ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ ಅರ್ಥಗರ್ಭಿತ ಚಿತ್ರಗಳ ಆಕರ್ಷಣೆ ಹಾಗಿತ್ತು. ಜೊತೆಗೆ ನೈತಿಕತೆಯನ್ನು ಮನಸ್ಸಿನಲ್ಲಿ ತುಂಬುವ, ಬಿತ್ತುವ ಕಥೆಗಳು. ಈಗ ಇದು ಪ್ರಕಟವಾಗುತ್ತಿಲ್ಲ. ಆದರೆ ಚಿಂತೆ ಬೇಡ.
ಚಂದಮಾಮಾ ಮಾಸಪತ್ರಿಕೆ ೧೯೪೭ರಿಂದ ಹಿಡಿದು ೬೬ ವರ್ಷ ಪ್ರಕಟವಾಗಿದೆ. ಬಳಿಕ ಕಾರಣಾಂತರಗಳಿಂದ ನಿಂತುಹೋಯಿತು. ಈಗ ಆ ಹಳೆಯ ಸಂಚಿಕೆಗಳಲ್ಲಿ ಪ್ರಕಟವಾದ ಆಯ್ದ ಕಥೆ ಮತ್ತು ಅದಕ್ಕೆ ಒಪ್ಪುವ ಅಂಥದ್ದೇ ಚಿತ್ರಗಳೊಂದಿಗೆ ದೊಡ್ಡ ಗಾತ್ರದಲ್ಲಿ ಸಂಗ್ರಹರೂಪದಲ್ಲಿ ಪ್ರಕಟವಾಗತೊಡಗಿದೆ. ಕನ್ನಡದಲ್ಲಿ ಈಗಾಗಲೇ ಮೂರು ಸಂಚಿಕೆಗಳು ಬಂದಿವೆ. ಇಂಗ್ಲಿಷ್, ತೆಲುಗು ಮತ್ತು ಇತರೆ ಭಾಷೆಗಳಲ್ಲೂ ಈ ಸಂಗ್ರಹಯೋಗ್ಯ ಸಂಚಿಕೆಗಳು ಪ್ರಕಟವಾಗಿದ್ದು, ಮಾರುಕಟ್ಟೆಯ ಆಯ್ದ ಕೆಲವು ಅಂಗಡಿಗಳಲ್ಲಿ ಲಭ್ಯ ಇವೆ.
ಅನೇಕ ಖ್ಯಾತನಾಮರ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಚಂದಮಾಮಾ ಸಂಗ್ರಹಯೋಗ್ಯ ಪುಸ್ತಕಗಳನ್ನು ಕುರಿತ ಟಿಪ್ಪಣಿಗಳು ಇವೆ. ಚಂದಮಾಮಾ ಕಥೆಗಳ ಕುರಿತ ಕ್ರೇಜ್ ಕಡಮೆ ಆಗಿಲ್ಲ ಎಂಬುದಕ್ಕೆ ಇದು ನಿದರ್ಶನ. ಸದ್ಯ ಚಂದಮಾಮಾ ಕಥೆಗಳು ೧, ೨, ೩ ಮತ್ತು ೪ ಓದುಗವಲಯದಲ್ಲಿ ಸದ್ದು ಮಾಡುತ್ತಿವೆ.
ಮಕ್ಕಳಿಗೆ, ಹಿರಿಯರಿಗೆ, ಎಲ್ಲರಿಗೂ ವಿಜ್ಞಾನ, ವಿನೋದವನ್ನು ಕೊಡುವ ಚಂದಮಾಮಾ ಕಥೆಗಳು-೧ ಮತ್ತು ಚಂದಮಾಮಾ ಕಥೆಗಳು-೨ ೧೯೭೦ ಮತ್ತು ೨೦೧೨ರ ನಡುವೆ ಪ್ರಕಟವಾದ ಕಥೆಗಳನ್ನು ಸಂಗ್ರಹಿಸಿ ಚಿತ್ರಗಳೊಂದಿಗೆ ಮತ್ತೆ ಓದುಗರಿಗೆ ಕೊಡುವ ಪ್ರಯತ್ನವನ್ನು ಈ ಪುಸ್ತಕಗಳು ಮಾಡುತ್ತಿವೆ. ಬೆಂಗಳೂರಿನ ಕಾಟನ್ಪೇಟೆಯ ಹೇಮಂತ ಸಾಹಿತ್ಯ ಇವುಗಳನ್ನು ಪ್ರಕಟಿಸಿದೆ. ಶಕ್ತಿದಾಸ್ ಅವರು ಚಿತ್ರ ರಚಿಸಿದ್ದಾರೆ. ವಸುಂಧರ ಅವರು ಬರೆದ ತೆಲುಗು ಕಥೆಗಳನ್ನು ಕನ್ನಡಕ್ಕೆ ಡಾ. ರಾಜೇಶ್ವರಿ ಕೆ.ವಿ. ಅವರು ಅನುವಾದಿಸಿಕೊಟ್ಟಿದ್ದಾರೆ.
ಚಂದಮಾಮಾ ಕಥೆಗಳು-೧ ಪುಸ್ತಕ ೨೦೨೧ರ ನವೆಂಬರ್ನಲ್ಲಿ ಪ್ರಕಟವಾಗಿದೆ. ಇದರಲ್ಲಿ ೫೧ ಕಥೆಗಳಿವೆ. ಪುಸ್ತಕದ ಮುಖಪುಟದಲ್ಲಿ ಹಳೆಯ ಚಂದಮಾಮದ ಚಿತ್ರಗಳನ್ನು ಹೋಲುವ ಚಿತ್ರವಿದೆ. ಕೆ.ವಿ. ರಾಜೇಶ್ವರಿ ಅವರು ಈ ಪುಸ್ತಕದ ಮೊದಲ ಮಾತಿನಲ್ಲಿ, ಚಂದಮಾಮಾ ಮಕ್ಕಳ ಮಾಸಪತ್ರಿಕೆ ೧೯೪೭ರಲ್ಲಿ ಪ್ರಾರಂಭವಾಗಿ ೬೬ ವರ್ಷ ಮಕ್ಕಳನ್ನು ರಂಜಿಸಿ ೨೦೧೩ರಲ್ಲಿ ನಿಂತುಹೋಗಿರುವುದನ್ನು ಪ್ರಸ್ತಾವಿಸಿದ್ದಾರೆ. ಅಲ್ಲದೆ, ಅಂದು ಮಕ್ಕಳನ್ನು ರಂಜಿಸಿದ ಕಥೆಗಳ ಪೈಕಿ ಕೆಲವನ್ನು ಆಯ್ದು ಈ ಪುಸ್ತಕ ರೂಪಿಸಲಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.
ಇದೇ ರೀತಿ, ಚಂದಮಾಮಾ ಕಥೆಗಳು-೨ ಮತ್ತು ಚಂದಮಾಮಾ ಕಥೆಗಳು-೩ ಕೂಡ ಅದೇ ಅವಧಿಯ (೧೯೭೦-೨೦೧೨ರ ನಡುವೆ ಪ್ರಕಟವಾದ) ಆಯ್ದ ಕಥೆಗಳ ಸಂಗ್ರಹ ಪುಸ್ತಕ. ಇದು ೨೦೨೨ರಲ್ಲಿ ಮುದ್ರಣ ಕಂಡಿದೆ. ಚಂದಮಾಮಾ ಕಥೆಗಳು-೨ ಈ ಪುಸ್ತಕದಲ್ಲಿ ೪೬ ಕಥೆಗಳಿದ್ದು, ಚಂದಮಾಮಾ ಕಥೆಗಳು-೩ರಲ್ಲಿ ೪೭ ಕಥೆಗಳಿವೆ. ಚಂದಮಾಮಾ ಕಥೆಗಳು-೩ನ್ನು ಸೂರ್ಯವಂಶಿ (ಬಿ. ಪದ್ಮಜ) ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.
೨೦೨೩ರ ಜನವರಿಯಲ್ಲಿ ಪ್ರಕಟಗೊಂಡ ಚಂದಮಾಮಾ ಕಥೆಗಳು-೪ ಈ ಪುಸ್ತಕದಲ್ಲಿ ೧೯೭೨ ಮತ್ತು ೧೯೭೯ರ ನಡುವೆ ಪ್ರಕಟವಾದ ೪೫ ಕಥೆಗಳಿವೆ. ಈ ಕಥೆಗಳ ಮೂಲ ಲೇಖಕರು ಸಾವಿರಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಬರೆದ ಬ್ಲೂರೇ ನಾಗೇಶ್ವರರಾವ್. ಅವರು ತೆಲುಗಿನಲ್ಲಿ ಬರೆದ ಕಥೆಗಳನ್ನು ಕನ್ನಡಕ್ಕೆ ಡಾ. ರಾಜೇಶ್ವರಿ ಕೆ.ವಿ. ಅವರು ಸುಂದರವಾಗಿ ಅನುವಾದಿಸಿಕೊಟ್ಟಿದ್ದಾರೆ.
ಮಕ್ಕಳನ್ನು ಗಮನದಲ್ಲಿಟ್ಟು ಹೇಳುವುದಾದರೆ ಈ ನಾಲ್ಕೂ ಪುಸ್ತಕಗಳು ಕೂಡ ಸಂಗ್ರಹಯೋಗ್ಯವಾದವು. ಮಕ್ಕಳನ್ನು ಓದಲು ಪ್ರೇರೇಪಿಸುವಂತೆ ಈ ಪುಸ್ತಕಗಳಿದ್ದು, ಹಿರಿಯರು ಇದನ್ನು ಖರೀದಿಸಿ ಮಕ್ಕಳಿಗೆ ಕೊಡುಗೆಯಾಗಿ ನೀಡಿದರೆ ನಮ್ಮತನವನ್ನು ಉಳಿಸಿ ಬೆಳೆಸುವ ನೈತಿಕ ಕಥೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಪ್ರಯತ್ನ ಮುಂದುವರಿದೀತು.