ಈ ಅಭಿಯಾನದಿಂದ ತಂಡ ಯಾವುದೇ ಲಾಭವನ್ನು ನಿರೀಕ್ಷಿಸಿಲ್ಲ. ಕೇವಲ ಮಾರಾಟದ ದೃಷ್ಟಿಯಿಂದಲೂ ಈ ಅಭಿಯಾನವನ್ನು ನಡೆಸುತ್ತಿಲ್ಲ. ಕ್ಷೀಣಿಸುತ್ತಿರುವ ಓದುಗರ ವರ್ಗವನ್ನು ಹೆಚ್ಚಿಸುವುದಕ್ಕಾಗಿಯೇ ನಿಃಸ್ವಾರ್ಥದಿಂದ ರಸ್ತೆಗಿಳಿದಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ‘ಬಾ ಗುರು ಬುಕ್ ತಗೋ’ ಅಭಿಯಾನವನ್ನು ತಂಡ ನಡೆಸಿದೆ. ನಾಡಿನಾದ್ಯಂತ ಈ ಅಭಿಯಾನವನ್ನು ಕೊಂಡೊಯ್ಯುವ ಮಹತ್ತ್ವಾಕಾಂಕ್ಷೆ ತಂಡದ್ದಾಗಿದೆ.
“ಬಾ ಗುರು ಬುಕ್ ತಗೋ” ಎಂಬ ಕೂಗಿನೊಂದಿಗೆ ಕಳೆದ ಹಲವು ತಿಂಗಳುಗಳಿಂದ ಕನ್ನಡದ ಭರವಸೆಯ ಹಲವರು ಲೇಖಕರು ರಸ್ತೆಯಲ್ಲಿ ನಿಂತು ಪುಸ್ತಕಗಳನ್ನು ಮಾರುತ್ತಿದ್ದಾರೆ; ಹೀಗೆ ಓದುಗರೊಂದಿಗೆ ನೇರ ಸಂಬಂಧ ಬೆಸೆಯುತ್ತಿದ್ದಾರೆ. “ಕನ್ನಡ ಪುಸ್ತಕವನ್ನು ರಸ್ತೆಯಲ್ಲಿ ನಿಂತು ಮಾರುವ ಪರಿಸ್ಥಿತಿ ಎದುರಾಯಿತೇ?” ಎಂಬ ತುಟಿಯ ಮೇಲಿನ ಮರುಕದ ಮಾತುಗಳನ್ನು ಕೆಲವರು ಆಡಬಹುದು. ಅಷ್ಟಕ್ಕೂ ರಸ್ತೆಯಲ್ಲಿ ನಿಂತು ಪುಸ್ತಕ ಮಾರುವುದರಲ್ಲಿ ಅವಮಾನವೇನಿದೆ? ಪುಸ್ತಕಗಳ ಮೇಲಿನ ಅಭಿಮಾನದಿಂದ ಮತ್ತು ಹೊಸ ಓದುಗವರ್ಗವನ್ನು ಸೃಷ್ಟಿಮಾಡುವ ಹಂಬಲದಿAದ ಹಲವರು ಲೇಖಕರು ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ ಅಷ್ಟೇ.
ಹಾಗೆ ಈ ರೀತಿಯ ಪ್ರಯತ್ನ ಇದೇ ಮೊದಲೂ ಅಲ್ಲ. ಕನ್ನಡದ ಹೆಸರಾಂತ ಕಾದಂಬರಿಕಾರ ಮತ್ತು ಪುಸ್ತಕಪ್ರೇಮಿ ಗಳಗನಾಥರಂಥವರೇ ತಲೆಯ ಮೇಲೆ ದೊಡ್ಡ ಗಂಟನ್ನು ಹೊತ್ತುಕೊಂಡು ಮನೆಮನೆಗೆ ಹೋಗಿ ಪುಸ್ತಕಗಳನ್ನು ಮಾರಿದ ಉದಾಹರಣೆ ಇದೆ. ಗಳಗನಾಥರು ತಾವು ಸಾಯುವ ಕಾಲಕ್ಕೂ ಪುಸ್ತಕಗಳನ್ನು ಮಾರಿ ನಾಡಿನಾದ್ಯಂತ ಪುಸ್ತಕಪ್ರೀತಿಯನ್ನು ಹಂಚಿದವರು. ಅವರಲ್ಲಿ ತಾನೊಬ್ಬ ಲೇಖಕ ಎಂಬ ಹಮ್ಮು-ಬಿಮ್ಮು ಇರಲಿಲ್ಲ. ಅವರು ‘ಖ್ಯಾತಿ’ಯ ಕಿರೀಟವನ್ನೂ ತೊಟ್ಟಿರಲಿಲ್ಲ. ಒಬ್ಬ ನಿಗರ್ವಿಯಾಗಿ ಪುಸ್ತಕಗಳನ್ನು ಮಾರುತ್ತಿದ್ದರು. ಜಿ.ಪಿ. ರಾಜರತ್ನಂ ಕೂಡ ಪುಸ್ತಕಗಳನ್ನು ರಸ್ತೆಗಳಲ್ಲೂ ಸಭೆಗಳಲ್ಲೂ ಮಾರಿದ್ದಾರೆ, ಬೆಂಗಳೂರಿನ ಚರ್ಚ್ ಸ್ಟ್ರೀಟಿನಲ್ಲಿ ಹುಡುಗನೊಬ್ಬ ತನ್ನ ಇಂಗ್ಲಿಷ್ ಪುಸ್ತಕವನ್ನು ದಾಖಲೆ ಮಟ್ಟದಲ್ಲಿ ಮಾರಿದ್ದಾನೆ, ಈ ತಂಡದ ಅಭಿಯಾನಕ್ಕೆ ಆ ಹುಡುಗ ಕೂಡ ಸ್ಫೂರ್ತಿ ಎನ್ನುತ್ತಾರೆ. ಅಂತಹದ್ದೇ ಕೆಲಸವನ್ನು ಈಗ ‘ಬಾ ಗುರು ಬುಕ್ ತಗೋ’ ತಂಡ ಮಾಡುತ್ತಿದೆ.
ಕನ್ನಡದ ಸರ್ಜನಶೀಲ ಕಥೆಗಾರ ಜಯರಾಮಾಚಾರಿ ಮತ್ತು ಲೇಖಕ ವಿಕ್ರಂ ಬಿ.ಕೆ. ‘ಬಾ ಗುರು ಬುಕ್ ತಗೋ’ ಅಭಿಯಾನದ ರೂವಾರಿಗಳು. ಅವರ ಜೊತೆಗೆ ಈಗಾಗಲೇ ಗುರುತಿಸಿಕೊಂಡಿರುವ ಸಾಕಷ್ಟು ಲೇಖಕರು ನಿಂತಿದ್ದಾರೆ. ಪುಸ್ತಕ ಬರೆದ ಲೇಖಕ ತಾನು ರಸ್ತೆಯಲ್ಲಿ ನಿಂತು ತನ್ನದೇ ಪುಸ್ತಕವನ್ನು ಓದುಗರಿಗೆ ಮಾರುವುದು ಈ ಅಭಿಯಾನದ ಉದ್ದೇಶ. ಓದುಗರಿಗೆ ಪುಸ್ತಕಗಳನ್ನು ತಲಪಿಸಲು ಸಾಕಷ್ಟು ಪುಸ್ತಕ ಮಳಿಗೆಗಳು ಮತ್ತು ಪ್ರಕಾಶಕರು ಇದ್ದರೂ, ಈ ಹೊಸ ತೆರನಾದ ಮಾರ್ಗ ಕನ್ನಡ ಸಾಹಿತ್ಯಲೋಕವನ್ನು ಬೇರೆಯದ್ದೇ ದಿಕ್ಕಿನೆಡೆಗೆ ಕೊಂಡೊಯ್ಯಬಹುದು. ಕಳೆದ ಮೂರು ತಿಂಗಳಲ್ಲಿ ಎಂಟು ಸಂಚಿಕೆ ಆಗಿದ್ದು, ಇಪ್ಪತ್ತಕ್ಕೂ ಹೆಚ್ಚು ಲೇಖಕರು, ಐವತ್ತಕ್ಕೂ ಹೆಚ್ಚು ಪುಸ್ತಕಗಳು, ಎಂಟುನೂರು ಪ್ರತಿಗಳು, ಒಂದು ಲಕ್ಷಕ್ಕೂ ಹೆಚ್ಚಿನ ವಹಿವಾಟು ಆಗಿದೆ. ಕನ್ನಡದ ಕೆಲವು ಪತ್ರಿಕೆಗಳು ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿರುವುದರ ಜೊತೆಗೆ ಹಲವು ಪ್ರಕಾಶನಗಳವರು ಇವರಿಗೆ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನಿಂದ ಶುರುವಾಗಿ ಮೈಸೂರು ಮಂಡ್ಯದಲ್ಲಿ ಕೂಡ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಹೋಗಿ ಅಲ್ಲಿನ ಲೇಖಕರ ಜೊತೆ ನಿಂತು ಪುಸ್ತಕ ಮಾರುವ ಉದ್ದೇಶ ಇವರಿಗಿದೆ.
ಅಬ್ದುಲ್ ರಶೀದ್, ಎಂ.ಆರ್. ಕಮಲಾ ಅಂತಹ ಹಿರಿಯ ಲೇಖಕರು ಕೂಡ ಇಡೀ ದಿನ ಅವರ ಜೊತೆಗಿದ್ದು ತಮ್ಮ ಪುಸ್ತಕಗಳನ್ನು ಮಾರುತ್ತ ಇವರ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ, ಹಿರಿಯರಷ್ಟೇ ಅಲ್ಲದೆ ಹಲವರು ಸಮಕಾಲೀನ ಹಾಗೂ ಕಿರಿಯ ಲೇಖಕರು ಕೂಡ ಸಾಥ್ ಕೊಟ್ಟಿದ್ದಾರೆ.
ಜಯರಾಮಾಚಾರಿಯವರ ‘ನನ್ನವ್ವನ ಬಯೋಗ್ರಫಿ’ ಪುಸ್ತಕ ಈ ಅಭಿಯಾನದಿಂದಲೇ ನೂರಕ್ಕೂ ಮೀರಿದ ಪ್ರತಿಗಳು ಮಾರಾಟವಾಗಿವೆ, ಈ ಅಭಿಯಾನದ ಸಹ-ರೂವಾರಿ ವಿಕ್ರಮ ಬಿ.ಕೆ. ಅವರ ಸ್ವಂತ ಪ್ರಕಾಶನ ‘ತ್ರಿಲೋಕ’ದಿಂದ ಮೂಡಿಬಂದ ಕವಿತಾ ಸಂಕಲನ ‘ನಾವಿಬ್ಬರೇ ಗುಬ್ಬಿ’ ಸಹ ನೂರಕ್ಕಿಂತ ಹೆಚ್ಚು ಪ್ರತಿ ಮಾರಾಟವಾಗಿದೆ, ಕವನಸಂಕಲನಗಳಿಗೆ ಮಾರುಕಟ್ಟೆ ಇಲ್ಲ ಎನ್ನುವುದನ್ನು ಅಲ್ಲಗಳೆದಿದ್ದಾರೆ, ಜೊತೆಗೆ ಸ್ವಂತ ಪ್ರಕಾಶನಗಳವರಿಗೆ ಈ ಅಭಿಯಾನ ಅತ್ಯಂತ ಸೂಕ್ತ ಎಂದೂ ಹೇಳಿದ್ದಾರೆ.
ಈ ಅಭಿಯಾನದ ಮೂಲಕ ನಿಗೂಢ ಮತ್ತು ಅದೃಶ್ಯನಾಗಿ ಇರುತ್ತಿದ್ದ ಲೇಖಕ ಸುಲಭವಾಗಿ ಓದುಗರ ಕೈಗೆ ಸಿಗುತ್ತಾನೆ. ಹಾಗೆ ನೋಡಿದರೆ ಪ್ರಚಾರದ ಕೊರತೆ ಅಥವಾ ಎಡ ಬಲ ಎಂಬ ಹಾಳು ಸಿದ್ಧಾಂತಗಳ ನಡುವೆ ಎಷ್ಟೋ ಮಹತ್ತ್ವದ ಕೃತಿಗಳು ಓದುಗನ ಕೈಗೆ ಸಿಗುತ್ತಿಲ್ಲ. ಹಾಗೆಯೇ ಒಂದಷ್ಟು ವರ್ಗದ ಲೇಖಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದರಿಂದ ಹೊಸ ಲೇಖಕರಿಗೆ ಕಿಮ್ಮತ್ತಿಲ್ಲ. ಆದರೆ ರಸ್ತೆಯಲ್ಲಿ ನಿಂತು ಪುಸ್ತಕ ಮಾರುವ ಈ ಅಭಿಯಾನದಿಂದ ಹೊಸ ಲೇಖಕರು ತಮ್ಮದೇ ದಾರಿಯನ್ನು ಸೃಷ್ಟಿಸಿಕೊಳ್ಳುತ್ತಾರೆ, ತಮ್ಮದೇ ಓದುಗವರ್ಗವನ್ನು ಸಂಪಾದಿಸಿಕೊಳ್ಳುತ್ತಾರೆ. ಹಾಗಾಗಿ ಈ ಅಭಿಯಾನವನ್ನು ಲೇಖಕರ ಪಾಲಿನ ಒಂದು ಭರವಸೆಯ ದಾರಿ ಅಂತಲೂ ಕರೆಯಬಹುದು.
ಈ ಅಭಿಯಾನದಿಂದ ತಂಡ ಯಾವುದೇ ಲಾಭವನ್ನು ನಿರೀಕ್ಷಿಸಿಲ್ಲ. ಕೇವಲ ಮಾರಾಟದ ದೃಷ್ಟಿಯಿಂದಲೂ ಈ ಅಭಿಯಾನವನ್ನು ನಡೆಸುತ್ತಿಲ್ಲ. ಕ್ಷೀಣಿಸುತ್ತಿರುವ ಓದುಗರ ವರ್ಗವನ್ನು ಹೆಚ್ಚಿಸುವುದಕ್ಕಾಗಿಯೇ ನಿಃಸ್ವಾರ್ಥದಿಂದ ರಸ್ತೆಗಿಳಿದಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ‘ಬಾ ಗುರು ಬುಕ್ ತಗೋ’ ಅಭಿಯಾನವನ್ನು ತಂಡ ನಡೆಸಿದೆ. ನಾಡಿನಾದ್ಯಂತ ಈ ಅಭಿಯಾನವನ್ನು ಕೊಂಡೊಯ್ಯುವ ಮಹತ್ತ್ವಾಕಾಂಕ್ಷೆ ತಂಡದ್ದಾಗಿದೆ.
ಮತ್ತೊಂದು ಮಾತು: ಜನರು ನೂಕುನುಗ್ಗಲಿನಲ್ಲಿ ಬಂದು ಪುಸ್ತಕಗಳನ್ನು ಖರೀದಿಸುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಈಗಾಗಲೇ ತಂಡಕ್ಕೆ ಸಾಕಷ್ಟು ಒಳ್ಳೆಯ ಮತ್ತು ಕೆಟ್ಟ ಅನುಭವಗಳಾಗಿವೆ. ಪ್ರೋತ್ಸಾಹದ ನಿಟ್ಟಿನಲ್ಲಿ ಒಂದಷ್ಟು ಜನ ಪುಸ್ತಕಗಳನ್ನು ಖರೀದಿಸಿದರೆ ಕೆಲವರು ಗಂಟೆಗಟ್ಟಲೆ ಭಾಷಣ ಬಿಗಿದು ಸುಮ್ಮನೆ ಪುಸ್ತಕಗಳ ಬೆನ್ನುಸವರಿ ಹೋಗುತ್ತಾರೆ. ಇನ್ನು ಕೆಲವರು ರಸ್ತೆಯಲ್ಲಿ ನಿಂತ ಲೇಖಕರನ್ನು ವಿಚಿತ್ರವಾಗಿ ನೋಡುತ್ತಾರೆ. ಇದೆಲ್ಲದರ ನಡುವೆಯೂ ತಂಡಕ್ಕೆ ತೃಪ್ತಿ ಇದೆ, ಅಭಿಯಾನವನ್ನು ನಿರಂತರವಾಗಿ ಮುಂದುವರಿಸುವ ಹುಮ್ಮಸ್ಸಿದೆ.
ಇಂತಹ ವಿನೂತನ ಅಭಿಯಾನ ನಿಲ್ಲಬಾರದು. ಈ ಅಭಿಯಾನದಿಂದ ಕನ್ನಡದ ಓದುಗರ ಸಂಖ್ಯೆ ಹೆಚ್ಚಾಗಲಿ. ಹೆಸರಾಂತ ಲೇಖಕರುಗಳೂ ತಮ್ಮ ‘ಪ್ರಸಿದ್ಧಿ’ಯ ಪೋಷಾಕುಗಳನ್ನು ತೊರೆದು ಈ ತಂಡದೊಂದಿಗೆ ಕೈ ಜೋಡಿಸಲಿ. ಬಾ ಗುರು ಬುಕ್ ತಗೋ. ನಾವು ಪುಸ್ತಕ ಬರಿತೀವಿ, ನಾವೇ ಮಾರ್ತೀವಿ!
ಕನ್ನಡದ ಯುವಲೇಖಕರಾದ ವಿಕ್ರಂ ಬಿ.ಕೆ., ಜಯರಾಮಾಚಾರಿ ಮತ್ತು ಶಶಿ ತರೀಕೆರೆ ಅವರು ಸಾಹಿತ್ಯಾಸಕ್ತರು ಸೇರುವ ಸ್ಥಳಗಳಲ್ಲಿ ನಿಂತು ಸುಮಾರು ೫೧ ಪುಸ್ತಕಗಳನ್ನು ಮಾರಿದ್ದಾರೆ. ಇದೊಂದು ಸಂಭ್ರಮದ ಸಂಗತಿ. ಲೇಖಕರಿಗೆ ಪುಸ್ತಕ ಮಾರಾಟದ ಸಂಕಷ್ಟ ಏನೆಂಬ ಅರಿವಿರಬೇಕು. ಆಗ ನಾವು ದಂತಗೋಪುರದಿಂದ ಇಳಿದು ನೈಜ ಸಾಹಿತ್ಯವಲಯಕ್ಕೆ ಬರಲು ಸಾಧ್ಯ. ಮೂವರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಈ ಮಾರಾಟ ಕ್ರಮ ಸಾಕಷ್ಟು ಜನಪ್ರಿಯವಾಗಲಿ ಎಂದು ಆಶಿಸುತ್ತೇನೆ. ಕನ್ನಡ ಲೇಖಕರೇ ಸ್ವತಃ ನಿಂತು ಪುಸ್ತಕ ಮಾರುತ್ತಾರೆ ಎಂಬುದು ನಾಡಿನ ಹೆಮ್ಮೆಯ ಸಂಗತಿಯಾಗಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದಕ್ಕೆಂದೇ ಕೆಲವು ಮುಖ್ಯಸ್ಥಳಗಳಲ್ಲಿ ಲೇಖಕರಿಗೆ ತಮ್ಮ ಪುಸ್ತಕ ಮಾರಾಟಕ್ಕೆ ಅವಕಾಶ ಮಾಡಿಕೊಡಲಿ.
– ವಸುಧೇಂದ್ರ, ಖ್ಯಾತ ಲೇಖಕರು