಧ್ಯ ಇದೆ ಎಂಬುದನ್ನು ನಾವು ಕೂಡ ಒಪ್ಪುತ್ತೇವಾದರೂ ಆ ಅನೇಕತೆಯ ಹಿಂದೆ ಅಡಗಿರುವ ಏಕತೆಯನ್ನು ಅರಸಲು ಸದಾ ಪ್ರಯತ್ನ ನಡೆಸಿದ್ದೇವೆ. ಡಾರ್ವಿನ್ನನು ಅತಿ ಶಕ್ತಿಶಾಲಿಯಾದುದಕ್ಕೇ/ ಸಮರ್ಥವಾದುದಕ್ಕೇ ಉಳಿವು ಎಂಬುದೇ ಜೀವಿಗಳ ಆಧಾರತತ್ತ್ವ ಎಂದು ಪರಿಗಣಿಸಿದ. ಆದರೆ ಭಾರತದಲ್ಲಿ ನಾವು ಇಡೀ ಸೃಷ್ಟಿಯಲ್ಲಿ ಸಕಲ ಚರಾಚರಗಳಲ್ಲಿ ಏಕತೆಯನ್ನು ಗುರುತಿಸಿದ್ದೇವೆ. ಇಲ್ಲಿನ ದ್ವೈತವಾದಿಗಳು ಸಹ ಪ್ರಕೃತಿ ಮತ್ತು ಪುರುಷರಲ್ಲಿ ಪೂರಕತತ್ತ್ವವನ್ನು ಕಂಡರೇ ಹೊರತು ಪರಸ್ಪರ ವಿರೋಧ ಅಥವಾ ಸಂಘರ್ಷವನ್ನು ಕಾಣಲಿಲ್ಲ. ಸೃಷ್ಟಿಯಲ್ಲಿ ನಾವು ಕಾಣುವ ವೈವಿಧ್ಯವು ಅದರಲ್ಲಿಯೇ ಅಡಗಿಕುಳಿತಿರುವ ಏಕತೆಯ ಅಭಿವ್ಯಕ್ತಿ. ಆ ವೈವಿಧ್ಯದಲ್ಲಿ ಪರಸ್ಪರಾನುಕೂಲತೆ ಹಾಗೂ ಪರಸ್ಪರ ಪೂರಕತೆ ಇದೆ.
ಸೃಷ್ಟಿಯಲ್ಲಿ ಸಂಘರ್ಷ, ಸ್ಪರ್ಧೆಗಳು ಇರುವಂತೆಯೇ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸಹಕಾರ, ಸಹಯೋಗಗಳೂ ಇವೆ. ಸಸ್ಯ ಜಗತ್ತು ಹಾಗೂ ಪ್ರಾಣಿಜಗತ್ತು ಒಂದರ ಆವಶ್ಯಕತೆಗಳನ್ನು ಮತ್ತೊಂದು ಪೂರೈಸುತ್ತ ಅಸ್ತಿತ್ವದಲ್ಲಿವೆ. ಪ್ರಾಣಿಗಳಿಗೆ ಅವಶ್ಯವಾದ ಆಮ್ಲಜನಕವನ್ನು ಸಸ್ಯಗಳು ಒದಗಿಸಿದರೆ, ಸಸ್ಯಗಳಿಗೆ ಅಗತ್ಯವಾದ ಅಂಗಾರಾಮ್ಲವನ್ನು ಪ್ರಾಣಿಗಳು ನೀಡುತ್ತವೆ. ಇದೇ ಈ ಎರಡು ಜೀವವರ್ಗಗಳ ಆಧಾರತತ್ತ್ವ. ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ಪ್ರಗತಿಯನ್ನು ನಾವು ಬಯಸುತ್ತೇವೆ. ನಾವು ಸೃಷ್ಟಿಯಲ್ಲಿ ಏಕಾತ್ಮವಾದಿಗಳಾಗಿರುವಂತೆ ವ್ಯಕ್ತಿಯ ವಿಚಾರದಲ್ಲೂ ಏಕಾತ್ಮವಾದಿಗಳು. ಪಶ್ಚಿಮದವರು ಈ ನಾಲ್ಕು ಅಂಶಗಳನ್ನು ಬೇರೆ ಬೇರೆಯಾಗಿ ಕಾಣುತ್ತಾರೆ; ಆರ್ಥಿಕ ಮನುಷ್ಯ, ರಾಜಕೀಯ ಮನುಷ್ಯ ಇತ್ಯಾದಿ.
ಧರ್ಮ, ಅರ್ಥ, ಕಾಮ, ಮೋಕ್ಷಗಳು ನಾಲ್ಕು ಪುರುಷಾರ್ಥಗಳು. ಅರ್ಥ ಮತ್ತು ಕಾಮಗಳು ಧರ್ಮದ ಇತಿಮಿತಿಗೆ ಒಳಪಟ್ಟಿರಬೇಕು. ಇದು ಚತುರ್ವಿಧ ಪುರುಷಾರ್ಥಗಳ ಸಮಗ್ರ ಚಿತ್ರಣವಾಗಿದ್ದು, ಇಂತಹ ಏಕಾತ್ಮ ಮಾನವನ ಕಲ್ಪನೆಯೇ ಭಾರತೀಯರಾದ ನಮ್ಮ ಗುರಿ ಮತ್ತು ದಾರಿ.
ಏಕಾತ್ಮ ಮಾನವತೆಯು ಆಚರಣೆಯಲ್ಲಿ ಬರುವ ಕ್ರಮವನ್ನು ಪುಸ್ತಕ ಸವಿವರವಾಗಿ ಚರ್ಚಿಸುತ್ತದೆ. ನಾನು ಅಪೂರ್ಣ. ನಾನು ಮತ್ತು ನಾವುಗಳ ನಡುವೆ ಅತಿ ನಿಕಟವಾದ ಸಂಬಂಧವಿದೆ. ನನ್ನ ಸುಖದಲ್ಲಿ ನಮ್ಮ ಸುಖ ಎಷ್ಟರಮಟ್ಟಿಗೆ ಬೆರೆತು ಹೋಗಿದೆ ಎಂದರೆ, ಅವುಗಳನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ನಮ್ಮ ಸುಖದಲ್ಲಿ ಎಷ್ಟು ಪಾಲು ನಾವು ನೀಡಿದ್ದು? ಈ ನಾವು ಕೇವಲ ನಮ್ಮ ಸುತ್ತಲಿನ ಜನರಾಗಿ ಉಳಿಯದೆ ದೊಡ್ಡದಾಗುತ್ತಾ ಹೋಗುತ್ತದೆ. ಇಲ್ಲಿ ’ನಾವು’ ಮಹತ್ತ್ವಪೂರ್ಣವಾದದ್ದು. ಒಬ್ಬನ ವ್ಯಕ್ತಿಗತ ಜೀವನವು ನಾಶವಾಗಬಹುದು; ಆದರೆ ಸಾಮೂಹಿಕ ಜೀವನವು ನಾಶವಾಗುವುದಿಲ್ಲ. ಸಮಷ್ಟಿಯನ್ನು (ಸಮಾಜ) ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಕಾರ್ಯ ಪುಣ್ಯಕಾರ್ಯ; ಆ ರೀತಿಯಲ್ಲಿ ಕಾರ್ಯ ಮಾಡುವ ಶಕ್ತಿಯೇ ಸಾಮೂಹಿಕ ಶಕ್ತಿ; ನಾನು ಎಂಬ ಅಸ್ತಿತ್ವದ ಸಾರ್ಥಕತೆಯು ನಾವು ಎಂಬುದರಿಂದ ಮಾತ್ರ ಸಾಧ್ಯ.
ಪಶ್ಚಿಮದ ವಿಚಾರಧಾರೆಗಳಿಂದ ಪ್ರಭಾವಿತರಾದ ಕೆಲವರು ವ್ಯಕ್ತಿ ಮತ್ತು ಸಮಾಜಗಳ ನಡುವೆ ಸಂಘರ್ಷವಿದೆ; ವಿರಸವಿದೆ ಎಂದು ಭಾವಿಸುತ್ತಾರೆ. ಇದರ ಮೂಲ ಪಶ್ಚಿಮದ ದರ್ಶನ ಮತ್ತು ತತ್ತ್ವಗಳಲ್ಲಿರುವ ದ್ವೈತದಲ್ಲಿದೆ. ಪ್ರತಿಯೊಂದು ವಿಚಾರದಲ್ಲೂ ಅವರು ಘರ್ಷಣೆಯನ್ನು ಕಾಣುತ್ತಾರೆ. ಘರ್ಷಣೆಯು ಎರಡು ಪಕ್ಷಗಳಲ್ಲಿ ಮಾತ್ರ ನಡೆಯಬಲ್ಲದು. ವಿವಾಹ, ಪ್ರೇಮಗಳನ್ನೂ ಅವರು ಹಾಗೆಯೇ ನೋಡುತ್ತಾರೆ. ಪತಿ-ಪತ್ನಿಯರಲ್ಲಿ ಒಪ್ಪಂದ ತಪ್ಪಿದರೆ ವಿಚ್ಛೇದವಾಗುತ್ತದೆ; ಅವರ ಪ್ರಕಾರ ಸಂಘರ್ಷವೇ ಸ್ವಾಭಾವಿಕ ಸ್ಥಿತಿ.
ಆದರೆ ಭಾರತದ ದರ್ಶನತತ್ತ್ವವು ಅದ್ವೈತ ಭಾವದ್ದು. ಅಲ್ಲಿ ಎರಡು ಎಂದು ನೋಡುವುದನ್ನು ಇಲ್ಲಿ ಒಂದು ಎಂದು ನೋಡುತ್ತೇವೆ. ಹೊರನೋಟಕ್ಕೆ ಬೇರೆಬೇರೆಯಾದರೂ ಅವು ಒಂದೇ ಅಸ್ತಿತ್ವದ ಅವಿಭಾಜ್ಯ ಅಂಗ; ಅವುಗಳಲ್ಲಿ ಸಂಘರ್ಷ ಇಲ್ಲ. ಆದ್ದರಿಂದಲೇ ಭಾರತದಲ್ಲಿ ಈ ಬಗೆಯ ದ್ವೈತದಿಂದ ದೂರ ಉಳಿದೆವು. ಸಮಷ್ಟಿಯೂ ಒಂದು ಜೀವಂತ ಅಸ್ತಿತ್ವ; ವ್ಯಷ್ಟಿ-ಸಮಷ್ಟಿಗಳೆರಡೂ ಅಭಿನ್ನವೆಂದು ನಾವು ತಿಳಿದೆವು. ಅವುಗಳ ನಡುವೆ ವಿರಸ, ಸಂಘರ್ಷಗಳಿವೆಯೆಂದು ನಾವು ಒಪ್ಪುವುದಿಲ್ಲ… ವ್ಯಕ್ತಿ ಪ್ರಬಲನಾದರೆ ಸಮಾಜ ದುರ್ಬಲವಾದಂತೆ; ಅಥವಾ ಸಮಾಜ ಪ್ರಬಲವಾದರೆ ವ್ಯಕ್ತಿ ದುರ್ಬಲನಾದ ಎಂಬ ವಾದದಿಂದ ಜೀವನದಲ್ಲಿ ಸೂಕ್ತ ಮಾರ್ಗವನ್ನು ಕಂಡುಕೊಳ್ಳುವುದು ಅಸಂಭವ; ಅದನ್ನು ತಳ್ಳಿಹಾಕಿದ ಭಾರತ, ವ್ಯಕ್ತಿಯು ಸ್ವಂತದ ಚಿಂತೆ ಮಾಡುವುದರೊಂದಿಗೆ ಸಮಾಜದ ಚಿಂತೆ ಮಾಡುವುದೇ ಸಂಸ್ಕೃತಿ ಲಕ್ಷಣ; ಅವು ಪರಸ್ಪರ ಪೂರಕ ಎಂದು ಭಾವಿಸಿದೆ.
ವ್ಯಕ್ತಿಯ ವಿಕಾಸ ಹಾಗೂ ಸಮಾಜದ ಪೂರ್ಣತೆಯ ಸಮನ್ವಯ ಭಾವವು ಭಾರತೀಯ ಚಿಂತನ ಪರಂಪರೆಯಿಂದ ಜಗತ್ತಿಗೆ ನೀಡಲಾದ ಕೊಡುಗೆ ಎಂದು ದೀನದಯಾಳ ಉಪಾಧ್ಯಾಯ ತಮ್ಮ ಏಕಾತ್ಮ ಮಾನವ ದರ್ಶನದಲ್ಲಿ ಗುರುತಿಸುತ್ತಾರೆ. ವ್ಯಕ್ತಿ ಮತ್ತು ಸಮಾಜಗಳ ಸಂಬಂಧವು ನಿರಂತರವಾಗಿ ಅವಿಭಾಜ್ಯವಾಗಿ ಕೊಡು-ಕೊಳ್ಳುವಿಕೆಯ ಮೂಲಕ ಸಾಗುತ್ತದೆ. ಈ ಕೊಡುಕೊಳ್ಳುವಿಕೆಯ ಸಂಬಂಧವನ್ನು ಲಾಭ-ನಷ್ಟದ ದೃಷ್ಟಿಯಲ್ಲಿ ನೋಡಲಾಗದು; ಏಕೆಂದರೆ ಅದು ಅಮೂಲ್ಯ.
ಸಮಾಜದಲ್ಲಿ ಪರಸ್ಪರ ಅವಲಂಬನೆ ಅನಿವಾರ್ಯ. ಏಕೆಂದರೆ ತನಗೆ ಬೇಕಾದ ಎಲ್ಲವನ್ನೂ ತಯಾರಿಸಿಕೊಳ್ಳಲು ಒಬ್ಬನಿಗೆ ಅಸಾಧ್ಯ. ಆದರೆ ಈ ಪರಾವಲಂಬನೆಯ ಭಾವವು ಸುಖಕೊಡುವುದಿಲ್ಲ. ಅದಕ್ಕಾಗಿ ಅದನ್ನು ಮೇಲಕ್ಕೆ ಎತ್ತರಿಸಿ ಪರಸ್ಪರ ಅನುಕೂಲತೆ; ಅಲ್ಲಿರುವವರು ಪರಸ್ಪರ ಅನುಕೂಲಿಗಳೆಂದು ತಿಳಿಯಬೇಕೆಂದು ’ಏಕಾತ್ಮ ಮಾನವತೆ’ ವಿವರಿಸುತ್ತದೆ. ಹಾಗೆ ತಿಳಿದಾಗ ಅಲ್ಲಿ ವ್ಯಕ್ತಿಗಳ ಸ್ವಾತಂತ್ರ್ಯ ಸ್ವಾಭಿಮಾನಗಳು ಸುರಕ್ಷಿತವಾಗಿರುತ್ತವೆ. ಪರಸ್ಪರ ಅನುಕೂಲತೆಯಲ್ಲಿ ಸಾಧನೆಯಾಗುವ ಪುರುಷಾರ್ಥ ದೊಡ್ಡದು; ಅದೇ ಸಮಾಜದ ಧಾರಣಾಶಕ್ತಿ. ಅದನ್ನೇ ನಮ್ಮ ಜನ ಧರ್ಮ ಎಂದು ಕರೆದರು. ಅದರಲ್ಲಿ ಕರ್ತವ್ಯದ ಭಾವವೂ ಬರುತ್ತದೆ. ಸಮಾಜದ ಧಾರಣೆಗಾಗಿ ಮಾಡುವ ಕಾರ್ಯವೆಲ್ಲವೂ ಧರ್ಮ; ಅದೇ ಪರಮ ಪುರುಷಾರ್ಥ; ಹೀಗೆ ಪರಸ್ಪರ ಅನುಕೂಲರಾಗಿ ಬಾಳುವುದೇ ಧರ್ಮ. ಅದರಿಂದ ಎಲ್ಲರಿಗೂ ಸಂತೋಷ ದೊರೆಯುತ್ತದೆ. ಅದರಲ್ಲಿ ತಾನು ಇತರರಿಗೆ ಅಧಿಕಾಧಿಕ ಪ್ರಯೋಜನಕಾರಿಯಾಗುವ ಸಾತ್ತ್ವಿಕ ಆಕಾಂಕ್ಷೆಯಿದೆ. ಇದೇ ವಿಶಾಲತೆ; ವಿಶಾಲತೆಯಲ್ಲಿ ಸುಖವಿದೆ.
ಸೃಷ್ಟಿಯ ಸಂಚಾಲನಾ ನಿಯಮಗಳಿಗೆ ಈ ಪರಸ್ಪರಾನುಕೂಲತೆಯೇ ಆಧಾರತತ್ತ್ವವಾಗಿದೆ. ಪ್ರಾಣಿವರ್ಗಕ್ಕೆ ಬೇಕಾದ ಪ್ರಾಣವಾಯುವನ್ನು (ಆಮ್ಲಜನಕ) ಸಸ್ಯವರ್ಗವು ನೀಡಿದರೆ, ಸಸ್ಯವರ್ಗಕ್ಕೆ ಬೇಕಾದ ಅಂಗಾರಾಮ್ಲವನ್ನು ಪ್ರಾಣಿವರ್ಗವು ನೀಡುತ್ತದೆ. ಹೀಗೆ ಸೃಷ್ಟಿ ಸಂಚಾಲನಾ ನಿಯಮಗಳಲ್ಲಿ ಮನುಷ್ಯನು ತಾದಾತ್ಮ್ಯವನ್ನು ಅನುಭವಿಸಬಲ್ಲನಾದರೆ ಆಗ ಸಕಲಸೃಷ್ಟಿಯೂ ತಾನೇ ಎಂಬ ಅನನ್ಯಭಾವವು ಹುಟ್ಟಿ ಆನಂದಾನುಭವಕ್ಕೆ ದಾರಿಯಾಗುತ್ತದೆ. ಅಂಥವರನ್ನು ಋಷಿಗಳು ’ಅಮೃತಸ್ಯ ಪುತ್ರಾಃ’ (ಅಮೃತದ ಮಕ್ಕಳು) ಎಂದು ಕರೆದರು ಯಜ್ಞದ ಅರ್ಥ ಅದೇ. ಯಜ್ಞವೆಂದರೆ ತ್ಯಾಗ. ಇತರರ ಕುರಿತು ತನ್ನ ಕರ್ತವ್ಯ ಏನಿದೆ ಎಂದು ಅದನ್ನು ನಿರ್ವಹಿಸಲು ಪ್ರಯತ್ನಶೀಲನಾಗುವುದೇ ಯಜ್ಞ, ಪರಸ್ಪರಾನುಕೂಲತೆಗೆ ಆಧಾರ ಸಹ ತ್ಯಾಗವೇ.
ಪಶ್ಚಿಮದ ಸಮಾಜರಚನೆಯ ಆಧಾರತತ್ತ್ವಗಳೆಂದರೆ ಮುಖ್ಯವಾಗಿ ಸ್ಪರ್ಧೆ ಮತ್ತು ವಿರೋಧ. ಸ್ವಾರ್ಥಪೂರ್ಣ ಸಂಘರ್ಷವನ್ನೇ ಮಾನವನ ಮೂಲಪ್ರವೃತ್ತಿಯನ್ನಾಗಿ ಪರಿಗಣಿಸಿ ಅವನ ಸುತ್ತ ನಾಲ್ಕು ಕಡೆಗಳಲ್ಲೂ ಕೊನೆಯೇ ಇಲ್ಲದ ಪ್ರತಿಸ್ಪರ್ಧೆಯನ್ನು ಹುಟ್ಟಿಸಿ, ಬೆಳೆಸಿ ಅದನ್ನೇ ಪ್ರಗತಿಯ ಮಾನದಂಡವಾಗಿ ಮಾಡಿದ್ದನ್ನು ನಾವಿಂದು ಕಾಣುತ್ತೇವೆ. ಪ್ರತಿ ಸ್ತರದಲ್ಲಿಯೂ ನಿರಂತರವಾಗಿ ಸಾಗುವ ಸಂಘರ್ಷವೇ ಪಾಶ್ಚಾತ್ಯ ಜೀವನದರ್ಶನದ ಅಡಿಪಾಯ. ಆದ್ದರಿಂದ ಅಲ್ಲಿ ಪರಸ್ಪಾರನುಕೂಲದ ಮಾತನ್ನೇ ಎತ್ತುವಂತಿಲ್ಲ. ಸಂಘರ್ಷದಲ್ಲಿ ಯಾರು ಎಷ್ಟರಮಟ್ಟಿಗೆ ಶಕ್ತರೋ ಅಷ್ಟರಮಟ್ಟಿಗೆ ಮಾತ್ರ ಜೀವಂತರಾಗಿರಲು ಅರ್ಹರು; ಹಿಂದಿನ ಭಾರತದಲ್ಲಿ ಅಂತಹ ಸ್ಥಿತಿ ಇರಲೇ ಇಲ್ಲ.
’ರಾಷ್ಟ್ರೀಯತೆ, ಸಾಂಸ್ಕೃತಿಕ ಸ್ವಾತಂತ್ರ್ಯ’ ಎನ್ನುವ ಅಧ್ಯಾಯದಲ್ಲಿ ಲೇಖಕರು, ಕೆಲವು ಪಂಡಿತರು ಆತ್ಮವೇ ವಿಶ್ವಕ್ಕೆ ಆದಿಕಾರಣವೆಂದೂ, ಅದೇ ಸೃಷ್ಟಿ-ಸ್ಥಿತಿ-ಲಯಗಳ ಕರ್ತೃವೆಂದೂ, ಸರ್ವಶಕ್ತ ಸರ್ವವ್ಯಾಪಿ ಪರಮೇಶ್ವರನೆಂದೂ ಭಾವಿಸುತ್ತಾರೆ. ಅವರ ಪ್ರಕಾರ, ವಿಶ್ವವನ್ನು ನಡೆಸುವ ಏಕೈಕ ಶಕ್ತಿ ಆತ್ಮನೇ. ಪ್ರತಿಯೊಂದು ಪ್ರಾಣಿ ಅದರತ್ತ ಓಡಲು, ಅದರೊಂದಿಗೆ ಲೀವಾಗಲು ಬಯಸುತ್ತಿದೆ. ಮಾನವನ ಸಕಲ ಪ್ರಯತ್ನಗಳು ಪರಬ್ರಹ್ಮ ಸಾಕ್ಷಾತ್ಕಾರದ ಗುರಿಯನ್ನು ಹೊಂದಿವೆ. ಮಾನವನಲ್ಲಿರುವ ಏಕತೆಯ ಅನುಭೂತಿ ಮತ್ತು ತನ್ನ ಜೀವನವನ್ನು ಸುಖಮಯಗೊಳಿಸುವ ಆಕಾಂಕ್ಷೆಗಳ ಪ್ರೇರಕ ಶಕ್ತಿ ದೃಶ್ಯ ಜಗತ್ತಿನಿಂದ ಬೇರೆ ಯಾವುದೋ ಸೂಕ್ಷ್ಮತತ್ತ್ವ ಎಂಬುದು ಮನವರಿಕೆಯಾಗುತ್ತದೆ. ಆ ಸೂಕ್ಷ್ಮತತ್ತ್ವವು ಪ್ರತಿಯೊಂದು ಪ್ರಾಣಿಯ ಅಂತಃಕರಣದಲ್ಲಿ ಸಂಪೂರ್ಣತೆ ಮತ್ತು ಏಕಾತ್ಮತೆಯ ಭಾವನೆಯನ್ನು ಸ್ಫುರಣಗೊಳಿಸುತ್ತದೆ. ಆ ಸೂಕ್ಷ್ಮತತ್ತ್ವವನ್ನು ನಾವು ಯಾವುದೇ ಹೆಸರಿನಿಂದ ಕರೆಯಲಿ, ಪ್ರತಿಯೊಬ್ಬ ಮಾನವನೂ ಅದರತ್ತ ಚಲಿಸುತ್ತಿರುವೆನೆಂಬುದೂ, ಮಾನವತೆಯ ಕಲ್ಯಾಣವೆಂಬುದು ಯಾವುದೇ ತೆರನಾದ ಸ್ವಾರ್ಥದ ಪರಿಣಾಮವಾಗಿರದೆ, ಆತ್ಮಾನುಭೂತಿಯ ಆಕಾಂಕ್ಷೆಯ ಪರಿಣಾಮ ಮಾತ್ರವೇ ಆಗಿದೆ ಎಂಬುದೂ ನಿಶ್ಚಯ ಎಂದು ಹೇಳುತ್ತಾರೆ; ಆ ಮೂಲಕ ಆತ್ಮ ಮತ್ತು ಮಾನವತೆಗಳನ್ನು ಬೆಸೆಯುತ್ತಾರೆ.
ರಾಷ್ಟ್ರದ ಮೂಲತತ್ತ್ವ ಅಥವಾ ಜೀವಾಳವನ್ನು ’ಚಿತಿ’ ಎನ್ನುತ್ತಾರೆ. ರಾಮಾಯಣ, ಮಹಾಭಾರತಗಳಲ್ಲಿ ಭಾರತದ ರಾಷ್ಟ್ರೀಯ ಮನಸ್ಸು ಅದ್ಭುತ ರೀತಿಯಲ್ಲಿ ಏಕತೆಯನ್ನು ಪ್ರಕಟಪಡಿಸುತ್ತವೆ. ಆತ್ಮ-ಪರಮಾತ್ಮ ಸಂಬಂಧವು ಮಾನವಜೀವನದ ಗುರಿಯಾಗಿದ್ದು, ಅದನ್ನು ಸಾಧಿಸಲು ಶ್ರೇಷ್ಠಗುಣಗಳನ್ನು ಬೆಳೆಸಿಕೊಳ್ಳಬೇಕು. ಹಾಗೆ ಬೆಳೆಸಿಕೊಂಡು ಚರಿತಾರ್ಥವಾಗಿ ಬಾಳಿದ ಪುರುಷರು ಸಮಾನ ಶ್ರದ್ಧೆ ಹಾಗೂ ಆದರಕ್ಕೆ ಪಾತ್ರರಾಗಿದ್ದಾರೆ. ಹೀಗೆ ಹಲವು ವಿಚಾರಗಳಲ್ಲಿ ದೇಶದ ವಿವಿಧ ಭಾಷೆಗಳಲ್ಲಿ ದೊರೆಯುವ ಗ್ರಂಥಗಳಲ್ಲಿ ಒಂದು ಏಕಧಾರೆಯ ಚಿಂತನೆ, ಸಮಾನದೃಷ್ಟಿಕೋನ ಮತ್ತು ಮೌಲ್ಯಗಳನ್ನು ಕಾಣುತ್ತೇವೆ ಎನ್ನುವ ಪುಸ್ತಕ, ಚಿತಿಯನ್ನು ರಾಷ್ಟ್ರದ ಆತ್ಮವಾಗಿ ಮತ್ತು ವಿರಾಟನ್ನು (ಅನಿಷ್ಟಗಳಿಮದ ತನ್ನನ್ನು ಕಾಪಾಡಿಕೊಳ್ಳುವ ಶಕ್ತಿ) ರಾಷ್ಟ್ರದ ಪ್ರಾಣವಾಗಿ ಪರಿಗಣಿಸಬಹುದು ಎಂದು ತಿಳಿಸುತ್ತದೆ.
ನಮ್ಮ ರಾಷ್ಟ್ರದ ಮೂಲಪ್ರಕೃತಿ ಅಧ್ಯಾತ್ಮ ಪ್ರಧಾನವಾದದ್ದು. ದೊಡ್ಡ ಚಕ್ರವರ್ತಿಗಳಿಗೂ ಶ್ರೀಮಂತರಿಗೂ ಸಿಕ್ಕಿದ ಮನ್ನಣೆಗಿಂತ ಹೆಚ್ಚಿನ ಮನ್ನಣೆ ಋಷಿ, ಮುನಿ, ಗುರು, ಸಂತರಿಗಿತ್ತು. ಇವರ ಮುಂದೆ ದೊಡ್ಡ ರಾಜಕರು ನತಮಸ್ತಕರಾಗುತ್ತಿದ್ದರು. ನಮ್ಮ ರಾಷ್ಟ್ರಜೀವನದ ಪ್ರವಾಸವು ಸಹಸ್ರಾರು ವರ್ಷಗಳಿಂದ ಹರಿಯುತ್ತಿದ್ದು, ಅದರಲ್ಲಿ ಅನೇಕ ವಿಧವಾದ ಧಾರೆಗಳು ಬಂದು ಸೇರಿವೆ. ರಾಷ್ಟ್ರಜೀವನವು ವಿಸ್ತಾರವಾದ ಭೂಭಾಗಕ್ಕೆ ವ್ಯಾಪಿಸಿದ್ದು, ಅದರಿಂದಾಗಿ ಇಲ್ಲಿ ಭಾರೀ ವೈವಿಧ್ಯವನ್ನು ಕಾಣಬಹುದು. ಈ ವಿವಿಧತೆಯನ್ನು ವಿಶಿಷ್ಟ ಮಾಧ್ಯಮದ ಮೂಲಕ ಸಮನ್ವಯಗೊಳಿಸಬಹುದು. ಜೀವನದ ಕಡೆಗೆ ಆಧ್ಯಾತ್ಮಿಕ ದೃಷ್ಟಿಯನ್ನು ತಳೆಯುವುದೇ ಈ ಸಮನ್ವಯದ ಮಾಧ್ಯಮ ಎನ್ನುವ ದೀನದಯಾಳರು, ಸಮನ್ವಯ ಭಾವ ಪುಷ್ಟಿಗೊಳ್ಳಲು ಸಹಿಷ್ಣುತೆಯೇ ಆಧಾರ; ಮತ್ತು ಸಹಿಷ್ಣುತೆ ಭಾರತೀಯ ಸಂಸ್ಕೃತಿಯ ವಿಶೇಷಗುಣ ಎಂದು ವಿವರಿಸುತ್ತಾರೆ.
ಮೊದಲು ಮಾನವತೆ, ಅನಂತರ ದೇಶವೆಂದು ಕೆಲವರು ಹೇಳುತ್ತಾರೆ. ಆದರೆ ಅವರು ತಿಳಿಯದ ವಿಚಾರವೆಂದರೆ, ದೇಶಭಕ್ತಿ ಮತ್ತು ಮಾನವತೆಗಳು ಪರಸ್ಪರ ವಿರೋಧಿ ಭಾವನೆಗಳಲ್ಲ. ಮಾನವತೆಯ ಸೇವೆ ಮಾಡಲು ದೇಶಭಕ್ತಿ ಮೊದಲ ಮೆಟ್ಟಿಲು ಎಂದು ಪುಸ್ತಕ ನಿರ್ದೇಶಿಸುತ್ತದೆ. ಸಕ್ಕರೆ ಗೊಂಬೆಯನ್ನು ಯಾವ ಕಡೆಯಿಂದ ಕಚ್ಚಿದರೂ ಬಾಯಿ ಸಿಹಿಯಾಗುವುದಲ್ಲದೆ ಬೇರೇನೂ ಅಲ್ಲ. ಈ ಪುಟ್ಟ ಪುಸ್ತಕ ಅದೇ ರೀತಿ ಇದೆ ಎಂದು ಧಾರಾಳವಾಗಿ ಹೇಳಬಹುದು; ಪಂ. ದೀನದಯಾಳ ಉಪಾಧ್ಯಾಯರ ವಿಚಾರಧಾರೆ ಇನ್ನೂ ವಿಶಾಲವಾದದ್ದು.