ಭಾಷಾಶ್ರದ್ಧೆ ಇರುವವರಿಗೆ ನಾವು ಹೇಳಬಹುದಾದ ಕಿವಿಮಾತು: ಅವರು ಅಳವಡಿಸಿಕೊಳ್ಳಬಹುದಾದ ಮೊದಲ ಅಭ್ಯಾಸವೆಂದರೆ ಪುಸ್ತಕವನ್ನೋ ಪತ್ರಿಕೆಯನ್ನೋ ಓದುವಾಗ ಎಲ್ಲೆಲ್ಲಿ ಯಾವಾವ ಶಬ್ದರೂಪಗಳು ಹೇಗೆಹೇಗೆ ಬಳಕೆಗೊಂಡಿವೆ ಎಂಬುದನ್ನು ತಪ್ಪದೆ ಗಮನಿಸುವುದು. ಇದು ಮಾತ್ರ ವಿಶ್ಲೇಷಣೆಗೂ ಪರೀಕ್ಷಣೆಗೂ ದಾರಿ ಮಾಡಬಲ್ಲದು. ಎರಡನೆಯದು: ಬರಹಗಾರರು ತಮ್ಮ ಮಟ್ಟಿಗಾದರೂ ಕೆಲವು ನಿಯಮಗಳನ್ನಿರಿಸಿಕೊಂಡು ಒಂದೊಂದು ಶಬ್ದದ ತಾವೇ ನಿರ್ಧರಿಸಿಕೊಂಡ ಒಂದು ರೂಪವನ್ನು ಮಾತ್ರ ಬಳಸುವುದು. ಮೂರನೆಯದು: ಅರ್ಥದ ಖಚಿತತೆಯು ತಮ್ಮ ರಚನೆಯ ಆಕಾರದಲ್ಲಿಯೂ ಬಿಂಬಿತವಾಗಬೇಕೆಂದು ಶ್ರದ್ಧೆ ವಹಿಸುವುದು. ಈ ಮೂರಲ್ಲದೆ ನಿಘಂಟುವಿನ ಸತತ ಬಳಕೆ ಮತ್ತಿತರ ಪ್ರಯೋಜನಕರ ಅಭ್ಯಾಸಗಳೂ ಇರಬಹುದು. ಮೇಲೆ ಸೂಚಿಸಿರುವವು ದಿಗ್ದರ್ಶಕ ಮಾತ್ರ.
ಈ ಗ್ರಂಥಪರಿಚಯವನ್ನು ಬರೆಯಲು ಕುಳಿತಾಗ (೨೭ ಆಗಸ್ಟ್) ಪಕ್ಕದಲ್ಲಿ ಇದ್ದ ಅಂದಿನ ಪತ್ರಿಕೆಯತ್ತ ಅಭ್ಯಾಸಬಲದಿಂದ ಕಣ್ಣಾಡಿಸತೊಡಗಿದಾಗ ಪತ್ರಿಕೆಯ ೨ನೇ ಪುಟದಲ್ಲಿದ್ದ ಒಂದು ಹೆಡ್ಲೈನ್ ಗಮನ ಸೆಳೆಯಿತು – “ನಾಡಿನಾದ್ಯಂತ ಭಕ್ತರನ್ನು ಆಕರ್ಷಿಸುತ್ತಿರುವ ಪಾಂಡವರು ಪ್ರತಿಷ್ಟಾಪಿಸಿರುವ (sic) ಶ್ರೀಕರೇನಳ್ಳಮ್ಮ ದೇವಸ್ಥಾನ.” ವ್ಯಾಖ್ಯಾನದ ಆವಶ್ಯಕತೆಯಿಲ್ಲ. ಇಂತಹ ‘ದೂರಾನ್ವಯ’ಗಳನ್ನು ಈಗ ಪತ್ರಿಕೆಗಳಲ್ಲಿ ಹೆಜ್ಜೆಹೆಜ್ಜೆಗೂ ಕಾಣಬಹುದು.
ನಮ್ಮ ಎಲ್ಲ ವ್ಯವಹಾರಗಳಲ್ಲಿ ಭಾಷೆಯ ಪಾತ್ರ ಮುಖ್ಯವಾದ್ದು ಎಂದು ಎಲ್ಲರೂ ಒಪ್ಪಿಯಾರು. ಭಾಷೆಯು ತನ್ನ ಈ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದರೆ ಅದು ಸುಸ್ಥಿತಿಯಲ್ಲಿರಬೇಕಾಗುತ್ತದೆ. ಅದನ್ನು ಹಾಗೆ ಸುಸ್ಥಿತಿಯಲ್ಲಿ ಉಳಿಸಬಲ್ಲವರು ಅದರ ಬಳಕೆದಾರರು. ಭಾಷೆಯ ಸದ್ಯಃಸ್ಥಿತಿಯ ಬಗೆಗೆ ಬಳಕೆದಾರರನ್ನು ಅಭಿಜ್ಞರು ಎಚ್ಚರಿಸುತ್ತಿರಬೇಕಾಗುತ್ತದೆ. ಈ ‘ಕಾವಲುಗಾರಿಕೆ’ಯನ್ನು ಶ್ಲಾಘ್ಯ ಮಟ್ಟದಲ್ಲಿ ನಿರ್ವಹಿಸುತ್ತಿರುವ ವಿರಳರಲ್ಲೊಬ್ಬರು ಗಣ್ಯ ಅಂಕಣಕಾರರಾದ ಶ್ರೀವತ್ಸ ಜೋಶಿ. ಕಂಪ್ಯೂಟರ್ ವಿಜ್ಞಾನದಲ್ಲಿ ಪರಿಣತಿ ಪಡೆದ ಅವರು ಕಳೆದ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಅಮೆರಿಕದಲ್ಲಿ ನೆಲಸಿದ್ದು ವೃತ್ತಿಜೀವನದೊಂದಿಗೆ ಲೇಖಕರಾಗಿಯೂ ಹೆಸರು
ಗಳಿಸಿದ್ದಾರೆ. ಪ್ರಮುಖ ಪತ್ರಿಕೆಗಳಲ್ಲಿನ ಅವರ ಅಂಕಣಬರಹಗಳು ಜನಪ್ರಿಯವಾಗಿದ್ದು ಅವುಗಳದೇ ಹದಿನೈದಕ್ಕೂ ಹೆಚ್ಚು ಸಂಕಲನಗಳು (‘ವಿಚಿತ್ರಾನ್ನ’, ‘ಒಲವಿನ ಟಚ್’, ತಿ’ಳಿರುತೋರಣ ಪರ್ಣಮಾಲೆ’ ಇತ್ಯಾದಿ) ಹೊರಬಂದಿವೆ. ಸಾಮಾಜಿಕ ಮಾಧ್ಯಮಜಾಲಗಳಲ್ಲಿಯೂ ಅವರ ಬರಹಗಳು ಸತತವಾಗಿ ಪ್ರಕಟವಾಗುತ್ತವೆ.
ಕಳೆದ ಹತ್ತಿರಹತ್ತಿರ ನಾಲ್ಕು ವರ್ಷಗಳಿಂದ ತಮ್ಮ ಅಂಕಣಗಳ ಮೂಲಕ ಶ್ರೀವತ್ಸ ಜೋಶಿ ಅವರು ನಡೆಸಿರುವ ‘ಸ್ವಚ್ಛ ಭಾಷೆ ಅಭಿಯಾನ’ ಬಹುಕಾಲದ ಕೊರತೆಯೊಂದನ್ನು ನೀಗಿಸಿದೆ. ಇತ್ತೀಚೆಗೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಪುಸ್ತಕರೂಪದಲ್ಲಿ ಪ್ರಕಟಗೊಂಡಿರುವ ‘ಸ್ವಚ್ಛ ಭಾಷೆ ಅಭಿಯಾನ: ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ’ ಕೃತಿಯನ್ನು ಕನ್ನಡ ಭಾಷಾಧ್ಯಯನದ ದೃಷ್ಟಿಯಿಂದ ಒಂದು ಮೈಲಿಗಲ್ಲು ಎಂದು ಭಾವಿಸಬಹುದಾಗಿದೆ.
* * *
ಮೊದಲಿಗೆ ಈಗಿನ ಸನ್ನಿವೇಶದತ್ತ ಕಣ್ಣಾಡಿಸೋಣ.
ಭಾಷೆಯ ಬಳಕೆಯಲ್ಲಿನ ಅಸ್ತವ್ಯಸ್ತತೆ ಈಚೆಗೆ ತೋರಿಕೊಂಡಿರುವ ಹೊಸ ಸಮಸ್ಯೆಯೇನಲ್ಲ. ಈಗ್ಗೆ ಸಾವಿರ ವರ್ಷ ಹಿಂದೆಯೇ (ಕ್ರಿ.ಶ. ೧೧ನೇ ಶತಮಾನ) ಕಾಶ್ಮೀರದ ಕವಿ ಕ್ಷೇಮೇಂದ್ರ ಹೀಗೆ ಪ್ರಲಾಪ ಮಾಡಿದ್ದ:
ಆಕಾರಶೀರ್ಷಹಾರೀ
ನವದರಕಾರೀ ಪದಾರ್ಥಸಂಹಾರೀ |
ಅಕ್ಷರಭಕ್ಷಕ ಮೇಲಾ-
ಲಿಪ್ತಮುಖೋ ಲೇಖಕಃ ಕಾಲಃ ||
“ಅಕ್ಷರದ ತಲೆಕಟ್ಟನ್ನೇ ಹಾರಿಸಿಬಿಡುತ್ತಾನೆ. ಇರುವ ಶಬ್ದದಲ್ಲಿ ಹೊಸ ತೂತು ಮಾಡುತ್ತಾನೆ. ಎಷ್ಟೊ ಕಡೆ ಪದದ ಅರ್ಥವನ್ನೇ ಸಾಯಿಸಿಬಿಡುತ್ತಾನೆ. ನಡುನಡುವೆ ಅಕ್ಷರಗಳನ್ನೇ ನುಂಗಿಹಾಕಿಬಿಡುತ್ತಾನೆ. ಜಾಯಿಪತ್ರೆಯನ್ನು ಬಾಯಲ್ಲಿರಿಸಿಕೊಂಡ ಲೇಖಕನೇ ಭಾಷೆಯ ಪಾಲಿಗೆ ಯಮರಾಜ.”
ಕೆಲವು ವಿದ್ಯಮಾನಗಳು
ಭಾಷೆಯ ಸೌಷ್ಠವವನ್ನು ಕುರಿತು ಯೋಚಿಸುವಾಗ ಪ್ರಮುಖವಾಗಿ ಕೆಲವು ವಿದ್ಯಮಾನಗಳು ಗಮನ ಸೆಳೆಯುತ್ತವೆ.
(೧) ಎಲ್ಲ ಭಾಷೆಗಳೂ ಚಲನಶೀಲವಾದವೇ ಹೊರತು ಸ್ಥಗಿತ ರೀತಿಯವಲ್ಲ. ಆವಶ್ಯಕತೆಯನ್ನನುಸರಿಸಿ ಎರವಲು ಪಡೆದೋ ಹೊಸದಾಗಿ ಟಂಕಿಸಿಯೋ ಸೇರ್ಪಡೆಗಳಾಗುತ್ತಿರುತ್ತವೆ; ಬಳಕೆ ತಪ್ಪಿದ ಶಬ್ದಗಳು ಮರೆಯಾಗುತ್ತಹೋಗುತ್ತವೆ; ಹಳೆಯ ಶಬ್ದದಲ್ಲಿ ಹೊಸ ಅರ್ಥಚ್ಛಾಯೆ ಸೇರಿಕೊಳ್ಳುತ್ತದೆ; ಗ್ರಾಂಥಿಕ ಶಬ್ದಗಳು ರೂಪದಲ್ಲಿ ಸರಳಗೊಳ್ಳುತ್ತವೆ. ಇಂತಹ ಪರಿವರ್ತನೆಗಳಿಂದ ಯಾವ ಭಾಷೆಯೂ ಮುಕ್ತವಾಗಿ ಉಳಿಯುವುದು ಅಸಂಭವ. ಹೀಗಾಗಿ ಒಂದು ಕಾಲಖಂಡದ ಭಾಷೆ ಹಲವು ದಶಕಗಳ ಹಿಂದಿನ ಅದರ ಸ್ವರೂಪಕ್ಕಿಂತ ಗಣನೀಯವಾಗಿ ಬದಲಾಗಿರುತ್ತದೆ. ಈ ಪ್ರಕ್ರಿಯೆ ಪ್ರಕೃತ್ಯನುಗುಣವೂ ಭಾಷೆಯ ಜೀವಂತಿಕೆಗೆ ಪೋಷಕವೂ ಆದದ್ದು. ಅಪೇಕ್ಷೆಯೆಂದರೆ – ಸೇರ್ಪಡೆಯೋ ರೂಪಾಂತರವೋ ಉದ್ದಿಷ್ಟಾರ್ಥದ್ಯೋತನಸಮರ್ಥವೂ ಭಾಷೆಯ ಜಾಯಮಾನಕ್ಕೆ ಹೊಂದುವಂಥದೂ ಆಗಿರಬೇಕೆಂಬುದು.
(೨) ಜನಜನಿತವಾಗಿವೆಯೆಂದೋ ಯಾವುದೊ ಮಾಧ್ಯಮ ಹೀಗೆ ಬಳಸುತ್ತಿದೆಯೆಂದೋ ಯಾವುದೊ ಶಬ್ದಸಾದೃಶ್ಯದಿಂದಲೋ, ಯಾವುದೇ ಪ್ರಬಲ ಸತರ್ಕಚಿಂತನೆ ಇಲ್ಲದೆಯೂ ಯಾದೃಚ್ಛಿಕವಾಗಿಯೋ ಅಥವಾ ಅಜ್ಞಾನದಿಂದಲೋ – ಹೀಗೆ ಬಗೆಬಗೆಯ ಕಾರಣಗಳಿಂದ ಚಿತ್ರವಿಚಿತ್ರ ಪ್ರಯೋಗಗಳು ಚಲಾವಣೆಗೊಂಡುಬಿಡುತ್ತವೆ. ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥಶರ್ಮಾ ಅವರು ಆಗಾಗ ಹೇಳುತ್ತಿದ್ದಂತೆ “ಜ್ಞಾನಕ್ಕೆ ಮಿತಿಯುಂಟು; ಅಜ್ಞಾನಕ್ಕೆ ಮಿತಿಯೇ ಇರುವುದಿಲ್ಲ!” ‘ಗ್ರೆಷಾಮ್’ ನಿಯಮದಂತೆ ಖೋಟಾ ಪ್ರಯೋಗಗಳದೇ ಹೆಚ್ಚಿನ ಪ್ರಾಚುರ್ಯ ಉಂಟಾಗಿ ಸ್ವಚ್ಛ ಪ್ರಯೋಗಗಳು ಮೂಲೆಗುಂಪಾಗುತ್ತವೆ.
(೩) ‘ನಾವೀಗ ಬದುಕುತ್ತಿರುವುದು ಅವಸರದ ಪರಿಸರದಲ್ಲಿ; ಹೇಳಬೇಕಾದುದನ್ನು ಹೇಗೊ ಹೊರಹಾಕಿದರೆ ನಮ್ಮ ಕೆಲಸ ಮುಗಿಯಿತು; ಭಾಷಾಶುದ್ಧಿ ಮೊದಲಾದ ಪರಿಗಣನೆಗಳದು ಬೇರೆಯದೇ ಕ್ಷೇತ್ರ’ – ಎಂಬ ಜಾಡಿನ ವಾದ(!)ಗಳೂ ಇಲ್ಲದಿಲ್ಲ.
(೪) ಭಾಷೆಯು ಉಳಿಯುವುದು ಸಂವಹನದಿಂದ. ಇದೀಗ ಸಂವಹನದ ಪಾರುಪತ್ಯವನ್ನು ಸ್ವಾಯತ್ತ ಮಾಡಿಕೊಂಡಿರುವವು ಪ್ರಮುಖವಾಗಿ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳು. ಎಲೆಕ್ಟ್ರಾನಿಕ್ ಮಾಧ್ಯಮಗಳು ಮುದ್ರಿತ ಗ್ರಂಥಮಾಧ್ಯಮಕ್ಕಿಂತ ಬಹುಪಾಲು ಹೆಚ್ಚು ಪ್ರಭಾವಿಯಾಗಿವೆ, ವ್ಯಾಪಕವಾಗಿವೆ. ಇವುಗಳ ಸ್ವಚ್ಛಂದತೆಯನ್ನು ಯಾರೂ ನಿಯಂತ್ರಿಸಬಲ್ಲ ಸ್ಥಿತಿ ಈಗಿಲ್ಲ.
ಮೇಲಣ ನಾಲ್ಕನ್ನು ಉಪಲಕ್ಷಣವಾಗಷ್ಟೆ ಗ್ರಹಿಸಬೇಕು. ಈ ಪಟ್ಟಿಯನ್ನು ಇನ್ನೂ ಹುಲುಸಾಗಿ ಬೆಳೆಸಲು ಅವಕಾಶವಿದೆ.
* * *
ಸ್ವಯಮನುಶಾಸನ ಅಪೇಕ್ಷಣೀಯ
ಗ್ರಂಥಲೇಖಕರೂ ಪ್ರಕಾಶಕರೂ ಪತ್ರಕರ್ತರೂ ಪತ್ರಿಕೆಗಳಿಗೆ ಬರೆಯುವವರೂ ಎಲೆಕ್ಟ್ರಾನಿಕ್ ಮಾಧ್ಯಮಗಳವರೂ ನಿರ್ದಿಷ್ಟ ಶಬ್ದಗಳ ನಿರ್ದಿಷ್ಟ ರೂಪಗಳನ್ನೇ ಬಳಸಬೇಕು – ಎಂದು ಶಾಸನ ಮಾಡುವ ಮತ್ತು ಅಮಲುಗೊಳಿಸುವ ಅಧಿಕಾರಸ್ಥಾನ ಯಾವುದೂ ಇಲ್ಲವಲ್ಲ! ಈಗಿನ ಪರಿಸರದಲ್ಲಿ ಬಳಕೆದಾರರು ತಾವಾಗಿ ಸ್ವೀಕರಿಸಲು ಒಪ್ಪಿದಲ್ಲಿ ಮಾತ್ರ ಜಿ. ವೆಂಕಟಸುಬ್ಬಯ್ಯನವರೋ ಟಿ.ವಿ. ವೆಂಕಟಾಚಲಶಾಸ್ತ್ರಿಗಳೋ “ಇದು ಸರಿಯಾದ ಪ್ರಯೋಗ, ಇದು ತಪ್ಪು ಪ್ರಯೋಗ” ಎಂದು ತಿಳಿಸುವುದು ಸಾಧ್ಯವಾಗುತ್ತದೆಯೇನೊ.
ಬಳಕೆದಾರರಲ್ಲಿ ಭಾಷಾಪಾರಿಶುದ್ಧ್ಯಪಕ್ಷಪಾತಿಗಳು ಮಾಡಬಹುದಾದ ಒಂದು ವಿನಂತಿಯೆಂದರೆ – ‘ನೀವು ಬಳಸುವ ಶಬ್ದಗಳು ನಿಘಂಟುವಿನಲ್ಲಿ ಕೊಟ್ಟಿರುವ ರೂಪಗಳಿಂದ ಭಿನ್ನವಾಗದಂತೆ ಇರುವ ಹಾಗಾದರೂ ನಿಯಮ ಮಾಡಿಕೊಳ್ಳಿ’ ಎಂಬುದು. ಇಷ್ಟುಮಟ್ಟಿನ ಅನುಶಾಸನವಾದರೂ ಸಾರ್ವತ್ರಿಕಗೊಂಡಲ್ಲಿ ಅರ್ಧದಷ್ಟು ಆಭಾಸಗಳು ನಿವಾರಣೆಯಾದಾವು.
ಇಂತಹ ಸ್ವಯಮನುಶಾಸನ ಪ್ರಚುರಗೊಂಡಲ್ಲಿ ಮಾತ್ರ ಭಾಷೆಯು ವಿರೂಪಗೊಳ್ಳುವುದನ್ನು ಕಡಮೆ ಮಾಡಬಹುದೇನೊ.
ಎಲ್ಲಕ್ಕಿಂತ ಮೊದಲಿಗೆ – ಭಾಷೆಯ ಸರಿಯಾದ ಬಳಕೆ ಸುಸಂಸ್ಕೃತಿಯ ಲಕ್ಷಣ ಎಂಬ ಮನವರಿಕೆ ಇರುವುದು ಮುಖ್ಯ. ಈ ಸಂಸ್ಕೃತಿಪ್ರಜ್ಞೆ ದೃಢವಾಗಿದ್ದಲ್ಲಿ ಮುಂದಿನ ಹೆಜ್ಜೆಗಳು ದುಷ್ಕರವೆನಿಸುವುದಿಲ್ಲ.
ಇದೀಗ ಏನೇನು ಅಪಪ್ರಯೋಗಗಳು ಚಲಾವಣೆಯಲ್ಲಿವೆ ಎಂದು ಪಟ್ಟಿಮಾಡುತ್ತಹೋದರೆ ಅದೇ ಒಂದು ಗಣನೀಯ ಗಾತ್ರದ ಸಂಪುಟವಾದೀತು. ಯಾವ ಪತ್ರಿಕೆ ತೆರೆದರೂ ಶ್ರುತಿಕಟುವೂ ಭ್ರಾಂತಿಜನ್ಯವೂ ಆದ ಕಲಿಕಾಕೇಂದ್ರದಂತಹ ರೂಪಗಳು ತುಂಬಿರುತ್ತವೆ. (ಕಲಿಕೆ ಕೇಂದ್ರ ಎಂದಾದರೂ ಬರೆಯಬಹುದಲ್ಲ.)
ಇತ್ತೀಚೆಗೆ ‘ನೇಮಕಾತಿ’, ‘ಪ್ರವೇಶಾತಿ’ – ಇಂತಹ ಅಸಹ್ಯ ಪ್ರಯೋಗಗಳ ಹಾವಳಿ ಹೆಚ್ಚಾಗಿದೆ. ಈ ಪೀಡೆ ಅದೆಲ್ಲಿಂದ ವಕ್ಕರಿಸಿತೋ ದೇವರೇ ಬಲ್ಲ. ಈ ‘ಆತಿ’ಯಿಂದ ಅದೇನು ಹೆಚ್ಚಿನ ಆಯಾಮ ಸಿದ್ಧಿಸುತ್ತದೋ ನನಗಂತೂ ಅರ್ಥವಾಗಿಲ್ಲ. ‘ನೇಮಕ’ದಲ್ಲಿ ಈಗಾಗಲೆ ಇರದಿರುವ ಹೆಚ್ಚಿನದೇನನ್ನುss ‘ಆತಿ’ ಹೇಳಬಲ್ಲದು? (ಇಂತಹ ನಾವೀನ್ಯಗಳನ್ನು ‘ಔಜ್ಜ್ವಲ್ಯೀಕರಣ’ ಎಂದು ಸೇಡಿಯಾಪು ಕೃಷ್ಣಭಟ್ಟರು ವ್ಯಂಗ್ಯವಾಗಿ ಕರೆದಿದ್ದರು.) ಇಂತಹ ನಿರಾಧಾರ ಪ್ರಯೋಗಗಳ ‘ತೊಲಗಿಸಾತಿ’ ಆದರೆ ಒಳ್ಳೆಯದು.
* * *
ಸತರ್ಕ ವಿಶ್ಲೇಷಣೆ ಪ್ರಯೋಜನಕರ
ಶ್ರೀವತ್ಸ ಜೋಶಿ ಅವರು ಈ ಕೈಪಿಡಿಯಲ್ಲಿ ಶುದ್ಧವಾದ – ಹಲವೊಮ್ಮೆ ಹೆಚ್ಚು ಸ್ವೀಕಾರ್ಯವಾದ – ಶಬ್ದರೂಪಗಳನ್ನು ನಿರ್ದೇಶಿಸಿರುವುದಲ್ಲದೆ ಇದರ ಹಿಂದಿರುವ ಕಾರಣಗಳನ್ನೂ ವಿವರಿಸಿದ್ದಾರೆ. ಇದರೊಡಗೂಡಿದ ತರ್ಕವನ್ನು ಬಳಕೆದಾರರು ಮನದಟ್ಟು ಮಾಡಿಕೊಂಡಲ್ಲಿ ಈ ‘ಕೈಪಿಡಿ’ಯಲ್ಲಿ ಸೇರಿರದ ಅಸಂಖ್ಯ ಪ್ರಶ್ನಾರ್ಹ ಪ್ರಯೋಗಗಳ ಬಗೆಗೂ ಸ್ಫುಟತೆ ಮೂಡೀತು. ಸ್ಪಷ್ಟವಾಗಿಯೆ ನಿಯಮವಿರುದ್ಧವಾದ ಅನೇಕ ಪ್ರಯೋಗಗಳ ಬಗೆಗಂತೂ ಶ್ರೀವತ್ಸ ಜೋಶಿ ವಿಸ್ತಾರವಾಗಿ ಹೇಳಿಯೇ ಇದ್ದಾರೆ: ಪೂರ್ವಾಗ್ರಹ (ಸರಿ ರೂಪ ‘ಪೂರ್ವಗ್ರಹ’), ಮೊರೆಹೋಗುವುದು (ಸರಿ ರೂಪ ‘ಮೊರೆಹೊಗುವುದು’), ಪುನಾರಂಭ (ಸರಿ ರೂಪ ‘ಪುನರಾರಂಭ’), ಮೊಟ್ಟಮೊದಲು (ಸರಿ ರೂಪ ‘ಮೊತ್ತಮೊದಲು’), ತಿಳುವಳಿಕೆ (ಸರಿ ರೂಪ ‘ತಿಳಿವಳಿಕೆ’), ದುರಾದೃಷ್ಟ (ಸರಿ ರೂಪ ‘ದುರದೃಷ್ಟ’), ಶಕ್ತ್ಯಾನುಸಾರ (ಸರಿ ರೂಪ ‘ಶಕ್ತ್ಯನುಸಾರ’), ಅಪರಾತ್ರಿ (ಸರಿ ರೂಪ ‘ಅಪರರಾತ್ರಿ’), ಪುತ್ಥಳಿ (ಸರಿ ರೂಪ ‘ಪುತ್ತಳಿ’), ಮಧ್ಯಸ್ತಿಕೆ (ಸರಿ ರೂಪ (ಮಧ್ಯಸ್ಥಿಕೆ), ಅವಶ್ಯಕ (ಸರಿ ರೂಪ ‘ಆವಶ್ಯಕ’), ಅಣಿಮುತ್ತು (ಸರಿ ರೂಪ ‘ಆಣಿಮುತ್ತು’), ಅಪದ್ಧ (ಸರಿ ರೂಪ ‘ಅಬದ್ಧ’), ಇತ್ಯಾದಿ.
ಹಲವಾರು ಜನಜನಿತ ಪ್ರಯೋಗಗಳ ಮೂಲವನ್ನು ಶ್ರೀವತ್ಸ ಜೋಶಿ ತಿಳಿಸಿಕೊಟ್ಟಿದ್ದಾರೆ. ಉದಾಹರಣೆ: ‘ಹರಸಾಹಸ’ ಎಂಬುದಕ್ಕೂ ಹರನಿಗೂ ಸಂಬಂಧವಿಲ್ಲ, ಇದರ ಮೂಲ ಹಿಂದಿಯ ‘ಹರ್’. ‘ಆಷಾಢಭೂತಿ’ ಪದದ ಮೂಲ ಬ್ರಹ್ಮಚಾರಿಗಳು ಹಿಡಿದುಕೊಳ್ಳುವ ಮುತ್ತುಗದ ದಂಡ ಎಂಬ ಅರ್ಥದ ‘ಆಷಾಢ’ ಶಬ್ದ. ‘ಎಂಟೆದೆ’(ಎಂಟೆರ್ದೆ)ಯಲ್ಲಿ ಎಂಟು ಎಂಬ ಸಂಖ್ಯೆ ಪ್ರಸ್ತಾವಿತವಲ್ಲ, ಅದು ಕೆಚ್ಚು ಎಂಬ ಅರ್ಥದ ‘ಎಣ್ಟು’ವಿನಿಂದ ಬಂದದ್ದು. ತೃತೀಯಾ ಮತ್ತು ಪಂಚಮೀ ವಿಭಕ್ತಿಗಳ ನಡುವಣ ಸೂಕ್ಷ್ಮ ವ್ಯತ್ಯಾಸವನ್ನು ಸ್ಪಷ್ಟಗೊಳಿಸಿದ್ದಾರೆ. ‘-ರಿಂದ’, ‘-ನಿಂದ’, ‘-ರಾದ’ ಮೊದಲಾದ ಪ್ರತ್ಯಯಗಳಲ್ಲಿ ಎಲ್ಲೆಲ್ಲಿ ಯಾವಯಾವ ಪ್ರತ್ಯಯ ಉಚಿತ ಎಂಬ ವ್ಯವಸ್ಥೆಯನ್ನು ತಿಳಿಸಿದ್ದಾರೆ. ಅಸ್ತ್ರ-ಶಸ್ತ್ರ ಅರ್ಥವ್ಯತ್ಯಾಸವನ್ನು ಗಮನಕ್ಕೆ ತಂದಿದ್ದಾರೆ.
ಅಜ್ಞಾನದಿಂದಲೊ ಅಲಕ್ಷ್ಯದಿಂದಲೊ ಘಟಿಸುವ ಪ್ರಮಾದಗಳಿಗೆ ಲೆಕ್ಕವಿಲ್ಲ. ಉದಾಹರಣೆ: ‘ಕೀಳಿ’ (ಸರಿ ರೂಪ ‘ಕಿತ್ತು’); ತೆತ್ತಬೇಕು (ಸರಿ ರೂಪ ‘ತೆರಬೇಕು’).
ಇಂತಹ ಹತ್ತಾರು ಸಂದಿಗ್ಧಾಂಶಗಳ ಬಗೆಗೆ ವ್ಯಾಖ್ಯಾನ ಮಾಡಿದ್ದಾರೆ ಶ್ರೀವತ್ಸ ಜೋಶಿ. ‘ಶಿಕ್ಷಕಿ’, ‘ಚಾಲಕಿ’ ಮೊದಲಾದ ಶಬ್ದಗಳಲ್ಲಿ ಸ್ತ್ರೀಲಿಂಗ ಈಗಾಗಲೆ ಅನ್ವಿತವಾಗಿರುವುದರಿಂದ ‘ಮಹಿಳಾ ಶಿಕ್ಷಕಿ’ ಮೊದಲಾದ ದ್ವಿರುಕ್ತಿಯ ಆವಶ್ಯಕತೆ ಇಲ್ಲ – ಎಂದಿದ್ದಾರೆ.
ಒಂದು ಶಬ್ದದ ಎರಡು ಪ್ರಚಲಿತ ರೂಪಗಳೂ ಸಾಧುವಾಗಿದ್ದಾಗ ನಮ್ಮ ಮಟ್ಟಿಗೆ ಒಂದು ರೂಪವನ್ನೇ ಬಳಸುವುದು ಮೇಲು – ಎಂದಿದ್ದಾರೆ. ಉದಾಹರಣೆಗಳು: ಪದಾರ್ಪಣ, ಪಾದಾರ್ಪಣ; ಗಂಟೆ, ಘಂಟೆ, ಇತ್ಯಾದಿ.
‘ಅ’ಕಾರ-‘ಹ’ಕಾರಗಳು ವಿನಿಮಯಗೊಂಡಿರುವ “ಆಸನದಲಿ ನಾ ಉಟ್ಟಿದ ಐದನು ಅಳ್ಳಿಯ ಕನ್ನಡ ಕಲಿತಿಹೆನು (ಪುಟ ೫೭), ಡಿ.ಎಸ್. ಕರ್ಕಿಯವರ ‘ಹಚ್ಚೇವು…’ ಕವನದ ಅಣಕವಾಡು “ಕೊಚ್ಚೇವು ಕನ್ನಡದ shape ಅ ಪದಪದದ shape ಅ ವಾಕ್ಯಗಳ shape ಅ” (ಪುಟ ೧೧೬) ಮೊದಲಾದ ವಿಷ್ಕಂಭಗಳು ರೋಚಕವಾಗಿವೆ.
* * *
ಖಚಿತತೆ ಅನುಸಂಧೇಯ
ಶ್ರೀವತ್ಸ ಜೋಶಿ ಅವರ ಕೈಪಿಡಿಯ ಅರ್ಧದಷ್ಟು ಭಾಗ ಖಚಿತತೆಯನ್ನು ಅಲಕ್ಷ್ಯ ಮಾಡುವುದರಿಂದ ಉಂಟಾಗುವ ಗೊಂದಲಗಳ ವಿವೇಚನೆಗೆ ಮೀಸಲಾಗಿದೆ. ಈ ಗೊಂದಲಗಳು ವಿಶೇಷವಾಗಿ ವಿರಾಜಮಾನವಾಗುವುದು ಪತ್ರಿಕೆಗಳ ಶೀರ್ಷಿಕೆಗಳಲ್ಲಿ. ಉದಾಹರಣೆ: “ಗಾಂಧಿ ಬೈದ ಭೈರಪ್ಪ” (ಬೈದದ್ದು ಯಾರು, ಯಾರನ್ನು?); “ರಿಕ್ಕಿ ಕೇಜ್ ಅಭಿನಂದಿಸಿದ ಮುಖ್ಯಮಂತ್ರಿ” (ಅಭಿನಂದಿಸಿದ್ದು ಯಾರು, ಯಾರನ್ನು?); “ಫೆಡೆರರ್ ಮಣಿಸಿದ ಜೋಕೊ ಫೈನಲ್ಗೆ” (ಮಣಿಸಿದ್ದು ಯಾರು, ಯಾರನ್ನು?); – ಶೀರ್ಷಿಕೆಗಳಲ್ಲಿ ವಿಭಕ್ತಿಪ್ರತ್ಯಯಗಳ ಆವಶ್ಯಕತೆ ಇಲ್ಲ ಎಂದು ಯಾರೋ ಪುಣ್ಯಾತ್ಮರು ಯಾವಾಗಲೋ ಮಾಡಿಟ್ಟ ಅಪಕ್ವ ಸೂತ್ರದ ದುಷ್ಫಲಗಳು ಇವು.
ಸ್ಪಷ್ಟತೆಯ ದೃಷ್ಟಿಯಿಂದ ವ್ಯವಸ್ಥಿತ ಅಲ್ಪವಿರಾಮಾದಿ ಚಿಹ್ನೆಗಳ ಅನಿವಾರ್ಯತೆಗೆ ಶ್ರೀವತ್ಸ ಜೋಶಿ ಮೇಲಿಂದ ಮೇಲೆ ಗಮನ ಸೆಳೆದಿದ್ದಾರೆ.
ಪ್ರತಿ ದಿನ ಪತ್ರಿಕೆಗಳಲ್ಲಿ ಕಣ್ಣಿಗೆ ರಾಚುವವು ಇಂತಹ ಆಭಾಸದ ಶೀರ್ಷಿಕೆಗಳು: “ಸೊಸೆ ಕೊಂದಿದ್ದ ಮಾವ ಆತ್ಮಹತ್ಯೆ” (ಕೊಂದದ್ದಾದ ಮೇಲೆ ಅವರು ಹೇಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು?); “ಉಡುಪಿಯಲ್ಲಿ ರಾಮುಲು ಪಿಂಡಪ್ರದಾನ” (ಮಹಾಲಯದಂದು ರಾಮುಲು ಮಧ್ವಸರೋವರದಲ್ಲಿ ಪಿತೃಗಳಿಗೆ ಪಿಂಡಪ್ರದಾನ ಮಾಡಿದ ಸುದ್ದಿ ಪತ್ರಿಕೆಯ ಶೀರ್ಷಿಕೆಯಲ್ಲಿ ಅವತರಿಸಿದ್ದು ಹೀಗೆ); “ಅಂಗವಿಕಲ ಕಲ್ಯಾಣಾಧಿಕಾರಿ ಎ.ಸಿ.ಬಿ. ಬಲೆಗೆ” (ಅಧಿಕಾರಿಯೇ ಅಂಗವಿಕಲರೆ?); – ಇಂತಹ ನೂರಾರು ಆಭಾಸಗಳನ್ನು ಶ್ರೀವತ್ಸ ಜೋಶಿ ವಿಶ್ಲೇಷಿಸಿದ್ದಾರೆ.
[ಒಂದು ಸಣ್ಣ ವಿವರ: ‘ಅನನುಕೂಲ’ ಶಬ್ದದ ವಿಮರ್ಶೆಯಡಿಯಲ್ಲಿ (ಪುಟ ೧೬೨) ಈ ಹೇಳಿಕೆ ಇದೆ: “ಅನ್+ಅನುಕೂಲ=ಅನನುಕೂಲ. ಇದನ್ನು ಅನಾನುಕೂಲ ಎಂದು ಬರೆಯಬಾರದು. ಇದೇ ರೀತಿ ಅನ್+ಅಗತ್ಯ=ಅನಗತ್ಯ….” ಇಲ್ಲಿ ಗಮನಕ್ಕೆ ಬರಬಹುದಾದ ಸಂಗತಿಯೆಂದರೆ – ಅಗತ್ಯ ಎಂಬ ಪ್ರಯೋಗವು ಅಸಿಂಧುವೆಂಬುದು ಮಡಿವಂತರ ನಿಲವು. ಹೀಗೆ ಹಿಂದೆ ರೂಢಿಗೆ ಶರಣಾಗಿ ಅದನ್ನು ಬಳಸುತ್ತಿದ್ದ ನಾವು ಕೆಲವರು ಈಗ ಅದನ್ನು ಕೈಬಿಟ್ಟಿದ್ದೇವೆ.]
* * *
ವ್ಯವಸ್ಥಿತ ಓದುವಿಕೆ
ಭಾಷಾಶ್ರದ್ಧೆ ಇರುವವರಿಗೆ ನಾವು ಹೇಳಬಹುದಾದ ಕಿವಿಮಾತು: ಅವರು ಅಳವಡಿಸಿಕೊಳ್ಳಬಹುದಾದ ಮೊದಲ ಅಭ್ಯಾಸವೆಂದರೆ ಪುಸ್ತಕವನ್ನೋ ಪತ್ರಿಕೆಯನ್ನೋ ಓದುವಾಗ ಎಲ್ಲೆಲ್ಲಿ ಯಾವಾವ ಶಬ್ದರೂಪಗಳು ಹೇಗೆಹೇಗೆ ಬಳಕೆಗೊಂಡಿವೆ ಎಂಬುದನ್ನು ತಪ್ಪದೆ ಗಮನಿಸುವುದು. ಇದು ಮಾತ್ರ ವಿಶ್ಲೇಷಣೆಗೂ ಪರೀಕ್ಷಣೆಗೂ ದಾರಿ ಮಾಡಬಲ್ಲದು. ಎರಡನೆಯದು: ಬರಹಗಾರರು ತಮ್ಮ ಮಟ್ಟಿಗಾದರೂ ಕೆಲವು ನಿಯಮಗಳನ್ನಿರಿಸಿಕೊಂಡು ಒಂದೊಂದು ಶಬ್ದದ ತಾವೇ ನಿರ್ಧರಿಸಿಕೊಂಡ ಒಂದು ರೂಪವನ್ನು ಮಾತ್ರ ಬಳಸುವುದು. ಮೂರನೆಯದು: ಅರ್ಥದ ಖಚಿತತೆಯು ತಮ್ಮ ರಚನೆಯ ಆಕಾರದಲ್ಲಿಯೂ ಬಿಂಬಿತವಾಗಬೇಕೆಂದು ಶ್ರದ್ಧೆ ವಹಿಸುವುದು. ಈ ಮೂರಲ್ಲದೆ ನಿಘಂಟುವಿನ ಸತತ ಬಳಕೆ ಮತ್ತಿತರ ಪ್ರಯೋಜನಕರ ಅಭ್ಯಾಸಗಳೂ ಇರಬಹುದು. ಮೇಲೆ ಸೂಚಿಸಿರುವವು ದಿಗ್ದರ್ಶಕ ಮಾತ್ರ.
‘ರೂಢಿರ್ಯೋಗಾದ್ ಬಲೀಯಸೀ’ ಎಂಬುದೊಂದು ಸಾಮತಿ ಇದೆಯಷ್ಟೆ. ನಾವು ಇದನ್ನು ನೂರಕ್ಕೆ ನೂರರಷ್ಟು ಸ್ವೀಕಾರ್ಯವಲ್ಲವೆನ್ನಬೇಕಾಗಿದೆ: ‘ಮೈಟ್ ಈಸ್ ರೈಟ್’ ಎಂದಂತೆ. ಹೆಚ್ಚು ಬಳಕೆಯಲ್ಲಿದೆ ಎಂಬುದು ಸಾಧುತ್ವದ ನಿಶ್ಚಾಯಕವಾಗಲಾರದು, ಅಲ್ಲವೆ? ಮೇಲಣ ಪ್ರಸಿದ್ಧ ಹೇಳಿಕೆಯನ್ನು ಸದ್ಯಃಸ್ಥಿತಿಯ ವರ್ಣನೆಯೆಂದು ಸ್ವೀಕರಿಸಬಹುದೇ ಹೊರತು ನಿರ್ದೇಶಕ ಸೂತ್ರವಾಗಿ ಅಲ್ಲ.
ಪದೇ ಪದೇ ಎದುರಾಗುವ ಪದಗಳ ಬಗೆಗೆ
ಶ್ರೀವತ್ಸ ಜೋಶಿ ಅವರು ‘ಕೈಪಿಡಿ’ಗೆ ಅನುಬಂಧವಾಗಿ ಸುಮಾರು ೬೦ ಪುಟಗಳಷ್ಟು ‘ಪದೇ ಪದೇ ಪರಿಕಿಸಬೇಕಾದ ಪದಗಳು’ ಎಂಬ ಪಟ್ಟಿಯನ್ನು ನೀಡಿದ್ದಾರೆ. ಇದರಲ್ಲಿ ಹಲವಾರು ಪದಗಳ ನಿಶ್ಚಿತ ಯೌಗಿಕ ಅರ್ಥವನ್ನು ಸ್ಫುಟೀಕರಿಸಿದ್ದಾರೆ. ಉದಾಹರಣೆ: ‘ಅಧ್ವಾನ’ (ಮೂಲ ಅರ್ಥ ದಾರಿ, ಪ್ರಯಾಣ ಎಂದಷ್ಟೆ).
ಇಲ್ಲಿ ನನ್ನದೊಂದು ನಿವೇದನೆ ಇದೆ. ಶ್ರೀವತ್ಸ ಜೋಶಿ ಅವರು ನೀಡಿರುವ ನಿರ್ದೇಶಗಳಲ್ಲಿ ಹೆಚ್ಚಿನವು ನಿರ್ವಿವಾದವಾಗಿವೆ. ಆದರೆ ಕೆಲವು ನಿರ್ಣಯಗಳ ಬಗೆಗೆ ಪುನರ್ವಿಮರ್ಶೆಗೆ ಅವಕಾಶವಿದೆಯೆನಿಸುತ್ತದೆ. ಉದಾಹರಣೆಗೆ: ಅವರು ತಪ್ಪೆಂದಿರುವ ‘ಗೆಲವು’, ‘ನಾಲಿಗೆ’ – ಶಬ್ದರೂಪಗಳು ಕಿಟ್ಟಲ್ ನಿಘಂಟುವಿನಲ್ಲಿ ಅಂಗೀಕೃತವಾಗಿವೆ. ಅಂತೆಯೇ ಶ್ರೀವತ್ಸ ಜೋಶಿ ಅವರು ಅನಪೇಕ್ಷಣೀಯವೆಂದಿರುವ ‘ಅದ್ಧೂರಿ’, ‘ಅವಘಡ’, ‘ಗೋಮೇಧಿಕ’, ‘ಚಳುವಳಿ’ – ಈ ಶಬ್ದರೂಪಗಳು ಸಂಕ್ಷಿಪ್ತ ಕನ್ನಡ ನಿಘಂಟುವಿನಲ್ಲಿ ಸ್ವೀಕೃತವಾಗಿವೆ. ಇಂತಹ ಹತ್ತಾರು ಪ್ರಯೋಗಗಳುಂಟು. ಈ ವಿಷಯದಲ್ಲಿ ಆಗ್ರಹ ಸಾಧುವೆನಿಸದೇನೊ. ಒಂದು ಮಧ್ಯಮ ಮಾರ್ಗವೆಂದರೆ: ಇಂಗ್ಲಿಷಿನಲ್ಲಿರುವಂತೆ ನಾವು ‘preferred usage’ ಎಂಬ ಒಂದು ವರ್ಗವನ್ನು ಮಾಡಿಕೊಂಡರೆ ಉಪಯುಕ್ತವಾದೀತೆ? ಇದು ಪರಾಮರ್ಶನಾರ್ಹ. (ಕೆಲವು ನಿಘಂಟುಗಳು ಶಬ್ದಗಳ ವೈಕಲ್ಪಿಕ ರೂಪಗಳನ್ನು ಆವರಣಗಳಲ್ಲಿ ಕೊಟ್ಟಿವೆ.)
ಏನೇ ಆದರೂ, ನಾವು ಬಳಸುವ ಭಾಷೆ ಆದಷ್ಟು ನಿರ್ದುಷ್ಟವಾಗಿರಲಿ ಎಂದು ಅಪೇಕ್ಷಿಸುವವರಿಗೆ ಒಂದು ಅತ್ಯುಪಯುಕ್ತ ‘ಕೈಪಿಡಿ’ಯನ್ನು ಸಿದ್ಧಪಡಿಸಿಕೊಟ್ಟಿರುವ ಶ್ರೀವತ್ಸ ಜೋಶಿ ಅವರಿಗೆ ಕನ್ನಡ ಜನತೆಯ ವಂದನೆ ಸಲ್ಲುತ್ತದೆ. ಈ ‘ಅಭಿನವ ಶ್ರೀವತ್ಸ ನಿಘಂಟು’ ವ್ಯಾಪಕವಾಗಿ ಬಳಕೆಯಾದಲ್ಲಿ ನಮ್ಮ ಭಾಷೆಯ ಮಟ್ಟ ಸ್ವಲ್ಪ ಸುಧಾರಿಸೀತು.