ಪುಸ್ತಕದ ಪರಿಚಯವನ್ನು 8-10 ನಿಮಿಷದ ವಿಡಿಯೋಗಳ ಮೂಲಕ ಫೇಸ್ಬುಕ್ ಮತ್ತು ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಒದಗುವಂತೆ ಮಾಡುವ ಪ್ರಯತ್ನವಾಗಿ ಸುಕೃತಿ ಪುಸ್ತಕ ಪರಿಚಯ ಅರಳಿಕೊಂಡಿತು. ಸಹೃದಯಿ ಓದುಗರ ತಂಡವನ್ನೊದು ರೂಪಿಸಿಕೊಂಡು ಒಂದೊಂದೇ ಪುಸ್ತಕದ ಪರಿಚಯಾತ್ಮಕ ವಿಡಿಯೋವನ್ನು ಪ್ರಚುರಪಡಿಸುವ ಈ ಪ್ರಯತ್ನ ನಡೆಯಿತು, ಇನ್ನೂ ಮಹಾನ್ ತಪವಿದೆಂಬಂತೆ ನಡೆಯುತ್ತಲೇ ಇದೆ. ಸುಕೃತಿಯ ಜನುಮದಿನ ಏಪ್ರಿಲ್ 14! 65 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಓದಿದ್ದಾರೆನ್ನಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದೇ ಸುಕೃತಿಯೂ ಆಕೃತಿ ತಳೆದದ್ದು ಇದರ ಸಾಧ್ಯತೆಯನ್ನು ಹೆಚ್ಚಿಸಿದೆ, ನಿರೀಕ್ಷೆಗಳ ಸವಾಲನ್ನೂ ಹೆಚ್ಚಿಸಿದೆ.
ಕೊರೋನಾ ಲಾಕ್ಡೌನ್ ಅವಧಿ ಹತ್ತು ಹಲವು ಬಗೆಯಲ್ಲಿ ಸವಾಲುಗಳನ್ನು ತಂದೊಡ್ಡಿತು. ಎಷ್ಟೋ ಮಂದಿಯ ಅನ್ನದ ಬಟ್ಟಲನ್ನೇ ಅಪಹರಿಸಿದರೂ ಉಸಿರನ್ನು ಕಸಿದರೂ ಬದುಕು ತನ್ನ ಪಾಡಿಗೆ ತಾನು ನಿರಂತರವಾಗಿ ಹರಿಯುತ್ತಲೇ ಇತ್ತು, ಇದೆ. ಅನಿರೀಕ್ಷಿತವಾಗಿ ಎದುರಾದ ಭಯದ ಸನ್ನಿವೇಶವನ್ನು ಅವಕಾಶಗಳನ್ನಾಗಿ ಬದಲಿಸಿಕೊಂಡು ತಮ್ಮೊಳಗಿನ ಪ್ರತಿಭೆಯನ್ನು ಬೆಳಗಿದವರು ಅನೇಕ ಮಂದಿ. ಕೇವಲ ತಾವಷ್ಟೇ ಅಲ್ಲದೇ ತಮ್ಮಂಥ ಸಮಾನಮನಸ್ಕರನ್ನು ಕೂಡಿಕೊಂಡು ಸುತ್ತಲಿನ ಮಂದಿಗೆ ನೆರವಾಗುವಂಥ ಪ್ರಯತ್ನಗಳಲ್ಲಿ ತೊಡಗಿಸಿಕೊಂಡವರೂ ಅನೇಕರು. ಸಿನೆಮಾಸಕ್ತರು ಇಲ್ಲಿಯವರೆಗೆ ಬಂದ ಅತ್ಯುತ್ತಮ ಚಿತ್ರಗಳ ಸಂಗ್ರಹವನ್ನು ಹಂಚಿಕೊಂಡರೆ, ವಿವಿಧ ಕಲೆಗಳಲ್ಲಿ ತೊಡಗಿಸಿಕೊಂಡವರು ಆಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರ ವಿಡಿಯೋಗಳನ್ನು ಆಡಿಯೋಗಳನ್ನೂ ಹಂಚಿಕೊಂಡರು. ಇನ್ನೂ ಹಲವರು ಓದಲೇಬೇಕಾದ ಪುಸ್ತಕಗಳ ಪಟ್ಟಿಯನ್ನು ಸಾಲುಸಾಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ಇದೇ ಸಾಲಿಗೆ ಸೇರಬಹುದಾದ ಬಹುದೊಡ್ಡ ಪ್ರಯತ್ನವೆಂದರೆ ‘ಸುಕೃತಿ’ ಪುಸ್ತಕ ಪರಿಚಯ.
ಕನ್ನಡದಲ್ಲೇ ಆದರೂ ಲಕ್ಷಾಂತರ ಪುಸ್ತಕಗಳಿರಬಹುದು. ಪ್ರತೀದಿನವೂ ನೂರಾರು ಪುಸ್ತಕಗಳು ಪ್ರಕಟಗೊಳ್ಳುತ್ತಲೂ ಇರಬಹುದು. ಆದರೆ ಓದುವುದು ಯಾವುದನ್ನು ಎಂಬ ಗೊಂದಲ ಅನೇಕರಿಗೆ ಇರಬಹುದು. ಅಥವಾ ಹೊಸದಾಗಿ ಓದಿನಲ್ಲಿ ತೊಡಗಿಸಿಕೊಳ್ಳಬಯಸುವವರಿಗೆ ತಮ್ಮ ಪಥ ಎಲ್ಲಿಂದ ಎಂಬ ಸಂದಿಗ್ಧತೆ ಇರಬಹುದು. ಎಲ್ಲರೂ ಎಲ್ಲ ಪುಸ್ತಕಗಳನ್ನು ಓದಲು ಸಾಧ್ಯವಿಲ್ಲ ಎಂಬುದೇನೋ ನಿಜವೇ. ಕೆಲವು ಪುಸ್ತಕಗಳನ್ನು ಪುಟತಿರುವಿ ಹಾಕುವಷ್ಟು ವ್ಯವಧಾನವೂ ಇಲ್ಲದಂಥ ಒತ್ತಡದಲ್ಲಿ ಓದಿನ ಆಸಕ್ತಿಯೇ ಕಳೆದುಹೋಗುವ ಭಯವೂ ಇದೆ. ಹೀಗಿರುವಾಗ ಓದಲೇಬೇಕಾದ ಪುಸ್ತಕಗಳನ್ನು ಸಣ್ಣದಾಗಿ ಯಾರಾದರೂ ಪರಿಚಯಿಸಿದರೂ ಸಹಜವಾಗಿಯೇ ಆ ಪುಸ್ತಕಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ ಎಂಬ ಉದ್ದೇಶದಿಂದ ತೊಡಗಿದ ಪ್ರಯತ್ನವಿದು.
ಒಂದು ಪುಸ್ತಕದ ಪರಿಚಯವನ್ನು 8-10 ನಿಮಿಷದ ವಿಡಿಯೋಗಳ ಮೂಲಕ ಫೇಸ್ಬುಕ್ ಮತ್ತು ಯುಟೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಒದಗುವಂತೆ ಮಾಡುವ ಪ್ರಯತ್ನವಾಗಿ ಸುಕೃತಿ ಪುಸ್ತಕ ಪರಿಚಯ ಅರಳಿಕೊಂಡಿತು. ಸಹೃದಯಿ ಓದುಗರ ತಂಡವೊಂದನ್ನು ರೂಪಿಸಿಕೊಂಡು ಒಂದೊಂದೇ ಪುಸ್ತಕದ ಪರಿಚಯಾತ್ಮಕ ವಿಡಿಯೋವನ್ನು ಪ್ರಚುರಪಡಿಸುವ ಈ ಪ್ರಯತ್ನ ನಡೆಯಿತು, ಇನ್ನೂ ಮಹಾನ್ ತಪವಿದೆಂಬಂತೆ ನಡೆಯುತ್ತಲೇ ಇದೆ. ಸುಕೃತಿಯ ಜನುಮದಿನ ಏಪ್ರಿಲ್ 14! 65 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಓದಿದ್ದಾರೆನ್ನಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದೇ ಸುಕೃತಿಯೂ ಆಕೃತಿ ತಳೆದದ್ದು ಇದರ ಸಾಧ್ಯತೆಯನ್ನು ಹೆಚ್ಚಿಸಿದೆ, ನಿರೀಕ್ಷೆಗಳ ಸವಾಲನ್ನೂ ಹೆಚ್ಚಿಸಿದೆ. ಇಂತಹ ಪ್ರಯತ್ನಗಳನ್ನು ಗಮನಿಸಿದರೆ ಸಾಮಾನ್ಯವಾಗಿ ಆರಂಭದಲ್ಲಿ ಎಲ್ಲವೂ ಚಂದ ಎಂಬAತೆ ಬಳಿಕ ಸೊರಗಿ, ದಣಿದು ನಿಂತೇಹೋಗುತ್ತವೆ. ಆದರೆ ಸುಕೃತಿ ಹಾಗಾಗಲಿಲ್ಲ ಎಂಬುದೇ ಅದರ ವೈಶಿಷ್ಟ್ಯ. ಒಳ್ಳೆಯದನ್ನು ಉಚಿತವಾಗಿಯೇ ಒದಗಿಸುತ್ತೇವೆ ಎನ್ನುವಾಗ ಅದನ್ನು ಗ್ರಹಿಸುವವರು, ಸ್ವೀಕರಿಸುವವರು ಬಂದೇ ಬರುತ್ತಾರೆ.
2020ರಿಂದ ಮೊದಲ್ಗೊಂಡಂತೆ ಅನೇಕ ಸರಣಿಗಳನ್ನೂ ಸುಕೃತಿ ನಡೆಸಿಕೊಟ್ಟಿದೆ. ಸ್ವಾತಂತ್ರ್ಯವೀರ ಸಾವರ್ಕರ್ ಜನ್ಮದಿನದ ಸಂದರ್ಭದಲ್ಲಿ ಸಾವರ್ಕರ್ ಸರಣಿ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಸರಣಿ, ನವೆಂಬರ್ ತಿಂಗಳಿನಲ್ಲಿ ಪ್ರತಿನಿತ್ಯ ಕನ್ನಡದ ಆಯ್ದ ಎರಡು ಪುಸ್ತಕಗಳ ಪರಿಚಯ, ಜನವರಿ ತಿಂಗಳಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ವಿವೇಕಾನಂದರಿಗೆ ಸಂಬಂಧಿಸಿದ 16 ಪುಸ್ತಕಗಳ ಪರಿಚಯ, ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ 24 ಕೃತಿಗಳ ಪರಿಚಯ, 2022ರ ಜನವರಿಯಲ್ಲಿ ನೇತಾಜಿ ಸುಭಾಶಚಂದ್ರ ಬೋಸರ ಜನ್ಮದಿನದಿಂದ ಪ್ರಾರಂಭಿಸಿ ಆಗಸ್ಟ್ 15ರವರೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ 30 ಪುಸ್ತಕಗಳ ಪರಿಚಯ – ಹೀಗೆ ವೈವಿಧ್ಯಮಯವಾದ ಕೃತಿಪರಿಚಯ ಸರಣಿ ಪುಸ್ತಕಾಸಕ್ತರಿಗೆ ಸ್ವಾದಿಷ್ಟ ಭೋಜನವನ್ನುಣಿಸುತ್ತಿದೆ.
ಕೃತಿಗಳನ್ನು ಪರಿಚಯಿಸಿದವರಲ್ಲಿ ಹಿರಿಯರಾದ ಶತಾವಧಾನಿ ಆರ್. ಗಣೇಶ್, ಹಿರೇಮಗಳೂರು ಕಣ್ಣನ್, ಮಾಳವಿಕಾ ಅವಿನಾಶ್, ಬಿ.ವಿ. ವಸಂತಕುಮಾರ್, ಅಜಕ್ಕಳ ಗಿರೀಶ ಭಟ್, ದಿವಾಕರ ಹೆಗಡೆ, ಡಾ. ನಾ. ಸೋಮೇಶ್ವರ ಮೊದಲಾದವರು ಇದ್ದಾರೆ. ಈ ಪ್ರಯತ್ನ ಮುಂದುವರಿಯುತ್ತಾ ಅನೇಕಮಂದಿ ಸಾಹಿತ್ಯಾಸಕ್ತರು ಕೈಜೋಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳೂ ಈ ನಿಟ್ಟಿನಲ್ಲಿ ತೊಡಗಿಸಿಕೊಂಡದ್ದು ಸುಕೃತಿಯ ಸಾಧ್ಯತೆಗಳನ್ನು ವಿಸ್ತರಿಸಿದೆ. ಇಲ್ಲಿಯವರೆಗೆ ಬೆಳಕಿಗೆ ಬರದೇ ಇದ್ದ ಅನೇಕ ಪುಸ್ತಕಗಳು ಈ ಮಾಲಿಕೆಯ ನೆವನದಿಂದ ಪರಿಚಯಿಸಲ್ಪಟ್ಟಿವೆ. ಪಂಪನ ವಿಕ್ರಮಾರ್ಜುನ ವಿಜಯದಿಂದ ತೊಡಗಿ, ಇತ್ತೀಚೆಗೆ ಪ್ರಕಟಗೊಂಡವುಗಳಲ್ಲಿ ಉತ್ತಮವಾದುವನ್ನು ಆಯ್ಕೆ ಮಾಡಿ ಪರಿಚಯಿಸಲಾಗಿದೆ. ಒಟ್ಟಿನಲ್ಲಿ ಇಲ್ಲಿಯವರೆಗೆ 315 ಕೃತಿಗಳನ್ನು ಪರಿಚಯಿಸಲಾಗಿದೆ. ಬಿಂದುವಿನೊಂದಿಗೆ ತೊಡಗಿದ್ದು ಸಿಂಧುವಾಗುವತ್ತ ಸಾಗಿರುವುದು ಕನ್ನಡದ ಕಾಯಕ ನಿರಂತರವಾಗಿರುವುದಕ್ಕೆ ಸಾಕ್ಷಿ. ಜೊತೆಗೆ ಇದರಲ್ಲಿ ವಿಡಿಯೋ ಮಾಡಿ ಒದಗಿಸಿಕೊಟ್ಟವರೆಲ್ಲರೂ ಕನ್ನಡದ ಯೋಧರೇ. ಸ್ವಯಂ-ಆಸಕ್ತಿಯಿಂದ, ಇದು ಕನ್ನಡಸೇವೆಯೆಂಬ ಪ್ರೀತಿಯಿಂದ ಪ್ರಮೋದ್ ಅವರೊಂದಿಗೆ ಜೊತೆಗೂಡಿಕೊಂಡಿರುವವರು ವಿನಾ ಸಂಭಾವನೆಗಾಗಿ ಕಾಣಿಸಿಕೊಂಡವರಲ್ಲ.
ಸಾಧಿಸಿರುವುದು ಹಿಡಿಯಷ್ಟು, ಸಾಧಿಸಬೇಕಿರುವುದು ಕಡಲಿನಷ್ಟು ಎಂಬ ಎಚ್ಚರಿಕೆಯಲ್ಲಿ ಪ್ರಮೋದ್ ಅವರ ನಾಯಕತ್ವದ ತಂಡ ಮುಂದುವರಿಯುತ್ತಿದೆ. ಅವರ ಪ್ರಯತ್ನಗಳು ಫಲಿಸಲಿ. ಕನ್ನಡದಲ್ಲಿ ಬಂದಿರಬಹುದಾದ ಅದೆಷ್ಟೋ ಪುಸ್ತಕಗಳು ಇಂದು ಯುವಜನರನ್ನು ತಲಪುತ್ತಿಲ್ಲ ಎಂಬ ವಿಷಾದಕ್ಕೆ ಮುಕ್ತಾಯ ಹಾಡುವಲ್ಲಿ ಈ ಪರಿಚಯ ಸರಣಿ ಮುಖ್ಯಪಾತ್ರ ವಹಿಸುತ್ತದೆ. ಓದಿನ ಹವ್ಯಾಸವಿರುವ ಮಕ್ಕಳಿಗೆ ಸೂಕ್ತವಾದ ಪುಸ್ತಕಗಳ ಆಯ್ಕೆಗೂ ಒಂದು ಮಾರ್ಗದರ್ಶನ ಬೇಕಾಗಿರುತ್ತದೆ. ಯಾವ ರೀತಿಯ ಪುಸ್ತಕಗಳನ್ನು ಓದಬೇಕು ಎಂಬ ಸಣ್ಣ ಸೂಕ್ಷ್ಮದತ್ತಲೂ ಗಮನ ಹರಿಸಬೇಕಾಗುತ್ತದೆ. ಮೊದಲಿದ್ದಂತೆ ಇಂದು ಶಾಲಾಕಾಲೇಜುಗಳಲ್ಲಿ ಗ್ರಂಥಾಲಯ ಇದ್ದೇ ಇದ್ದೀತು ಎಂಬಂತಿಲ್ಲ. ಈ ತೊಡಕನ್ನು ಗಮನದಲ್ಲಿಟ್ಟುಕೊಂಡರೆ ಸುಕೃತಿ ಕೇವಲ ಓದಿನ ಹವ್ಯಾಸವನ್ನು ಜಾಗೃತಗೊಳಿಸುತ್ತಿರುವುದಲ್ಲ, ಸಾಹಿತ್ಯದ ಸೊಡರನ್ನು ತನ್ಮೂಲಕ ಮನೆಮನೆಗೂ ಎದೆಎದೆಗೂ ತಲಪಿಸುವ ಪ್ರಯತ್ನ ಮಾಡುತ್ತಿದೆ ಎಂಬುದು ಶ್ಲಾಘನೀಯ ಹೆಜ್ಜೆ.
ಆಸಕ್ತರು ಭೇಟಿ ನೀಡಿ:
1. www.youtube.com/@sukruthi
2. www.facebook.com/profile.php?id=100063672020584