ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಗ್ರಂಥಾಂತರಂಗ > ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’

ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’

ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ ಅಲ್ಲವೋ? ಆತ ನಡೆಸಿದ್ದು ಸ್ವಾತಂತ್ರ್ಯ ಹೋರಾಟವೋ ಅಲ್ಲವೋ ಎನ್ನುವುದು ನಮ್ಮಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವಂತೆ ಇದನ್ನು ಎರಡೂ ಕಡೆಯಿಂದ ಬಹಳ ಶಕ್ತಿಶಾಲಿಯಾಗಿ ವಾದಿಸಲಾಗುತ್ತದೆ. ಕೆಲವರದ್ದು ಕೇವಲ ವಾದಕ್ಕಾಗಿ ವಾದ ಅನ್ನಿಸಿದರೂ ಕೂಡ ಒಂದಷ್ಟು ಜನರಲ್ಲಿ ಇದರಿಂದ ಪೂರ್ತಿ ಗೊಂದಲ ಉಂಟಾಗುವುದಂತೂ ಸತ್ಯ.
ವಿವಾದದ ಸ್ವರೂಪವನ್ನು ಪಡೆಯುವ ಈ ಚರ್ಚೆ, ವಾದಗಳಿಂದ ನಿಜವಾದ ದೇಶಪ್ರೇಮಿಗಳೂ ಸ್ವಾತಂತ್ರ್ಯ ಯೋಧರೆಂದು ಕರೆಯಿಸಿಕೊಳ್ಳಲು ಸರ್ವಥಾ ಅರ್ಹರೂ ಆದ ಅದೆಷ್ಟೋ ಜನರಿಗೆ ಯಾವಾಗಲೂ ಅನ್ಯಾಯ ಆಗುತ್ತಿರುತ್ತದೆ. ತಕ್ಷಣಕ್ಕೆ ಹೊಳೆಯುವ ಉದಾಹರಣೆಯೆಂದರೆ, ಜವಾಹರಲಾಲ್ ನೆಹರು ಮತ್ತವರ ಪೀಳಿಗೆ ದೇಶಕ್ಕಾಗಿ ಅಪರಿಮಿತ ತ್ಯಾಗ- ಬಲಿದಾನಗಳನ್ನು ಮಾಡಿದೆ ಎನ್ನುವ ತತ್ತ್ವಪ್ರಣಾಳಿ ನಮ್ಮ ಮುಂದೆ ಅಸ್ತಿತ್ವದಲ್ಲಿರುವುದು.
ಇಂಗ್ಲೆಂಡ್ ಮೂಲದ ಈಸ್ಟ್ ಇಂಡಿಯಾ ಕಂಪೆನಿ ವ್ಯಾಪಾರದ ಹೆಸರಿನಲ್ಲಿ ಈ ದೇಶದಲ್ಲಿ ಕಾಲೂರಿ ಮುಂದೆ ಎಲ್ಲವನ್ನೂ ನುಂಗುವ ಬಕಾಸುರನಾದದ್ದು ಎಲ್ಲರೂ ಗಮನಿಸುವಂಥದು. ಅವರು ನಡೆಸಿದ ಶೋಷಣೆಯ ವಿಶ್ವರೂಪ ದರ್ಶನವು ಬಹಳಷ್ಟು ಇನ್ನೂ ಬೆಳಕು ಕಂಡಿಲ್ಲ. ಅದರಲ್ಲಿ ದೊಡ್ಡ ಭಾಗ ಶಾಶ್ವತವಾಗಿ ಕತ್ತಲೆಗೆ ಸರಿದುಬಿಡುತ್ತಿತ್ತೋ ಏನೋ! ಆ ಅಮಾನವೀಯ ಶೋಷಣೆ ಮತ್ತು ತಣ್ಣಗಿನ ಕ್ರೌರ್ಯಕ್ಕೆ ಬೆಳಕು ಚೆಲ್ಲಿ ಅದು ನಮ್ಮ ಮುಂದೆ ಶಾಶ್ವತವಾಗಿ ಉಳಿಯುವಂತೆ ಮಾಡಿದ ಒಂದು ಸಾಹಿತ್ಯಕೃತಿ ಬಂಗಾಳಿ ಸಾಹಿತಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ’ಆನಂದಮಠ’. ಅವರು ಇದನ್ನು ’ಐತಿಹಾಸಿಕ ಕಾದಂಬರಿ’ ಎಂದು ಹೇಳಲಿಲ್ಲ. ಬ್ರಿಟಿಷ್ ಆಡಳಿತದೊಂದಿಗೆ ಹೊಂದಾಣಿಕೆಯ ಜೀವನವನ್ನು ಅನುಸರಿಸಬೇಕೆಂದು ಅಭಿಪ್ರಾಯಪಟ್ಟಿರುವ ಅವರು ಸಂನ್ಯಾಸಿ – ಫಕೀರ ಆಂದೋಲನದ ನೈಜ ಘಟನೆಗಳಿಂದ ದೂರ ಸರಿದಿದ್ದಾರೆಂದು ವಿಮರ್ಶಕರು ಹೇಳಿದ್ದಿದೆ. ಇದಕ್ಕೆ ಮುಖ್ಯವಾಗಿ ಅವರ ಮೂಲವಾದರೋ ೧೦೮ ವರ್ಷ ಬದುಕಿದ್ದ ಅವರ ಅಜ್ಜ ನೆನಪಿನಿಂದ ಹೇಳಿದ ಕಥೆ. ’ಆನಂದ ಮಠ’ದಲ್ಲಿ ಬಂಕಿಮರು ರೈತರ ಸಂಕಷ್ಟಗಳಿಗೆ ಮುಸ್ಲಿಂ ನವಾಬರ ದುರಾಡಳಿತವೇ ಕಾರಣವೆಂದೂ ಅದನ್ನು ಸರಿಪಡಿಸಿದ ಬ್ರಿಟಿಷ್ ಸರ್ಕಾರ ಬಡಜನತೆಗೆ ನ್ಯಾಯವನ್ನು ಒದಗಿಸಿತೆಂದೂ ಕೆಲವು ಕಡೆ ಸೂಚಿಸಿದ್ದಾರೆಂದು ಕೂಡ ವಿಮರ್ಶಕರು ಗುರುತಿಸಿದ್ದಾರೆ.
ಆದರೆ ಬಂಕಿಮಚಂದ್ರರು ನಮ್ಮ ಇತಿಹಾಸ ರಚನೆಯಲ್ಲಿ ಪ್ರಾಬಲ್ಯ ಹೊಂದಿದ್ದ ವಸಾಹತುಶಾಹಿ ಇತಿಹಾಸಕಾರರ ಜೊತೆ ಸಮೀಕರಣಗೊಳ್ಳುವುದಿಲ್ಲ. ಸಂನ್ಯಾಸಿ-ಫಕೀರರು ನಡೆಸಿದ ವಿದ್ರೋಹವನ್ನು, ದರೋಡೆಗಳನ್ನು ಬ್ರಿಟಿಷರು ಮಟ್ಟ ಹಾಕಿ ಶಾಂತಿ-ಸುವ್ಯವಸ್ಥೆಯನ್ನು ತಂದರೆನ್ನುವ ವಸಾಹತುಶಾಹಿ ಇತಿಹಾಸಕಾರರ ಸ್ವರೂಪವನ್ನು ನೀಡಿ ಜನರ ಮುಂದಿಡುವ ಪ್ರಯತ್ನವನ್ನು ಮಾಡಿದರೆನ್ನುವುದಕ್ಕೆ ದೇಶದ ಮುಂದಿನ ಸ್ವಾತಂತ್ರ್ಯ ಹೋರಾಟದ ಘಟನಾವಳಿಗಳು ಪುರಾವೆ ಒದಗಿಸುತ್ತವೆ. ವಿಭಿನ್ನವೆನಿಸಿದ ’ಆನಂದಮಠ’ ಆ ಕಾಲದಲ್ಲೇ ಹಲವು ಮುದ್ರಣಗಳನ್ನು ಕಂಡಿತು; ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ದೇಶದ ರಾಷ್ಟ್ರೀಯ ಆಂದೋಲನದಲ್ಲಿ ಆನಂದಮಠಕ್ಕೆ ಇಷ್ಟೊಂದು ಜನಮನ್ನಣೆ ಮತ್ತು ಪ್ರಾಮುಖ್ಯ ದೊರಕಿದುದಕ್ಕೆ ಬಂಕಿಮರು ಇಲ್ಲಿ ನಡೆಸಿದ ಹಿಂದು ಆದರ್ಶವಾದದ ಪುನರುಜ್ಜೀವನದ ಪ್ರಯತ್ನವೇ ಕಾರಣವೆಂದು ಕೂಡ ವಿಮರ್ಶಕರು ವಿಶ್ಲೇಷಿಸಿದ್ದಾರೆ. ಇದರಿಂದ ಹೊಸತೊಂದು ರಾಷ್ಟ್ರೀಯ ಸಂಭ್ರಮವು ಹುಟ್ಟಿತು; ಅನೇಕ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕವಾಯಿತು. ಅವರಲ್ಲಿ ಅನೇಕರು ಒಂದು ಜೇಬಿನಲ್ಲಿ ಭಗವದ್ಗೀತೆ, ಮತ್ತೊಂದು ಜೇಬಿನಲ್ಲಿ ಪಿಸ್ತೂಲನ್ನು ಇಟ್ಟುಕೊಂಡು ಕ್ರಾಂತಿಪಥದಲ್ಲಿ ಮುನ್ನಡೆದರು; ಆನಂದಮಠದಲ್ಲಿ ಬರುವ ದೇವಸ್ತುತಿ ’ವಂದೇ ಮಾತರಂ’ ಗೀತೆಯಂತೂ ಸ್ವಾತಂತ್ರ್ಯ ಹೋರಾಟವನ್ನು ದಮನಿಸುವ ಬ್ರಿಟಿಷರನ್ನು ಸಿಂಹಸ್ವಪ್ನವಾಗಿ ಕಾಡಿತು; ಇದರ ಪ್ರಭಾವ ದೇಶಭಕ್ತರ ಮನದಲ್ಲಿ ಆಳವಾಗಿ ಬೇರೂರಿತು. ಸಂನ್ಯಾಸಿ ಆಂದೋಲನಕ್ಕೆ ಸುಮಾರು ೧೦೦ ವರ್ಷ ಆಗುವಾಗ ೧೮೮೧-೮೨ರಲ್ಲಿ ಇದು ಪ್ರಕಟಗೊಂಡಿತು.
ಆದರೆ ಬಂಕಿಮರು ಕಾದಂಬರಿಯನ್ನು ಬರೆಯುವ ಹೊತ್ತಿಗೆ ಇದು ಸಮಕಾಲೀನ ಪರಿಸ್ಥಿತಿ ಅನುಗುಣವಾಗಿದ್ದು, ಇದರ ಕಥಾವಸ್ತುವಿಗೂ ೧೮ನೇ ಶತಮಾನದಲ್ಲಿ ನಡೆದ ಘಟನೆಗಳಿಗೂ ಸಂಬಂಧವಿಲ್ಲ ಎಂದಿದ್ದರು. ಇಂಗ್ಲೀಷ್ ವಿದ್ಯಾಭ್ಯಾಸದ ಪ್ರಭಾವದಿಂದ ಪಾಶ್ಚಾತ್ಯ ರಾಜ್ಯಶಾಸ್ತ್ರಕ್ಕನುಗುಣವಾಗಿ ಪ್ರಸರಣಗೊಳ್ಳುತ್ತಿದ್ದ ಹೊಸ ರಾಷ್ಟ್ರವಾದದ ತತ್ತ್ವವನ್ನು ಆನಂದಮಠ ಬಿಂಬಿಸುತ್ತದೆ ಎನ್ನುವ ಅಭಿಪ್ರಾಯವೂ ಇದೆ. ಆದರೆ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿದ ಲೇಖಕರು ಕಾದಂಬರಿ ೧೮೮೪ರಲ್ಲಿ ಎರಡನೇ ಮುದ್ರಣ ಕಾಣುವಾಗ ಅದರೊಂದಿಗೆ ಐತಿಹಾಸಿಕ ದಾಖಲೆಗಳನ್ನು ಅನುಬಂಧ ರೂಪದಲ್ಲಿ ಒದಗಿಸಿದ್ದರು. ಇದು ’ಐತಿಹಾಸಿಕ ಕಾದಂಬರಿ ಅಲ್ಲ’ ಎಂದವರೇ ಹೀಗೂ ಮಾಡಿದ್ದರು. ಕಾದಂಬರಿ ರೂಪದಲ್ಲಿ ’ಆನಂದ ಮಠ’ದ ವಿನ್ಯಾಸ ಅತೃಪ್ತಿಕರವಾಗಿದೆ; ಮತ್ತು ಇದು ಐತಿಹಾಸಿಕ ಕಾದಂಬರಿಯ ರೂಪದಲ್ಲಿ ಕೊರತೆಯಿಂದ ಕೂಡಿದೆ ಎಂದು ಕೂಡ ವಿಮರ್ಶಕರು ಹೇಳಿದ್ದಿದೆ. ಆದರೆ ಅಂದಿನ ಓದುಗರ ಮನದಾಳದಲ್ಲಿ ಬೀರಿರುವ ಪ್ರಭಾವವನ್ನು ಕಂಡು ಆ ವಿಮರ್ಶಕರೇ ಬೆಚ್ಚಿಬಿದ್ದಿದ್ದಾರೆಂದರೆ ತಪ್ಪಲ್ಲ. ಅದಕ್ಕೆ ಕಾರಣ, ತನ್ನ ಹೊಸತೊಂದು ವ್ಯಾಪಕ ಮಿಥ್ಯಾಕಲ್ಪನೆಯ ಮೂಲಕ ಈ ಕಾದಂಬರಿ ಅಂದಿನ ಜನರ ಮನದಾಳದಲ್ಲಿ ಮನೆಮಾಡಿದ್ದ ಅಸ್ಪಷ್ಟ ಆಕಾಂಕ್ಷೆಗಳಿಗೆ ಮೂರ್ತರೂಪ ನೀಡುವ ಶಕ್ತಿಯಾಯಿತು; ಅದೇ ಇದರ ಸಾಧನೆ.

ಬ್ರಿಟಿಷ್ ಸರ್ಕಾರದ ಉಪದಂಡಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಂಕಿಮಚಂದ್ರರಿಗೆ ಅವರ ಸೇವಾವಧಿಯಲ್ಲಿ ಯಾವ ಬಡ್ತಿಯೂ ಸಿಗಲಿಲ್ಲ. ಏನಿದ್ದರೂ ’ಆನಂದಮಠ’ದಲ್ಲಿ ಬ್ರಿಟಿಷರ ಆಡಳಿತಕ್ಕೆ ಸಹಾನುಭೂತಿಯನ್ನು ಸೂಚಿಸುವ ಒಂದೆರಡು ಮಾತುಗಳಿದ್ದರೂ ಕಾದಂಬರಿಯ ಕಥಾವಸ್ತು ಜನಸಾಮಾನ್ಯರನ್ನು ಪ್ರೇರೇಪಿಸುತ್ತಿದ್ದ ಪ್ರಖರ ರಾಷ್ಟ್ರೀಯತೆಯ ಭಾವನೆಗಳನ್ನು ಸರ್ಕಾರ ನಿರ್ಲಿಪ್ತವಾಗಿ ಸಹಿಸುವುದು ಅಸಾಧ್ಯವೆಂದು ಒತ್ತಿ ಹೇಳುತ್ತದೆ. ಮುಂದಿನ ಐದು ಮುದ್ರಣಗಳಲ್ಲಿ ಬಂಕಿಮರು ಕೆಲವೆಡೆ ಬ್ರಿಟಿಷರ ಬಗ್ಗೆ ಬಳಸಿದ್ದ ಪದಗಳನ್ನು ಮೃದುಗೊಳಿಸಿದ್ದಾರೆ; ಮತ್ತು ಯವನ ಹಾಗೂ ಬಿಧರ್ಮಿಯೆಂಬ ದ್ವಂದ್ವಾರ್ಥ ಪದಗಳನ್ನು ಬಳಸಿದ್ದಾರೆಂದು ಗುರುತಿಸಲಾಗಿದೆ; ಇದರಲ್ಲಿ ಅವರ ಗೂಢ ಆಕ್ರೋಶ ವ್ಯಕ್ತವಾಗಿರಬೇಕಲ್ಲವೆ?
ಈ ನಡುವೆ ಕಾದಂಬರಿ ಬ್ರಿಟಿಷ್ ಅಧಿಕಾರಿಗಳು ಹಾಸ್ಯಾಸ್ಪದ ವ್ಯಕ್ತಿಗಳು ಹಾಗೂ ಲಂಚಕ್ಕೆ ಕೈವೊಡ್ಡುವ ಭ್ರಷ್ಟಾಚಾರಿಗಳೆಂದು ಚಿತ್ರಿಸುವುದನ್ನು ಬಿಟ್ಟಿಲ್ಲ. ಹಿಂದುಗಳು ಅವರ ಮೇಲೆ ವಿಜಯ ಸಾಧಿಸುವುದನ್ನು ದಿಟ್ಟತನದಿಂದಲೇ ಬಣ್ಣಿಸಿದೆ. ವಿಮರ್ಶಕರಾದ ಮೀನಾಕ್ಷಿ ಮುಖರ್ಜಿ ಹೀಗೆ ಹೇಳುತ್ತಾರೆ: ಆನಂದಮಠ ಒಂದು ಕಾದಂಬರಿಯ ರೂಪದಲ್ಲಿ ಕೊರತೆಗಳನ್ನು ಹೊಂದಿರಬಹುದು… ಆದರೆ ಇದು ಪ್ರಕಟಗೊಂಡ ಒಂದು ಶತಮಾನದ ಬಳಿಕ ಓದುವಾಗ ಅದು ಕೇವಲ ಹಿಂದು ಪ್ರಚಾರದ ಸಾಧನಕ್ಕಿಂತ ಹೆಚ್ಚಿನದಾಗಿ ಕಾಣುತ್ತದೆ. ೧೯ನೇ ಶತಮಾನದಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಭಾರತೀಯರ ರಾಜಕೀಯ ಒಳಪದರದಲ್ಲಿದ್ದ ಮಾನಸಿಕ ಜಟಿಲತೆ ಮತ್ತು ಅಸ್ಪಷ್ಟತೆಯನ್ನು ಯಾವುದೇ ಸಮಾಜಶಾಸ್ತ್ರ ಅಥವಾ ಇತಿಹಾಸದ ಇತರ ನೇರ ದಾಖಲೆಗಳು ತೋರಲಾರದ್ದನ್ನು ಆನಂದಮಠ ಇಂದು ನಮ್ಮ ಮುಂದೆ ಬಿಚ್ಚಿಡುತ್ತದೆ.
ಐತಿಹಾಸಿಕ ಕಾದಂಬರಿ ಎಂದು ಹೇಳಿಕೊಂಡರೂ ಕೂಡ ಅದರಲ್ಲಿ ಇತಿಹಾಸದ ಎಲ್ಲ ವಿವರಗಳನ್ನು ಸೇರಿಸಲು ಸಾಧ್ಯವಾಗುವುದಿಲ್ಲ; ಕಾದಂಬರಿ ಎನಿಸಬೇಕಿದ್ದರೆ ಕಾಲ್ಪನಿಕ ಅಂಶಗಳು ಇರಲೇಬೇಕು. ಆದ್ದರಿಂದ ಒಂದು ಐತಿಹಾಸಿಕ ಕಾದಂಬರಿಯಲ್ಲಿ ಸೇರಿಸಬಹುದಾದ ಇತಿಹಾಸದ ವಿವರಗಳು ಸೀಮಿತವೇ ಆಗಿರುತ್ತವೆ. ’ಆನಂದಮಠ’ವು ಪ್ರತಿನಿಧಿಸುವ ಕಾಲಘಟ್ಟದ ಐತಿಹಾಸಿಕ ವಿವರಗಳನ್ನು ಸಮಗ್ರವಾಗಿ ತುಂಬಿಕೊಡುವ ಒಂದು ಪುಸ್ತಕವೀಗ ಕನ್ನಡದಲ್ಲಿ ಪ್ರಕಟವಾಗಿದೆ. ಬಿ. ಪಿ. ಪ್ರೇಮಕುಮಾರ್ ಅವರ ’ಸಂನ್ಯಾಸಿ ಆಂದೋಲನ’ ಎನ್ನುವ ಈ ವೈಚಾರಿಕ ಕೃತಿಯನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಸರಣಿಯಲ್ಲಿ ಪ್ರಕಟಿಸಲಾಗಿದೆ (೨೦೧೭). ಲೇಖಕರು ಹತ್ತಾರು ಮೂಲಗಳಿಂದ ಸಂಗ್ರಹಿಸಿದ ವಿವರಗಳನ್ನು ಇಲ್ಲಿ ಒಂದೆಡೆ ನೀಡಿದ್ದಾರೆ. ಪ್ರಸ್ತುತ ಸಂನ್ಯಾಸಿ ಆಂದೋಲನದಲ್ಲಿ ಸೂಫಿ ಪಂಥದಿಂದ ಪ್ರಭಾವಿತರಾದ ಫಕೀರರು ಕೂಡ ಭಾಗಿಯಾಗಿದ್ದರು; ಇದನ್ನು ಸಂನ್ಯಾಸಿ-ಫಕೀರ ಆಂದೋಲನವೆಂದು ಕೂಡ ಕರೆಯಲಾಗುತ್ತದೆ. ಕನ್ನಡ ನಾಡಿನ ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಆಳುತ್ತಿರುವಾಗಲೇ ಬ್ರಿಟಿಷರ ಪ್ರಮುಖ ನೆಲೆಯಾದ ಬಂಗಾಳ ಮತ್ತದರ ಸುತ್ತಮುತ್ತ ಈ ಸಂನ್ಯಾಸಿಗಳು ಶಸ್ತ್ರಸಜ್ಜಿತವಾಗಿ ಅವರನ್ನು ನೇರವಾಗಿ ಎದುರಿಸಿದ್ದರು. ೧೭೭೦-೧೮೦೦ರ ಮೂರು ದಶಕಗಳ ಅವಧಿ ಸಂನ್ಯಾಸಿ-ಫಕೀರ ಆಂದೋಲನವು ತೀವ್ರವಾಗಿದ್ದು, ಬ್ರಿಟಿಷರ ಕಂಪೆನಿ ಆಡಳಿತ ನಡುಗಿಹೋದ ಕಾಲ.
೧೭೬೯-೭೦ರಲ್ಲಿ ಒಂದು ಅತ್ಯಂತ ಭೀಕರ ಬರಗಾಲವು ಬಂಗಾಳವನ್ನು ಬಾಧಿಸಿತು. ಆ ಹೊತ್ತಿಗಾಗಲೇ ಅಧಿಕಾರ ಸೂತ್ರವನ್ನು ಹಿಡಿದಿದ್ದ ಕಂಪೆನಿ ಆಡಳಿತಕ್ಕೆ ಜನರಿಗೆ ನೀರು- ಆಹಾರ ಒದಗಿಸಿ ರಕ್ಷಿಸುವ ಹೊಣೆಯಿತ್ತು. ಆದರೆ ಅದನ್ನವರು ಕಿಂಚಿತ್ತೂ ಮಾಡಲಿಲ್ಲ. ಜನ ಅನ್ನ ನೀರಿಲ್ಲದೆ ಕಣ್ಣ ಮುಂದೆ ಸಾಯುತ್ತಿದ್ದರೂ ಅವರು ತಮ್ಮ ಸೈನಿಕರಿಗೆ ಅದನ್ನು ಸಂಗ್ರಹಿಸಿಡುವುದರಲ್ಲಿ ತಲ್ಲೀನರಾಗಿದ್ದರು; ಈ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಮಾನವೀಯವಾಗಿ ನೋಡುವುದಾದರೆ ಇದು ಯಾವ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೂ ಕಡಮೆಯಲ್ಲ.
ಸಂನ್ಯಾಸಿ ಆಂದೋಲನದಲ್ಲಿ ಮುಖ್ಯವಾಗಿ ಮೂವರು ಭಾಗಿಗಳಾಗಿ ಕಾಣುತ್ತಾರೆ – ಕೃಷಿಕರು, ಕುಶಲಕರ್ಮಿಗಳು ಮತ್ತು ಮಾಜಿ ಸೈನಿಕರು, ಇವರೆಲ್ಲ ಕಂಪೆನಿ ಆಡಳಿತದ ನೇರ ಸಂತ್ರಸ್ತರು. ೧೭೬೫ರ ಬಕ್ಸರ್ ಯುದ್ಧದಲ್ಲಿ ಜಯಗಳಿಸಿದ ಕಂಪೆನಿ, ದಿವಾನಿ ಹಕ್ಕು ಎಂದರೆ ಭೂಕಂದಾಯ ವಸೂಲಿಯ ಹಕ್ಕನ್ನು ತನ್ನದಾಗಿಸಿಕೊಂಡಿತು. ಈ ಅಧಿಕಾರ ಕೈಗೆ ಬಂದೊಡನೆ ಭೂಕಂದಾಯವನ್ನು ಇಮ್ಮಡಿಗೊಳಿಸಿತು. ಹೆಚ್ಚಿನ ಭೂಕಂದಾಯ ವಸೂಲಿಯ ದೃಷ್ಟಿಯಿಂದ ಜಮೀನನ್ನು ಹರಾಜು ಹಾಕಿ ಹಿಂದಿನ ಜಮೀನ್ದಾರರನ್ನು ರದ್ದುಪಡಿಸಿ, ತನ್ನದಾದ ಹೊಸ ಜಮೀನ್ದಾರ ವರ್ಗವನ್ನು ಸೃಷ್ಟಿಸಿತು. ಹೆಚ್ಚು ಹೆಚ್ಚು ಕಂದಾಯ ವಸೂಲಿಯೇ ಈ ಹೊಸ ಜಮೀನ್ದಾರರ ಕೆಲಸ. ಹಿಂದೆ ಭೂಕಂದಾಯ ಇಲ್ಲದಿದ್ದ ಇನಾಮು ಭೂಮಿ ಇತ್ಯಾದಿಗೆ ಹೊಸದಾಗಿ ಕಂದಾಯ ಹೇರಲಾಯಿತು. ಇದರಿಂದಾಗಿ ಕೃಷಿಕರು ಕಂಗೆಟ್ಟರು. ಕಂದಾಯ ವಸೂಲಿಯಿಂದ ತಪ್ಪಿಸಿಕೊಳ್ಳಲು ಜನ ಮನೆ ಬಿಟ್ಟು ಪರಾರಿಯಾದರು.
ಭಾರತದ ರಫ್ತಿನ ಬೆಲೆಯನ್ನು ಕೂಡ ಭಾರತವೇ ಹೊರುವಂತೆ ಮಾಡಿದ ಕಂಪೆನಿ ಆಡಳಿತದ ಚಾತುರ್ಯಕ್ಕೆ ತಲೆದೂಗಲೇಬೇಕು. ದುಬಾರಿ ಭೂಕಂದಾಯದಿಂದ ದೊರೆತ ಹಣದಲ್ಲಿ ಆಡಳಿತದ ಖರ್ಚೆಲ್ಲ ಹೋಗಿ ಉಳಿದ ಹಣದಲ್ಲಿ ಇಲ್ಲಿನ ಮಸ್ಲಿನ್ ಬಟ್ಟೆ, ರೇಷ್ಮೆ ಬಟ್ಟೆ ಮುಂತಾದನ್ನು ಖರೀದಿಸಿ ಬ್ರಿಟನ್ನಿಗೆ ಸಾಗಿಸಿದರು. ಅದರ ದರವನ್ನು ಇಳಿಸಿದರು. ಅಂತೂ ೧೭೫೮-೬೩ರ ಅವಧಿಯಲ್ಲಿ ಈ ಉದ್ಯಮಗಳು ನಾಶವಾಗಿ ಕುಶಲಕರ್ಮಿಗಳೆಲ್ಲ ನಿರುದ್ಯೋಗಿಗಳಾದರು. ತಮ್ಮ ಕಬಂಧ ಬಾಹುಗಳನ್ನು ಚಾಚಿದ ಬ್ರಿಟಿಷ್ ಆಡಳಿತದ ಒಂದು ಭಾಗವೆಂದರೆ ಇಲ್ಲಿ ನವಾಬರು ಮತ್ತು ಸಂಸ್ಥಾನಗಳಲ್ಲಿದ್ದ ಸೈನ್ಯಗಳನ್ನು ಅಳಿಸಿಹಾಕಿದ್ದು. ತಾವೇ ರಕ್ಷಣೆ ಕೊಡುತ್ತೇವೆಂದು ಹೇಳಿ ಅವರದನ್ನು ಮಾಡಿದರು. ಅದರ ಫಲವಾಗಿ ಒಂದು ಸೈನಿಕರು ಕೂಡ ನಿರುದ್ಯೋಗಿಗಳಾದರು. ಅದರಿಂದಾಗಿ ಸಂನ್ಯಾಸಿ-ಫಕೀರ ಆಂದೋಲನದ ಸಶಸ್ತ್ರ ಹೋರಾಟದಲ್ಲಿ ವೃತ್ತಿಪರತೆಯನ್ನು ಕೂಡ ಕಾಣಬಹುದು. ಜನರ ಪೂರ್ತಿ ಬೆಂಬಲವಿದ್ದ ಕಾರಣ ಬ್ರಿಟಿಷ್ ಸೇನಾಧಿಕಾರಿಗಳು ಮತ್ತು ಸಿಪಾಯಿಗಳನ್ನು ಹಣ್ಣುಗಾಯಿ-ನೀರುಗಾಯಿ ಮಾಡಲು ಅವರು ಸಮರ್ಥರಾಗಿದ್ದರು. ಗೂಢಚರ ವ್ಯವಸ್ಥೆ ಅತ್ಯುತ್ತಮವಾಗಿತ್ತು. ಕಾಡುಮೇಡು ಉತ್ತಮ ಪರಿಚಯ ಅವರಿಗೆ ಇದ್ದ ಕಾರಣ ಕಿರುಕುಳ ಯುದ್ಧ (ಗೆರಿಲ್ಲಾ) ತಂತ್ರವನ್ನು ಬಹು ಚೆನ್ನಾಗಿ ಬಳಸುತ್ತಿದ್ದರು. ಸರ್ಕಾರಕ್ಕೆ ಸೇರಿದ ಕಂದಾಯದ ಹಣದ ಲೂಟಿ, ಸರ್ಕಾರಕ್ಕೆ ಪರವಾದ ಜಮೀನ್ದಾರರ ಸಂಸತ್ತಿನ ದರೋಡೆ ವ್ಯಾಪಕವಾಗಿ ನಡೆಯಿತು. ಅವರನ್ನು ಬೆನ್ನಟ್ಟಿ ಥಾಮಸ್, ಎಡ್ವರ್ಡ್, ಕೀಥ್ ಮುಂತಾದ ಬ್ರಿಟಿಷ್ ಅಧಿಕಾರಿಗಳು ಜೀವಕಳೆದುಕೊಂಡರು. ಕಂಪೆನಿ ಆಡಳಿತಕ್ಕೆ ಎಲ್ಲೆಲ್ಲೂ ಸೈನಿಕರನ್ನು ನೇಮಿಸಬೇಕಾದ ಪರಿಸ್ಥಿತಿ ಉಂಟಾಯಿತು. ಒಂದು ಕಾಲದಲ್ಲಿ ಸುಮಾರು ೧೨ ಲಕ್ಷ ಸಂನ್ಯಾಸಿಗಳು ಮತ್ತು ಎಂಟು ಲಕ್ಷ ಫಕೀರರು ಇದ್ದರೆಂದು ಅಂದಾಜಿಸಲಾಗಿದೆ. ಕೆಲವೇ ಸಮಯದಲ್ಲಿ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಸೇರುವ ಸಾಮರ್ಥ್ಯ ಅವರಲ್ಲಿತ್ತು.
ಒಟ್ಟಿನಲ್ಲಿ ಅವರು ಶ್ರೀಮಂತರನ್ನು ಕೊಳ್ಳೆ ಹೊಡೆದು ಸರ್ಕಾರದ ಆದಾಯವನ್ನು ಸೂರೆಗೊಳ್ಳುತ್ತಿದ್ದುದು ಆಗಿನ್ನೂ ಕಾಲೂರುತ್ತಿದ್ದ ಬ್ರಿಟಿಷ್ ಆಡಳಿತಕ್ಕೆ ಸವಾಲಾಗಿತ್ತು. ಕಂಪೆನಿ ಆಡಳಿತದ ಶೈಶವ ಕಾಲದಲ್ಲಿ ತಲೆದೋರಿದ ಈ ಸವಾಲು ಒಂದು ಕಾರ್ಮೋಡದಂತೆ ಕವಿಯಲು ಪ್ರಾರಂಭಿಸತ್ತಲ್ಲದೆ ಕಂಪೆನಿ ಅಧಿಕಾರಿಗಳೀಗೆ ಉಸಿರಾಡಲೂ ಸಾಧ್ಯವಾಗದಂತೆ ಮಾಡಿತ್ತು.
ಪುಸ್ತಕದ ಕುರಿತು ಹೇಳುವುದಾದರೆ ಹಲವು ಮೂಲಗಳಿಂದ ವಿಷಯವನ್ನು ಸಂಗ್ರಹಿಸಿದ್ದು, ಸೂಕ್ತ ಅಡಿಟಿಪ್ಪಣಿ ನೀಡಿದ್ದು ಧನಾತ್ಮಕ ಅಂಶಗಳಾಗಿವೆ. ಪುನರುಕ್ತಿ (ರಿಪೀಟ್ ಆಗುವುದು)ಯನ್ನು ತಪ್ಪಿಸಲು ತುಂಬ ಶ್ರಮ ವಹಿಸಿದ್ದಾರೆ. ಅನ್ಯ (ಇಂಗ್ಲಿಷ್) ಮೂಲಗಳ ಅನುವಾದದಲ್ಲಿ ಇನ್ನಷ್ಟು ವೃತ್ತಿಪರತೆಗೆ ಅವಕಾಶವಿದೆ ಎನ್ನಬಹುದು. ಇದರ ವಿಷಯ ಸಮೃದ್ಧಿಯಂತೂ ಅನ್ಯಭಾಷೆಗಳಿಗೆ ಅನುವಾದಗೊಳ್ಳುವ ಅರ್ಹತೆಯನ್ನು ಗಳಿಸಿಕೊಟ್ಟಿದೆ ಎನ್ನಬಹುದು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat