ಶ್ರೀ ಮದ್ರಾಮಾಯಣಕ್ಕೆ ರಾಷ್ಟ್ರೀಯ ಮಹಾಕಾವ್ಯ ಎಂಬ ಗೌರವದ ಸ್ಥಾನವನ್ನು ಭಾರತೀಯ ಸಮಾಜ ಶತಮಾನಗಳ ಹಿಂದೆಯೇ ನೀಡಿದೆ. ಭಾರತೀಯ ಸಮಾಜದ ಮೇಲೆ ರಾಮಾಯಣ ಮಾಡಿರುವಷ್ಟು ಪ್ರಭಾವವನ್ನು ಬೇರೆ ಯಾವ ಗ್ರಂಥವೂ ಬೇರೆ ಯಾವ ದೇಶದ ಮೇಲೂ ಮಾಡಿಲ್ಲ. ಈ ದೇಶದ ಜನ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ – ಇವರೆಲ್ಲರನ್ನು ಕಾವ್ಯದ ಮಹಾಪಾತ್ರಗಳಷ್ಟೇ ಎಂಬಂತೆ ಎಂದೂ ಕಂಡಿಲ್ಲ; ಅವರೆಲ್ಲ ಕಣ್ಣೆದುರಿಗಿರುವ ವ್ಯಕ್ತಿಗಳಷ್ಟೇ ವಾಸ್ತವ ಎಂಬುದಾಗಿ ಪರಿಗಣಿಸಿ ಅವರ ಬಗ್ಗೆ, ರಾಮಾಯಣದ ಬಗ್ಗೆ ಅನುಪಮವಾದ ಪ್ರೀತಿಯನ್ನು ಇರಿಸಿದ್ದಾರೆ. ಹೀಗಿರುವುದರಿಂದಲೇ ರಾಮಾಯಣ ಕುರಿತ ಸಹಸ್ರಾರು ಪುಸ್ತಕಗಳು ದಿನದಿನವೂ ಪ್ರಕಾಶನ ಕಾಣುತ್ತಲೇ ಇವೆ.
ಅಯೋಧ್ಯಾ ಪ್ರಕಾಶನ ಹೊರತಂದಿರುವ ವರ್ಣಚಿತ್ರ ಸಹಿತ ‘ಅಯೋಧ್ಯಾ ಸಚಿತ್ರ ರಾಮಾಯಣ’ ಕೂಡ ಈ ‘ರಾಮಾಯಣಪ್ರೀತಿ’ ಪರಂಪರೆಯ ಮುಂದುವರಿಕೆಯಾಗಿದೆ. ಆದರೆ ಈ ಕೃತಿಯ ವಿಶೇಷವೆಂದರೆ ಇದು ಕೇವಲ ಸಾಹಿತ್ಯಕೃತಿಯಾಗಿಲ್ಲ. ಇಲ್ಲಿ ರಾಮಯಣದ ಕಥೆಯನ್ನು ತೋರಿಸಬಲ್ಲ ಅತ್ಯಂತ ಆಕರ್ಷಕವಾದ ಚಿತ್ರಗಳಿವೆ. ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಅತ್ಯಂತ ಸರಳವಾದ ಭಾಷೆಯಲ್ಲಿ ನಿರೂಪಣೆ ಮಾಡಿದ್ದಾರೆ. ಅವರದ್ದೇ ಧ್ವನಿಯಲ್ಲಿ ರಾಮಾಯಣದ ಕಥೆಗಳನ್ನು ಕೇಳಿರುವವರಿಗಂತೂ ಪ್ರತಿ ಸಾಲಿನಲ್ಲೂ ಅವರದೇ ಧಾಟಿ ಕೇಳುತ್ತದೆ. ಇನ್ನು ನೀರ್ನಳ್ಳಿ ಗಣಪತಿ ಹೆಗಡೆಯವರ ಕುಂಚದ ಮಹಿಮೆ ೧೨೫ ಪುಟದಲ್ಲೂ ಅದ್ಭುತವಾಗಿ ಮೂಡಿಬಂದಿದೆ. ಚಿತ್ರ ಮತ್ತು ಸಾಹಿತ್ಯ ಎರಡೂ ಮಾಧ್ಯಮವನ್ನು ಈ ಕೃತಿಯಲ್ಲಿ ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ನಮ್ಮೆಲ್ಲರ ಮನೆಯ ಬಾಲಬಾಲಿಕೆಯರು ಈ ಚಿತ್ರಗಳಿಗೆ ಸೂಜಿಗಲ್ಲಿನಂತೆ ಆಕರ್ಷಿತರಾಗದೆ ಇರಲಾರರು.
ಕೃತಿಯಲ್ಲಿ ಬರುವ ಪ್ರತಿಯೊಂದು ಪ್ರಮುಖ ಘಟನೆಗೂ ಪ್ರತಿ ಪುಟದಲ್ಲಿ ಒಂದು ವಿಸ್ತಾರವಾದ ಚಿತ್ರವಿದೆ. ಅದು ಆ ಘಟನೆಯ ದೇಶ-ಕಾಲಗಳಿಗೆ ಓದುಗರನ್ನು ಸೆಳೆದುಕೊಳ್ಳುತ್ತದೆ. ರಾಮನ ಯುವರಾಜ್ಯಪಟ್ಟಾಭಿಷೇಕದ ವಾರ್ತೆಯಿಂದ ಸಂಭ್ರಮದಲ್ಲಿ ತೊಡಗಿರುವ ನಗರದ ಚಿತ್ರ ನೋಡುವಾಗ ಅದರ ಸಂಭ್ರಮ ಓದುಗರ ಅನುಭವಕ್ಕೂ ಎಟಕುತ್ತದೆ. ಗೂನುಬೆನ್ನಿನ ಮಂಥರೆ ಬಂದು ಕೈಕೇಯಿ ತಲೆಕೆಡಿಸುವಾಗಿನ ಸಂದರ್ಭದಲ್ಲಿ ಆಕೆಯ ಕುತಂತ್ರ; ರಾಮ, ಸೀತಾ, ಲಕ್ಷ್ಮಣರು ವನವಾಸಕ್ಕೆ ತೆರಳುವಾಗ ಉಕ್ಕಿಬರುವ ದುಃಖ; ಸೀತಾಪಹರಣದ ಸಂದರ್ಭದಲ್ಲಿ ಆಕೆಯ ಅಸಹಾಯಕತೆ; ಹನುಮಂತ ಇರುವ ಪ್ರತಿ ಪುಟದಲ್ಲೂ ರೋಚಕತೆ-ಸಾಹಸ-ಶ್ರದ್ಧೆ; ರಾವಣನ ಸಂದರ್ಭದಲ್ಲಂತೂ ‘ಭಯಾನಕತೆ’ – ಹೀಗೆ ಹಲವುಹತ್ತು ಭಾವಗಳು ಚಿತ್ರಗಳಲ್ಲಿ ಸ್ಪಷ್ಟವಾಗಿ ಪಡಿಮೂಡಿವೆ. ಇವು ಓದುಗರ ಭಾವವನ್ನು ಚಿತ್ರದೊಂದಿಗೆ ಬೆಸೆಯುತ್ತವೆ. ಹೀಗೆ ಈ ಕೃತಿಯ ಓದು ಬರಿಯ ಓದಾಗದೆ ಅದೊಂದು ರಾಮಾಯಣದೊಂದಿಗಿನ ಚೇತೋಹಾರಿ ಪಯಣವಾಗಿ ಓದುಗರ ಸ್ಮöÈತಿಪಟಲದಲ್ಲಿ ಮನೆಮಾಡಿಕೊಳ್ಳುತ್ತದೆ.
ಈ ಕೃತಿಯಲ್ಲಿ ಹನುಮಂತನ ಪ್ರತಿ ಚಿತ್ರವೂ ವಿಶೇಷವಾಗಿ ಉಲ್ಲೇಖಿಸಬೇಕಾದ ಮಹತ್ತ್ವವನ್ನು ಪಡೆದಿದೆ. ಹೆಮ್ಮರವೊಂದನ್ನು ಕಿತ್ತು ಅಕಂಪನನ ಕೊರಳಿಗಿಟ್ಟು ಉಸಿರುಗಟ್ಟಿಸಿ ಸಂಹರಿಸುವ ಹನುಮನ ಚಿತ್ರವಿರಲಿ, ಅದರ ಹಿಂದೆ ಮುಂದೆ ಇರುವ ಎರಡು ಚಿತ್ರಗಳಾಗಲಿ ಓದುಗರ ಮನಸ್ಸಿನಲ್ಲಿ ವೀರರಸವನ್ನು ಉಂಟುಮಾಡುತ್ತದೆ. ಒಟ್ಟಾರೆ ಈ ಕೃತಿಯ ಓದಿನಿಂದ ಇಡೀ ರಾಮಾಯಣದ ಅವತರಣ ನಮ್ಮ ಕಣ್ಣ ಎದುರಲ್ಲೆ ನಡೆದುಹೋಗುತ್ತದೆ.
ರಾಮಾಯಣದ ಉದ್ದಗಲಗಳಲ್ಲಿ ತುಂಬಿಹೋಗಿರುವುದು ನೀತಿಪ್ರತಿಪಾದನೆ ಎಂಬುದು ಎಲ್ಲರಿಗೆ ತಿಳಿದಿದೆಯಷ್ಟೆ. ಇಂತಹ ತಾತ್ತ್ವಿಕವಾದ ಸೂಕ್ಷ್ಮ ವಿಷಯಗಳನ್ನು ಇಲ್ಲಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ಸರಳವಾದ ಕಥಾನಿರೂಪಣೆ ಹಿಡಿದು ಕೊಡುತ್ತದೆ. ಕೃತಿಯಲ್ಲಿ ಉಪಯೋಗವಾಗಿರುವ ಕನ್ನಡದ ಹಲವು ಕಠಿಣ ಶಬ್ದಗಳಿಗೆ ಕೃತಿಯ ಕೊನೆಯಲ್ಲಿ ಅರ್ಥಗಳನ್ನು ಒದಗಿಸಲಾಗಿದೆ. ಇನ್ನು ಕೆಲವು ಪದಗಳ ಅರ್ಥಗಳನ್ನು ಕಥೆಯ ನಿರೂಪಣೆಯಲ್ಲಿಯೇ ತಂದಿರುವುದು ಅತ್ಯಂತ ಸೂಕ್ತವಾದ ರೀತಿಯೆನಿಸುತ್ತದೆ. ಉದಾಹರಣೆಗೆ ಒಂದನ್ನು ಉಲ್ಲೇಖಿಸಬೇಕೆಂದರೆ ‘ಅಯೋಧ್ಯೆ’ ಪದದ ಅರ್ಥವನ್ನು “ಶತ್ರುಗಳಿಂದ ಜಯಿಸಲು ಅಸಾಧ್ಯವಾದ್ದರಿಂದ ಆ ನಗರಕ್ಕೆ ಅಯೋಧ್ಯಾ ಎಂಬುದು ಅನ್ವರ್ಥನಾಮವಾಗಿತ್ತು” ಎನ್ನುತ್ತ ಕಥೆಯ ಭಾಗವಾಗಿಯೇ ಈ ಪ್ರಮುಖವಾದ ಶಬ್ದಾರ್ಥವನ್ನು ಉಪಾಧ್ಯಾಯರು ನೀಡಿದ್ದಾರೆ. ಹೀಗೆ ಹಲವಾರಿವೆ.
ಈ ಕೃತಿ ಬೆಳಕು ಕಾಣಲು ಮತ್ತೊಂದು ಮಹತ್ತ್ವದ ಸಂಕಲ್ಪವೂ ಕಾರಣವಾಗಿದೆ. ರಾಮಾಯಣದ ಕಥೆಯನ್ನು ಎಲ್ಲರೂ ಓದಬೇಕು; ಎಲ್ಲ ಗಡಿಗಳನ್ನು ಮೀರಿ ಇದು ರಾಮಾಯಣಪ್ರಿಯರನ್ನು ತಲಪಬೇಕು; ಆ ಮೂಲಕ ಅಯೋಧ್ಯಾ ಫೌಂಡೇಶನ್ ನಡೆಸುತ್ತಿರುವ ‘ವಿಶ್ವ ರಾಮಾಯಣ ಚಾಂಪಿಯನ್ಶಿಪ್’ ಎಂಬ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು – ಎಂಬುದೂ ಸಂಕಲ್ಪ. ಈ ಕೃತಿಯು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ‘ಅಯೋಧ್ಯಾ ಸಚಿತ್ರ ರಾಮಾಯಣ’ವು ನಮ್ಮೆಲ್ಲರ ಮನೆಗಳಲ್ಲಿ ಇರಲೇಬೇಕಾದ, ನಾವೆಲ್ಲರೂ ಓದಿ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಕೃತಿ.